ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೋಣಿ ತೀರ ಬಿಟ್ಟು..

-ಎನ್ ವಿ ವಾಸುದೇವ ಶರ್ಮ

ದೋಣಿ ತಪ್ಪಿಸಿದೆನೇನು?

ಹೊತ್ತಾಗುತಿದೆ ಹೊರಡು.
ದೋಣಿ ದಡದಲಿ ಕಾದಿದೆ. ಈಗ ಹೊರಡಲಿದೆ…

ಎನ್ನ ಮಾತ ಕೇಳದ ಹೆಜ್ಜೆಗಳು
ಮರಳಲೂರಿವೆ.
ಮುಂದಡಿಯಿಡಲು ಕ್ಷಣ ಯುಗ ಮಾಡುತಿವೆ.
ಮನದದೊಂದು ಮಾತು
ದೇಹದದೊಂದು ಭಾವ.
ಒಂದಕ್ಕೊಂದು ಒಪ್ಪದ ಸಂಘರ್ಷ!

ಅಂಬಿಗ ಪರಿಚಿತ
ಅದೆಷ್ಟು ಬಾರಿ ಇತ್ತಂದತ್ತ ಅತ್ತಂದಿತ್ತ ತಂದವ
ನನ್ನ ಕಂಡು ಹುಟ್ಟು ಹಿಡಿದ ಕೈಯ ಬೀಸಿ ಕೂಗಿ ಕೂಗಿ ಕರೆದ
ಗಮನ ಸೆಳೆಯಲು ದೋಣಿ ತುದಿಗೆ ಬಂದು ನಿಂತು ನೋಡಿದ
ಅವಸರಿಸಿದ…
…ಸಮಯ ಮೀರಿದೆ ತಡವಾಗಿದೆ!
ತುಂಡು ತುಂಡು ಶಬ್ದ ಕಿವಿಗೆ ತಾಗಿತು.
ಬೀಸುವ ಗಾಳಿಯಲಿ ತೇಲಿ ಹೋದವದೆಷ್ಟೋ.
ಒಳಗಿಂದಲೂ ಒತ್ತಡ… ಬೇಗ ಬೇಗ.

ಊರಿದ ಹೆಜ್ಜೆ ಮೇಲತ್ತದೆ ಹೇಳುತಿದೆ
ಸುತ್ತ ನೋಡು ಸ್ವಲ್ಪ ತಡೆ ತಡೆ.

ನನ್ನ ಸುತ್ತ ಜಗ ನಿಧಾನ ಅರಳುತ್ತಿತ್ತು.
ಸಮಯದ ಮಿಡಿತ ಮಂದವಾದಂತೆ
ಮೊಗ್ಗುಗಳು ಬಿರಿಯುವ ನೋಟ
ಹಕ್ಕಿಗಳಿಂಚರ
ಹೂವಿಂದ ಹೂವಿಗೆ ಚಿಟ್ಟೆಯೂ ನಿಧಾನ ಹಾರಿತು
ಸುತ್ತ ನಿಂತಿದ್ದ ಬೆಟ್ಟ ಮೆಲ್ಲಗೆ ಮೈಮುರಿಯಿತು…

ನಾನು…
ಹೂವಾಗಿ ಹಕ್ಕಿಯಾಗಿ ಬೆಟ್ಟದೆತ್ತರದಲಿ ಒಂದಾಗಿ
ಮೊಗದಲ್ಲೊಂದು ನಿರಾಳ ನಗುವಾಗಿ…

ದೋಣಿ ತೀರ ಬಿಟ್ಟು
ಹುಟ್ಟೆಳೆದ ಅಲೆಗಳುಂಗರದ ಗುರುತನಿಟ್ಟು
ಮುಂದೊತ್ತಿ ಸಾಗಿತು.

ಸಮಯಕೀಗ ಜೀವ ಬಂತೆಂಬಂತೆ
ನಾನು ತೀರದ ಮರಳ ಹಾಸಲಿ ಒಂಟಿ ಸುಖಿಸಿದೆ
ಏನೋ ಯಾವುದೋ ಬಿಡುಗಡೆಗೊಂಡಂತೆ.

ಮರಳ ಮೇಲೆ ನನ್ನದೇ ಹೆಜ್ಜೆ ಗುರುತು
ಆಳವಾಗಿದೆ
ಹಿಂದಿರುಗಿ ನೋಡಿದ ನೋಟ
ದೀರ್ಘವಾಗಿದೆ.
ಕಳೆದುಕೊಂಡೆನೇನು?
ಪಡೆದುಕೊಂಡೆನೇನು?

‍ಲೇಖಕರು Admin

1 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading