ನನಗೆ ಸಿಕ್ಕಿದ ಗಿಫ್ಟ್

ಎಸ್.ಬಿ. ಕೆಂಚಣ್ಣವರ / ಬಾಗಲಕೋಟೆ

ನನ್ನ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ಬಂದಂತಹ ಪುಸ್ತಕ ” ರೈನರ್ ಮಾರಿಯಾ ರಿಲ್ಕ್ ಯುವಕವಿಗೆ ಬರೆದ ಪತ್ರಗಳು” ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟರು ಈ ಪುಸ್ತಕಕ್ಕೆ ಸರಿಸಾಟಿಯಾಗಲಾರದು. ಇಂತಹ ಬೆಲೆ ಕಟ್ಟಲಾಗದ ಪುಸ್ತಕವನ್ನು ಉಡಗೊರೆ ನೀಡಿದ ಅನಿಲ ಗುನ್ನಾಪುರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು

ನೀವು ನಿಮ್ಮ ಆತ್ಮೀಯರಿಗೆ ಜನ್ಮದಿನಕ್ಕೇನಾದರು ಉಡುಗೊರೆ ನೀಡುವಾದರೆ ಈ ಪುಸ್ತಕವನ್ನೆ ನೀಡಿ. ಯಾಕೆಂದರೆ ಈ ಪುಸ್ತಕ “ಜನ್ಮದಿನಕ್ಕೆ ಬದಲಾಗಿ ಇಡೀ ಜನ್ಮಕ್ಕೆ ಉಡುಗೊರೆಯಾಗಬಲ್ಲ ಪುಸ್ತಕ”.

ಜರ್ಮನ್ ದೇಶದ ಸುಪ್ರಸಿದ್ಧ ಸಾಹಿತಿ ರೈನರ್ ಮಾರಿಯಾ ರಿಲ್ಕ್ ಜರ್ಮನ್ ಸೇನೆಗೆ ಸೇರಲಿರುವ ಯುವಕವಿ ಫ್ರಾನ್ಜ್ ಕಾಪ್ಪಸ್ ಎಂಬಾತನಿಗೆ ಬರೆದಂತಹ ಹತ್ತು ಪತ್ರಗಳ ಗುಚ್ಚ ಈ ಕೃತಿ. ಈ ಪತ್ರಗಳು ಯುವಕವಿಗೆ ಬರೆದವಾದರೂ ಅವು ಎಲ್ಲರಿಗೂ ಅನ್ವಯವಾಗುವಂತಿವೆ ಅದರಲ್ಲೂ”ಸೃಜನಶೀಲರಾಗಿ ಬದುಕುವರಿಗೆ ಅಮೂಲ್ಯವಾಗಿವೆ” ಇಲ್ಲಿನ ಮಾತುಗಳು ಮಹಾನ್ ಚೇತನವೊಂದರ ನುಡಿಗಳು ಅವನ್ನು ಆಲಿಸುತ್ತಾ ಬೆರಗಾಗಿ ನಿಲ್ಲುತ್ತೇವೆ ಎನ್ನುವುದು ಈ ಪತ್ರಗಳ ಬಗ್ಗೆ ಇರುವ ಸಾರ್ವತ್ರಿಕವಾದ ಅಭಿಪ್ರಾಯ.

ಜರ್ಮನ್ ಭಾಷೆಯ ವಾಕ್ಯರಚನೆಯ ಲಯವನ್ನು ಕನ್ನಡಕ್ಕೆ ಅನುವಾದಿಸುವುದು ಅಷ್ಟು ಸುಲಭವಲ್ಲ ರಿಲ್ಕ್ ಹೇಳುವಂತೆ “ಕಷ್ಟವೆನ್ನುವುದೆ ಆ ಕೆಲಸವನ್ನು ಮಾಡುವುದಕ್ಕೆ ಅತ್ಯುತ್ತಮ ಕಾರಣ” ಎಂಬಂತೆಯೇ ಓ.ಎಲ್. ನಾಗಭೂಷಣಸ್ವಾಮಿಯವರು ಎಷ್ಟೋ ಕಷ್ಟದ ಕೆಲಸವನ್ನು ಇಷ್ಟಪಟ್ಟು ಮಾಡಿದ್ದು ಅಭಿನಂದರ್ನಾಹರು.

★ ನಿನ್ನ ಕವಿತೆಗಳು ಚನ್ನಾಗಿವೆಯೇ ಎಂದು ಕೇಳಿದ್ದಿಯೆ, ನನ್ನನ್ನು. ಈ ಮೊದಲು ಬೇರೆಯವರನ್ನು ಕೇಳಿದ್ದೀಯೆ. ಪತ್ರಿಕೆಗಳಲ್ಲಿ ಪ್ರಕಟವಾಗಲೆಂದು ಕಳಿಸಿದ್ದೀಯೆ. ಬೇರೆಯವರ ಕವಿತೆಗಳೊಂದಿಗೆ ಹೋಲಿಸಿಕೊಂಡು ನೋಡಿದ್ದಿಯೆ. ಕೆಲವು ಸಂಪಾದಕರು ಕವಿತೆಗಳನ್ನು ನಿರಾಕರಿಸಿ ಹಿಂದಿರುಗಿಸಿದಾಗ ಹತಾಶರಾಗಿದ್ದೀಯೆ. ಇಂಥ ಕೆಲಸ ಮಾಡುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಕೋರುತ್ತೇನೆ. ನೀನು ನನ್ನ ಸಲಹೆ ಸೂಚನೆಗಳು ಬೇಕು ಎಂದು ಕೇಳಿದ್ದರಿಂದ ಈ ಮಾತು. ಈಗ ನೀನು ದೃಷ್ಟಿಯನ್ನು ಹೊರಗೆ ಹಾಯಿಸಿದ್ದೀಯೆ. ತಕ್ಷಣದಲ್ಲಿ ಮಾಡಬೇಕಾದ ಕೆಲಸವೆಂದರೆ ಹೀಗೆ “ಹೊರಗೆ ನೋಡುವುದು” ನಿಲ್ಲಬೇಕು. ಯಾರೂ, ಯಾರೆಂದರೆ ಯಾರೂ ಕೂಡ ನಿನಗೆ ಸಲಹೆ ಕೊಡುವುದುಕ್ಕೆ,ಉಪದೇಶ ಮಾಡುವುದಕ್ಕೆ, ಸಹಾಯ ಮಾಡುವುದಕ್ಕೆ ಸಾಧ್ಯವಿಲ್ಲ. ನಿನ್ನ ಒಳಹೊಕ್ಕು ನೋಡಿಕೊ.

★ಒಂದಿಷ್ಟು ಕಾಲ ಪುಸ್ತಕಗಳಲ್ಲೇ  ಬದುಕು. ಅವುಗಳಿಂದ ಏನು ಕಲಿಯಬಹುದೋ ಅದನ್ನು ಕಲಿತುಕೋ. ಅದಕ್ಕಿಂತ ಮಿಗಿಲಾಗಿ ಪುಸ್ತಕಗಳನ್ನು ಪ್ರೀತಿಸು. ಪುಸ್ತಕಗಳಿಗೆ ನೀನು ತೋರಿದ ಪ್ರೀತಿ ಸಾವಿರ ಪಟ್ಟು ಹೆಚ್ಚಾಗಿ ನಿನ್ನ ಬಳಿಗೆ ಮರಳುತ್ತದೆ. ಬದುಕಿನಲ್ಲಿ ನೀನು ಏನು ಬೇಕಾದರೂ ಆಗು, ನಿನ್ನ ಎಲ್ಲ ಅನುಭವ, ನಿರಾಶೆ, ಸಂತೋಷಗಳ ಎಳೆಗಳ ನಡುವೆ ಈ ಓದಿನ ಪ್ರೀತಿಯ ಎಳೆಗಳು ದೃಢವಾಗಿ, ಬಲುಮುಖ್ಯವಾದವಾಗಿ ಇರುತ್ತವೆ.

★ಸಾಹಿತ್ಯ ವಿಮರ್ಶೆಯನ್ನು ಸಾಧ್ಯವಾದಷ್ಟು ಕಡಿಮೆ ಓದು. ಸಾಹಿತ್ಯ ವಿಮರ್ಶೆ ಅನ್ನುವುದು ಸಾಮಾನ್ಯವಾಗಿ ಪಕ್ಷಪಾತದ ಅಭಿಪ್ರಾಯಗಳಾಗಿರುತ್ತದೆ. ಜಡ್ಡುಗಟ್ಟಿ ಅರ್ಥಹೀನವಾಗಿ, ನಿರ್ಜೀವವಾಗಿರುತ್ತದೆ. ಅಥವಾ ಇಂದು ಈ ಅಭಿಪ್ರಾಯವನ್ನು ಗೆಲ್ಲಿಸುವ, ನಾಳೆ ಮತ್ತೊಂದು ಅಭಿಪ್ರಾಯವನ್ನು ಗೆಲ್ಲಿಸುವ ಜಾಣತನದ ಪದಕ್ರೀಡೆಯಾಗಿದೆ. ನಿಜವಾದ ಕಲಾ ಕೃತಿಯು ಅನಂತವಾದ ಏಕಾಂತ. ಅದನ್ನು ಪಡೆಯುವುದಕ್ಕೆ ಸಾಹಿತ್ಯವಿಮರ್ಶೆ ದಾರಿ ಹಿಡಿದು ಹೋದರೆ ಉಪಯೋಗವಿಲ್ಲ. ಕೇವಲ ಪ್ರೀತಿ ಮಾತ್ರವೇ ಆ ಏಕಾಂತವನ್ನು ಸ್ಪರ್ಶಿಸಲು, ನಮ್ಮದಾಗಿಸಿಕೊಳ್ಳಲು ಸಹಾಯಮಾಡಬಲ್ಲದು. ಯಾವಾಗಲೂ ನಿನ್ನ ಸ್ವಂತದ ಭಾವನೆಗಳನ್ನು ನಂಬು. ಕೃತಿಯ ಬಗ್ಗೆ ನಡೆಯುವ ವಾದ, ವಿವಾದ, ಚರ್ಚ, ಬೇರೊಬ್ಬರು ಮಾಡಿಕೊಡುವ ಕೃತಿ ಪರಿಚಯ ಇವುಗಳನ್ನು ನೆಚ್ಚಿಕೊಳ್ಳುವುದರಿಂದ ಉಪಯೋಗವಿಲ್ಲ. ಆಕಸ್ಮಾತಾಗಿ ನೀನು ತಲುಪುವ ತೀರ್ಮಾನವು ತಪ್ಪಾಗಿದ್ದರೆ ನಿನ್ನ ಅಂತರಂಗದ ಸಹಜ ಬೆಳವಣಿಗೆಯೇ ನಿನಗೆ ಬೇರೆಯ ಒಳನೋಟಗಳನ್ನು ಒದಗಿಸುತ್ತದೆ. ನಿನ್ನ ತೀರ್ಮಾನಗಳು ಮೌನವಾಗಿ, ಅಡೆತಡೆ ಇಲ್ಲದೆ ಸಹಜವಾಗಿ ಬೆಳೆಯಬೇಕು. ತೀರ್ಮಾನಗಳು ಅಂತರಂಗದಲ್ಲಿ ರೂಪುಗೊಳಬೇಕು, ಆಕಾರ ತಳೆಯಬೇಕು. ಈ ಕ್ರಿಯೆಯನ್ನು ಆವರಿಸುವುದು ಬಲವಂತ ಮಾಡುವುದು ತಪ್ಪು. ಗರ್ಭಕಟ್ಟುವುದಕ್ಕೂ,ಹೆರಿಗೆಯಾಗುವುದಕ್ಕೂ ತಕ್ಕಷ್ಟು ಸಮಯ ಬೇಕೇ ಬೇಕಲ್ಲವೇ? ಪ್ರತಿಯೊಂದು ಅನಿಸಿಕೆ, ಪ್ರತಿಯೊಂದು ಭಾವಗರ್ಭ ನಿನ್ನ ತಿಳುವಳಿಕೆಗೂ ಎಟುಕದ ಮಾತಿಗೆ ನಿಲುಕದ ಸುಪ್ತ ಪ್ರಜ್ಞೆಯ ಕತ್ತಲಲ್ಲಿ ನಿಧಾನವಾಗಿ ರೂಪ ಪಡೆಯುತ್ತಾ ಪೂರ್ಣಾಕಾರವನ್ನ ತಳೆಯಬೇಕು. ಹೊಸತಾದ ಈ ಭಾವ ಸ್ಪಷ್ಟತೆ ಜನಿಸುವ ಗಳಿಗೆಗಾಗಿ ಅಗಾಧವಾದ ವಿನಯದೊಂದಿಗೆ ಅಪಾರ ತಾಳ್ಮೆಯಿಂದ ಕಾಯಬೇಕು.

★ ಕಲಾವಿದನಾಗಿ ಬದುಕುವುದೆಂದರೆ ಅರ್ಥ ಇದೇ: ಅರ್ಥ ಮಾಡಿಕೊಳ್ಳುವುದಕ್ಕೆ, ಸೃಷ್ಟಿಸುವುದಕ್ಕೆ ತಕ್ಕ ಗಳಿಗೆಗಾಗಿ ಕಾಯುವುದು. ಕಾಲದ ಅಳತೆಗೆ ಇಲ್ಲಿ ಬೆಲೆ ಇಲ್ಲ. ಒಂದು ವರ್ಷ ಎನ್ನುವುದು ಏನೇನೂ ಅಲ್ಲ,ಹತ್ತು ವರ್ಷ ಎಂಬುದು ತೀರ ಕಡಿಮೆ. ಕಲಾವಿದನಾಗಿರುವುದೆಂದರೆ ಅಂಕಿ ಸಂಖ್ಯೆಗಳ ಬಗ್ಗೆ ಚಿಂತೆಮಾಡುವುದಲ್ಲ. ಒತ್ತಾಯವಿಲ್ಲದೆ ಬೆಳೆಯುವ, ವಸಂತವು ಬರುವುದೋ ಇಲ್ಲವೋ ಎಂಬ ಆತಂಕವಿಲ್ಲದ, ಬೇಗ ಬೇಗ ಬೆಳೆಯಬೇಕೆಂಬ ಆತುರವಿಲ್ಲದ ಮರದ ಹಾಗಿರಬೇಕು ಕಲಾವಿದ. ಯಾವ ಕಳಕಳಿಯೂ ಇಲ್ಲದ ಮೌನವೂ ವಿಸ್ತಾರವೂ ಆದ ಅನಂತತೆ ತನ್ನ ಮುಂದೆ ಇದೆ ಎಂಬಂತೆ ಸಹನೆಯಿಂದ ಕಾಯಬಲ್ಲ ಕಲಾವಿದನ ಬದುಕಿನಲ್ಲಿ ವಸಂತ ಬಂದೇ ಬರುತ್ತದೆ.

★ಬದುಕು ಈಗ ಆರಂಭವಾಗುತ್ತಿದೆ ನಿನ್ನ ಪಾಲಿಗೆ. ದಯವಿಟ್ಟು ತಾಳ್ಮೆಯಿಂದಿರು. ಉತ್ತರ ಸಿಗದಿರುವ ಪ್ರಶ್ನೆಗಳ ಬಗ್ಗೆ ಸಹನೆಯಿಂದಿರು. ಪ್ರಶ್ನೆಗಳನ್ನು ಪ್ರೀತಿಸು. ಉತ್ತರ ದೊರೆಯದಿರುವ ಪ್ರಶ್ನೆಗಳು ಬೀಗ ಹಾಕಿರುವ ಕೋಣೆಗಳೆಂದೋ, ನಿನಗೆ ಗೊತ್ತಿರದ ವಿದೇಶಿ ಭಾಷೆಯಲ್ಲಿ ಬರೆದಿರುವ ಪುಸ್ತಕಗಳೆಂದೋ ಭಾವಿಸು. ಉತ್ತರಗಳಿಗಾಗಿ ಹುಡುಕಬೇಡ. ನಿನಗೆ ಈಗ ಉತ್ತರ ದೊರೆಯದಿರಬಹುದು. ಹಾಗೊಂದು ವೇಳೆ ಉತ್ತರ ದೊರೆತರೆ ಅವುಗಳೊಂದಿಗೆ ಬದುಕುವುದೇ ಅಸಾಧ್ಯವಾಗಬಹುದು. ಪ್ರಶ್ನೆಗಳನ್ನು ಪ್ರೀತಿಸು, ಉತ್ತರಗಳಿಗಾಗಿ ಹುಡುಕಬೇಡ. ಬದುಕುವುದು ಮುಖ್ಯ, ಪ್ರಶ್ನೆಗಳೊಂದಿಗೆ ಈಗ ಬದುಕುವುದು ಮುಖ್ಯ. ಹಾಗೆ ಬದುಕಿದರೆ, ಮುಂದೆ ಒಂದು ದಿನ, ನಿಧಾನವಾಗಿ, ನಿನಗೆ ಗೊತ್ತಾಗದಂತೆ, ಆ ಪ್ರಶ್ನೆಗಳ ನಿಜವಾದ ಉತ್ತರಗಳೊಂದಿಗೆ ಬದುಕುತ್ತಿರುತ್ತೀಯೆ. ಸೃಷ್ಟಿಸುವ ರೂಪಿಸುವ ಪವಿತ್ರವಾಗಿ ಬದುಕುವ ಆರ್ಶಿವಾದ ನಿನಗೆ ದೊರೆತಿರಬಹುದು. ನಿನ್ನನ್ನು ಅದಕ್ಕೆ ಸಿದ್ದಪಡಿಸಿಕೋ. ನಿನ್ನ ಪಾಲಿಗೆ ಬಂದದ್ದನ್ನು ವಿಶ್ವಾಸದಿಂದ ಸ್ವೀಕರಿಸು. ನಿನ್ನ ಒಳಗಿನ ಅಂತರಂಗದ ಅಗತ್ಯಕ್ಕೆ ತಕ್ಕಂತೆ, ನಿನ್ನೊಳಗಿನ ಅವಶ್ಯಕತೆ ಅನುಗುಣವಾಗಿ ಒದಗಿಬಂದದ್ದನ್ನು ಸ್ವೀಕರಿಸು ಯಾವುದನ್ನೂ ದ್ವೇಷಿಸಬೇಡ.

★ಕಾಗದ ಬರೆಯುವುಕ್ಕೆ ನನಗೆ ಕೇವಲ ಹಾಳೆ, ಪೆನ್ನು ಇತ್ಯಾದಿಗಳಿದ್ದರೆ ಸಾಲದು: ಮೌನ, ಏಕಾಂತ ಮತ್ತು ತೀರ ಅವೇಳೆಯಲ್ಲದ ಹೊತ್ತಿನಲ್ಲಿ ದೊರೆಯುವ ಬಿಡುವು ಅಗತ್ಯವಾಗಿ ಬೇಕೇ ಬೇಕು.

★ ಅಗಾಧವಾದ ಅಂತರಂಗದ ಏಕಾಂತ. ನಿನ್ನೊಳಗೆ ನೀನೇ ನಡೆದಾಡುತ್ತಾ ಗಂಟೆಗಟ್ಟಲೆ ಯಾರೂ ಎದುರಾಗದೆ ಇರುವುದಿದೆಯಲ್ಲ ಅಂಥ ಏಕಾಂತ. ಅಂಥದು ನಿನಗೆ ಸಾಧ್ಯವಾಗಬೇಕು. ನೀನು ಮಗುವಾಗಿದ್ದಾಗಿನಂಥ ಏಕಾಂತ; ದೊಡ್ಡವರು ನಿನ್ನ ಸುತ್ತ ದೊಡ್ಡ ದೊಡ್ಡ ಮುಖ್ಯವೆನಿಸುವಂಥ ಸಂಗತಿಗಳ ಬಗ್ಗೆ ಮಗ್ನರಾಗಿ ಓಡಾಡಿಕೊಂಡಿದ್ದಾಗ (ಅವರೆಲ್ಲ ಅಷ್ಟು ಬ್ಯುಸಿಯಾಗಿರುವುದರಿಂದ, ನಿನಗೇನೂ ಅರ್ಥವಾಗದ್ದರಿಂದ ನಿನಗೆ ಹಾಗೆನ್ನಿಸುತ್ತಿದ್ದಾಗ) ಇದ್ದಂಥ ಏಕಾಂತ ನಿನಗೆ ದೊರೆಯಬೇಕು.

★ಪ್ರೀತಿ ಇಲ್ಲದ ಮಾಡುವ ಎಲ್ಲ ಕೆಲಸಗಳೂ ಅರ್ಥಹೀನವೇ.

★ನಮ್ಮದೇ ಕೃತಿಯನ್ನು ಮತ್ತೂಬ್ಬರ ಬರವಣಿಗೆಯ ಮೂಲಕ ನೋಡಿಕೊಂಡು ಹೊಸ ಅನುಭವವನ್ನು ಪಡೆಯುತ್ತಾ ನಮ್ಮ ಕೃತಿಯನ್ನು ನಾವೇ ಕಂಡುಕೊಳ್ಳುವುದು ಮುಖ್ಯವಾದ ಒಂದು ಅನುಭವ.

★ನಮ್ಮ ಬದುಕು ಯಶಸ್ವಿಯೋ ಅಲ್ಲವೋ ಎಂಬುದರ ಪ್ರಮಾಣ, ಪುರಾವೆಯೇ ಪ್ರೀತಿ.

★ಪ್ರೀತಿ ಎನ್ನುವುದು ವ್ಯಕ್ತಿಯು ಮಾಗುವುದಕ್ಕೆ, ಮತ್ತೊಬ್ಬ ವ್ಯೆಕ್ತಿಗಾಗಿ ತನ್ನೊಳಗೆ ತಾನೇ ಏನೋ ಆಗುವುದಕ್ಕೆ, ಮತ್ತೊಬ್ಬರಿಗಾಗಿ ತಾನೇ ಇಡೀ ಲೋಕವಾಗುವುದಕ್ಕೆ ಒಂದು ಆಹ್ವಾನ.ಪ್ರೀತಿಯು ವ್ಯಕ್ತಿಯನ್ನು ಆಯ್ಕೆಮಾಡಿಕೊಂಡು ಅವನ ಮೇಲೆ ಹಕ್ಕು ಚಲಾಯಿಸುತ್ತಾ ಮತ್ತಷ್ಟು ದೂರ ಸಾಗಬೇಕು, ಮತ್ತಷ್ಟು ಆಳಕ್ಕೆ ಇಳಿಯಬೇಕು ಎಂದು ಒತ್ತಾಯಿಸುತ್ತದೆ. ಇದು ನಮ್ಮನ್ನೇ ಮೂಲದ್ರವ್ಯವಾಗಿಸಿಕೊಂಡು ನಮ್ಮನ್ನು ನಾವೇ ತಿದ್ದಿ, ಕೆತ್ತಿ, ರೂಪಿಸಿಕೊಳ್ಳುವ ಕಷ್ಟದ ಕೆಲಸ. ಬಹಳಷ್ಟು ಯುವಕರು ಪ್ರೀತಿ ತಮಗೆ ಹೇಗೆ ದತ್ತವಾಗುತ್ತದೆಯೋ ಹಾಗೆಯೇ ಬಳಸಿಕೊಳ್ಳಲು ನೋಡುತ್ತಾರೆ. ಕರಗುವುದು, ಶರಣಾಗುವುದು, ಐಕ್ಯವಾಗುವುದು ಇವೆಲ್ಲ ಅವರಿಗೆ ಬೇಕಾಗಿಲ್ಲ. ಯುವಕರು ತಮ್ಮ ವ್ಯೆಕ್ತಿತ್ವಗಳನ್ನು ಸಂಘಟಿಸಿಕೊಳ್ಳುವುದಕ್ಕೇ ಬಹಳ ಕಾಲ ಬೇಕಾದಿತು. ಬಹುಶಃ ಪ್ರೀತಿಯ ಸಾಧನೆಗೆ ಮನುಷ್ಯರ ಒಂದು ಆಯುಷ್ಯ ಸಾಕಾಗದು.

★ನಮ್ಮ ಬೆಳವಣಿಗೆಗೆ ಬದುಕು ಒಡ್ಡುವ ಸವಾಲಿಗಿಂತ ಹೆಚ್ಚು ಕಷ್ಟದ, ಮಿಗಿಲಾದ ಸವಾಲನ್ನು ಪ್ರೀತಿ ಒಡ್ಡುತ್ತದೆ.

★ನಿಜವಾಗಿ ಅಪಾಯಕಾರಿಯಾದ, ಅನಾರೋಗ್ಯಕಾರಿಯಾದ ದುಃಖಗಳೆಂದರೆ ಯಾವ ದುಃಖಗಳನ್ನು ನಾವು ಸಾರ್ವಜನಿಕವಾಗಿ ಹೊತ್ತು ಮರೆಸುತ್ತಾ ಸದ್ದು ಗದ್ದಲಗಳಲ್ಲಿ ಮುಳುಗಿಸಲು ಬಯಸುತ್ತೇವೆಯೋ ಅಂಥ ದುಃಖಗಳು ಮಾತ್ರ. ನಾವು ಜೀವಂತವಾಗಿ ಬದುಕದೆ ಇದ್ದ ಬದುಕು, ಕಳೆದುಕೊಂಡ ಬದುಕು, ನಿಜವಾಗಿ ಸತ್ತು ಮರೆಯಬೇಕಾಗಿದ್ದ ಗಳಿಗೆಗಳು ಎಲ್ಲ ಅದೇ ದುಃಖ.

★ ಎಲ್ಲದಕ್ಕೂ ಸಿದ್ದವಾಗಿರುವ, ಯಾವ ಅನುಭವವನ್ನೂ ಬಹಿಷ್ಕರಿಸದ, ಅರ್ಥವಾಗದ ಅನುಭವವನ್ನೂ ಒಳಗೊಳ್ಳಬಲ್ಲ ವ್ಯಕ್ತಿ ಮಾತ್ರ ಮತ್ತೊಬ್ಬರೊಡನೆ ಜೀವಂತವಾದ ಸಂಬಂಧವನ್ನು ಇಟ್ಟುಕೊಳ್ಳಲು, ತನ್ನ ಅಂತರಾಳದ ದನಿಯನ್ನು ಮೊಳಗಿಸಲು ಸಾಧ್ಯ.

★ಯಾವುದು ಕಷ್ಟವೋ ಅದನ್ನು ಯಾವಾಗಲೂ ನಂಬಬೇಕು ಎಂಬ ತತ್ವಕ್ಕೆ ಅನುಗುಣವಾಗಿ ನಮ್ಮ ಬದುಕನ್ನು ವ್ಯವಸ್ಥೆಗೊಳಿಸಿಕೊಂಡರೆ ಈಗ ಅತ್ಯಂತ ಅಪರಿಚಿತವೆಂದು ಭಾಸವಾಗುತ್ತಿರುವುದು ನಮಗೆ ಅತ್ಯಂತ ಆತ್ಮೀಯವಾದ, ವಿಶ್ವಾಸಕ್ಕೆ ಅರ್ಹವಾದ ಅನುಭವವಾಗುತ್ತದೆ.

★ಸಂಶಯವು ಹಾಳು ಮಾಡಲು ಬಂದಾಗ ಸಾಕ್ಷಿ, ಆಧಾರಗಳನ್ನು ಕೇಳು, ವಿಕಾರವಾದ್ದು ಯಾಕೆ ವಿಕಾರವಾಗಿದೆ ಎಂದು ಪ್ರಶ್ನಿಸು. ಆಗ ಸಂಶಯವು ತಬ್ಬಿಬ್ಬಾಗಿ ವಿರೋಧಿಸತೊಡಗುತ್ತದೆ. ಆದರೆ ಬಿಡಬೇಡ.ವಾದ ಮಾಡು. ಹೀಗೆ ಪ್ರತಿಬಾರಿಯೂ ಗಮನವಿಟ್ಟು, ಸತತವಾಗಿ ಸಂಶಯದೊಂದಿಗೆ ವಾದ, ಪ್ರಶ್ನೋತ್ತರ ನಡೆಸು. ಆಗ ಒಂದು ದಿನ ವಿನಾಶಕಾರಿಯಾಗುವ ಬದಲಾಗಿ ನಿನ್ನ ಬದುಕನ್ನು ಕಟ್ಟುವ ಅತ್ಯಂತ ವಿವೇಕದ ಕಾರ್ಮಿಕನಾಗುತ್ತದೆ.

ಇಂತಹ ಇನ್ನೂ ಹಲವಾರು ನುಡಿಮುತ್ತುಗಳು ತುಂಬಿರುವ ಈ ಪುಸ್ತಕವನ್ನು ಪತ್ರಗಳ ಗುಚ್ಛ ಅನ್ನುವುದಕ್ಕಿಂತ ಪ್ರಸಿದ್ಧ ಗ್ರಂಥಗಳಲ್ಲಿನ  ಬದುಕಿನ ತತ್ವಗಳೆಂದರೆ ತಪ್ಪಾಗದು.

‍ಲೇಖಕರು avadhi

April 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: