ಶಾಕುಂತಲೋಪಾಖ್ಯಾನ
ಎಂ ಆರ್ ಕಮಲಾ
ಅಪ್ಸರೆಯ ಮಗಳು,
ಕೂದಲೆಳೆಯಲ್ಲಿ, ಉಗುರ ತುದಿಯಲ್ಲೂ ಸೌಂದರ್ಯ!
ಆಶ್ರಮದ ತರು, ಲತೆಗು ಉಕ್ಕಿ ಬಂದು ಜೀವೋನ್ಮಾದ
ಧುಮ್ಮಿಕ್ಕಿ ಹರಿವ ಎದೆಯೀಗ ಹುಚ್ಚು ಹೊಳೆ!
ಪುರುಕುಲದ ಅರಸು ಬೇಟೆಗೆ ಬಂದವನು..
ಬೇಟೆಯಾಡಿಯೇ ಬಿಟ್ಟ
ಗಿಡದೊಂದಿಗೆ ಗಿಡವಾದವಳ, ಹುಲ್ಲೆ ಮರಿಯಾದವಳ
ಅಂಗುಲಂಗುಲವೂ ನಿಸರ್ಗವೇ ಆದವಳ!
ಉದ್ಯಾನ ಲತಾವಳಿಗಳ ಕೃತಕತೆಗೆ ಬೇಸತ್ತವನಿಗೆ
ವನಜ್ಯೋತ್ಸ್ನೆಯ ಒಡಲಲ್ಲಿ ಏನೋ ಉನ್ಮಾದ
ದುಷ್ಯಂತನ ಬಿಸಿಯಪ್ಪುಗೆಯಲ್ಲೂ ಶಕುಂತಲೆಗೆ ಮಾತ್ರ
ಜಿಂಕೆ ಮರಿಯ ಸೆಳೆತ!
`ಎಷ್ಟಾದರೂ ಅರಣ್ಯ ವಾಸಿಯಲ್ಲವೇ ನೀನು!’
ಮತ್ತೇರಿ ನಕ್ಕವನು ಉಂಗುರವಿಟ್ಟ, ನಡೆದೇ ಬಿಟ್ಟ
ಉಂಗುರದ ಒಂದೊಂದಕ್ಷರದ ಎಣಿಕೆಗೆ ಮುನ್ನ
ಬರುವನೆಂದವನು ಬರಲೇ ಇಲ್ಲ!
ಚಿತ್ರದಲಿ ಬರೆದ ಪ್ರತಿಮೆಯಾದಳು ಹುಡುಗಿ
ಬಸಿರಲ್ಲಿ ಮೊಳಕೆಯೊಡೆದ ಕುಡಿ, ತಿದಿಯೊತ್ತುವಾತಂಕ
ಚಿತ್ರದಲಿ ಬರೆದ ಪ್ರತಿಮೆಯಾದಳು ಹುಡುಗಿ
ದೂರ್ವಾಸನ ಶಾಪ ಎದೆ ತಟ್ಟಲಿಲ್ಲ, ಮನ ಮುಟ್ಟಲಿಲ್ಲ
ಗೆಳತಿ ಪ್ರಿಯಂವದೆ, ಎಷ್ಟೆಂದರೂ ಪ್ರಿಯಂವದೆ
ಸುಮ್ಮನಾದಳು
`ಮಲ್ಲಿಗೆಯ ಬಳ್ಳಿಗೆ ಬಿಸಿ ನೀರೆರೆವರೆ?’

ಕರ್ತವ್ಯ ಮುಖ ಕಣ್ವರಿಗೀಗ
ಆಶ್ರಮದ ಲತೆಯ ಅರಮನೆಗೆ ಹಬ್ಬಿಸುವಾಸೆ!
ಕೀಳಲಾಗದು ಹೆಜ್ಜೆ, ವನಜ್ಯೋತ್ಸ್ನೆ ಶಕುತಳೆಗೆ
ಬೇರು ಕಿತ್ತ ಭಾವ!
ಇತ್ತ ಹಿಮಕರ ಕುಲದರಸು
ಹಿಮವಂತನೆ ಆದ!
ನೆಚ್ಚಿಗೆಯ ಉಂಗುರವು ಶಚಿಯಲ್ಲಿ..
ಲಜ್ಜೆ, ಭಯ, ಆತಂಕ..ಕೊನೆಗೆ ಮುಸುಕು ತೆರೆದಳು
`ಅನಾರ್ಯ!’
ತಾಯ್ತನದ ಕರುಳು ಚುರ್ ಎಂದಿರಬೇಕು ಮೇನಕೆಗೆ
ಕಂಗೆಟ್ಟ ಹುಡುಗಿಗೊಂದಿಷ್ಟು ಆಸರೆ
ಆಸೆ, ಬದುಕು, ಕನಸುಗಳ ದಹಿಸಿಯೇ ಬಂದ
`ಸರ್ವದಮನ’!
ಪುರುಕುಲದ ಉತ್ತರಾಧಿಕಾರಿ, ಸಿಂಹದ ಮರಿ
ಧಾವಿಸಿ ಬಂದ ದುಷ್ಯಂತ
ದೂರ್ವಾಸನ ಶಾಪ, ಉಂಗುರದ ನೆಪ
ಒಡ್ಡಿ ನಿಂತವನ ನೋಡಿ ನಕ್ಕಳು!
ಚಿಗುರು ಬೆರಳಿಗೆ ಮತ್ತೆ ಉಂಗುರದ ಸಂಭ್ರಮ!
ಹಿಮಗಟ್ಟಿದ್ದ ಹುಡುಗಿ -ಅಲ್ಲಲ್ಲ ಪ್ರೌಡೆ
ತಣ್ಣಗೆ ನುಡಿದಳು
`ನನಗೆ ಈ ಉಂಗುರದಲ್ಲಿ ನೆಚ್ಚಿಗೆಯಿಲ್ಲ!’






Nice..
ಇಡೀ ಶಾಕುಂತಲವನ್ನೇ ಹತ್ತಾರು ಸಾಲುಗಳಲ್ಲಿ ಹಿಡಿದ ಬಗೆ ಸುಂದರ
good one..
ಉಂಗುರದಲ್ಲಿ,ತಾಳಿಯಲ್ಲಿ ಈ ಯಾವುದೇ ವಸ್ತುವಿನಲ್ಲಿ ನೆಚ್ಚಿಗೆ ಇಡುವಂತಾದ್ದು ಏನಿಲ್ಲ. ಇರುವುದೆಲ್ಲಾ ಆ ಸಂಕೇತಗಳಲ್ಲಿ ಸಮಾಜ ತುಂಬಿಸಿಟ್ಟ ಒತ್ತಡದಲ್ಲಿ,ಕಟ್ಟಳೆಯಲ್ಲಿ.ಕವನದ ಅಂತ್ಯ ಚೆನ್ನಾಗಿದೆ.
ಉಂಗುರವಿಟ್ಟ ಅರಸನಿಗೆಷ್ಟು ಶಕುಂತಲೆಯರೋ .. ಈ ಕಣ್ವರ ಮಗಳು ನೆನಪಾಗದಷ್ಟು..?
ದೂರ್ವಾಸರ ಶಾಪವೆಂಬುದು ಅವನಿಗೆ ವರವಾಗಿ ಒಂದು ನೆಪವಾಗಿರದೆ ಮತ್ತೇನು..!
ತಟಕ್ಕನೆ ನಂಬಿಬಿಡುವ ನಂಬಿಸಿಬಿಡುವ ಮಂದಿಯಿರುವನಕ ಹೀಗೆಯೇ ಸಾಗುತ್ತದೆ
“ಶಕುಂತಲೋಪಾಖ್ಯಾನ” !!
ಮನಮುಟ್ಟಿತು, ತಟ್ಟಿತು ಎದೆಯ.
ಉಷಾ ಫಾಟಕ್
ಚೆನ್ನಾಗಿದೆ.