ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನವಳ ವಿವರ..

ಸೌಜನ್ಯ ನಾಯಕ

ಮನಸಿನ ಮಹಲಿನಲಿಂದು
ಕನಸುಗಳು ಕಾಣೆಯಾಗಿವೆ
ಕಾಣೆಯಾದ ಕನಸುಗಳೆಲ್ಲವೂ
ಅವಳನ್ನೇ ಬೆನ್ನಟ್ಟಿ ಹೋಗಿವೆ…

ಯಾರೆಂದು ಕೇಳದಿರಿ
ಯಾಕೆಂದರೆ ನನಗೂ ತಿಳಿದಿಲ್ಲ
ಆಗಾಗ ಕನಸಲಿ ಬಂದು ರಂಗೇರಿಸುವ
ಆ ಪೋರಿಯ ಹೆಸರು..

ನನ್ನ ಮಾತುಗಳನ್ನು ಕೇಳಿ ನಗದಿರಿ
ಇದೇ ಮಾತುಗಳಿಗಾಗಿ ಕಾದೂ ಕೂತು
ನನ್ನೊಡನೆ ಕನಸಿನಲಿ ಹರಟು
ಹೋಗುತಿದ್ದಳಾಕೆ ಸೋಕಿಸಿ
ಬಿಸಿ ಶಾಖದ ತನ್ನಯ ಉಸಿರು…

ಬರಿ ಬೆನ್ನನ್ನೆ ತೋರಿಸಿ
ಮಾಯವಾಗುವ ಆ ಪೋರಿಯ
ಖಾಲಿ ಕಾಗದದ ಮೇಲೊಮ್ಮೆ
ಚಿತ್ರಿಸಲೆಂದು ನಾನು
ರವಿವರ್ಮನಂತೆ ಕುಂಚವ ಹಿಡಿದು ಕುಂತೆ
ಮೂಡಿಬಂದ ಚಿತ್ರಗಳೆಲ್ಲವೂ ‌ಆಕೆಯಂತಿರದೆ
ಕಂಡಿತು ನನ್ನ ಕಾಲೇಜಿನಲ್ಲಿ ಓಡಾಡುವ
ಇತರ ಕನ್ಯಾಮಣಿಗಳಂತೆ…

ಆದರೂ ಬೀಗಲೆಂದು ಹೇಳಿಕೊಂಡೆ
ಗೆಳೆಯರಲಿ ಆ ಪೋರಿಯ ವಿಷಯವ
ನಿನ್ನೆ ನೋಡಿದ ಸಿನಿಮಾದ ಕಥೆಯಲ್ಲವೆ ಇದು
ಎಂದು ನಕ್ಕು ಹೊರಟು ಹೋದರು
ಕೇಳದೆಯೆ ಪೂರ್ತಿಯಾಗಿ ನನ್ನವಳ ವಿವರವ…

ವ್ಯರ್ಥ ಪ್ರಯತ್ನ ಸಾಲದೆಂದು
ಮನಸನೊಮ್ಮೆ ಕೇಂದ್ರೀಕರಿಸಿ
ರೆಪ್ಪೆ ಮುಚ್ಚಿದ ಕಪ್ಪು ಪರದೆಯ ಮೇಲೆ
ನನ್ನವಳಿಗಾಗಿ ಕಾದು ಕುಂತೆ
ಆದರಂದು ಕನಸಿನಲಿ ಬರದಾಕೆ
ಹೆಚ್ಚಿಸಿದ್ದಳು ನನ್ನಯ ಚಿಂತೆ…

ಹೀಗೆ ಸಿದ್ಧವಾದ ಮನಸಿನ ಮಹಲಿಗೆ
ಎರಡು ದಿನವಾದರೂ ಆಕೆ ಸುಳಿಯಲೇ ಇಲ್ಲ
ಆಕೆಯ ಹುಡುಕುವ ನೆಪಮಾಡಿ
ನನ್ನನುಮತಿಯ ಕೇಳದೆ ಹೊರಟ ಕನಸುಗಳು
ಇದುವರೆಗೂ ಹಿಂದಿರುಗಿಯೇ ಇಲ್ಲ..

ಈಗೀಗ ರೆಪ್ಪೆ ಮುಚ್ಚುವ ಕಪ್ಪು ಪರದೆಯಲಿ
ಆಕೆಯೂ ಇಲ್ಲ, ಕನಸುಗಳೂ ಇಲ್ಲ
ನಿಜವಾಗಿ ಹೇಳಬೇಕೆಂದರೆ
ಕತ್ತಲೆಯ ಹೊರತು ಬೇರೇನು ಇಲ್ಲ…

‍ಲೇಖಕರು Admin

5 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading