ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ತಿಮ್ಮದಾಸುವಿನ ಪನ್ನೇರಳೆ ಮರ ಮತ್ತು ಪದ್ದಕ್ಕ ಎನ್ನುವ ಮುತ್ತೈದೆ

(ಇಲ್ಲಿಯವರೆಗೆ )

ಕೊಳದ ಬಳಿಯ ಪನ್ನೇರಳೇ ಮರದಲ್ಲಿ ಹಣ್ಣಾಗಿದೆ ಎನ್ನುವ ಸುದ್ಧಿಯನ್ನು ಕೂರೆ ಪಾರ್ವತಿ ಎಂಬ ಬ್ರಾಹ್ಮಣತಿ ಕಮಟು ವಾಸನೆಯ ತನ್ನ ಬಟ್ಟೆಯ ಜೊತೆ ಹೊತ್ತು ತಂದಾಗ ಎಲ್ಲರ ಕಣ್ಣುಗಳಲ್ಲೂ ಹೊಳಪನ್ನ ನೋಡಲಿಕ್ಕೇ ಸುತ್ತಲಿದ್ದ ವನದೇವತೆಗಳು ಕಿಕ್ಕಿರಿದು ನಿಂತವೇನೋ ಎನ್ನುವಂತೆ ಮರಗಳು ಬಾಗಿದ್ದವು. ಸ್ಕೂಲಿಗೆ ಹೋಗಲು ಹೆಗಲಿಗೆ ಚೀಲವನ್ನು ಸಿಕ್ಕಿಸಿ ಬಿಟ್ಟಿಯಾಗಿ ಸಿಕ್ಕಿದ್ದ ಹುಣಸೆಹಣ್ಣಿನ ಜೊತೆ ಮನೆಯಿಂದ ಯಾರಿಗೂ ಕಾಣದ ಹಾಗೆ ತಂದಿದ್ದ ಬೆಲ್ಲ ,ಜೀರಿಗೆ, ಉಪ್ಪು, ಮೆಣಸಿನಕಾಯಿಯನ್ನು ಕಲ್ಲ ಮೇಲೆ ಹಾಕಿ ಕುಟ್ಟುವಾಗಲೇ ಅದನ್ನ ನೋಡುತ್ತಿದ್ದ ಚಿಟ್ಟಿ, ಮಂಗಳಿ, ನಕ್ಕತ್ತು, ಸರೋಜಾ, ಆರೋಗ್ಯ ಹೀಗೆ ಎಲ್ಲರ ನಾಲಗೆಯ ರಸ ದ್ವಾರಗಳೆಲ್ಲಾ ತಟ್ಟನೆ ತೆಗೆದುಕೊಂಡಿದ್ದವು. ಪನ್ನೇರಳೇ ಮರದಲ್ಲಿ ಹಣ್ಣುಗಳು ಕೆಂಪಿನಿಂದ ದಂತದ ಬಣ್ಣಕ್ಕೆ ತಿರುಗಿರುವ ಪ್ರಕೃತಿಯ ವಿಸ್ಮಯಕ್ಕೆ ಪ್ರತಿಕ್ರಿಯೆ ಎನ್ನುವಂತೆ ಎಲ್ಲರೂ ಒಟ್ಟಿಗೆ `ಹೌದಾ!’ ಎಂದರು. ಹಾಗಾದರೆ ಈಗ ಕುಟ್ಟುತ್ತಿರುವ ಹುಣಸೆ ಕುಟ್ಟುಂಡೆಯನ್ನು ಏನು ಮಾಡುವುದು ಎಂದು ತಿಳಿಯದೇ ಎಲ್ಲರೂ ಕ್ಷಣ ಕಾಲ ಸ್ಥಬ್ದರಾದರು.
ನಕ್ಕತ್ತು ಮೈದುಸಾಬರಷ್ಟೇ ಗಂಭೀರವಾಗಿ ಫರ್ಮಾನನ್ನು ಹೊರಡಿಸೇ ಬಿಟ್ಟಳು, `ಕೆಡೋದಲ್ಲ ಕೊಳೆಯೋದಲ್ಲ ಕುಟ್ಟುಂಡೆಯನ್ನು ನಾಳೆಗಾದ್ರೂ ಎತ್ತಿಟ್ಟು ತಿನ್ನಬಹುದು. ಆದ್ರೆ ಪನ್ನೇರಳೆ ಹಾಗೆಯೇ? ಓಡಾಡುವ ಜನರ ಕಣ್ಣನ್ನು ಸೆಳೆಯದೇ ಬಿಟ್ಟೀತೇ? ಹಾಗೆ ಒಮ್ಮೆ ಕಣ್ಣಿನ ಆಳಕ್ಕೆ ಇಳಿಯಿತೆಂದರೆ ನಾಲಗೆಯನ್ನು ತಾಕಿ ಹೊಟ್ಟೆಯೊಳಗೆ ಇಳಿಯದಿದ್ದರೆ ನೋಡಿದ್ದು ಸಾರ್ಥಕವಾಗುವುದೇ?’. ನಕ್ಕತ್ತುವಿನ ಮಾತಿನಲ್ಲಿರುವ ಸತ್ಯವನ್ನು ಯಾರೂ ತೆಗೆದು ಹಾಕಲಿಲ್ಲ. ಪರಿಣಾಮ ಇವತ್ತು, ಈ ಕ್ಷಣವೇ ಪನ್ನೇರಳೇ ಮರಕ್ಕೆ ಲಗ್ಗೆ ಹಾಕುವ ನಿರ್ಧಾರಕ್ಕೆ ಬಂದ್ದಿದ್ದರು.
ಅಂಥಾ ಸುಮೂಹೂರ್ಥದಲ್ಲಿ ಸರೋಜ `ಯಾಕೋ ಬೇಡ ಅಸ್ನುತ್ತೆ ಕಣೇ’ ಎಂದು ಬಿಟ್ಟಿದ್ದಳು. ಇದಕ್ಕಿಂಥಾ ಅಪಶಕುನ ಯಾವುದಾದರೂ ಇದೆಯಾ? ಚಿಟ್ಟಿಗೆ ಪನ್ನೇರಳೆ ಹಣ್ಣಿನ ತಿರುಳಿನ ಘಮಲು ಮತ್ತು ರುಚಿ ನಾಲಿಗೆಯ ಮೇಲೆ ಆಗಲೇ ನಲಿದಾಡ ತೊಡಗಿತ್ತು. `ಏಯ್ ಸರೋಜಾ ಹಾಳೋದೋಳೇ ನಿಂಗೆ ಹೊತ್ತೂ ಗೊತ್ತು ಬೇಡವಾ? ಈಗಲಾ ಇಂಥಾ ಮಾತಾಡುವುದು?’ ಎಂದು ರೇಗಿ ಬಿಟ್ಟಳು ನಕ್ಕತ್ತು. ಸರೋಜಾಗೂ ಕೋಪ ಬಂದು `ನಾನು ಮಾತಾಡಲ್ಲಮ್ಮಾ ಆ ತಿಮ್ಮದಾಸ ಮಾತಾಡ್ತಾನೆ ಹೋಗು’ ಎಂದಳು. ಶನಿವಾರ ಆದ್ರೆ ಸಾಕು ಮನೆಯ ಮುಂದೆ ಗರುಡಗಂಬ, ಬವನಾಸಿಯನ್ನು ಹಿಡಿದು ಮನೆ ಮನೆಯ ಮುಂದೆ ಭಿಕ್ಷಕ್ಕೆ ಬರುತ್ತಿದ್ದ ತಿಮ್ಮದಾಸನ ಚಿತ್ರ ಎಲ್ಲರ ಕಣ್ಣು ಮುಂದೆ ಬಂದು ತೊಡೆತಟ್ಟಿ ಹೊರಟ ಮಲ್ಲರ ದಂಡು ಉತ್ಸಾಹವನ್ನು ಕಳೆದುಕೊಂಡು ಕುಸಿದು ಕೂತಿತ್ತು.
ತಿಮ್ಮದಾಸು ಶನಿವಾರ ಆಯ್ತಂದ್ರೆ ಭವನಾಶಿ ಮತ್ತು ಗರುಡಗಂಬವನ್ನು ಚೆನ್ನಾಗಿ ತೊಳೆದು ಜಾಗಟೆ ಬಾರಿಸುತ್ತಾ ಮನೆ ಮನೆಯ ಮುಂದೆ ನಿಂತು `ಗೋವಿಂದ ಗೋವಿಂದ’ ಎನ್ನುತ್ತಿದ್ದ. ತಮ್ಮ ಕರುಳ ಕುಡಿಗಳನ್ನು ಸ್ಕೂಲಿಗೆ ಕಳಿಸಲು ಸಿದ್ಧ ಮಾಡುತ್ತಿದ್ದ ಎಲ್ಲಾ ತಾಯಂದಿರೂ ಮಕ್ಕಳನ್ನು ಸಿದ್ಧ ಮಾದುವುದೋ ಇಲ್ಲ ಭಿಕ್ಷೆ ಹಾಕುವುದೋ ಎನ್ನುವ ಗೊಂದಲಕ್ಕೆ ಬಿದ್ದು ಮನೆಗೆ ಬಂದ ದಾಸಯ್ಯನನ್ನು ಹಾಗೆ ಕಳಿಸುವುದೇ ಎಂದು ತಮ್ಮ ಬೊಗಸೆ ಹಿಡಿಯುವಷ್ಟು ಅಕ್ಕಿಯನ್ನು ತಂದು ಹಾಕುತ್ತಿದ್ದರು. ಬವನಾಶಿಯನ್ನು ತುಂಬಿ ಬಗಲಿಗೆ ಹಾಕಿಕೊಂಡಿದ್ದ ಬಟ್ಟೆಯ ಚೀಲವನ್ನು ತುಂಬಿಕೊಂಡು, ಹಾಗೆ ತುಂಬುವಾಗ ಒಂದು ಕಾಳು ನೆಲಕ್ಕೆ ಬಿದ್ದರೂ ಬಿಡದೆ ಆರಿಸಿಕೊಂಡು ಹೋಗುತ್ತಿದ್ದ . ಬೊಗಸೆ ಅಕ್ಕಿಯನ್ನು ಹಾಕಿದ ತಾಯಂದಿರು ಮೂಗಿನ ಮೇಲೆ ಬೆರಳನ್ನ ಏರಿಸಿ ನಿಲ್ಲುತ್ತಿದ್ದರು. ಕೊನೆಗೆ ಈ ಜನ್ಮದಲ್ಲಿ ತಿಮ್ಮದಾಸ ಬದಲಾಗಲ್ಲ ಬಿಡು ಎನ್ನುತ್ತಿದ್ದರು.
ತಿಮ್ಮದಾಸ ಕಡಿಮೆ ಕುಳವೇನಲ್ಲ ಹದಿನೈದು ಎಕರೆ ಕೆರೆಯ ಪಕ್ಕದ ಜಮೀನಿನ ಮಾಲೀಕ. ಸಲೀಸಾಗಿ ಇನ್ನೂರು ಮೂಟೆ ಅಕ್ಕಿ ಬೆಳೆಯುತ್ತಿದ್ದ. ಅದನ್ನ ದಾಟಿ ಒಂದಿಷ್ಟು ತಕ್ಕಲು ಭೂಮಿ ಕೂಡಾ ಇತ್ತು ಆಅ ತಕ್ಕಲಿನ ತುಂಬಾ ಇಂಥಾದ್ದೇ ಹಣ್ಣಿನ ಮರಗಳು. `ಇದೆಲ್ಲಾ ಸುಮ್ನೆ ಬಂತಾ? ನಮ್ಮಪ್ಪ ರಂಗದಾಸ ಎನ್ನುವ ತಿಮ್ಮಪ್ಪನ ಮಹಾನ್ ದೈವ ಭಕ್ತ. ಅವನ ಭಕ್ತಿಗೆ ಮೆಚ್ಚಿ ಇಂದಿರಾ ಗಾಂಧಿಯಂಥಾ ಇಂದಿರಾಗಾಂಧೀಗೇ ಸ್ವಾಮಿ ಕನಸ್ಸಿನಲ್ಲಿ ದರುಶನ ಕೊಟ್ಟು, ನನ್ನ ಭಕ್ತನಾದ ರಂಗದಾಸ ಕಷ್ಟ ಪಡ್ತಾ ಇದ್ದಾನೆ. ಅವನ ಕಷ್ಟವನ್ನು ನನ್ನ ಕೈಲಿ ನೋಡಲಾಗುತ್ತಿಲ್ಲ ಅದಕ್ಕೆ ನೀನೇ ಏನಾದ್ರೂ ಪರಿಹಾರ ಕೊಡ್ಸಮ್ಮಾ ಅಂತ ಹೇಳಿದ್ನಂತೆ. ಇಂದಿರಮ್ಮನಂಥಾ ಇಂದಿರಮ್ಮನಿಗೆ ಭಗವಂತ ಹಿಂಗೆ ಆದೇಶವನ್ನು ಕೊಟ್ಟ ಮೇಲೆ ಏನು ಮಾಡಬೇಕೆಂದು ತೋಚದೆ ದೇವರಾಜ್ ಅರಸೂ ಅವ್ರನ್ನ ಕರ್ದು ಮಗಾ ಇಂಗೆಲ್ಲಾ ಆಗಿಬಿಟ್ಟಿದೆ ಈಗ ಏನು ಮಾಡೊದು ಅಂದ್ರಂತೆ. ನಮ್ಮ ಕರ್ನಾಟಕದ ಕೂಸು ರಂಗಸ್ವಾಮಿಯ ಮೇಲೆ ಆದ್ರದ ನೆಲದಲ್ಲಿ ನೆಲೆನಿಂತ ಭಗವಂತ ಇಂಥಾ ದಯೆಯನ್ನು ತೀರುಸ್ದ ಅಂದ ಮೇಲೆ ನಾವೆಲ್ಲಾ ಏನು ನರಮಾತ್ರರು ಅವನ ಆಜ್ಞೆಯನ್ನು ನೆರವೇರಿಸಬೇಕಲ್ಲವೇ ಅಂತ ಅರಸೂ ಇಂದಿರಮ್ಮನ ಆದೇಶದ ಮೇರೆಗೆ `ಉಳುವವನೇ ಭೂಮಿಯ ಒಡೆಯ’ ಎಂದು ಆದೇಶವನ್ನು ಹೊರಡಿಸಿದ್ರು. ಅಂಥಾ ಹೊತ್ತಲ್ಲಿ ಗೂರಂದ ಹಾಸಿಗೆಯನ್ನು ಹಿಡಿದ ಬ್ರಾಮ್ರು ಮಂಜಣ್ಣನವರ ಅರ್ಧ ಭೂಮಿಯನ್ನ ರಂಗದಾಸನೇ ಮಾಡ್ತಾಯಿದ್ದ. ಮಂಜಣ್ಣನವರಿಗೆ ಗಂಡು ಸಂತಾನ ಇಲ್ಲದ್ದರಿಂದ ಹೆಣ್ಣು ಮಕ್ಕಳಿಗೂ ಬೇಕಾದಷ್ಟು ಆಸ್ತಿ ಇದ್ದಿದ್ದರಿಂದ ಯಾರಿಗೂ ಅನ್ಯಾಯವಾಗದಂತೆ ನಮ್ಮಪ್ಪನಿಗೆ ಭಗವಂತ ಹದಿನೈದು ಎಕರೆ ಜಮೀನನ್ನು ಹೀಗೆ ಕೊಡಿಸಿಬಿಟ್ಟ’ ಎಂದು ಹರಿಕಥೆಯ ಶೈಲಿಯಲ್ಲೇ ತನ್ನ ಕಥೆಯನ್ನು ಹೇಳುತ್ತಿದ್ದ. ಅವನ ಕಥನ ಶೈಲಿಗೆ ಊರಿಗೆ ಊರೆ ತಲೆ ತೂಗಿದರೂ ಎಲ್ಲಿಯ ಇಂದಿರಾಗಾಂಧಿ? ಎಲ್ಲಿಯ ತಿಮ್ಮಪ್ಪ? ಎಲ್ಲಿಯ ರಂಗದಾಸ? ಹೀಗಿದ್ದೂ ಇಷ್ಟೆಲ್ಲಾ ವ್ಯಾಪಾರ ಜಗತ್ತಿನಲ್ಲಿ ನಡೆಯುವುದಾದರೂ ಹೇಗೆ? ನಿನಗೆ ಇದೆಲ್ಲಾ ಯಾರಯ್ಯ ಹೇಳಿದ್ರು ಯಾವ ಪುಸ್ತಕದಲ್ಲಿ ಇದೆ ಅಂದ್ರೆ `ಸತ್ಯ ಗೊತ್ತಾಗೋಕ್ಕೆ ಯಾರಾದ್ರೂ ಯಾಕ್ ಹೇಳ್ಬೇಕು ಹೇಳಿ? ನಮ್ಮಪ್ಪನಿಗೆ ಇದೆಲ್ಲಾ ಕಣ್ನ ಮುಂದೆ ಬರ್ತಾ ಇತ್ತು. ವಿಷ್ಯ ಇಷ್ಟು ಇದ್ರ ಮೇಲೆ ಪ್ರಶ್ನೆ ಬೇಡ’ ಎನ್ನುತ್ತಿದ್ದ.
ಇಷ್ಟೇ ಆಗಿದ್ದಿದ್ರೆ ಚಿಟ್ಟಿಯ ಸೈನ್ಯ ಹೀಗೆ ಕುಸಿದು ಪನ್ನೇರಳೆ ಆಸೆಯನ್ನು ಬಿಡಬೇಕಿರಲಿಲ್ಲ. ಭಿಕ್ಷೆಗೆ ಹಾಕಿದ್ದ ಅಕ್ಕಿಯ ಕಾಳೊಂದು ಅಚಾನಕ್ ಆಗಿ ನೆಲಕ್ಕೆ ಜಾರಿ ಬಿದ್ದಾಗ ಅದನ್ನು ಹುಡುಕಿಬಿಡುತ್ತಿತ್ತೋ ಅಂಥಾ ಹದ್ದಿನ ಕಣ್ಣಿನ ತಿಮ್ಮದಾಸ ತನ್ನ ಜಮೀನಿನ ಒಂದೇ ಒಂದು ಹಣ್ಣನ್ನು ಯಾವ ಗಿಳಿ ಕಾಗೆಯೂ ಎತ್ತಿಕೊಂಡು ಹೋಗಬಾರದು, ಕುಕ್ಕಬಾರದು ಎಂದು ಮನೆ ಮಠ ಬಿಟ್ಟು ಕಾವಲು ಕಾಯುತ್ತಿದ್ದ. ಕಾಯಿ ಸ್ವಲ್ಪ ಬಲಿತ ತಕ್ಷಣವೇ ಬ್ಯಾರಿಯ ಹತ್ತಿರಕ್ಕೆ ಹೋಗಿ ವ್ಯಾಪಾರ ಕುದುರಿಸಿಕೊಂಡು ಬಂದು ಬಿಡುತ್ತಿದ್ದ. ಹಾಗಾಗಿ ಅವನ ಕಣ್ಣನ್ನು ತಪ್ಪಿಸಿ ತೋಟದೊಳಗೆ ನುಗ್ಗಿ ಪನ್ನೇರಳೆಯನ್ನು ಕದಿಯುವುದಾದರೂ ಹೇಗೆ? ಹೀಗೆ ಯೋಚಿಸುವುದರಿಂದ ಪನ್ನೇರಳೆ ಬ್ಯಾರಿಯ ಗಾಡಿಯನ್ನು ಸೇರಿ ಮಾರ್ಕೆಟಲ್ಲಿ ಬಿಕರಿಯಾಗಿ ಹೋಗುತ್ತದೆ. ಸಮಯ ಕಡಿಮೆ ಇರೋದ್ರಿಂದ ಹೇಗಾದ್ರೂ ಸರಿ ಆ ಹಣ್ಣುಗಳನ್ನು ತಿಂದೇ ತೀರಬೇಕು ಎನ್ನುವ ನಿರ್ಧಾರಕ್ಕೆ ಬಂದ ಅವರಲ್ಲಿ ಒಂದು ದೃಢ ನಿರ್ಧಾರ, ಆತ್ಮ ವಿಶ್ವಾಸ ಮನೆಮಾಡಿತ್ತು. ಇಷ್ಟೆಲ್ಲಾ ನಿರ್ಧಾರಕ್ಕೆ ಬರುವ ಹೊತ್ತಿಗೆ ಚಿಟ್ಟಿಯ ಅಮ್ಮ ಅಳುತ್ತಿದ್ದ ಪುಟ್ಟಿಯನ್ನು ಕರೆದುಕೊಂಡು ಬಂದು `ಏಯ್ ಚಿಟ್ಟಿ ಇವಳನ್ನ ಕರದ್ಕೊಂಡ್ ಹೋಗೇ’ ಎಂದು ಬಿಟ್ಟು ಹೋದಳು. ತಮ್ಮ ಮಹತ್ವದ ನಿರ್ಧಾರಕ್ಕೆ ಹೀಗೊಂದು ಅಡ್ಡಿ ಒದಗಿ ಬರುತ್ತದೆ ಎನ್ನುವ ಊಹೆ ಕೂಡ ಇಲ್ಲದ ನಕ್ಕತ್ತು, ಸರೋಜಾ, ಮಂಗಳಿ, ಆರೋಗ್ಯ ಕೊನೆಗೆ ಭಾರತಿ ಕೂಡಾ ಚಿಟ್ಟಿಯನ್ನು ದುರುದುರನೆ ನೋಡತೊಡಗಿದರು. ಕಡ್ಡಿತುಂಡಾಗುವಂತೆ `ಏಯ್ ಚಿಟ್ಟಿ ನೀನ್ ಬರೋದ್ ಬೇಡ.ನಿನ್ನ್ ತಂಗೀನ ನೀನೇ ನೋಡ್ಕೋ, ಇವಳೇನಾದ್ರೂ ಅತ್ತು ತಿಮ್ಮದಾಸು ಬಂದು ನಮ್ಮನ್ನೆಲ್ಲಾ ಹೊಡುದ್ರೆ ಮಾತ್ರ ನಾವ್ ಸುಮ್ನೆ ಇರಲ್ಲ’ ಎಂದಳು ಆರೋಗ್ಯ. ಚಿಟ್ಟಿ ಪುಟ್ಟಿಯನ್ನು ಬೈಯ್ಯಲಾರದೆ, ಬಿಟ್ಟೂ ಹೋಗಲೂ ಆರದೆ ನಿರಾಸೆಯಿಂದ ಅವಳ ಕೈ ಹಿಡಿದು ನಡೆಸಿಕೊಂಡು ಹೊರಟಳು. ಅಷ್ಟರಲ್ಲಿ ಎಲ್ಲರೂ ಅವಳಿಗಿಂತ ಎಷ್ಟೋ ಮುಂದಕ್ಕೆ ನಡೆದು ಬಿಟ್ಟಿದ್ದರು.
ಅತ್ತಿತ್ತ ನೋಡುತ್ತಾ ಮರವನ್ನು ಸಮೀಪಿಸಿದಾಗ ಇನ್ನೂ ಸ್ಕೂಲು ಬೆಲ್ಲು ಹೊಡೆದಿರಲಿಲ್ಲ. ಆಕಡೆಗೆ ಚನ್ನೆಗೌಡರ ಮಗ ಚಂದ್ರೇಗೌಡ ಬೆಳಗಾನ ಎದ್ದು ಅಪ್ಪನ ಆಣತಿಯಂತೆ ಮುಖ ತೊಳೆದು ಊರೆಲ್ಲಾ ಕಾಣುವಂತೆ ಈಬತ್ತಿಯನ್ನು ಹಚ್ಚಿಕೊಂಡು ನಡೆದುಬರುತ್ತಿದ್ದ. ಮುಖದ ಎರಡೂ ಬದಿಯಲಿ ಸುರಿಯುತ್ತಿದ್ದ ಹರಳೆಣ್ಣೆ ಎಳೆ ಸೀದಾ ಕುತ್ತಿಗೆಯನು ಹಾದು ಕಾಲರ್ನ ಮೇಲೆ ಬೀಳುತ್ತಿತ್ತು. ಹಾಡು ಹೇಳೋ ಎಂದ್ರೆ ಸಾಕು `ಹಿಟ್ಟು ಮಾಡಿ ಸೊಪ್ಪುಮಾಡಿ ಎಲೆ ನಾರಿ ಹಿಟ್ಟಿಕ್ಕದೆತ್ತಪೋದೇ’ ಎನ್ನುತ್ತಾ ತನ್ನ ಸೊಣಕಲು ಕೈಕಾಲುಗಳನ್ನು ಆಡಿಸುತ್ತಾ ಹಾಡುತ್ತಾ ತನ್ಮಯನಾಗುತ್ತಿದ್ದ. ವಾರದ ದಿನ ಮಾತ್ರ ಅವನ ಮೈ ನೀರನ್ನ ಕಾಣಿಸಿಕೊಂಡು ನಳನಳಿಸುತ್ತಿತ್ತು . ಇಂಥಾ ಚಂದ್ರೇಗೌಡನನ್ನು ಚಿಟ್ಟಿ ಒಮ್ಮೆ ಹೌದೇನೋ? ಎಂದು ಹೇಳಿಬಿಟ್ಟಿದ್ದಳು. ಚಂದ್ರೇಗೌಡನಿಗೆ ಸಿಟ್ಟು ಬಂತು `ನಾವು ಬ್ರಾಮ್ರ ಥರ ದಿನ ಮೈಲಿಗೆ ಆಗಲ್ಲ. ಅದ್ಕೆ ದಿನಾ ಸ್ನಾನ ಮಾಡಲ್ಲ’ ಎಂದು ರೇಗಿ ಬಿಟ್ಟಿದ್ದ. ಚಿಟ್ಟಿಗೆ ತಾನಾದರೂ ಯಾಕೆ ಹೀಗೆ ಅವನನ್ನು ಕೇಳಿದೆ ಎಂದು ವ್ಯಥೆಯಾಗಿತ್ತಾದರೂ ಏನೂ ಮಾಡುವ ಹಾಗಿರಲಿಲ್ಲ . ಆಮೇಲೆ ಅವನನ್ನು ಮಾತಾಡಿಸುವ ಧೈರ್ಯ ಕೂಡ ಮಾಡಿರಲಿಲ್ಲ. ಸ್ಕೂಲಿಗೆ ಹೊರಟ ಅವನು ಚಿಟ್ಟಿ ಮತ್ತವ್ಳ ತಂಗಿ ಪುಟ್ಟಿಗೆ ಎದುರಾದ. ಅವನ ಮುಖ ಲಕ ಲಕ ಅಂತ ಹೊಳಿತಾ ಇತ್ತು. ಅವನ ಹಣೆಯ ಮೇಲೆ ಎಂದಿಗಿಂತ ಈಬತ್ತಿ ಹೆಚ್ಚು ಢಾಳಾಗಿತ್ತು. ಬಂದವನೇ ಚಿಟ್ಟಿಯ ಮುಂದೆ ನಿಂತು `ನೋಡೇ ನಾನಿವತ್ತು ಸ್ನಾನ ಮಾಡಿ ಬಂದಿದ್ದೀನಿ’ ಎಂದುಬಿಟ್ಟ. ಅವನ ಮಾತನ್ನ ಕೇಳಿ ಚಿಟ್ಟಿಗೆ ನಗು ಬಂತಾದರೂ, ತಟ್ಟನೆ ಏನೋ ಹೊಳೆದಂತಾಗಿ `ಚಂದ್ರಣ್ಣ ನಿನ್ನ ಬಗೆ ನಾನು ಹಾಗೆ ಮಾತಾಡಿದ್ದು ತಪ್ಪು ಅಂತ ಗೊತ್ತಾಯ್ತು. ನೋಡು ಇನ್ಯಾವತ್ತೂ ನಿನ್ನ ಬಗ್ಗೆ ಹೀಗೆಲ್ಲಾ ಮಾತಾಡಲ್ಲ, ಆದ್ರೆ ನನಗೆ ಒಂದು ಸಹಾಯ ಮಾಡು’ ಎಂದಳು. `ತಪ್ಪಾಯ್ತು’ ಅನ್ನೋ ಪದ ಚಿಟ್ಟಿಯ ಬಾಯಿಂದ ಬಂದಿದ್ದೇ ತಡ ಚಂದ್ರೇಗೌಡನ ಮನಸ್ಸು ಕರಗಿ ಹೋಯ್ತು, ` ಆಯ್ತು ಬಿಡು ಅದೇನಂತ ಹೇಳು? ಎಂದ. ನಾನು ಮನೇಲಿ ಒಂದು ಪುಸ್ತಕ ಬಿಟ್ಟು ಬಂದಿದ್ದೀನಿ. ಅದನ್ನ ತರೋಕ್ಕೆ ಹೋಗ್ಲೇ ಬೇಕು ಇಲ್ಲಾಂದ್ರೆ ಮೇಷ್ಟ್ರ ಹತ್ರ ಬೈಸಿಕೊಳ್ಳಬೇಕು. ನೀನು ಹೇಗಿದ್ರೂ ಸ್ಕೂಲಿಗೆ ತಾನೆ ಹೋಗ್ತಾ ಇರೋದು? ಇವಳನ್ನ ನಿನ್ನ ಜೊತೆ ಕರೆದುಕೊಂಡು ಹೋಗು’ ಎಂದು ಬಿಟ್ಟಳು. ಪಾಪ ಅನ್ನಿಸಿ ಚಂದ್ರೇ ಗೌಡ ಬೇರೆ ಏನನ್ನೂ ಹೇಳದೆ` ಬಾ ಪುಟ್ಟಿ’ ಎನ್ನುತ್ತಾ ತನ್ನ ಸಣಕಲು ಕಪ್ಪುಕೈಗಳನ್ನು ಚಾಚಿ ಅವಳನ್ನು ಕರೆದುಕೊಂದು ಹೊರಟ. ಚಿಟ್ಟಿಗೆ ದೊಡ್ದ ನಿರಾಳತೆ. ಇಷ್ಟು ಹೊತ್ತಿಗೆ ಎಲ್ಲರೂ ಮರಕ್ಕೆ ಲಗ್ಗೆಯಿಟ್ಟು ಹಣ್ಣುಗಳನ್ನು ತಿನ್ನುತ್ತಿರಬಹುದು ಎನ್ನುವ ಊಹೆಯೇ ಅವಳ ಹೊಟ್ಟೆಯಲ್ಲಿ ಸಂಕಟವನ್ನು ತುಂಬಿತು. ತಡ ಮಾಡದೆ ಚಿಟ್ಟಿ ಅಲ್ಲಿಂದ ಓಡಿದಳು.
ಆಗಲೇ ನಕ್ಕತ್ತು, ಮಂಗಳಿ, ಭಾರತಿ ಎಲ್ಲಾ ಮರದ ಮೇಲೆ ಇದ್ದರು. ಮರವನ್ನು ಹತ್ತಲು ಬಂದ ಚಿಟ್ಟಿಗೆ ನಕ್ಕತ್ತು `ಲೇ ಎಲ್ಲಾ ಮರ ಹತ್ತಿದ್ರೆ ಕಾಯನ್ನ ಹುಡುಕೋಯರ್ಾರೇ? ಅಲ್ಲೇ ನಿಂತ್ಕೊಂಡು ಎಲ್ಲಿ ಕಾಯಿದೆ ಅಂತ ಹೇಳು. ನಿಂಗೂ ಇದ್ರಲ್ಲಿ ಸಮಾಪಾಲು’ ಎಂದಳು. ಧಾರಾಳವಾಗಿ ಮರದ ತುಂಬಾ ಹರಿದಾಡುತಿದ್ದ ಕೆಂಜಗಗಳು ಲಂಗದ ಒಳಗನ್ನು ಪ್ರವೇಶಿಸಿ ಎಲ್ಲೆಂದರಲ್ಲಿ ದಾಳಿ ಇಟ್ಟರೂ ಲೆಕ್ಕಿಸದೆ ಆಗೀಗ ಕಚ್ಚಿದ ಕಡೆ ಕೆರೆದುಕೊಳ್ಳುತ್ತಾ ತಮ್ಮ ಕೆಲಸವನ್ನು ಮುಂದುವರೆಸಿದ್ದರು ಎಲ್ಲರೂ. ಮರವನ್ನು ಹತ್ತಿ , ಕೈಗೆಟುಕದ ಹಣ್ಣುಗಳನ್ನು ಕಷ್ಟಪಟ್ಟು ಎಟುಕಿಸಿಕೊಂಡು, ಲಂಗದ ತುದಿಯಿಂದ ಅದನ್ನು ಒರೆಸಿಕೊಂಡು ತಿನ್ನುವ ಸಂತೋಶವೇ ಬೇರೆ. ಅಂಥಾ ಸಂತೋಷವನ್ನು ಕಳೆದುಕೊಂಡಿದ್ದಕ್ಕೆ ಚಿಟ್ಟಿಗೆ ತುಂಬಾ ನೋವಾಯಿತು. ಆದ್ರೂ ಸಮಾಪಾಲು ಎನ್ನುವ ಮಾತು ಅವಳ ಮನಸ್ಸಿನಲ್ಲಿ ಅಲ್ಪ ಪರಿಣಾಮವನ್ನು ಬೀರಿ `ಆಯ್ತು’ ಎನ್ನುವ ತೀಮರ್ಾನಕ್ಕೆ ಬಂದು `ಅಲ್ಲಿ ಇಲ್ಲಿ’ ಎನ್ನುತ್ತಾ ಕತ್ತೆತ್ತಿ ನೋಡಿ ಹೇಳತೊಡಗಿದಳು. ಹೀಗೆ ಕತ್ತೆತ್ತಿ ನೋಡುವಾಗ ಆಕಸ್ಮಿಕವಾಗಿ ಮಂಗಳಿಯ ಕೆಳಗೆ ನಿಂತಳು. ಹಾಗೆ ನಿಲ್ಲುವುದಕ್ಕೂ ಮಂಗಳಿ ಇನ್ನೊಂದು ಕೊಂಬೆಗೆ ಕಾಲನ್ನು ನೀಡಿ ದಾಟುವಾಗ ಗಾಳಿ ಬೀಸಿ ಅವಳ ಲಂಗಹರಡಿಕೊಳ್ಳುವುದಕ್ಕೂ ಸರಿಯಾಯಿತು. ಕೆಳಗೆ ನಿಂತು ಅಲ್ಲಿ ಇಲ್ಲಿ ಎಂದು ಹೇಳುತ್ತಿದ್ದ ಚಿಟ್ಟಿಯ ಬಾಯಲ್ಲಿ ಅಯಾಚಿತವಾಗಿ `ಛೀ’ ಎನ್ನುವ ಪದ ಅವಳಿಗೇ ಗೊತ್ತಿಲ್ಲದೆ ಬಂತು. ಮಂಗಳಿಗೆ ಅವಳ್ಯಾಕೆ ಹಾಗಂದಳು ಎನ್ನುವುದು ಅರ್ಥವಾಗಿ ಕೋಪ ಮಾಡಿಕೊಂಡು ಭರ್ರೆನೆ ಮರದಿಂದ ನೆಲಕ್ಕೆ ಇಳಿದಳು. ಯಾರು ಕರೆದರೂ ಮಾತನ್ನು ಕೇಳದೆ ಅಷ್ಟು ದೂರಕ್ಕೆ ನಡೆದು ಬಿಟ್ಟಿದ್ದಳು.
`ಕಾಣದ್ದೇನಿತ್ತು ಅದ್ರಲ್ಲಿ ಹೋಗೇ ಪಾಪಾ ಅವಳಿಗೆ ಬೇಜಾರಾಗಿರುತ್ತೆ’ ಎಂದಳು ಆರೋಗ್ಯ ಚಿಟ್ಟಿಗೆ. ಚಿಟ್ಟಿ ಪನ್ನೇರಳೆ ಆಸೆಯನ್ನು ಇಂಗಿಸಿಕೊಂಡು ಮಂಗಳಿಯ ಹಿಂದೆ ಹೊರಟಳು. ನಿಲ್ಲೆ ಎನ್ನುತ್ತಾ ಕೂಗಿ ಕರೆಯುತ್ತಾ ಮಂಗಳಿಯ ಹಿಂದೆ ಬರುತ್ತಿದ್ದ ಚಿಟ್ಟಿಯ ಕೈಗೆ ಸಿಕ್ಕದೆ ಮಂಗಳಿದೂರ ದೂರಕ್ಕೆ ಹೋಗುತ್ತಿದ್ದಳು. ಹಾಅಗಾಡಿ ಹೀಗಾಡಿ ಚಿಟ್ಟಿ ಅವಳನ್ನ ಸಮೀಪಿಸಿದಳು. ಇನ್ನೇಣು ಇಬ್ಬರೂ ಒಂದು ಹಂತದಲ್ಲಿ ಸಂಧಿಸಿ ಮಾತಾಡಬೇಕು ಎನ್ನುವಾಗ ಪಕ್ಕದ ಪೊದೆಯಲ್ಲಿ ಯಾರೋ ನರಳುವ ಸದ್ದು ಕೇಳಿಸಿತು. ಚಿಟ್ಟಿ, ಮಂಗಳ ಬಗ್ಗಿ ನೋಡಿದರು, ಇಬ್ಬರಿಗೂ ಆಘಾತ. ಐವತ್ತರ ಬ್ರಾಹ್ಮಣ ಮುತ್ತೈದೆ ಪದ್ದಮ್ಮ ಮತ್ತು ಗೌಡರ ಹುಡುಗ ಶಿವ ಇಬ್ಬರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದರು. ಇಲ್ಲಿ ಏನೋ ನಡೀತಿದೆ ಎನ್ನುವುದು ಅರ್ಥವಾದರೂ ಏನೆಂದು ಅರ್ಥವಾಗದ ಇಬ್ಬರೂ ಅಲ್ಲಿಂದ ತಮ್ಮ ವೈಮನಸ್ಯವನ್ನು ಮರೆತು ಕೈ ಕೈಹಿಡಿದು ಒಟ್ಟಿಗೆ ಓಡಿದ್ದರು.
ಆಗ ತಾನೆ ಬೆಲ್ಲಾಗಿತ್ತು ಎಲ್ಲರೂ ಕೈ ಮುಗಿದು ನಿಂತು `ಶಾರದೆಯೇ ಕರಗಳ ಜೋಡಿಸಿ ಭರದಿಂದ ಹರುಷದಿ ಬೇಡುವೆವು . . . . .ಬೇಡುವೆವು. . . . .ಸರಸತಿ ಭವಸತಿ ಸಾರಸ ನೇತ್ರೆ ಕರುಣದಿ ಕಾವುದು ಕೋಮಲ ಗಾತ್ರೆ . . . . . .’ ಹೀಗೆ ಪ್ರಾರ್ಥನೆ ಮಾಡುತ್ತಿರುವಾಗ, ಅಲ್ಲಿಗೆ ಬಂದು ತಮ್ಮ ಹೆಗಲ ಚೀಲಗಳನ್ನು ಕೆಳಗೆ ಇಳಿಸಿ ಸಾಲಿನಲ್ಲಿ ನಿಂತ ಮಂಗಳಿ ಮತ್ತು ಚಿಟ್ಟಿಗೆ ಪ್ರಾರ್ಥನೆಯನ್ನು ಹೇಳಬೇಕು ಎನ್ನುವುದೂ ಮರೆತು ಹೋಗಿತ್ತು. ತಲೆಯ ತುಂಬಾ ಬರೀ ಪದ್ದಮ್ಮ ಮತ್ತು ಶಿವ ಇಬ್ಬರೆ ತುಂಬಿಕೊಂಡಿದ್ದರು. ಕಣ್ಣುಗಳು ಮಾತ್ರ ಪನ್ನೇರಳೆ ಮರದ ಬಳಿಯಿದ್ದ ತಮ್ಮ ಗುಂಪನ್ನು ಹುಡುಕುತ್ತಿದ್ದವು.. ಆದರೆ ಅವರ ದಿಗಿಲು ತುಂಬಿದ ಕಣ್ಣಿಗೆ ಯಾರೂ ಕಾಣಲಿಲ್ಲ
ಪ್ರಾರ್ಥನೆ ಮುಗಿಯುವುದರೊಳಗೆ ತಿಮ್ಮದಾಸ ನಕ್ಕತ್ತು, ಸರೋಜಾ, ಭಾರತಿ, ಆರೋಗ್ಯರನ್ನು ಒಳಗೊಂಡಂತೆ ದಂಡೊಂದನ್ನು ಸ್ಕೂಲಿನ ಕಡೆಗೆ ಕರೆದು ತಂದನು. ಇಷ್ಟೂ ಜನರನ್ನು ಕರೆದು ತರುತ್ತಾ ಸುಮ್ಮನೆ ಬರದ ಅವನು ಇವರು ಮಾಡಿರುವ ಹಾಳು ಕೆಲಸವನ್ನು ತಂದೆ ತಾಯಿಯರ ಬೇಜವಾಬ್ದಾರಿತನವನ್ನೂ ದಾರಿಯ ತುಂಬಾ ಸಾರುತ್ತಾ ಬಂದನು. ಹೆಡ್ ಮೇಷ್ಟ್ರು ಬಸವರಾಜಪ್ಪ ಅತಿಯಾದ ಸೌಜನ್ಯದಿಂದ `ಏನಾಯ್ತು ತಿಮ್ಮದಾಸು? ನಮ್ಮ ಹುಡುಗ್ರು ಏನು ಮಾಡಿದರು?’ ಎಂದು ಕೇಳಿದರು. `ಮೇಷ್ಟ್ರೇ ಇವರಾ ಹುಡುಗ್ರು? ಖಂಡಿತಾ ಇಲ್ಲ. ಕಾಡು ಕರಡಿಗಳು ಸ್ವಾಮಿ ನನ್ನ ತೋಟಕ್ಕೆ ನುಗ್ಗಿ ಎಲ್ಲಾ ಹಾಳು ಮಾಡಿ ಬಿಟ್ಟರು, ನನ್ನ ಬಂಗಾರದಂತಾ ಪನ್ನೇರಳೇ ಮರವನ್ನ ಹೇಗೆ ಕಿತ್ತಿದ್ದಾರೆ ನೋಡಬನ್ನಿ. ಸಣ್ನ ಹೀಚೂ ಬಿಟ್ಟಿಲ್ಲ, ಸ್ಕೂಲಲ್ಲೂ ಹೇಳೋರಿಲ್ಲ ಮನೇಲು ಹೇಳೋರಿಲ್ಲ. ಅದಕ್ಕೆ ಇವ್ರು ಈ ಗತಿಗೆ ಬಂದಿದ್ದಾರೆ’ ಎಂದು ಮೇಷ್ಟ್ರನ್ನೂ ಸೇರಿಸಿಕೊಂಡೇ ಬೈಯ್ಯಲು ಶುರು ಮಾಡಿದ. ಮಕ್ಕಳು ಏನು ಮಾಡಿರಬಹುದು ಎನ್ನುವ ಅಂದಾಜು ಆಗಲೇ ಮೇಷ್ಟ್ರಿಗೆ ಸಿಕ್ಕಿದ್ದರಿಂದ ಜ್ಝೋರು ಧ್ವನಿಯಲ್ಲಿ `ಇವತ್ತು ನಿಮ್ಮ ಕೈಯ್ಯಿ ಇರಬಾರದು ಹಾಗೇ ಮಾಡಿಲ್ಲ ಅಂದ್ರೆ ನಾನು ಹೆಡ್ ಮೇಷ್ಟ್ರಾಗಿದ್ದಕೂ ಸಾರ್ಥಕವಿಲ್ಲ’ ಎಂದು ಅಲ್ಲೇ ಇದ್ದ ಹುಣಸೆ ಬರಲಿನಿಂದ ಹೊಡೆಯತೊಡಗಿದರು. `ಬೇಡಾ ಸಾ ಇನ್ನ್ ಮೇಲೆ ಮಾಡಲ್ಲಾ ಸಾ’ ಎನ್ನುತಾ ಕಣ್ಣು ಮೂಗುಗಳಲ್ಲಿ ಸುರಿಸತೊಡಗಿದಾಗಲೇ ತಿಮ್ಮದಾಸ `ಸ್ವಾಮಿ ನಿಲ್ಲಿಸಿ’ ಎನ್ನುತ್ತಾ ಅಡ್ಡ ಬಂದ.
ಅಂತೂ ಮನಸ್ಸು ಕರಗಿತಲ್ಲಾ ಎನ್ನುವ ಸಮಾಧಾನಕ್ಕೆ ಬಿದ್ದ ಮೇಷ್ಟ್ರು ಅವನಿಗೆ ಸಮಾಧಾನವಾಯಿತು ಅಂತ ನಿಟ್ಟುಸಿರಿಟ್ಟರು. ಆದ್ರೆ ತಿಮ್ಮದಾಸನ ಪಟ್ಟೇ ಬೇರೆ ಇತ್ತು `ಅಲ್ಲಾರೀ ಮೇಷ್ಟ್ರೇ, ನೀವು ಹೀಗ್ ಹೊಡುದ್ರೆ ನನಗಾದ್ ನಷ್ಟ ತೀರುತ್ಯೇ? ನಿಮ್ಮಜೇಬಲ್ಲಿ ಎಷ್ಟ್ ಹಣ ಇದೆ?’ ಎಂದ.`ಹಣ ಯಾಕ್ ಬೇಕು?’ ಎಂದ ಬಸವರಾಜಪ್ಪ ಮೇಷ್ಟ್ರಾ ಮಾತಿಗೆ `ರೀ ಮೇಷ್ಟ್ರೇ ನಿಮಗೊಂದ್ ಕಿವಿ ಮಾತ್ ಹೇಳ್ತೀನ್ರೀ ಕೇಳಿ. ಮಕ್ಳನ್ನ ಹೊಡೆಯೋದು ಒಳ್ಳೇದಲ್ಲಾರೀ. ನನಗೆ ಬೇಕಿರೋದು ಹಣ, ಹಣಾನ ನೀವೇ ಕೊಟ್ಟ್ ಬಿಡಿ. ನಾನ್ ಹೊರಟ್ ಹೋಗ್ತೀನಿ’. ಮೇಷ್ಟ್ರಿಗೆ ಈಗ ಅಚ್ಚರಿ `ಹಣಾನ ನಾನ್ ಯಾಕ್ ಕೊಡ್ಬೇಕು?ಹೋಗಿ ಇವ್ರ ಅಪ್ಪ ಅಮ್ಮ ಇದ್ದಾರಲ್ಲ ಅವ್ರನ್ನ ಕೇಳಿ’ ಎಂದರು . ಅದಕ್ಕೆ ತಿಮ್ಮದಾಸು ` ಏನ್ ಮಾತಾದ್ತಾ ಇದೀರಾ ಮೇಷ್ಟ್ರೇ ಮಕ್ಳು ಮನೇಲಿದ್ದಾಗ ಮನೇವ್ರ ಜವಾಬ್ದಾರಿ ಸ್ಕೂಲಿಗ್ ಬಂದಾಗ ನಿಮ್ಮ ಜವಾಬ್ದಾರಿ ಅಲ್ವಾ?’ ಎಂದ ಮೇಷ್ಟ್ರು ಅವನ ಮಾತಿಗೆ ತಲೆ ಆಡಿಸಿದರು. `ಮನೆ ಬಿಟ್ಟು ಸ್ಕೂಲಿಗೆ ಬರುವಾಗ ಇದಾಗಿರೋದು ಅಂದ್ರೆ ಮನೇವ್ರು ಹೇಗ್ ಜವಾಬ್ದಾರಿ ಆಗ್ತಾರೆ ನೀವೇ ಹೇಳಿ? ಎಂದ. ಮೇಷ್ಟ್ರು ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿ ನೋಡಿ ಇದಾಗಿರೋದು ಸ್ಕೂಲಲ್ಲಿ ಅಲ್ಲ. ಆದ್ದರಿಂದ ಇದು ನನ್ನ ಜವಾಬ್ದಾರಿ ಅಲ್ಲ. ಇದು ಮನೆಯವರ ಜವಾಬ್ದಾರಿ, ಹಣ ಕೇಳೋದು ಏನಿದ್ರೂ ಇವ್ರ ಮನೆಗಳಲ್ಲಿ ಕೇಳಿ’ ಎಂದು ಕೈ ತೊಳೆದುಕೊಳ್ಳಲು ನೋಡಿದರು.
ಪಟ್ಟು ಬಿಡದ ತ್ರಿವಿಕ್ರಮ ತಿಮ್ಮದಾಸು ತಾನೀಗ ಅಲ್ಲಿ ಹೋಗಿ ಗಲಾಟೆ ಮಾಡಿದ್ರೆ ನಾಳೆ ತಾನು ಗೋವಿಂದಾ ಎನ್ನುತ್ತಾ ಅಲ್ಲಿಗೆ ಹೋಗಿ ನಿಂತಾಗ ಸಿಡಿಮಿಡಿಗೊಳ್ಳುತ್ತಾ ಹೊರಗೆ ಬರುವ ತಾಯಂದಿರು `ನನ್ನ ಮಕ್ಕಳು ಒಂದು ಪನ್ನೇರಳೆ ಹಣ್ಣನ್ನ ತಿಂದಿದ್ದಕ್ಕೆ ಹೀಗೆಲ್ಲಾ ಮಾತಾಡಿ ನಮ್ಮ ಹತ್ರ ಹಣ ಕೇಳಿದ್ಯಲ್ಲ ತಿಮ್ಮದಾಸು, ಎಷ್ಟು ವರ್ಷಗಳಿಂದ ನಿನಗೆ ಪಡಿ ಹಾಕ್ತಾ ಇದೀವಲ್ಲಾ?ಅದಕ್ಕೆ ಇದೇನಾ ನೀನು ಕೊಡುವುದು’ ಅಂತ ಕೇಳಿಬಿಟ್ಟರೆ? ಅದೆಲ್ಲಾ ಆಗದ ಮಾತು ಹಾಗಂತ ಬಿಟ್ಟರೆ ಮೇಷ್ಟ್ರಾ ಹತ್ರಾನೂ ಹಣ ವಸೂಲಿಯಾಗದೆ ಎಂದೋ ತನ್ನ ಮೈಯ್ಯ ಕಸುವನ್ನು ಬಳಸಿ ಹಾಕಿದ್ದ ಎರಡು ಬಿಂದಿಗೆ ನೀರಿಗೆ ಬೆಲೆ ಹುಟ್ಟದೆ ಹೋಗಬಾರದು ಎಂದು `ನೋಡಿ ಈ ಕೆಲ್ಸಾನ ಮಾಡಿ ಮಕ್ಕಳು ಸ್ಕೂಲಿಗೆ ಬಂದಿರಲಿಲ್ಲ ಅಂದ್ರೆ ನಾನು ನಿಮ್ಮನ್ನ ಕೇಳ್ತಾ ಇಲರ್ಿಲ್ಲ ಇವು ಇಲ್ಲಿರೋದ್ರಿಂದ ಇವೇನೇ ಮಾಡಿದ್ರೂ ಇದ್ರ ಜವಾಬ್ದಾರಿ ನಿಮ್ದೆ’ ಎಂದುಬಿಟ್ಟ. ಅವನ ಈ ತರ್ಕಕ್ಕೆ ಮೇಷ್ಟ್ರ ಹತ್ತಿರ ಉತ್ತರ ಇರಲಿಲ್ಲ. ಮೇಷ್ಟ್ರ ಕಾಸಿಗೆ ಕತ್ತರಿ ಬಿತ್ತು. ತಿಮ್ಮದಾಸು ಖುಷಿಯಿಂದ ಹೊರಟೇ ಬಿಟ್ಟ. ಪೇಟೆಯಲ್ಲಿ ದೊಡ್ಡ ಓದು ಓದುತ್ತಿರುವ ಮಗ ಯಶವಂತನಿಗೆ ಕಳಿಸಬೇಕಿದ್ದ ಹಣ ಹೀಗೆ ದಿಕ್ಕಾಪಾಲಾಗಿ ತಿಮ್ಮದಾಸುವಿನ ಜೇಬನ್ನ ಸೇರಿದಾಗ ನಿಜಕ್ಕೂ ಮೇಷ್ಟ್ರು ಕಂಗಾಲಾದರು.
ಪನ್ನೇರಳೇ ಮರಕ್ಕೆ ದಾಳಿಯಿಟ್ಟ ಸಮಸ್ತರಿಗೂ ತಮ್ಮ ತಪ್ಪಿನ ಅರಿವಾಗಿತ್ತು. ಆದ್ರೆ ಮೇಷ್ಟ್ರ ಕೈಯ್ಯಿಂದ ಹೀಗೆ ಹಣ ಹೋಗಬಹುದೆಂದು ಕನಸ್ಸಿನಲ್ಲೂ ಊಹೆ ಮಾಡಿರಲಿಲ್ಲ. ಹೇಗಾದ್ರೂ ಸರಿ ಆಹಣವನ್ನು ಹೊಂದಿಸಿ ಮೇಷ್ಟ್ರಿಗೆ ತಲುಪಿಸಬೇಕು ಎಂದು  ಚರ್ಚೆ ಮಾಡುತ್ತಾ ಕೂತಿದ್ದಾಗಲೇ ಒಳಗೆ ಬಂದ ಬಸವರಾಜಪ್ಪ ಮೇಷ್ಟ್ರು ಎಂದೂ ಶಿಕ್ಷೆಯನ್ನೇ ಕೊಡದ ಅವರು `ಯಾರುಯಾರು ತಿಮ್ಮದಾಸುವಿನ ತೋಟಕ್ಕೆ ಹೋಗಿದ್ದು ಎದ್ದು ನಿಲ್ಲಿ’ ಎಂದರು. ಚಿಟ್ಟಿ ಮಂಗಳ ಮಂಡಿಯ ಒಳಗೆ ಮುಖವನ್ನು ಹಾಕಿಕೊಂಡು ಏನೂ ಗೊತ್ತಿಲ್ಲದವರಂತೆ ಕೂತರು. ನಕ್ಕತ್ತು, ಸರೋಜಾ, ಆರೋಗ್ಯ. ಭಾರತಿ ಮೆಲ್ಲಗೆ ಎದ್ದು ನಿಂತರು. ಚಿಟ್ಟಿ ಅವರೆಲ್ಲರೂ ಮಂಗಳಾರನ್ನು ಎದ್ದು ನಿಲ್ಲುವಂತೆ ಸೂಚಿಸಿದರಾದರೂ ಅವರು ತಮಗಲ್ಲ ಎನ್ನುವಂತೆ ಕೂತೇ ಇದ್ದರು. ನಕ್ಕತ್ತುವಿಗೆ ನಖಶಿಖಾಂತ ಉರಿದು ಹೋಯಿತು. ಅದೇ ಕೋಪದಲ್ಲೆ `ಸಾ’ ಎಂದಳು. ಮೇಷ್ಟ್ರು ಅವಳ ಕಡೆಗೆ ಏನು ಎಂಬಂತೆ ನೋಡಿದರು. `ನಮ್ಮ ಜೊತೆ ಇವ್ರಿಬ್ರೂ ಇದ್ರೂ ಸಾ’ ಎಂದುಬಿಟ್ಟಳು. ಅಷ್ಟರ ವರೆಗೆ ಸುಮ್ಮನೆ ಕೂತಿದ್ದ ಚಂದ್ರೇಗೌಡನಿಗೆ ಇವರ ಬೇಳೆಕಾಳನ್ನು ಬೇಯಿಸಿಕೊಳ್ಳಲು ತನ್ನ ದಾಳವಾಗಿ ಬಳಸಿಕೊಂಡಿದ್ದನ್ನ ನೆನೆದು `ಚಿಟ್ಟಿ ಕಳ್ಳತನ ಮಾಡೋಕ್ಕೆ ಅಂತ ಸುಳ್ಳನ್ನ ಹೇಳಿ ಪುಟ್ಟೀನ ತನ್ನ ಜೊತೆ ಕಳಿಸಿದ್ಲು ಸಾ’ ಎಂದು ಹೇಳಿಬಿಟ್ಟ. ಮೇಷ್ಟ್ರಿಗೆ ಕೋಪ ಬಂತು `ಸುಳ್ಳು ಮೋಸ ತಟವಟ ಈಗ್ಲೇ ಇಷ್ಟು ಕಲ್ತಿದ್ದೀರಲ್ಲಾ? ನಿಮ್ಮನ್ನ ಏನ್ ಮಾಡ್ಬೇಕು ಅನ್ನೋದನ್ನ ಹೇಳಿ ಎನ್ನುತ್ತಾ ಹುಣಸೆ ಬರಲಿಂದ ಎಲ್ಲರಿಗಿಂತ ಹೆಚ್ಚಾಗಿ ಚಿಟ್ಟಿ ಮತ್ತು ಮಂಗಳಾಗೆ ಹೆಚ್ಚು ಹೊಡೆಯ ತೊಡಗಿದರು.
ನಾನ್ ಹೇಳ್ದೆ ಇವ್ಳನ್ನ ಏನಾದ್ರೂ ಮಾಡಿ ದಾರೀಗ್ ತನ್ನಿ ಅಂತ ನೀವ್ ಕೇಳ್ಲಿಲ್ಲ ನೋಡಿ ಊರಲ್ಲಿ ಹೀಗೆ ನಮ್ಮ ಮರ್ಯಾದೆ ತೆಗೀತಿದ್ದಾಳೆ ಎಂದು ಅಮ್ಮ ಗೊಣಗಿದಳು. ಹಾಳಾದ ನಕ್ಕತ್ತು ಹೇಳಲಿಲ್ಲ ಅಂದಿದ್ದರೆ. . . . .ಇಷ್ಟೆಲ್ಲಾ ರಾಮಾಯಣ ಆಗ್ತಾನೇ ಇರ್ಲಿಲ್ಲ ಎಂದುಕೊಂಡಳು ಚಿಟ್ಟಿ. ಅಮ್ಮಾ ಶುಕ್ರವಾರ ಹರಿಸಿನ ಕುಂಕುಮಕ್ಕೆ ತಪ್ಪಿಸದೆ ಕರೆಯುತ್ತಿದ್ದ ಪದ್ದಮ್ಮ ಕೆನ್ನೆಗೆ ಅರಿಸಿನ ಹಚ್ಚಿ ಕೈಲಿ ಹಸಿರು ಬಳೆಯನ್ನು ತೊಟ್ಟು, ನೆರೆಗೂದಲನ್ನು ನೀಟಾಗಿ ಬಾಚಿ ಹೂವನ್ನ ಮುಡಿದು, ಹೊದ್ದ ಸೆರನನ್ನು ಮತ್ತಷ್ಟು ಎಳೆದುಕೊಂಡು ಬರುತ್ತಿದ್ದರಲ್ಲ. . .. ಅವರನ್ನೇ ಅಲ್ವಾ ನಾನು ಬೆಳಗ್ಗೆ ನೋಡಿದ್ದು? ಚಿಟ್ಟಿಗೆ ಅಮ್ಮನಿಗೆ ಇದನ್ನೆಲ್ಲಾ ಹೇಳಬೇಕು ಅನ್ನಿಸಿತು ಆದ್ರೆ ಏನಂತ ಹೇಳುವುದು? ಅಮ್ಮನಿಗೂ ಹೇಳಲಾಗದ, ಆದರೆ ಏನೋ ಅರ್ಥವಾಗುವಂತಿದ್ದ ಸಂಗತಿಗಳ ಬಗ್ಗೆ ಯೋಚಿಸುತ್ತಾ ಹಾಗೇ ಮಗ್ಗುಲಾದಳು. ಪೊದೆಯ ಮರೆಯಲ್ಲಿ ನಾಗರಾಜುವಿನ ಜೊತೆ ಇದ್ದ ಪದ್ದಮ್ಮನ ಮುಲುಕಾಟ ಮತ್ತೆ ಮತ್ತೆ ಅವಳಿಗೆ ಕೇಳತೊಡಗಿತು.
(ಮುಂದುವರೆಯುವುದು…)

‍ಲೇಖಕರು avadhi

August 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: