ಕಿಚ್ಚನೂದುವಳು ಶಾಂತಕ್ಕ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಶಾಂತಕ್ಕನಿಗೂ ನನಗೂ ಸಂಜೆ ಒಟ್ಟಿಗೆ ಕೂತು ಚೌಕಾಬಾರ ಆಡುವಷ್ಟು ಸಲಿಗೆ ಇದೆ ಅಥವಾ ಅಷ್ಟೇ ಸಲಿಗೆ ಇದೆ. ಪ್ರತಿ ಸಾರಿಯಂತೆ ಕವಡೆಗಳನ್ನ ಇನ್ನೇನು ಒಡೆದೆ ಬಿಡ್ತು ಅನ್ನೋವಷ್ಟು ಜೋರಾಗಿ ಬೀಳಿಸಿ “ನೀವಿನ್ನೂ ಆಡಕ್ಕ ಕಲೀಬೇಕ್ರಿ… ಬಿಡ್ರಿ…” ಅಂತ ನನ್ನನ್ನ ನಾಳೆಗಳಿಗೆ ಸಿದ್ಧ ಮಾಡುವಂತ ಕಟು ದನಿಯಲ್ಲಿ ಇವತ್ತೂ ಹೇಳಿ ಕಳಿಸಿದ್ದಾಳೆ.

ಬದುಕುವುದು ಅನಿವಾರ್ಯತೆಯಾಗದೆ ಒಂದು ಹಠ ಅಂತಾದರೆ ಆ ಹಠಮಾರಿಯರ ಸಾಲಿನಲ್ಲಿ ಇವಳೇ ಮೊದಲು. ಊರೂರು ತಿರುಗಿ ಬದುಕು ಕಟ್ಟಿಕೊಂಡವಳು ಬೂದಿಹಾಳವನ್ನ ಬಿಟ್ಟು ದಕ್ಷಿಣಕ್ಕೆ ಹೊರಡುವಾಗ ಬದುಕುವ ಹಠ ಒಂದನ್ನ ಬಿಟ್ಟು ಜೋಳಿಗೆಯಲ್ಲಿ ಗಣ್ಯವಾದದ್ದೇನು ತಂದಿರಲಿಕ್ಕಿಲ್ಲ.

ಇಲ್ಲದ ಬೇಸಾಯ, ಸಾಲ, ಸಾಲು ಮಕ್ಕಳು ಹೀಗೆ ನೂರು ಕಾರಣಗಳನ್ನು ಹೊತ್ತು ಗುಳೆ ಹೊರಟ ಪರಿವಾರಗಳಲ್ಲಿ ಶಾಂತಕ್ಕನದ್ದೂ ಒಂದು. ಏನಲ್ಲದಿದ್ದರೂ ಉಡುಪಿ ಮಠದಲ್ಲಿ ಒಂದು ಹೊತ್ತು ಊಟ, ಪ್ರಗತಿನಗರದ ವಿಶಾಲ ಮೈದಾನದಲ್ಲೊಂದು ಜೋಪಡಿ ಇದ್ದೆ ಇದ್ದೀತು ಎಂದು ಬರುವವರೆಲ್ಲರಿಗೂ ಶಿಕ್ಷಣೋದ್ಯಮದ ಸುತ್ತು ಹೊಡೆದು ಬೆಳೆಯುತ್ತಿರುವ ಮಣಿಪಾಲಕ್ಕೆ ತಾವು ಬೇಕೇ ಬೇಕು ಎಂಬ ನಂಬಿಕೆ. ಇಂತಹ ನಂಬಿಕೆಗಳ ಮೇಲೆಯೇ ಈ ಊರು ಅಂತಸ್ತುಗಳನ್ನ ಕಟ್ಟುತ್ತಿರುವುದು.

ಇತ್ತೀಚಿನ ವರ್ಷಗಳಲ್ಲಿ ಉಡುಪಿ, ಮಣಿಪಾಲ ಹಾಗೂ ಸುತ್ತಲಿನ ಊರುಗಳು ಕರ್ನಾಟಕದ ಬೇರೆ ಮೂಲೆಗಳಿಂದ ಬಂದ ಸಾವಿರಾರು ವಲಸಿಗರಿಗೆ ಮನೆಯಾಗಿವೆ. ಕಟ್ಟಡ ನಿರ್ಮಾಣ, ಗಾರೆ ಕೆಲಸ. ಕೂಲಿ ಹೀಗೆ ಹತ್ತು ಹಲವು ಕೆಲಸಗಳನ್ನ ನಂಬಿ ಈ ಊರಿಗೆ ಕಾಲಿಟ್ಟವರ ಸಂಖ್ಯೆ ಬಹಳ ದೊಡ್ಡದು.

ಅವರ ವಸತಿ, ಆರೋಗ್ಯ, ದುಡಿಮೆ, ಶಿಕ್ಷಣ ಒಂದಷ್ಟು ದಿನಗಳು ಬಲ್ಲಿಗರ ಚರ್ಚೆ ಮತ್ತು ಕಾಳಜಿಯ ಕೇಂದ್ರವಾಗಿದ್ದರೆ, ಬಹಳಷ್ಟು ದಿನ ಎಲ್ಲರ ಮರೆವಿನ ಮೂಲೆ ಸೇರಿರುತ್ತದೆ. ಇವರಿಗೆ ಮಾತ್ರ ಬೇರೆಯವರ ಚರ್ಚೆಯ ಭಾಗವಾಗುವುದಕ್ಕಿಂತಲೂ ಬದುಕಿನ ಅವಶ್ಯಕತೆಗಳೇ ಬಹಳವಿದೆ. ಜೀವನದ ಜರೂರತ್ತುಗಳು ಇಲ್ಲಿಗೆ ಕರೆಸಿವೆಯಾದರೂ, ಇವರೆಲ್ಲರೂ ಹೇಗಾದರೂ ಒಂದು ದಿನ ತಮ್ಮೂರಿನ ಬಿರು ಬೇಸಿಗೆಯಲ್ಲೂ ತಣ್ಣಗೆ ಮಲಗಲು ಇಚ್ಛಿಸುವವರೇ.

ಶಾಂತ ಒಂದಿಷ್ಟು ದಿನ ಪ್ರಗತಿನಗರದ ಜೋಪಡಿಯಲ್ಲಿ ಕುಳಿತು ಊರಲ್ಲಿನ ಸ್ಲಾಬ್ ಹೊದೆಸಿದ ಮನೆಯನ್ನ ನೆನೆಸಿ ನೆನೆಸಿ ನಾನಿರುವ ಅಪಾರ್ಟ್ಮೆಂಟಿನ ಚಾಕರಿಗೆ ಬಂದವಳು. “ಹೊಟ್ಟೆಗೆ ಬೇಕಾಗೋವಷ್ಟು ಹಿಟ್ಟು ಊರಲ್ಲೇ ಆಗ್ತದ್ರಿ ಆದ್ರ ಸಾಲಕ್ಕೆನ್ ಮಾಡೋನು?” ಅಂತಲೇ ಗಟ್ಟಿ ಬದುಕನ್ನ ಕಟ್ಟಿಕೊಳ್ಳೋಕೆ ಗಟ್ಟಿಗರಂತೆ ದುಡಿವ ಇವಳಂತ ಕುಟುಂಬಗಳು ಊರಿಡೀ ತಲೆ ಎತ್ತಿರುವ ಅಪಾರ್ಟ್ಮೆಂಟ್ ಗಳ ನೆಲಮಾಳಿಗೆಯಲ್ಲಿ ಮಣ್ಣಪಳ್ಳದ ದಿನಗಳನ್ನ ಚಾಲ್ತಿಯಲ್ಲಿಟ್ಟಿವೆ. ದೊಡ್ಡ ಅವಶ್ಯಕತೆಗಳ ಬೆನ್ನು ಹತ್ತಿರುವ ಊರಿಗರಿಗಿಂತ ಚಿಕ್ಕ ಸಂಬಳಕ್ಕೆ ಒಪ್ಪುವ ಈ ಪರವೂರಿಗರೇ ಇಲ್ಲಿನ ಬಲ್ಲಿಗರಿಗೂ ಸಲೀಸು.

ಊರಲ್ಲಿ ತನ್ನಷ್ಟಕ್ಕೆ ಇದ್ದವಳನ್ನ ಗಂಡು ಮಕ್ಕಳ ಉದ್ಯೋಗಕ್ಕಾಗಲಿ ಎಂದು ತೆಗೆದ ಸಾಲ ಊರು ಬಿಡಿಸಿದ್ದಂತೆ. ಇಡೀ ಕಟ್ಟಡದ ಚೊಕ್ಕ, ರಾತ್ರಿ ಪಾಳಿ, ಕರೆದ ಮನೆಯವರೆಲ್ಲರ ಚಾಕರಿ, ಒಟ್ಟು ಮಾಡುವ ಗುಜರಿ ಹೀಗೆ ಅವಳ ದುಡಿಮೆಯ ಪಟ್ಟಿ ಉದ್ದವಿದೆ. ಗಂಡ ದಿನ ಆಳಿನ ಲೆಕ್ಕದಲ್ಲಿ ದುಡಿದು ತಂದರೂ, ತರದೇ ಇದ್ದರೂ, ಅವತ್ತಿನ ದುಡಿಮೆಯನ್ನ ಮಕ್ಕಳು ರಾತ್ರಿ ಹೊಟ್ಟೆಗಿಳಿಸಿದರೂ, ತಿಂಗಳ ಕೊನೆಗೆ ಸಾಲದ ಕಂತನ್ನು ತುಂಬಿಸಿಯೇ ತೀರುವವಳು.

ಕುತ್ತಿಗೆಯವರೆಗೆ ಬಂದಿದ್ದ ಸಂಘದ ಸಾಲದ ಜೊತೆಗೆ ಹೆಗಲಿಗೆ ಬಿದ್ದವರ ಹೊಟ್ಟೆಯೂ ತನ್ನ ಹೊಣೆ ಎಂದುಕೊಂಡರೂ ಸ್ವಂತದ ಇಷ್ಟ ಕಷ್ಟಗಳ ಅರಿವು ಇದ್ದೇ ಇದೆ. ಮನೆಯಲ್ಲಿ ವರ್ಜ್ಯವಾದರೂ ಮೊಟ್ಟೆ, ದೇಹಕ್ಕೆ ವರ್ಜ್ಯವಾದರೂ ಸಿಹಿ ಅವಳಿಗೆ ಪ್ರಿಯವೇ. ಅಕ್ಕ ಪಕ್ಕದವರುಡುವ ಚೊಕ್ಕ ಸೀರೆ ಅವರಿಗೆ ಹಳೆತೆನಿಸಿದರೆ ಅವಳಿಗೆ ಮಲಗುವ ಗಾದಿಯಾದೀತೇ ಹೊರೆತು ಉಡಲಿಕ್ಕಲ್ಲ. ಒಂದಷ್ಟು ಸ್ವಾಭಿಮಾನದ ಕಟ್ಟು ಕಟ್ಟಳೆಗಲ್ಲೇ ಬದುಕನ್ನ ಬೆಳಗಿಸಿಕೊಳ್ಳೋದು ಮತ್ತು ಬದುಕಿಸಿಕೊಳ್ಳೋದು ಶಾಂತಕ್ಕನಿಗೆ ಅಭ್ಯಾಸವಾಗಿದೆ.

ಮಣಿಪಾಲವಿನ್ನೂ ನಿದ್ರೆ ಜಾರುವ ಮುಂಜಾವಲ್ಲೇ ಎದ್ದು ಅವಳು ಹೊತ್ತಿಸುವುದು ಬೂದಿಹಾಳಕ್ಕೆ ಇನ್ನೊಂದು ದಿನ ಹತ್ತಿರಾದೆ ಎಂಬ ನಿಟ್ಟುಸಿರನ್ನ. ತನ್ನ ಕಡೆಯ ಚೌತಿ, ನಾಗರಪಂಚಮಿ, ಬನ್ನಿ, ದೀಪಾವಳಿ ಎಲ್ಲವನ್ನ ದಕ್ಷಿಣದ ಆಚರಣೆಯೊಂದಿಗೆ ಸೇರಿಸಿ ಸಿಹಿ ದಾಟಿಸುವಾಗಲೂ ನಮ್ಮ ಹತ್ತಿರ ಹಬ್ಬದ ಖುಷಿ ನಿಮಗೆ ಮಾತ್ರನೋ? ಇನ್ನೊಂದಿಷ್ಟು ದಿನ ತಡಿರೀ ಎಂಬ ನೋಟದಲ್ಲೇ ತನ್ನ ಮೊಂಡುತನವನ್ನ ಇನ್ನಷ್ಟು ಸಾಧಿಸುತ್ತಾಳೆ.

ಒದ್ದೆ ಸೌದೆಯ ಮೊದ್ದು ತುದಿಗಳಿಗೆ
ಉಳಿದ ಕರಕಲೆಣ್ಣೆಯ ಮುಟ್ಟಿಸಿ
ಈಗಲೇ ಹತ್ತುವುದೆಂಬಂತೆ ಕಾದು
ಎಲ್ಲಾದರು ಕಿಡಿಯಾಡುವುದೇ
ಉರುವಲು ಎಂದಲ್ಲೇ ಉರಿದವಳಿಗೆ
ಆರಿದ ಬೂದಿಯಲ್ಲೂ ಬೆಂಕಿಯಾಗಲೇಬೇಕು

(ಪದ್ಯ: ಕಿಚ್ಚನೂದುವಳು ಶಾಂತಕ್ಕ, ೨೯ ಜೂನ್ ೨೦೧೮)

ಮೊನ್ನೆ ಹಳೆ ಟ್ಯೂಬ್ ಲೈಟ್ ಗಳನ್ನ ಒಡೆದು ಅದರೊಳಗಿನ ತಾಮ್ರದ ತಂತಿ ಒಟ್ಟು ಹಾಕುತ್ತಾ “ಹೋದ ವಾರ ನೂರಾ ಅರವತ್ತು ಆಗಾದ್ರಿ” ಅಂದಾಗಲೋ, ಪ್ರತಿ ಸಾರಿ ತನ್ನೂರಿನ ಪರಿಚಯ ಹೇಳೋವಾಗ “ಬಾದಾಮಿಂದ ಮೂವತ್ ರುಪಾಯ್ ರೀ” ಅನ್ನೋವಾಗಲೋ ಹಣ ಅವಳ ಅವಶ್ಯಕತೆ ಎಂಬ ಸುಳಿವನ್ನ ಗಂಟಲೊಳಗೆ ನುಂಗುತ್ತಾಳೆ. ಆದರೆ ಸಂಜೆ ಹೊತ್ತಿದೊಲೆಯ ಎದುರು ಒರಗಿಸಿದ ಚಪ್ಪಡಿಯಲ್ಲಿ ರೊಟ್ಟಿ ಬಡಿಯುವಾಗ ಮಾತ್ರ ನರಂ ಆಗುತ್ತಾಳೆ.

ಆಗ ಮಾತ್ರ ಊರಲ್ಲಿರೋ ಒಂಟಿ ಮಗಳು, ದಿನ ರಾತ್ರಿ ಕುಡಿದು ರಾಮಾಯಣ ಮಾಡುವ ಮಕ್ಕಳು, ಕಳೆದ ತಿಂಗಳು ಊರಲ್ಲಿ ತೀರಿದ ಸೋದರ ಮಾವ, ಜನರೇಟರ್ ಗೆ ಎಣ್ಣೆ ಹಾಕಲಿಕ್ಕೆ ಸತಾಯಿಸೋ ಬಿಲ್ಡಿಂಗ್ ಮಾಲೀಕ, ಜೋರು ಮಳೆಗೆ ತೂರಾಡುವ ಮನೆ ಬಾಗಿಲು, ಕೆಟ್ಟು ನಿಂತ ಲಿಫ್ಟ್ ಎಲ್ಲರೂ ಅವಳ ಹಾಡಲ್ಲಿ ಬಂದು ಹೋಗುತ್ತಾರೆ.

ನೂರು ಬದುಕಿನ ನೂರಾರು ಕಥೆಗಳನ್ನು ಕೂಡಿಸಿಕೊಂಡೆ ಊರುಗಳು ಬೆಳೆಯುತ್ತವೆ, ಶಹರವಾಗುತ್ತವೆ. ಮತ್ತೆ ಬೆಳೆಯುತ್ತವೆ. ಊರಿನವರು ಜಗತ್ತನ್ನ ಅರಸುತ್ತ ಊರು ಬಿಡುತ್ತಾರೆ, ಊರು ಕಳೆದುಕೊಂಡವರು ಈ ಊರ ಹೊಕ್ಕು ಸೂರು ಕಾಣುತ್ತಾರೆ. ಇಲ್ಲಿ ಬದುಕು ಮತ್ತು ಊರು ಬೆಳೆಯುವುದನ್ನು ನಿಲ್ಲಿಸುವುದೇ ಇಲ್ಲ.

ಇಂತಹ ಬೆಳೆಯುವ ನಗರಗಳಿಗೆ ತಾಗಿ ಬದುಕು ಕಟ್ಟಿಕೊಂಡವರು, ಕನಸು ಕಳೆದುಕೊಂಡವರೆಲ್ಲರೂ ಇಲ್ಲಿ ಬಂದು ಹೋಗುತ್ತಾರೆ ಅಥವಾ ಹೋಗದೆಯೇ ಹಾಗೆ ಉಳಿದು ಬಿಡುತ್ತಾರೆ. ಆದಾಗಿಯೂ ಶಾಂತಕ್ಕ ಮಾತ್ರ ಇನ್ನು ಎಂಟು ಕಂತಿನ ಸಾಲ ತೀರಿಸಿ ಊರಿಗೆ ಹೊರಡುವವಳಂತೆ… ಮತ್ತೆ ಸಾಲವಾದರೆ ಮಾತ್ರ ವಾಪಸ್ಸು ಬರುವವಳಂತೆ…

August 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Karthik Amai

    ಚೆನ್ನಾಗಿ ಬರೆದಿದ್ದೀರಿ ಸುಶ್ಮಿತಾ, ಅಭಿನಂದನೆಗಳು

    ಪ್ರತಿಕ್ರಿಯೆ
  2. ರೇಣುಕಾ ರಮಾನಂದ

    ಶಾಂತಕ್ಕನ ಕಥೆ ಬಲು ಆತ್ಮೀಯವಾಗಿದೆ

    ಪ್ರತಿಕ್ರಿಯೆ
  3. Sudha Hegde

    ಚಂದದ ಲೇಖನ
    ಎದೆ ಭಾರವಾಗಿಸುವ ಬರಹ

    ಪ್ರತಿಕ್ರಿಯೆ
  4. ಯಂ.ಕೃಷ್ಣರಾಜ .ಭಟ್. ಹೆಬ್ರಿ

    ಶಾಂತಕ್ಕನಂತವರಿಗೆ ಸಾಲದ ಅನಿವಾರ್ಯತೆ ಮತ್ತೇ ಬಾರದಿರಲಿ..ಎಂಬ ಆಶಯ ಬರಹವನ್ನೋದಿದಾಗ ಮೂಡಿದಂತೂ ಸತ್ಯ.
    ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: