ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ- ವಿನಂತಿ

ನಂದಿನಿ ಹೆದ್ದುರ್ಗ

ನಿನ್ನ ಹಾಗೆಯೇ
ಈ ಹಿಂದೆಯೂ
ಇದೇ ಮುಖ್ಯರಸ್ತೆಯಲಿ
ಹಾದು ಹೋದವರು
ನನ್ನೂರ ಹೊರಳು
ದಾರಿ
ನೋಡಿ ನಿಟ್ಟುಸಿರಿಟ್ಟು
ಮುಂದುವರೆದರು.

ಕೊಂಡಿ ಕಳಚಿದ ಒಂದು ಪದಕ
ಮರೆತು ಉಳಿದ ಹಳೆ ಪುಸ್ತಕ
ಒಣಗಿದೊಂದು ಹೂ ಎಸಳು
ಝುಮುಕಿಯ ತಿರುಪು
ಬಚ್ಚಿಟ್ಟ ಕರ್ಚೀಫು
ಗಳು
ಒಮ್ಮೆ ಕೊಡವಿ
ಸುಮ್ಮನೆ ಹರವಿಕೊಂಡವು

ಹಕ್ಕಿ ತಾರಕದಲ್ಲಿ
ವಿರಹ ಹಾಡಿದಾಗೆಲ್ಲ
ಚಿಗುರೊಂದು ಹರೆ ಕಳಚಿ
ಉದುರುತ್ತದೆ
ಯಾರಿಗೂ ತಿಳಿಯದ
ಪ್ರೇಮಕಥೆಗಳ
ಕೈಮರವು ಪೊರೆಯುತ್ತದೆ

ಮಳೆ ಸುರಿವ ನನ್ನೂರ
ಹಾದಿಯಲಿ
ಈ ಬೆಳಗು
ಹಾದು ಹೋದವನೇ
ಹೊರಳು ಹಾದಿಗೆ ಕಾದು
ಕಾತರಸಿ
ನೋಡದೆ ಮರೆತವನೆ
ಸುಖದ ಹಾಡೊಂದನು
ಗುನುಗಿ ಬೆರಗು ಕಂಡವನೆ
ನನ್ನವನೇ
ಪರಿಮಳವಿರದ ಹುಡುಗನೇ

ಅಕಾಲ ಮಳೆಗೆ
ಮೊರೆವ ಗಾಳಿಗೆ
ಒಡಲು ಕೊರೆವ ಚಳಿಗೆ
ಕಂಗಾಲಾದ ಕಾಲವಿದು
ನಿರೀಕ್ಷೆಗಳ ಬಸುರಿಗೆ
ದಿನ ತುಂಬುತಿದೆ
ಪ್ರಸವದ ಭರವಸೆ
ಮರೆತೇಹೋಗಿದೆ

ಕೇಳಿಲ್ಲಿ ಓ ಇವನೆ
ಕೊಟ್ಟ ಮಾತನು ಮರೆತು
ಹೋಗಿ ಬಿಡು ದಯಮಾಡಿ
ಹನಿ ಹರಿಯದ ಮಳೆಯಲ್ಲಿ
ಪ್ರಶ್ನೆಗಳು ಕೊಚ್ಚಿ ಹೋಗಬಹುದು
ಹೊತ್ತು ಹೋಗದ ಹೊತ್ತಿನಲ್ಲಿ
ನದಿಗಳ ಲೆಕ್ಕ ತಪ್ಪಬಹುದು
ನಿಟ್ಟುಸಿರಿಡಬಾರದು

ಮಾಗಿ ಕಾಲಕ್ಕೆ ನೆನಪಾಗಿ
ಭಾರವಾಗುವುದೂ
ಸುಖವೇ ನನಗೆ

‍ಲೇಖಕರು Avadhi

20 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading