ಧ್ರುವ ಪಾಟೀಲ್ ಓದಿದ ‘ದೀಪವಿರದ ದಾರಿಯಲ್ಲಿ’

ಸಲಿಂಗ ಪ್ರೇಮದ ಹೊಸ ಕಥನ ‘ದೀಪವಿರದ ದಾರಿಯಲ್ಲಿ

ಧ್ರುವ ಪಾಟೀಲ್

ನಮ್ಮ ಸಮಾಜದಲ್ಲಿ ಎಲ್ಲರಿಗೂ ಗೌರವದಿಂದ ಸಮಾನವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಈ ಸಮಾಜದಲ್ಲಿ ಬದುಕುತ್ತಿರುವ ಗೇ, ಲೆಸ್ಬಿಯನ್, ಸೆಕ್ಸ್ ವರ್ಕರ್, ಕ್ವೀರ್, ಜೋಗತಿ ಸಮುದಾಯಗಳ ನೋವನ್ನು ನೋಡಿದರೆ, ಅವರ ದನಿಗೆ ಕಿವಿಯಾದರೆ ಗೊತ್ತಾಗುತ್ತದೆ ನಾವು, ನಮ್ಮ ಸಮಾಜ ಅವರನ್ನು ಕಾಣುವ, ನಡೆಯಿಸಿಕೊಳ್ಳುವ ದೃಷ್ಟಿಕೋನ ಎಂತಹುದು ಎಂದು. ಏಕೆಂದರೆ ನಾವು ಅನುಭವಿಸದೇ ಇರುವ ನೋವು ನಮ್ಮನ್ನು ವಿಕೃತಿಗಳನ್ನಾಗಿ ಮಾಡುತ್ತದೆ. ಇನ್ನೊಬ್ಬರ ನೋವು ನಮ್ಮನ್ನು ಮನುಷ್ಯರನ್ನಾಗಿ ಮಾಡಬೇಕಾಗಿದೆ. ಈ ಮೇಲಿನ ಎಲ್ಲ ಸಮುದಾಯವು ಸಮಾನತೆಯನ್ನು ಬಯಸಿ ಹೊಸ ಹೆಜ್ಜೆಯನ್ನು ಇಡುತ್ತಿವೆ. ಅದರಲ್ಲೂ ಕಲೆ, ಸಾಹಿತ್ಯ, ಸಾಮಾಜಿಕ ಸೇವೆಯಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.

ಇತ್ತೀಚೆಗೆ ಈ ಸಮುದಾಯಗಳ ಕುರಿತ ಸಂದರ್ಶನ, ಆತ್ಮಕತೆ, ಕತೆ, ಕಾದಂಬರಿಗಳು ರಚನೆಗೊಳ್ಳುತ್ತಿರುವುದು ಸಂತಸದ ಸಂಗತಿ. ಈ ಮೂಲಕ ಆದರೂ ಅವರ ನೋವು, ನಲಿವು, ಸಂಕಷ್ಟ ನಮ್ಮನ್ನು ಮನುಷ್ಯರನ್ನಾಗಿ ಮಾಡಲಿ ಎಂಬ ಆಶಯದೊಂದಿಗೆ ಮೂಡಿ ಬಂದ ಸುಶಾಂತ್ ಕೋಟ್ಯಾನ್ ಅವರ ಹೊಸ ಕಾದಂಬರಿ ’ದೀಪವಿರದ ದಾರಿಯಲ್ಲಿ.’ ಇದು ಸಲಿಂಗ ಪ್ರೇಮದ ಕುರಿತ ಕಾದಂಬರಿ. ಈ ಸಲಿಂಗ ಪ್ರೇಮ ಭಾರತದಲ್ಲಿ ಇನ್ನೂ ಮಾನ್ಯತೆಯನ್ನು ಪಡೆದಿಲ್ಲ. ಆದರೆ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಇದರ ಕುರಿತು ಪಾಸಿಟಿವ್ ಅಭಿಪ್ರಾಯ ವ್ಯಕ್ತಗೊಂಡಿದೆ. ಕೃಷಿಕ್ ಎ.ವಿ. ಅವರು ತಿಳಿಸುವ ಹಾಗೆ ’ಸಲಿಂಗ ಪ್ರೇಮ/ಕಾಮ ಈ ಪದದ ಉತ್ಪತ್ತಿ ೧೯ನೇ ಶತಮಾನದಲ್ಲಿ ಆಯಿತು. ವಿರುದ್ಧ ಲಿಂಗದ ಪ್ರೇಮದ ಉತ್ಪತ್ತಿ ಆನಂತರ ಆಯಿತು. ನಂತರ ೨೦ನೇ ಶತಮಾನದಲ್ಲಿ ದ್ವಿಲಿಂಗಿ ಪ್ರೇಮದ ಪದ ಉತ್ಪತ್ತಿ ಆಯಿತು.’ ಅಮೆರಿಕಾದ ಮೂಲ ನಿವಾಸಿಗಳಲ್ಲಿ ಸಲಿಂಗ ದಂಪತಿಗಳು ಆತ್ಮದ ಪ್ರತೀಕದಂತೆ ಇರಲು ಅವಕಾಶವಿತ್ತು. ಸಲಿಂಗ ಪ್ರೇಮಕ್ಕೆ ಅವಕಾಶವಿತ್ತು. ಬಿಳಿಯರು ಅಮೆರಿಕ ತಲುಪಿದ ನಂತರ ಇದನ್ನು ಕಾನೂನು ಮೂಲಕ ಹತ್ತಿಕ್ಕಿದರು. ಚೀನಾದ ಇತಿಹಾಸದಲ್ಲಿ ಸಲಿಂಗ ಪ್ರೇಮವೂ ಬಹಳ ಪರಿಣಾಮಕಾರಿಯಾಗಿ ದಾಖಲಾಗಿದೆ. ಸಲಿಂಗ ಪ್ರೇಮವನ್ನು ಸಹಜವೆಂದು ಭಾವಿಸಲಾಗಿತ್ತು. ಬ್ರಿಟಿಷರ ಆಗಮನದವರೆಗೂ ಇದನ್ನು ಅನೈಸರ್ಗಿಕ ಎಂದು ಭಾವಿಸಿರಲಿಲ್ಲ. ಅವರ ಆಗಮನದ ನಂತರ ಇದು ತಪ್ಪು ಎಂದು ಜನರಲ್ಲಿ ಬಿಂಬಿಸಲಾಯಿತು. ಯುರೋಪಿನಲ್ಲೂ ಸಲಿಂಗ ಪ್ರೇಮ ಬಹಳ ಪ್ರಚಾರದಲ್ಲಿತ್ತು ಮತ್ತು ಕುಲೀನ ಮನೆತನದವರು ಅಧಿಕಾರಶಾಹಿಗಳು ಕೂಡ ಇದರ ಸಮರ್ಥಕರಾಗಿದ್ದರು. ನಂತರ ಸಾಕಷ್ಟು ಸಾಹಿತ್ಯದ ಕೃತಿಗಳು ಸಲಿಂಗ ಪ್ರೇಮದ ಕುರಿತು ಮಾತನಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಸಲಿಂಗ ಪ್ರೇಮವನ್ನು ಸಾಮನ್ಯವಾಗಿ ಮತ್ತು ಸರಳವಾಗಿ ಹೇಳುವುದಾದರೆ ಒಂದೇ ಲಿಂಗದ ಜೀವಿಗಳ ನಡುವಿನ ಲೈಂಗಿಕ ಕ್ರಿಯೆ, ಪ್ರಣಯ, ಪ್ರೀತಿ, ಪೋಷಣೆ, ಸ್ನೇಹ ಎಂದು ಹೇಳಬಹುದು.

ʼದೀಪವಿರದ ದಾರಿಯಲ್ಲಿʼ ಕಾದಂಬರಿಯ ಕಥೆಯ ನಾಯಕ ಸುಕೇಶ. ಹುಟ್ಟುತ್ತಲೇ ಗಂಡಾಗಿ ಜನಿಸಿದರೂ ಅಂತರಾಳದಲ್ಲಿ ಹೆಣ್ಣಿನ ಆತ್ಮವನ್ನು ಹೊಂದಿದವನು. ಬೆಳೆಯುತ್ತಾ ಹೆಣ್ಣು ಪ್ರಜ್ಞೆ ಜಾಗೃತಗೊಳ್ಳತೊಡಗಿದಂತೆ ಸುಕೇಶ ದ್ವಂದ್ವಕ್ಕೆ ಬೀಳುತ್ತಾನೆ. ಯಕ್ಷಗಾನದಲ್ಲಿ ಅವನು ಸ್ತ್ರೀ ಪಾತ್ರ ಅಭಿನಯ ಮಾಡುತ್ತಿರುವ ಕಾರಣ ಕಲೆಯಲ್ಲಿ ಮಾತ್ರ ಮನಸ್ಸು ಮನಸ್ಸುಗಳನ್ನು ಬೆಸೆಯುವುದಕ್ಕೆ ಪಾತ್ರಗಳೇ ಸಾಕ್ಷಿಯಾಗುತ್ತವೆ ಎಂಬುದಕ್ಕೆ ಇವನೇ ಸಾಕ್ಷಿ. ಕ್ವೀರ್ ಸಮುದಾಯದ ಶಿಲೋಕ್ ಮುಕ್ಕಾಟಿ ಅವರು, ’ಕಲೆಯ ಮೂಲಕ ನಾವು ಜಾಗೃತಿ ಮೂಡಿಸಬಹುದು. ಮನಸ್ಸುಗಳ ಜೊತೆಗಿನ ಸಂವಾದಕ್ಕೆ ಕಲೆಯೇ ಪ್ರಬಲವಾದ ಮಾಧ್ಯಮ.ʼ ಎಂದು ಹೇಳುತ್ತಾರೆ. ಸುಕೇಶ ಪ್ರತಿನಿತ್ಯವೂ ಸ್ತ್ರೀಯಾಗಿ ಮಾತ್ರ ಅಭಿನಯಿಸುವುದಲ್ಲದೆ ತನ್ನಂತರಂಗದ ದನಿಗೆ ನ್ಯಾಯವೊದಗಿಸಿ ಸಂತೋಷದಿಂದಿರುವನು. ಅವನನ್ನು ಚುಕ್ಕಿ ಎಂಬ ಹೆಸರಿನಿಂದ ಕರೆಯುವ ಸ್ನೇಹಿತ ಮತ್ತು ಕುಟುಂಬ ವರ್ಗ ಸುಕೇಶನ ಹೆಣ್ಣಿನಾತ್ಮದ ಪ್ರತೀಕವಾಗಿಯೇ ಎಂದೇ ತಿಳಿಯಬಹುದು.

ಯಕ್ಷಗಾನದಲ್ಲಿ ಸುಕೇಶನ ಸ್ತ್ರೀ ಅಭಿನಯ ಪಾತ್ರಕ್ಕೆ ಮಾರು ಹೋದವರಿಲ್ಲ. ಅವನಿಲ್ಲದೆ ಹೋದರೆ ಯಕ್ಷಗಾನ ಕಳೆಗುಂದುತ್ತಾ ಇತ್ತು. ಕೆಲವು ಸಲ ಪುರುಷರು ಗುಪ್ತವಾಗಿ ಸುಕೇಶನನ್ನು ಹೆಣ್ಣೆಂದು ತಿಳಿದು ಒತ್ತಾಯಿಸಿದುಂಟು. ಆದರೆ ಸುಕೇಶನು ದೇಹ ಬಯಕೆಗಿಂತ ಅವನನ್ನು ಪ್ರೀತಿಸುವ ದೇಹಕ್ಕಾಗಿ ಹಂಬಲಿಸದವನು. ಅದು ಕೇವಲ ತನ್ನ ಸ್ನೇಹಿತ ರವೀಂದ್ರನೊಂದಿಗೆ ಮಾತ್ರ ಎಂದು ನಂಬಿದವನು. ಇವನ ಸ್ನೇಹಿತರಾದ ರಘುಪತಿ, ಸಂಜೀವ ಅವರದು ಇದೇ ಪರಿಸ್ಥಿತಿ. ಆದರೆ ಭಿನ್ನ ಬದುಕು. ಅವರಿಗೆ ಏಕವ್ಯಕ್ತಿ ನಿಷ್ಠೆ ಇರಲಿಲ್ಲ. ಅದು ಸಹಜ ಕೂಡಾ ಹೌದು. ಆದರೆ ಚುಕ್ಕಿ ಗೆಳೆಯ ರವೀಂದ್ರನಿಗೆ ಬೇರೆ ಹೆಣ್ಣಿನೊಂದಿಗೆ ಮದುವೆ ಆಗುವಾಗ ಚುಕ್ಕಿಗೆ ಆಗುವ ವೇದನೆ ಹೇಳತೀರದು. ಅವನು ರವೀಂದ್ರನನ್ನು ಹಲವು ಸಾರಿ ದೈನ್ಯದಿಂದ ತನಗೆ ಮೋಸ ಮಾಡಬೇಡಿ ಎಂದು ಬೇಡಿಕೊಂಡರೂ, ರವೀಂದ್ರ ಕೇಳದೇ ಹೋದಾಗ ಅವನು ಡಿಪ್ರೇಶನ್‌ಗೆ ಒಳಗಾಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿ ಬದುಕಿ ಬರುತ್ತಾನೆ.

ಚುಕ್ಕಿ ಬಯಸಿದ್ದು ದೇಹ ಸಾಂಗತ್ಯಕ್ಕಿಂತ ಹೆಚ್ಚಾಗಿ ಆತ್ಮಸಾಂಗತ್ಯವನ್ನು. ಎದೆಯ ದನಿಯನ್ನು ಅರಿತುಕೊಳ್ಳುವವರು ಅವಳಿಗೆ ಬೇಕಾಗಿತ್ತು. ಪ್ರೀತಿಯನ್ನು ಹಂಬಲಿಸಿ ಹೋಗುವ ಚುಕ್ಕಿಯ ಬದುಕು ಕೊನೆಗೆ ಬೆಳಕು ಇಲ್ಲದ ದಾರಿಯಲ್ಲಿ ಬಂದು ನಿಲ್ಲುತ್ತದೆ. ಒಮ್ಮೆ ಮದುವೆಯಾದ ರವೀಂದ್ರ ದಂಪತಿಯನ್ನು ಒಟ್ಟಿಗೆ ನೋಡಿದಾಗ ಚುಕ್ಕಿಯ ಮನಸ್ಸಿನಲ್ಲಿ ಆಗುವ ವೇದನೆ, ʼನಾನು ಹೆಣ್ಣಾಗಿಯೇ ಹುಟ್ಟಿದಿದ್ದರೆ ಇವತ್ತು ಇದೇ ರೀತಿ ರವೀಂದ್ರನ ಪಕ್ಕದಲ್ಲಿ ನಿಲ್ಲಬಹುದಿತ್ತು… ದೇವರು ಯಾಕಾದರೂ ನನ್ನನ್ನು ಈ ರೀತಿ ಹುಟ್ಟಿಸಿದನೋ… ನನ್ನ ಮನಸ್ಸಿನಲ್ಲಿ ರವೀಂದ್ರನನ್ನು ಮದುವೆಯಾಗಿ, ಅವನ ಸಂಗಾತಿಯಾಗಿ ಬಾಳಬೇಕೆಂದು ಎಷ್ಟೊಂದು ಆಸೆಯಿತ್ತು. ನನ್ನ ಹೆಣ್ಣು ಮನಸ್ಸಿನಲ್ಲಿ ಸಹಜವಾಗಿ ಹುಟ್ಟುವ ಆಸೆ ಅದು. ಅದು ನನ್ನ ತಪ್ಪೆ? ಒಟ್ಟಿನಲ್ಲಿ ದೇವರಿಗೂ ಸಲ್ಲದ ಇತ್ತ ಅಲಂಕಾರಕ್ಕೂ ಯೋಗ್ಯವಲ್ಲದ ಹೂವಿನಂತೆ ನನ್ನ ಬದುಕು…ʼ (ಪು.೫೩). ಈ ಮಾತು ಪ್ರತಿಯೊಬ್ಬ ಸಹಜ ಹೆಣ್ಣಿನ ಅಂತರಂಗದ ಮಾತಾಗಿರುತ್ತದೆ.

ಒಂದು ವೇಳೆ ಬಾಹ್ಯವಾಗಿ ಸಹಜ ಹೆಣ್ಣು ರೂಪ ಧರಿಸಿ ಸುಕೇಶ ಜನಿಸಿದ್ದರೆ, ಅವಳು ಬಯಸಿದ ಜೀವನ ಅವಳಿಗೆ ದಕ್ಕುತ್ತಿತ್ತೆ. ಸಮಾಜದಲ್ಲಿ ವ್ಯಕ್ತಿ ಗೌರವ ಅಂತೂ ಸಿಗುತ್ತಿತ್ತು. ಇದೆಲ್ಲ ತನ್ನ ಜೀವನದಲ್ಲಿ ನಡೆದರೂ ಸಹ ಚುಕ್ಕಿಗೆ ಆಕಾಶನೊಂದಿಗೆ ಮತ್ತೆ ಪ್ರೇಮಾಂಕುರವಾಗುತ್ತದೆ. ಆಗ ಆಕಾಶ ಚುಕ್ಕಿಯನ್ನು ದೈಹಿಕವಾಗಿಯೂ ಕೂಡ ಹೆಣ್ಣಾಗಿ ನೋಡುವ ಆಸೆ ಇದೆ ಎಂದಾಗ, ಚುಕ್ಕಿ ತಾನು ಮುಕುಂದನಿಂದ ಮಂದಾಕಿನಿಯಾಗಿ ನಿರ್ವಾಣ ಮಾಡಿಸಿಕೊಂಡು ಸುಕೇಶನಿಂದ ಸುನಂದಾ ಎಂಬ ಹೆಸರಿನ ಹೆಣ್ಣಾಗುತ್ತಾಳೆ. ಕೊನೆಗೂ ಆಕಾಶನು ಕೂಡ ಚುಕ್ಕಿಗೆ ಮೋಸ ಮಾಡುತ್ತಾನೆ. ಇದರಲ್ಲಿ ಬರುವ ರಘುಪತಿ, ಸಂಜೀವ, ಮಂದಾಕಿನಿ, ಸುನಂದಾ, ಎಲ್ಲರ ನಿತ್ಯದ ಬದುಕು ಯಾತನೆಯಿಂದ, ಸಮಾಜದೊಂದಿಗಿನ ಸಂಘರ್ಷದಿಂದ ಕೂಡಿದ್ದಾಗಿದೆ. ಇದಕ್ಕೆಲ್ಲ ಕಾರಣ ಈ ಸಮಾಜದಲ್ಲಿರುವ ಅಸಮಾನತೆಯ ಸ್ವರೂಪ ಮತ್ತು ಕುಟುಂಬ ವರ್ಗ.

ಪ್ರತಿಯೊಬ್ಬ ತಂದೆ ತಾಯಿಯೂ ಮಗು ಹೆಣ್ಣಾಗಿ ಹುಟ್ಟಿದಾಗ ಸ್ವೀಕರಿಸಲು ಇರುವ ಮನಸ್ಥಿತಿ, ಅದೇ ಗಂಡು ಮಗು ಹೆಣ್ಣಾಗಿ ಪರಿವರ್ತನೆ ಆದಾಗ ಸ್ವೀಕಾರ ಮಾಡದೆ, ಸಹಕಾರ ನೀಡದೇ ಹೋಗುವುದು ದುರಂತಗಳಲ್ಲೊಂದು. “ಎಲ್ಲರೂ ಸ್ವಾರ್ಥಿಗಳೇ ಕಣ್ರೇ, ದೇಹದ ಅಂಗವಿಕಲತೆಯಿದ್ರೂ ಅದನ್ನು ಸಹಿಸಿಕೊಂಡು ಹೆತ್ತವರು ಮಗಳನ್ನೋ, ಮಗನನ್ನೋ ಸಲಹುತ್ತಾರೆ. ಅದೇ ರೀತಿ ಇದು ಕೂಡಾ ಒಂದು ವೈಕಲ್ಯನೇ ಅಲ್ವಾ… ಮನಸ್ಸಿನ ವೈಕಲ್ಯ ಅನ್ನಬಹುದು,” (ಪು. ೭೩) ಸುಕೇಶ ಹೇಳುವ ಈ ಮಾತು ಎಷ್ಟರ ಮಟ್ಟಿಗೆ ತಂದೆ ತಾಯಿಯ ಮನಸಿಗೆ ನಿಲುಕುತ್ತದೆ. ಈ ಸಮಾಜದಲ್ಲಿ ಗಂಡಾಗಿ ಹುಟ್ಟಿ ಹೆಣ್ಣಿನಂತೆ ವರ್ತಿಸುವವರ ಸಂಖ್ಯೆಯೇ ಜಾಸ್ತಿ. ಆಗ ಇವರು ಬೀದಿ ಪಾಲಾಗುತ್ತಾ, ತನ್ನದೇ ಸಮಾನ ವ್ಯಕ್ತಿಗಳೊಂದಿಗೆ ಭಿಕ್ಷಾಟನೆ, ಸೆಕ್ಸ್‌ವರ್ಕ್‌ನಂತಹ ಕಾರ್ಯಕ್ಕೆ ಇಷ್ಟವಿಲ್ಲದಿದ್ದರೂ ತೊಡಗಿಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ಕಾರಣ ಯಾರು? ಪರಿಹಾರ ಏನು ಎಂದು ನಿರೂಪಿಸುವುದರಲ್ಲಿ ಕಾದಂಬರಿಯೂ ಕೂಡ ಯಶಸ್ಸು ಸಾಧಿಸಿಲ್ಲ. ವಾಸ್ತವ ಬದುಕಿನಲ್ಲಿ ಇನ್ನೂ ಇಂತಹ ವರ್ಗದ ಜನರಿಗೆ ನ್ಯಾಯ ದೊರೆತಿಲ್ಲ.

ನಿತ್ಯವೂ ಆಧುನಿಕರಣಕ್ಕೆ ಒಳಗೊಳ್ಳುವ ನಾವುಗಳು ಸಲಿಂಗರತಿಗಳ ವಿಷಯ ಬಂದಾಗ ನಮ್ಮ ನಿಲುವೇನು? ಆಗ ಭಾರತದ ಸಂಪ್ರದಾಯದಲ್ಲಿ ಇದು ನಿಷಿದ್ಧ ಎಂದು ಬೊಬ್ಬೆ ಹೊಡೆಯುತ್ತೇವೆ. ಯಾರದೇ ಮನೆಯಲ್ಲಿ ಜನಿಸಿದ ಮಗು ನಂತರದಲ್ಲಿ ಪರಿವರ್ತನೆ ಆದರೂ ಸಹ, ಅದು ನಮ್ಮದೇ ಮಗು ಎನ್ನುವ ಮನೋಭಾವ ಬೆಳೆಯಬೇಕು ಎಂಬ ದೃಷ್ಟಿಕೋನವನ್ನು ಕಾದಂಬರಿ ನಮ್ಮ ಮುಂದಿಡುತ್ತದೆ. ಕಾದಂಬರಿಯ ಸ್ವರೂಪ ಹೊಂದಿದ್ದರೂ ಸಹ ಆತ್ಮಕಥನದ ಎಳೆಯಂತೆ ನಿರೂಪಿಸುತ್ತಾ ಹೋಗುತ್ತದೆ. ಇತ್ತೀಚೆಗೆ ಮಂಜಮ್ಮ ಜೋಗತಿ ಅವರ ಆತ್ಮಕಥನ ʼನಡುವೆ ಸುಳಿವ ಹೆಣ್ಣುʼ ಓದಿದಾಗ ನಮ್ಮ ಮುಂದೆ ಹಲವು ಪ್ರಶ್ನೆಗಳು ಮೂಡುತ್ತವೆ. ದೇಹ ಚಹರೆಯಿಂದ ಗಂಡು ಮತ್ತು ಹೆಣ್ಣು ಎಂದು ಗುರುತಿಸುವುದರ ಆಚೆಗೂ ಒಂದು ನಿರಾಕಾರಮಯ ಬದುಕಿದೆ. ಅದಕ್ಕೆ ವಚನಕಾರ ಜೇಡರ ದಾಸಿಮಯ್ಯನು ತನ್ನ ಒಂದು ವಚನದಲ್ಲಿ,

ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂದು ಹೇಳುತ್ತಾನೆ. ಈ ವಚನದ ಸಾಲುಗಳು ಏನನ್ನು ವ್ಯಕ್ತಪಡಿಸುತ್ತಿವೆ. ಆತ್ಮಕೇಂದ್ರಿತವಾದ ಈ ವಚನ ಎಷ್ಟರ ಮಟ್ಟಿಗೆ ನಮ್ಮ ಮತಿಗೆ ತಲುಪಿದೆ. ಸುಕೇಶನಂತಹ ಅನೇಕರು ನಮ್ಮ ನಡುವೆ ಇದ್ದು ಆತ್ಮದ ದನಿಗೆ ಜೀವಂತಿಕೆ ಕೊಟ್ಟು ಬದುಕು ಕಟ್ಟಿಕೊಳ್ಳುವ ನಿರ್ಧಾರದ ಹಿಂದೆ ಅದೆಷ್ಟು ನೋವನ್ನು ಅನುಭವಿಸಿರಬೇಕು. ಇದನ್ನೆಲ್ಲ ಅನುಭವಿಸಿದ ಮಂಜಮ್ಮ ಜೋಗತಿ ಅವರು ಒಂದು ಕಡೆ ಈ ರೀತಿಯ ಪ್ರೀತಿಯಿಂದ ಮನವಿ ಮಾಡುವುದರ ಮೂಲಕ ಹೇಳುತ್ತಾರೆ, “ನನ್ನಂತಹ ಮಗು ನಿಮ್ಮ ಮನೆಯಲ್ಲಿ ಹುಟ್ಟಿದರೆ, ಆ ಮಗುವಿಗೆ ಯಾವುದೇ ತಾರತಮ್ಯ ತೋರದೆ ಬೆಳೆಸಿ, ವಿದ್ಯಾಭ್ಯಾಸ ಕೊಡಿ – ಅವನು/ಳು ಬೆಳೆದು ನಿಮ್ಮ ಕೀರ್ತಿಯನ್ನು ಹೆಚ್ಚಿಸುತ್ತಾಳೆ/ನೆ. ನಿಮ್ಮ ಅಕ್ಕಪಕ್ಕದವರ ಮನೆಯಲ್ಲಿ ನೀವು ನನ್ನಂತಹ ಮಗುವನ್ನು ಕಂಡರೆ – ಯಾವುದೇ ಇನ್ನೊಬ್ಬ ಮನುಷ್ಯರಿಗೆ ಕೊಡುವ ಕನಿಷ್ಟ ಮರ್ಯಾದೆ ಕೊಡಿ. ನನ್ನಂತಹವರಿಗೆ ನೀವು ಮಾಡುವ ಅತ್ಯಂತ ಒಳ್ಳೆಯ ಕೆಲಸವು ಇದೇ,” ಎಂಬ ಮಾತು ಮನ ಕಲಕುತ್ತದೆ.

ನೊಂದವರ ನೋವ ನೋಯದವರೆತ್ತ ಬಲ್ಲರು. ಈ ಮಾತಿನಂತೆ ನೊಂದವರ ನೋವು ನಮ್ಮದಾಗಲಿ. ಅವರು ಕೂಡಾ ಗೌರವದಿಂದ ಸಮಾಜದಲ್ಲಿ ನಮ್ಮೊಂದಿಗೆ ಬದುಕಿ ಬಾಳಲಿ ಎಂಬ ಆಶಯ ನಮ್ಮೆಲ್ಲರದು. ಸುಕೇಶನಂತಹ ಅನೇಕರಿಗೆ ಒಂದೊಳ್ಳೆ ನೆಮ್ಮದಿ ಜೀವನ ಲಭಿಸುವಂತಾಗಲಿ. ಜನಕ್ಕಂಜಿ ಬದುಕುವುದಕ್ಕಿಂತ ಮನಕ್ಕಂಜಿ ಬದುಕಬೇಕಾದದ್ದು ಇಂದಿನ ಅಗತ್ಯವಾಗಿದೆ. ಸಾಮಾನ್ಯ ಮನುಷ್ಯರು ಜಾತಿಯ ಬಗ್ಗೆ ಯೋಚಿಸುತ್ತಾರೆ. ಆದರೆ ಲಿಂಗ ಪರಿವರ್ತಿತರು ಯಾವುದೇ ಸಮುದಾಯವಾಗಲಿ ಅವರಿಗೆ ಜಾತಿ, ಮತ, ಪಂಥಗಳ ಬಗ್ಗೆ ನಿರ್ಲಕ್ಷ್ಯ. ಒಬ್ಬರ ನೋವಿಗೆ ಇನ್ನೊಬ್ಬರು ಸ್ಪಂದಿಸುವುದೇ ಮನುಜ ಮತ ಎಂಬ ಭಾವಿಸಿ ಬದುಕುತ್ತಿರುವುದು ಹೆಮ್ಮೆಯ ವಿಷಯ. ನಾವೆಲ್ಲ ಒಂದೇ ಎಂಬ ಭಾವನೆ ಅವರಲ್ಲಿ ಬಲವಾಗಿ ಬೇರೂರಿದೆ. ಕೊನೆಗೆ ಸುಕೇಶ ಅಂಧಕಾರದ ಬದುಕಿನಲ್ಲಿ ಬೆಳಕಿಗಾಗಿ ಅರಸುತ್ತಿದ್ದನು. ಅಂತ್ಯವಿಲ್ಲದ ಕತೆಯ ಆರಂಭ ಅವನ ಬದುಕಿನಲ್ಲಿ ಇದೀಗ ಆಗಿತ್ತು.

ಈ ಕಾದಂಬರಿಯ ಮುನ್ನುಡಿಯಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರು ಪ್ರಾಚೀನ ಕಾಲದಲ್ಲಿದ್ದ ಮಹಾಭಾರತದಲ್ಲಿ ನಡೆದ ಸಲಿಂಗರತಿ ಪ್ರಸಂಗವನ್ನು ಉಲ್ಲೇಖ ಮಾಡಿದ್ದಾರೆ. ಹಾಗಾಗಿ ಈಗ ಜನಿಸುವ ಮಕ್ಕಳಲ್ಲಿ ಇದು ವಂಶವಾಹಿನಿಯ ಸಂಕೇತ ಎಂದೇ ಹೇಳಬಹುದು. ಈ ರೀತಿಯ ವಸ್ತುಗಳನ್ನೊಳಗೊಂಡ ಚರ್ಚೆಗಳು ಇನ್ನೂ ನಡೆಯಲಿ. ಆ ಮೂಲಕ ನಮ್ಮ ಅರಿವಿನ ಗಡಿರೇಖೆಗಳು ವಿಸ್ತರಿಸುವಂತಾಗಲಿ.

‍ಲೇಖಕರು Admin

November 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: