ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕೂಸಿನ ವೃತ್ತಾಂತ

ಕಾವೇರಿ ಕಣಿವೆಯಲ್ಲಿ ಆಡಿ ಬೆಳೆದವರು ಶ್ರೀರಂಗಪಟ್ಟಣದ ಪವನ್ ಕುಮಾರ್   

ವಾಣಿಜ್ಯ ವ್ಯಾಸಂಗದೊಂದಿಗೆ ಬರೆಯುವ ಗೀಳನ್ನು ಹತ್ತಿಸಿಕೊಂಡವರಿಗೆ ಸಾಹಿತ್ಯವನ್ನು ಉಸಿರಾಡಲು ನೆಲೆ ನೀಡಿದ್ದು ಮೈಸೂರು.

ಇವರು ರಚಿಸಿದ ಸುಮಾರು ೫೦ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕಥೆ, ಕವನ, ಪ್ರಬಂಧ ಹಾಗೂ ರೇಡಿಯೋ ನಾಟಕಗಳನ್ನು ರಚಿಸುವುದು ಹವ್ಯಾಸ . ಆಕಾಶವಾಣಿಯಲ್ಲಿ ಇವರ ರೇಡಿಯೋ ನಾಟಗಳು ಪ್ರಸಾರವಾಗಿವೆ.

ಬರಹವನ್ನು ಬಗಲಿಗಿರಿಸಿಕೊಂಡು  ಲೆಕ್ಕಪರಿಶೋಧನ ಕಚೇರಿಯೊಂದರಲ್ಲಿ ಸಹಾಯಕರಾಗಿದ್ದಾರೆ.  

ಆರ್.ಪವನ್ ಕುಮಾರ್

ಗಂಟೆ ಎಷ್ಟಾಗಿತ್ತೋ ರಮ್ಯಾಳಿಗೆ ಅಂದಾಜಿರಲಿಲ್ಲ. ಆಗಷ್ಟೆ ನಿದ್ದೆಯಿಂದ ಎಚ್ಚತ್ತವಳಂತೆ ಕಣ್ಣ ತೆರೆಯಲು ಕತ್ತಲು ತಾನು ಎಲ್ಲೆಡೆ ಹರಡಿತ್ತು. ಮಲಗಿದ್ದಲ್ಲೆ ಪಕ್ಕಕ್ಕೆ ಕೈಯಾಡಿಸಲು ಅವಳ ಒಂಬತ್ತು ದಿನದ ಕೂಸು ಕೈಗೆ ತಾಕಿತು. ಅದನ್ನ ಎದ್ದು ಕುಳಿತು ನೋಡುವ ಇಚ್ಛೆಯಾಗದಿದ್ದರು ಹಾಗೆ ಸುಮ್ಮನೆ ಅದರ ದೇಹದ ಮೇಲೆ ಕೈ ಆಡಿಸಿದಳು. ಬಟ್ಟೆಯೊಳಗೆ ಬೆಚ್ಚಗೆ ಸುತ್ತಿಟ್ಟಂತೆ ಇದ್ದ ಆ ಮಾಂಸದ ತುಂಡೊಳಗೆ ಸಣ್ಣ ಉಸಿರು ಒಳಗೂ, ಹೊರಗೂ ಚಲಿಸುತ್ತಿತ್ತು. ಅದರ ಕೈ, ಕಾಲುಗಳಂತೂ ಗರ್ಭದಿಂದ ಇಳಿಯುವಾಗಲೆ ಒಂದಕ್ಕೊಂದು ಗೋಂದು ಅಂಟಿಸಿದಂತೆ ಅಂಟಿಕೊಂಡು ಇಡೀ ಶರೀರದಲ್ಲಿ ತಲೆಯ ಹೊರತು ಪಡಿಸಿ ಮತ್ತ್ಯಾವುದಕ್ಕೂ ಚಲನೆ ಇರಲಿಲ್ಲ. ತಲೆ ಮಾತ್ರ ಹಾವಿನ ಹೆಡೆಯಂಥೆ ಆಗೊಮ್ಮೆ, ಈಗೊಮ್ಮೆ ಹೊರಳಾಡುತ್ತಿತ್ತು. ಕಣ್ಣು, ಮೂಗು, ಬಾಯಿಗಳೆಲ್ಲವು ತಮ್ಮ ಕ್ರಿಯೆಗಳ ನಡೆಸಲು ಕತ್ತಿನ ಕೆಳ ಭಾಗದ ಶರೀರ ಮಾತ್ರ ಬಸವನಹುಳುವಿನ ದೇಹದಂತೆ ತವೆಯುತ್ತಿತ್ತು.

ಹೆರಿಗೆ ಮಾಡಿಸಿದ ಸೂಲಗಿತ್ತಿಯರು “ಇದ್ಯಾವ ಹುಳಾ ಹೊಟ್ಟೆಯೊಳಗೆ ಹಿಂಗ್ ಹುಟ್ಟಾದೆ, ಇದ್ನೇ ಕೂಸ ಕುಲ್ವಾ” ಎಂದು ತಾವು ಕಂಡ ಈ ರೀತಿಯ ಮೊದಲ ಬಾರಿಯ ವಿಸ್ಮಯಕ್ಕೆ ಬೆರಗಾಗಿದ್ದರು. ಆ ಕೂಸಿನೊಳಗೆ ಉಸಿರಿತ್ತಾದರು ಕೈ, ಕಾಲುಗಳು ಶರೀರಕ್ಕೆ ಅಂಟಿಕೊಂಡಂತೆ ಇಡೀ ದೇಹ ಏಕವಾಗಿ ಪುಟ್ಟ ಗಂಟಲು ತೆರೆದು ಬೆಚ್ಚಗಿನ ಸುಖ ಕಳೆದುಕೊಂಡ ಕ್ಷಣಕ್ಕೆ ಅಳಲು ಅವರು ಮುಂದಿನ ಕಾರ್ಯ ನೋಡಿದರು. ತಲೆಯೊಂದು ಸರಿಯಿದ್ದು ದೇಹ ಈ ಆಕಾರದಲ್ಲಿ ಇದ್ದ ಬಗ್ಗೆ ಅವರಿಗೆ ನೂರು ಯೋಚನೆಗಳು ಹೊಳೆಯುತ್ತಿದ್ದವು. ಈ ರೀತಿಯ ಜನ್ಮವ ಹಿಂದೆ ಹಣ್ಣು, ತರಕಾರಿ, ಪ್ರಾಣಿಗಳಲ್ಲಿ ಕಂಡವರಿಗೆ ಇಂದು ಮನುಷ್ಯನಲ್ಲಿ ಕಂಡಿದ್ದು ಅಚ್ಚರಿಯಾಗಿತ್ತು. ಅದರಲ್ಲೂ ವಯಸ್ಸಾದ ಸೂಲಗಿತ್ತಿ ಚೆಲುವಮ್ಮ ತನ್ನ ಅಷ್ಟು ಹೆರಿಗೆಯ ಅನುಭವದಲ್ಲಿ ಕೆಲವು ವಿಚಿತ್ರಗಳ ಕಂಡವಳು ಇದನ್ನು ಅದರಲ್ಲಿ ಒಂದು ಎಂದು ತೀರ್ಮಾನಿಸಿ ರಮ್ಯಳ ಮಡಿಲಿಗೆ ಹಾಕಿದಳು.

ಸಹಿಸಲಾರದ ನರಕಯಾತನೆಯಿಂದ ಈಗಷ್ಟೆ ಜೀವ ಉಳಿಸಿಕೊಂಡು ಹೊರಗೆ ಬಂದವಳಂತೆ ನಿಟ್ಟುಸಿರು ಬಿಡುವವಳ ಮಡಿಲಿಗೆ ಬಿದ್ದ ಈ ಕೂಸ ಕ್ಷಣ ಬೆಚ್ಚುವಂತೆ ಮಾಡಿತ್ತು. ಅದ ಮುಟ್ಟಲು ಕೈಗಳು ಮುಂದಾಗದೆ ತನ್ನ ಹೊಟ್ಟೆಯೊಳಗಿಂದ ಜಾರಿದ ಜೀವವೆಂದರೆ ಇದೇನಾ ಎಂಬಂತೆ ಬಾದಿಸುವ ನೋವಿನಲ್ಲೂ ಈ ವಿಚಿತ್ರಕ್ಕೆ ಅಳಲು ಶುರುಮಾಡಿದಳು. ಅದು ಹೆಣ್ಣೋ, ಗಂಡೋ ಎಂದು ಪರೀಕ್ಷಿಸಲು ಅಸಾಧ್ಯವಾಗುವಂತೆ ಕೂಸಿನ ದೇಹ ರೆಕ್ಕೆ ಕತ್ತರಿಸಿ ಎಸೆದ ಚಿಟ್ಟೆಯ ದೇಹದಂತೆ ಇತ್ತು. ಎಷ್ಟು ಪ್ರಯತ್ನಿಸಿ ಎತ್ತ ಉರುಳಿಸಿ ನೋಡಿದರು ಅದಕ್ಕೆ ಮನುಷ್ಯ ರೂಪದ ದೇಹವೆ ಇರಲಿಲ್ಲ. ಈ ಕಾರಣವಾಗಿ ಅದರ ಲಿಂಗ ಗುರುತಿಸುವಲ್ಲಿ ಸೋತವರು ಅದನ್ನ ಕೂಸು ಎಂದಷ್ಟೆ ಕರೆಯುತ್ತ ಅದಕ್ಕೆ ಗಂಡು, ಹೆಣ್ಣೆಂಬ ಯಾವುದೇ ಬಿರುದು ಕೂಡ ಹೋಗಲಿಲ್ಲ.

ರಮ್ಯಳಂತೂ ತನ್ನ ಕೂಸ ಕಂಡು ಬಿಕ್ಕುವುದ ನಿಲ್ಲಿಸದೆ ಇರಲು ಸೂಲಗಿತ್ತಿ ಚೆಲವಮ್ಮ “ಮುಚ್ಚೇ ಸಾಕು ಯಾವಳವಳು ನಿನ್ನ ಹೊಟ್ಟೆಯೊಳಗೆ ಜೀವ ಅಂತಾ ಒಂದು ಹುಟ್ಟಾದೆ ಅದಕ್ಕೆ ಖುಷಿ ಪಡು. ಏನೋ ದೇವ್ರ ಕೊಟ್ಟಿದ್ದು ಯಾವ ಜನ್ಮದ್ದು ಕರ್ಮವೋ ತೀರಸ್ಕಂಡ ಹೋಗ್ಲಿಕ್ಕೆ ಹುಟ್ಟಾದೆ ಹೋಗ್ಲಿ ಬಿಡು. ಇದರ ಅವತಾರ ಕಂಡ್ರೆ ಇದೇನ್ ಹೆಚ್ಚಿಗೆ ದಿನಾ ಬಾಳಕ್ಕಿಲ್ಲ ಇರೋತನ್ಕ ಇದ್ರ ಸೇವೆ ಮಾಡಿ ಪುಣ್ಯ ಕಟ್ಟಕೋ” ಎಂದು ಧೈರ್ಯ, ಸಮಾಧಾನ ಹೇಳಿದವಳೆ ತಾನು ಮತ್ತೊಮ್ಮೆ ಕೂಸ ಇಣುಕಲು ಅದು ಕಣ್ಣು ಮುಚ್ಚಿಯೇ ತನ್ನ ಪಾಲಿನ ಜೀವ ದ್ರವ್ಯ ಎದೆ ಹಾಲಿಗಾಗಿ ಹಂಬಲಿಸುತ್ತಿತ್ತು. ಈ ಲೋಕರೂಢಿ ಕ್ರಿಯೆ ಅರಿತುಕೊಂಡ ಚೆಲುವಮ್ಮಳು ಅದರ ಅವ್ವನಿಗೆ “ಅದಕ್ಕಷ್ಟು ಹಾಲುಣಿಸು” ಎಂದು ಹೊಂಬಣ್ಣದ ತುಟಿಗಳ ನಡುವೆ ತನ್ನ ಕಿರು ಬೆರಳ ತೂರಿಸಿದವಳು ಅದರ ಬೋಡುಗಳ ಸ್ಪರ್ಶಿಸಿದಳು. ಇದರಿಂದ ಆ ಕೂಸು ತನ್ನ ಅನುಭವಕ್ಕೆ ಏನ ಅನಿಸಿತೋ ಮೆಲ್ಲಗೆ ಅರುಚಿತು. “ಅಯ್ಯೋ ನನ್ನ ಕಂದಾ ಇದ್ಯಾವ ಕೇಡಿಗೆ ಹಿಂಗ್ ಹುಟ್ಟದಪ್ಪಾ, ಮೊಕ ನೋಡಿದ್ರೆ ಇಷ್ಟು ಮುದ್ದಾಗದೆ ಸರೀರ ನೋಡಿದ್ರೆ ಹುಳವಲ್ಲೋ” ಎಂದು ಚೆಲುವಮ್ಮ ಬೇಸರಸಿಕೊಳ್ಳುತ್ತ ತನ್ನ ಮನೆಯತ್ತ ನಡೆದಳು.

“ಇಂಥಾದ್ದು ಹುಟ್ಟದ್ದೆ ನಾ ಬಂಜೆ ಅನಸ್ಕಂಡಿದ್ರು ಆಯ್ತಿತ್ತು” ಎಂದು ರಮ್ಯ ಸಿಡರಾನೆ ಹೇಳಲೂ ಅವಳ ಅವ್ವ ಜಯಮ್ಮಳು ಕೂಸ ತನ್ನ ತೊಡೆ ಮೇಲೆ ಹಾಕಿಕೊಂಡಿದ್ದವಳು “ಥೂ..ಬೇವರ್ಸಿ ಬಿಡ್ತು ಅನ್ನೂ ನಿನ್ನ ಹೊಟ್ಟೆಯೊಳಗೆ ಒಂದು ಹುಳಾವಾದ್ರು ಹುಟ್ಟಾದೆ ಅದು ಗತಿಲ್ಲಿದೆ ಎಷ್ಟು ಜನ ಇಲ್ಲ” ಎನ್ನುತ್ತ ಜೋರಾಗಿ ಗದರಲು ರಮ್ಯ ತುಸು ಸಮಾಧಾನಿಸದವಳು “ಅವ್ವೋ ಇದ್ಹೆಂಗ ಸಾಕಾದು ಒಂದ್ ಕೈ, ಕಾಲು ಆಡಕ್ಕಿಲ್ಲ, ಹೆಣ್ಣಾ, ಗಂಡ ತಿಳಿಲಿಲ್ಲ” ಎಂದರೆ

ಜಯಮ್ಮ ಕೂಸು ಮಲಗಿದ ತೊಡೆ ಕುಣಿಸುತ್ತ ಅದರ ಮುಖ ಕಂಡವಳು “ಅಮ್ಮೀ ಇದ್ರ ಮೊಕ ಲಕ್ಷಣ ಕಂಡ್ರೆ ತಿಳಿಕಿಲ್ವಾ ಇದು ಗಂಡು ಕೂಸೇ. ನಿನ್ಗೆ ಆಗಲಿಲ್ಲ ಅಂದ್ರೆ ನಾ ಸಾಕ್ತೀನಿ ಸುಮ್ಕೀರು” ಎಂದವಳೇ ಕೂಸಿನ ದೇಹದ ಮೇಲೆ ಮುಚ್ಚಿದ ಬಟ್ಟೆ ತಗೆದು ನೋಡಲು ಅಲ್ಲಿ ಕೈ, ಕಾಲುಗಳೆಲ್ಲವು ಏಕವಾಗಿದ್ದವು. ಈ ಕೂಸು ಬೆಳದಂತೆ ಅವುಗಳು ಸಡಿಲವಾಗ ಬಹುದೆಂಬ ವಿಶ್ವಾಸದಲ್ಲಿದ್ದಳು ಜಯಮ್ಮ.

ರಮ್ಯಳಿಗೆ ಜನಿಸಿದ ಈ ನವಜಾತ ಹುಳುವಿನಂತ ಶಿಶು ಊರಲ್ಲದೆ ಇತರೆ ಅಕ್ಕ-ಪಕ್ಕದಲ್ಲೂ ಪ್ರಚಲಿತ ವಿದ್ಯಮಾನವಾಗಿತ್ತು. ಈ ಅಚ್ಚರಿಯ ನೋಡಲೆಂದು ಹಲವರು ಜಯಮ್ಮನ ಮನೆಯತ್ತ ಧಾವಿಸುತ್ತಿದ್ದರು. ರಮ್ಯಳಿಗೆ ಈ ಬಂದು, ಹೋಗುವ ಜನಗಳು ಅವರ ಮಾತುಕತೆಗಳ ಕೇಳಲೂ ತಲೆ ಸಿಡಿಯುವಂತೆ ಆಗುತ್ತಿತ್ತು. ಬರುವ ಪ್ರತಿಯೊಬ್ಬರು ಕೂಸ ಕಣ್ಣರೆಪ್ಪೆ ಮಿಟುಕಿಸಿದೆ ನೋಡುತ್ತ “ಇದೆನ್ ಇಚಿತ್ರ ತಲೆ ಮನ್ಸೊಂದು, ಮೈ ಹುಳುದ್ದು” ಎಂದೆಲ್ಲಾ ಈ ಹಿಂದೆ ತಾವು ಕಂಡ ಈ ಬಗೆಯ ಕೆಲವು ಹುಟ್ಟಗಳ ಜೊತೆಗೆ ಹೋಲಿಕೆ ಮಾಡಿಕೊಳ್ಳುತ್ತಿದ್ದರು.

 

ಕೆಲವರ ಕಣ್ಣು ಈ ಕೂಸಿಗೆ ಕಾರಣವಾದ ತಾಯಿ ರಮ್ಯಳ ಮೇಲೆ ಹೋಗಲು ಆ ಹಸಿಬಾಣಂತಿ ಕಿವಿಗೆ ಗಾಳಿ ತಾಗದಂತೆ ತಲೆಗೊಂದು ಸ್ಕಾಫ್ ಧರಿಸಿ ತೊಟ್ಟಿದ್ದ ನೈಟಿಗೆ ಸೋರುವ ಮೂಗಿನ ಸಿಂಬಳವನ್ನು, ಕಣ್ಣಿರನ್ನು ಒರೆಸಿಕೊಳ್ಳುತ್ತ ಗುಂಡಿಗಳಿಲ್ಲದ ಸ್ವೆಟರ್ನಿಂದ ತನ್ನ ಎದೆಗಳ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಎಷ್ಟು ಸೂಕ್ಷ್ಮವಾಗಿ ಗಮನಿಸಿದರು ಅವಳಲ್ಲಿ ಹುಳಕ್ಕೆ ಸಂಬಂಧಿಸಿದ ಯಾವೊಂದು ಗುರುತುಗಳು ಕಾಣಸಿಗಲಿಲ್ಲ. ಅವಳ ಮುಖ ಎಣ್ಣೆಗೆಂಪು ಬಣ್ಣದಲ್ಲಿ ಬಾಡಿದಂತೆ ಚಿಂತಾಕ್ರಾಂತವಾಗಿತ್ತು. ಆ ಕೂಸು ಮಾತ್ರ ಈ ಲೋಕ ವ್ಯವಹಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲದಂತೆ ತಲೆಯನ್ನ ಅತ್ತ, ಇತ್ತ ಹೊರಳಿಸುತ್ತ, ಹಸಿವಾದರೆ ಚೀರುತ್ತ, ನಿದ್ರೆ ಬಂದರೆ ಆಕಳಿಸಿ ಕಣ್ಣು ಮುಚ್ಚುತ್ತ ಒಂದೆಡೆ ಬಿದ್ದಿತ್ತು. ಅದರ ಕರುಳ ಬಳ್ಳಿಯ ತುಂಡು ಹುಳದಕಾರದ ದೇಹದಲ್ಲಿ ಇನ್ನೂ ನೇತಾಡುತ್ತಿತ್ತು.

ನೋಡಿ ಹೋದವರು ತಾವು ಕಂಡದ್ದನ್ನ ಅದ್ಭುತವು, ವಿಚಿತ್ರ, ವಿಶೇಷವು ಎನ್ನುವಂತೆ ಇತರರಿಗೆ ವರ್ಣಿಸಲು ಆಸಕ್ತಿದಾಯಕರಾದವರು ಇತ್ತ ಮುಖ ಮಾಡುತ್ತಿದ್ದರು. ಜಯಮ್ಮ ಬಂದವರ ಜೊತೆ ಅಷ್ಟು ಬಡಿದಾಡಿದವಳು “ನೀವ್ಗಳ್ ಕಂಡ್ ಏನಾಗ್ಬೇಕು. ನಿಮ್ಗೆ ಬೇರೆ ಕೇಮಿಲ್ವಾ ಹಸಿಬಾಣಂತಿ ಮನೆ ಬಂದ್ ಹಿಂಗ್ ನುಗ್ಗಿದ್ರೆ ಮುಟ್ಟು, ಚಿಟ್ಟು ಆದ್ರೇನ್ ಗತಿ” ಎಂದು ತನ್ನ ಪ್ರಹಾರ ಶುರುಮಾಡಲು ಅಲ್ಲಿಗೆ ಒಂದು ಹಂತಕ್ಕೆ ಸಂದರ್ಶಕರ ಸಂಖ್ಯೆ ಇಳಿಮುಖವಾಗಿತ್ತು.

ರಮ್ಯಳ ಜೊತೆಗೆ ತನ್ನ ಕೆಲಸ, ಕಾರ್ಯಗಳ ಬಿಟ್ಟ ಜಯಮ್ಮನು ಆ ಕೂಸಿನ ಸಲುವಾಗಿ ಹಗಲು, ರಾತ್ರಿಗಳ ಕಳೆಯ ತೊಡಗಿದಳು. ತನ್ನ ಅವ್ವ ಗದರುವ ತನಕ ಅಳುವ ಕೂಸಿಗೆ ಮೊಲೆ ಉಣಿಸದೆ ಆಕಾಶ ಕಳಚಿ ಬಿದ್ದವಳಂತೆ ಕುಳಿತವಳಿಗೆ ಜಯಮ್ಮ ಬೆನ್ನಿಗೆ ಬಲವಾಗಿ ಗುದ್ದಿ “ಏನ್ ದೆಯ್ಯ ಹಿಡ್ದಾದ ನಿನ್ಗೆ. ಮಕ್ಕಳಿಲ್ಲ ಅಂತಾ ಅಷ್ಟು ಗೋಳಾಡಿ ಈಗಾ ಹುಟ್ಟೀರಾ ಒಂದ್ ಕೂಸಾ ಕಾಡಪಾಲ ಮಾಡ್ತಿದ್ಯಾಲ್ಲ” ಎಂದು ಕೂಗಿಕೊಳ್ಳುವ ತನಕ ರಮ್ಯ ವಾಸ್ತವಕ್ಕೆ ಇಳಿಯುತ್ತಿರಲಿಲ್ಲ.

ರಮ್ಯ ಜಯಮ್ಮಳ ಒಬ್ಬಳೇ ಮಗಳು. ಅದು ಜಯಮ್ಮಳಿಗೆ ಮದುವೆಯಾಗಿ ಅದೆಷ್ಟೋ ವರ್ಷಗಳ ನಂತರ ಯಾವುದೋ ದೇವರ ವರ ಪ್ರಸಾದದಿಂದ ಹುಟ್ಟಿದವಳು. ಈ ಒಂದು ಕೂಸಿಗಾಗೆ ಜಯಮ್ಮ ಸಾಕಷ್ಟು ಬೇಡಿ ನೊಂದಿದ್ದವಳು ನಾನಾ ವಿಧದ ಹರಕೆ, ವ್ರತ, ಆಚರಣೆ ಕಂಡಿದ್ದು, ಕೇಳಿದ್ದೆಲ್ಲ ಮಾಡಿ ಕೊನೆಗೂ ಶತಯ ಗತಾಯ ಬಸುರಿಯಾಗಿದ್ದಳು. ಆ ದಿನಗಳಲ್ಲಿ ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಅಂಥೂ ಅವಳ ಹೊಟ್ಟೆಯೊಳಗೂ ಚಿಗುರೊಂದು ಮೊಳೆತದ್ದಕ್ಕೆ ಗಂಡನು ಸಂತಸ ವ್ಯಕ್ತ ಪಡಿಸಿದ್ದ. ಜಯಮ್ಮಳಿಗೆ ಹೆಣ್ಣು, ಗಂಡೆಂಬ ಭೇದವಿರಲಿಲ್ಲ. ಯಾವುದಾದರು ಸರಿ. ಕೊನೆಗೆ ಒಂದು ಹುಳ ಹುಟ್ಟಿದರು ಅದನ್ನು ಪ್ರೀತಿ, ಕಾಳಜಿಗಳಿಂದ ನೋಡಿಕೊಳ್ಳುವುದಾಗಿ ಎಲ್ಲೆಡೆ ಹೇಳಿಕೊಂಡವಳಿಗೆ ಕೆಲವರು ತಮಾಷೆಗಾಗೆ “ನಿನ್ಗೆ ಹುಳವೇ ಹುಟ್ಲಿ” ಎಂದು ಹೇಳಲೂ ಜಯಮ್ಮ ನಗೆಯಲ್ಲಿಯೇ “ಹಂಗೆ ಆಗ್ಲಿ ಬಿಡು ಹುಳ ಅಂದ್ರೆ ಅದೊಂದು ಜೀವ ಅಲ್ವಾ” ಎಂದು ತನ್ನ ಜೀವಪರವಾದವನ್ನು ಮಂಡಿಸುತ್ತಿದ್ದಳು.

 

ಗಂಡ ಸಣ್ಣ-ಪುಟ್ಟ ಕೂಲಿ ಮಾಡಿ ಹೇಗೋ ಸಂಸಾರ ಸಾಗಿಸುತ್ತಿದ್ದ. ಎಲ್ಲಾ ಹೊಟ್ಟೆ, ಬಟ್ಟೆಗೆ ನೇರವಾದಂತೆ ಒಂದು ಹಂತಕ್ಕೆ ಸುಸೂತ್ರವಾಗಿ ನಡೆಯುತ್ತಿತ್ತು. ಇಂಥಾ ಸಂದರ್ಭದಲ್ಲೆ ತುಂಬು ಬಸುರಿಯಾದ ಜಯಮ್ಮ ದಿನ ತುಂಬಿದಂತೆ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತ್ತಳು. ಅಲ್ಲಿಗೆ ಅವಳ ಬದುಕಿನಲ್ಲಿ ಹೊಸ ಅಧ್ಯಾಯ ಒಂದು ಶುರುವಾದಂತೆ ಆ ಕೂಸಿನ ಪಾಲನೆ, ಪೋಷಣೆ ಮಾಡುತ್ತ ಬಂದಳು. ಗಂಡ ಇದರ ನಡುವೆಯೇ ಒಂದು ರಾತ್ರಿಗೆ ತೀರ ಹೋಗಿದ್ದ. ಆಗಾ ರಮ್ಯಳ ವಯಸ್ಸು 6ವರ್ಷವಾಗಿತ್ತು. ಇನ್ನೇನೂ ಮುಗಿದವರ ಕತೆಯನ್ನ ಮುಂದುವರಸಲಾಗದ ಕಾರಣ ಅದನ್ನ ಅಲ್ಲಿಗೆ ಬಿಟ್ಟಿದ್ದೆ ಜಯಮ್ಮ ಬದುಕಿನ ಬಂಡಿಯಲ್ಲಿ ಒಂಟಿ ಎತ್ತಾಗಿ ಮಗಳ ಜವಾಬ್ದಾರಿ ಹೊತ್ತಳು.

ಅವಳು ಕಾಲದಿಂದ ಮಾಡಿಕೊಂಡು ಬಂದ ಕೆಲಸ ಜೀವನದ ಭದ್ರತೆ ಒದಗಿಸಿಕೊಟ್ಟಿತ್ತು. ರಮ್ಯಳು ಶಾಲೆ ಮೆಟ್ಟಿಲು ಹತ್ತಿದ್ದೆ ಒಂದಷ್ಟು ಅಕ್ಷರ ಕಲಿಯಲು ಅವಳ ತಲೆಗೆ ಮುಂದಿನದು ಹೋಗದಂತೆ 9ನೇ ತರಗತಿಗೆ ಬೇಡದ ನೆಪಗಳ ಮುಂದಿಟ್ಟುಕೊಂಡವಳೇ ಶಾಲೆಗೆ ವಿದಾಯ ಹೇಳಿದ್ದಳು. ಜಯಮ್ಮ ಬಲವಂತ ಮಾಡಲೋಗಲಿಲ್ಲ ಅವಳಿಗೆ ಮಗಳು ಇಷ್ಟು ಕಲಿತಿದ್ದೆ ದೊಡ್ಡ ವಿಷಯವಾಗಿತ್ತು. ಇನ್ನೂ ಮನೆ ಕೆಲಸ ಕಲಿಯಲಿ ಎಂದು ಸುಮ್ಮನಾದಳು. ಜಯಮ್ಮ ಗಟ್ಟಿ ಮುಟ್ಟಾದ ಹೆಂಗಸಾದ್ದರಿಂದ ಅವಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕಾಲ ಓಡಿದಂತೆ ರಮ್ಯಳಿಗೆ ಅಲ್ಲಿ, ಇಲ್ಲಿ ಹುಡುಕಿದ್ದೆ ಭೈರವನೆಂಬ ಒಬ್ಬ ಮನೆ ಅಳಿಯನನ್ನೆ ತಂದು ಮದುವೆ ಮಾಡಿದ್ದಳು. ಭೈರವ ಒಂದು ಕೋನದಲ್ಲಿ ಜಯಮ್ಮಳಿಗೆ ದೂರದ ಯಾವುದೋ ರಕ್ತ ಸಂಬಂಧ. ಮಗಳ ಇಲ್ಲಿಂದ ಇನ್ನೆಲ್ಲಿಗೋ ಕೊಡುವ ಬದಲು ಕಣ್ಮಿಂದೆಯೆ ಇರಲೆಂಬ ಅವಳ ಲೆಕ್ಕಚಾರವು ಇಲ್ಲಿ ಸರಿಯಾಗಿಯೇ ಫಲಿಸಿತ್ತು.

ಭೈರವ ಕಪ್ಪಗೆ, ಕುಳ್ಳಗಿದ್ದರು ಸಂಭವಿತನಾಗಿದ್ದು ದುಡಿದು ಗಳಸಿ ಬದುಕಬಲ್ಲ ಸ್ವಾಭಿಮಾನಿಯಾಗಿದ್ದ. ಇಬ್ಬರ ಜೋಡಿಯು ರೂಪ, ಬಣ್ಣ, ಆಕಾರ, ಗಾತ್ರಗಳಲ್ಲಿ ಹೇಳಿ ಮಾಡಿಸಿದಂತಿತ್ತು. ಅಲ್ಲಿಗೆ ಜಯಮ್ಮಳ ಒಂದು ದೊಡ್ಡ ಜವಾಬ್ದಾರಿ ಇಳಿದಂತಾದರು ಇಂತಿಪ್ಪಾ ಜೋಡಿಗೆ ಅದೇಕೋ ಮದುವೆಯಾಗಿ ಎರಡು ವರ್ಷಗಳು ಉರುಳಿದರು ಮಕ್ಕಳ ಭ್ಯಾಗವಿರಲಿಲ್ಲ. ಈ ಬಗ್ಗೆ ಜಯಮ್ಮನಿಗೆ ಅಂಥಾ ಭಯವಿರಲಿಲ್ಲ. ಇಬ್ಬರಿಗೂ ವಯಸ್ಸು ಚಿಕ್ಕದಾಗಿದ್ದರಿಂದ ಮುಂದೆ ತನ್ನಂತೆ ನಿಧಾನವಾಗಿಯಾದರು ಆಗುವ ಸಾಧ್ಯತೆಗಳಿವೆ ಎಂಬ ಭರವಸೆಯಿತ್ತು. ಆದರೆ, ರಮ್ಯಳಿಗೆ ಮಾತ್ರ ಏನೋ ಮುಜುಗರ. ತನ್ನ ಜೊತೆ ಮದುವೆಯಾದವರಿಗೆಲ್ಲ ಈಗಾಗಲೇ ಒಂದು ಕೂಸಿದ್ದು ಎರಡನೆಯದ್ದಕ್ಕೆ ಅಣಿಯಾಗಿದ್ದರು. ಅವರ ಜೊತೆಗಿನ ಒಡನಾಟವು ಇವಳನ್ನು ಪ್ರಚೋದಿಸಿದಂತೆ ಭೈರವನನ್ನು ಇನ್ನಿಲ್ಲದಂತೆ ರಮಿಸುತ್ತ ಹಗಲು, ರಾತ್ರಿಗಳ ಭೇದವಿಲ್ಲದೆ ಕೂಡುತ್ತಿದ್ದಳು. ಆದರೆ, ಇದ್ಯಾವುದು ಪ್ರಯೋಜನಕ್ಕೆ ಬರದೆ ದೇಹ ಸುಖಿಸುತ್ತಿತ್ತಾದರು ಮನಸ್ಸಿನ ಇಚ್ಛೆ ಮಾತ್ರ ಈಡೇರಿರಲಿಲ್ಲ. ಈ ಕಾರಣಕ್ಕೆ ಭೈರವನ ಕೆಲವು ಬಾರಿ ಅನುಮಾನಿಸಿ ಸಿಡುಕುತ್ತಿದ್ದಳು.

ಜಯಮ್ಮನ ಸೂಕ್ಷ್ಮಮತಿಗೆ ಮನೆಯೊಳಗಿನ ಪ್ರತಿ ವಿದ್ಯಮಾನಗಳು ಅರಿವಿಗೆ ಬರುತ್ತ ರಮ್ಯಳ ಒಂದಷ್ಟು ದೇವರು, ದಿಂಡಿರುಗಳ ತಿರುಗಿಸಿದಳು. ಅವಳಿಗೆ ಮಗಳ ಈ ಬಗೆಯ ಅವಸರವೇ ಏಕೆಂದು ಅರ್ಥವಾಗಿರಲಿಲ್ಲ. ಅವಳೊಳಗೆ ಏನೋ ಚಡಪಡಿಕೆ, ಆತಂಕ, ಭಯಗಳಿದ್ದವು. ಭೈರವ ಅವಳ ಮೇಲಿನ ಮೋಹದಿಂದ ಇವೆಲ್ಲವನ್ನು ಸಹಿಸಿಕೊಳ್ಳುತ್ತಲೆ ತಾನಷ್ಟು ಕಲಿತ ಪೋಲಿ, ಪುಂಡರ ಜೊತೆಗಿನ ಪಾಠಗಳ ರಮ್ಯಳ ಮೇಲೆ ಬಳಸುತ್ತಿದ್ದ. ಅವಳಿಗಿದು ತೀರ ಅಸಹ್ಯ, ಮುಜುಗರ ತರಿಸಿದರು ಮನದೊಳಗಿನ ಸುಪ್ತ ಬಯಕೆಯೊಂದು ಮಾತ್ರ ಅದಕ್ಕೆ ಅಡಿಯಾಳಾಗಿಸಿತ್ತು. ಅಂಥೂ ನಿರಂತರ ಪ್ರಯತ್ನವೂ, ಪ್ರಯೋಗವೂ, ಪೂಜಾಫಲವೂ ರಮ್ಯಳಿಗೆ ಮುಟ್ಟು ನಿಲ್ಲುವಲ್ಲಿ ಸಾರ್ಥಕಗೊಂಡಿತ್ತು.

 

ಭೈರವನಿಗೆ ಹುಟ್ಟಿದ ಕೂಸಿನ ಮೇಲೆ ಅಸಡ್ಡೆಯೇನು ಇರಲಿಲ್ಲ. ಆದರೆ, ಅದು ಈ ರೀತಿ ವಿಚಿತ್ರವಾಗಿ ಹುಟ್ಟಿದ್ದರ ಬಗ್ಗೆ ಒಂದಷ್ಟು ಪ್ರಶ್ನೆಗಳಿದ್ದವು. ಇದಕ್ಕೆ ಸ್ಪಷ್ಟಕಾರಣವಾಗಿ ತನ್ನ ಮೂಲ ವಂಶಜರ್ಯಾರಾದರು ಈ ಪೈಕಿಯವರ ಎಂದು ಗೊತ್ತಿದಷ್ಟನ್ನು ಶೋಧಿಸುತ್ತಿದ್ದ. ತಲೆಯೊಂದು ನೆಟ್ಟಗಿದ್ದು ದೇಹದ ಇತರೆ ಭಾಗಗಳೆಲ್ಲ ಕೂಡಿಕೊಂಡಂತೆ ಮುದ್ದೆಯಾಗಿದ್ದು ಹೇಗೆಂಬ ಯೋಚನೆಗಳು ಬರಲು ಅವನ ಜೊತೆಗಾರರು “ಆತ್ರಾ ಮಾಡ್ಕೊಂಡು ಎಡವಟ್ಟ ಮಾಡ್ಕಂಡಿದ್ಯಲ್ಲೋ ಅದಕ್ಕೆ ಹುಳಾ ಹುಟ್ಟಾದೆ. ಶಹಬಾಷ್ ಅಂತೂ ಹುಳಾ ಹುಟ್ಟಿಸೋ ತಾಕತ್ ಆದ್ರೂ ಆಯ್ತೆ ಬಿಡು ಮಗ್ನೇ ನಿನ್ಗೆ” ಎಂದೆಲ್ಲಾ ಕಿಚಾಯಿಸುತ್ತಿದ್ದರು. ಭೈರವ ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಅವನು ಈ ಪೋಲಿ ತಂಡದಲ್ಲಿ ಎಷ್ಟೋ ಜನಕ್ಕೆ ಇದರಪ್ಪನಂತ ಹೇಳಿಕೆಗಳ ನೀಡಿ ಸರಿಯಾಗಿ ಟಾಂಗ್ ಕೊಟ್ಟಿದ್ದ. ಆದ್ದರಿಂದ ಅವನ ಅಭಿಮಾನಕ್ಕೆ ಇಲ್ಲಿ ಅಂತಾ ಭಂಗವಿರಲಿಲ್ಲ.

ಕೂಸಾ ತಾನು ತೊಡೆ ಮೇಲೆ ಹಾಕಿಕೊಂಡವನು ಅಪ್ಪನ ಸುಖವ ಅನುಭವಿಸಿದನಾದರು ಇದು ಬೆಳದಂತೆ ಮುಂದೇನು ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ಕೈ, ಕಾಲುಗಳಿಲ್ಲದೆ ಬರೀಯ ತೆವಳುವುದೆ ಆದರೆ ಗತಿಯೇನು ಎಂಬ ಭೀತಿ ಕಾಡಿತ್ತು. ಅದರ ಜೊತೆಗೆ ಇದಕ್ಕೆ ಚಿಟ್ಟೆಯಂತೆ ರೆಕ್ಕೆ ಮೂಡಿ ಹಾರಿದರೆ ಹೇಗೆಂಬ ಕಲ್ಪನೆಯೂ ಬಂದಿತ್ತು. ಇವೆಲ್ಲವನ್ನು ತಲೆಯಲ್ಲಿಟ್ಟುಕೊಂಡೆ ಆ ಕೂಸನ್ನ ಭೈರವ ನೋಡುತ್ತಿದ್ದ. ಕೆಲವರು ಬಲವಾಗಿ ಹೇಳುತ್ತಿದ್ದ ಇಂಥಾ ಪ್ರಕೃತಿಗೆ, ಮನುಷ್ಯ ಕುಲಕ್ಕೆ ವಿರುದ್ಧವಾದ ಕೂಸುಗಳು ಹೆಚ್ಚು ದಿನ ಬದುಕುವುದಿಲ್ಲವೆಂಬ ಮಾತುಗಳು ಈ ಕೂಸಿನ ಚಟುವಟಿಕೆಗಳ ನೋಡಲು ಸುಳ್ಳಾದರೆ ಸಾಕೆಂದು ಅನಿಸುತ್ತಿತ್ತು.

ಗಂಡ ಈ ಬಗೆಯಾಗಿ ಕೂಸ ಗಮನಿಸುವುದ ಕಂಡ ರಮ್ಯಳಿಗೆ ತುಸು ಸಿಟ್ಟು ಬಂದಿದ್ದೆ “ಈ ಅವತಾರದಲ್ಲಿ ಇದ್ಯಾರು ಮಗಾ ಅಂದಾರು. ಮೊದ್ಲು ಸಾಯ್ಲಾಕು ಇದು, ನನ್ಗೆ ಬೇಡಾ ನೀನೇ ಸಾಕೋ” ಎಂದು ಗಂಡನಿಗೆ ರೇಗಲೂ ಅಲ್ಲೆ ಇದ್ದ ಜಯಮ್ಮನು ಇದಕ್ಕೆ ಪ್ರತಿಕ್ರಿಯೆಯಾಗಿ “ಇವಳ್ ಬಾಯಿಗೆ ಹುಳಾಬೀಳಾ ಹುಟ್ಟಿರೋ ಕೂಸ ಹೆಣ ಹೋಗ್ಲಿ ಅಂತಾಳಲ್ಲ. ಅದೊಂದು ಜೀವ ಇರೋತನ್ಕ ಹರಿದಾಡಿಕೊಂಡು ಇರ್ಲಿಬಿಡು” ಎಂದು ಹೇಳಲೂ ಭೈರವನಿಗೆ ಅತ್ತೆಯ ಈ ಮಾತು ಸರಿಯೆಂದು ಗೋಚರಿಸಿತು. ಆದರೆ, ರಮ್ಯಳಿಗೆ ಮಾತ್ರ ತನ್ನ ಕೂಸಿನ ಕಲ್ಪನೆಗೆ ತದ್ವಿರುದ್ಧವಾಗಿದ್ದ ಈ ಕೂಸನ್ನ ಉಳಿಸಿಕೊಳ್ಳಬೇಕೆಂಬ ಯಾವ ಇರಾದೆಗಳಿರಲಿಲ್ಲ. ಎಲ್ಲಾ ಮಕ್ಕಳಂತೆ ತನ್ನ ಕೂಸಿರದ ಕಾರಣ ಅದನ್ನ ಒಪ್ಪಿಕೊಂಡು ಮುನ್ನೆಡೆಯಲು ಸಿದ್ಧಳಿರಲಿಲ್ಲ. ಜಯಮ್ಮ ಮಾತ್ರ ತಾನೊಬ್ಬಳು ಅಪ್ಪಟ್ಟ ಜೀವವಾದಿ ಎಂಬಂತೆ ಪಣ ತೊಟ್ಟವಳು ಈ ಕೂಸಿನ ಉಳಿಸುಕೊಳ್ಳುವಿಕೆಗೆ ಬೇಕಾದ್ದ ಮಾಡಲು ನಿಶ್ಚಿಯಿಸಿದ್ದಳು.

ಅವಳಿಗೆ ಇದೊಂದು ಹಠವಾಗಿ ಮಾರ್ಪಟ್ಟು ಎಲ್ಲಾರ ನಿಂದನೆಗೆ ಒಳಾಗದ ಈ ಕೂಸು ಮುಂದೆ ಚೆನ್ನಾಗಿ ಬೆಳಸಿ ಅವರ ಉಬ್ಬೇರುವಂತೆ ಮಾಡಬೇಕೆಂಬ ಛಲ ಹುಟ್ಟಿತ್ತು. ರಮ್ಯಳನ್ನು ಯಾವುದಕ್ಕೂ ಕಾಯದಂತೆ ತಾನೇ ಆ ಕೂಸಿನ ಪಾಲಿಗೆ ಸಕಲವೂ ಆದವಳು ಅದ ಕಣ್ಣರೆಪ್ಪೆಯಂತೆ ಕಾಯುತ್ತಿದ್ದಳು. ದಿನ ಕಳೆದಂತೆ ಈ ವಿಚಿತ್ರ ಕೂಸಿನ ಸುದ್ದಿಯು ತಣ್ಣಗಾಗಿತ್ತು. ಆದರೆ, ಮುಂದೇನೆಂಬ ಕುತೂಹಲಗಳಿರಲೂ ಅದಕ್ಕೆ ಜಯಮ್ಮ ಉತ್ತರವಾಗಿ “ಅದು ಬೆಳದು ಆಡಾಕೆ ಬೀದಿಗೆ ಬತ್ತಾದೆ ನೋಡ್ತೀರಿ” ಎಂದಿದ್ದಳು. ಇನ್ನೂ ಈ ಕೂಸು ಕಂಡ ವೈದ್ಯಲೋಕವು ಅಚ್ಚರಿ ವ್ಯಕ್ತ ಪಡಿಸಿ ತನ್ನ ಕೈಲಾದ ಸೇವೆಯನ್ನ ಈ ಜೀವದ ಉಳಿವಿಗಾಗಿ ಮಾಡುವುದಾಗಿ ಹೇಳಿತ್ತು.

ಜಯಮ್ಮ ವೈದ್ಯಲೋಕವನ್ನು ಅಷ್ಟು ಬಲವಾಗಿ ನಂಬದವಳು ತನ್ನ ಅನುಭವ ಜನ್ಯದಿಂದ ಈ ಕೂಸಿಗೆ ಬೇಕಾದ ರಕ್ಷಣೆಗೆ ದೇವರು, ಪೂಜೆ, ಪುನಾಸ್ಕರ, ಮಾಟಮಂತ್ರಗಳಂತ ಇತರೆ ಕಾರ್ಯಗಳಲ್ಲಿ ನಿರತವಾದಳು. ರಮ್ಯಳಿಗೆ ಮಗ್ಗಿಲಿಗೆ ಬಿದ್ದ ಈ ಕೂಸ ದೂರ ತಳ್ಳುವ ಮನಸ್ಸಾಗದೆ ಯಾರು ಇಲ್ಲದೆ ಬಿಡುವದಾಗೆಲ್ಲ ಅದಾ ತೊಡೆಯ ಮೇಲೆ ಹಾಕಿಕೊಂಡವಳೇ ಸೂಕ್ಷ್ಮವಾಗಿ ಹಿಂದೆ, ಮುಂದೆ ತಿರುಗಿಸಿ ಅದರ ಕೈ, ಕಾಲುಗಳ ಬಿಡಿಸಲು ಸಾಧ್ಯವೇ ಎಂದು ನೋಡುತ್ತ ಅದಕ್ಕೆ ಪ್ರಯತ್ನಿಸಲು ಇದರಿಂದ ಆ ಕೂಸಿಗೆ ಆಗುವ ನೋವಿಗೆ ಅದು ಕೀಟಾರನೆ ಕಿರುಚಲು ಆ ಕೂಗಿಗೆ ಅವಳ ಜೀವ ನಲುಗಿದಂತೆ ಆಗುತ್ತಿತ್ತು. ಅದರಿಂದ ಅದನ್ನ ಎತ್ತಿ ಎದೆಗೆ ಅಪ್ಪಿ ಮುದ್ದಾಡುತ್ತಿದ್ದಳು.

ಅದೇಕೋ ದಿನ ಕಳದಂತೆ ಸುಲಭವಾಗಿ ಹುಟ್ಟಿದ್ದ ಕೂಸು ಈ ಲೋಕದ ನಂಟಿಗೆ ಹೊಂದಿಕೊಳ್ಳಲು ಸಾಕಷ್ಟು ಪ್ರಯಾಸ ಪಡುತ್ತಿತ್ತು. ಅದರೊಳಗೆ ಒಂದೊಂದೇ ಗುರುತಿಸ ಬಹುದಾದ ಕೆಲವು ಬದಲಾವಣೆಗಳು ಆಗುತ್ತಿದ್ದವು. ಇದರಿಂದ ಭೈರವನಿಗೆ ಮಗು ಉಳಿಯುವುದಿಲ್ಲವೆಂಬ ಅನುಮಾನಗಳು ಮೂಡಲು ಅತ್ತೆ ಜಯಮ್ಮ ಇದಾ ಸವಾಲಿನಂತೆ ಸ್ವೀಕರಿಸಿದವಳೇ ಸಾವಿನ ವಿರುದ್ಧ ತಾನೇ ಖುದ್ದು ಸೆಣಸುವಂತೆ ನಿಂತಳು. ಆ ಕೂಸಿನ ಜೀರ್ಣಕ್ರಿಯೆಯಲ್ಲಿ ತುಂಬಾ ವ್ಯತಾಸಗಳಾಗಿದ್ದು ಮಲಬದ್ಧತೆ ಕ್ರಮೇಣ ಅತಿಯಾಯಿತು. ದೇಹದ ಯಾವ ಭಾಗ ಅದನ್ನ ಹೊರ ಹಾಕಲು ಯೋಗ್ಯವಾಗಿದೆ ಎಂದು ಜಯಮ್ಮ ಸಾಕಷ್ಟು ಭಾರೀ ತಡಕಾಡಿದರು ಅದರ ಗುರುತು ಸಿಗಲಿಲ್ಲ. ಹಾಗೆ ಸಿಕ್ಕದ್ದರೆ ಆ ಜಾಗವನ್ನ ತನ್ನ ಕೆಲ ಅನುಭವಗಳಿಂದ ಸರಳಗೊಳಿಸಲು ಯೋಚಿಸಿದ್ದಳು. ತನ್ನ ಹಿಡಿದು ಕಾಡುವ, ಹಿಂಸಿಸುವ ಬಾದೆ ಯಾವುದೆಂದು ಹೇಳಲಾಗದೆ ಆ ಕೂಸು ಕೊಸರಾಡುತ್ತಿತ್ತು.

ಆಸ್ಪತ್ರೆ, ವೈದ್ಯರುಗಳೆಲ್ಲ ಈ ವಿಚಿತ್ರಕ್ಕೆ ಬೇರೆ, ಬೇರೆ ಕಾರಣಗಳ ನೀಡುತ್ತ ಜಾರಿಕೊಂಡಿದ್ದರು. ಹುಟ್ಟಿದ 3, 4 ದಿನ ಚೆನ್ನಾಗೆ ಇದ್ದ ಕೂಸು ಈಗಾ ಸಮಸ್ಯೆಗೆ ಸಿಲುಕಿದಂತೆ ಯಾತನೆ ಪಡಲು ಜಯಮ್ಮ ಅದನ್ನ ಸ್ವತಃ ತಾನೇ ಅನುಭವಿಸುವವಳಂತೆ ಅದರ ಉಸಿರಿಗೆ ಕಾವಲು ನಿಂತಳು. ರಮ್ಯಳಿಗೂ ಈ ಕೂಸು ಇನ್ನೂ ಉಳಿಯುವುದಿಲ್ಲವೆಂಬುದು ಖಾತ್ರಿಯಾಗಲು ಅವಳ ರೋಧನ ಹೆಚ್ಚಾಯಿತು. ಹಗಲು, ರಾತ್ರಿ ಜಯಮ್ಮ ತನ್ನ ಕೈಲಾದ ಮದ್ದು, ಮಾಟಗಳ ಮಾಡುತ್ತ ಆ ಕೂಸಿನ ಜೀವಕ್ಕಾಗಿ ಹರಸಾಹಸ ಪಡುತ್ತಿದ್ದಳು. ಅವಳಿಗೆ ಅದನ್ನ ಹೇಗಾದರು ಉಳಿಸಿಕೊಳ್ಳುವ ಅದಮ್ಯ ಬಯಕೆ. ಅದರ ಹಕ್ಕಿಮರಿಯಂಥಾ ಬಾಯಿ, ಸೇಬಿನಣ್ಣಿನ ಬೀಜದಂತ ಕಣ್ಣುಗಳು, ಎತ್ತಿಕೊಂಡರೆ ಜೋಲಾಡುವ ತಲೆ ಎಲ್ಲವ ನೋಡಿದಂತೆ ಜಯಮ್ಮ ಆ ಜೀವಕ್ಕಾಗಿ ಪ್ರಾರ್ಥಿಸುತ್ತಿದ್ದಳು. ರಮ್ಯಳು ನಿದ್ರಿಸುವಾಗ ಜಯಮ್ಮನೂ, ಜಯಮ್ಮ ನಿದ್ರಿಸುವಾಗ ರಮ್ಯಳು ಎಚ್ಚರವಾಗಿ ಆ ಕೂಸಿನ ಆರೈಕೆ ಮಾಡುತ್ತ ಜೀವ ವೃದ್ಧಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಅದಕ್ಕೆ ವಿರುದ್ಧವಾಗಿ ಆ ಕೂಸಿನ ಜೀವವು ವರ್ತಿಸುತ್ತ ತಾನಿವರ ಬಂಧನಕ್ಕೆ ಸಿಲುಕಿರುವುದು ಸ್ಪಷ್ಟವಾಗಿತ್ತು.

ಜಯಮ್ಮ ತನ್ನ ಜೀವವನ್ನೆ ಕೂಸಿಗೆ ಧಾರೆ ಎರೆಯುವಂತೆ ಏನೇನೋ ಪ್ರಸಂಗಗಳು ನಡೆಯಲು ಇದರಿಂದ ಜಯಮ್ಮಳ ದೇಹ ಕಳೆಗುಂದಿತ್ತು. ಹೀಗೆ ಸೋತ ದೇಹ ನಿದ್ದೆಗೆ ಶರಣಾಗಲು ರಮ್ಯ ತಾನು ಎಚ್ಚರವಾಗಿ ಕೂಸಿನ ಜೊತೆಗಿದ್ದಳು. ಅದು ಜಾಸ್ತಿ ಹೊತ್ತು ನಡೆಯಲಿಲ್ಲ ಆಯಾಸದ ಕಣ್ಣಗಳು ನಿದ್ದೆಗೆ ಒಳಗಾದೋ. ಸ್ವಲ್ಪ ಹೊತ್ತಿನ ನಂತರ ಎದ್ದು ಕೂಸ ಗಮನಿಸಿ ಮೂತ್ರಕ್ಕೆ ಅವಸರವಾಗಿ ಹೋಗಿ ಬರಲು ಕಾಲ ಸಂಪೂರ್ಣ ಬದಲಾಗಿತ್ತು. ಕೂಸಿನ ದೇಹ ತಣ್ಣಗಾದಂತೆ ಅವಳು ಕೂಗಿದ ಸದ್ದಿಗೆ ಜಯಮ್ಮ ಎದ್ದವಳೆ ಒಂದು ನಿದ್ದೆಯ ನಂತರ ಮನಸ್ಸು ತಹಬದಿಗೆ ಬಂದಂತೆ ಮಗಳನ್ನು, ಧೈರ್ಯವಾಗಿರುವಂತೆ ಸಂತೈಸಿದಳು. ಜಾವಕ್ಕೆ ಸಮೀಪವಿರುವಂತೆ ಕಂಡಿದ್ದೆ ಅಳಿಯನ ಮಗಳ ಜೊತೆಗಿರಲು ಹೇಳಿ ಸುತ್ತಿದ ಬಟ್ಟೆಯಲ್ಲಿ ಆ ತಣ್ಣಗಾದ ಮಾಂಸದ ತುಂಡ ಎತ್ತಿಕೊಂಡವಳೆ ಮಸಣದ ದಿಕ್ಕಿಗೆ ನಡೆಯುತ್ತ ಕರಗುತ್ತಿರುವ ಕತ್ತಲನ್ನು, ಮೂಡುತ್ತಿರುವ ಬೆಳಕನ್ನು ಒಟ್ಟು ಮಾಡಿದಂತಿರುವ ವಾತಾವರಣದಲ್ಲಿ ತನ್ನ ಜೀವಪರವಾದದ ಬಗ್ಗೆ ಕೂಸಿನ ಕಿವಿಯಲ್ಲಿ ಪಿಸುಮಾತು ಹೇಳುವಂತೆ ಏನೇನೋ ನುಡಿಯುತ್ತ ಲೋಕ ಎಚ್ಚರವಾಗುವ ಮುನ್ನವೆ ಕೂಸಿನೊಂದಿಗೆ ಮರೆಯಾದಳು.

‍ಲೇಖಕರು Avadhi Admin

3 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading