’ಹುಚ್ಚು ಹೊಳೆಯಲ್ಲಿ ನಿಂತ ಸಂತ.. ಸಿಜಿಕೆ’ – ಕೃಷ್ಣ ರಾಯಚೂರು

ಸಿಜಿಕೆ ನೆನೆಯುತ್ತಾ…
ಸಂಸ ಅಂದು ಸಂಪೂರ್ಣ ಶೋಕಮಯವಾಗಿತ್ತು. ಬಾರದವರ ಕಣ್ಣಲ್ಲು ಕಣ್ಣೀರು. ರಂಗಭೂಮಿ ಅಂದು ದೊಡ್ಡ ಆಘಾತಕ್ಕೆ ಒಳಗಾಗಿತ್ತು. ಯಾರನ್ನು ಯಾರು ಸಂತೈಸುವುದು. ನನ್ನ ಅನ್ನಕ್ಕೆ ದಾರಿ ತೋರಿಸಿದ್ದ, ಸಾಂಸ್ಕೃತಿಕ ಬದುಕಿನ ಅರ್ಥವಿವರಿಸಿದ್ದ, ಪ್ರೀತಿಯ ಜಗತ್ತನ್ನು ತೋರಿಸಿದ್ದ ಗುರು ಇಲ್ಲವಾಗಿದ್ದರು. ವೈಟ್ ಅಂಬಾಸಿಡಾರ್ನಲ್ಲಿ ಕರಾರುವಕ್ಕಾದ ಸಮಯಕ್ಕೆ ಬರುತ್ತಿದ್ದ ಇವರು ಅಂದು ತಮ್ಮ ನಿಯಮ ಮುರಿದಿದ್ದರು. ಕಾದವರು ಆಂಬ್ಯುಲೆನ್ಸ್ ನೋಡಬೇಕಾಗಿತ್ತು. ಸಿಜಿಕೆ ದೇಹ ಸಂಸದ ಒಡಲಿಗೆ ಹೀಗೆ ಬಂದಿತ್ತು. ಸದಾ ಸಂಸ ಕಟ್ಟೆಯಲ್ಲಿ ಪ್ರೀತಿಯ ಬೈಗುಳದಿಂದ ಟೀ ಅಥವಾ ಧರ್ಮರಾಯ ದೇವಸ್ಥಾನದ ಬಳಿಯ ಗುಂಡಪ್ಪನ ಅಂಗಡಿಯ ಖಾರ ಮಂಡಕ್ಕಿ ಕೊಡಿಸುತ್ತಾ, ಹೊಸ ಆಲೋಚನೆಗಳಗಳನ್ನು ಯುವಕರಲ್ಲಿ ತುಮಬುತ್ತಾ, ತರಹಾವರಿ ಜನರ ಗುಂಪಿನೊಂದಿಗೆ ಕಾಲ ಕಳೆಯುತ್ತಾ ಕವಿ ಅಲ್ಲದವರನ್ನು ಕವಿ ಎಂದೋ, ಕಲಾವಿದರೆಂದೋ ಇಲ್ಲದ ಉಪಮೆಗಳ ಮೂಲಕ ಸಂಭೋದಿಸುತ್ತಾ ನಮ್ಮಂತವರಿಗೆ ಡಿಗ್ನಿಟಿ ಕೋಡುತ್ತಿದ್ದ ಇಂಥವರನ್ನು ಹುಡುಕುವುದಾದರು ಎಲ್ಲಿ. ಇಲ್ಲಿ ಜೀವರಾಜ್ ಆಳ್ವರು ಅಷ್ಟೇ, ಕಲಾಕ್ಷೇತ್ರದ ಯಲ್ಲಮ್ಮನು ಅಷ್ಟೇ ಸಿಜಿಕೆಯ ಸರಳ ರೇಖೆಯಲ್ಲಿ. ಅವರಲ್ಲಿ ತಾಯ್ತನವಿತ್ತು. ಜೋಗುಳದ ಲಾಲಿತ್ಯವಿತ್ತು. ಬೆಂಕಿಯಂತ ಇವರು ಕಟ್ಟೆಯ ಮೇಲೆ ತಣ್ಣಗೆ ಮಲಗಿರುವುದನ್ನು ಹೇಗೆ ನೋಡಬಹುದು ನಿವೇ ಊಹಿಸಿ.
ನನ್ನ 1997ರ ನಂತರದ ಎಳೆಗಳು ಒಂದೊಂದಾಗಿ ಬಿಚ್ಚ ತೊಡಗಿದವು.
ಹೊಟ್ಟೆಗಾಗಿ ಕೆಲಸ ಬ್ಯಾನರೋ ಪೋಸ್ಟರೋ ಬರಿಯುವುದು, ಸಿಜಿಕೆ ಮುಂದೆ ಕೈಕಟ್ಟಿ ನಿಲ್ಲುತ್ತಾ ನಾಳೆ ಸಾರ್ ಎನ್ನುವುದಷ್ಟೆ ನನ್ನ ಮಂತ್ರವಗಿತ್ತು. ಈ ಮದ್ಯೆ ನಾನು ಕವಿತೆ ಬರಿಯುವುದು ನನ್ನ ಗೆಳೆಯರ ಮೂಲಕ ಸಿಜಿಕೆ ಕಿವಿಗೆ ಬಿದ್ದಿತ್ತು. ಎಲ್ಲ ಪುಸ್ತಕಗಳಂತೆ ಇದು ಇರಬಾರದು. ಮಾರಾಟ ಬೇಡವೆ ಬೇಡ. ಬಿಡುಗಡೆಯು ನನ್ನ ಗೆಳೆಯರ ಗುಂಪಿನಲ್ಲಾಗಲಿ ಎನ್ನುವುದು ನನ್ನ ಅಭಿಮತವಾಗಿತ್ತು. ರಾಜ್ಕುಮಾರ್, ವೇಣು ಇವರು ಎಲ್ಲಾ ಕವಿಗಳ ಪುಸ್ತಕ ಬಿಡುಗಡೆಯ ರೀತಿಯಲ್ಲಿರಬೇಕೆಂದು ಸಿಜಿಕೆ ನೇತೃತ್ವದಲ್ಲಿ ದೊಡ್ಡ ಪ್ರಮಾಣದ ಕಾರ್ಯಯೋಜನೆಯನ್ನು ರೂಪಿಸಿ ನನ್ನ ಬದುಕಿನಲ್ಲಿ ಹೊಸ ತಿರುವನ್ನು ನೀಡಿದರು. ಗೆಳೆಯ ಅಮರೇಶ ನುಗಡೋಣಿ ಅವರ ಸಾಂಗತ್ಯದಿಂದ 1995ರ ಆಸುಪಾಸಿನಲ್ಲಿ ಸಾಹಿತ್ಯವಲಯದ ದಿಗ್ಗಜರ ಪರಿಚಯವಾಗಿತ್ತು. ಹೊಸ ವಿಚಾರಗಳಿಂದ ಪ್ರೇರಿತನಾದ ನಾನು ಸಾಹಿತ್ಯದ ಗೆಳೆಯರ ನಡೆಗಳ ಬಗ್ಗೆ ಆಸಕ್ತಿಯಿಂದ ನೋಡುತ್ತಿದ್ದ ಕಾಲವದು. ಕಾಲದ ನಡಿಗೆ ಅವರ ಖ್ಯಾತಿ, ಪ್ರತಿಭೆಯ ಅಹಂ, ದೊಡ್ಡ ಕಂದಕವನ್ನು ಉಂಟುಮಾಡಿದ್ದು ಸಿಜಿಕೆಯಂತವರ ಬಳಿ ನಿಂತಾಗ ಗೋಚರವಾಗುತ್ತಿತ್ತು. ನಾನು ಬರೆದಾಗ ಗುರುತಿಸದ ಆ ಬಳಗಕ್ಕೂ ಮೋದಲು ನನ್ನನ್ನು ಕವಿಯಾಗಿ ಪರಿಚಯಿಸಿದವರು ಸಿಜಿಕೆ. ಕಿರಂ ಅವರ ಬಳಿ ಕೃಷ್ಣ ಕವಿತೆ ಬರೆದಿದ್ದಾನೆ. ಕವಿತೆಗಳ ಬಗ್ಗೆ ಮಾತನಾಡಿ ಎಂದು ಪ್ರೀತಿ ತೋರಿಸಿದ್ದರು. ಅಷ್ಟೇ ಪ್ರೀತಿಯಿಂದ ನನ್ನಲ್ಲಿ ಆತ್ಮವಿಶ್ವಾಸ ತುಂಬಿ `ವಿನ್ಯಾಸದ ಹೊರಗೆ’ ಕವನ ಸಂಕಲನ ಕುರಿತು ಮಾತನಾಡಿ ಅಧಿಕೃತವಾಗಿ ನನ್ನನ್ನು ಕವಿ ಎಂದು ಸರ್ಟಿಫಿಕೇಟ್ ನೀಡಿದರು.
ಒಮ್ಮೆ ಬಿಜಾಪುರದಲ್ಲೊಂದು ಸಿಜಿಕೆ ನಾಟಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆಸಿದ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ. ಸಿಜಿಕೆ ರಂಗದಿಗ್ಗಜರ ದೊಡ್ಡ ಭಾವಚಿತ್ರಗಳನ್ನು ಬಿಜಾಪುರದ ಕಲಾವಿದರಿಂದ ಬರೆಸಿ ಎತ್ತಿನ ಗಾಡಿಗಳಲ್ಲಿ ಮೆರವಣಿಗೆ ಹೊರಡಿಸುವುದು ಉದ್ದೇಶ. ಆ ಕಲಾವಿದರ ಪಟ್ಟಿಯಲ್ಲಿ ನನ್ನ ಹೆಸರು. ಭಾವಚಿತ್ರ ನನಗೆ ಬರೆಯಲು ಬರುವುದಿಲ್ಲ. ಹೇಗೆ ಏಳುವುದು ತಿಳಿಯುತ್ತಿಲ್ಲ. ಹಿಂದೊಮ್ಮೆ ಕಂಬಾರರ ರೇಖಾಚಿತ್ರ ಬರೆದದ್ದು ಈ ಕಾರ್ಯಕ್ರಮದ ಪಟ್ಟಿಗೆ ಶಿಫಾರಸ್ಸಾಗಿತ್ತು. ಆ ಕಾರ್ಯಕ್ರಮದ ದಿನಗಳಲ್ಲಿ ಅಡಪ ಅವರ ಕೆಲಸಕ್ಕೆ ಒಪ್ಪಿಯಾಗಿತ್ತು. ಇಬ್ಬರಿಗೂ ಅವರ ಕೆಲಸಗಳು ಮುಖ್ಯವಾಗಿದ್ದವು. ನನಗೆ ಒಂದೆಡೆ ಮಾತ್ರ ಅವಕಾಶ. ಹೆಸರಿಗಿಂತಲೂ ನನಗೆ ದುಡ್ಡು ಬಹುಮುಖ್ಯವಾಗಿತ್ತು. ಅಡಪ ಅವರು ನನ್ನ ಕೆಲಸವನ್ನು ಸರಿಯಾಗಿಯೇ ಗಮನಿಸುತ್ತಿದ್ದರು. ಭಾವಚಿತ್ರ ಮಾಡೊದಕ್ಕೆ ನಿಮ್ಗೆ ಎರಡು ಗಂಟೆ ಸಾಕು ಒಂದಿನ ಹೋಗಿ ಬನ್ರಿ ಅಂಥಾ ಪರಮಿಷನ್ ಕೊಟ್ಬಿಟ್ರು. 6*4 ಅಡಿ ಕ್ಯಾನ್ವಾಸ್ ರಾಜ್ಕುಮಾರ್ ಹಾಗೂ ರಘು ಅವರು ರೆಡಿ ಮಾಡಿ ಕೊಟ್ರು. ಅಲ್ಲಿದ್ದ ಕಲಾವಿದರೆಲ್ಲಾ ದೋ ಫೀಟ್ ಬೈ ತೀನ್ ಫೀಟ್ನಾಗ ನಾವ್ ಚಿತ್ರ ಬರೀತೀವಿ ಇಷ್ಟು ದೊಡ್ದ್ರಾಗ ಹ್ಯಾಂಗ್ ಬರಿಯೋದ್ರಿ ಅಂದಾಗ ಕೇವಲ ಒಂದು ಘಂಟೆ ಒಳಗೆ ಬ್ಲ್ಯಾಕ್ಸ್ಟೇನರ್ ಹಾಗೂ ವೈಟ್ ಡಿಸ್ಟಂಪರ್ ಬಳಸಿ ಪೋಟ್ರೇಟ್ ಮಾಡಿ ಬೆಂಗಳೂರು ಬಸ್ ಹತ್ತಿದ್ದೆ. ಅಲ್ಲಿದ್ದ ಕಲಾವಿದರು ಒಂದು ವಾರ ಚಿತ್ರ ಬರದ್ರಂತೆ, ಇಷ್ಟಕ್ಕೂ ಕಾರಣ ಸಿಜಿಕೆ ಮತ್ತು ಅಡಪ ಅಂಥವರ ಅಪಾರ ಆತ್ಮ ವಿಶ್ವಾಸದ ಮಾತುಗಳೇ ಕಾರಣ ಅಂಬೋದನ್ನ ಇಲ್ಲಿ ನೆನೆಯುತ್ತಿದ್ದೇನೆ.
ಇನ್ನೊಂದು ಘಟನೆ ಸಿಜಿಕೆ ಅವರಿಗೆ 50 ತುಂಬಿದ ಘಳಿಗೆ. ಹೊಸಪೇಟೆಯ ಮುನಿರಾಬಾದ್ನಲ್ಲಿ ಆತ್ಮೀಯರನ್ನೆಲ್ಲ ಸೇರಿಸಿದ ಸಂದರ್ಭ ಯಾರ್ಯಾರು ಬರಬೇಕು ಅನ್ನುವ ಪಟ್ಟಿಯಲ್ಲಿ ನನ್ನ ಹೆಸರಿದ್ದದ್ದು ಆಶ್ಚರ್ಯವನ್ನುಂಟು ಮಾಡಿತ್ತು. ಏಕೆಂದರೆ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು, ಟಿ.ಎನ್. ಸೀತಾರಾಂ ಮುಂತಾದವರೊಂದಿಗೆ ವೇಣು, ರಾಜ್, ಆದಿಯಾಗಿ ಕಲಾಕ್ಷೇತ್ರದ ಟ್ಯೂಬ್ಕೃಷ್ಣರ ವರೆಗೂ ಅಲ್ಲಿದ್ದರು. ಸಿಜಿಕೆ ಯಾವ ಮುಜುಗರವಿಲ್ಲದೆ ಎಲ್ಲರನ್ನು ಸಮಾನವಾಗಿ ಕಂಡಿದ್ದನ್ನು ಹೇಳುತ್ತಿದ್ದೇನೆ. ಹಗಲು ರಾತ್ರಿ ಎನ್ನದೇ ಸತತವಾಗಿ ಮೂರು ದಿನಗಳವರೆಗೆ ಹಾಡು, ಹರಟೆ, ಗುಂಡು ಎಲ್ಲವೂ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ನಮ್ಮಂಥವರಿಂದ ಏನನ್ನು ಆಪೇಕ್ಷಿಸದೆ. ಇಂದು ಕಲಾವಿದರನ್ನು ಜಾತಿ ತೊಟ್ಟಿಲಲ್ಲೆ ಲೆಕ್ಕಹಾಕುವ ಮಂದಿಯ ಮುಂದೆ ಸಿಜಿಕೆ ತಮ್ಮ ಇರುವಿಕೆಯ ಸ್ಥಳವನ್ನು ತೋರಿಸುತ್ತಿದ್ದರು. ಇಂಥಹ ಲೆಕ್ಕವಿಲ್ಲದಷ್ಟನ್ನು ಹೇಳಬಹುದು. ಸಿಜಿಕೆ ಅವರನ್ನು ನೆನೆಯುತ್ತಾ ಹೋದರೆ. ಕೇಳಿಸಿಕೊಳ್ಳವ, ಅಪ್ಪಿಕೊಳ್ಳುವ ಮನಸ್ಸುಗಳು ಮನಸ್ಸುಗಳು ಇಲ್ಲವಾದಾಗ ನಮ್ಮಂತವರು …
ಇಲ್ಲ ಖಂಡಿತವಾಗಿಯೂ ಇದ್ದಾರೆಂದು ನಂಬುತ್ತಾ ಸದಾ ನೆನೆಯುತ್ತಾ ಕೆಲಸ ಮಾಡೋಣ.
ಕವಿತೆಯ ಮೂಲಕ ಸಿಜಿಕೆಯನ್ನು ಹೀಗೆ ಹೇಳಬಹುದು.
ಹುಚ್ಚು ಹೊಳೆಯಲ್ಲಿ ನಿಂತ ಸಂತ
ಹರಿವ ಸೆಳವು ಕೂಡಾ ಇವನಿದ್ದೆಡೆಗೆ
ಕೊನರುವ ಕನಸುಗಳಿಗೆ ಕೊನೆಯಿಲ್ಲ
ಪಡೆದಿದ್ದೇನೊ ಗೊತ್ತಿಲ್ಲ
ಕಟ್ಟೆ ಪುರಾಣ ಬೇಕು
ಅಲ್ಲಿರಬೇಕು ಸದಾ ಜೋಕು
ಜಗದಗಲ ಜಂಜಮನಾಗುತ್ತಾನೆ
ಒಡಲಾಳದಲ್ಲಿ ಕಾಡುತ್ತಾನೆ
ದಂಡೆ ಹುಡುಕುತ್ತಾ ಹೊರಡುತ್ತಾನೆ
ಗೊತ್ತಿಲ್ಲದ
ದಂಡೆ ಹುಡುಕುತ್ತಾ
 
ಇನ್ನಿಲ್ಲದ ಸಿಜಿಕೆ ರಂಗಭೂಮಿ ಆವರಣದಲ್ಲಿ ಪ್ರತಿಕ್ಷಣ ಕಾಡುತ್ತಾರೆ. ಕನಸುಗಳಲ್ಲಿ ಅರಳುತ್ತಾರೆ.
 

‍ಲೇಖಕರು G

April 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗುರುರಾಜ್ ಹೊಸಪೇಟೆ

    ಕ್ರಷ್ಣ ಅವರು ಬೆಂಗಳೂರಿಗೆ ಹೋದಾಗಿನ ನೆನಪು ನನಗೆ ಚೆನ್ನಾಗಿಯೇ ಇದೆ. ಹೈಸ್ಕೂಲ್ ಲ್ಲಿ ಓದುವ ಹುಡುಗ ನಾನು ಬೀದಿನಾಟಕ ತಂಡದೊಂದಿಗೆ ಬೆಂಗಳೂರಿಗೆ ಬಂದಾಗ ಸಿಜಿಕೆ ಎನ್ನುವ ವ್ಯಕ್ತಿಯನ್ನೇ ಕಾಣಲು ನಮ್ಮ ಮುಖ್ಯಸ್ಥರು ಕಲಾಕ್ಷೇತ್ರಕ್ಕೆ ಕರೆದುಕೊಂಡು ಬಂದಾಗಿನ ಸಾಲು ನೆನಪುಗಳು ಮರೆಯಲು ಹೇಗೆ ಸಾಧ್ಯ.

    ಪ್ರತಿಕ್ರಿಯೆ
  2. Anonymous

    thumba chennagide nimma lekhana( NIMMA ANUBHAVA<ANISIKE).. krishna raichur avare

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: