ಅನಾಮಿಕನಿಗೆ..
ನಂದಿನಿ ವಿಶ್ವನಾಥ ಹೆದ್ದುರ್ಗ.
ಮುಷ್ಕರ ಹೂಡಿದ್ದೆ ನಾನು
ಅದಕ್ಕೆ ಎದೆಗಟ್ಟಿ ಇರಬೇಕೆಂಬುದು
ತಿಳಿದಿಲ್ಲದ ಕಾಲವದು.
ಬೇಡಿಕೆ ಈಡೇರದ ಹೊರತು
ಸತ್ಯಾಗ್ರಹದಿಂದ ಸರಿಯುವು
ದಿಲ್ಲ
ಎಂದವಳದ್ದು ಕ್ಷುಲ್ಲಕ ಕರಾರು
‘ಅವನೊಂದಿಗೆ ಸಂಭಾಷಣೆ ಬೇಕಿತ್ತು.’
ಕಾಲದೆದೆಯೊಳಗೆ ದಾಪುಗಾಲಿನ
ನಡಿಗೆಯಲಿ ಅಚಾನಕ್ಕು ಸಿಕ್ಕವ ಅವ.
ನೋಡಿದೊಡನೆ ಧಿಗ್ಗನೆ ಎದೆ ಬೆಂಕಿ
ಹೊತ್ತಿ ವಿರಹಾಗ್ನಿ ದಹದಹಿಕೆ.
ಮುಂದಿನದೆಲ್ಲಾ ಬರಿ ಬಳಲಿಕೆ.
ತಕರಾರಿರದೆ ಅರ್ದ ಆಯಸ್ಸು ಕಳೆದವಳಿಗೆ
ಅವನಿಲ್ಲದೇ ಇನ್ನೇನೂ ಇಲ್ಲವೆನಿಸಿದ್ದು
ಸಧ್ಯದ ಅಚ್ಚರಿಯೇ.
ಅವನ ಪಡೆಯಬೇಕು
ಅವನ ಮಿಡಿಯಬೇಕು
ಅವನನ್ನೇ ಹಡೆಯಬೇಕು
ಎಂಬ ಹಠ ಹಿಡಿದ ಎದೆಯೊಳಗೆ
ಅವನೆಡೆಗೇ ಯಾನ,ಅವನದ್ದೇ ಧ್ಯಾನ.

ಕಂಪಿಸುತ್ತಲೇ ಒಮ್ಮೆ ಕೇಳಿದೆ
“ಓ ಅನಾಮಿಕನೇ.,
ಕಾಣದ ಕಾರಣಕ್ಕೆ ಕಾಮ ಬಲಿಯುತ್ತಿದೆ
ಒಮ್ಮೆ., ಒಮ್ಮೆ ನವುರಾಗಿ ನಿನ್ನ ಕೈ ಸೋಕಲೇ.?”
ಅಚ್ಚಗಪ್ಪಿನ ಹುಡುಗ ಅಪರೂಪದ ನಗೆ ನಕ್ಕ.
ಖಳಕ್ಕೆಂದಿತು ಹೃದಯ.
ಇಲ್ಲಿ ಬಾ ಎನ್ನುತ್ತಾ
ತೆರೆದ ತೋಳಿನೊಳಸೆಳೆದ…
ಅಬ್ಬಾ..!
ಅಪ್ಪುಗೆಗೆ ಒಪ್ಪಿಸಿಕ್ಕೊಳ್ಳುವ ಒಪ್ಪವಿತ್ತು.
ಎರಡು ಹೆತ್ತವಳಿಗೆ ಅಂದು
‘ಆವರಿಸುವುದ’ರ ಅರಿವಾಯ್ತು
ಈಗೀಗ.,
ನಡುರಾತ್ರಿಗಳಲಿ ನನಗೆ ಅವನೆದೆ
ಸನಿಹದ ಅಮಲು
ಸಿಗರೇಟು ಸುಟ್ಟ ಕಡುಗಪ್ಪು
ತುಟಿಗಳ
ನೇವರಿಸುವ ತೆವಲು.
ಒಮ್ಮೆ ತಬ್ಬಿ ‘ತವಕ’ಕ್ಕೆ ಅನ್ವರ್ಥವಾದವ
ಹೆಚ್ಚಿಗೇನೂ ಹಚ್ಚಿಕ್ಕೊಳ್ಳಲೇ ಇಲ್ಲ ನನ್ನ.
ಜಗದ ಆ ಮಗ್ಗುಲಲ್ಲಿ ಅವನು,
ಇಲ್ಲಿ ಮಮ್ಮಲಗುಡುತ್ತಾ ನಾನು.
ಒಂದು ಸಮೃದ್ಧ ಮಿಲನದ ಬಳಿಕ
ಮಾತು ಕೇಳಬಹುದೇ ದೇಹ.?
ಒಂದು ಸುದೀರ್ಘ ಸಂಭಾಷಣೆಗೆ
ಮಣಿಯಬಹುದೆ ಅವನೆದೆ.?
ನನ್ನ ಈ ಸಣ್ಣ ಬೇಡಿಕೆ
ಈಡೇರಿಸಲಾರ ಅವ ಯಾಕೆ.?
ಓ ಅನಾಮಿಕನೇ,
ಹೀಗೆ
ಮೂರು ಮೂರು ಮಾಸ
ಮೌನವಾಗಿರಲಾರೆ ನಾ,
ತಾಸು ಸಂಭಾಷಿಸು ಸಾಕು.
ಈ ಸಂಜೆ ಸತ್ಯಾಗ್ರಹ ಮುಗಿಸುವೆ.
ಇನ್ನು ಕಾಡಲಾರೆ.






Superb ..sakhattaagide
ವಾರೆವ್ಹಾ !!!!! ನಂದಿನಿ ವಾರೆವ್ಹಾ
ತುಮುಲವ ತೋರಿಸಿದ ರೀತಿ ವಿಭಿನ್ನ ಹಾಗೂ ಚೆನ್ನ