ನದಿಗಳ ಬೆನ್ನತ್ತಿದಳು ಆರತಿ..

2

ತ್ರಿಪುರದಲ್ಲಿ 5 ಪ್ರಮುಖ ನದಿಗಳು ಹರಿಯುತ್ತವೆ. ಗೋಮತಿ, 133 ಕಿಲೋಮೀಟರ್‍ಗಳಷ್ಟು, ಮನುನದಿ 167 ಕಿಮೀಗಳು, ಕೊವೈ 166 ಕಿ.ಮಿ.ಗಳು, ಹೌರಾ 53 ಕಿಮೀಗಳು ಹಾಗೂ ಧಲೈ 117 ಕಿಮೀಗಳಷ್ಟು ಜಲಸಂಪತ್ತನ್ನು ಹೊಂದಿರುವ ರಾಜ್ಯ ತ್ರಿಪುರ. ತ್ರಿಪುರದ ಹೆಸರೂ ಕೂಡ ತನ್ನ ಜಲಮೂಲದಿಂದಲೇ ಬಂದಿರುವುದೆಂದು ಭಾಷಾ ವಿಜ್ಞಾನಿಗಳು ಹೇಳುತ್ತಾರೆ. ತ್ರಿ ಅಂದರೆ ನೀರು ಎಂದರ್ಥ. ಪ್ರ – ಎಂದರೆ ಹತ್ತಿರ ಎಂದರ್ಥ. ನೀರಿಗೆ ಹತ್ತಿರವಾದ್ದು ತ್ರಿಪುರ ಎಂಬ ಹೆಗ್ಗಳಿಕೆ ಈ ರಾಜ್ಯದ್ದು.

ಅಸ್ಸಾಂ, ಅರುಣಾಚಲಪ್ರದೇಶ, ಮೇಘಾಲಯ, ಮಣಿಪುರ್, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಹೀಗೆ ಈ ಆರು ಸುಂದರ ಸಹೋದರಿಯರ ಜೊತೆ ಏಳನೆಯವಳಾದ ತ್ರಿಪುರಕ್ಕೂ ಬೇರೆ ರಾಜ್ಯಗಳಿಗೂ ಬೇಕಾದಷ್ಟು ವ್ಯತ್ಯಾಸಗಳಿವೆ ! ಎಲ್ಲಾ ಈಶಾನ್ಯ ರಾಜ್ಯಗಳಂತೇ ಇಲ್ಲೂ ಬುದ್ಧನನ್ನು ಪೂಜಿಸುವ ಬೌದ್ಧ ಧರ್ಮದವರು ಇದ್ದರೂ, ಹಿಂದೂ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮದವರಿಂದ ಸಮಾನವಾಗಿ ಹರಡಿಕೊಂಡಿದೆ. ಬೇರೆ ಧರ್ಮಿಯರು ಇದ್ದರೂ, ಅವರು ಅಲ್ಪಸಂಖ್ಯಾತರಾಗಿದ್ದು, ಸೌಹಾರ್ದತೆಯಿಂದ ಇಲ್ಲಿನ ಜನಮಾನಸದಲ್ಲಿ ಬೆರೆತುಕೊಂಡಿರುವುದು ಕಂಡುಬರುತ್ತದೆ.

ಅಗರ್‍ತಲಾ ಎಂಬ ತ್ರಿಪುರದ ರಾಜಧಾನಿಯ ಹೆಸರು ಬಂದಿರುವುದು, ಅಲ್ಲಿನ ಹೆಸರುವಾಸಿ ಮರ `ಅಗರ್’ ಎಂಬುದರಿಂದ. ‘ಅಗರು’ ಅಥವಾ ‘ಅಗರ್’ ಎಂಬ ವೃಕ್ಷ, ಬೃಹದಾಕಾರವಾಗಿ ಬೆಳೆಯುವ ಮರವಾಗಿದ್ದು, ಅದರ ಕಾಂಡ, ತೊಗಟೆಗಳಲ್ಲಿ ಒಂದು ರೀತಿಯ ಸುಗಂಧಮಯವಾದ ಸುವಾಸನೆ ಹೊರಹೊಮ್ಮುವುದರಿಂದ, ಅಗರ್ ಇರುವ ಜಾಗವೇ `ಅಗರ್‍ತಲಾ’. ಇದನ್ನು ಕೇಳಿದ ತಕ್ಷಣ ನನ್ನ ಕಣ್ಣುಗಳು ಅರಳಿಕೊಂಡವು. ನಮ್ಮ ಕರಿಮಣ್ಣಿನ ಕರುನಾಡನ್ನು ನಾವು “ಶ್ರೀಗಂಧದ ಬೀಡು” ಎಂದು ಕರೆಯುತ್ತೇವೆ.

ಶ್ರೀಗಂಧದ ಮರದ ಸುವಾಸನೆ ಇಡೀ ಪ್ರಪಂಚವನ್ನು ಆಕರ್ಷಿಸಿರುವ ಸಂಗತಿ ಎಲ್ಲರಿಗೂ ತಿಳಿದಿರುವುದೇ. ಶ್ರಿಗಂಧದ ಮೂರ್ತಿಗಳನ್ನು ಸೃಜಿಸುವ ಶಿಲ್ಪಿಗಳ ಕಲಾಮನೆತನಗಳೇ ನಮ್ಮಲ್ಲಿವೆ. ಗುಡಿಕಾರ ಮನೆತನಗಳು ಶ್ರೀಗಂಧದ ಕುಸರಿಗಾರಿಕೆಗೆ ಹೆಸರುವಾಸಿ. ಶ್ರೀಗಂಧದ ಹಾರಗಳು, ಸುವಾಸನೆಭರಿತ ಅಗರಬತ್ತಿಗಳು, ಶ್ರೀಗಂಧದ ಎಣ್ಣೆಯಿಂದ ತಯಾರಾಗುವ ಪರಿಮಳದ ಪಫ್ರ್ಯೂಮ್, ಸೋಪು, ಕೆಎಸ್‍ಡಿಎಲ್ ಸಂಸ್ಥೆ ಎಲ್ಲಾ ಒಮ್ಮೆ ಕಣ್ಣಮುಂದೆ ಹಾದಂತಾಯಿತು.

ಮನುಷ್ಯ ಸ್ವಭಾವವೇ ಹಾಗೆ! ತಾನು ಮೊದಲೇ ಕಂಡು ಸವಿದ ಅನುಭವಿಸಿದ ಘಟನೆಗಳು, ನೆನಪುಗಳ ಸರಮಾಲೆಯಾಗಿ ಬೇರೆ ಸ್ಥಳಕ್ಕೆ ಹೋದಾಗ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರವಾಸಿ, ತಾನು ಹುಟ್ಟಿ ಬೆಳೆದ ಸ್ಥಳದಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ, ಸ್ಪರ್ಶ, ವಾಸನÉ, ರುಚಿಗಳು ಎದುರಾದರೆ, ಅದನ್ನು ಗಮನಕ್ಕೇ ತೆಗೆದುಕೊಳ್ಳದೇ, ಟೇಕನ್ ಫಾರ್ ಗ್ರಾಂಟೆಡ್ ಅನ್ನುವಂತೆ ತಳ್ಳಿಹಾಕುತ್ತೇವೆ ! ಆದರೆ, ಪ್ರವಾಸ ಹೊಸ ಸಾಧ್ಯತೆಗಳನ್ನು ಬಿಚ್ಚಿ ಕೊಳ್ಳುವುದೇ ತನ್ನ ಹೊಸತನದಿಂದ… ನಾವು ನೋಡುವ ಸಂಗತಿಗಳು, ಸಾಮಾನ್ಯವಾಗಿ ನಮ್ಮ ನೋಟಕ್ಕೆ ಸಿಗದೇ ಇರುವಂತಿರಬೇಕು, ಅದರಲ್ಲಿ ವಿಶೇಷತೆಗಳಿರಬೇಕು, ನಾವಿನ್ಯತೆಯಿರಬೇಕು, ಅದು ಬೇರೇನೋ ಹೇಳಬೇಕು. ನಾವು ಇರುವ ಜಗತ್ತಿಗಿಂತಾ ನಮ್ಮ ಸುತ್ತ ಮುತ್ತ ದಿನನಿತ್ಯ ಕಾಣುವ ವಸ್ತುಗಳನ್ನು ಹೊರತುಪಡಿಸಿ, ಆ ಜಾಗ ಬೇರೆ ಇನ್ನೇನನ್ನೋ ನಮಗೆ ಕೊಡುವಂತಾದ್ದಾಗಿರಬೇಕು. ಜನ ಪ್ರವಾಸ ಹೋಗುವುದೇ ಇಂಥ ನವೀನತೆಗೇನೋ ಎಂದು ಅನಿಸುವುದು ಸಹಜ.

ನೋಡುವ ನೋಟ, ತಿನ್ನುವ ತಿನಿಸು, ಬೀಸುವ ಗಾಳಿ, ಉರಿಯುವ ಸೂರ್ಯ, ತೊಡುವ ಬಟ್ಟೆ, ಆಡುವ ಭಾಷೆ, ಎದುರಿಗೆ ದಿನಾ ಸಿಗುವ ಅವೇ ಮುಖ ಚಹರೆಗಳು… ಇವೆಲ್ಲವೂ ಸ್ಥಳ ಬದಲಾದ ಹಾಗೆ ಬದಲಾಗುತ್ತಾ ಹೋಗುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಮನುಷ್ಯನ ನಡವಳಿಕೆ! ಕೆಲವೊಮ್ಮೆ ತುಂಬಾ ಸರಳ ಸೌಮ್ಯ ಜನರೆನಿಸಿದರೆ, ಕೆಲವು ಸ್ಥಳಗಳ ಜನಸಂದಣಿಯಲ್ಲಿ ಕಳವಳಕ್ಕೊಳಗಾಗುವಷ್ಟು ವೇಗವಿರುವುದೂ ನಿಜ!

ಭಾಷೆಯನ್ನೂ ಮೀರಿದ ಭಾವ ಇಡೀ ಮಾನವ ಜನಾಂಗವನ್ನು ಹಿಡಿದಿಟ್ಟಿರುವ ಸೂತ್ರವೆಂದು ನನಗನಿಸುತ್ತದೆ! ನೀವು ಎಲ್ಲಿಂದ ಎಲ್ಲಿಗೆ ಹೋದರೂ, ಒಂದು ನಗುಮುಖ, ಎದುರಿಗೆ ಕಂಡಾಕ್ಷಣ ಅರಳುವ ಒಂದು ಮುಗುಳುನಗು ಎಲ್ಲಾ ಭಾಷೆ, ಜಾತಿ, ಲಿಂಗ, ಬಣ್ಣ, ಅಂತಸ್ತು ಎಲ್ಲವನ್ನೂ ಮೀರಿದ ಬೆಸುಗೆಯ ಆತ್ಮೀಯ ಆವರಣವನ್ನು ಕಟ್ಟಿಕೊಡದ ಜಾಗ ಇಡೀ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂಬುದು ಬೆನ್ನಿಗೊಂದು ತೂಗು ಚೀಲ, ಕಾಲಿಗೆ ಚಕ್ರ ತೊಟ್ಟಿರುವ, ತಿಂಗಳಿಗೊಂದಾದರೂ ಊರು, ದೇಶ ಸುತ್ತುವ ನನಗೆ ಖಚಿತವಾಗಿರುವ, ಅನುಭವವೇದ್ಯವಾಗಿರುವ ಸಂಗತಿ.

ತ್ರಿಪುರ ಪ್ರವೇಶಕ್ಕೆ ಮುನ್ನ 1947ರಲ್ಲಿ ಆದ ದೇಶವಿಂಗಡನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಭೂತಾನ್ ಹಾಗೂ ಬಾಂಗ್ಲಾದೇಶಗಳ ಗಡಿಗಳಲ್ಲದೇ ಬೃಹತ್ ದೇಶ ಚೈನಾ, ಮಯನ್ಮಾರ್ ಹಾಗೂ ಸಿಕ್ಕಿಂ ಮೇಘಾಲಯಕ್ಕೆ ತಗುಲಿಕೊಂಡೇ ಇದೆಯೇನೋ ಎನಿಸುತ್ತಾ ಕೆಲವರನ್ನು ಈಶಾನ್ಯ ರಾಜ್ಯಗಳ ಗುಂಪಿಗೆ ಅದನ್ನು ಸೇರಿಸುವಂಥಾ ಗೊಂದಲವನ್ನುಂಟುಮಾಡುವಂತಿದೆ. ಆದರೆ ಭೂತಾನ್ ಹಾಗೂ ನೇಪಾಳಗಳ ನಡುವೆ ಸಿಕ್ಕಿಂ ತನ್ನದೇ ಅಸ್ತಿತ್ವ ಹಾಗೂ ಸಾಂಸ್ಕøತಿಕ ಬೇರುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಪೋಷಿಸುತ್ತಿರುವುದು ಶ್ಲಾಘನೀಯ!
ಅಗರ್‍ತಲಾ, ಇಟಾನಗರ, ಗೌಹಾತಿ, ಇಂಫಾಲ್, ಶಿಲ್ಲಾಂಗ್, ಐಜ್ವಾಲ್, ಕೊಹಿಮಾಗಳನ್ನು ರಾಜಧಾನಿಗಳನ್ನಾಗಿ ಹೊಂದಿರುವ ಈ ಏಳು ಅಕ್ಕತಂಗಿಯರ ಮೂಲ ಬುಡಕಟ್ಟಿನ ಸಂಖ್ಯೆಯೇ ನೂರಾರು!

ರಾಜಾಡಳಿತಕ್ಕೆ ಹೊಂದಿದ ರಾಜರ ನಾಡಾದ ತ್ರಿಪುರ, ಗೋವಾ ಮತ್ತು ಸಿಕ್ಕಿಂ ಹೊರತು ಪಡಿಸಿದರೆ, ಈಗ ಭಾರತದ ಮೂರನೇ ಅತಿ ಚಿಕ್ಕ ರಾಜ್ಯ. ಭಾರತದಿಂದ ಎಲ್ಲ ರೀತಿಯಲ್ಲೂ ದೂರವಾದ ರಾಜ್ಯ ಎನಿಸಲು ಕಾರಣವೆಂದರೆ ಕೇವಲ ಒಂದೇ ಒಂದು ರಾಷ್ಟ್ರೀಯ ಹೆದ್ದಾರಿ ನಂಬರ್ 44ರ ಮೂಲಕ ಈ ರಾಜ್ಯಕ್ಕೆ ಸಂಪರ್ಕ ಸಾಧ್ಯವಿರುವುದು. ಈ ರಾಜ್ಯದಲ್ಲಿ ಕೋಕ್‍ಬರೊಕ್ ಅದರ ಅಧಿಕೃತ ಭಾಷೆಯೆಂದರೂ, ಬೆಂಗಾಲಿ ಭಾಷೆಯನ್ನೂ ತಮ್ಮ ಆಡಳಿತ ಭಾಷೆಯನ್ನಾಗಿ ತ್ರಿಪುರ ಬಳಸುತ್ತಿದೆ. ಬೆಂಗಾಲಿ, ಮಣಿಪುರಿ ಹಾಗೂ ಕೋಕ್‍ಬರೊಕ್ ಭಾಷೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಮಾತನಾಡುತ್ತಾರೆ. ಶೇಕಡ 88ರಷ್ಟು ಅಕ್ಷರಸ್ಥ ಜನರಿದ್ದಾರೆಂದು 2011ರ ಜನಗಣತಿ ಹೇಳುತ್ತದೆ! 1000 ಗಂಡಸರಿಗೆ 961ರ ಸಂಖ್ಯಾನುಪಾತ ಇರುವುದೂ ಕೂಡ ಆಶಾದಾಯಕವೇ !

8 ಜಿಲ್ಲೆಗಳಿಂದ ಕೂಡಿ, 2 ಲೋಕಸಭಾ ಸ್ಥಾನಗಳನ್ನೂ ಒಂದು ರಾಜ್ಯಸಭಾ ಸ್ಥಾನವನ್ನೂ ಹೊಂದಿರುವುದರಿಂದ ರಾಜಕೀಯವಾಗಿ ತನ್ನ ಪ್ರಬಲತೆಯನ್ನು ಕಳೆದುಕೊಂಡಿರುವುದು ಸ್ಪಷ್ಟ. ಜನವರಿ 21, 1972ರಲ್ಲಿ ಮೇಘಾಲಯ ಮತ್ತು ಮಣಿಪುರ ರಾಜ್ಯಗಳೊಂದಿಗೆ ತ್ರಿಪುರವೂ ಸ್ವತಂತ್ರ ರಾಜ್ಯವೆಂದು ಘೋಷಿಸಲ್ಪಟ್ಟಿತು. ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದವರು ಸಚೀಂದ್ರ ಲಾಲ್‍ಸಿಂಗ್, ಮೊದಲ ಗವರ್ನರ್ ಬಿ.ಕೆ. ನೆಹರೂ.

ಕಿರಾತ ದೇಶವೆಂಬುದು ತ್ರಿಪುರದ ಪ್ರಾಚೀನ ಹೆಸರೆಂದು ದಾಖಲೆಗಳು ಹೇಳುತ್ತವೆ. ಕರ್ನಾಟಕದಂತೆಯೇ ನವೆಂಬರ್ 1 ರಂದು ರಾಷ್ಟ್ರೀಯ ಸರಹದ್ದಿಗೆ ಒಳಪಟ್ಟ ರಾಜ್ಯ. ದೇಶ ವಿಂಗಡನೆಯಾದಾಗ, ಪೂರ್ವ ಪಾಕಿಸ್ತಾನ ಅಥವಾ ಇಂದಿನ ಬಾಂಗ್ಲಾದೇಶದ ನಿರ್ಮಾಣವಾದಾಗ ತ್ರಿಪುರಕ್ಕೆ ದೊಡ್ಡ ಪೆಟ್ಟು ಬಿತ್ತು. ಭಾರತದ ಪ್ರಮುಖ ವಾಣಿಜ್ಯ, ಸಾಂಸ್ಕøತಿಕ ನಗರ ಕೇಂದ್ರಗಳಲ್ಲೊಂದಾದ ಕೊಲ್ಕತಾಗೂ ತ್ರಿಪುರ ರಾಜ್ಯಕ್ಕೂ ವಿಂಗಡನೆಗೆ ಮೊದಲು ಕೇವಲ 350 ಕಿಮೀಗಳ ಅಂತರವಿದ್ದರೆ, ದೇಶವಿಂಗಡನೆಯಾದ ನಂತರ 1700 ಕಿಮೀಗಳ ದೂರ ಸೃಷ್ಟಿಯಾಗಿ, ತ್ರಿಪುರಾ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ಪೆಟ್ಟು ಬಿತ್ತು. ಇಡೀ ದೇಶ ದೊಡ್ಡ ದೊಡ್ಡ ದಾಪುಗಾಲು ಹಾಕುತ್ತಾ ನಡೆದರೆ, ವಾಹನಗಳ ಸಂಪರ್ಕ, ಸಂಚಾರವೂ ಮಧ್ಯದಲ್ಲಿ ಉದ್ಭವಿಸಿದ ಬಾಂಗ್ಲಾದೇಶದ ಗಡಿಯಿಂದ, ತ್ರಿಪುರ ಸಂಚಾರಕ್ಕೆ ಬಿದ್ದ ಸಂಚಕಾರದಿಂದ ತ್ರಿಪುರ, ತನ್ನ ವಾಣಿಜ್ಯ ವಹಿವಾಟನ್ನು ವಿಸ್ತರಿಸಿಕೊಳ್ಳಲಾಗದೇ 7 ರಾಜ್ಯಗಳಲ್ಲಿ ಸ್ವಲ್ಪ ಹಿಂದುಳಿದಿದೆಯೆಂದೇ ಹೇಳಬಹುದು.

ಅತಿಮುಖ್ಯ ನೈಸರ್ಗಿಕ ಸಂಪತ್ತಾದ ನ್ಯಾಚುರಲ್ ಗ್ಯಾಸ್ ದೊರಕುವ ರಾಜ್ಯವಾಗಿ ತ್ರಿಪುರ ಗುರುತಿಸಿಕೊಂಡಿದೆ. ನೇಯ್ಗೆಯನ್ನೂ ತನ್ನ ಕುಶಲ ಗ್ರಾಮ್ಯ ನೇಕಾರರ ನೆರವಿನಿಂದ ಉಳಿಸಿಕೊಂಡು ಬರಲಾಗಿದೆ. ಸೆಣಬು ಇಲ್ಲಿನ ಔದ್ಯೋಗಿಕ ವಿಸ್ತರಣೆಯಾಗಿದ್ದು, ಗೋಣಿ ಚೀಲಗಳನ್ನು ತಯಾರಿಸುವ ಸೆಣಬಿನ ಕಾರ್ಖಾನೆಗಳು ಇಲ್ಲಿವೆ. ರೇಷ್ಮೆ ತಯಾರಿಕೆಗೆ ಇತ್ತೀಚೆಗೆ ಒತ್ತು ಕೊಡಲಾಗಿದ್ದು, ಅದರ ವಾಣಿಜ್ಯ ಬೇಡಿಕೆಯನ್ನು ಗಮನಿಸಿ, ರೇಷ್ಮೆ ಬೆಳೆಯನ್ನು ಇತ್ತೀಚೆಗೆ ಅಳವಡಿಸಿಕೊಳ್ಳಲಾಗುತ್ತಿದೆ. ಮುಖ್ಯವಾದ ವ್ಯವಸಾಯ ಸಂಬಂಧೀ ಚಟುವಟಿಕೆಗಳು ತ್ರಿಪುರದ ಯಾವ ಜಿಲ್ಲೆಗೆ ಹೋದರೂ ಎದ್ದು ಕಾಣುವ ಅಂಶ. ಬತ್ತ, ಕಬ್ಬು, ಸೆಣಬು, ಆಲೂಗಡ್ಡೆ, ಟೀ ಹಾಗೂ ರಬ್ಬರ್ ಇಲ್ಲಿನ ಪ್ರಮುಖ ಬೆಳೆಗಳು. ಬಿದಿರು ತಾನಾಗೇ ಬೆಳೆಯುವ ಸಸ್ಯವಾಗಿದ್ದು, ಅದರ ಎಲ್ಲ ರೀತಿಯ ಉಪಯೋಗಕ್ಕೆ ಈಶಾನ್ಯ ರಾಜ್ಯಗಳೆಲ್ಲವೂ ಪ್ರಸಿದ್ಧವಾಗಿವೆ.

ತ್ರಿಪುರದ ಚರಿತ್ರೆಯನ್ನು ಅವಲೋಕಿಸ ಹೋದರೆ, ‘ತಿಪರ’ ಎಂಬ ಬುಡಕಟ್ಟು ಜನಾಂಗ ಈ ಜಾಗದಲ್ಲಿ ಮೊದಲ ಆಡಳಿತ ಮಾಡುತ್ತಿದ್ದರಿಂದ ಈ ಹೆಸರು ಬಂದಿತೆಂದು ಹೇಳಲಾಗುತ್ತಿದೆ. ನಂತರ ‘ತ್ರಿಪುರಿ’ ಎಂಬ ರಾಜಮನೆತನ ತನ್ನ ರಾಜ್ಯಾಡಳಿತ ಮಾಡುತ್ತಾ, ಬ್ರಿಟೀಷರ ಆಳ್ವಿಕೆಯಲ್ಲಿ ಈ ರಾಜ್ಯವನ್ನು ಪ್ರಿನ್ಸ್‍ಲಿಸ್ಟೇಟ್ ಎಂದು ಘೋಷಿಸಲಾಗಿದ್ದು, ಸ್ವಾತಂತ್ರ್ಯಾನಂತರ ಭಾರತಕ್ಕೆ ಸೇರಿದ ರಾಜ್ಯವಿದು.

ಹವಾಮಾನ ತುಂಬಾ ಚಳಿಯಲ್ಲದೇ ಹಿತವಾಗಿರುವ ಈ ರಾಜ್ಯದಲ್ಲಿ, ಬೇಸಿಗೆಯಲ್ಲಿ 36 ಡಿಗ್ರಿ ತನಕ ಸೂರ್ಯ ತನ್ನ ಪ್ರತಾಪವನ್ನು ಮೆರೆದರೆ, ಚಳಿಗಾಲ 13 ರಿಂದ 27ರ ಉಷ್ಣತೆಯಲ್ಲಿರುತ್ತದೆ. ಬೀಸುವ ಬಿರುಗಾಳಿ ಹಾಗೂ ಚಂಡಮಾರುತಗಳಿಂದ ಆಗಾಗ್ಗೆ ಪ್ರಕೃತಿ ತನ್ನ ವಿಕಟಾಟ್ಟಹಾಸವನ್ನು ಮೆರೆಯುತ್ತಿರುತ್ತಾಳೆ.

ತ್ರಿಪುರದ ರಾಷ್ಟ್ರೀಯ ಹಬ್ಬವೆನ್ನಲಾಗುವ ‘ಖಾರ್ಚಿ ಪೂಜಾ’ ಅತ್ಯಂತ ಪುರಾತನವಾದ ಹಬ್ಬಗಳಲ್ಲೊಂದು. ಜುಲೈ ತಿಂಗಳಲ್ಲಿ ಒಂದು ವಾರವಿಡೀ ನಡೆಯುವ ಈ ಪೂಜೆಗೆ ಒಂದು ಪೌರಾಣಿಕ ಘಟನೆಯೇ ಕಾರಣವೆನ್ನುತ್ತಾರೆ.

ಒಮ್ಮೆ ತ್ರಿಪುರದ ಕುಲದೇವತೆಗಳನ್ನು ಒಂದು ಕಾಡುಕೋಣ ಅಟ್ಟಿಸಿಕೊಂಡು ಬಂದು , ಅವರನ್ನು ಪೀಡಿಸಿತಂತೆ, ಆಗ ತ್ರಿಪುರದ ದೊರೆ ತ್ರಿಲೋಚನ ರಾಜಮಾತೆಯು ಅದನ್ನು ಅಡ್ಡಗಟ್ಟಿ ಈ ದೇವತೆಗಳನ್ನು ರಕ್ಷಿಸಿದಳಂತೆ.

ನಂತರ ರಾಜಮಾತೆಯ ಸಹಾಯದಿಂದಲೇ ದುಷ್ಟಶಕ್ತಿಯ ಅಟ್ಟಹಾಸದಲ್ಲಿ ಮರೆಯುತ್ತಿದ್ದ ಆ ಕಾಡುಕೋಣವನ್ನು ಈ ಕುಲದೇವತೆಗಳು ಸಂಹರಿಸಿದರಂತೆ, ಹರ, ಉಮಾ, ಹರಿ, ಬನಿ, ಕುಮೀರ್, ಗಣಪ, ಬಿಧಿ, ಮಾ, ಹಿಮಾದ್ರಿ, ಅಬ್ಧಿ, ಶಿಲಿ, ಕೋ, ಬುದಚಾ ಹಾಗೂ ಲಕ್ಷ್ಮೀ – 14 ಕುಲದೇವತೆಗಳ ಈ ಹಬ್ಬದಲ್ಲಿ ಸೂರ್ಯೋದಯಕ್ಕೆ ಮೊದಲೇ ಹೌರಾ ನದಿಯಲ್ಲಿ ಈ ಎಲ್ಲಾ ದೇವರುಗಳ ಮೂರ್ತಿಗಳನ್ನು ಹೊತ್ತು ತಂದು, ಅವುಗಳನ್ನು ಮೀಯಿಸಲಾಗುತ್ತದೆ. ಜುಲೈ ತಿಂಗಳ ಹುಣ್ಣಿಮೆಯ ರಾತ್ರಿ ಆರಂಭವಾಗುವ ಈ ಹಬ್ಬಕ್ಕೆ ಎಲ್ಲಾ ಪಂಗಡಗಳ ಜನರೂ ಬರುವುದರಿಂದ ಇದಕ್ಕೆ ಒಂದು ರಾಷ್ಟ್ರೀಯ ಹಬ್ಬದ ಸ್ವರೂಪ, ಮಹತ್ವ ಬಂದಿದೆ.

ಚಾವ್‍ತೈ ಎಂದು ಕರೆಯಲ್ಪಡುವ ಪ್ರಧಾನ ಅರ್ಚಕರಿಂದ ನಡೆಯುವ ಈ ಹಬ್ಬದಲ್ಲಿ ಮೇಕೆ-ಕುರಿಗಳು, ಪಾರಿವಾಳಗಳು ಹಾಗೂ ಕೋಣಗಳನ್ನು ಬಲಿ ಕೊಡುವ ಸಂಪ್ರದಾಯವಿದೆ. ಇಲ್ಲಿನ ಎಲ್ಲಾ ಆಚರಣೆಗಳೂ ನೆಲಮೂಲ ಸಂಸ್ಕøತಿಗೆ ಸಂಬಂಧಪಟ್ಟ ಬುಡಕಟ್ಟಿನ ಜನಾಂಗದವರಿಗೆ ಸಂಬಂಧಿಸಿದ್ದರಿಂದ, ಬಲಿ ನೀಡುವುದಂತೂ ಸಾಮಾನ್ಯ. ಮಾಂಸಾಹಾರ ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ.

‍ಲೇಖಕರು Avadhi Admin

September 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: