ಅಮೃತಾ ಹೆಗಡೆ ಅಂಕಣ- ‘ಕಾಕ್ಲಿಯರ್​ ಇಂಪ್ಲಾಂಟ್​’ ಎಂಬ ಅದ್ಭುತ ಆವಿಷ್ಕಾರ…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

20

ಅಂತೂ ಕಾರ್ಯಾಗಾರದ ದಿನ ಬಂದೇಬಿಟ್ಟಿತ್ತು. ಪಿ.ಎ.ಡಿ.ಸಿ ಶಾಲೆಯಲ್ಲಿಯೇ ನಡೆಯುತ್ತಿರುವ ಕಾರ್ಯಾಗಾರ ಅದು. ದೂರದ ಊರಿನಲ್ಲಿದ್ದುಕೊಂಡು, ಹೆಂಡತಿ-ಮಗುವನ್ನು ಮಾತ್ರ ಮೈಸೂರಿನಲ್ಲಿಟ್ಟುರುವ, ಕಿವುಡು ಮಕ್ಕಳ ತಂದೆಯರಿಗೆ ಈ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಭಾನುವಾರವೇ ಈ ಕಾರ್ಯಾಗಾರ ಆಯೋಜಿಸಲಾಗಿತ್ತು. ವಿನಯ್ ​ಕೂಡ ಹಿಂದಿನ ದಿನವೇ ಮೈಸೂರಿಗೆ ಬಂದಿಳಿದಿದ್ದ.  ಭಾನುವಾರ ಬೆಳಗ್ಗೆ ಹತ್ತುಗಂಟೆಗೆ ಸರಿಯಾಗಿ, ನಾವು ಮೂವರೂ ಸಿದ್ಧರಾಗಿ ಕಾರ್ಯಕ್ರಮ ನಡೆಯುತ್ತಿರುವ ಜಾಗ ತಲುಪಿಕೊಂಡೆವು. 

ನಾನು ನನ್ನ ಮಗ ಸ್ಕೂಲ್​ನ ವಿದ್ಯಾರ್ಥಿಗಳಾಗಿ ಅದಾಗಲೇ ಒಂದು ತಿಂಗಳು ಕಳೆದಿತ್ತಲ್ಲ, ಕಾಕ್ಲಿಯರ್ ​ಇಂಪ್ಲಾಂಟ್​ ಬಗ್ಗೆ ಚೂರುಪಾರು ತಿಳಿದುಕೊಂಡಿದ್ದೆ. ಸರ್ಜರಿ ಆದ ಮಕ್ಕಳನ್ನೆಲ್ಲ ಕಂಡಿದ್ದೆ. ಅವರೆಲ್ಲ ಮಾತನಾಡುವುದನ್ನ ನೋಡಿ ಬೆರಗಾಗಿದ್ದೆ. ಆ ಮಕ್ಕಳ ಅಮ್ಮಂದಿರ ಬಳಿ ಪ್ರಶ್ನೆ ಮಾಡಿ ಉತ್ತರ ಪಡೆದಿದ್ದೆ. ಆದರೆ, ವಿನಯ್​ಗೆ ಈ ಬಗ್ಗೆ ಅಷ್ಟು ಮಾಹಿತಿ ಇರಲಿಲ್ಲ. ಹೀಗಾಗಿ ಅವನಿಗೆ ಇನ್ನಷ್ಟು ಜಾಸ್ತಿಯೇ ಕುತೂಹಲವಿತ್ತು. 

ಅಥರ್ವನನ್ನ ಅಷ್ಟು ಹೊತ್ತು ಕೂರಿಸಿಕೊಳ್ಳಲೇ ಬೇಕಿತ್ತಲ್ಲ.. ಹೀಗಾಗಿ ಒಂದಷ್ಟು ಟಿಶ್ಯೂ ಪೇಪರ್ ​ಸಜ್ಜಿತವಾಗಿಯೇ ಹೋಗಿದ್ದೆ. ಅವನಿಗೆ ಟಿಶ್ಯೂಪೇಪರ್​ಗಳನ್ನ ಚೂರುಚೂರಾಗಿ ಹರಿದು ಆ ಕಸದೊಂದಿಗೆ ಆಡುವುದೆಂದರೆ ಪಂಚಪ್ರಾಣ. ಬರೀ ಟಿಶ್ಯೂಪೇಪರ್​ಗಳೊಂದಿಗೆ ಅಥರ್ವ ಅನಾಯಾಸವಾಗಿ ಒಂದು ಗಂಟೆ ಆಡಿಕೊಳ್ಳುತ್ತಿದ್ದ. ಒಂದಷ್ಟು ಹೊತ್ತು ಅವನಿಗೆ ಟೈಮ್ ಪಾಸ್ ಆಗಲಿ ಎಂಬ ಕಾರಣಕ್ಕೆ, ಸ್ಕೆಚ್​ಪೆನ್ಸ್​, ಚಿಕ್ಕಪುಟ್ಟ ಆಟಿಕೆಗಳು, ಬರೆಯುವ ಪುಸ್ತಕ, ಅವನಿಗೆ ತಿನ್ನಲು ಬಿಸ್ಕೆಟ್ಸ್​, ಚಾಕ್ಲೆಟ್ಸ್ ​ಎಲ್ಲ ಬ್ಯಾಗ್​ನಲ್ಲಿ ತುಂಬಿಕೊಂಡಿದ್ದೆ.  

ಕಾರ್ಯಕ್ರಮ ಶುರುವಾಯಿತು. ವೇದಿಕೆಯ ಮೇಲೆ ಇಬ್ಬರು ವೈದ್ಯರು, ಇಬ್ಬರು ಆಡಿಯಾಲಾಜಿಸ್ಟ್ ​ಕುಳಿತಿದ್ದರು. ಕಾಕ್ಲಿಯರ್​ಕಂಪನಿಯ ಆಫೀಸರ್ಸ್​ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರಾದ ಪ್ರವೀಣ್​ ಸರ್​, ಸ್ಲೈಡ್​ಶೋ ಮೂಲಕ ‘ಕಾಕ್ಲಿಯರ್​ ಇಂಪ್ಲಾಂಟ್​’ ಬಗ್ಗೆ ನಮ್ಮೆಲ್ಲರಿಗೆ ಚಿತ್ರ ಸಹಿತವಾಗಿ ವಿವರಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು. ಚುಟುಕು ಸ್ವಾಗತ ಭಾಷಣ ಮುಗಿದಿದ್ದೇ, ನೇರವಾಗಿ ಸ್ಲೈಡ್ ಶೋ ಆರಂಭವಾಯಿತು. 

‘ಮೊದಲನೆಯದಾಗಿ, ಕಾಕ್ಲಿಯರ್​ನರ ಅಂದರೇನು..? ಎಂಬ ಬಗ್ಗೆ ತಿಳಿದು ಕೊಳ್ಳೋಣ. ಎನ್ನುತ್ತಾ ಪ್ರವೀಣ್​ ಸರ್​ ವಿವರಿಸತೊಡಗಿದರು. ‘ಪ್ರತಿ ಮನುಷ್ಯನಿಗೂ ಕೇಳಿಸಿಕೊಳ್ಳುವುದಕ್ಕೆ ಬಹುಮುಖ್ಯವಾಗಿ ಬೇಕಾಗಿರುವ ಶ್ರವಣೇಂದ್ರಿಯ ಇದು. ಶಬ್ಧವು ನಮ್ಮ ಕಿವಿಯ ಪರದೆಯನ್ನು ದಾಟಿ ಒಳ ಕಿವಿಯ ಮೂಲಕ ಕಾಕ್ಲಿಯರ್​ನರವನ್ನ ತಲುಪಿದಾಗ, ನಮ್ಮೆಲ್ಲರ ಕಾಕ್ಲಿಯರ್​ನರದ ಒಳಭಾಗದಲ್ಲಿರುವ ಹೇರ್​ಸೆಲ್ಸ್​, ಆ ಶಬ್ಧವನ್ನು ವಿದ್ಯುತ್​ತರಂಗಗಳಾಗಿ ಪರಿವರ್ತಿಸುತ್ತದೆ. ಹೀಗೆ ವಿದ್ಯುತ್ ​ತರಂಗಗಳಾಗಿ ಪರಿವರ್ತಿತಗೊಂಡ ಶಬ್ಧತರಂಗಗಳು ಮೆದುಳನ್ನು ತಲುಪುತ್ತವೆ. ಅವು ಸಮರ್ಪಕವಾಗಿ ಮೆದುಳನ್ನು ತಲುಪಿದರೆ ಮಾತ್ರ ನಮಗೆ ಕೇಳಿಸಲು ಸಾಧ್ಯ. ನಾವು ಕೇಳಿಸಿಕೊಳ್ಳುತ್ತಿರುವುದಕ್ಕೆ ಬಹುಮುಖ್ಯ ಕಾರಣವಾಗಿರುವುದೇ ನಮ್ಮೆಲ್ಲರ ಕಾಕ್ಲಿಯರ್​ನರದೊಳಗಿನ ಈ ಹೇರ್​ಸೆಲ್ಸ್​’. ಪರದೆಯ ಮೇಲೆ ಬಂದಿದ್ದ ಒಳಕಿವಿಯ ಚಿತ್ರ ತೋರಿಸುತ್ತಾ,  ಬಸವನ ಹುಳುವಿನಂಥ ರಚನೆ ಹೊಂದಿರುವ ಕಾಕ್ಲಿಯರ್​ನರವನ್ನ ತೋರಿಸಿ ಮಾತನಾಡುತ್ತಿದ್ದರು. 

‘ಈಗ ನಮ್ಮೆಲ್ಲರ ಕಿವುಡು ಮಕ್ಕಳ ವಿಷಯಕ್ಕೆ ಬರೋಣ. ನಮ್ಮ ಮಕ್ಕಳ ಕಿವಿ ಏಕೆ ಕೇಳಿಸುತ್ತಿಲ್ಲ ಅಂದರೆ, ಅವರ ಕಾಕ್ಲಿಯರ್​ನರದ ಒಳಗೆ ಹೇರ್​ಸೆಲ್ಸ್​ ಇಲ್ಲದಿರುವುದರಿಂದ, ಅಂಗವಿಕಲವಾಗಿರುವುದರಿಂದ ಅಥವಾ ವಿರಳವಾಗಿರುವುದರಿಂದ. ಯಾರ ಕಾಕ್ಲಿಯರ್​ನರ ನೈಸರ್ಗಿಕವಾಗಿ ಶಬ್ಧತರಂಗಗಳನ್ನು ವಿದ್ಯುತ್​ ತರಂಗಗಳನ್ನಾಗಿ ಪರಿವರ್ತಿಸಿ, ಮೆದುಳಿಗೆ ರವಾನಿಸುವುದಿಲ್ಲವೋ ಅವರಿಗೆ ಶ್ರವಣದೋಷವಿದೆ ಎಂದೇ ಅರ್ಥ.  ನಾನಾ ಕಾರಣಗಳಿಂದ ಕಾಕ್ಲಿಯರ್​ ನರದ ಒಳಗಿರುವ ಹೇರ್​ಸೆಲ್ಸ್​ಗಳು ಶಬ್ಧಗಳನ್ನು ವಿದ್ಯುತ್​ತರಂಗಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಕಿವುಡು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನ ನಾವು ‘ಕಾಕ್ಲಿಯರ್ ​ಇಂಪ್ಲಾಂಟ್​’ ಮೂಲಕ ಪರಿಹರಿಸಬಹುದು’  ನಮ್ಮೆಲ್ಲರ ಕುತೂಹಲ ಇನ್ನಷ್ಟು ಹೆಚ್ಚಿತು. ಸ್ಕ್ರೀನ್​ಮೇಲೆ ಈಗ ಕಾಕ್ಲಿಯರ್​ ಇಂಪ್ಲಾಂಟ್​ನ ಭಾಗಗಳ ಫೋಟೋಗಳು ಬಿತ್ತರಗೊಳ್ಳುತ್ತಿದ್ದವು.  

‘ಹಾಗಾದರೆ ಕಾಕ್ಲಿಯರ್​ ಇಂಪ್ಲಾಂಟ್ ​ಅಂದರೆ ಏನು..? ನೋಡೋಣ ಬನ್ನಿ. ಕಾಕ್ಲಿಯರ್ ​ಇಂಪ್ಲಾಂಟ್ ​ಅನ್ನೋದು ಒಂದು ಎಲೆಕ್ಟ್ರಾನಿಕ್​ ಡಿವೈಸ್​. ಟ್ರೆಡಿಶನಲ್​ ಹಿಯರಿಂಗ್​ ಏಡ್​ನಂತೆಯೇ ಕಿವಿಗಳಿಗೆ ಶಬ್ಧಗಳನ್ನು ತಲುಪಿಸುವ ಸಾಧನ ಇದು. ಆದರೆ ಇದರಲ್ಲಿರುವ ತಂತ್ರಜ್ಞಾನ ಸಂಪೂರ್ಣ ಬೇರೆ. ಟ್ರೆಡಿಶನಲ್ ​ಹಿಯರಿಂಗ್ ​ಏಡ್ಸ್​ ‘ಧ್ವನಿವರ್ಧಕ’ದ ತರಹ ವರ್ತಿಸಿ, ಶಬ್ಧಗಳನ್ನ ಜೋರಾಗಿ ಕೇಳಿಸುತ್ತದೆ. ಮೈಕ್​ನಿಂದ ಬರುವ ಶಬ್ಧ ಹೇಗೆ ಸ್ಪೀಕರ್​ಗಳಲ್ಲಿ ಜೋರಾಗಿ ಕೇಳಿಸುತ್ತದೆಯೋ ಹಾಗೆ. ಟ್ರೆಡಿಶನಲ್​ ಹಿಯರಿಂಗ್ ​ಏಡ್​ ಅನ್ನೋದೊಂದು ಕಿವಿಯೊಳಗಿನ ಸ್ಪೀಕರ್ ​ಅನ್ನಬಹುದು.  

ಆದರೆ ಕಾಕ್ಲಿಯರ್​ ಇಂಪ್ಲಾಂಟ್​ ಹಾಗಲ್ಲ. ಕಿವಿನರಗಳಿಗೆ ವಿದ್ಯುತ್​ ತರಂಗಗಳನ್ನ ಕೊಡುವ ಮೂಲಕ ಅತ್ಯಂತ ಸಹಜವಾಗಿ ಶಬ್ಧಗಳನ್ನು ಕೇಳಿಸಬಲ್ಲದು. ನಮ್ಮೆಲ್ಲರ ಕಿವಿ ನರಗಳಲ್ಲಿರುವ ಹೇರ್​ಸೆಲ್ಸ್ ​ಈ ಕಾಕ್ಲಿಯರ್​ ಇಂಪ್ಲಾಂಟ್ ಕೆಲಸಗಳನ್ನು ಮಾಡುತ್ತಿವೆ. ಯಾವ ಮಗುವಿಗೆ ನೈಸರ್ಗಿಕವಾಗಿ ಹೇರ್​ಸೆಲ್ಸ್​ ಕೆಲಸ ಮಾಡುತ್ತಿಲ್ಲವೋ ಆ ಮಗುವಿಗೆ ಕಾಕ್ಲಿಯರ್​ ಇಂಪ್ಲಾಂಟ್​ ಸೌಲಭ್ಯದ ಜರೂರತ್ತು ಇದೆ ಎಂದೇ ಅರ್ಥ.   ನೂರಕ್ಕೆ ನೂರು ಶ್ರವಣ ದೋಷವಿರುವ ಮಗುವೂ ಕಾಕ್ಲಿಯರ್ ​ಇಂಪ್ಲಾಂಟ್​ನಿಂದಾಗಿ ಉತ್ತಮವಾಗಿ ಕೇಳಿಸಿಕೊಳ್ಳಲು ಸಾಧ್ಯ’ ಎಂದು ಅವರೆನ್ನುತ್ತಿದ್ದಂತೆ ನಾವ್ಯಾವಾಗ ನಮ್ಮ ಮಗುವಿಗೆ ಇಂಪ್ಲಾಂಟ್ ಮಾಡಿಸುತ್ತೇವೋ ಎಂಬ ಭಾವ ಆವರಿಸಿಕೊಳ್ಳತೊಡಗಿತು.

‘ಈ  ಶಸ್ತ್ರಚಿಕಿತ್ಸೆ ಮಾಡುವುದು ಕಿವಿ ಹಿಂಭಾಗದಲ್ಲಿ. ಇಂಪ್ಲಾಂಟ್​ನಲ್ಲಿ ಎರಡು ಭಾಗಗಳಿರುತ್ತವೆ. ದೇಹದ ಒಳಗೆ ಅಳವಡಿಸುವ ಭಾಗ ಮತ್ತು ಹೊರಗಿನ ಭಾಗ. ಕಿವಿಯ ಹಿಂಭಾಗದ ಚರ್ಮದ ಕೆಳಗೆ, ತಲೆಬುರುಡೆಯ ಮೇಲೆ ಇಂಪ್ಲಾಂಟ್​ನ ಒಂದು ಭಾಗವಾದ ರಿಸೀವರ್​ ಸ್ಟಿಮ್ಯೂಲೇಟರ್​ನ್ನ ಸೇರಿಸಲಾಗುತ್ತದೆ. ಶಬ್ಧ ತರಂಗಗಳನ್ನು ವಿದ್ಯುತ್​ ತರಂಗಗಳಾಗಿ ಪರಿವರ್ತಿಸಿ ಮೆದುಳಿಗೆ ಸಂದೇಶ ರವಾನಿಸುವ ಕೆಲಸ ಮಾಡುವ ಎಲೆಕ್ಟ್ರೋಡ್​ಗಳನ್ನು ಕಾಕ್ಲಿಯರ್​ನರದ ಒಳಗೆ ತೂರಿಸಲಾಗುತ್ತದೆ. ಹಾಗೆಯೇ ಈ ಆಪರೇಶನ್​ನ ನಂತರ ಕಿವಿಯ ಹೊರಗಿನಿಂದ ಮಕ್ಕಳು ಧರಿಸಬೇಕಾದ ಡಿವೈಸ್​ನ್ನ ನಾವು  ಪ್ರೊಸೇಸರ್​ಎಂದು ಕರೆಯುತ್ತೇವೆ. ಇದು ನೋಡಲು ಸ್ವಲ್ಪ ದೊಡ್ಡ ಗಾತ್ರದ ಹಿಯರಿಂಗ್​ ಏಡ್ ​ಇದ್ದಂತೆಯೇ ಇರುತ್ತದೆ. ಇದರ ಕೆಲಸವೇನೆಂದರೆ ಶಬ್ಧಗಳನ್ನ ಎಲೆಕ್ಟ್ರೋಡ್ಸ್​ಗಳಿಗೆ ತಲುಪಿಸುವುದು. ಇದಕ್ಕಿರುವ ಮ್ಯಾಗ್ನೇಟ್​ನ ಕಾರಣದಿಂದ ಚರ್ಮದೊಳಗಿನ ಡಿವೈಸ್​ಗೆ ಇದು ಚರ್ಮದ ಹೊರಗಿನಿಂದ ಅಂಟಿಕೊಳ್ಳುತ್ತದೆ. ಒಳಗಿರುವ ಇಂಪ್ಲಾಂಟ್​ಗೆ ಶಬ್ಧಗಳನ್ನ ತಲುಪಿಸುವ ಕೆಲಸ ಮಾಡುತ್ತದೆ ಈ ಪ್ರೊಸೆಸರ್​’ ಅರ್ಧಗಂಟೆಗೂ ಹೆಚ್ಚು ಕಾಲ ಪ್ರವೀಣ್ ​ಸರ್​ ಅತ್ಯಂತ ಸರಳವಾಗಿ ನಮಗೆಲ್ಲ ಕಾಕ್ಲಿಯರ್ ​ಇಂಪ್ಲಾಂಟ್ ಬಗ್ಗೆ ಮಾಹಿತಿ ನೀಡಿದರು. 

ಈಗ ವೈದ್ಯರ ಸರದಿ. ಮೈಸೂರಿನ ಕೊಲಂಬಿಯಾ ಏಷಿಯಾ ಹಾಸ್ಪಿಟಲ್​ನ ಸೀನಿಯರ್​ ಇ.ಎನ್​.ಟಿ ಸರ್ಜನ್ ​ಆಗಿರುವ ಡಾಕ್ಟರ್​ ದತ್ತಾತ್ರಿ ಅವರು ವೇದಿಕೆಗೆ ಬಂದರು. ನಿಧಾನವಾಗಿ ಮಾತು ಆರಂಭಿಸಿದರು. ‘ಕಾಕ್ಲಿಯರ್​ ಇಂಪ್ಲಾಂಟ್ ​ಅನ್ನೋದು ಮೋಸ್ಟ್​ ಎಕ್ಸೈಟಿಂಗ್ ​ಇನ್​ವೆನ್ಶನ್​.   ಬಹುಷಃ, ಕಿವಿ, ಮೂಗು, ಗಂಟಲು ವಿಷಯದಲ್ಲಿ  ಈ ಮೂವತ್ತರಿಂದ ನಲವತ್ತು ವರ್ಷಗಳಲ್ಲಿ ಆವಿಷ್ಕಾರಗೊಂಡ ಅತ್ಯಂತ ಅಮೂಲ್ಯ ಸಂಶೋಧನೆ ಇದು. ತೀವ್ರ ಶ್ರವಣದೋಷವಿರುವ ಮಕ್ಕಳೂ ಕೂಡ ಸಾಮಾನ್ಯ ಮಕ್ಕಳ ತರಹ ಬೆಳೆಯಲು ಅನುಕೂಲ ಮಾಡಿಕೊಟ್ಟಂಥ ಅದ್ಭುತ ಆವಿಷ್ಕಾರ. ಕಾಕ್ಲಿಯರ್ ​ಇಂಪ್ಲಾಂಟ್​ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಕಿವುಡು ಮಗು, ಸಾಮಾನ್ಯ ಮಗುವಿನಂತೆಯೇ ಬೆಳೆಯುತ್ತದೆ  ಎಂಬುವುದರಲ್ಲಿ ಅನುಮಾನವೇ ಇಲ್ಲ’ ಎಂದು ಅವರಂದಾಗ ನನಗೆ ರೋಮಾಂಚನವಾದಂತಾಯಿತು.    

ವೈದ್ಯರ ಮಾತು ಮುಂದುವರೆಯುತ್ತಿತ್ತು. ಅವರು  ಚಿಕ್ಕಮಕ್ಕಳಿಗೆ ಆದಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈ ಶಸ್ತ್ರ ಚಿಕಿತ್ಸೆಯನ್ನ ಮಾಡಿಸುವುದರಿಂದ ಏನೆಲ್ಲ ಲಾಭವಿದೆ ಎಂಬ ಬಗ್ಗೆ ಮಾತನಾಡತೊಡಗಿದರು. ‘ಈಗಾಗಲೇ ನೀವು ಕಾಕ್ಲಿಯರ್​ನರದ ರಚನೆಯನ್ನ ನೋಡಿ ಅದರ ಬಗ್ಗೆ ತಿಳಿದುಕೊಂಡಿದ್ದೀರಾ. ನಾವೆಲ್ಲ ಯಾವಾಗಲೂ ಹೇಳುತ್ತಲೇ ಇರ್ತೀವಲ್ಲ, ಮಗುವಿಗೆ ಕಿವುಡಿನ ಸಮಸ್ಯೆ ಇದೆ ಅಂತ ಗೊತ್ತಾದ ಕ್ಷಣದಿಂದಲೇ ಅದರ ಕಿವಿಗೆ ಶ್ರವಣ ಸಾಧನ ಹಾಕಬೇಕು. ಶ್ರವಣ ಸಾಧನದಿಂದಲೂ ಕೇಳಿಸಿಕೊಳ್ಳಲಾರದ ಮಗುವಿಗೆ ಆದಷ್ಟು ಬೇಗ ಇಂಪ್ಲಾಂಟ್ ಮಾಡಿಸಬೇಕು ಅಂತ. ಯಾಕೆ ನಾವು ಹಾಗೆ ಹೇಳ್ತೀವಿ ಎಂಬ ಬಗ್ಗೆ ವೈಜ್ಞಾನಿಕ ವಿವರಣೆ ಕೊಡ್ತೀನಿ ಕೇಳಿ’ ಒಂದು ಕ್ಷಣ ಕುಳಿತಿದ್ದ ಎಲ್ಲ ಪಾಲಕ ಪೋಷಕ ವೃಂದವನ್ನು ಗಮನಿಸಿದರು. ಸ್ಕ್ರೀನ್​ನ ಮೇಲೆ ಡಾಕ್ಟರ್​ ವಿವರಿಸುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಚಿತ್ರಗಳು ಬಿತ್ತರಗೊಳ್ಳುತ್ತಿದ್ದವು. 

‘ಮೊದಲನೆಯದಾಗಿ, ಶ್ರವಣ ನಷ್ಟ ಅನ್ನೋದು ಕೇವಲ ಕಿವಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಮೆದುಳಿನ ಬೆಳವಣಿಗೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹಾಗೆಯೇ ಇದು ಮಗುವಿನ ಜೀವನದ ಇತರ ಹಲವು ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಹುಟ್ಟುವಾಗ ಸಾಮಾನ್ಯವಾಗಿ ಮಗುವಿನ ಮೆದುಳು ಪ್ರೌಢರ ಮೆದುಳಿನ ಕಾಲುಭಾಗ (25%) ಮಾತ್ರ ಬೆಳೆದಿರುತ್ತದೆ. ಒಂದೇ ಒಂದು ವರ್ಷಗಳಲ್ಲಿ ಮಗುವಿನ ಮೆದುಳು ದುಪ್ಪಟ್ಟು ಬೆಳೆಯುತ್ತದೆ. ಅಂದರೆ ಪ್ರೌಢರ ಮೆದುಳಿನ ಅರ್ಧ ಭಾಗದಷ್ಟು (50%) ಬೆಳೆವಣಿಗೆ ಕಂಡುಕೊಳ್ಳುತ್ತದೆ. ಹಾಗೆಯೇ ಮಗುವಿಗೆ ಮೂರು ವರ್ಷಗಳಾಗುವಷ್ಟರಲ್ಲಿ ಮೆದುಳು 90 % ಬೆಳೆದು. ಐದು ವರ್ಷಗಳಾಗುವಷ್ಟರಲ್ಲಿ ಆ ಮಗುವಿನ ಮೆದುಳು ಸಂಪೂರ್ಣವಾಗಿ ಬೆಳೆದಿರುತ್ತದೆ. 

ನಮ್ಮೆಲ್ಲರ ಮೆದುಳಿನಲ್ಲಿರುವ ಶ್ರವಣೇಂದ್ರಿಯಗಳಿಗೆ ಸಂಬಂಧ ಪಟ್ಟ ಭಾಗವನ್ನು ಟೆಂಪೊರಲ್​ ಲೋಬ್ ​(temporal lobe) ಎಂದು ಕರೆಯುತ್ತೇವೆ. ಹಾಗೂ ದೃಷ್ಟಿಗೆ ಸಂಬಂಧಪಟ್ಟ ಮೆದುಳಿನ ಭಾಗವನ್ನು occipital lobe ಎಂದು ಕರೆಯುತ್ತೇವೆ. ಈ ಎರಡೂ ಲೋಬ್​ಗಳೂ ಮೆದುಳಿನಲ್ಲಿ ಅಕ್ಕಪಕ್ಕ ಇರುತ್ತವೆ. ಈ ನರಗಳು ಒಳಗಿಂದೊಳಗೆ ಅಂತರ್ ​ಸಂಬಂಧವನ್ನು ಹೊಂದಿರುತ್ತವೆ. ಶ್ರವಣದೋಷದ ಕಾರಣದಿಂದಾಗಿ ಕಿವಿಗಾಗಿಯೇ ಇರುವ ಮೆದುಳಿನ ಭಾಗಕ್ಕೆ ಯಾವಾಗ ಕೆಲಸ ದೊರಕುವುದಿಲ್ಲವೋ, ಆಗ ಆ ಭಾಗವನ್ನು ಕಣ್ಣಿನ ಭಾಗ ಆವರಿಸಿಕೊಳ್ಳಲು ಆರಂಭಿಸಿಬಿಡುತ್ತದೆ. ಹಾಗೆಯೇ ವೈಸಾ ವರ್ಸಾ. ಕಣ್ಣಿನ ನರಗಳಿಗೆ ಕೆಲಸವಿಲ್ಲದಾಗ ಕಿವಿಯ ನರಗಳು ಅವುಗಳನ್ನು ಆವರಿಸಿಕೊಳ್ಳುತ್ತವೆ.

ನೈಸರ್ಗಿಕವಾಗಿಯೇ ಮೆದುಳಿನಲ್ಲಿ ಈ ವ್ಯವಸ್ಥೆ ಇದೆ. ಹೀಗಿದ್ದಾಗ, ಶ್ರವಣದೋಷವಿರುವ ಮಗುವಿಗೆ ಚಿಕ್ಕವಯಸ್ಸಿನಯಲ್ಲಿಯೇ ಶ್ರವಣ ಸಾಧನಗಳನ್ನು ಹಾಕದೆ ಇದ್ದಲ್ಲಿ, ಮಗುವಿನ ಸಂವಹನ, ಭಾಷೆ, ಉಚ್ಛಾರ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಾ ಹೋಗುತ್ತದೆ. ಮಗುವಿನ ವಯಸ್ಸು ಜಾಸ್ತಿಯಾದ ಮೇಲೆ ಸರ್ಜರಿ ಮಾಡಿಸಿದರೂ ಫಲಿತಾಂಶ ಅಷ್ಟರಮಟ್ಟಿಗೆ ಸಿಗಲಾರದು. ಇದೇ ಕಾರಣಕ್ಕೋಸ್ಕರವೇ ನಾವು ‘ಅರ್ಲಿ ಇಂಟರ್​ವೆನ್ಶನ್​ ಈಸ್​ ಬೆಸ್ಟ್​’ ಅಂತ ಹೇಳೋದು.’ ನಾನು ವಿನಯ್ ​ಮುಖವನ್ನು ನೋಡಿದೆ. ಅವನು ಕೂಡ ನನ್ನಂತೆಯೇ ಡಾಕ್ಟರ್​ಮಾತುಗಳನ್ನು ಸಂಪೂರ್ಣ ಒಪ್ಪಿಕೊಂಡಂತೆ ಕಾಣಿಸಿತು. 

‘ಸಾಮಾನ್ಯವಾಗಿ ನಮ್ಮ ದೇಶದ ದೊಡ್ಡ ಆಸ್ಪತ್ರೆಗಳಲ್ಲಿ ಮಗು ಹುಟ್ಟಿ ಒಂದು ದಿನದಿಂದ ಮೂರು ದಿನಗಳೊಳಗೇ ಕಿವಿ ಪರೀಕ್ಷೆ ಮಾಡಲಾಗುತ್ತದೆ. ಮಗುವಿಗೆ ಶ್ರವಣದೋಷವಿದೆ ಎಂದಾದಲ್ಲಿ ಮೂರು ತಿಂಗಳಿಗೆ ಅದರ ಕಿವಿಗೆ ಶ್ರವಣ ಸಾಧನಗಳನ್ನು ಹಾಕಬೇಕು. ಆರು ತಿಂಗಳುಗಳೊಳಗೇ ಮಗುವಿನ ಕಿವಿಗಳಿಗೆ ಶ್ರವಣ ಸಾಧನಗಳ ಮೂಲಕ ಶಬ್ಧಗಳನ್ನ ನೀಡಿ ಕಿವಿನರಗಳನ್ನು ಪ್ರಚೋದಿಸುತ್ತಿರಬೇಕು. ತೀವ್ರ ಶ್ರವಣದೋಷವಿರುವ ಮಗುವಿಗೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಕಾಕ್ಲಿಯರ್ ​ಇಂಪ್ಲಾಂಟ್ ​ಮಾಡಿಸುವದು ಅತ್ಯುತ್ತಮ. 

ಒಂದು ವರ್ಷ ವಯಸ್ಸಿನಲ್ಲಿ ಇಂಪ್ಲಾಂಟ್​ಮಾಡಿಸಿದ ಮಕ್ಕಳು ಅತ್ಯಂತ ಸಾಮಾನ್ಯ ಮಗುವಿನ ಹಾಗೆ ಬೆಳೆದಿದ್ದಾರೆ. ಅವರ ಮಾತಿನಲ್ಲಾಗಲೀ, ಉಚ್ಛಾರದಲ್ಲಾಗಲಿ, ಕಲಿಕೆಯಲ್ಲಾಗಲೀ ಯಾವುದೇ ವ್ಯತ್ಯಾಸವಾಗಿಲ್ಲ. ಅವರೆಲ್ಲ ಕಿವುಡು ಮಕ್ಕಳು ಎನ್ನಲು ಸಾಧ್ಯವೇ ಇಲ್ಲ, ಅಷ್ಟು ಸಹಜ ಸ್ಥಿತಿಯಲ್ಲಿ ಅವರಿದ್ದಾರೆ. ನಿಮ್ಮ ನಿಮ್ಮ ಮಕ್ಕಳಿಗೆ ಎಷ್ಟು ವರ್ಷ ವಯಸ್ಸು ನೋಡಿಕೊಳ್ಳಿ. ಸಮಯ ಪೋಲು ಮಾಡದೇ ಆದಷ್ಟು ಬೇಗ ಕಾಕ್ಲಿಯರ್​ಇಂಪ್ಲಾಂಟ್​ಮಾಡಿಸಿ ಮಕ್ಕಳ ಭವಿಷ್ಯ ರೂಪಿಸಿ ಎಂಬುದು ನನ್ನ ಸಲಹೆ’ ನನ್ನ ಕಾಲಮೇಲೆಯೇ ಕುಳಿತು ಆಡುತ್ತಿದ್ದ ಅಥರ್ವನ ತಲೆಯನ್ನೊಮ್ಮೆ ನೇವರಿಸಿದೆ. ವೈದ್ಯರ ಮಾತುಗಳನ್ನು ಪಿನ್​ಡ್ರಾಪ್​ಸೈಲೆನ್ಸ್​ನಲ್ಲಿ ನಾವೆಲ್ಲ ಕೇಳಿಸಿಕೊಳ್ಳುತ್ತಿದ್ದೆವು. ನಮ್ಮ ನಮ್ಮ ಮಕ್ಕಳ ಮಾತು ಶಬ್ಧಗಳು ಅಲ್ಲಲ್ಲಿ ಕೇಳುತ್ತಿದ್ದುದು ಬಿಟ್ಟರೆ, ಮತ್ಯಾವ ಶಬ್ಧಗಳೂ ಅಲ್ಲಿರಲಿಲ್ಲ. 

ವೈದ್ಯರ ಮಾತು ಮುಗಿದಿದ್ದೇ, ಪ್ರಶ್ನೋತ್ರ ಕಾರ್ಯಕ್ರಮ ಶುರುವಾಗಿತ್ತು. ನಾವೆಲ್ಲ ನಮ್ಮಲ್ಲಿರುವ ಅನುಮಾನಗಳನ್ನ ಬಗೆಹರಿಸಿಕೊಳ್ಳುವುದಕ್ಕಾಗಿ ನೇರವಾಗಿ ವೈದ್ಯರ ಬಳಿಯೇ ನಾವು ಪ್ರಶ್ನೆ ಕೇಳಬಹುದಿತ್ತು. ಮೊದಲ ಪ್ರಶ್ನೆಯನ್ನ ನಾನೇ ಎದ್ದುನಿಂತು ಕೇಳಿದೆ.  ‘ನಮ್ಮ ಮಗುವಿಗೆ ಈಗಾಗಲೇ 1 ವರ್ಷ 10 ತಿಂಗಳಾಗಿವೆ. ಎರಡರ ಸಮೀಪ ಇದ್ದಾನೆ. ನೀವು ಹೇಳಿದಂತೆ 60% ನಿಂದ 70% ಮೆದುಳು ಅವನಲ್ಲಿ ಬೆಳವಣಿಗೆಯಾಗಿರಬಹುದು. ಈಗ ಇಂಪ್ಲಾಂಟ್ ​ಮಾಡಿಸಿದರೆ ಪ್ರಯೋಜನವಾಗಬಹುದೇ..’? 

‘ಖಂಡಿತ. ಪ್ರಯೋಜನವಿದೆ. ಮಿಂಚಿಹೋದ ವಯಸ್ಸಲ್ಲ ಇದು. 1.10 ಅಂದ್ರೆ ಅತ್ಯಂತ ಸರಿಯಾದ ವಯಸ್ಸು. ಇನ್ನೂ ನಿಮ್ಮ ಮಗುವಿನ ಮೆದುಳು ಬೆಳವಣಿಗೆಯ ಹಂತದಲ್ಲಿಯೇ ಇದೆ. ಗರಿಷ್ಠ ಮಿದುಳಿನ ಬೆಳವಣಿಗೆ 3 ವರ್ಷ ವಯಸ್ಸಿನಲ್ಲಿ ಆಗುತ್ತದೆ. 3 ವರ್ಷಗಳವರೆಗೆ ಮಕ್ಕಳ ಮೆದುಳು ಸ್ಪಂಜಿನಂತಿರುತ್ತದೆ. ನೀವೆಷ್ಟು ಜ್ಞಾನವನ್ನ ಅದಕ್ಕೆ ಕೊಡತ್ತೀರೋ ಅಷ್ಟನ್ನೂ ಅದು ಹೀರಿಕೊಳ್ಳುತ್ತೆ. ಆ ವಯಸ್ಸಿನಲ್ಲಿ ಕುತೂಹಲ ಜಾಸ್ತಿ. ಮಗುವಿಗೆ ವಯಸ್ಸಾಗುತ್ತಾ ಹೋದಂತೆ ಮೆದುಳು ಗಟ್ಟಿಯಾಗತೊಡಗಿದಾಗ ಅದರಲ್ಲಿ ಜ್ಞಾನವನ್ನ ಅಚ್ಚೊತ್ತುವುದು ಕಷ್ಟವಾಗಿಬಿಡುತ್ತೆ. ಈಗ ನಿಮ್ಮ ಮಗುವಿಗೆ ಇಂಪ್ಲಾಂಟ್ ಮಾಡಿಸಿದರೆ ಫಲಿತಾಂಶ ಚೆನ್ನಾಗಿ ಬಂದೇ ಬರುತ್ತದೆ. ನನ್ನ ಅನುಭವದ ಪ್ರಕಾರ ಮೂರು ವರ್ಷದ ಒಳಗೆ ಇಂಪ್ಲಾಂಟ್​ ಮಾಡಿಸಿ, ಥೆರಪಿ ಪಡೆದ ಮಕ್ಕಳು ಅತ್ಯಂತ ಸಹಜ ಮಾತು, ಉಚ್ಛಾರ ಪಡೆದುಕೊಂಡಿದ್ದಾರೆ. ಅವರ ಕಲಿಕಾ ಜೀವನ ಕೂಡ ತೀರ ಸಾಮಾನ್ಯವಾಗಿದೆ. ನಿಮ್ಮ ಸ್ಕೂಲ್​ನಲ್ಲಿಯೇ ನಿಮಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವಲ್ಲ. ಇಲ್ಲಿಯ ಹಲವು ಮಕ್ಕಳಿಗೆ ಸಾಮಾನ್ಯವಾಗಿ ಮೂರು ವರ್ಷಗಳೊಳಗೆ ಇಂಪ್ಲಾಟ್​ ಆಗಿದೆ. ಅವರೆಲ್ಲರ ಮಾತುಗಳನ್ನ ನೀವು ಕೇಳಿಸಿಕೊಂಡಿರಬಹುದು ಅಲ್ವಾ..?’ ಅವರ ಪ್ರಶ್ನೆಗೆ ಹೌದೆಂಬಂತೆ ತಲೆಯಾಡಿಸಿದೆ ನಾನು. ‘ಖಂಡಿತ ಪ್ರಯೋಜನ ಇದೆ. ಇಂಪ್ಲಾಂಟ್ ಮಾಡಿಸಲು ಸರಿಯಾದ ಸಮಯ ಇದು. ಇನ್ನೂ ತಡಮಾಡದೇ ಆದಷ್ಟು ಬೇಗ ಇಂಪ್ಲಾಂಟ್​ಮಾಡಿಸಿ’ ಸಲಹೆ ಕೊಟ್ಟರು. ಅದಾಗಲೇ ನಾನು ವಿನಯ್​ ಇಬ್ಬರೂ ನಮಗೇ ಗೊತ್ತಿಲ್ಲದಂತೆ ನಮ್ಮ ಮಗುವಿಗೆ ಕಾಕ್ಲಿಯರ್​ಇಂಪ್ಲಾಂಟ್​ ಮಾಡಿಸಲು ಮಾನಸಿಕವಾಗಿ ಸಿದ್ಧರಾಗಿಬಿಟ್ಟಿದ್ದೆವು. 

ಈ ಸರ್ಜರಿಯಿಂದ ಮೆದುಳಿಗೇನಾದರೂ ಗಾಯವಾಗಬಹುದಾ..? ಮೆದುಳಿನ ಮೇಲೆ ಏನಾದರೂ ದುಷ್ಪರಿಣಾಮಗಳಿರಬಹುದಾ..? ಎದುರಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ತಾಯಿ ಸ್ವಲ್ಪ ಆತಂಕದಲ್ಲಿಯೇ ಕೇಳಿದರು. ‘ಖಂಡಿತ ಇಲ್ಲ. ಇದು ಮೆದುಳಿನ ಸರ್ಜರಿ ಅಲ್ಲವೇ ಅಲ್ಲ. ಈ ಶಸ್ತ್ರಚಿಕಿತ್ಸೆಯಲ್ಲಿ ನಾವು ಮೆದುಳನ್ನ ಸ್ಪರ್ಷಿಸೋದೇ ಇಲ್ಲ. ಇದು ಶ್ರವಣೇಂದ್ರಿಯಗಳ ಸರ್ಜರಿ ಅಷ್ಟೆ. ನೀವು ಅಂದುಕೊಂಡಂತೆ ಯಾವುದೇ ದುಷ್ಪರಿಣಾಮಗಳೂ ಈ ಆಪರೇಶನ್​ನಲ್ಲಿ ಇಲ್ಲ. ಇದಕ್ಕಾಗಿ ನೀವು ಹೆದರಬೇಕಿಲ್ಲ’ ಯಾಕೋ ಈ ಉತ್ತರ ಕೇಳಿ ನನಗೂ ಸಮಾಧಾನವಾದಂತಾಯಿತು.  

ನಮ್ಮ ಪಕ್ಕದ ಸಾಲಿನಲ್ಲಿ ಕುಳಿತಿದ್ದ ಯಾರೋ ಎದ್ದು ನಿಂತು ‘ಈ ಆಪರೇಶನ್​ಗೆ ವಯಸ್ಸಿನ ಮಿತಿ ಇದೆಯಾ ಸರ್​.?’ ಎಂಬ ಪ್ರಶ್ನೆ ಕೇಳಿದ್ದೇ, ಅವರ ಕಡೆ ತಿರುಗಿ ಡಾಕ್ಟರ್​ಮಾತು ಆರಂಭಿಸಿದರು.  

ಇಲ್ಲ ಈ ಸರ್ಜರಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಮಗುವಿನ ಆರೋಗ್ಯ, ಬೆಳವಣಿಗೆ, ತೂಕವನ್ನ ಪರೀಕ್ಷಿಸಿ ಒಂದು ವರ್ಷಕ್ಕೂ ಮುಂಚೆಯೇ ಮಗುವಿಗೆ ಈ ಕಾಕ್ಲಿಯರ್​ಇಂಪ್ಲಾಂಟ್​ಸರ್ಜರಿ ಮಾಡಿದ್ದಿದೆ. ಆದಷ್ಟು 5 ವರ್ಷದ ಒಳಗೆ ಈ ಸರ್ಜರಿ ಮಾಡಿಸುವುದರಿಂದ ಮಗು ಸಹಜವಾಗಿ ಮಾತು ಕಲಿಯಲು ಸಾಧ್ಯವಾಗುತ್ತದೆ. ಆ ನಂತರ ಕೂಡ ಇಂಪ್ಲಾಂಟ್ ಮಾಡಿಸಲು ಯಾವುದೇ ಅಡ್ಡಿ ಇಲ್ಲ. ಆದರೆ, ಮಕ್ಕಳ ಕಲಿಕೆಯ ದೃಷ್ಟಿಯಲ್ಲಿ ಐದು ವರ್ಷಗಳ ಒಳಗೆ ಮಾಡಿಸುವುದು ಸೂಕ್ತ. 13, 14, 15 ರ ವಯಸ್ಸಿನ ಮಕ್ಕಳಿಗೂ ಕೂಡ ಈಗೀಗ ಕಾಕ್ಲಿಯರ್​ಇಂಪ್ಲಾಂಟ್ ಮಾಡಿಸಲಾಗುತ್ತಿದೆ ಆದರೆ ಆ ವಯಸ್ಸಿನಲ್ಲಿ ಇಂಪ್ಲಾಂಟ್ ಮಾಡಿಸಿದರೆ ಸಾಮಾನ್ಯರಂತೆ ಅವರಿಗೆ ಮಾತು ಬರಲಾರದು. ಪಾಶ್ಚಾತ್ಯ ದೇಶಗಳಲ್ಲಿ ವಯಸ್ಕ ಶ್ರವಣದೋಷ ಸಮಸ್ಯೆಯ ಹಲವು ಜನ ಈ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ನಮ್ಮಲ್ಲಿ ವ ಯಸ್ಕರ ಸಂಖ್ಯೆ ಸ್ವಲ್ಪ ಕಡಿಮೆ ಇದ್ದರೂ, ಸಾಕಷ್ಟು ಚಿಕ್ಕ ಮಕ್ಕಳಿಗೆ ನಾವು ಈ ಸರ್ಜರಿ ಮಾಡಿ ಒಳ್ಳೆಯ ಫಲಿತಾಂಶವನ್ನೂ ಪಡೆದಿದ್ದೇವೆ.

ಈ ಸರ್ಜರಿಗೆ ಅನಸ್ತೇಶಿಯಾ ಉಪಯೋಗಿಸುವುದರಿಂದ, ದೈಹಿಕ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆರೋಗ್ಯದಲ್ಲಿ ಮತ್ಯಾವ ಸಮಸ್ಯೆ ಇಲ್ಲದ 89 ವರ್ಷ ವಯಸ್ಸಿನ ವ್ಯಕ್ತಿ ಕೂಡ ಈ ಸರ್ಜರಿ ಮಾಡಿಸಿಕೊಂಡು ಆರೋಗ್ಯವಾಗಿರುವ ಉದಾಹರಣೆ ಅಮೆರಿಕದಂಥ ದೇಶಗಳಲ್ಲಿ ಸಿಗುತ್ತವೆ ಎಂದು ಅವರ ಅನುಮಾನವನ್ನ ಬಗೆಹರಿಸಿದರು.  

ಟ್ರೆಡಿಶನಲ್ ​ಹಿಯರಿಂಗ್​ ಏಡ್​ನಲ್ಲಿ ಕೇಳಿಸುವ ಶಬ್ಧಕ್ಕೂ ಈ ಕಾಕ್ಲಿಯರ್ ​ಇಂಪ್ಲಾಂಟ್​ನಲ್ಲಿ ಕೇಳಿಸುವ ಶಬ್ಧಕ್ಕೂ ವ್ಯತ್ಯಾಸವಿರುತ್ತದೆ ಅಂತ ಕೇಳಿದ್ದೆ ಹೌದಾ ಸಾರ್​.? ಎಂಬ ಪ್ರಶ್ನೆಯೂ ಜನರ ಮಧ್ಯದದಿಂದ ಎದ್ದುಬಂತು. 

ನಾವು ಆಗಲೇ ಹೇಳಿದ್ದೆವಲ್ಲ, ಟ್ರೆಡಿಶನಲ್​ ಹಿಯರಿಂಗ್​ ಏಡ್​ ಧ್ವನಿವರ್ಧಕದ ಹಾಗೆ ಕೆಲಸ ಮಾಡುತ್ತದೆ ಅಷ್ಟೆ.  ಆದರೆ ಕಾಕ್ಲಿಯರ್​ ಇಂಪ್ಲಾಂಟ್​ಧ್ವನಿಯನ್ನು ಎಲೆಕ್ಟ್ರಿಕ್ ​ತರಂಗಗಳಾಗಿ ಪರಿವರ್ತಿಸಿ ಬ್ರೇನ್​ಗೆ ಸಂದೇಶ ರವಾನಿಸುತ್ತವೆ. ಹೀಗಾಗಿ ಕಾಕ್ಲಿಯರ್​ ಇಂಪ್ಲಾಂಟ್​ನ ಧ್ವನಿ ಸ್ವಲ್ಪ ರೊಬೊಟಿಕ್​, ಎಲೆಕ್ಟ್ರಾನಿಕ್​ ಧ್ವನಿಯ ಹಾಗೆ ಕೇಳಿಸುತ್ತದೆ ಎಂದು ಇದರ ಫಲಾನುಭವಿಗಳು ಹೇಳುತ್ತಾರೆ. ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಇದೆಲ್ಲ ಮೊದಲ ಕೆಲವು ತಿಂಗಳುಗಳು ಮಾತ್ರ. ಮೆದುಳು ಅನ್ನೋದೊಂದು ಅದ್ಭುತ ಲರ್ನಿಂಗ್​ ಮಷಿನ್​. ಕಾಕ್ಲಿಯರ್​ ಇಂಪ್ಲಾಂಟ್​ ಆಗಿ ಕೆಲವೇ ಕೆಲವು ತಿಂಗಳುಗಳ ನಂತರ, ಶಬ್ಧಗಳು ತೀರ ಸಹಜವಾಗಿಯೇ ಕೇಳಿಸಲು ಪ್ರಾರಂಭವಾಗುತ್ತದೆ. ಶಬ್ಧಗಳನ್ನೇ ಕೇಳಿಸಿಕೊಳ್ಳದ ಚಿಕ್ಕಮಕ್ಕಳಿಗೆ ಇದರ ವ್ಯತ್ಯಾಸ ತಿಳಿಯೋದಿಲ್ಲ. ಇಂಪ್ಲಾಂಟ್​ನಿಂದ ಕೇಳಿಸುತ್ತಿರುವ ಶಬ್ಧಕ್ಕೆ ಆ ಮಕ್ಕಳು ಬಹುಬೇಗ ಹೊಂದಿಕೊಂಡುಬಿಡುತ್ತಾರೆ. 

ನಮ್ಮ ಹಾಗೆಯೇ ಇಂಪ್ಲಾಂಟ್​ ಮಾಡಿಸುವ ಯೋಚನೆ ಇದ್ದ ತಂದೆಯೊಬ್ಬರು ‘ಕಾಕ್ಲಿಯರ್ ​ಇಂಪ್ಲಾಂಟ್ ​ಸರ್ಜರಿ ಆದ ತಕ್ಷಣ ಕೇಳಿಸಿಕೊಳ್ಳಲು ಸಾಧ್ಯವೇ..?’ ಎಂಬ ಪ್ರಶ್ನೆ ಇಟ್ಟರು. 

‘ಇಲ್ಲ. ಇಲ್ಲ. ಸರ್ಜರಿ ಆದ ತಕ್ಷಣ ಆ ಮಗು ಸುಧಾರಿಸಿಕೊಳ್ಳೋಕೆ ಸಮಯ ಬೇಕಾಗುತ್ತದೆ. ಸರ್ಜರಿಯಿಂದಾದ ಗಾಯ ಒಣಗಬೇಕು. ಶಸ್ತ್ರ ಚಿಕಿತ್ಸೆಯ ನಂತರ ಅದರ ದೇಹ ಇಂಪ್ಲಾಂಟ್​ಗೆ ಹೇಗೆ ವರ್ತಿಸುತ್ತಿದೆ ಎಂಬುದನ್ನ ಗಮನಿಸಬೇಕು. ಹೀಗಾಗಿ ಮಗುವಿನ ಅರೋಗ್ಯ ನೋಡಿ, ಹತ್ತು ದಿನದಿಂದ ಇಪ್ಪತ್ತು ದಿನಗಳವರೆಗೂ ನಾವು ಸಮಯ ನೀಡಿ, ಇಂಪ್ಲಾಂಟ್​ ಆಕ್ಟಿವೇಟ್​ ಮಾಡಬೇಕಾಗುತ್ತದೆ. ಕಾಕ್ಲಿಯರ್​ ಇಂಪ್ಲಾಂಟ್​ ಆಕ್ಟಿವೇಟ್​ಆದ ತಕ್ಷಣ, ಫಲಾನುಭವಿಗಳಿಗೆ ನಮ್ಮ ನಿಮ್ಮಂತೆ ಕೇಳಿಸುವುದಿಲ್ಲ. ಶಬ್ಧಗಳು ಮಾತ್ರ ಕೇಳಿಸುತ್ತವೆ. ಮೊದಲು ಆ ಶಬ್ಧಗಳ ನಡುವಿನ ವ್ಯತ್ಯಾಸವನ್ನ ಅವರು ಗುರುತಿಸಬೇಕು. ನಂತರ ಆ ಶಬ್ಧಗಳನ್ನು ಅರ್ಥೈಸಿಕೊಳ್ಳಬೇಕು. ಹಾಗೆಯೇ ಶಬ್ಧಗಳನ್ನು ಗುರುತಿಸುತ್ತಾ ಗುರುತಿಸುತ್ತಾ ವಾಕ್ಯಗಳನ್ನೂ ಅರ್ಥ ಮಾಡಿಕೊಳ್ಳವದನ್ನೂ ಕಲಿಯುತ್ತದೆ ಮೆದುಳು. ಇದೆಲ್ಲವೂ ಆಗುವುದಕ್ಕೆ ಕನಿಷ್ಟವೆಂದರೂ ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ.’

ಮಕ್ಕಳಿಗೆ ಹಿಯರಿಂಗ್​ ಲಾಸ್​ ಎಷ್ಟಿದ್ದರೆ ಕಾಕ್ಲಿಯರ್​ ಇಂಪ್ಲಾಂಟ್​ ಮಾಡಿಸಬೇಕು..? ಇಂಪ್ಲಾಂಟ್ ಮಾಡಿಸಲು ಶ್ರವಣ ದೋಷದ ಮಟ್ಟ ಎಷ್ಟಿರಬೇಕು..? ಎಂಬ ಈ ಪ್ರಶ್ನೆಯನ್ನೊಬ್ಬರು ಕೇಳಿದಾಗ ಸಭೆಯಲ್ಲಿ ಅಲ್ಲಲ್ಲಿ ಹದವಾದ ಗದ್ದಲ ಕೇಳಿಬಂತು. ಹಲವರು ಈ ಪ್ರಶ್ನೆಗೆ ಉತ್ತರ ನಿರೀಕ್ಷಿಸುತ್ತಿರಬೇಕು ಅಂದುಕೊಂಡೆ. 

‘ಯಾವ ಮಗುವಿಗೆ ತ್ರೀವ್ರ ಶ್ರವಣ ದೋಷವಿದೆಯೋ, ಟ್ರೆಡಿಶನಲ್ ​ಹಿಯರಿಂಗ್​ ಏಡ್​ ಉಪಯೋಗಿಸಿಯೂ ಶಬ್ಧಗಳನ್ನೂ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನ ಕಿವಿ ಕಳೆದುಕೊಂಡಿದೆಯೋ ಅಂತಹ ಮಕ್ಕಳಿಗೆ ಕಾಕ್ಲಿಯರ್ ​ಇಂಪ್ಲಾಂಟ್ ಮಾಡಿಸಬೇಕು. ಹುಟ್ಟಿನಿಂದ ಇರುವ ಶ್ರವಣ ದೋಷವು ಶೇಕಡಾ 60 ಕ್ಕಿಂತ ಮೇಲೆ ಇದ್ದರೆ ಇಂಪ್ಲಾಂಟ್ ಮಾಡಿಸಲು ಸಲಹೆ ನೀಡುತ್ತೇವೆ. Severe to profound (70-80%) ಶ್ರವಣ ತೊಂದರೆ ಇದ್ದರೆ, ಕಾಕ್ಲಿಯರ್​ ಇಂಪ್ಲಾಂಟ್​ ಬೇಕೇ ಬೇಕು. ಕೆಲವೊಂದು ಸಲ 60% ಗಿಂತ ಕಡಿಮೆ ದೋಷವಿದ್ದೂ, ಟ್ರೆಡಿಶನಲ್ ​ಹಿಯರಿಂಗ್​ ಏಡ್​ನಿಂದ ಉಪಯೋಗವಿಲ್ಲ ಅಂದಾಗಲೂ ಇಂಪ್ಲಾಂಟ್​ ಮಾಡಿಸಲೇ ಬೇಕು. ಕೇಳಿಸುವಂತೆ ಟ್ರೆಡಿಶನಲ್ ​ಹಿಯರಿಂಗ್ ಏಡ್ ಅಲ್ಲಿ ಕೂಡ ಮಾಡಬಹುದು ಆದರೆ, ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವಂತೆ ಮಾಡಲು ಇಂಪ್ಲಾಂಟ್ ಒಂದೇ ದಾರಿ’.

ನನ್ನ ಮನಸ್ಸಿನಲ್ಲಿಯೂ ಆಗಿಂದ ಕಾಡುತ್ತಲೇ ಇದ್ದ ಒಂದು ಪ್ರಶ್ನೆಯನ್ನ ಪುಷ್ಕರ್​ಅಮ್ಮ ಕೇಳಿದ್ದರು. ‘ಕಾಕ್ಲಿಯರ್​ ಇಂಪ್ಲಾಂಟ್​ ಒಂದೇ ಕಿವಿಗೆ ಮಾಡಿಸಿದರೆ ಸಾಕಾ…? ಅಥವಾ ಎರಡೂ ಕಿವಿಗಳಿಗೂ ಮಾಡಿಸಬೇಕಾ..?’ ಅನ್ನೋ ಪ್ರಶ್ನೆಯಾಗಿತ್ತು ಅದು. 

ಈ ಪ್ರಕೃತಿ ನಮಗೆಲ್ಲ ಕಿವಿ, ಕಣ್ಣು, ಕೈ-ಕಾಲುಗಳನ್ನು ಎರಡೆರಡು ಕೊಟ್ಟಿದ್ಯಾಕೆ..? ಅವೆಲ್ಲ ಒಬ್ಬ ಜೀವಿಗೆ ಅವಶ್ಯಕ ಎಂಬ ಕಾರಣಕ್ಕೆ.  ಹಾಗೇ ನಾವೆಲ್ಲ ಎರಡು ಕಿವಿಗಳನ್ನ ಹೊಂದಿರುವವರು. ನಮ್ಮ ಮೆದುಳಿನಲ್ಲಿ ಎರಡೂ ಕಿವಿಗಳಿಗೋಸ್ಕರ ನರತಂತುಗಳಿವೆ. ಮೆದುಳಿನಲ್ಲಿ ಎರಡೂ ಕಿವಿಗಳಿಗೋಸ್ಕರವೇ ಪ್ರತ್ಯೇಕ ಭಾಗಗಳಿವೆ. ಎರಡೂ ಕಿವಿಗಳು ಕೇಳಿದಾಗ ಮಾತ್ರ ಒಬ್ಬ ಮನುಷ್ಯ ಎಲ್ಲಾ ಕಡೆಗಳಿಂದ ಬರುವ ಶಬ್ಧಗಳನ್ನೂ ಸರಿಯಾಗಿ ಗುರುತಿಸಲು ಸಾಧ್ಯ. ಹೀಗಾಗಿ ಇಂಪ್ಲಾಂಟ್ ​ಮಾಡಿಸುವಾಗಲೂ ಕೂಡ ಎರಡೂ ಕಿವಿಗಳಿಗೆ ಮಾಡಿಸಿದರೆ ಉತ್ತಮ. ಬೆಳವಣಿಗೆಯ ಹಂತದಲ್ಲಿದ್ದಾಗಲೇ ಶ್ರವಣೇಂದ್ರಿಯಗಳಿಗೆ ಶಬ್ಧ ಒದಗಿಸುವುದರಿಂದ, ಚಿಕ್ಕ ವಯಸ್ಸಿನಿಂದಲೇ ಅದು ಪಕ್ವಗೊಂಡು, ಎರಡೂ ಕಾಕ್ಲಿಯರ್​ನರಗಳೂ ಒಟ್ಟಿಗೇ ಹೊಂದಿಕೊಂಡು ಕೇಳಿಸುವಿಕೆಯ ಗುಣಮಟ್ಟ ಹೆಚ್ಚಿಸುತ್ತವೆ.  

ಅಲ್ಲದೇ ಒಂದೇ ಬಾರಿ ಆಸ್ಪತ್ರೆಗೆ ದಾಖಲಾದಾಗಲೇ ಎರಡೂ ಆಪರೇಶನ್ ​ಒಂದೇ ಬಾರಿಗೆ ಮುಗಿದುಹೋಗುತ್ತದೆ. ಎರಡೂ ಕಿವಿಗಳಿಗೂ ಒಟ್ಟಿಗೇ ಥೆರಪಿ ಕೂಡ ಮುಗಿಯುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಗುವಿನ ಮಾತಿನ ಸ್ಪಷ್ಟತೆ ಮತ್ತು ಭಾಷೆಯ ಬೆಳವಣಿಗೆಗೆ ಇದು ಅತ್ಯಂತ ಉಪಯೋಗಕಾರಿ. ಒಂದು ಕಿವಿಗೆ ಮಾತ್ರ ಇಂಪ್ಲಾಂಟ್ ಆದಲ್ಲಿ ಮಗುವಿನ ಸುತ್ತಮುತ್ತಲಿನ ಎಲ್ಲಾ ದಿಕ್ಕುಳಗಳಿಂದ ಬರುವ ಶಬ್ಧಗಳೂ ಒಂದೇ ತರಹ ಅವರಿಗೆ ಕೇಳಿಸೋದಿಲ್ಲ. ಎರಡೂ ಇಂಪ್ಲಾಂಟ್​ ಇದ್ದಲ್ಲಿ ಮಗು 360 ಡಿಗ್ರಿಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಶಬ್ಧಗಳನ್ನೂ ಗುರುತಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ. ಸುತ್ತಮುತ್ತಲಿನ ಎಲ್ಲ ಶಬ್ಧಗಳನ್ನು ಅದು ಗಮನಿಸಬಲ್ಲದು. ಎರಡೂ ಸರ್ಜರಿಯನ್ನ ಒಟ್ಟಿಗೇ ಮಾಡಿಸಲು ಹಣ ಸ್ವಲ್ಪ ಜಾಸ್ತಿಯೇ ಬೇಕು ಅನ್ನೋದಂತೂ ಸುಳ್ಳಲ್ಲ. ಹೀಗಾಗಿ ಎರಡನ್ನೂ ಒಟ್ಟಿಗೆ ಮಾಡಿಸಲು ಸಾಧ್ಯವಿಲ್ಲದವರು ಒಂದನ್ನಾದರೂ ಆದಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಗುವಿಗೆ ಮಾಡಿಸುವುದು ಮಗುವಿನ ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯದು’. 

ವೈದ್ಯರ ಆ ಎಲ್ಲ ಮಾತುಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತಿದ್ದವು. ಕಿವುಡು ಮಕ್ಕಳ ತಂದೆತಾಯಿಯರ ಪ್ರಶ್ನೆಗಳಿಗೆ, ಅನುಮಾನಗಳಿಗೆ ಅತ್ಯಂತ ತಾಳ್ಮೆ, ಆಸಕ್ತಿಯಿಂದ ವೈದ್ಯರು, ಆಡಿಯಾಲಾಜಿಸ್ಟ್​, ಕಾಕ್ಲಿಯರ್​ ಕಂಪನಿಗೆ ಅಧಿಕಾರಿಗಳು ಉತ್ತರಿಸುತ್ತಿದ್ದರು. ಈ ಕಾರ್ಯಕ್ರಮ ನಮ್ಮ ಪಾಲಿಗೊಂದು ದಾರಿದೀಪವಾಗಿತ್ತು.  ನಮ್ಮ ಮಗುವಿಗೆ ಆದಷ್ಟು ಬೇಗ ಇಂಪ್ಲಾಂಟ್ ಮಾಡಿಸಲು ನಾವಿಬ್ಬರೂ ತವಕಿಸತೊಡಗಿದೆವು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: