ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ- ಕಾವ್ಯವೆಂದರೆ

ನಂದಿನಿ ಹೆದ್ದುರ್ಗ

‘ಕಾವ್ಯ’ವೆಂದರೆ
ಎಂದರು
ಪುಲ್ಲಿಂಗ
ವೆಂದೆ
ತುಲಾಭಾರಕ್ಕೆ ಬದುಕನ್ನೆ
ಬೇಡಿ
ನಿಷ್ಠೆ ಎಂದರೆ ಬೆಚ್ಚಿ ಓಡಿ
ಅಚಾನಕ್ಕು ಹಸಿದು ಕೂಡಿ
ನಾನು ಮೋಹಿಸಿದ
ಏಕಮಾತ್ರ ಪುರುಷ
ಶುದ್ಧ ಹುಸಿ 
ಹರುಷ

ಬೇಸ್ತುಬಿದ್ದರು
ಪ್ರಶ್ನೆ ಕೇಳಿದವರು
ಮುಂದುವರಿದೆ
ಎರಡಕ್ಷರದ ಹೆಸರಿಟ್ಟುಕೊಂಡಿದ್ದೇನೆ
ಮುದ್ದು ಉಕ್ಕಿದಾಗೆಲ್ಲ ಕೂಗಿ
ಕರೆಯುತ್ತೇನೆ

ಕಾವು ಏರಿದ್ದರೆ ಕಂಪಿಸುತ್ತ
ಬಂದು ಕೈ ಹಿಡಿಯುತ್ತಾನೆ
ಕುರುಳು ಸರಿಸುತ್ತಾನೆ
ಕಣ್ಣಿಗಿಳಿಯುತ್ತಾನೆ
ತುಟಿಯನ್ನೇ ನೋಡುತ್ತ
ಹಸಿವು ಎನ್ನುತ್ತಾನೆ

ಸಂದೇಹಿಸಿದ್ದಕ್ಕೆ ಕಂಬನಿ ತುಂಬಿ
ಹಂಬಲಿಸಿ  ತಾಟು ಹಾಕುತ್ತೇನೆ
ಹೆಣ್ಣೇ ಎಂದವನ ಬಣ್ಣದ
ಮಾತಿಗೆ ಒಳಗೆ ಬೆಣ್ಣೆ ಕರಗುತ್ತದೆ

ಬಯಲು ಬೆಟ್ಟ ಕಣಿವೆ ಕಂದಕ
ಗಿರಿ ಝರಿ ಮೆರೆದು ಹರಿ
ಒರೆಸಿಕೊಂಡು ಜೇನು
ಬರೆಸಿಕೊಂಡು ತನ್ನ ತಾನು
ಕಾವು ಇಳಿದಾಗ ಕವಿತೆ ಬೆಳಗಿ.,
ಓದಿ ತಿದ್ದಿದರೆ ಒಪ್ಪುತಪ್ಪು
ಮುಗಿದ ಮೇಲೆ
ಸಿಗುವ ಮತ್ತೊಂದು ಮುತ್ತು

ತಾಟಿಗೆ ಊಟ ಬಡಿಸುವಾಗ
ಧಾಟಿಯಾಗಿರುತ್ತದೆ ಹೊಸಿಲು
ದಣಪೆಯಾಚೆಗೆ ಕೇಳಿಸದು
ಕವಿತೆಯ ಕೊನೆಯ ಸಾಲು

ಹಿಂದೆ ಓಡಿದವಳನ್ನೊಮ್ಮೆ 
ಹಿಂದಿರುಗಿ ನೋಡಿ
ಓಡುತ್ತಾನೆ ಬಿಡಿಸಿಕೊಂಡವನಂತೆ

ಸುದ್ದಿ ದೊರೆಯುತ್ತದೆ
ಹತ್ತಾರು ದಿವಸಕ್ಕೆ

ಅವಳ ಒಳಕೋಣೆಯೊಳಗೂ
ಕಣಿವೆ ಚಿತ್ರಿಸಿದನಂತೆ
ಹಸಿದ ಹಸುಕಂದನಂತೆ
ತುಟಿಗೆ ತುಟಿಯೊಡ್ಡಿದನಂತೆ

ಸಿಕ್ಕ ಸುದ್ದಿಗೆ ಬಿಕ್ಕಳಿಸುತ್ತೇನೆ
ಹೊಕ್ಕುಳಾಳದಲಿ ವಾಂಛೆ
ಮಿಸುಕಿ ಮಿಕ್ಕುತ್ತದೆ

ಮೂರು ಹುಣ್ಣಿಮೆ ಮುಗಿದು
ನಾನಿಟ್ಟ ಎರಡಕ್ಷರದ ಹೆಸರು
ಕರೆದಂತಾದಾಗೆಲ್ಲ
ಸಂಚು ಹೂಡಿ 
ಮನೆದಾರಿಯಲ್ಲೇ ನಡೆದಾಡಿ
ಸರಳ ಸಾಲುಗಳಲಿ ಮೂಡಿ
ಹೊಳೆಯುತ್ತದೆ ಒಳಕೋಣೆಯಲ್ಲಿ
ಮತ್ತೊಂದು ಕವಿತೆ

ಕುಂತವರು ಕೊಡವಿ
ಕಾವ್ಯವೆಂದರೆ
ಎನ್ನುತ್ತಿದ್ದಾರೆ ಅಲ್ಲಿ

‍ಲೇಖಕರು Avadhi

1 May, 2021

1 Comment

  1. T S SHRAVANA KUMARI

    ವಿಶಿಷ್ಟವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading