‘ಧೂಪದ ಮಕ್ಕಳು’ ಎಂಬ ಮಕ್ಕಳ ಗಾಥೆ…

ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕಾಲದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಿದ್ದ ಒಂದು ಪುಟ್ಟ ಹಳ್ಳಿಯ ಹೆಸರು ಪೊನ್ನಾಚಿ. ಪೊನ್ನಾಚಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಒಂದು ಕುಗ್ರಾಮ. ಈ ಪೊನ್ನಾಚಿ ಎಂಬ ಪದದ ಮೂಲ ತಮಿಳು ಭಾಷೆ ಇರುವ ಹಾಗೆ ಕಾಣಿಸುತ್ತದೆ.

ಕರ್ನಾಟಕ ಮತ್ತು ತಮಿಳುನಾಡಿನ ಸರಹದ್ದಿನಲ್ಲಿರುವ ಈ ಹಳ್ಳಿಯಲ್ಲಿ ವೀರಪ್ಪನ್ ಬದುಕಿರುವವರೆಗೂ ಮಕ್ಕಳು ಶಾಲೆಗೆ ಹೋಗುವುದು ಒಂದು ರೀತಿಯ ದುಸ್ಸಾಹಸವೇ ಆಗಿತ್ತು. ಒಂದು ಕಡೆ ವೀರಪ್ಪನ್ ಸಹಚರರ ಕಾಟ ಇನ್ನೊಂದು ಕಡೆ ಪೊಲೀಸರ ಕಾಟ. ಇಂತಹ ಕುಗ್ರಾಮದಲ್ಲಿ ಹೋರಾಟ ಮಾಡಿಕೊಂಡು ಕನ್ನಡ ಸಾಹಿತ್ಯದ ಉದಯೋನ್ಮುಖ ಬರಹಗಾರರಾಗಿ ಇಂದು ನಮ್ಮ ಮುಂದೆ ಇರುವವರು ಸ್ವಾಮಿ ಪೊನ್ನಾಚಿಯವರು. “ಧೂಪದ ಮಕ್ಕಳು” ಇವರು ಬರೆದಿರುವ ಚೊಚ್ಚಲ ಕಥಾಸಂಕಲನದ ಹೆಸರು.   

ಧೂಪದ ಮಕ್ಕಳು ಈಗಾಗಲೇ ಛಂದ ಪುಸ್ತಕ ಬಹುಮಾನ, ಪಾಪು ಪ್ರಶಸ್ತಿ ಮತ್ತು ಬಸವರಾಜ ಕಟ್ಟೀಮನಿ ಪ್ರಶಸ್ತಿ ಪಡೆದು ನಾಡಿನಾದ್ಯಂತ ಹೊಸ ಸಂಚಲನ ಮೂಡಿಸಿದೆ. ಇದು ಸ್ವಾಮಿ ಪೊನ್ನಾಚಿಯವರ ಮೊದಲ ಕಥಾಸಂಕಲನವಾದರೂ ಈ ಎಲ್ಲಾ ಕಾರಣದಿಂದ ಇವರು ಹೊಸತಲೆಮಾರಿನ ಕಥೆಗಾರರಲ್ಲಿ ಎದ್ದು ಕಾಣುತ್ತಾರೆ. ಈ ಕಥಾಸಂಕಲನ ಛಂದ ಪ್ರಶಸ್ತಿ ಪಡೆಯುವದಕ್ಕಿಂತ ಮುಂಚೆಯೇ “ಸಾವೊಂದನ್ನು ಬಿಟ್ಟು” ಎಂಬ ಕವನ ಸಂಕಲನವನ್ನು ಕೂಡ ಸ್ವಾಮಿಯವರು ಪ್ರಕಟಿಸಿದ್ದಾರೆ.

ವೀರಪ್ಪನ್ ಕಾರಣದಿಂದ ಸದಾ ಪ್ರಕ್ಷುಬ್ಧ ವಾತಾವರಣದ ಹಳ್ಳಿಯಲ್ಲಿ ಬೆಳೆದ ಕತೆಗಾರ ತನ್ನ ಬೆರಗುಗಣ್ಣಿನಿಂದ ನೋಡುವ ಕತೆಗಳನ್ನು ನಾವು ಇಲ್ಲಿ ಕಾಣಬಹುದು. ಹಾಗಾದರೆ ಈ ಧೂಪದ ಮಕ್ಕಳು ಅಂದರೆ ಯಾರು? ಮಲೆ ಮಹದೇಶ್ವರ ಬೆಟ್ಟಕ್ಕೂ ಈ ಮಕ್ಕಳಿಗೂ ಏನು ಸಂಬಂಧ. ಆಧುನಿಕತೆಯನ್ನು ಕಾಣದ ಸೋಲಿಗರು ಇನ್ನು ಇದ್ದಾರೆಯೇ? ಇಲ್ಲಿ ಗ್ರಾಮ ಜೀವನ ಮತ್ತು ಆಧುನೀಕತೆಯ ನಡುವೆ ಹೊಸ ಜನಾಂಗ ತೆರೆದುಕೊಂಡಾಗ ಸಂಘರ್ಷವೇರ್ಪಡುವುದನ್ನು ಕಾಣಬಹುದು.

ಇದರ ಮುನ್ನುಡಿಯಲ್ಲಿ ಖ್ಯಾತ ಕಥೆಗಾರರಾದ ಎಂ ಎಸ್ ಶ್ರೀರಾಂ ಅವರು ಸ್ವಾಮಿಯವರ ಕತೆಗಳಲ್ಲಿನ ವಿಭಿನ್ನ ಮತ್ತು ಅದ್ಭುತ ಜಗತ್ತು ತೆರೆದುಕೊಳ್ಳುವುದನ್ನು ತುಂಬಾ ಚೆನ್ನಾಗಿ ಗುರುತಿಸುತ್ತಾರೆ. ಸ್ವಾಮಿಯವರ ಕತೆಯ ಕೌಶಲ, ಭಿನ್ನತೆ, ಭಾಷೆಯ ಸಮರ್ಪಕತೆ, ಕಥನ ತಂತ್ರದ ಮೇಲಿನ ಹಿಡಿತ ಮತ್ತು ವಿಚಾರಗಳ ಪ್ರಬುದ್ಧತೆಯಲ್ಲಿ ಹೊಸತನವಿರುವುದನ್ನು ಶ್ರೀರಾಂ ಅವರು ಪ್ರಸ್ತಾಪ ಮಾಡುತ್ತಾರೆ. 

ಈ ಕಥಾಸಂಕಲನದಲ್ಲಿ ಒಟ್ಟು ಒಂಬತ್ತು ಕತೆಗಳಿವೆ.

ಧೂಪದ ಮಕ್ಕಳು: ಈ ಕತೆಯಲ್ಲಿ ಸೋಲಿಗರ ಮಕ್ಕಳು ಧೂಪ ಮಾರುವುದರ ಜೊತೆಗೆ ಆಧುನಿಕ ಜಗತ್ತಿಗೆ ಮುಖಾಮುಖಿಯಾಗುವುದನ್ನು ಕಾಣಬಹುದು. ಇಲ್ಲಿ ಶಾಲೆಯಲ್ಲಿ ಕಲಿಸುವ ವಿದ್ಯೆ ಮುಖ್ಯವೋ ಅಥವಾ ಊಟಕ್ಕೆ ಮತ್ತು ಬದುಕಿಗೆ ಬೇಕಾದ ಆದಾಯ ಮುಖ್ಯವೋ ಎಂಬ ತಾಕಲಾಟವನ್ನು ಚಿತ್ರಿಸಿದ್ದಾರೆ. ಅಲ್ಲೊಬ್ಬ ಬಾಲಕ ಮೊಬೈಲ್ ಕಳ್ಳತನ ಮಾಡಿ ಅದನ್ನು ಬಚ್ಚಿಟ್ಟು ಕೊಳ್ಳುವುದು. ಅದರಿಂದ ಆಗುವ ಅನಾಹುತಗಳು ಬೇರೊಂದು ಲೋಕವನ್ನು ಓದುಗರ ಮುಂದೆ ತೆರೆದು ತೋರಿಸುತ್ತದೆ.  ಕೊನೆಗೆ “ಸಾರೇ ಜಹಾಂ ಸೆ ಅಚ್ಚಾ” ಅನ್ನುವ ರಿಂಗ್ ಟೋನ್ ದೇಶದ ಈಗಿನ ಸ್ಥಿತಿಯನ್ನು ವಿಡಂಬನೆ ಮಾಡಿದಂತೆಯೂ ಕಾಣುತ್ತದೆ. ಸೋಲಿಗರ ಮಕ್ಕಳಿಗೆ ವಿದ್ಯೆ ಮತ್ತು ಸುಂದರ ಬದುಕು ಇಂದಿಗೂ ಗಗನ ಕುಸುಮವಾಗಿಯೇ ಇರುವಂತೆ ಕಾಣುತ್ತದೆ.  ಅವರ ಬದುಕು ಧೂಪ ಮಾರುವುದರಲ್ಲಿಯೇ ಕಳೆದುಹೋಗುವಂತಾಗುತ್ತದೆ.

ಹೀಗೊಂದು ಭೂಮಿಗೀತ: ಈ ಕತೆಯ ನಾಯಕ ತನ್ನ ಹಳ್ಳಿ ಬಿಟ್ಟು ಪಟ್ಟಣ ಸೇರಬೇಕೆಂದಿರುವವನು. ಇವನು ಕೃಷಿಗೆ ಬೆನ್ನು ಮಾಡಿದವನು. ಆದರೆ ಅವನ ಅಪ್ಪ ಕೃಷಿಯಲ್ಲಿಯೇ ಬದುಕು ಕಾಣಬೇಕೆಂದಿರುವವನು. ಇಲ್ಲಿ ಗದ್ದೆಗೆ ವಿದ್ಯುತ್ ಬೇಲಿ ನಿರ್ಮಿಸಿ ಕಾಡು ಮೃಗಗಳಿಂದ ತನ್ನ ಬೆಳೆಯನ್ನು ರಕ್ಷಿಕೊಳ್ಳಲು ಭಯಸುವ ಕಥಾನಾಯಕನ ತಂದೆ ಕೊನೆಗೆ ನಡೆಯುವ ಒಂದು ಅಹಿತಕರ ಘಟನೆಯಿಂದ ಬೆಚ್ಚಿ ಬೀಳುತ್ತಾನೆ. ಇಲ್ಲಿ ಕೂಡ ಆಧುನಿಕತೆಗೂ ಗ್ರಾಮ ಜೀವನಕ್ಕೂ ಮಧ್ಯೆ ನಡೆಯುವ ದೊಡ್ಡ ಸಂಘರ್ಷವನ್ನು ಕಾಣಬಹುದು.

ಶಿವನಜ್ಜಿ: ಶಿವನಜ್ಜಿ ಊರಿನ ಒಂದು ಹಿರಿಯ ಜೀವ. ಎಲ್ಲಾ ಇದ್ದು ಏನು ಇಲ್ಲದಂತವಳು. ಈ ಶಿವನಜ್ಜಿಯ ಗುಡಿಸಲು ಶಾಲೆಯೊಂದರ ಪಕ್ಕದಲ್ಲಿದೆ. ಅದೇ ಅವಳ ಬದುಕಿಗೂ ಸಮಸ್ಯೆಯಾಗುತ್ತದೆ. ಈ ಕಥೆ ಆಧುನಿಕ ಭಾರತದ ಗ್ರಾಮ ರಾಜಕೀಯ ಮತ್ತು ಅಲ್ಲಿನ ಭ್ರಷ್ಟಾಚಾರಗಳನ್ನು ತೆರೆದಿಡುತ್ತದೆ. ಇಲ್ಲಿ ಒಂದು ಕಡೆ ಗ್ರಾಮ ಅಭಿವೃದ್ಧಿಯಾದಂತೆ ಕಂಡರೆ ಇನ್ನೊಂದು ಕಡೆ ಭ್ರಷ್ಟಾಚಾರದಿಂದ ಅವನತಿಯೆಡೆಗೆ ಸಾಗುತ್ತಿರುತ್ತದೆ. ಇದು ಒಂದು ಶಿವನಜ್ಜಿಯ ಅಥವಾ ಒಂದು ಗ್ರಾಮದ ಕತೆಯಂತೆ ಕಂಡರೂ ಭಾರತದ ಎಲ್ಲಾ ಹಳ್ಳಿಗಳ ಶಿವನಜ್ಜಿಯರ ಮತ್ತು ಎಲ್ಲಾ ಹಳ್ಳಿಗಳ ಕತೆಯಂತೆ ಕಾಣುತ್ತದೆ.

ಭೂತ: ಭೂತ ಕತೆಯಲ್ಲಿ ಚಿಕ್ಕ ಬಾಲಕನೊಬ್ಬ ತನ್ನ ಗತಕಾಲದ ನೆನಪುಗಳನ್ನು ಮಾಡಿಕೊಳ್ಳುವುದನ್ನು, ತನ್ನ ಸತ್ತ ಸಹೋದರಿಯನ್ನು ನೆನೆದು ಭಯಪಡುವುದು ಮತ್ತು ಅವಳ ಸಾವಿಗೆ ತಾನೇ ಪರೋಕ್ಷವಾಗಿ ಕಾರಣವೆಂದು ಪಾಪಪ್ರಜ್ಞೆಯಲ್ಲಿ ನರಳುವುದನ್ನು ಕಾಣಬಹುದು. 

ಅಕ್ಕ ಅವನು ಸಿಕ್ಕಿದನೇ?: ಈ ಕತೆಯನ್ನು ನಾವು ಎರಡು ರೀತಿಯಲ್ಲಿ ನೋಡಬಹುದು. ಇದು ಹನ್ನೆರಡನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿಯ ಬದುಕನ್ನು ಆಧಾರವಾಗಿಟ್ಟುಕೊಂಡಿದ್ದರೂ ಇಲ್ಲಿ ಆಧುನಿಕ ಅಕ್ಕನನ್ನು ಅಕ್ಕಂದಿರನ್ನೂ ಕಾಣಬಹುದು. ಈ ಕತೆಯ ಕೊನೆಯ ತಿರುವು ಅದ್ಭುತವಾಗಿದೆ. ಇಲ್ಲಿಯ ಅಕ್ಕ ಏನಾದಳು ಎಂಬುದನ್ನು ಓದುಗರು ಕತೆಯನ್ನು ಓದಿಯೇ ತಿಳಿಯಬೇಕು. 

ಮಾಯಿ: ಈ ಕತೆಯಲ್ಲಿ ಕೆಟ್ಟು ಪಟ್ಟಣ ಸೇರಿದ ಹುಡುಗನೊಬ್ಬ ಸೋತು ಮತ್ತೆ ಹಳ್ಳಿ ಸೇರಬೇಕಾದ ಪರಿಸ್ಥಿತಿಯನ್ನು ಕಾಣಬಹುದು. ಇದು ಬಹಳಷ್ಟು ಹಳ್ಳಿಯ ಹೆಚ್ಚು ಓದಿರದ ಅಥವಾ ಅರ್ಧ ಓದಿರುವ ವಿದ್ಯಾವಂತ ಯುವಕರ ಕತೆ. ಅವರಿಗೆ ಅತ್ತ ಹಳ್ಳಿಯ ಬದುಕು ಇಷ್ಟವಾಗುವುದಿಲ್ಲ. ಇತ್ತ ಪಟ್ಟಣದಲ್ಲಿ ಅವರಿಗೆ ತಕ್ಕಂತ ಕೆಲಸ ಸಿಗುವುದಿಲ್ಲ. ಇದು ಆಧುನಿಕತೆಗೆ ಮುಖ ಮಾಡಿರುವ ಹಳ್ಳಿ ಹುಡಗನೊಬ್ಬನ ಬದುಕಿನ ಕತೆಯಾದರೂ ಇದು ಬಹಳಷ್ಟು ಹಳ್ಳಿ ಹುಡುಗರ ಕತೆಯೇ ಆಗಿದೆ.

ಸ್ವಗತ: ಸ್ವಗತ ಒಂದು ಖಾಸಗಿ ಸಂಬಂಧಗಳನ್ನು ಅನ್ವೇಷಿಸುವ ಕತೆ. ಇಲ್ಲಿ ಮನುಷ್ಯನ ಬಾಹ್ಯ ಪ್ರಪಂಚದ ವರ್ತನೆಗೂ ಅವನ ಆಂತರ್ಯದಲ್ಲಿ ಸಂಭವಿಸುವ ದ್ವಂದ್ವ ಮನೋವ್ಯಾಪಾರ, ಪ್ರೀತಿ, ಪ್ರೇಮ, ದ್ವೇಷಕ್ಕೂ ಇರುವ ಬೇರೆ ಬೇರೆ ಅರ್ಥಗಳನ್ನು ಕಾಣಬಹುದು.

ಒಂದು ವಿದಾಯ: ಇದೊಂದು ನವೀರಾದ ಪ್ರೇಮಕಥೆ. ಇದು ನಡೆಯುವುದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ. ಗತಕಾಲದ ಪ್ರೇಮಿಗಳಿಬ್ಬರೂ ಮತ್ತೇ ಭೇಟಿಯಾದಾಗ ಆಗುವ ಮನಸಿನ ತಳಮಳ ಮತ್ತು ಅವರ ಅವ್ಯಕ್ತ ಆಸೆಗಳನ್ನ ಇಲ್ಲಿ ಸುಂದರವಾಗಿ ಕಾಣಬಹುದು.

ಸ್ವಾಮೀಜಿ ಪಾದ ತಲೆಯ ಮೇಲೆ: ಈ ಕತೆಯಲ್ಲಿ ಹೆಣದ ತಲೆಯ ಮೇಲೆ ಸ್ವಾಮೀಜಿಯವರು ಪಾದ ಇಡುವುದನ್ನು ಒಂದು ರೀತಿ ವಿಡಂಬನಾತ್ಮಕವಾಗಿ ನೋಡಿ ಮನುಷ್ಯ ಬದುಕಿನಲ್ಲಿ ಎಷ್ಟೆಲ್ಲಾ ವೇಷ ಹಾಕುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ಇಲ್ಲಿ ಪಾತ್ರ ಯಾವುದು? ಪಾತ್ರಧಾರಿ ಯಾರು? ಅವುಗಳ ನಡುವಿನ ವೈರುಧ್ಯಗಳನ್ನು ಕಾಣಬಹುದು. ಕಾಯಕ, ಸಂಸಾರ, ಬಂಧನ ಮತ್ತು ಪ್ರಲೋಭನೆಗಳು ಎಲ್ಲವನ್ನೂ ಇಲ್ಲಿ ಕಾಣಬಹುದು. ಇದೊಂದು ಹನೂರಿನ ಹತ್ತಿರ ಇರುವ ಸ್ವಾಮೀಜಿಯೊಬ್ಬರ ಅಥವಾ ಮಠದ ಕತೆಯಾದರೂ ಯಾವುದೋ ಒತ್ತಡಕ್ಕೆ ಸಿಕ್ಕಿ ಸ್ವಾಮೀಜಿಯಾದವರ ಎಲ್ಲರ ಕತೆಯಾಗಿಯೂ ಕಾಣುತ್ತದೆ.

ಈ ಎಲ್ಲಾ ಕಾರಣಗಳಿಂದ ಸ್ವಾಮಿ ಪೊನ್ನಾಚಿಯವರ ಈ ಧೂಪದ ಮಕ್ಕಳು ಕಥಾಸಂಕಲನ ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿ ಕಾಣುತ್ತದೆ.

August 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: