ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯ ಹಾದಿಯಗುಂಟ ಎದುರಾದುದನೆಲ್ಲ..

ಹರಿವು

ಸಹನಾ ಹೆಗಡೆ

 

ಕಿನಾರೆಗಳ ನಡುವೆ ಹರಿವ ನೀರಿಗೆ

ಕೊಡಬೇಡ ಯಾವುದೋ ಹೆಸರು

ಅಲೆಗಳೆದ್ದರೂ ಆಳೆತ್ತರ

ಭೋರ್ಗರೆವ ಸಾಗರವದಲ್ಲ

ಧುಮ್ಮಿಕ್ಕಿದರೂ ಭರದಲ್ಲಿ

ಜಲಪಾತವಲ್ಲ

 

ತುಳುಕಿದರೂ ತಿಳಿಜಲ

ಬಳುಕಿ ಝುಳುಝುಳು ನಾದ

ಸೆಳವಿದ್ದರೂ ಸಬಲ ಅಲ್ಲಲ್ಲಿ ಆಳ

ಸುಳಿಯಿರುವ ಹೊಳೆಯದಲ್ಲ

 

ಸ್ತಬ್ಧವಾದರೂ ಸಮಯ ಕಾಲದೇಶ

ಸ್ನಿಗ್ಧ ಸುಂದರ ಶ್ವೇತ ಆವೇಶ

ಕರಗಿ ನೀರಾಗಿ ಸರಿದರೂ

ಕೊರೆವ ಹಿಮವಲ್ಲ

 

ಕವಿದ ಕಾರ್ಮುಗಿಲು ಎವೆ

ಬಿರಿದು ಸುರಿಯುವ

ಮುಸಲಧಾರೆ ಮಳೆಯಲ್ಲ

ಬಿಂಬಿಸಿದರೂ ಮುಖಭಾವ

ಹೊಳೆವ ನಕ್ಷತ್ರ ನೀಲಿಬೆಳಕು

ತಿಳಿಜಲದ ಮೇಲ ಪ್ರತಿಬಿಂಬ

ತಿಳಿಕೊಳದ ಶಾಂತಿ ಅದರಲಿಲ್ಲ

ಕರೆಗೆಲ್ಲ ಓಗೊಟ್ಟು

ಮೊರೆಗೆಲ್ಲ ಕಿವಿಗೊಟ್ಟು

ಓರೆಕೋರೆಗಳ ಮೀರಿ ಮೆರೆದು

ತೊರೆದ ತೆರದಲಿ ತಿರೆಯ ಮೋಹ

ಆತುರದಿ ಚರಿಸಿದರೂ

ಹಾತೊರೆವ ತೊರೆಯಲ್ಲ

 

ಎದೆಯ ಹಾದಿಯಗುಂಟ

ಎದುರಾದುದನೆಲ್ಲ

ಹದವಾಗಿ ಬೆದಕಿ ಮಿದುವಾಗಿ ಕೆದಕಿ

ಬದಿಯಲೆತ್ತಿಟ್ಟು ಬದುಕ

ತುದಿಯ ನೋಡುತ ನಡೆದರೂ

ನದಿಯಾಗಲಿಲ್ಲ

 

ಹರಿವ ರಭಸಕ್ಕೆ

ತಡೆಗೋಡೆ ಒಡ್ಡು

ಒಡೆವ ಭೀತಿ ಒಳಒಳಗೆ

ಮಡುಗಟ್ಟಿ ಜಡವಾಗಿ

ಜಗ್ಗಿ ಕುಳಿತರೂ ತಳದಿ ಬಗ್ಗಡವಾಗಿ

ಕೊಳೆತು ನಾರುವ ಕೆರೆಯ ನಿಂತ ನೀರಲ್ಲ

 

ಹಸಿರು ಎಲೆಗಳ ಮೇಲೆ

ಹರವಾಗಿ ಒರಗಿರುವ

ಇಬ್ಬನಿಯ ಬಿಂದು ಇಬ್ಬದಿಗೆ

ಮುಸುಕಿದರೂ ಮಬ್ಬುಮಂಜು

ಪೋಣಿಸಿದ ಮಣಿಯ ಮಾಲೆಯಲ್ಲ

 

ಹೆಣ್ಣ ಕಣ್ಣಂಚಿನಲಿ ತುಂಬಿ

ತೊಟ್ಟಿಕ್ಕುವ ಕಂಬನಿಯ

ತುಳುಕು ಅದರಲಿ ಇನಿತು

ಇಲ್ಲದೆಯೂ ಇರಲಿಲ್ಲ

 

ನೀರಾದರೂ ನೀರಲ್ಲ

ಜೀವಸೆಲೆ ಬದುಕನೆಲೆ

ಹರಿವು ಬರಿದಾದ ದಿನ

ಇದ್ದರೂ ಇಲ್ಲ…

‍ಲೇಖಕರು avadhi

22 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading