ಜಿ ಎಸ್ ನಾಗನಾಥ್ ಸಂಪಾದಿತ ಕೃತಿ ‘ಕರ್ನಾಟಕದ ಕಾರ್ಟೂನಿಷ್ಠರು’
‘ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ’ ಪ್ರಕಟಿತ ಕೃತಿ ಇದಾಗಿದೆ.
ಈ ಕೃತಿಯ ಕುರಿತು ನಾಮದೇವ ಕಾಗದಗಾರ ಅವರ ಒಂದು ಬರಹ ಇಲ್ಲಿದೆ.
– ನಾಮದೇವ ಕಾಗದಗಾರ
ಬರವಣಿಗೆಗೆ ನಿಲುಕದ ಸತ್ಯಗಳನ್ನು ಒಂದು ಪುಟ್ಟ ಗೆರೆ ಸಲೀಸಾಗಿ ಹೇಳಿಬಿಡುತ್ತದೆ. ಮಾತು ಸೋಲುವಲ್ಲಿ ಕುಂಚ ಗೆಲ್ಲುತ್ತದೆ ಎಂಬುದಕ್ಕೆ ಜಿ.ಎಸ್. ನಾಗನಾಥ್ ಅವರ ಸಂಪಾದಕತ್ವದ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಹೆಮ್ಮೆಯ ಕಾಣಿಕೆಯಾದ ‘ಕರ್ನಾಟಕದ ಕಾರ್ಟೂನಿಷ್ಠರು’ ಕೃತಿಯೇ ಸಾಕ್ಷಿ. ಇದು ಕೇವಲ ಒಂದು ಪುಸ್ತಕವಲ್ಲ; ಇದು ಕನ್ನಡ ನಾಡಿನ ಹಾಸ್ಯ ಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಸಮಗ್ರ ದಾಖಲೆ. ‘ಕರ್ನಾಟಕದ ಕಾರ್ಟೂನಿಷ್ಠರು’ ಈ ಕೃತಿ ಒಂದು ಚಾರಿತ್ರಿಕ ದಸ್ತಾವೇಜು ಎನ್ನಬಹುದು.
ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನನ್ನು ಗೌರವಿಸುವುದು ಸಂಸ್ಕಾರ. ಆದರೆ ನೂರಾರು ಕಲಾವಿದರನ್ನು ಒಂದೇ ಸೂರಿನಡಿ ತಂದು ಅಕ್ಷರ ಮತ್ತು ರೇಖೆಗಳ ಮೂಲಕ ಅಮರಗೊಳಿಸುವುದು ಒಂದು ತಪಸ್ಸು. ಸಂಪಾದಕ ಜಿ.ಎಸ್. ನಾಗನಾಥ್ ಅವರು ಈ ಕೃತಿಯಲ್ಲಿ ಹಿರಿಯ-ಕಿರಿಯ ಎಂಬ ಭೇದವಿಲ್ಲದೆ ೧೦೧ ವ್ಯಂಗ್ಯಚಿತ್ರಕಾರರ ಬದುಕು ಮತ್ತು ಸಾಧನೆಯನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಬ್ಬ ಕಲಾವಿದನ ವ್ಯಕ್ತಿಚಿತ್ರದೊಂದಿಗೆ ಅವರು ಬಿಡಿಸಿದ ಎರಡು ಆಯ್ದ ವ್ಯಂಗ್ಯಚಿತ್ರಗಳನ್ನು ಆಯ್ಕೆ ಮಾಡಿ ನೀಡಿರುವುದು ಓದುಗರಿಗೆ ಆಯಾ ಕಲಾವಿದನ ಶೈಲಿ ಮತ್ತು ಆಲೋಚನಾ ಕ್ರಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಈ ಕೃತಿಯ ಅತ್ಯಂತ ಆಕರ್ಷಕ ಅಂಶವೆAದರೆ, ಸಂಪಾದಕರೇ ಸ್ವತಃ ಎಲ್ಲಾ ೧೦೧ ಕಲಾವಿದರ ಕ್ಯಾರಿಕ್ಯಾಚರ್ ಅಂದರೆ ವಿಕಟ ಭಾವಚಿತ್ರಗಳನ್ನು ಬಿಡಿಸಿರುವುದು. ಇದು ನಾಗನಾಥ್ ಅವರ ಕಲಾ ನೈಪುಣ್ಯತೆಗೆ ಮತ್ತು ಸಹೋದ್ಯೋಗಿ ಕಲಾವಿದರ ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಮುನ್ನುಡಿ,ಬೆನ್ನುಡಿ ಇಲ್ಲದ ಈ ಕೃತಿಯಲ್ಲಿ ಪ್ರತಿ ಪುಟವೂ ಮುನ್ನುಡಿಯಂತೆ ಇದ್ದು ಈ ಕೃತಿಯನ್ನು ಮುನ್ನೆಲೆಗೆ ತಂದು ನಿಲ್ಲಿಸಿವೆ. ಈ ಕೃತಿಯ ಹಿಂದೆ ಸಂಘದ ಹಲವು ಕಲಾವಿದರ ಶ್ರಮ ಎಷ್ಟಿದೆ ಎಂಬುದನ್ನು ಈ ಕೃತಿಯ ವಿಶಿಷ್ಟ ವಿನ್ಯಾಸವೇ ಹೇಳುತ್ತಿದೆ.
ಪ್ರತಿ ಪುಟಕ್ಕೊಬ್ಬ ಕಲಾವಿದ ಎಂಬ ಸುಂದರ ಪುಟವಿನ್ಯಾಸ ಓದುಗನಿಗೆ ಎಲ್ಲಿಯೂ ಏಕತಾನತೆ ತರುವುದಿಲ್ಲ. ವ್ಯಂಗ್ಯಚಿತ್ರ ಕಲೆ ಎಂದರೆ ಕೇವಲ ನಗಿಸುವುದಲ್ಲ, ಅದು ವ್ಯವಸ್ಥೆಯ ವೈಫಲ್ಯಗಳನ್ನು ಚುಚ್ಚಿ ತೋರಿಸುವ ‘ಮೌನ ಕ್ರಾಂತಿ’ ಎಂಬುದು ಈ ಕೃತಿಯ ಪ್ರತಿ ಪುಟವನ್ನು ತಿರುಗಿಸಿದಾಗ ಅರಿವಾಗುತ್ತದೆ. ಇಲ್ಲಿನ ಪದಪ್ರಯೋಗಗಳು,ರೇಖಾಪ್ರಯೋಗಗಳು ಕಲಾವಿದರ ಅಂತರAಗವನ್ನು ಅನಾವರಣಗೊಳಿಸುವಂತಿವೆ. ಸಂಪಾದಕೀಯ ವಿಭಾಗದ ತಮ್ಮ ಮನದ ಮಾತಿನಲ್ಲಿ ಜಿ.ಎಸ್. ನಾಗನಾಥ್ ಅವರು ಒಂದು ಮುಖ್ಯವಾದ ಮಾತು ಹೇಳಿದ್ದಾರೆ: “ವ್ಯಂಗ್ಯಚಿತ್ರಕಲೆ ಎಂಬುದು ಕೇವಲ ಗೆರೆಗಳಲ್ಲ, ಅದು ಸಮಾಜದ ಮುಖವಾಡಗಳನ್ನು ಕಳಚುವ ಕನ್ನಡಿ.” ಈ ಪುಸ್ತಕವು ಕೇವಲ ವ್ಯಂಗ್ಯಚಿತ್ರಕಾರರ ಪಟ್ಟಿಯಲ್ಲ, ಬದಲಿಗೆ ಆ ಕಲೆಯ ಸಂರಕ್ಷಣೆಗಾಗಿ ಮಾಡಿದ ಒಂದು ‘ದಾಖಲೀಕರಣದ ಹೋರಾಟ’. ‘ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ’ ನಡೆದು ಬಂದ ಹಾದಿಯ ಬಗ್ಗೆ ಗಮನಾರ್ಹ ಮಾಹಿತಿ ಇದೆ. ಈ ಸಂಘವು ೧೯೭೭ ನವೆಂಬರ್‌ನಲ್ಲಿ ಆರಂಭವಾಯಿತು ಎಂಬುದು ಮುಖ್ಯವಾದ ಸಂಗತಿ. ಅಂದರೆ, ಸುಮಾರು ಅರ್ಧ ಶತಮಾನದ (೪೮ ವರ್ಷಗಳ) ಸುದೀರ್ಘ ಇತಿಹಾಸವಿರುವ ಈ ಸಂಘದ ಬೆಳವಣಿಗೆಯ ಮಜಲುಗಳನ್ನು ಈ ಕೃತಿ ಒಳಗೊಂಡಿದೆ. ಈ ಕೃತಿಯು ಕೇವಲ ಇಂದಿನವರನ್ನು ಮಾತ್ರವಲ್ಲ, ೧೯೭೦-೮೦ರ ದಶಕದಿಂದ ಇಂದಿನವರೆಗಿನ ಕಲಾವಿದರ ಶ್ರಮವನ್ನು ಒಳಗೊಂಡಿದೆ. ಕರ್ನಾಟಕದ ವ್ಯಂಗ್ಯಚಿತ್ರ ಕಲೆ ಹೇಗೆ ರೂಪಾಂತರಗೊAಡಿದೆ ಎಂಬುದಕ್ಕೆ ಈ ಪುಸ್ತಕದ ಪ್ರತಿ ಪುಟವೂ ಒಂದು ಸಾಕ್ಷ್ಯ. ಪ್ರತಿಯೊಬ್ಬ ಕಲಾವಿದನ ಬಗ್ಗೆ ನಿರ್ದಿಷ್ಟ ಅಂಕಿ-ಅAಶಗಳು, ಅವರ ಸಾಧನೆಗಳು ಮತ್ತು ಅವರ ಶೈಲಿಯನ್ನು ವಿವರಿಸುವ ಸಣ್ಣ ಟಿಪ್ಪಣಿಗಳು ಲೇಖನದ ವಸ್ತುನಿಷ್ಠತೆಯನ್ನು ಹೆಚ್ಚಿಸಿವೆ.
ಕೃತಿಯ ಕೊನೆಯ ಎರಡು ಪುಟಗಳಲ್ಲಿ ಕಾಲದ ಪ್ರವಾಹದಲ್ಲಿ ಮರೆಯಾದ ಮಹಾನ್ ಚೇತನಗಳಾದ ವಿ. ಗೋಪಾಲ್, ಶ್ರೀಧರ ಹುಂಚ, ಮಾಯಾ ಕಾಮತ್, ಡಾ. ಸತೀಶ್ ಶೃಂಗೇರಿ, ಎಸ್.ವಿ. ಪದ್ಮನಾಭ, ಗಂಗಾಧರ್ ಅಡ್ಡೇರಿ, ಅರುಣ್ ನಂದಗಿರಿ ಮತ್ತು ಪ್ರೇಂ ಕುಮಾರ್ ಅವರ ಸಾಧನೆಯನ್ನು ಕೃತಿಯ ಕೊನೆಯಲ್ಲಿ ವಿಶೇಷವಾಗಿ ಸ್ಮರಿಸಿರುವುದು ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಇಂದಿನ ಪೀಳಿಗೆಗೆ ಹಳೆಯ ತಲೆಮಾರಿನ ಸೃಜನಶೀಲತೆಯ ಪರಿಚಯ ಮಾಡಿಕೊಡುವ ಸೇತುವೆಯಂತಿದೆ. “ಈ ಕೃತಿಯು ಕೇವಲ ನೂರು ಜನ ಕಲಾವಿದರ ಪರಿಚಯವಲ್ಲ; ಬದಲಿಗೆ ೧೯೭೭ರಲ್ಲಿ ಬಿತ್ತಿದ ಬೀಜ ಇಂದು ಹೇಗೆ ಮಹಾವೃಕ್ಷವಾಗಿ ಬೆಳೆದು ನಿಂತಿದೆ ಎಂಬುದನ್ನು ಸಾರುವ ಇತಿಹಾಸದ ಕೈಗನ್ನಡಿ. ನಶಿಸಿ ಹೋಗುತ್ತಿರುವ ಈ ಕಲೆಯನ್ನು ದಾಖಲಿಸುವ ಮೂಲಕ ಮುಂದಿನ ಪೀಳಿಗೆಗೆ ಭದ್ರವಾದ ಬುನಾದಿ ಹಾಕಿಕೊಟ್ಟಿದ್ದಾರೆ. ಪ್ರತಿಯೊಂದು ಕ್ಯಾರಿಕ್ಯಾಚರ್ ಹಿಂದೆ ಕೇವಲ ಕಲಾವಿದನ ಮುಖವಿಲ್ಲ, ಆತನ ದಶಕಗಳ ಕಾಲದ ವ್ಯಂಗ್ಯಚಿತ್ರದ ತಪಸ್ಸಿದೆ.”
ಒಟ್ಟಾರೆಯಾಗಿ, ‘ಕರ್ನಾಟಕದ ಕಾರ್ಟೂನಿಷ್ಠರು’ ಕೃತಿಯು ಕರ್ನಾಟಕದ ವ್ಯಂಗ್ಯಚಿತ್ರ ಕಲಾ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಹಾಸ್ಯದ ಲೇಪನದೊಂದಿಗೆ ಸಮಾಜದ ಅಂಕುಡೊAಕುಗಳನ್ನು ತಿದ್ದುವ ರೇಖಾಚಿತ್ರಕಾರರಿಗೆ ಸಲ್ಲಿಸಿದ ಈ ಅಕ್ಷರ ರೂಪದ ಗೌರವ ನಿಜಕ್ಕೂ ಅಭಿನಂದನೀಯ. ಕನ್ನಡ ಸಾಹಿತ್ಯ ಮತ್ತು ಕಲಾ ಲೋಕದ ಆಸಕ್ತರು ಇಟ್ಟುಕೊಳ್ಳಲೇಬೇಕಾದ ‘ಸಮಗ್ರ ಕೈಪಿಡಿ’ ಇದಾಗಿದೆ. ಜಿ.ಎಸ್. ನಾಗನಾಥ್ ಅವರ ಈ ಶ್ರಮ ಮತ್ತು ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಈ ಸಾಹಸದ ಪ್ರವೃತ್ತಿ ಕನ್ನಡ ನಾಡಿನ ಕಲಾ ಶ್ರೀಮಂತಿಕೆಯನ್ನು ಮತ್ತಷ್ಟು ಎತ್ತರಕ್ಕೊಯ್ದಿದೆ.






0 Comments