ಕಾ ಹು ಚಾನ್ ಪಾಷಾ
ನನ್ನವ್ವನಿಗೆ ಯಾರೂ ಹೇಳಬೇಡಿ
ನಾನು ನಮಾಜಿಗೆ ಹೋಗಿದ್ದೇನೆಂದು
ಸುಳ್ಳು ಹೇಳಿ ನಾಟಕವಾಡಲು ಹೋಗಿದ್ದೆ
ಮುಖಕ್ಕೆ ಬಣ್ಣ ಹಚ್ಚಿ ಕುಣಿಯುವನೆಂದು
ಜನ ಆಡಿಕೊಂಡರೆ ಅವಳು ಸಹಿಸಿಕೊಳ್ಳುವುದಿಲ್ಲ
ಮಗ ಧರ್ಮಭ್ರಷ್ಟನಾಗುತ್ತಿದ್ದಾನೆಂದು ತಿಳಿದು
ಒಳಗೊಳಗೇ ಕೊರಗುತ್ತಾಳೆ
ನನ್ನವ್ವನಿಗೆ ಯಾರೂ ಹೇಳಬೇಡಿ
ಅವಳ ಬಂಗಾರದ ಓಲೆ
ಗಿರವಿ ಇಟ್ಟಿದ್ದೇನೆಂದು ಹೇಳಿ
ಮಾರಿದ ಹಣದಿಂದ ಮಕ್ಕಳನ್ನು ಶಾಲೆಗೆ ಸೇರಿಸಿದೆ
ತನ್ನ ತವರುಮನೆಯ ಕೊನೆಯ ನೆನಪೆಂದು
ಬಚ್ಚಿಟ್ಟುಕೊಂಡಿದ್ದ ಓಲೆ
ಎಂದಾದರೂ ಧರಿಸಿಕೊಳ್ಳಬಹುದೆಂಬ
ಅವಳ ಆಸೆ ಎಂದೂ ಈಡೇರದು
ತಿಳಿದರೆ ಮರಗುತ್ತಾಳೆ

ನನ್ನವ್ವನಿಗೆ ಯಾರೂ ಹೇಳಬೇಡಿ
ಅಪ್ಪ ಗುಟ್ಟಾಗಿ ಮಾಡಿಟ್ಟ ಸಾಲಕ್ಕೆ
ಸಾಹುಕಾರ ಮನೆಯನ್ನು ಕಸಿದುಕೊಂಡಾಗ
ಅಂಗಲಾಚಿ ಕಾಲುಹಿಡಿದೆ
ಅಮ್ಮ ಇರುವಷ್ಟು ದಿನ ಗಡುವು ಬೇಡಿದೆ
ಕನಸುಗಳ ಇಟ್ಟಿಗೆ ಮರಳು ಹೊಸೆದು
ಕಟ್ಟಿದ ಮನೆ ಇನ್ನೆಷ್ಟು ದಿನ ಇದ್ದೀತು?
ಸೋರುತ್ತಿರುವ ಮನೆ ಬೀಳುವ ಮೊದಲು
ಅವ್ವನ ಎದೆ ಒಡೆದೀತು!
ನನ್ನವ್ವನಿಗೆ ಯಾರೂ ಹೇಳಬೇಡಿ
ಅವಳು ಬದುಕುವುದು ಕೆಲವು ದಿನಗಳು ಮಾತ್ರ
ಔಷಧಿ ತೆಗೆದುಕೊಂಡ್ರೆ ಸರಿಹೋಗತ್ತೆ
ಎಂಬ ಸುಳ್ಳು ಭರವಸೆ ಹುಟ್ಟಿಸಿ
ಮೊಮ್ಮಕ್ಕಳು ಮರಿಮಕ್ಕಳನ್ನೂ ನೋಡಿ
ನೀನೇ ಮದುವೆ ಮಾಡಿಸಬೇಕೆಂದು ಹೇಳಿದ್ದೇನೆ
ನನ್ನವ್ವನಿಗೆ ಯಾರೂ ಹೇಳಬೇಡಿ
ಅಪ್ಪನಿಗೆ ಗೋರಿ ಕಟ್ಟಿಸೆಂದು ನೀಡಿದ
ತಾನು ಕೂಡಿಟ್ಟ ಹಣ
ಸತ್ತ ಅಪ್ಪನಿಗೆ ಗೋರಿ ಕಟ್ಟಿಸುವುದಕ್ಕಿಂತ
ಬದುಕಿರುವ ಅಮ್ಮನಿಗೆ
ಎರಡು ಹೊತ್ತಿನ ರೊಟ್ಟಿಗಾಗಿ ಎತ್ತಿಟ್ಟಿದ್ದೇನೆ
ಸ್ತ್ರೀಯರಿಗೆ ಸ್ಮಶಾನದಲ್ಲಿ ಪ್ರವೇಶವಿಲ್ಲವೆಂಬ ಧೈರ್ಯದಿಂದ
ಗೋರಿ ಕಟ್ಟಿಸಿದ್ದೇನೆಂದು ಹೇಳಿದ್ದೇನೆ
ಅವಳನ್ನು ಮಣ್ಣು ಮಾಡಲು ಸ್ಮಶಾನಕ್ಕೆ ತಂದಾಗ
ಗೋರಿ ಎಲ್ಲೆಂದು ಕೇಳಿದರೆ?
ನಾನು ಸುಮ್ಮನಾಗುತ್ತೇನೆ
ಅವಳೇ ಅರ್ಥಮಾಡಿಕೊಳ್ಳುತ್ತಾಳೆ
ನನ್ನವ್ವನಿಗೆ ಯಾರೂ ಹೇಳಬೇಡಿ
ಅವಳದ್ದು ನೆಮ್ಮದಿ ಕಾಣದ ಛಿದ್ರಬದುಕು
ಕೊನೆಗಳಿಗೆಗಳಲ್ಲಾದರೂ ನಗುನಗುತ್ತ ಕಣ್ಣು ಮುಚ್ಚಲಿ ಎಂದು
ಬರೀ ಸುಳ್ಳುಗಳ ದೃಶ್ಯ ಕಟ್ಟಿದ್ದೇನೆ
ನಾನು ಚಿಕ್ಕವನಿದ್ದಾಗ ಚಂದಮಾಮ ಬರುವನೆಂದು
ನನ್ನವ್ವ ಸುಳ್ಳು ಹೇಳಿ ಲಾಲಿಹಾಡುತ್ತ ಉಣ್ಣಿಸುತ್ತಿದ್ದಳು
ಈಗ ನಾನೂ ಅದನ್ನೇ ಮಾಡುತ್ತಿದ್ದೇನೆ
ಮುಖವಾಡ ಹಾಕಿಕೊಂಡಿದ್ದೇನೆ
ನನ್ನವನಿಗೆ ಯಾರೂ ಹೇಳಬೇಡಿ
ಮುಖವಾಡ ಕಳಚಿಬಿದ್ದರೆ
ಅವಳಿಗೆ ಯಾವ ಮುಖ ತೋರಿಸಲಿ!






Sarala, tumba maarmika kavana.
ಕಷ್ಟದ ಬದುಕಿನ ಅಲ್ಪಸುಖವನ್ನು ತಾಯಿಗಾಗಿ ಮೀಸಲಿಡುವ ಬಾವ ..ಚೆನ್ನಾಗಿ ಬರೆದಿದ್ದೀರಿ.
very good one
ಪಾಷಾ ಅವರೆ, ಕವನ ತುಂಬಾ ಚೆನ್ನಾಗಿದೆ. ಕಣ್ಣುಗಳು ತೇವವಾಗುವ ವಯಸ್ಸಲ್ಲ ಎಂದುಕೊಂಡರೂ ಕಣ್ಣು ನನ್ನ ಅನುಮತಿ ಕೇಳುತ್ತಿಲ್ಲ. ಭಾವಕ್ಕೆ ಅಷ್ಟು ಸುಲಭವಾಗಿ ಲಗಾಮು ಹಾಕೋದು ಮನುಷ್ಯ ಜೀವಕ್ಕೆ ಕಷ್ಟ ನೋಡಿ.
Dhanyavadagalu.
bhavanegala badukige barahada lepana nimma kavana
maarmikavagi tattuva bhava
ತುಂಬಾ ಇಷ್ಟ ಆಯ್ತು ಪಾಷಾ ಅವರೇ. ಕೆಲವೇ ಸಾಲುಗಳು ಬಹಳಷ್ಟು ತಿಳಿಸುತ್ತವೆ, ಅಳಿಸುತ್ತವೆ.
very nice.. shubhvaagali..
Good one Pasha Sir
kavithe mana tattuvanthide abhinandanegalu
Good One
ನಿನ್ನವ್ವನಲ್ಲಿ ನನ್ನವನನ್ನು ಕಂಡುಕೊಂಡೆ.. ನಿಮ್ಮ ಕಾವ್ಯದ ಕಸುವೂ ಬೆರಗು ಹುಟ್ಟಿಸಿತು.
ಚೆನ್ನಾಗಿದೆ. ಮನ ಕಲಕಿತು.
kannalli niride.. adakkinta hecchenu helalare….
manassu thattithu
thaya preethigaagi hamblavide.uttmavaadaddu hora hommali.
thaya preethigaagi hamblavide.uttmavaadaddu hora hommali.1
ಕವನ ಮನಮುಟ್ಟಿತು.ಎದೆ ತಟ್ಟಿತು. ಅಭಿನಂದನೆಗಳು.
“Nannavvanige Yaroo Helabedi” e nanna kavanavannu Prakatisida, Odida, Pratikriye nidida ella sahrudayarige Dhanyavadagalu.
Mana muttuva kavana