ನನಗೆ ಪಿ.ಸಾಯಿನಾಥ್ ಎಂಬ ಫಕೀರ ಏಕೆ ನೆನಪಾಗುತ್ತಾರೆ ಗೊತ್ತಾ?

“Space recycling system”ನ ಕುರಿತು ರಷ್ಯಾ ತನ್ನ ನ್ಯೂಸ್ ಏಜೆನ್ಸಿ TASSನಲ್ಲಿ ವರದಿ ಮಾಡುವ ಮೂಲಕ ಚರ್ಚೆಯೊಂದನ್ನು ಆರಂಭಿಸಿರುವಾಗಲೇ, ನ್ಯೂಜಿಲ್ಯಾಂಡ್‍ನ ಕ್ರೈಸ್ಟ್ ಚರ್ಚ್ ಮಸೀದಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿ 95 ವರ್ಷದ ವಯೋವೃದ್ಧ ಜಾನ್ ಸಾಟೋ ನಾಲ್ಕು ಬಸ್ಸುಗಳನ್ನು ಹಿಡಿಯುವ ಮೂಲಕ “Anti – racism rally”ನಲ್ಲಿ ಭಾಗವಹಿಸಲು ಹೊರಟಿದ್ದನ್ನು “ರೇಡಿಯೋ ನ್ಯೂಜಿಲ್ಯಾಂಡ್” ವರದಿ ಮಾಡಿತ್ತು.

“ಘಟನೆ ನಡೆದ ರಾತ್ರಿ ನಿದ್ರಿಸಲು ಸಾಧ್ಯವಾಗಲಿಲ್ಲ. ನನಗೆ ಈಗಲೂ ನಿದ್ರಿಸುವುದು ಅಸಾಧ್ಯ ಎನಿಸುತ್ತಿದೆ”,  ಎಂದು ರೇಡಿಯೋ ನ್ಯೂಜಿಲ್ಯಾಂಡ್‍ಗೆ ಸಂಕಟದಿಂದ ಉತ್ತರಿಸಿದ್ದ ಜಾನ್ ಸಾಟೋ ಎರಡನೇ ಮಹಾಯುದ್ಧದ್ದಲ್ಲಿ ನೇರವಾಗಿ ಭಾಗವಹಿಸಿದ್ದ ಆಕ್‍ಲ್ಯಾಂಡ್‍ನ ಹಿರಿಯಜೀವ. ಜಾನ್ ಸಾಟೋ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ 95 ವರ್ಷದ ಅಂಚಿನ ಆ ಹಣ್ಣುಜೀವಕ್ಕೆ ಯುದ್ಧ ಹಾಗೂ ಸಾವಿನ ಸಂಕಟದ ತೀವ್ರತೆಯ ನಿಕಟ ಪರಿಚಯವಿದೆ ಎನ್ನುವುದು ಅರ್ಥವಾಗಬಹುದು. ಈ ಎಲ್ಲದರ ನಡುವೆ ಮತ್ತೊಂದು ಸಾರ್ವತ್ರಿಕ ಚುನಾವಣೆಯ ಎದುರು ನಿಂತಿರುವ ಭಾರತಕ್ಕೆ ಜಾನ್ ಸಾಟೋ ಅನುಭವಿಸುತ್ತಿರಬಹುದಾದ ಸಂಕಟ ಹಾಗೂ ರಷ್ಯಾದ ನೂತನ ನಡೆಯಂತಹ ಅಂಶಗಳೇ ಈ ಬಾರಿಯ ಚುನಾವಣೆಯ ಸೂತ್ರಗಳಾಗಿ ಪಾತ್ರ ನಿರ್ವಹಿಸಲೂಬಹುದು.

ಆದರೆ, ಬಹಿರಂಗ ರಾಜಕಾರಣ ಸೊರಗುತ್ತಿರುವ ಪ್ರಸ್ತುತ ದಿನಗಳಲ್ಲಿ ಸದ್ಯ ನಮ್ಮ ಸಂವೇದನೆಗಳು ಟ್ರಾಲ್‍ಗಳ ಮಟ್ಟಕ್ಕೆ ಮಾತ್ರವೇ ಸೀಮಿತವಾಗಿರುವುದು ಪ್ರಜಾಪ್ರಭುತ್ವ ಎದುರಿಸುತ್ತಿರುವ ಬಹುದೊಡ್ಡ ಸೋಲು. ಕೆಲವು ದಿನಗಳ ಹಿಂದೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ “It is an online lynch mob where anyone with organizational support of five hundred can send out ten lakhs tweets and declare me a thief” ಎಂದಿದ್ದು ಇದೇ ಅರ್ಥದಲ್ಲಿ. ಸದ್ಯ ಈ ಎಲ್ಲವನ್ನು ಆಲೋಚಿಸುತ್ತ ಬರೆಯುತ್ತಿರುವಾಗ Main Stream Mediaಗಳನ್ನ ಕುಟುಕುತ್ತಲೇ ಮರೆಯಾಗುತ್ತಿದ್ದ ಪ್ರಜ್ಞೆಯೊಂದನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸುವ ಮೂಲಕ ಸ್ವಯಂಘೋಷಿತರ ಕಿವಿಹಿಂಡಿದ ಪತ್ರಕರ್ತ            ಪಿ. ಸಾಯಿನಾಥ್ ನೆನಪಾಗುತ್ತಿದ್ದಾರೆ.

ಕಾರಣ ಇಷ್ಟೇ: ಎರಡು ದಿನಗಳ ಹಿಂದೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪರಿಚಯವಾಗಿ ಮಾತು ಆರಂಭಿಸಿದ ಹಿರಿಯರೊಬ್ಬರು ಅವರ ಕಡೆಯ ನಿಲ್ದಾಣವನ್ನು ತಲುಪುವಷ್ಟರಲ್ಲಿ ಅನೇಕ ಆಕ್ಷೇಪ ಹಾಗೂ ಕೆಲವು ಮೆಚ್ಚುಗೆಯನ್ನು ಅವರದೇ ರೀತಿಯಲ್ಲಿ ಹೊರಹಾಕಿದ್ದರು. ಭಾರತ ಮತ್ತೊಂದು ಹಂತಕ್ಕೆ ಜಿಗಿಯುತ್ತಿದೆ ಎನ್ನುವುದರಿಂದ ಆರಂಭವಾಗಿ ರೈತರು ಹಳ್ಳಿಗಳಲ್ಲಿ ಆರಾಮವಾಗಿದ್ದಾರೆ. ಅವರ ಸಾಲಮನ್ನಾ ಮಾಡುವುದಕ್ಕಾಗಿ ನಾವು ದುಡಿದು ಟ್ಯಾಕ್ಸ್ ಕಟ್ಟುತ್ತಿದ್ದೇವೆ ಎನ್ನುವ ಸಿಟ್ಟಿನೊಂದಿಗೆ ಮಾತುಗಳನ್ನು ಕೊನೆಯಾಗಿಸಿದ್ದರು. ಜತೆಗೆ ಕರ್ನಾಟಕದ ಈ ಹಿಂದಿನ ಕಾಂಗ್ರೆಸ್ ಸರ್ಕಾರದ “ಅನ್ನಭಾಗ್ಯ” ಯೋಜನೆಯೊಂದು ಕಳಪೆ ಆಲೋಚನೆ ಎನ್ನುವುದು ಮೆಟ್ರೋ ರೈಲನ್ನು ಇಳಿದುಹೋಗುವ ಮೊದಲು ಉಚ್ಛರಿಸಿದ ಅವರ ಕಡೆಯ ಪ್ರಮುಖ ಆರೋಪವಾಗಿತ್ತು.

ಹಾಗಾದರೆ ಭಾರತದ ರೈತರು ಹಾಗೂ ಅನ್ನಭಾಗ್ಯದಂತಹ ಯೋಜನೆಯನ್ನು ಒಪ್ಪಿಕೊಳ್ಳುವಂತಹ ಮಧ್ಯಮವರ್ಗದ ಜನರ ಸ್ಥಿತಿ ನಿಜಕ್ಕೂ ಉತ್ತಮವಾಗಿದೆಯಾ? ಸದ್ಯದ ಪ್ರಶ್ನೆ ಇದಷ್ಟೇ. ಈ ಬಾರಿಯ ಚುನಾವಣೆಯ ಸಮಯದಲ್ಲಿ ಅತಿಹೆಚ್ಚು ಚರ್ಚೆಯಾಗಬೇಕಾಗಿರುವ ವಿಚಾರಗಳಲ್ಲಿ ಇದೂ ಒಂದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಭಾರತ ನೇರ ಹಾಗೂ ಪರೋಕ್ಷವಾಗಿ ಕೃಷಿಯನ್ನು ಶೇಕಡ 70 ರಷ್ಟು ಅವಲಂಭಿಸಿರುವ ದೇಶ. ಆದರೆ ಕೃಷಿ ಹಾಗೂ ರೈತರ ವಿಚಾರವಾಗಿ ಪಾರ್ಲಿಮೆಂಟ್ ಹಾಗೂ ನಮ್ಮ ವಿಧಾನಸಭೆಗಳಲ್ಲಿ ಚರ್ಚಿಸಲು ವಿನಿಯೋಗವಾಗಿರುವ ಸಮಯ ಮಾತ್ರ ತೀರಾ ಅಲ್ಪಮಟ್ಟದ್ದು. ಉದಾಹರಣೆಗೆ ಭಾರತದ ಕೃಷಿಬಿಕ್ಕಟ್ಟನ್ನು ಶಮನಗೊಳಿಸುವ ಸಲುವಾಗಿ ಎಂ.ಎಸ್ ಸ್ವಾಮಿನಾಥನ್ (ಸ್ವಾಮಿನಾಥನ್ ರಿಪೋರ್ಟ್) ನೇತೃತ್ವದಲ್ಲಿ ಸಮೀಕ್ಷೆಯೊಂದನ್ನು ನಡೆಸುವ ಮೂಲಕ ವರದಿಯೊಂದನ್ನು ತಯಾರಿಸಿ, ಆ ವರದಿಯನ್ನು 2004ರ ಡಿಸೆಂಬರ್‍ ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವ್ಯಂಗ್ಯವೆಂದರೆ ಕಳೆದ 15 ವರ್ಷಗಳಲ್ಲಿ ಆ ಅತ್ಯುತ್ತಮ ವರದಿಯ ಕುರಿತು ಒಂದು ತಾಸಿನ ಚರ್ಚೆಯೂ ಕೂಡ ನಮ್ಮ ಪಾರ್ಲಿಮೆಂಟ್‍ನಲ್ಲಿ ನಡೆದಿಲ್ಲ ಎನ್ನುವುದು.

National Crime Records Bureau (NCRB) ಪ್ರಕಾರ ಕಳೆದ ಐದು ವರ್ಷಗಳಲ್ಲಿ ಅತಿಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿವೆ. ಮುಖ್ಯವಾಗಿ ಮಹಾರಾಷ್ಟ್ರ, ಒರಿಸ್ಸಾ, ತೆಲಂಗಾಣ, ಆಂಧ್ರಪ್ರದೇಶ, ಛತ್ತಿಸ್‍ಗಡ್ ನಂತರದ ಸ್ಥಾನದಲ್ಲಿ ಕರ್ನಾಟವಿದೆ. 2018ರಲ್ಲಿ ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಅರವತ್ತು ಸಾವಿರದಷ್ಟು (60.000) ಆತ್ಮಹತ್ಯೆಗಳು ಸಂಭವಿಸಿವೆ ಎನ್ನಲಾಗುತ್ತಿದೆ. ಅಂದರೆ ಆ ರಾಜ್ಯದಲ್ಲಿ ಪ್ರತಿನಿತ್ಯ ಹತ್ತು ಮಂದಿ ರೈತರು ಸಾವಿಗೀಡಾಗಿದ್ದಾರೆ.

2008ರಲ್ಲಿ ಬ್ಯಾಂಕ್‍ಗಳ ಮೂಲಕ ಪಡೆದ ಸಾಲವನ್ನ ಮನ್ನಾ ಮಾಡುವುದಾಗಿ ಅಂದಿನ ಸರ್ಕಾರದ ವತಿಯಿಂದ ಘೋಷಿಸಲಾಗಿತ್ತು. ಆದರೆ ಮಹಾರಾಷ್ಟ್ರದ ವಿದರ್ಭದಲ್ಲಿ ಶೇಖಡ 52ರಷ್ಟು ಜನರ ಬಳಿ ಬ್ಯಾಂಕ್ ಅಕೌಂಟ್‍ಗಳೇ ಇರಲಿಲ್ಲ. ಹಾಗಾದರೆ ರೈತರ ಸಾಲಮನ್ನಾವಾಗಿದ್ದು ಹೇಗೆ? ಮೂಲದಲ್ಲಿ ಮಹಾರಾಷ್ಟ್ರದ ವಿದರ್ಭ ಹಾಗೂ ಇನ್ನಿತರೆ ಕೆಲವು ಭಾಗಗಳು ನಿಜಕ್ಕೂ ವಿಲಕ್ಷಣ ಸ್ಥಿತಿಯಲ್ಲಿಯೇ ಉಳಿದುಕೊಂಡಿವೆ. ಆ ಪ್ರದೇಶಗಳ ಕೃಷಿಬಿಕ್ಕಟ್ಟನ್ನ ಪರಿಹಾರಗೊಳಿಸುವುದಕ್ಕೆ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳು ನಿಜಕ್ಕೂ ದೊಡ್ಡಮಟ್ಟದಲ್ಲಿರಬೇಕು. ಆದರೆ ಅಲ್ಲಿನ ವಾಸ್ತವ ಮಾತ್ರ ಮತ್ತೊಂದು ಹಂತದಲ್ಲಿದೆ.

ಇದೇ ಕಾರಣಕ್ಕೆ 2004ಲ್ಲಿ “All India biodynamic and organic farming association” ಒತ್ತಾಯಕ್ಕೆ ಮಣಿದಿದ್ದ ಬಾಂಬೆ ಹೈಕೋರ್ಟ್ “TaTa Institute”ಗೆ ಮಹಾರಾಷ್ಟ್ರದಲ್ಲಿನ ರೈತರ ಆತ್ಮಹತ್ಯೆಗೆ ಮೂಲವಾಗುತ್ತಿರುವ ಕಾರಣಗಳನ್ನು ಸಮೀಕ್ಷೆಯ ಮೂಲಕ ವರದಿಯನ್ನು ತಯಾರಿಸಿ ಪರಿಹಾರವನ್ನ ಸಲಹೆಗಳ ಮೂಲಕ ತಿಳಿಸುವಂತೆ ಸೂಚಿಸಿತ್ತು.

ಆದರೆ ಆ ಕುರಿತು 2005ರಲ್ಲಿ “TaTa Institute” ಸಲ್ಲಿಸಿದ ವರದಿ ಆವತ್ತಿಗೆ ನಿಜಕ್ಕೂ ಅಘಾತಗೊಳಿಸಿದ್ದು ಅಂದಿನ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಸರ್ಕಾರವನ್ನು. ಸರ್ಕಾರದ ನಿರ್ಲಕ್ಷ್ಯತೆ, ಸರ್ಕಾರದ ಯೋಜನೆಗಳನ್ನು ರಾಜ್ಯದ ಕಟ್ಟಕಡೆಯ ರೈತನವರೆಗೂ ತಲುಪಿಸಲು ಸೋಲುತ್ತಿರುವುದು ಹಾಗೂ ಸರಿಯಾದ ಅಥವಾ ನಿರ್ಧಿಷ್ಟ ಅಧ್ಯಯನಗಳಿಲ್ಲದೆ ಯೋಜನೆಗಳನ್ನು ರೂಪಿಸುತ್ತಿರುವುದು ರೈತರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎನ್ನುವುದು “TaTa Institute” ಸಲ್ಲಿಸಿದ ವರದಿಯ ಸಾರಂಶವಾಗಿತ್ತು.

 

ಹೀಗೆ ನಿರ್ಗರಗಳವಾಗಿ ಅಲ್ಲಿನ ಕೆಲವು ರೈತರು ಆತ್ಮಹತ್ಯೆಗೆ ಒಳಗಾಗುತ್ತಾ ಮತ್ತೆ ಕೆಲವು ರೈತರು ಸರ್ಕಾರದ ವಿರುದ್ಧ ಬಂಡೆದ್ದು ಘೋಷಣೆಗಳನ್ನು ಕೂಗುತ್ತಾ ಉಳಿದುಹೋಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ನಾಸಿಕ್‍ನಿಂದ ನಿರಂತರ ಆರು ದಿನಗಳು ಕಾಲುನಡಿಗೆ ಮೂಲಕ ಮುಂಬೈ ತಲುಪಿದ ರೈತರು ಪ್ರತಿಭಟನೆ ನಡೆಸಿದ ಉದಾಹಣೆ ಇಂದಿಗೂ ಜ್ವಲಂತವಾಗಿಯೇ ಉಳಿದಿದೆ.

ಇಷ್ಟಾದರೂ ಸಾವಿನ ಅಂಚಿನಲ್ಲಿರುವ ರೈತರನ್ನು ಸಂಘಟಿಸುವ ಯಾವ ಉದ್ದೇಶವನ್ನು ಹೊಂದಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿರುವ ಮಹಾರಾಷ್ಟ್ರ ಸರ್ಕಾರ ರೈತರಿಗೆ ಮೀಸಲಾಗಿರುವ ಶೇಖಡ 60ರಷ್ಟು ಸಬ್ಸಿಡಿ ಹಣವನ್ನು ಮುಂಬೈ ನಿವಾಸಿಗಳ ಅವಶ್ಯಕತೆಗಳನ್ನು ಪೂರೈಸುವ ನೂತನ ಯೋಜನೆಗಳಿಗೆ ವಿನಿಯೋಗಿಸಿದೆ. ಇದು ಮಹಾರಾಷ್ಟ್ರದ ರೈತರು ಹಾಗೂ ಸರ್ಕಾರದ ಅಸಲಿ ಕತೆಯಾದರೆ, ದೆಹಲಿ ಹಾಗೂ ಛತ್ತಿಸ್‍ಗಡ್ 2017ರಲ್ಲಿ ಒಬ್ಬನೇ ಒಬ್ಬ ರೈತನ ಬಗ್ಗೆಯೂ ಚರ್ಚಿಸಲು ಅನರ್ಹವಾಗಿರುವ ಕೃಷಿ ಸಂಬಂಧಿ ಹೆಸರಿನ ಸಂಸ್ಥೆಗಳಿಗೆ 35.000 ಕೋಟಿಯಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಿದೆ.

ಮಹಾರಾಷ್ಟ್ರ, ಛತ್ತಿಸ್‍ಗಡ್ ಹಾಗೂ ದೆಹಲಿ ಕೇವಲ ಉದಾಹರಣೆಗಳಷ್ಟೇ. ಹಾಗಾದರೆ ಈ ಸರ್ಕಾರಗಳ ಯಾವ ಯೋಜನೆಗಳಿಂದ ರೈತರು ಸ್ವಾವಲಂಬಿಗಳಾಗಬೇಕು?

ಪ್ರಸ್ತುತ ದಿನಗಳಲ್ಲಿ ರೈತರ ಆತ್ಮಹತ್ಯೆಗೆ ಸೋಷಿಯಲ್ ಮೀಡಿಯಾಗಳಲ್ಲಿ ನೂರು ಕಾರಣಗಳನ್ನು ಹುಡುಕಿ ನೀಡುವ ಮೂಲಕ ಸೈದ್ಧಾಂತಿಕವಾಗಿ ಸರ್ಕಾರಗಳನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ರೈತರು ಕೃಷಿ ಸಂಬಂಧಿ ಸಾಲಗಳಿಂದ ಆತ್ಮಹತ್ಯೆಗೆ ಒಳಗಾಗುತ್ತಿರುವುದಕ್ಕಿಂತ ವೈಯಕ್ತಿಕವಾದ ಕುಡಿತದಂತಹ ಚಟ ಹಾಗೂ ಕುಟುಂಬದ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವ ಆರೋಪಗಳು ದೀರ್ಘವಾಗಿ ಕೇಳಿಬರುತ್ತಿವೆ. ಆದರೆ ವಿಶ್ವಬ್ಯಾಂಕ್‍ನ ಆರ್ಥಿಕ ತಜ್ಞ ಅರವಿಂದ್ ಪಾನಗಾರಿಯಾ ಗುರುತಿಸಿರುವಂತೆ ಶೇಕಡ 16.84ರಷ್ಟು ರೈತರು ಸಾಲದ ಸಮಸ್ಯೆಯಿಂದ ಆತ್ಮಹತ್ಯೆಗೆ ಒಳಗಾಗುತ್ತಿದ್ದರೆ, ವೈಯಕ್ತಿಕ ಹಾಗೂ ಕುಟುಂಬ ಕಲಹಗಳಂತ ಕಾರಣಗಳಿಂದ ಆತ್ಮಹತ್ಯೆಗೆ ಒಳಗಾಗುತ್ತಿರುವ ರೈತರು ಕೇವಲ 5.31ರಷ್ಟು ಮಾತ್ರ. ಇನ್ನು ಉಳಿದ ಪ್ರಮಾಣದ ಆತ್ಮಹತ್ಯೆಗಳಿಗೆ ಇರಬಹುದಾದ ಕಾರಣಗಳನ್ನು ವರದಿಯಲ್ಲಿಯೇ ಗುರುತಿಸಲಾಗಿದೆ.

ಇಲ್ಲಿ ನೀಡಿರುವ ಅಂಕಿಅಂಶಗಳು ಕಳೆದ ಲೋಕಸಭಾ ಚುನಾವಣೆಯ ನಂತರದ ಒಂದು ವರ್ಷದ ಅವಧಿಯೊಳಗಿನದು ಮಾತ್ರ. ಅಂದರೆ, ಕೇವಲ 2015ರವರೆಗಿನ ವರದಿಯ ಅಂಕಿಅಂಶಗಳು ಮಾತ್ರವೇ ಕೇಂದ್ರ ಸರ್ಕಾರದ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಲಭ್ಯವಿರುವುದು. 2015ರ ನಂತರ ರೈತರ ಆತ್ಮಹತ್ಯೆಗಳು ಪ್ರಮಾಣವೆಷ್ಟು? ಹಾಗೂ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕೆ ಕೇಂದ್ರಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಏನು? ಎನ್ನುವ ಯಾವ ಮಾಹಿತಿಯೂ ಲಭ್ಯವಿಲ್ಲ.

ತೃಣಮೂಲ್ ಕಾಂಗ್ರೆಸ್‍ನ ನಾಯಕ ದಿನೇಶ್ ತ್ರಿವೇದಿ ರೈತರ ಕುರಿತು ಕೇಂದ್ರ ಸರ್ಕಾರದ ನಿಲುವುಗಳು ಹಾಗೂ ರೈತರ ಆತ್ಮಹತ್ಯಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದ ಕೇಂದ್ರ ಕೃಷಿ ಸಚಿವ ರಾಧಮೋಹನ್ ಸಿಂಗ್ National Crime Records Bureau (NCRB)ಆ ಕುರಿತು ಮಾಹಿತಿ ಹಾಗೂ ದತ್ತಾಂಶಗಳನ್ನು ಕಲೆಹಾಕಿದೆ ಆದರೆ ಆ ಯಾವುದನ್ನು 2016ರ ನಂತರ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ ಎಂದು ಉತ್ತರಿಸಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಇಂತಹ ಗಂಭೀರ ವಿಷಯಗಳ ಕುರಿತು  ಯಾವುದೇ ಪ್ರಕಟಣೆಗಳು ಸರ್ಕಾರದ ವತಿಯಿಂದ ಹೊರಬೀಳದೆ ಇರುವುದಕ್ಕೆ ಕಾರಣಗಳು ಮಾತ್ರ ಇಂದಿಗೂ ಗೌಪ್ಯವಾಗಿಯೇ ಉಳಿದಿವೆ.

ಕರ್ನಾಟಕದ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. 46.000 ಕೋಟಿಯಷ್ಟು ರೈತರ ಸಾಲಮನ್ನಾ ಮಾಡಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ ನಂತರವೂ ರೈತರಿಗೆ ನಿರಂತರವಾಗಿ ನೋಟಿಸ್‍ಗಳು ಜಾರಿಯಾಗುತ್ತಲೇ ಇವೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ ಎಂದರೆ ರಾಜ್ಯಸರ್ಕಾರ ಕೇವಲ ಸಹಕಾರ ಹಣಕಾಸು ಸಂಸ್ಥೆಗಳ ಸಾಲವನ್ನು ಮಾತ್ರವೇ ಮನ್ನಾ ಮಾಡುವುದಕ್ಕೆ ಶಕ್ತವಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನ ಕೇಂದ್ರ ಸರ್ಕಾರವೇ ಮನ್ನಾ ಮಾಡಬೇಕು. ಆದರೆ ನಮ್ಮ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ Bad Debt 7.5ಲಕ್ಷದಷ್ಟಿದೆ. ಇದರಲ್ಲಿ ಶೇಕಡ 70ರಷ್ಟು ಭಾಗ ಕಾರ್ಪೋರೇಟ್ ಉದ್ಯಮಿಗಳ ಸಾಲ.

ಈ ಕುರಿತು ಆರೋಗ್ಯಪೂರ್ಣವಾಗಿ ಚರ್ಚಿಸುವವರು ಯಾರು? ಭಾರತದ ರೈತರ ಬಿಕ್ಕಟಿನ ಸ್ಥಿತಿ ಹೀಗೆ ಹದಗೆಟ್ಟಿರುವ ಸ್ಥಿತಿಯಲ್ಲಿರುವಾಗ ನಾವುಗಳು ದಿನದಲ್ಲಿ ಈ ಕುರಿತು ಎಷ್ಟು ಚರ್ಚಿಸುತ್ತಿದ್ದೇವೆ?

ಇಂಗ್ಲೆಂಡ್‍ನಲ್ಲಿ ಓದುತ್ತಿದ್ದ ನನ್ನ ಗೆಳೆಯನೊಬ್ಬ, ಭಾರತವನ್ನ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕಣ್ಣಿನಿಂದ ನೋಡಿದರೆ ನಮ್ಮ ಭ್ರಮೆಗಳು ನಿಧಾನವಾಗಿ ಕಳಚುತ್ತವೆ ಎಂದಿದ್ದ. ಅದೊಂದು ಮಾತನ್ನು ಆವತ್ತಿಗೆ ಕೇವಲ ಹೇಳಿಕೆ ಎಂಬಂತೆ ಕೇಳಿಸಿಕೊಂಡಿದ್ದರೂ 2019ರ ಫೆಬ್ರವರಿ 1ರಂದು ದಿ ಗಾರ್ಡಿಯನ್ ಪತ್ರಿಕೆಯ

“India’s jobs crisis casts shadow over Modi’s re-election hopes
PM promised ‘good days are coming’ but figures show unemployment at 45-year high”

 

ತಲೆಬರಹದ ವರದಿಯನ್ನು ಓದಿದ ನಂತರ ಅವನ ಮಾತಿನ ಹಿಂದಿರಬಹುದಾದ ತೀವ್ರತೆ ಅರ್ಥವಾಗಲು ಅನುವಾಗಿತ್ತು.

ಹೀಗೆ ದೇಶದೊಳಗಿನ ಆಂತರಿಕ ಯುದ್ಧವೇ ದೈತ್ಯರೂಪ ಪಡೆದುಕೊಳ್ಳುತ್ತಿರುವ ದಿನಗಳಲ್ಲಿ ಫೋಟೋಶಾಪ್ ಮಾಡುತ್ತ, ಟ್ರೋಲ್‍ಗಳ ಮೂಲಕ ಮತ್ತೊಬ್ಬರನ್ನ ವಿರೂಪಗೊಳಿಸುತ್ತ ಕಾಲಕಳೆಯುತ್ತಿರುವ ನಾವುಗಳು ಸರ್ಕಾರ, ಸರ್ಕಾರದ ಯೋಜನೆ ಹಾಗೂ ಸರ್ಕಾರದ ನಡೆಗಳನ್ನು ಎಷ್ಟು ಮಾತ್ರ ಅರ್ಥಮಾಡಿಕೊಳ್ಳುವುದು ಸಾಧ್ಯ?

ಪರಿಸ್ಥಿತಿ ಹೀಗಿರುವಾಗ ರಾಜಕೀಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಮೂಲಕ ಸರ್ಕಾರಗಳನ್ನು ನಿರ್ದಯವಾಗಿ ಟೀಕಿಸುವವರನ್ನು ಯಾವುದೋ ಒಂದು ಪಕ್ಷಕ್ಕೆ ಸೀಮಿತಗೊಳಿಸಿ ಮಾತನಾಡಬಹುದಾದ ನಮ್ಮ ಬೌದ್ಧಿಕ ದಿವಾಳಿತನವೇ ಸದ್ಯದ ಬಹುದೊಡ್ಡ ಸಮಸ್ಯೆ. ಭಾರತದಲ್ಲಿ ರಾಜಕೀಯ ಚರ್ಚೆಯ ಮೂಲಕ ಉಂಟಾಗುತ್ತಿರುವ ಕಂದರವನ್ನ ಸಲೀಸುಗೊಳಿಸುವುದಕ್ಕೆ ದಶಕಗಳ ಅವಧಿಯೇ ಬೇಕಾದಬಹುದು. ಭಾರತದ ಯಾವುದೇ ಚುನಾವಣೆಗಳಲ್ಲಿ ಭಾವನಾತ್ಮವಾಗಿ ಪ್ರತಿಕ್ರಿಯಿಸದೆ ಬೌದ್ಧಿಕವಾಗಿ ಆಲೋಚಿಸಬೇಕಾದ ತುರ್ತಿನಲ್ಲಿದ್ದೇವೆ.

ಕಡೆಯದಾಗಿ: ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿ ಬದುಕಬೇಕಾಯ್ತು. ಪ್ರತಿ ಅಗುಳಿನ ಮೌಲ್ಯವೂ ನನಗೆ ಗೊತ್ತಿದೆ ಎನ್ನುವ ಭಾವನಾತ್ಮಕ ಸಾಲುಗಳನ್ನು ತಮ್ಮ ಆತ್ಮಕತೆಯ ಉದ್ದಕ್ಕೂ ಬರೆದುಕೊಂಡಿರುವ ಕನ್ನಡದ ಹಿರಿಯ ಲೇಖಕರೊಬ್ಬರು “ಅನ್ನಭಾಗ್ಯ” ಯೋಜನೆಯನ್ನು ಟೀಕಿಸಿದ್ದರು. ಹಾಗಾದರೆ ಆ ಲೇಖಕರು ಬಾಲ್ಯದಲ್ಲಿ ಅನುಭವಿಸಿದ್ದ ಬಡತನದಿಂದ ಅವರು ಕಲಿತಿದ್ದು ಏನು?

ಅವರು ಮಾನವೀಯವಾಗಿ ಉತ್ತರ ನೀಡುವುದು ಸಾಧ್ಯವಾದರೆ ಅದೇ ಉತ್ತರಗಳನ್ನು ನಾನು ಮೆಟ್ರೋದಲ್ಲಿ ಆರೋಪಗಳನ್ನು ಎದುರಿಟ್ಟು ಇಳಿದುಹೋದವರಿಗೂ ನೀಡುವುದಕ್ಕೆ ಬಯಸುತ್ತೇನೆ.

ಈ ನಿಟ್ಟಿನಲ್ಲಿ ಪ್ರಶ್ನಿಸುವವರಿಗೆ ಓರ್ವ ಪತ್ರಕರ್ತನಾಗಿ ಉತ್ತರಿಸುವುದು ಹೇಗೆ ಎನ್ನುವುದನ್ನು ಪರೋಕ್ಷವಾಗಿ ಕಲಿಸಿಕೊಟ್ಟಿದ್ದಕ್ಕೆ ನನಗೆ ಪಿ.ಸಾಯಿನಾಥ್ ಪದೇ ಪದೇ ನೆನಪಾಗುತ್ತಾರೆ.

 

‍ಲೇಖಕರು Avadhi Admin

April 3, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: