ನನ್ನದು ಶಿಶುನಾಳ ಶರೀಫನ ನೆಲ..

ಮೆಹಬೂಬ ಮಠದ ಅವರ ಮೊದಲ ಕವನ ಸಂಕಲನ ‘ಬಿಸಿಲು ಕಾಡುವ ಪರಿ’.

ಪುಸ್ತಕ ಪ್ರಾಧಿಕಾರ ಪುರಸ್ಕೃತವಾಗಿರುವ ಈ ಕೃತಿಗೆ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಬರೆದ ಮುನ್ನುಡಿ ಇಲ್ಲಿದೆ.

ಅಲ್ಲಮಪ್ರಭು ಬೆಟ್ಟದೂರು

ಮೆಹಬೂಬ ಮಠದ ಅವರ 33 ಕವಿತೆಗಳ ಸಂಕಲನವನ್ನು ಎರಡು ಸಲ ಓದಿ ಮನನ ಮಾಡಿಕೊಳ್ಳಲು ಪ್ರಯತ್ನಿಸಿರುವೆ. ಸಾಹಿತ್ಯದ ಯಾವುದೇ ಚಟುವಟಿಕೆಯು ನಿಧಾನವಾಗಿದ್ದರೆ ಒಳ್ಳೆಯದು ಚಿಕ್ಕ ಚಿಕ್ಕ ಸಾಲುಗಳಲ್ಲಿ ಹಿರಿದರ್ಥ ಅಡಗಿಸಿಕೊಂಡ ಕವಿತೆಗಳು ಕವಿಯ ಬೆಳವಣಿಗೆಯ ಬಗ್ಗೆ ಭರವಸೆ ನೀಡುತ್ತವೆ.

ಮಠದ ಎನ್ನುವ ಅಡ್ಡ ಹೆಸರಿನ ಬಗ್ಗೆ ಕೇಳಿದಾಗ ಮಠಕ್ಕೆ ದುಡಿಯಲು ಹೋಗುವ ಹಿನ್ನೆಲೆಯಲ್ಲಿ ಮಠದ ಎನ್ನುವ ಹೆಸರು ಬಂದಿದೆ ಎಂದು ಹೇಳಿದಾಗ ಮೆಹಬೂಬ ದುಡಿಯುವ ವರ್ಗದಿಂದ ಬಂದವರೆಂಬುದು ಗೊತ್ತಾಯ್ತು. ಅವರ ತಂದೆಯವರು ಕಟ್ಟಿಗೆ ಒಡೆಯುವ ಕಾಯಕ ಮಾಡುತ್ತಿದ್ದರು ಅವರ ತಾಯಿಯೂ ಶ್ರಮ ಜೀವಿ ಎಂಬುದು ಅವರ ಕಾವ್ಯ ಹೇಳುತ್ತಿದೆ.

ಭಾರತದ ಈಗಿನ ಸ್ಥಿತಿಯಲ್ಲಿ ಮುಸ್ಲಿಮರು ಶಂಕೆಗೊಳಗಾಗಿದ್ದಾರೆ ಅವರು ದೇಶ ಪ್ರೇಮವನ್ನು ಸಾಬೀತುಪಡಿಸಬೇಕಾಗಿದೆ. ಜೈ ಶ್ರೀರಾಮ ಅನ್ನದಿದ್ದರೆ ಕೊಲ್ಲಲಾಗುತ್ತಿದೆ. ಮೆಹಬೂಬ ಸೌಹಾರ್ದತೆಯ ದೃಷ್ಟಿಕೋನದಿಂದ ಅದನ್ನು ಎದುರಿಸುತ್ತಾರೆ.

ನನ್ನದು ಶಿಶುನಾಳ ಶರೀಫನ ನೆಲ

ತುಪಾಕಿ ತಲವಾರುಗಳು ಗಾವುದ ಗಾವುದ ದೂರ

ಲಾಡೆನ್-ಹಫೀಜರ ಮತಾಂಧ ಕುಲವಲ್ಲ

ಹಾಪೀಜರ ಶಾಂತಿ ಬಯಸುವ ಒಲವು

ಮಸೀದಿಯಂಗಳದಲ್ಲಿ ಗಣಪ

ಆಡಬೇಕೆಂಬ ಕನಸು ಹೊತ್ತವನು

ಮುಸ್ಲಿಂ ಶಂಕೆಯ ವಸ್ತುವೀಗ

ಸಾಬೀತುಪಡಿಸಬೇಕಾಗಿದೆ ನಾನು ಮತ್ತು ನನ್ನತನ.

(ಶಂಕೆಯೊಡಲಿನ ಉರಿ)

ಬಹು ಸಂಸ್ಕೃತಿಯ ಭಾರತ, ಸೌಹಾರ್ದದ ಭಾರತ ಏಕ ಸಂಸ್ಕೃತಿಯತ್ತ, ಚಲಿಸುತ್ತಿರುವುದೇ ಮುಸ್ಲಿಮರನ್ನು ಅನುಮಾನದಿಂದ ನೋಡುವುದಕ್ಕೆ ಕಾರಣ ಹಿಂದೂ ಸಂಸ್ಕೃತಿಯನ್ನು ಸಂಪ್ರದಾಯಗಳನ್ನು, ದೇವರ ಹಿಂದಿನ ವಿಚಾರಗಳನ್ನು ಬಯಲು ಮಾಡುತ್ತಿರುವುದುರಿಂದ ಸಂಘ ಪರಿವಾರದ ಹಿಂದಿನ ತಾತ್ವಿಕತೆಯನ್ನು ಜನರಿಗೆ ತಿಳಿಸಿ ಹೇಳುತ್ತಿರುವುದರಿಂದ ಡಾ.ಎಂ.ಎಂ. ಕಲಬುರ್ಗಿ, ದಾಬೋಲ್ಕರ್, ಪಾನ್ಸರೆ ಇದು ಭಯೋತ್ಪಾದನೆ ಅಲ್ಲದೆ ಮತ್ತೇನು?

ಹೆಣ್ಣು ಮಕ್ಕಳು ಶೋಷಣೆಯನ್ನು ದಿಢೀರಾಗಿ ಪ್ರತಿಭಟಿಸಲಾಗುವದಿಲ್ಲ ಅವರು ಕಂಡುಹಿಡಿದಿದ್ದು ಮೀ.. ಟು.

ಅಟ್ಟಪಟ್ಟ ಏರಿದವರ

ಕಾಮದ ಕಣ್ಣುಗಳಿಗೆ

ಖಾರದ ಪುಡಿ

ಹೆಣ್ಣಿನ ಆತ್ಮಹಿಂಡಿ

ಅಟ್ಟಹಾಸಗೈದವರ ಮರ್ಯಾದೆ ಮಹಲಿಗೆ

ಕಲ್ಲೆಸೆಯುತಿದೆ.

ಶೀಲದ ಗೋಡೆ

ಕೆಡವಿದರ ಕೈಗೆ

ಆಕ್ರೋಶದ ಮೊಳೆಯಾಗಿದೆ.          (ಮೀ..ಟು)

ಸ್ತ್ರೀಪರವಾದ ಗಟ್ಟಿಯಾದ ಬೆಂಬಲವಾಗಿದೆ.

ತಮ್ಮನ್ನು ವಿಮರ್ಶಿಸಿಕೊಳ್ಳುವ ದಿಟ್ಟತನ ಮೆಹಬೂಬ ಅವರಲ್ಲಿದೆ.

ಬೇರೆಯವರ ಹೆಗಲ ಬಂದೂಕಾಗಿದ್ದು ಸಾಕು

ಸ್ನೇಹದ ಹೊಸ ಅರ್ಥ ಹುಡುಕಬೇಕು

ಇದ್ದವರ ದನಿಯಾಗಿದ್ದು ಸಾಕು

ಬಿದ್ದವರ ಊರು ಗೋಲಾಗಬೇಕು  (ಒಂದಿಷ್ಟು ಬೆಳಕು)

ಆತ್ಮವಿಮರ್ಶೆ ಇದ್ದವರು ಬೆಳೆಯುತ್ತಾರೆ ಸಮಾಜಕ್ಕೂ ಬೆಳಕಾಗುತ್ತಾರೆ. ಸಣ್ಣಪುಟ್ಟ ದುಡಿಮೆ ಹಾಗೂ ಶ್ರಮಜೀವಿಗಳ ಕುರಿತು ಹೂ ಮತ್ತು ಹುಡುಗಿ ಅಪ್ಪ,ತಾಯಿ ಮುಂತಾದ ಕವಿತೆಗಳಲ್ಲಿ ಶ್ರಮದ ಬಗೆಗಿನ ಗೌರವ ಮತ್ತು ತನ್ನ ವರ್ಗ ಪ್ರೀತಿಯನ್ನು ಕವಿ ತೋರುತ್ತಾನೆ.

ಗಳಿಗೆಗೊಮ್ಮೆ ನೀರು ಸಿಂಪಡಿಸಿ

ಹೂವಿನ ತಾಜಾತನ ಕಾಪಾಡುತ್ತಿದ್ದಾಳೆ.

ಬಾಡಿಹೋದ ತನ್ನ ಕನಸುಗಳ ಬಿಟ್ಟು ( ಹೂ ಮತ್ತು ಹುಡುಗಿ)

ಕೂಲಿ ಮಾಡಲೇಂದೇ ಹುಟ್ಟಿದವನಂತೆ

ಅದಕ್ಕಿಂತ ಬೇರೆ ಯೋಚಿಸಲೇ ಇಲ್ಲ

ಹರಿದ ಅಂಗಿ ಮಾಸಿದ ಲುಂಗಿ

ಅಪ್ಪನ ಬಡತನ ಕಂಡು ಮರುಗುತ್ತಿದ್ದವು.

ಅಪ್ಪ ಕಡಿಯುತ್ತಿದ್ದ ಪ್ರತಿ ಕಟ್ಟಿಗೆಯ ತುಂಡುಗಳಲ್ಲಿ

ನಮ್ಮೆಲ್ಲರ ತುತ್ತುಗಳಿದ್ದವು

ಕೊಲ್ಲುತ್ತಿದ್ದ ಹಸಿವೆಗೆ ಚಹಾ-ಚುಟ್ಟಾದ ಸಮಾಧಾನ

ಬರುವ ಬಿಡಿಗಾಸೂ ಖರ್ಚಾಗುವ ಭಯದಿಂದ

ಅಪ್ಪ ತರುತ್ತಿದ್ದ ಮಿರ್ಚಿ-ಮಂಡಾಳ

ಐತ್‍ವಾರದ ಬಲು ದೊಡ್ಡ ಸಂಭ್ರಮ ಮನೆಯಲ್ಲಿ

ಒಣಗಿದ ರೊಟ್ಟಿತಿಂದ ನಾಲಿಗೆಗಳಿಗೆ             (ಅಪ್ಪ)

ಹಸಿವಿನ ಬೇತಾಳಕ್ಕೆ ಹೆದರದೆ

ಜೀತದಾಳಂತೆ ದುಡಿದು

ಬೊಬ್ಬೆಯೆದ್ದ ಕೈಗಳಿಂದ

ರೊಟ್ಟಿ-ಮುದ್ದೆ ತಿನ್ನಿಸಿದವಳು

ನನ್ನ ಬದುಕು ಬೆಲ್ಲ ಮಾಡಲು

ಅಲ್ಲಾನೊಂದಿಗೆ ಜಗಳಕ್ಕಿಳಿದವಳು

ಸವಾಲುಗಳ ಬೆಟ್ಟವನು

ಬೆನ್ನಿಗೆ ಕಟ್ಟಿಕೊಂಡು ಹೋರಾಡಿದವಳು. (ತಾಯಿ)

ಎಚ್.ಆರ್. ಚಲವಾದಿಯವರ ಆರದ ಕೆಂಡಗಳು ಮತ್ತು ಮೆಹಬೂಬ ಮಠದ ಅವರ ಶಂಕೆಯೊಡಲಿನ ಉರಿ ಎಂಬ ಕವನ ಸಂಕಲನಗಳನ್ನು ಓದುವಾಗ ದಲಿತ, ಮುಸ್ಲಿಂ ಶೂದ್ರಲೋಕದಲ್ಲಿ ನಡೆದ ತಲ್ಲಣ, ತಳಮಳ ಅರ್ಥವಾಗುತ್ತದೆ. ಕನ್ನಡ ಕಾವ್ಯ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ. ಇವರಿಗೆ ಬಂಡಾಯ ಸಂಘಟನೆಯ ಪರಿಚಯವಿದೆಯೋ ಇಲ್ಲವೋ ಗೊತ್ತಿಲ್ಲ ಸಮಕಾಲೀನ ರಾಜಕೀಯ ಸಾಮಾಜಿಕ ಬದುಕು ಇವರನ್ನು ಬಂಡಾಯಗಾರರನ್ನಾಗಿಸಿದೆ.

ದೇಶಭಕ್ತಿಯ ಪೇಟೆಂಟು ಪಡೆದು

ಪ್ರಶ್ನೆ ಮಾಡದ ಹಾಗೆ

ಕೈಕಟ್ಟಿ ಹಾಕಿದ್ದಾರೆ

ಖಾದಿಯ ತೊಟ್ಟವರು

ಚರಕಕ್ಕೆ

ಅಸಹ್ಯ ಹುಟ್ಟಿಸುತ್ತಿದ್ದಾರೆ (ಗಾಂಧಿಗೊಂದಿಷ್ಟು)

ದಲಿತ, ಮುಸ್ಲಿಮರು ತಲ್ಲಣಕ್ಕೊಳಗಾಗದಂತೆ ಬೌದ್ಧಿಕ ಲೋಕವೂ ತಲ್ಲಣಕ್ಕೊಳಗಾಗಿದೆ. ಪ್ರತಿಭಟಿಸುವ ಹೊಸ ನಮೂನೆಗಳನ್ನು ಕಂಡುಕೊಳ್ಳುವ ತುರ್ತು ಅಗತ್ಯವಿದೆ. ಬುದ್ಧಿವಂತರು ವಿರೋಧ ಪಕ್ಷದಂತೆ ಕೆಲಸಮಾಡಬೇಕು ಅಶೋಕ ಸರ್ಕಲ್‍ನಲ್ಲಿ ಪ್ರಭೂತ್ವದ ವಿರೋಧವಿದೆ.

ಆಳುತ್ತಿವೆ ಹರತಾಳಗಳು

ತೊಡೆಮೇಲೆ ಕುಳಿತು

ಕಿವುಡು ಪ್ರಭೂತ್ವ

ಗಾಢ ನಿದ್ರೆಯಲ್ಲಿದೆ. (ಅಶೋಕ ಸರ್ಕಲ್)

ವ್ಯಕ್ತಿಯನ್ನು ಗುಣ, ಪ್ರತಿಭೆ, ಕ್ರಿಯೆಯ ಹಿನ್ನೆಲೆಯಲ್ಲಿ ಗಮನಿಸಬೇಕೆ ಹೊರತು ಜಾತಿ, ಧರ್ಮಗಳ ಹಿನ್ನಲೆಯಲ್ಲಿ ಅಲ್ಲ.

ಹೆಸರು ಹೇಳಿ ಕೊಸರಿ

ದೂರ ನಿಲ್ಲುವರು

ನನ್ನ ಧ್ವನಿಯ ಕೇಳುವವರಿಲ್ಲ

ನಾನೀಗ ಒಡೆದು ಬಿದ್ದ ಕೊಳಲು

ಸೆಳೆವ ಸೌಂದರ್ಯ

ಹರಡುವ ಪರಿಮಳವಿದ್ದೂ

ಗುಡಿಗೆ ಸಲ್ಲದ ಮುಡಿಗೆ

ಏರದ ಹೂವು ನಾನು  (ನನ್ನ ಹೆಸರು)

ವ್ಯಕ್ತಿಯ ವ್ಯಕ್ತಿತ್ವ ಹೊಸಕಿ ಹಾಕುವ ಪ್ರಭುತ್ವ ಭಯಬೀಳಿಸುತ್ತದೆ ಹಿಟ್ಲರನ ಕಾಲದಲ್ಲಿ ಅನಗತ್ಯವಾಗಿ ಯಹೂದಿಗಳನ್ನು ವಿರೋಧಿಸಿದಂತೆ ಭಾರತದಲ್ಲಿ ಮುಸ್ಲಿಮರನ್ನು ವಿರೋಧಿಸುವ ವಾತಾವರಣ ನಿರ್ಮಿಸಲಾಗಿದೆ. ಮುಸ್ಲಿಮರಲ್ಲಿ ಭಯೋತ್ಪಾದಕರಿರುವಂತೆ ಇತರ ಜನಾಂಗಗಳಲ್ಲಿ ಇಲ್ಲವೆ? ಯಾವುದೇ ಜಾತಿಯಲ್ಲಿ, ಯಾವುದೇ ಧರ್ಮದಲ್ಲಿ ಒಳ್ಳೆಯವರು ಮತ್ತು ಕೆಟ್ಟವರಿರುತ್ತಾರೆ ಜನರನ್ನು ಸಾರಾಸಗಟಾಗಿ ಒಂದೇ ನಮೋನಿ ಎಂದು ಹೇಳುವುದು ಸರಿಯಲ್ಲ.

ಬಡವರ್ಗವನ್ನು ಸಿನಿಮಾ ಸೆಳೆಯುತ್ತದೆ. ಅವರಿಗೆ ಬಣ್ಣ ಬಣ್ಣದ ಕನಸು ನೇಯ್ದುಕೊಡುತ್ತದೆ ನೋವನ್ನು ಮರೆಸುತ್ತದೆ ನಲಿವನ್ನುಂಟು ಮಾಡುತ್ತದೆ.

ಕಡುಕಪ್ಪು ಕತ್ತಲೆಯಲ್ಲಿ ಬೆಳ್ಳಿ ತೆರೆಯ ಮೇಲೆ

ಮೂಡಿದ ಅಸಂಖ್ಯಾತ ಚಿತ್ರಗಳು

ಮನಸಿನ ಗಾಯಗಳಿಗೆ

ಮುಲಾಮು ಹಚ್ಚುತ್ತವೆ

ಶಿಳ್ಳೆ ಚಪ್ಪಾಳೆಗಳ ಸದ್ದಿಗೆ

ಚಿಂತೆಯ ಗೆರೆಗಳು

ಮಾಯವಾಗಿ ಸಮಾಧಾನದ

ರಂಗೋಲಿ ಮೂಡುತ್ತದೆ

ಭರವಸೆ ಕಾಣದ ಭಾವನೆಗಳಿಗೆ

ಆಸರೆ ನೀಡುವ ಆತ್ಮ ಬಂಧು ಸಿನಿಮಾ  (ಸಿನಿಮಾ ಹುಚ್ಚು)

ಜಾಗತೀಕರಣ ಬಂದ ಮೇಲೆ ಅಥವಾ ಯಾಂತ್ರೀಕರಣ ಶುರುವಾದ ಮೇಲೆ ಶ್ರಮಜೀವನಕ್ಕೆ ಜನ ಬೆನ್ನು ತಿರುಗಿಸಿದ್ದಾರೆ. ಸ್ತ್ರೀಯರು, ರೈತರು ಕೂಡ ಈ ಪಟ್ಟಿಯಲ್ಲಿದೆ.

ಒರಳಿನ ಒಡಲೊಳಗೆ

ಕುಟ್ಟಿ-ರುಬ್ಬಿ ಅಬ್ಬರಿಸಿದ ಕೈಗಳು

ಚೂರು ಹಿಂಡಿಗಾಗಿ

ಮಿಕ್ಸಿಯ ಕವಿ ಹಿಂಡುತ್ತಿವೆ.

ಸುಗ್ಗಿ ಹಾಡಿನ ಹುಗ್ಗಿಯೊಂದಿಗೆ

ರಾತ್ರಿ ಪೂರಾ ರಾಶಿ ಹಬ್ಬ

ಮಾಡಿದವರು, ಯಂತ್ರಗಳಿಗೆ

ತೆನೆಯೊಪ್ಪಿಸಿ ಅರಸಿಕರಾಗಿದ್ದಾರೆ

ದೊಡ್ಡ ಲೆಕ್ಕಘಲ

ಸೊಕ್ಕು ಬಾಯಲ್ಲೆ

ಮುರಿದವರು

ಕ್ಯಾಲ್ಕುಲೇಟರ್‍ನ ಗುಲಾಮರಾಗಿದ್ದಾರೆ ( ಸೋಲು)

ಎಲ್ಲ ದೇಶಗಳು ಮುಂದೆ ಚಲಿಸಿದರೆ ಈ ದೇಶ ಹಿಂದೆ ಸರಿಯುತ್ತಿದೆ ಇನ್ನೂ ಮನಸ್ಮತಿಯ ಕಟ್ಟಳೆ ಜಾರಿಯಲ್ಲಿದೆಯೆಂಬಂತೆ ಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ವರ್ಣಸಂಕರ ಬೇಡವೆಂಬಂತೆ ಮರ್ಯಾದ ಹತ್ಯೆಯ ನಡೆಯಿದೆ. ಸ್ವಜಾತಿ ಅಷ್ಟೇ ಅಲ್ಲ ಉಪಜಾತಿ ಮೀರುವುದು ಭಾರತದ ಮನಸ್ಸಿಗೆ ಸಾಧ್ಯವಾಗುತ್ತಿಲ್ಲ, ಗಡಿ ದಾಟಿದವರನ್ನು ಗಡಿದಾಟಿಸುತ್ತಾರೆ.

ಗಡಿ ದಾಟಿದ

ಹೃದಯಗಳ ಗೂಡಿಗೆ

ಪ್ರತಿಷ್ಠೆಯ ಬೆಂಕಿ ಬಿದ್ದಿದೆ.

ಬಸಿರಾದ ಬಳ್ಳಿ

ಹೂ-ಕಾಯಿ ಬಿಡುವ ಮುನ್ನ

ಹಿಚುಕಲಾಗುತ್ತಿದೆ

ಪುನರ್ಜನ್ಮದ ರದ್ಧತಿ ಕೋರಿ

ಅರ್ಜಿಸಲ್ಲಿಸಿದೆ ಪ್ರೀತಿ   (ಮರ್ಯಾದಾ ಹತ್ಯೆ)

ಪ್ರೀತಿಸಿದವರು ವರ್ಣ, ವರ್ಗ ಮೀರುತ್ತಾರೆ. ತಂದೆ, ತಾಯಿ, ಬಂಧು, ಬಳಗ, ಸ್ವಜಾತಿ, ಉಪಜಾತಿ, ಅಂತಸ್ತು ನೋಡುತ್ತಾರೆ. ಮಕ್ಕಳು ಅದನ್ನು ಮೀರಿದಾಗ ತಮಗೆ ಅಪಮಾನವಾಯ್ತು, ತಮ್ಮ ಪ್ರತಿಷ್ಠೆಗೆ ಧಕ್ಕೆಬಂತೆಂದು ಮಕ್ಕಳನ್ನು ಕೊಲ್ಲುವ ಅಮಾನವೀಯ ಕೃತ್ಯಕ್ಕೆ ಹೇಸುವುದಿಲ್ಲ.

ಸಮಕಾಲೀನ ವಿಷಯಗಳಿಗೆ ಸ್ಪಂದಿಸುವ ಗುಣವನ್ನು ಇಡೀ ಸಂಕಲನದಲ್ಲಿ ಕಾಣಬಹುದು.

ಭಾರತದ ಪತ್ರಿಕೆಗಳು, ಟಿ.ವಿಗಳು ಗೆದ್ದೆತ್ತಿನ ಬಾಲ ಹಿಡಿಯುತ್ತಿವೆ ವಿರೋಧ ಪಕ್ಷಗಳೂ ಗಟ್ಟಿಯಾಗಿಲ್ಲ ಆಳುವ ಪಕ್ಷಕ್ಕೆ ಕೇಳುವವರೇ ಇಲ್ಲದಿದ್ದರೆ.

ಸುದ್ದಿ ಮನೆಗಳಲ್ಲಿ

ಮಸಾಲೆ

ಅಡುಗೆ

ಕಿತ್ತಳೆಗೆ

ಮಾತ್ರ

ಬೆಂಬಲ ಬೆಲೆ    (ಮಾತಿನ ಕಟ್ಟೆ)

ದಲಿತರ ಏಳಿಗೆಗೆ ಏನು ತೊಡಕುಂಟಾಗಿದೆಯೆಂದರೆ

ಓಟಕೆ ಸಂಪ್ರದಾಯದ

ಅಡ್ಡಗಾಲು

ಇರುವಿಕೆಗೆ ದೊಡ್ಡಸ್ತಿಕೆಯ

ಗರಗಸ   (ದಲಿತ ಧ್ವನಿ)

ಹಸಿವಿನ ದಾಳಿಗೆ ತುತ್ತಾದ ದೇಶವಿದು ಶ್ರೀಮಂತರು ಮಧ್ಯಮ ವರ್ಗದವರ, ಬಡವರ ಆದಾಯ ಸೇರಿಸಿ ಸರಾಸರಿ ಆದಾಯ ತೆಗೆಯುತ್ತಾರೆ. ಬರೀ ಬಡವರ ಆದಾಯ ಹೊಟ್ಟೆ ತುಂಬಿಸಲು ಸರಿಹೋಗದು ಹಸಿವಿನ ದಾಳಿಗೆ ಅನಾಹುತಗಳೇ ನಡೆಯುತ್ತವೆ.

ಕನಸುಗಳ ಹೆರಲಾಗದೆ

ಬಂಜೆಯಾಗಿವೆ ಕಣ್ಣುಗಳು

ಬತ್ತಿದೆ ಮೆದುಳಿನ ಬಾವಿಯ

ಆಲೋಚನೆಯ ಸೆಲೆ

ಬರ್‍ಬಾದಾಗಿದೆ ಸ್ವಾಭಿಮಾನದ ಬಲ

ಊಟದ ಹಂಗಿಗೆ   (ಹಸಿವಿನ ದಾಳಿಗೆ)

ಪ್ರಾರ್ಥನೆಯಲ್ಲಿ ಒಂದು ಆದರ್ಶವಿದೆ ಆದರೆ ಕೈಗೂಡದು

ಮಲಿನ ಮನಗಳ ಕದಡಿ

ಸಮರಸದ ಮನವ ನೀಡು

ಆಳುವ ಕೈಗಳು ಅಳುವ ಕಣ್ಣೀರು

ಒರೆಸುವ ರಾಜಧರ್ಮದ ನೀಡು

ಇದ್ದವರ ಇಲ್ಲದವರ ನಡುವೆ

ಅಂತರವೇ ಇಲ್ಲದ ದಿನಗಳ ನೀಡು  (ಪ್ರಾರ್ಥನೆ)

ರಾಜಕೀಯದ ವಸ್ತು ಸ್ಥಿತಿಯೇ ಬೇರೆ ಕೋಟ್ಯಾಧಿಪತಿಗಳು ನಮ್ಮ ಪ್ರತಿನಿಧಿಗಳಾದಾಗ ಅವರಿಗೆ ದಯೆ, ಕರುಣೆ ಇರುತ್ತದೆಯೆ? ಇದ್ದರೆ ಅವರಿಗೆ ಸಲಾಮ್ ಕೆಲವು ಕಂಪನಿಗಳು ಸಾರ್ವಜನಿಕ ಕಾರ್ಯಕ್ಕೆ ನೆರವಾಗುವ ಯೋಜನೆ ಇಟ್ಟುಕೊಂಡಿವೆ, ಅದು ಸ್ವಾಗತಾರ್ಹ.

ಬೇಕು ಕವಿತೆಯಲ್ಲಿ ಮೌಲ್ಯಗಳ ಅಗತ್ಯ ಪ್ರತಿಪಾದಿಸಲಾಗಿದೆ

ವ್ಯವಹಾರದ

ಸರಪಳೆ

ಕತ್ತರಿಸಿ

ಕುಲಗಳ

ಬೇಲಿ

ದಾಟಿ

ಪ್ರೀತಿಯ

ಕಂದಾಯ

ಕಟ್ಟಿ

ಸೋಲುವ

ರೂಢಿ

ಎದೆಗಿಳಿಸಿ

ಸಂಬಂಧಗಳ

ಉಳಿಸಬೇಕಾಗಿದೆ

ಬೆಳೆಸಬೇಕಾಗಿದೆ   (ಬೇಕು)

ಇತ್ತೀಚಿಗೆ ಕವಿಗಳು ತಮ್ಮ ಕವಿತೆಗಳ ಬಗ್ಗೆ ಹೇಳೂತ್ತಾರೆ ಮೆಹಬೂಬ ಏನು ಹೇಳುತ್ತಾರೆ? ನೋಡಿ.

ಮೈಲಿಗೆಯ ಮನಸುಗಳ

ತೊಳೆಯುವ

ಮಡಿವಾಳನ ಸಾಬೂನು

ನನ್ನ ಕವಿತೆ

ನೋವಿನ ಮುಳ್ಳುಗಳ

ನಡುವೆ

ಅರಳಿದ ಹೂವು

ನನ್ನ ಕವಿತೆ    ( ನನ್ನ ಕವಿತೆ)

ವಿಚಾರಕ್ಕೆ ಅಂಜುವ ಜನ, ಸಂಪ್ರದಾಯ ಸಾಕುವ ಜನ, ಯಥಾಸ್ಥಿತಿವಾದಿಗಳು ವಿಚಾರವಾದಿಗಳನ್ನು ಸಹಿಸುವುದಿಲ್ಲ ವಿಚಾರವನ್ನು ವಿಚಾರವಾದದ ಮೂಲಕ ಗೆಲ್ಲದೆ ಕೋವಿಯ ಮೂಲಕ ಗೆಲ್ಲಲು ಹೊರಡುತ್ತಾರೆ ಕವಿ ವಿರೋಧಿಸುತ್ತಾನೆ

ಎಡದಂಡೆಯ

ಕಾಲುವೆಯಲಿ

ಹರಿದ ನೆತ್ತರ ಹೀರಿ

ನಳನಳಿಸಿತು

ಬಲಗಡೆಯ ಫಸಲು

ಕೋವಿ ಸೋಲುತ್ತದೆ

ಕೋವಿಯೋಳಗಿನ ಗುಂಡುಖಾಲಿಯಾಗಿ

ನೀವು ಕೊಲ್ಲುತ್ತೀರಿ

ನಾವು ಗೆಲ್ಲುತ್ತೇವೆ  (ಹತ್ಯೆ)

ಹಿಟ್ಲರ್ ಬುದ್ಧಿವಂತ ಯಹೂದಿಗಳನ್ನು ಕೊಂದ ಕೊನೆಗೆ ಯುದ್ಧದಲ್ಲಿ ಸೋತು ತನ್ನ ತಲೆಗೆ ತಾನೇ ಗುಂಡಿಟ್ಟುಕೊಂಡ ಹಿಂಸೆಯಲ್ಲಿ ಮೆರೆಯುವವರ ಕತೆ ಹೀಗೆಯೇ ಕೊನೆಯಾಗುತ್ತದೆ.

ಮೊಬೈಲ್ ಆಧುನಿಕ ಬಾರೆಬೇಲಿ

ಬಾರೇಗಿಡದ ಮುಳ್ಳು

ನೆನಪಾಗುತ್ತದೆ

ಇತ್ತ ಬಿಟ್ಟರೆ ಅತ್ತ ಚುಚ್ಚುತ್ತದೆ

ಮೊಬೈಲು ಇರುವುದೇ ಹೀಗೆ

ಬಿಟ್ಟರೆ ಬಿಡದೀ ಮಾಯೆ ಮೊಬೈಲ್‍ನಿಂದಾಗಿ ಮಕ್ಕಳು ಓದುತ್ತಿಲ್ಲ ದೊಡ್ಡವರಂತೂ ಮರೆತೇ ಬಿಟ್ಟಿದ್ದಾರೆ ಇದರ ಜೊತೆಗೆ ಟಿ.ವಿ. ಸೇರಿ ಉತ್ಪಾದನೆಯನ್ನು ಕುಂಠಿತಗೊಳಿಸುತ್ತಿವೆ.

ಈ ಸಂಕಲನದಲ್ಲಿ ಉಲ್ಲೇಖಿಸಬೇಕಾದ ಕವಿತೆಗಳಿನ್ನು ಬಾಕಿಯಿವೆ, ಮುನ್ನುಡಿಗೆ ಮಿತಿಯಿದೆ, ಕವಿಗೆ ಸಮಕಾಲೀನನ ಭಾರತ ಸರಿಯಾಗಿ ಅರ್ಥವಾಗಿದೆ, ಮುಸ್ಲಿಮರು ಶಂಕೆಗೊಳಗಾದದ್ದು, ದಲಿತರು ವಿಚಾರವಾದಿಗಳು ಹೀಗೆ ಶಂಕೆಗೊಳಗಾದವರ ಪಟ್ಟಿ ಬೆಳೆಯುತ್ತದೆ.

ಕವಿಗೆ ಸೌಹಾರ್ದತೆ ಬೇಕಾಗಿದೆ ಕೂಡಿಬಾಳುವ ಕಲೆಯನ್ನು ಅವಬಲ್ಲ, ಬಡತನ ಅವನನ್ನು ಬೆಳೆಸಿದೆ, ದುಡಿಯುವ ವರ್ಗದ ಪರ ನಿಲವು ಮೂಡುವಂತೆ ಮಾಡಿದೆ, ಕವಿಯ ಅಭಿವ್ಯಕ್ತಿಯಲ್ಲಿ ಹೊಸತಿದೆ, ತನ್ನದೇ ಶೈಲಿಯನ್ನು ಕವಿ ರೂಪಿಸಿಕೊಂಡಿದ್ದಾನೆ, ಕವಿಗೆ ಭವ್ಯ ಭವಿಷ್ಯತು ಕಾದಿದೆ, ಶುಭಾಶಯಗಳು ಕವಿಗೆ ಕವಿ ಮಣಿವೆಂದ.

‍ಲೇಖಕರು Avadhi

September 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mehaboob Mathad

    ನಮಸ್ಕಾರ,

    ನನ್ನ ಮೊದಲ ಕವಿತೆ ‘ರಂಜಾನ್ ಮತ್ತು ಶ್ರಾವಣ’ ‘ಅವಧಿ’ಯಲ್ಲಿ ಪ್ರಕಟವಾಗಿತ್ತು ಈಗ ಸಂಕಲನದ ಮುನ್ನುಡಿ ಕೂಡ ಪ್ರಕಟ ಆಗಿದ್ದು ನೋಡಿ ನನಗೆ ಅತೀವ ಸಂತೋಷ ಆಗ್ತಾ ಇದೆ.

    ಧನ್ಯವಾದಗಳು ಜಿ.ಎನ್. ಮೋಹನ್ ಸರ್ ಮತ್ತು ಅವಧಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: