ನನ್ನವ್ವ ಎಂಬ ‘ಸೋಜಿಗಾದ ಸೂಜಿಮಲ್ಲಿಗೆ’

ಜಯರಾಮಾಚಾರಿ 

ನನ್ನನ್ನ ಚಿಕ್ಕ ವಯಸ್ಸಿನಿಂದಲೂ ಅಕ್ಕ ಪಕ್ಕ ಮನೆಯವರು ಕರೆಯುತ್ತಿದುದ್ದೆ ಅಜ್ಜಿಮಗ ಎಂದು. ಓ ನೀನು ಅಜ್ಜಿ ಮಗ ಅಲ್ವ? ಇವ್ನು ಆ ಅಜ್ಜಿ ಮಗ ಕಣೇ? ಅಜ್ಜಿ ಮಗ ಎಷ್ಟು ಬೆಳೆದುಬಿಟ್ಟಿದ್ದಾನೆ ನೋಡೆ ಹೀಗೆ ಇಂತದೇ ಮಾತುಗಳನ್ನ ಕೇಳಿ ಬೆಳೆದವನು. ನಾನು ನನ್ನವ್ವನ ಕೊನೆ ಮಗ, ಕೊನೆ ಮಕ್ಕಳೆಂದರೆ ಅಮ್ಮಂದಿರಿಗೆ ಜಾಸ್ತಿ ಮುದ್ದು ಅನ್ನೊದು ವಾಡಿಕೆ. ಆದರೆ ಚಿಕ್ಕ ವಯಸ್ಸಿನಲ್ಲಿಲದ ಮುದ್ದು ನಾನು ಬೆಳಿತಾ ಬೆಳಿತಾ ಜಾಸ್ತಿ ಆಯ್ತು. ನನಗೂ ನನ್ನವ್ವನಿಗೂ 35-40 ವರ್ಷಗಳ ಅಂತರ, ಹಾಗಾಗಿ ನನಗೆ ಬುದ್ದಿ ಬಂದು ನೋಡುವಷ್ಟರಲ್ಲಿ ಆಕೆಯನ್ನ ಮುಪ್ಪು ಆವರಿಸಿತ್ತು. ಅದಕ್ಕೆ ಅವಳು ಅನುಭವಿಸಿದ ಪ್ರಾಪಂಚಿಕ ಕಷ್ಟಗಳೂ ಕೂಡ ಕಾರಣ. ಆಕೆ ಕಷ್ಟಪಟ್ಟಷ್ಟು ಬೇರೆ ಯಾರನ್ನೂ ನಾನೀವರಗೂ ಕಂಡಿಲ್ಲ. ಆದರೆ ಎಷ್ಟೇ ಕಷ್ಟ ಇದ್ರೂ ಶಿವನ ಮೇಲೆ ಭಾರ ಹಾಕಿ ಹಾಗೆ ಮುನ್ನುಗ್ಗುತ್ತಿದ್ದ ಪರಿ ನನಗೂ ಇವತ್ತಿಗೂ ಸೋಜಿಗ.

ಹಾಗಂತ ಜಗಳವೇ ಆಡುತ್ತಿರಲಿಲ್ಲವೆಂದಲ್ಲ, ಅಷ್ಟೇ ಜಗಳವೂ ಆಡುತ್ತಿದ್ದಳು, ಇಡೀ ವಠಾರ ಸೇರುವಷ್ಟು ಕಿರುಚುತ್ತಿದ್ದಳು, ಬಿಂದಿಗೆಗಳು ಒಡೆದು ಹೋಗುವಷ್ಟು ನೀರಿನ ಜಗಳ. ಆದರೆ ಆ ಜಗಳ ಆ ಮುನಿಸಿಗೆಲ್ಲ ಕಮ್ಮಿ ವ್ಯಾಲಿಡಿಟಿ ತಾನೇ ಹೋಗಿ ಮಾತಾಡಿಸಿ ನಕ್ಕು ಬಿಡುತ್ತಿದ್ದಳು. ಆಕೆಗೆ ಕಿವಿ ಸ್ವಲ್ಪ ಮಂದ ಹಾಗಾಗಿ ಎಲ್ಲವನ್ನೂ ಸ್ವಲ್ಪ ಸಂಶಯದಲ್ಲೇ ಕ್ಲಾರಿಟಿ ಇಲ್ಲದೇ ನೋಡುತ್ತಿದ್ದಳು. ಆಕೆಗೆ ಎಲ್ಲರೂ ಬೇಕಿತ್ತು ಮಗ ಸೊಸೆ ಅಳಿಯ ಮಗಳು ಮೊಮ್ಮಕ್ಕಳು ನೆರೆಹೊರೆ ಹಿಂಗೆ ಎಲ್ಲರೂ ಪ್ರತಿ ಭಾನುವಾರ ಹಿಂಗೆ ಯಾರ ಮನೆಗಾದ್ರೂ ಹೋಗಿ ಮಾತಾಡುತ್ತ ಕೂತು ಬರುತ್ತಿದ್ದಳು. ಯಾರನ್ನೂ ದೂರಮಾಡಿಕೊಂಡವಳಲ್ಲ.

ಆಕೆ ಎಲ್ಲರನ್ನೂ ಎಲ್ಲವನ್ನೂ ಕ್ಷಮಿಸುವಷ್ಟು ಬೆಳೆದುಬಿಟ್ಟಿದ್ದಳು. ತನ್ನ ಎದೆ ಮೇಲೆ ಕೂತು ಕೆನ್ನೆಗೆ ಬಾರಿಸಿ ತಾಳಿ ಕಿತ್ತು ನೀನೆ ನಿನ್ನ ಮಗನ ಕಟ್ಕೊ ಎಂದ ಸೊಸೆಯನ್ನ, ಮನೆಗೆ ಹೋದರೆ ನೀರು ಕೂಡ ಕೊಡದ ಸಂಬಂಧಿಕರನ್ನ, ಮನೆಯಿಂದ ಓಡಿಸಿ ಬಿಟ್ಟಿದ್ದ ಮಗ ಸೊಸೆಯನ್ವ, ಕೆಲಸ ಬಿಟ್ಟು ಕುಡಿದು ಮೂಲೆ ಹಿಡಿದ ೪೦ ವರುಷದ ಮಗನಿಗೂ ಕೂಡ ತೊಡೆ ಮೇಲೆ ಮಲಗಿಸಿ ಯಾಕಪ್ಪ ಹಿಂಗಾದೆ ಎಂದು ತಲೆ ಸವರಿ ಕೈ ನಡುಗುತ್ತೆ ಎಂದು ಕುಡಿಯಲು ಸೆರಗಿನಲ್ಲಿ ಕಟ್ಟಿಕೊಂಡ ಮಡಿಚಿಟ್ಟ ಹತ್ತರ ನೋಟು ಕೊಟ್ಟು ಬರುತ್ತಿದ್ದಳು. ಕೊನೆ ಕೊನೆಗೆ ನಗು ನಗುತ್ತಾ ಅಷ್ಟು ಕಷ್ಟ ಕೊಟ್ಟ ದೇವರನ್ನೆ ಕ್ಷಮಿಸಿಬಿಟ್ಟಳು. ದೇವರನ್ನ ಕ್ಷಮಿಸಿದ ವ್ಯಕ್ತಿಯನ್ನ ನೋಡಿದ್ದು ನನ್ನವ್ವನಲ್ಲೇ. ಆದರೆ ದೇವರ ಮುಂದೆ ನಿಂತಾಗ ಆಕೆಯ ಕಣ್ಣುಗಳು ಪ್ರತಿ ಸಲ ತೇವವಾಗುತ್ತಿತ್ತು, ಬಹುಶಃ ಅವಳ ಪಾಲಿಗೆ ಎಂದಿಗೂ ಇದ್ದುದ್ದು ಆ ಶಿವನೊಬ್ಬನೇ ಅನಿಸುತ್ತೆ. ಹಾಗಾಗಿ ನನಗೆ ಅವಳು ಯಾವತ್ತಿಗೂ ಸೋಜಿಗಾದ ಸೂಜಿಮಲ್ಲೆ. ಎಲ್ಲವನ್ನೂ ಕ್ಷಮಿಸುವಷ್ಟು ಬೆಳೆಯೋದಿದೆಯಲ್ಲ ಅದು ಯೋಗವಲ್ಲದೇ ಮತ್ತೇನಲ್ಲ. ಆಕೆ ನನ್ನ ಪಾಲಿನ ಕರ್ಮ ಯೋಗಿ.

ಯೋಗಿ ಯಾಕೆಂದರೆ ಆಕೆಯ ಆಸೆಗಳು ತೀರ ಸಣ್ಣವಿದ್ದವು. ಆಪಲ್ ತಿನ್ಬೇಕು, ಮನೆಗೊಂದು ಚೋರಿಗೆ ತರಬೇಕು, ಒಂದು ಸೀರೆ ತಗೋಬೇಕು, ಕೋಳಿಸಾರು ತಿನ್ಬೇಕು ಇಂತದೇ ಆಸೆಗಳು. ಆಪಲ್ ಬೇಕು ಎಂದಾಗ ತಂದುಕೊಟ್ಟರೆ ಒಂದೆರಡು ಚೂರು ತಿಂದು ಮಿಕ್ಕೆಲ್ಲವನ್ನೂ ನಮಗೆ ಎತ್ತಿಡುತ್ತಿದ್ದಳು, ಮನೆಗೆ ಸಿಲ್ವರ್ ತಟ್ಟೆ ತಂದಾಗ ನಾನು ಒಲಂಪಿಕ್ಸಿನಿಂದ ಚಿನ್ನ ತಂದವನಂತೆ ಖುಷಿಯಾಗಿ ಅದು ಹಳತಾಗುವರೆಗೂ ನನ್ನ ಕಿರಿ ಮಗ ತಂದಿದ್ದು ಊರೋರ್ಗೆಲ್ಲ ಹೇಳುತ್ತಿದ್ದಳು.

ಆಕೆಯೆಂದೂ ಸೂರ್ಯೋದಯದ ಮೇಲೆ ಮಲಗಿದ್ದು ನಾ ಕಂಡಿಲ್ಲ, ಬರಿಗಾಲಲ್ಲೇ ಕಿ.ಮಿ.ಗಟ್ಟಲೇ ನಡಿಯುತ್ತಿದ್ದಳು.

ಇವೆಲ್ಲ ಹೇಗೆ ಸಾಧ್ಯ ಎಂದು ಅವಾಗಾವಗ ಅವಳ ನೆನಪಾದಾಗ ಯೋಚಿಸುತ್ತೇನೆ ಎಲ್ಲರನ್ನೂ ಅಪ್ಪುವ ಒಪ್ಪುವ ಕ್ಷಮಿಸುವ ಇದ್ದುದ್ದರಲ್ಲೀ ಆರಾಮಾಗಿ ಬದುಕುವ ಎಂತ ಕಷ್ಟಕ್ಕೂ ಬಗ್ಗದೇ ಎದುರು ನಿಲ್ಲುವ ಅವಳಲ್ಲೀ ಅಂತದೇನಿತ್ತು? ಒಂದಕ್ಷರವೂ ಓದದ, ಯಾವ ದೇಶ ಸುತ್ತದ ಬದುಕಿನಿಂದಲೇ ಅಷ್ಟು ಬೆಳೆದು ಬಿಟ್ಟಿದ್ದಾದರೂ ಹೇಗೆ?! ಯಾವ ಸದ್ಗುರು ಗೋಪಾಲ್ ದಾಸ್ ರಾಬಿನ್ ಶರ್ಮ ಕೂಡ ಅವಳ ಮುಂದೆ ಏನಿಲ್ಲ ಅನಿಸಿಬಿಡುತ್ತೆ.

ಆಕೆಗೆ ಯಾವ ಕಷ್ಟ ಕೊಡದೇ ಚೆನ್ನಾಗಿ ನೋಡಿಕೊಳ್ಳಬಹುದಾದ ಸಮಯಕ್ಕೆ ಬಡ್ಡಿ ಮಗ ದೇವ್ರು ಕಿತ್ಕೊಂಡ. ಹೆಣ್ಣು ಮಕ್ಕಳಿಗೆ ಅಪ್ಪ ಇರ್ಬೇಕು ಗಂಡು ಮಕ್ಕಳಿಗೆ ಅಮ್ಮ ಇರ್ಬೇಕು.

ನೆನ್ನೆ ಪಾಪ್ ಕಾರ್ನ್ ಮಂಕಿ ಟೈಗರು ನೋಡುವಾಗ ಒಂದು ಡೈಲಾಗಿತ್ತು

“ಅಮ್ಮ
ಅದೊಂದೇ ಸತ್ಯ”

ಹೌದು ನನ್ನ ಪಾಲಿಗೆ ಅವಳೊಬ್ಬಳೇ ಸತ್ಯ, ಅವಳು ಸೋಜಿಗದ ಸೂಜಿ ಮಲ್ಲಿಗೆ.

‍ಲೇಖಕರು avadhi

February 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: