ಹಿಟ್ಲರ್ ಒಳ್ಳೆಯವನಂತೆ…!!

ಕಾಲಲ್ಲಿ ಚಕ್ರಗಳಿದ್ದಿದ್ದರೆ ಹೀಗೆ ಹೋಗಿ ಹಾಗೆ ಬೇಕು ಎಂದು ಜಗತ್ತನ್ನು ಸುತ್ತಿಕೊಂಡು ಬರುತ್ತಿದ್ದೆ ಎನ್ನುವಷ್ಟು ಪ್ರಯಾಣಪ್ರಿಯೆ ಭಾರತಿ.

ಯಾವ ದೇಶಕ್ಕಾದರೂ ಹೇಗಬೇಕು ಎಂದರೆ ಅದರ ಹೆಸರು ಹೇಗೆ ಬಂದಿರಬಹುದು ಎನ್ನುವಲ್ಲಿಂದ ಹಿಡಿದು, ಯಾವ ಗಲ್ಲಿಯ, ಯಾವ ರೆಸ್ಟೋರೆಂಟಿನಲ್ಲಿ ಏನೇನು ಸಿಗುತ್ತದೆ ಎನ್ನುವವರೆಗೆ ಮಾಹಿತಿ ಕಲೆಹಾಕಿ, ಬೀದಿ ಸುತ್ತಿ ಸುಸ್ತಾಗುವುದು ಜೀವ (Spirit) ಎನ್ನುತ್ತಾರೆ.

ಈ ಸಲ ಅವರ ಸುತ್ತಿ ಬಂದಿರುವ ಪೋಲ್ಯಾಂಡ್ ಪ್ರಯಾಣ ಕಥನವನ್ನು ನಿಮ್ಮ ಮುಂದಿಡುತ್ತಿದ್ದಾರೆ.

ಓದುತ್ತಿದ್ದರೆ ನಿಮ್ಮ ಮನದೊಳಗೆ ಪ್ರಯಾಣಕ್ಕೆ ಬೇಕಾದ ಬ್ಯಾಗ್ ರೆಡಿಯಾದರೆ, ಬೇಕಾದ ಮಾಹಿತಿಗೆ ಭಾರತಿಯವರನ್ನೇ ಕೇಳಿ!!

ಪಯಣಾಂಕುರ!

ಆಗ ನನ್ನ ಮಗ ಎರಡನೆಯ ಕ್ಲಾಸಿನಲ್ಲಿದ್ದ. ಒಂದು ದಿನ ಶಾಲೆಯಿಂದ ಬಂದವನು ‘ಅಮ್ಮ ಹಿಟ್ಲರ್ ಅಂತ ಒಬ್ನಿದ್ನಂತೆ, ತುಂಬ ಒಳ್ಳೆಯವನಂತೆ ಹೌದಾ?’ ಅಂತ ಕೇಳಿದಾಗ ನಾನು ಆಘಾತಕ್ಕೊಳಗಾಗಿದ್ದೆ.

ಹಿಟ್ಲರ್‌! ಎಲ್ಲ ಬಿಟ್ಟು ಹಿಟ್ಲರ್!! ಇವನನ್ನು ಯಾರಾದರೂ ಹೇಗೆ ಒಳ್ಳೆಯವನ ಸಾಲಿಗೆ ಸೇರಿಸಿದರು ಅನ್ನುವ ಅಚ್ಚರಿಯಲ್ಲಿಯೇ ‘ಯಾರು ಹೇಳಿದ್ದು ಹಾಗಂತ?!’ ಅಂದಿದ್ದೆ. ಅವನು ತುಂಬ ಮುಗ್ಧನಾಗಿ ‘ನಮ್ಮ ಮಿಸ್ ಹೇಳಿದ್ರು’ ಅಂದಿದ್ದ.

ತಮ್ಮ ಅಭಿಪ್ರಾಯವನ್ನು ಮಕ್ಕಳ ಮೇಲೆ ಹೇರಿದ್ದ ಆ ಟೀಚರ್ ಮೇಲೆ ನಖಶಿಖಾಂತ ಉರಿದಿತ್ತು. ಮರುದಿನ ಶಾಲೆಗೆ ಹೋಗಿ ಅವರ ಜೊತೆ ಮಾರಾಮಾರಿ ಜಗಳವಾಡಿದ್ದೆ. ಆದರೆ ಹಿಟ್ಲರ್‌ನ ಭಕ್ತೆಯಾದ ಆಕೆಗೆ ನಾನು ಆ ವಿಷಯವಾಗಿ ಜಗಳವಾಡುತ್ತಿರುವುದೇ ವಿಚಿತ್ರವಾಗಿ ಕಂಡಿತ್ತು!

ನಾನು ಆಡಿದ್ದೇ ಆಡುತ್ತ, ಅವರು ಆಡಿದ್ದೇ ಆಡುತ್ತ ಕೊನೆಗೆ ‘ಸರಿ ನಿಮ್ಮ ಅಭಿಪ್ರಾಯ ನೀವು ಇಟ್ಟುಕೊಳ್ಳಲು ನೀವು ಸ್ವತಂತ್ರರು. ಆದರೆ ನನ್ನ ಮಗನ ಬಾಯಿಂದ ಮಾತ್ರ ಇನ್ನೊಮ್ಮೆ ಇಂಥ ಮಾತು ಬಂದರೆ ನಾನು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿ ಬಂದಿದ್ದೆ. ನನ್ನ ಮಗನ ಮುಖ ಬಸವಳಿದು ಹೋಗಿತ್ತು.

‘ಅಯ್ಯೋ ಇವಳಿಗೆ ಯಾಕಾದರೂ ಹೇಳಿದೆನೋ’ ಎನ್ನುವಂತೆ ಸಪ್ಪೆ ಮುಖ ಮಾಡಿ ನಿಂತಿದ್ದ. ಆ ನಂತರ ನಾನು ಆಗಾಗ ಹಿಟ್ಲರ್‌ ನಡೆಸಿದ ಮಾರಣಹೋಮದ ಬಗ್ಗೆ ನನಗೆ ತಿಳಿದಷ್ಟು ಮತ್ತು ನನ್ನ ಮಗನ ವಯಸ್ಸಿಗೆ ನಿಲುಕುವಷ್ಟು ವಿಷಯಗಳನ್ನು ಹೇಳಿದ್ದೆ. ಆ ನಂತರ ಮತ್ತೆ ಅವನ ಟೀಚರ್ ಏನಾದರೂ ಆ ಬಗ್ಗೆ ಮಾತಾಡಿದರೇ ಎಂದು ಆಗಾಗ ವಿಚಾರಿಸುತ್ತಿದ್ದೆ.

ಅದೇನು ಆಕೆಯೇ ಮಾತನಾಡಲಿಲ್ಲವೋ ಅಥವಾ ನನ್ನ ಮಗ ನನ್ನ ಹತ್ತಿರ ಹೇಳಿ ಯಾಕೆ ಮತ್ತೆ ಗ್ರಹಚಾರ ಎಂದೋ ಅವರು ಹೇಳಿದ್ದರೂ ಏನೂ ಹೇಳಲಿಲ್ಲ ಅಂದುಬಿಡುತ್ತಿದ್ದನೋ ಗೊತ್ತಿಲ್ಲ, ಒಟ್ಟಿನಲ್ಲಿ ಆ ನಂತರ ಹಿಟ್ಲರ್ ಬಗ್ಗೆ ಮಾತು ಬರಲಿಲ್ಲ.

ನನ್ನ ಮಗನಿಗೆ ಸದ್ಯ ಹಿಟ್ಲರ್ ಒಳ್ಳೆಯವನಲ್ಲ ಅಂತ ಹೇಳಿದೆನಲ್ಲ ಅಷ್ಟು ಸಾಕು ಎಂದು ನೆಮ್ಮದಿಯೆನಿಸಿತ್ತು. ಹೀಗೆ ಶುರುವಾಗಿತ್ತು ನಮ್ಮ ಮನೆಯಲ್ಲಿ ಹಿಟ್ಲರ್‌ನ ಅಧ್ಯಾಯ.

ಆದರೆ ಆಗ ನನಗೆ ಗೊತ್ತಿದ್ದಾದರೂ ತುಂಬ ಕಡಿಮೆ. ಹುಡುಕಿ ಬೆನ್ನತ್ತುವ ಹುಮ್ಮಸ್ಸು ನನ್ನಲ್ಲೂ ಇರಲಿಲ್ಲವಾಗಿ ಅವನ ವಿಷಯ ಮನಸ್ಸಿನಾಳದಲ್ಲೆಲ್ಲೋ ಸುಪ್ತ ಜ್ವಾಲಾಮುಖಿಯಂತೆ ಅಡಗಿ ಕುಳಿತುಬಿಟ್ಟಿತಷ್ಟೇ, ಮತ್ತೆ ನೇಮಿಚಂದ್ರರ ‘ಯಾದ್ ವಶೇಮ್’ ಓದುವವರೆಗೆ!

ವಿಚಿತ್ರವಾದ ಹೆಸರುಗಳು ನನ್ನನ್ನು ತುಂಬ ಆಕರ್ಷಿಸುತ್ತವೆ. ಯಾವುದ್ಯಾವುದೋ ಭಾಷೆಗಳ ಹೆಸರುಗಳನ್ನು ಹುಡುಕುವ ಚಟವಿರುವ ನನಗೆ ಉತ್ತರ ಅಮೆರಿಕಾದ ಚೆರೊಕಿ ಭಾಷೆಯಲ್ಲಿನ ‘ಅಹವಿ’ ಎನ್ನುವ ಪದ ತುಂಬ ಆಕರ್ಷಿಸಿ ಅದರ ಅರ್ಥ ಜಿಂಕೆ ಎಂದು ಗೊತ್ತಾಗಿತ್ತು. ಜಿಂಕೆ ಎಂದರೆ ನನಗೆ ಬದುಕಿನ ಉತ್ಸಾಹದ, ವೇಗದ ಸಂಕೇತವಾದ್ದರಿಂದ, ಅವಧಿ ಅಂತರ್ಜಾಲ ಪತ್ರಿಕೆಗೆ ಬರೆದ ನನ್ನ ಅಂಕಣಕ್ಕೆ ‘ಅಹವಿ ಹಾಡು’ ಎಂದೇ ಹೆಸರಿಟ್ಟಿದ್ದೆ.

ಹೀಗೆಯೇ ನಾಗರಾಜ ವಸ್ತಾರೆಯವರ ‘ಹಕೂನ ಮಟಾಟ’ ಸುನಂದಾ ಬೆಳಗಾಂವ್ಕರ್ ಅವರ ‘ಝವಾದಿ’ ಇವೆಲ್ಲ ಬರಿಯ ಹೆಸರಿನಿಂದಲೇ ನನ್ನನ್ನು ಸೆಳೆದಂಥ ಪುಸ್ತಕಗಳು. ನೇಮಿಚಂದ್ರರ ಬರಹಗಳೆಂದರೆ ಯಾವತ್ತೂ ಹುಚ್ಚಳಾಗುವ ನಾನು ‘ಯಾದ್ ವಶೇಮ್’ ಅಂದರೆ ಮೊದಲಿಗೆ ಯಾದ್ ಅನ್ನುವುದನ್ನು ನೆನಪು ಅನ್ನುವ ಪದಕ್ಕೆ ಕೊಂಡಿ ಹಾಕಿಕೊಂಡು ಓದಲು ಶುರು ಮಾಡಿದ್ದೆ.

ಆದರೆ ಯಾದ್ ವಶೇಮ್ ಅಂದರೆ ಹೀಬ್ರೂ ಭಾಷೆಯಲ್ಲಿ ಕೈ ಮತ್ತು ಹೆಸರು ಎಂದು ಅರ್ಥವಂತೆ. ಜೆಹೋವಾ ಯಹೂದಿಯರಿಗೆ ನಾನು ನಿಮಗೆ ತೋಳ್ಬಲ ಮತ್ತು ಹೆಸರು ಎರಡನ್ನೂ ಕೊಡುವೆ ಎಂದು ಅಭಯ ನೀಡುವೆ ಎಂದು ಹೇಳಿದ್ದಾಗಿ ಓಲ್ಡ್ ಟೆಸ್ಟಮೆಂಟ್‌ನಲ್ಲಿ ಉಲ್ಲೇಖಗೊಂಡಿದೆಯಂತೆ. ಜೆರುಸಲೆಂನಲ್ಲಿರುವ ಹಾಲೋಕಾಸ್ಟ್ ಮ್ಯೂಸಿಯಂನ ಹೆಸರು ಯಾದ್ ವಶೇಮ್.

ಹೀಗೆ ಒಂದು ಹೆಸರಿನ ಕಾರಣದಿಂದಾಗಿ ಆಕರ್ಷಿಸಿದ ಆ ಪುಸ್ತಕವನ್ನು ಅದ್ಯಾವ ಘಳಿಗೆಯಲ್ಲಿ ಹಿಡಿದೆನೋ ಗೊತ್ತಿಲ್ಲ, ಎರಡು ದಿನ ಹಗಲು ರಾತ್ರಿ ಎನ್ನದೆ ಅದರಲ್ಲಿ ಮುಳುಗಿಹೋದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ವಿನಾಕಾರಣದ ಯಹೂದಿ ದ್ವೇಷದ ಉರಿಗೆ ಸಿಕ್ಕಿಬಿದ್ದು ಛಿದ್ರವಾದ ಯಹೂದಿ ಸಂಸಾರದ ಅಪ್ಪ-ಮಗಳು, ತಪ್ಪಿಸಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸಿ, ಇಲ್ಲಿಯವರೇ ಆಗಿ, ನಂತರ ತಮ್ಮ ಬೇರು ಹುಡುಕಿ ಅಲೆದು, ತಮ್ಮ ಮನೆಯವರನ್ನೆಲ್ಲ ಭೇಟಿಯಾಗುವ ಕಥೆಯದು.

ಆ ಪುಸ್ತಕ ಓದಿ ಮುಗಿಸುವುದರಲ್ಲಿ ನಾನು ತಲ್ಲಣಿಸಿ ಹೋಗಿದ್ದೆ. ಬದುಕಿನ ಸಾಧಾರಣ ಕಷ್ಟಗಳ ಅರಿವು ಮಾತ್ರ ಇದ್ದ ನನಗೆ, ಇಂಥ ನರಕವೊಂದು ಭೂಮಿಯಲ್ಲಿತ್ತು ಎಂಬುದನ್ನು ಊಹಿಸಿಕೊಳ್ಳಲೂ ಆಗದಂತಿತ್ತು. ಲಕ್ಷಗಟ್ಟಳೆ ಜನರನ್ನು ಅಮಾನುಷವಾಗಿ ಕೊಂದು, ಇಡೀ ಯಹೂದಿ ಜನಾಂಗದ ಮೇಲೆ ದ್ವೇಷ ಸಾಧಿಸಿದ ಹಿಟ್ಲರ್ ಮತ್ತೆ ಮನಸ್ಸಿನಲ್ಲಿ ದಿಗ್ಗನೆದ್ದು ಕುಳಿತಿದ್ದ.

ಆ ಕಾದಂಬರಿ ನನ್ನ ಮನಸ್ಸಿನಲ್ಲಿ ಅದು ಹುಟ್ಟು ಹಾಕಿದ ಪ್ರಶ್ನೆಗಳು, ನಡೆಸಿದ ತಾಕಲಾಟಗಳು ಲೆಕ್ಕಕ್ಕಿಲ್ಲದಷ್ಟು. ಹಿಟ್ಲರ್‌‌ನ ಜರ್ಮನಿ ಪೋಲ್ಯಾಂಡ್ ಅನ್ನು ಆಕ್ರಮಣ ಮಾಡಿದ್ದರಿಂದ ಶುರುವಾದ ಕಲಹ ನಂತರ ಎರಡನೆಯ ಮಹಾಯುದ್ಧವಾಗಿ, ಹಿಟ್ಲರ್‌ನ ಜನಾಂಗೀಯ ದ್ವೇಷ ಹೇಗೆ ಯಹೂದಿಯರನ್ನು, ರೊಮಾನಿ ಜಿಪ್ಸಿಗಳನ್ನು ಬಲಿ ತೆಗೆದುಕೊಂಡಿತು ಅನ್ನುವ ವಿಷಯಗಳು ನನ್ನೆದುರು ತೆರೆದುಕೊಳ್ಳುತ್ತ ಹೋದವು.

ಅಷ್ಟರೊಳಗೆ ಬದುಕಿನಲ್ಲಿ ಅಂತರ್ಜಾಲವೆಂಬ ಮಾಯಾವಿ ಕಾಲಿಟ್ಟಿತ್ತು. ಬೇಕೆಂದ ವಿಷಯಗಳು ಬೆರಳ ತುದಿಯಲ್ಲಿ ಸಿಕ್ಕುಬಿಡುವ ವಿಸ್ಮಯವೊಂದು ಈ ಜಗತ್ತಿನಲ್ಲಿ ಸಂಭವಿಸುತ್ತಿತ್ತು. ಹಾಗಾಗಿ ಇದೆಲ್ಲ ವಿಷಯಗಳ ಬಗ್ಗೆ ಈಗ ಮಾಹಿತಿಗಳ ರಾಶಿಯೇ ಬಿದ್ದಿರುತ್ತಿತ್ತು!

ಹಿಟ್ಲರ್‌‌ನ ನಾಜ಼ಿ ಪಡೆಯ ಪ್ರಕಾರ ಆರೋಗ್ಯವಂತ ಸಮಾಜದಲ್ಲಿ ಜರ್ಮನ್ನರ ಕುಲೀನ ರಕ್ತ ಮಾತ್ರ ಇರಲು ಯೋಗ್ಯರು ಎಂದಿತ್ತು. ಅವನ ಪ್ರಕಾರ ಉಳಿದ ಜನಾಂಗದವರೆಲ್ಲ ಸಮಾಜದಲ್ಲಿ ಇರಲು ಅಯೋಗ್ಯರು. ಹಾಗಾಗಿ ಆರೋಗ್ಯವಂತ ಸಮಾಜದಲ್ಲಿ ಯಹೂದಿಯರು, ರೊಮಾನಿಗಳು, ಕಮ್ಯುನಿಸ್ಟರು, ಸಲಿಂಗಿಗಳು, ಅಂಗವಿಕಲರು, ಮಾನಸಿಕ ಅಸ್ವಸ್ಥರು ಯಾರೆಂದರೆ ಯಾರೂ ಇರಬಾರದು.

ಅವರೆಲ್ಲರನ್ನೂ ಇಲ್ಲವಾಗಿಸಿದರೆ ಮಾತ್ರ ಸ್ವಸ್ಥ ಸಮಾಜವೊಂದರ ನಿರ್ಮಾಣವಾಗಲು ಸಾಧ್ಯ ಎಂಬ ಮಾನವ ವಿರೋಧಿ ನಿಲುವು ಹುಟ್ಟಿದ್ದೇ ತಡ, ಅವರನ್ನೆಲ್ಲ ಮಟ್ಟ ಹಾಕಲು ನಿರ್ಧರಿಸಿಯೇ ಬಿಟ್ಟ. ಮನುಷ್ಯ ಕುಲವೊಂದು, ಮತ್ತೊಂದು ಮನುಷ್ಯ ಕುಲದ ಬಗ್ಗೆ ಆ ಪರಿಯ ದ್ವೇಷ ಬೆಳೆಸಿಕೊಳ್ಳಲು ಹೇಗೆ ಸಾಧ್ಯ ಎನ್ನುವುದು ಇಂದಿಗೂ ನನ್ನ ಅರಿವಿಗೆ ನಿಲುಕಿಲ್ಲ.

ಇದಕ್ಕಾಗಿ ಅವನು ಹುಡುಕಿದ ಮಾರ್ಗ “ಹಾಲೋಕಾಸ್ಟ್” ಹತ್ಯಾಕಾಂಡ!! ಅದರಲ್ಲಿ ಪ್ರಾಣ ಕಳೆದುಕೊಂಡ ಯಹೂದಿಯರ ಸಂಖ್ಯೆ 60 ಲಕ್ಷ! ಅ… ರ… ವ… ತ್ತು… ಲ… ಕ್ಷ! ಯಾವ ಕಾರಣವಿದ್ದರೆ ಮನುಷ್ಯ ಇಷ್ಟು ದ್ವೇಷಕ್ಕೆ ಬೀಳಬಹುದು?

ಆಸ್ತಿಯ ಜಗಳ?

ಸಂಬಂಧಗಳಲ್ಲಿನ ಅಪನಂಬಿಕೆ?

ರಾಜಕೀಯ ಕಲಹಗಳು?

ಪ್ರೀತಿಯಲ್ಲಿನ ಮೋಸ?

ರೌಡಿಗಳ ಜಗತ್ತು?

ಈ ಎಲ್ಲ ಸಾಮಾನ್ಯ ಕಾರಣಗಳು ಒಂದಿಷ್ಟು ತಲೆಯಲ್ಲಿ ಸುಳಿದಾಡಿದವು.

ಆದರೆ ಇವೆಲ್ಲ ಕಾರಣಗಳು ಇಬ್ಬರ ಮಧ್ಯೆ, ಎರಡು  ಕುಟುಂಬಗಳ ಮಧ್ಯೆ, ಅಬ್ಬಬ್ಬಾ ಎಂದರೆ ಎರಡು ಬಣಗಳ ಮಧ್ಯೆ ನಡೆಯುವಂಥವು.

ಆದರೆ ಒಂದು ಜನಾಂಗವನ್ನೇ ದ್ವೇಷಿಸುವುದು ಹೇಗೆ? ಅದೂ ಕೇವಲ ತಮ್ಮ ಆರ್ಯನ್ನರ ರಕ್ತ ಕುಲೀನ ಮತ್ತು ಅವರಷ್ಟೇ ಈ ಭೂಮಿಯಲ್ಲಿ ಬದುಕಲು ಲಾಯಕ್ಕು ಎನ್ನುವ ಕ್ಷುಲ್ಲಕ ಕಾರಣವೊಂದಕ್ಕೆ?

ನಿಜಕ್ಕೂ…?

ಮಕ್ಕಳು-ಮರಿಗಳನ್ನೂ ಬಿಡದಂತೆ ಹೊಸಕಿ ಹಾಕುವ ಇಂಥ ಕ್ರೌರ್ಯದ ಉಗಮ ಯಾವುದು?

ಓದುವಾಗಲೆಲ್ಲ ಒಂದು ರೀತಿಯ ಟ್ರಾನ್ಸ್‌ನಲ್ಲಿ ಇದ್ದಂತೆ ಇರುತ್ತಿದ್ದೆ.

ಹೀಗೆ ಎದೆ ನಡುಗಿಸುವ ಕಥೆ ಓದುತ್ತ ಓದುತ್ತ ಒಂದು ದಿನ ಯಾವತ್ತಾದರೂ ಸಾಧ್ಯವಾದರೆ ಜರ್ಮನಿ, ಪೋಲೆಂಡ್‌ಗೆ ಹೋಗಿ ಇವನ್ನೆಲ್ಲ ನೋಡಬೇಕು ಎಂದು ಮನಸ್ಸಿನಲ್ಲಿ ಆಸೆ ಬಂದಿದ್ದು ಅಚ್ಚರಿಯೇನೂ ಅಲ್ಲ. ಆದರೆ ಅದು ನನ್ನ priority list ನಲ್ಲಿ ತುಂಬ ಮೇಲೆ ಇಟ್ಟುಕೊಳ್ಳಲಿಲ್ಲ. ಯಾವತ್ತಾದರೂ ಒಂದು ದಿನ ಅಷ್ಟೇ… ಆ ಯಾವತ್ತಾದರೂ ಒಂದು ದಿನ ಎನ್ನುವುದು 2018ರಲ್ಲಿ ಬಂದಿದ್ದು ಮಾತ್ರ ತೀರಾ ಅನಿರೀಕ್ಷಿತವಾಗಿ!

। ಮುಂದಿನ ವಾರಕ್ಕೆ ।

‍ಲೇಖಕರು ಬಿ ವಿ ಭಾರತಿ

August 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. ಮಾಲಿನಿ ಗುರುಪ್ರಸನ್ನ

    ಚೆನ್ನಾಗಿದೆ ಆರಂಭ ಭಾರತಿ. . ಪೋಲೆಂಡಿಗೆ ಹೊರಡೋಕೆ ರೆಡಿಯಾಗಿದೀನಿ.. ಥ್ಯಾಂಕ್ಸು ಕರ್ಕೊಂಡು ಹೋಗ್ತಿರೋದಕ್ಕೆ.. ಯಾದ್ ವಶೇಮ್ ನಂಗೂ ಹೆಸರಿಂದಲೇ ಸೆಳೆದ ಪುಸ್ತಕ.
    (ಅಂದ್ಹಾಗೆ ಹಿಟ್ಲರ್ ಬಗ್ಗೆ ಕೇಳಿ ನಮ್ಮ ಮೇಷ್ಟ್ರ ಹತ್ರ ಬೈಸ್ಕೊಂಡಿದ್ದ ನೆನಪಾಯ್ತು. ನಮ್ಕಾಲದ ಮೇಷ್ಟ್ರುಗಳು ಒಳ್ಯೋರು )

    ಪ್ರತಿಕ್ರಿಯೆ
  2. ನಂ .ವಿಶ್ವನಾಥ

    ಬರಹ ಆರಂಭದಲ್ಲೇ ಇಷ್ಟು ಚೆನ್ನಾಗಿದ್ದು ಮುಂದಿನ ಕಂತಗಳಿಗೆ ಎದುರು ನೋಡುತ್ತಿದ್ದೇನೆ ಼಼ನನ್ನ ಪ್ರವಾಸದ ಅನುಭವಗಳನ್ನು ಮೆಲಕು ಹಾಕಲು ಅನುಕೂಲಮಾಡಿಕೊಡುತ್ತದೆ .ಬರಹದ ಶೈಲಿ ವಿಷೇಷ

    ಪ್ರತಿಕ್ರಿಯೆ
  3. ದಾಕ್ಷಾಯಣಿ ನಾಗರಾಜ

    ಬರಹ ಆಪ್ತ. ಪ್ರಾರಂಭ ಕೂಡ ಚೆಂದೈತಿ ,,,

    ಪ್ರತಿಕ್ರಿಯೆ
  4. raju

    ಲೇಖನ ತುಂಬಾ ಚೆನ್ನಾಗಿದೆ, ಯಾದ್ ವಶೇಮ್ ಕನ್ನಡ ಪುಸ್ತಕವೇ ಎಲ್ಲಿ ದೊರೆಯುತ್ತದೆ ತಿಳೀಸಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: