ನಾವೆಲ್ಲ ಮನುಷ್ಯರು.. ಕೇವಲ ಮನುಷ್ಯರಾಗಿದ್ದೆವು…

ಪ್ರಸಾದ್ ರಕ್ಷಿದಿ

ನಾವಾಗ ಮಡಿಕೇರಿಯಲ್ಲಿದ್ದೆವು. ಅಪ್ಪನಿಗೆ ಊರಿಂದ ಊರಿಗೆ ಟೀಪುಡಿ ಹೊತ್ತುಕೊಂಡು ಹೋಗಿ ಮಾರುವ ಕೆಲಸ, ಅವರಿಗಿಬ್ಬರು ಸಹಾಯಕ ಹುಡುಗರು. ಒಬ್ಬ ಅಬ್ದುಲ್ ಮಾನ್, ಇನ್ನೊಬ್ಬ ಬಾಬ.

ಅಬ್ದುಲ್ ಮಾನ್ ಮನೆಯಲ್ಲಿ ಎಮ್ಮೆ ಸಾಕಿದ್ದರು. ಅಲ್ಲಿಂದಲೇ ನಮ್ಮ ಮನೆಗೆ ನಿತ್ಯ ಎರಡು ಪಾವು ಹಾಲು. ನಾವು ಮನೆಯಲ್ಲಿ ಮೂರು ಮಕ್ಕಳು,ಅಮ್ಮ ಮತ್ತು ಅಪ್ಪನ ಟೀ ಗೂ ಇದೇ ಹಾಲು ಒದಗಬೇಕಿತ್ತು. ಹೆಚ್ಚಿನ ದಿನಗಳಲ್ಲಿ ಅಪ್ಪ ಬೆಳಗ್ಗೆ ಹೊತ್ತು ಮೂಡುವಾಗಲೇ ಟೀ ಕುಡಿದು ಮನೆಯಿಂದ ಹೊರಟರೆ ಬರುವಾಗ ರಾತ್ರಿ. ನಾನಾಗ ಎಳೆಯ ಮಗು. ಅಪ್ಪನೊಡನೆ ಬಾಬ ಸಹಾಯಕ್ಕೆಂದು ಹೋದ ದಿನಗಳಲ್ಲಿ ಅಬ್ದುಲ್ ಮಾನ್ ಹಗಲೆಲ್ಲ ನಮ್ಮ ಮನೆಯಲ್ಲಿ, ಆಗ ನನ್ನನ್ನು ಎತ್ತಿಕೊಂಡು ಆಟವಾಡಿಸುತ್ತಿದವ ಇವನೇ. ಕೆಲವು ಸಲಬಾಬ ಕೂಡಾ ನನ್ನನ್ನು ಹೆಗಲಿಗೇರಿಸಿಕೊಂಡು ಅಂಗಡಿಗೆ ಕರೆದೊಯ್ಯುತ್ತಿದ್ದ. ಇವರೆಲ್ಲ ಆಗ ಹತ್ತು ಹನ್ನೆರಡು ವಯಸ್ಸಿನ ಹುಡುಗರಿರಬೇಕು.

ನನಗೆ ಅಮ್ಮನ ಹಾಲು ‘ಅಮ್ಮ ಜಾಯಿ’ ಅಬ್ದುಲ್ ಮಾನ್ ಮನೆಯಿಂದ ಬರುತ್ತಿದ್ದ ಎಮ್ಮೆಯ ಹಾಲು ಅಬ್ಬಾನ್ ಜಾಯಿ. ಹಾಗೆ ನಾನು ಅಬ್ದುಲ್ ಮಾನ್ ತೊಡೆಯೇರಿ ಕುಳಿತು ಎಮ್ಮೆ ಹಾಲು ಕುಡಿದು ಬೆಳೆದವನು. ಮುಂದೆ ನನ್ನನ್ನು ಶಾಲೆಗೆ ಸೇರಿಸಲಾಯಿತು. ಆ ವೇಳೆಗೆ ಅಬ್ದುಲ್ ಮಾನ್ ಮತ್ತು ಬಾಬ ದೊಡ್ಡವರಾಗಿ ಬೇರೆ ಕಡೆ ಕೆಲಸಕ್ಕೆ ಸೇರಿದ್ದರು.

ಒಂದನೇ ತರಗತಿಯಲ್ಲಿ ಗೆಳೆಯನಾದವನು ಮುತ್ತಾಲಿ. ನಮ್ಮ ಮನೆಯಿಂದಾಚೆ ಫರ್ಲಾಂಗು ದೂರದಲ್ಲಿ ಅವನ‌ ಮನೆ. ಮುತ್ತಾಲಿ ನನಗಿಂತ ಎರಡು ವರ್ಷ ದೊಡ್ಡವನು. ಆತನ ಅಪ್ಪ ‌ಕುಡುಕ ಮೂರು ಕಾಸು ದುಡಿಯುವುದಿಲ್ಲ ಎಂದು ಅಮ್ಮ ಹೇಳುತ್ತಿದ್ದಳು. ಆತನ ತಾಯಿ ಕೂಲಿ ಕೆಲಸ ಮಾಡಿ ನಾಲ್ಕು ಮಕ್ಕಳನ್ನು ಸಾಕುತ್ತಿದ್ದಳು. ಮೂರು ಹೆಣ್ಣು ಮಕ್ಕಳು ಇವನೊಬ್ಬನೇ ಮಗ ಹಾಗಾಗಿ ಇವನನ್ನು ಶಾಲೆಗೆ ಹಾಕಿದ್ದಳು.
ಇವನ ಅಪ್ಪ ದೊಡ್ಡಕುಡುಕ ಎಂದು ಅಮ್ಮ ಅಪ್ಪನ ಬಳಿ ಹೇಳುವಾಗ ನಾನು ಕೇಳಿಸಿಕೊಂಡಿದ್ದೆ.

ಒಂದು ದಿನ ಶಾಲೆಯಲ್ಲಿ ಟೀಚರ್ ಎಲ್ಲರ ತಂದೆ ತಾಯಿಯರ ಹೆಸರು ಕೇಳಿದರು. ಮುತ್ತಾಲಿಗೆ ಹೇಗೋ ತನ್ನ ತಾಯಿಯ ಹೆಸರು ಗೊತ್ತಿತ್ತು. ಬೇರೆಯವರು ಕರೆಯುವಾಗ ಕೇಳಿಸಿಕೊಂಡಿರಬಹುದು. ಆದರೆ ತಂದೆಯ ಹೆಸರು ಗೊತ್ತಿರಲಿಲ್ಲ. ನಾನು ಅವನ ಸಹಾಯಕ್ಕೆ ಹೋಗಿ ಟೀಚರ್ ಇವನ ತಂದೆಯ ಹೆಸರು ದೊಡ್ಡ ಕುಡುಕ ಎಂದೆ. ನಾನು ಅದು ಅವನ ತಂದೆಯ ಹೆಸರೆಂದೇ ತಿಳಿದಿದ್ದೆ.

ಟೀಚರ್ ಹಾಗೆಲ್ಲ ಹೇಳಬಾರದೆಂದು ನನಗೆ ಜೋರು ಮಾಡಿದರು. ನನಗೆ ಅಳುಬಂತು. ಮುತ್ತಾಲಿಗೆ ಇದರಿಂದೇನೂ ಅನ್ನಿಸಿದಂತೆ ಕಾಣಲಿಲ್ಲ. ಅವನ ಏನೂ ಆಗದವನಂತೆ ಇದ್ದ.

ಮುತ್ತಾಲಿ ರಜಾದಿನಗಳಲ್ಲಿ ನಮ್ಮಲ್ಲಿ ಇರುತ್ತಿದ್ದ. ನಾವಿಬ್ಬರೂ ಆಡುತ್ತಿದ್ದವು. ನನ್ನಲ್ಲಿ ಒಂದು ರಬ್ಬರ್ ಚೆಂಡಿತ್ತು. ಅದು ನನ್ನ ಅಣ್ಣ ಚಿಕ್ಕವನಿದ್ದಾಗ ಅಪ್ಪ ಅವನಿಗೆ ಕೊಡಿಸಿದ್ದು. ಅದು ಅಣ್ಣನಿಂದ ಅಕ್ಕನಿಗೆ ಬಂದು ನಂತರ ನನ್ನ ಕೈಸೇರುವಾಗ ಆ ಚೆಂಡಿಗೆ ಏಳೆಂಟು ವರ್ಷ ಪ್ರಾಯವಾಗಿ ಬಣ್ಣ ಕಳೆದುಕೊಂಡು ಮೈಯೆಲ್ಲ ಚುಕ್ಕಿ ಬಿದ್ದು ಅವಸಾನ ಕಾಲದಲ್ಲಿತ್ತು. ಆ ಚೆಂಡಿನಲ್ಲಿ ನಾವಿಬ್ಬರು ದಿನವಿಡೀ ಆಡುತ್ತಿದ್ದೆವು. ನಾನು ಎರಡು ವರ್ಷ ಚಿಕ್ಕವನಾದ್ದರಿಂದ ಅವನಿಗೆ ನನ್ನೊಂದಿಗೆ ಆಟಕ್ಕೆ ಹೊಂದುತ್ತಿರಲಿಲ್ಲ.

ಮುತ್ತಾಲಿ ನಮ್ಮಲ್ಲಿಗೆ ಬರುತ್ತಿದ್ದ ಮುಖ್ಯ ಕಾರಣವೆಂದರೆ. ಅಮ್ಮ ನನ್ನ ಜೊತೆಯಲ್ಲಿ ಅವನಿಗೂ ಆಗಾಗ ಕೊಡುತ್ತಿದ್ದ ಚೂರು ಪಾರು ತಿಂಡಿ ಮತ್ತು ಕರಿ ಕಾಪಿ.

ಒಂದು ದಿನ ನನ್ನ ಅಮೂಲ್ಯ ಪ್ರಾಚ್ಯ ವಸ್ತುವಾದ ಚೆಂಡು ಕಾಣೆಯಾಯಿತು. ನಾನು ಅಳುತ್ತ ಕುಳಿತೆ. ಅದನ್ನು ಮುತ್ತಾಲಿಯೇ ಕದ್ದಿರಬೇಕೆಂದೂ ಅವನು ಬಂದರೆ ಅವನ ಶನಿ ಬಿಡುಗಡೆ ಮಾಡುತ್ತೇನೆಂದು ಶಪಥ ಮಾಡಿ ಅಮ್ಮ ನನ್ನನ್ನು ಸಮಾಧಾನ ಮಾಡಿದಳು.

ಎರಡು ದಿನ‌ ಮುತ್ತಾಲಿ ನಮ್ಮ ಮನೆಗೆ ಬರಲೇ ಇಲ್ಲ. ಒಂದು ದಿನ ಮುತ್ತಾಲಿ ಶಾಲೆಗೆ ಬರುವಾಗ ಆ ಚೆಂಡು ಮುತ್ತಾಲಿಯ ಕೈಯಲ್ಲಿತ್ತು. ನಾನದನ್ನು ನನ್ನ ಚೆಂಡೆಂದು ಅವನಿಂದ ಕಿತ್ತುಕೊಳ್ಳಲು ಹೋದೆ. ಅವನ ಶಕ್ತಿಯ ಮುಂದೆ ನನ್ನ ಕೈಸಾಗದೆ ದುಖಃ ಮತ್ತು ಅವಮಾನಗಳಿಂದ ಟೀಚರಿಗೆ ದೂರು ಕೊಟ್ಟೆ. ಟೀಚರ್ ಆ ಚೆಂಡನ್ನು ತರಿಸಿ ನೋಡಿ ಜೋರಾಗಿ ನಕ್ಕುಬಿಟ್ಟರು. ಇದನ್ನು ಮುತ್ತಾಲಿ ಎಲ್ಲಿಯೋ ಕಸದ ತೊಟ್ಟಿಯಿಂದ ಹೆಕ್ಕಿ ತಂದಿದ್ದಾನೆ ಕೊಳಕ ಎಂದು‌ಬೈದು ಅದನ್ನು ಎಸೆಯಲು ಹೇಳಿದರು. ನನ್ನ ಕೇಸು ಬರಕಾಸ್ತಾಯಿತು, ಚೆಂಡೂ ಸಿಗಲಿಲ್ಲ.

ನಾನು ಎಲ್ಲವನ್ನೂ ಅಮ್ಮನಿಗೆ ವರದಿ ಮಾಡಿ ಚೆಂಡಿಗಾಗಿ ಅಳುತ್ತ ಕುಳಿತೆ. ಅಮ್ಮ ದಸರಾ ಬರಲಿ ಅವಾಗ ಹೊಸ ಚೆಂಡು ಕೊಡಿಸಲು ಅಪ್ಪನಿಗೆ ಹೇಳುತ್ತೇನೆ ಎಂದಳು. ದಸರಾ ಬರಲು ಎಷ್ಟೋ ದಿನ ಕಾಯಬೇಕು. ಮಾರನೆಯ ದಿನ ಯಥಾ ಪ್ರಕಾರ ಮುತ್ತಾಲಿ ಮನೆಗೆ ಬಂದ. ಅಮ್ಮ ಅವನಿಗೆ ಚೆಂಡು ಯಾಕೆ ಕದ್ದೆ ಎಂದು ಬೈದು. ನಂತರ ಒಂದು ರೊಟ್ಟಿ ಮತ್ತು ಕರಿಕಾಪಿ ಕೊಟ್ಟಳು. ಅವನ ಶನಿ ಬಿಡುಗಡೆಯನ್ನು ಕಣ್ಣಾರೆ ಕಾಣುವ ಕುತೂಹಲದಲ್ಲಿದ್ದ ನನಗೆ ಅಮ್ಮ ಅವನಿಗೆ ಕಾಪಿ ತಿಂಡಿ ಕೊಟ್ಟದ್ದು ನೋಡಿ ಆಶ್ಚರ್ಯವಾಯಿತು. ಅಮ್ಮನ ಬೈಗುಳು ಮತ್ತಾಲಿಯ ಮೈಮೇಲೆ ಹಾಗೇ ಜಾರಿಹೋಯಿತೆ ವಿನಃ ಅಂಟಿದಂತೆ ಕಾಣಲಿಲ್ಲ. ಈಗ ಚೆಂಡಿಲ್ಲದೆ ಬೇರೇನೂ ಆಡುವಂತಿರಲಿಲ್ಲ. ನಮ್ಮ ಇಬ್ಬರ ಬಳಿಯೂ ಗೋಲಿ ಬುಗುರಿಗಳೂ ಇರಲಿಲ್ಲ.

ಆ ವರ್ಷವೆಲ್ಲ ಮುತ್ತಾಲಿ ನಮ್ಮ ಮನೆಗೆ ಬರುತ್ತಿದ್ದ ಮುತ್ತಾಲಿ. ಮುಂದಿನ ವರ್ಷ ಶಾಲೆಗೆ ಬರುವುದನ್ನು ನಿಲ್ಲಿಸಿದ. ವರ್ಷ ಕಳೆಯುವದರೊಳಗೆ ಅಪ್ಪ ನಮ್ಮನ್ನೆಲ್ಲ ಕಟ್ಟಿಕೊಂಡು ಹಾಸನ ಜಿಲ್ಲೆಗೆ ಬಂದು ನೆಲೆಸಿದ್ದರಿಂದ. ಮುತ್ತಾಲಿಯ ನಂತರದ ವೃತ್ತಾಂತ ನನಗೆ ತಿಳಿಯದು. ರಕ್ಷಿದಿ ಬಂದು ಸೇರಿದ ನಂತರ ನಾನು ಮತ್ತು ಅಕ್ಕ ಹಾನುಬಾಳು ಶಾಲೆ ಸೇರಿದೆವು. ಎಂಟು ಕಿಮೀ ದೂರದ ಹಾನುಬಾಳಿಗೆ ಬಸ್ ಸಿಕ್ಕಿದರೆ ಬಸ್ಸು ಇಲ್ಲವಾದರೆ ನಡೆದು ಹೋಗಬೇಕಿತ್ತು. ಇದ್ದುದೂ ದಿನಕ್ಕೆ ಮೂರು ಬಸ್ಸು ಮಾತ್ರ. ನಮ್ಮ ಮನೆಯಿಂದ ಒಂದು ಕಿ.ಮೀ ನಡೆದು. ಮುಖ್ಯ ರಸ್ತೆಯ ಬಳಿ ಇದ್ದ ಮಾಮು ಬ್ಯಾರಿ ಗಳ ಅಂಗಡಿ cum ಹೋಟಿಲಿನ ಬಳಿ ಬಸ್ಸಿಗಾಗಿ ಕಾಯುತ್ತಿದ್ದೆವು.

ರಜಾ ದಿನಗಳಲ್ಲಿ ‌ಮನೆಗೆ ಹಾಲು ತರಲು ನಾನು ಮಾಮು ಬ್ಯಾರಿಗಳ ಅಂಗಡಿಗೆ ಹೋಗುತ್ತಿದ್ದೆ. ಅವರು ಅಲ್ಲಿಂದ ನನ್ನನ್ನು ಬೆಳ್ಳೆಕೆರೆಯ ಪೋಸ್ಟ್ ಆಫೀಸಿಗೆ ಹೋಗಿ ಪೇಪರ್ ತಾ ಎಂದು‌ ಅಟ್ಟುತ್ತಿದ್ದರು. ಬೆಳ್ಳೆಕೆರೆಯಲ್ಲಿ ಶಾನುಭೋಗರು ಅನಂತ ಸುಬ್ಬರಾಯರು. ಅವರ ಮನೆಯೇ ಪೋಸ್ಟ್ ಆಫೀಸು ರಕ್ಷಿದಿ ಎಸ್ಟೇಟ್ ಮಾಲೀಕರಾದ ಇಬ್ರಾಹಿಂ ಅವರು ಅನಂತ ಸುಬ್ಬರಾಯರ‌ ಆಪ್ತರು. ಇಡೀ ಊರಿನಲ್ಲಿ ಇಬ್ರಾಹಿಂ ಸಾಹುಕಾರರ ಮನೆಗೆ ಬರುತ್ತಿದ್ದ ಏಕೈಕ ದಿನಪತ್ರಿಕೆ ಪ್ರಜಾವಾಣಿ ಯನ್ನು ನಾನು ಬೆಳ್ಳೆಕೆರೆಯಿಂದ ಮಾಮು ಬ್ಯಾರಿಗಳ ಅಂಗಡಿಗೆ ತಂದು ಕೊಟ್ಟರೆ ಬ್ಯಾರಿಗಳು ಇಕೊ ಕೋಳಿ ಕಳ್ಳ ಎಂದು ಹೊಗಳಿ ಒಂದು ಬಿಸ್ಕೇಟನ್ನು ಕೊಡುವರು.

ನಂತರ ಮಾಮು ಬ್ಯಾರಿಗಳು ಪೇಪರ್ ಬಿಡಿಸಿ. ಓದತೊಡಗುವರು. ಅವರು ಗಟ್ಟಿಯಾಗಿ ರಾಗವಾಗಿ ಓದುವಾದ ಮಂತ್ರ ಪಠನದಂತೆ ಕೇಳುತ್ತಿತ್ತು. ಆಗ ಕೆಲವು ಸಲ ಊರಿನ ಹಿರಿಯರಾದ ಸೋಮೇಗೌಡರು, ಅಪ್ಪು ಗೌಡರು ಮುಂತಾದವರೆಲ್ಲ ಸೇರುವರು. ಮಾಮುಬ್ಯಾರಿಗಳು ಪೇಪರ್ ಓದುವ ಬರಾಸಿನಲ್ಲಿ ಕಾಲಂಗಳು ಮರೆತು ಸುದ್ದಿಗಳು ಕಲಸಿಕೊಳ್ಳವುದು. ಇಬ್ರಾಹಿಂ ಸಾಹುಕಾರರು ಪೇಪರಿಗೆಂದು ಬಂದರೆ ಮಾಮುಬ್ಯಾರಿಗಳು ತಮ್ಮ ಕುರ್ಚಿಯನ್ನು ಅವರಿಗೆ ಬಿಟ್ಟುಕೊಟ್ಟು ಪೇಪರನ್ಬು ಕೊಡುವರು. ಆಗ ಇಬ್ರಾಹಿಂ ಸಾಹುಕಾರರು ‘ಇವ ಓದಿ ಅಕ್ಷರಗಳನ್ನು ಉಳಿಸಿದ್ದರೆ ನಾನು ಓದಬೇಕಷ್ಟೆ’ ಎನ್ನುವರು. ನಂತರ ಅವರು ಪ್ರಪಂಚದ ಸುದ್ದಿಯನ್ನೆಲ್ಲ ಹೇಳುವರು.

ಮಾಮು ಬ್ಯಾರಿಗಳಿಗೂ ನನ್ನ ಅಪ್ಪನಿಗೂ ದೋಸ್ತಿಯಿತ್ತು. ಈ ದೋಸ್ತಿಯಿಂದಾಗಿ ಅಮ್ಮ ತನ್ನ ತವರಿನ ಕಡೆಯಿಂದ ತಂದ ಮಾವಿನಮಿಡಿ ಉಪ್ಪಿನಕಾಯಿಯಲ್ಲಿ ಮಾಮುಬ್ಯಾರಿಗಳಿಗೂ ಪಾಲು ಹೋಗುವುದು. ಆಗ, ಬೇಕಾದರೆ ನಾನು ಹಾಕಿದ ಉಪ್ಪಿನ ಕಾಯಿ ಕೊಡಿ, ಅಲ್ಲಿಂದ ತಂದದ್ದು ನನಗೆ ಬೇಕು ಎಂದು ಅಮ್ಮ ತಡೆಯುವಳು. ನಂತರ ಅಮ್ಮ ಮತ್ತು ಅಪ್ಪ‌ನಿಗೆ ಮಾರಾಮಾರಿ ಜಗಳ ಪ್ರಾರಂಭವಾಗಿ ಕೊನೆಗೆ ಅಪ್ಪ ಉಪ್ಪಿನ ಕಾಯಿ ಹಿಡಿದು ಮಾಮು ಬ್ಯಾರಿಗಳ ಅಂಗಡಿಯತ್ತ ಹೋಗುವಾಗ ಅಮ್ಮ ಹಲಸಿನ ಕಾಯಿ ಕೇಳಲುಮರೆಯಬೇಡಿ ಎನ್ನುವಳು ಮಾಮುಬ್ಯಾರಿಗಳ ತೋಟದಲ್ಲಿ ಒಳ್ಳೆಯ ಜಾತಿಯ ಹಲಸಿನ ಮರಗಳಿದ್ದವು. ಅವರಿಗೆ ಸಾಕಷ್ಟು ಜಮೀನಿದ್ದು ಸ್ವತಃ ಗದ್ದೆ ಹೂಡುತ್ತಿದ್ದ ಅಪ್ಪಟ ರೈತ.

ಇದೇ ಮಾಮುಬ್ಯಾರಿಗಳು ನಾನು ಮುಂದೆ ಈ ಊರಿನಲ್ಲಿ ಕೃಷಿಕನಾಗಿ ನೆಲೆಸಲು ಕಾರಣರಾದವರಲ್ಲಿ ಪ್ರಮುಖರು.

ಹಾನುಬಾಳಿನ ಪ್ರೈಮೆರಿ ಶಾಲೆಯಲ್ಲಿ ಜೊತೆಯಾದವರು. ರಹಮತುಲ್ಲಾ ಮತ್ತು ಅದ್ರಾಮ. ಇವರ ಏಳನೇ ತರಗತಿಯವರೆಗೂ ಜೊತೆಯಲ್ಲಿದ್ದರು.
ನಂತರ ಹೈಸ್ಕೂಲಿನಲ್ಲಿ ಕಬ್ಬಡ್ಡಿ ರಜಾಕ್. ನಂತರದ ದಿನಗಳಲ್ಲಿ ಅಥಾವುಲ್ಲ. ಪೊಡಿಯಬ್ಬ, ಅದ್ದು ಮಹಹಮದ್, ಖಾದರು, ಪೋಕರ, ಅಬ್ಬಾಸ್, ರಾಜು ಗೌಡ, ಶಿವ ಶಂಕರ್, ಅಬೂಬಕರ್, ರಿಚರ್ಡ್ ಲೋಬೋ, ರೊನಾಲ್ಡ್, ಸನ್ನಿ, ಇಬ್ರಾಯಿ, ಅಚ್ಚಿ, ಹಮೀದ್, ಸತೀಶ, ರಾಜಶೇಖರ, ಜಯಂತ, ಮುರಳಿ, ಲೋಕೇಶ್, ಮಂಜುನಾಥ, ಗುಡ್ಡಪ್ಪ, ಇಸಾಕ್, ರಮೇಶ, ಉಗ್ಗಪ್ಪ, ಹೀಗೇ ನೂರಾರು ಜನರು ಗೆಳೆಯರಾದರು.

ನಾವು ಒಟ್ಟಿಗೆ ಸೇರುತ್ತಿದ್ದವು. ಜಾತ್ರೆ, ಸಿನಿಮಾ ನೋಡಿದೆವು. ಅನೇಕ ಸಂಗತಿಗಳಿಗೆ ಒಟ್ಟಾಗಿ ಹೋರಾಡುತ್ತ ಪರಸ್ಪರ ಜಗಳವಾಡುತ್ತ ರಾಜಿಯಾಗುತ್ತ ಇದ್ದೆವು. ಗಣಪತಿ ಉತ್ಸವ ಮಾಡಿದೆವು. ರಂಜಾನ್. ಬಕ್ರೀದ್ ನಲ್ಲಿ ಒಟ್ಟಾದೆವು. ಕ್ರಿಸ್ ಮಸ್ ಕೇಕ್ ಹಂಚಿಕೊಂಡೆವು.
ಹೊಸವರ್ಷದ ಪಾರ್ಟಿ ಮಾಡಿದೆವು. ರಂಗಮಂದಿರ ಕಟ್ಟಿದೆವು. ನಾಟಕ ಪ್ರದರ್ಶನ ಮಾಡಿದೆವು. ಊರಿಗೆ ಶಾಲೆ ಆಸ್ಪತ್ರೆ ತಂದೆವು.

ದಶಕಗಳ ಕಾಲ ನಾವೆಲ್ಲ ಮನುಷ್ಯರು. ಕೇವಲ ಮನುಷ್ಯರಾಗಿದ್ದೆವು. ಈಗ ನಾವು ಹಿಂದುಗಳು. ಮುಸಲ್ಮಾನರು. ಕ್ರೈಸರು ಎಂದು ದೊಡ್ಡ ದೊಡ್ಡವರು ಹೇಳುತ್ತಿದ್ದಾರೆ.

ಇರಬಹುದೇ ಎಂದು ಭ್ರಮೆಯಾಗುತ್ತಿದೆ.

‍ಲೇಖಕರು Avadhi

May 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: