’ದೊಡ್ಡಮ್ಮನ ಸೀರಿಯಲ್ ಪ್ರೀತಿಯೂ, ನನ್ನ ಸೀರಿಯಸ್ ಪರಿಸ್ಥಿತಿಯೂ…’ – ಬಿ ವಿ ಭಾರತಿ

ಭಾರತಿ ಬಿ ವಿ

ನನಗೊಬ್ಬರು ಅತ್ಯಂತ ಪ್ರೀತಿಯ ದೊಡ್ಡಮ್ಮ ಇದ್ದರು. ಸಣ್ಣ ವಯಸ್ಸಿನಿಂದ ಅವರ ಮನೆಯೆಂದರೆ ನಮ್ಮದೇ ಇನ್ನೊಂದು ಮನೆ ಅನ್ನುವಷ್ಟು ಪ್ರೀತಿ, ಸಲಿಗೆ ಮತ್ತು ಸದರ. ನಾವು ತಿಂಗಳೊಂದರಲ್ಲಿ 15 ದಿನ ಅವರ ಮನೆಯಲ್ಲೇ ಟೆಂಟ್ ಹಾಕಿರುತ್ತಿದ್ದೆವಾದ್ದರಿಂದ, ದೊಡ್ಡಮ್ಮನ ಜೊತೆ ಜಾಸ್ತಿ ಒಡನಾಟವಿತ್ತು. ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಾದ ಸರಗೂರು, ಕಬಿನಿ, ಕೆ ಆರ್ ಎಸ್ ಇವುಗಳಲ್ಲಿ ನಮ್ಮ ವಾಸ. ನಮ್ಮ ವೀಕೆಂಡ್ ಎಂಟರ್‌ಟೇನ್ಮೆಂಟ್ ಅಂದರೆ ಮೈಸೂರಿನ ಪ್ರವಾಸ! ಬೇಸರವೇ ಇಲ್ಲದೇ ವಾರವಾರವೂ ಮೈಸೂರಿಗೆ ಹೋಗುತ್ತಿದ್ದೆವು. ಮೊದಲೇ ಅಷ್ಟು ಓಡಾಡುತ್ತಿದ್ದೆವು. ಅದರ ಜೊತೆಗೆ, ಅದೇ ಸಮಯದಲ್ಲಿ ಅಪ್ಪನಿಗೆ ತುಂಬ ಹುಷಾರು ತಪ್ಪಿ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಆದರು. ಸಿಂಪಲ್ ಅಂದುಕೊಂಡಿದ್ದು ಸ್ವಲ್ಪ ದೊಡ್ಡದೇ ಆಗಿಹೋಗಿ, ಅಪ್ಪ ತಿಂಗಳುಗಟ್ಟಳೆ ಆಸ್ಪತ್ರೆಯಲ್ಲೇ ಇರಬೇಕಾದ ಸ್ಥಿತಿ ಬಂತು. ಅಮ್ಮ ಅವರನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿ ಇರಲೇಬೇಕು. ನಾನು ಮತ್ತು ಅಕ್ಕ ಆಗ ತುಂಬ ಸಣ್ಣವರು. ಹಾಗಾಗಿ ಇಬ್ಬರೇ ಎಲ್ಲಿರಬೇಕು? ಕೊನೆಗೆ ಇಬ್ಬರೂ ವಿದ್ಯೆಗೆ ಎಳ್ಳು ನೀರು ಬಿಟ್ಟು, ದೊಡ್ಡಮ್ಮನ ಮನೆಯಲ್ಲಿ ಝಾಂಡಾ ಊರಿದ್ದೆವು. ಪಾಪ ದೊಡ್ಡಮ್ಮನಿಗೆ ಅವರದ್ದೇ ನಾಲ್ಕು ಮಕ್ಕಳು. ಅವರ ಜೊತೆಯಲ್ಲಿ ನಾವೂ ಇಬ್ಬರು ಸೇರಿಕೊಂಡಿದ್ದೆವು. ನನ್ನ ದೊಡ್ಡಪ್ಪನೂ ತುಂಬ ಪ್ರೀತಿಯ ಜೀವ. ಹಾಗಾಗಿ ನಾವು ನಮ್ಮದೇ ಮನೆ ಅನ್ನುವಷ್ಟು ಆರಾಮವಾಗಿ ಬೀಡುಬಿಟ್ಟೆವು.
ದೊಡ್ಡಮ್ಮ ಅನ್ನುವ ಭೂಮಿಯಂಥ ಹೆಣ್ಣು ಒಂದೇ ಒಂದು ಸಲಕ್ಕೂ ಸಿಡುಕದೇ, ಬಯ್ಯದೇ ತಾಳ್ಮೆಯಿಂದ ನಮ್ಮೆಲ್ಲರನ್ನೂ ಅದು ಹೇಗೆ ನೋಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಮನೆಯಲ್ಲಿ ಎಲ್ಲ ಕೆಲಸ ಮಾಡಿ ಮುಗಿಸಿ, ಮಕ್ಕಳನ್ನು ಸ್ಕೂಲು-ಕಾಲೇಜಿಗೆ ಕಳಿಸಿ, ಅಡಿಗೆ ಮಾಡಿ, ನಮ್ಮಿಬ್ಬರಿಗೂ ಊಟ ಮಾಡಿಸಿ, ತಾವೂ ಒಂದಿಷ್ಟು ಉಂಡು, ಅಮ್ಮ ಮತ್ತು ಅಪ್ಪನಿಗೆ ಊಟ ತೆಗೆದುಕೊಂಡು, ನಮ್ಮಿಬ್ಬರನ್ನೂ ಎಳೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದರು. ಸ್ಕೂಲಿನ ಕಾಟ ತಪ್ಪಿದ್ದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಸುಖವಾಗಿ ತಿಂದುಂಡು ಬದುಕುತ್ತಿದ್ದ ನನಗೆ ಆಸ್ಪತ್ರೆಯಲ್ಲಿ ಅಪ್ಪನಿಗೆಂದು ನೆಂಟರೆಲ್ಲ ಹಣ್ಣು ತಂದಿಟ್ಟಿರುತ್ತಿದ್ದರಲ್ಲ, ಅದರ ಮೇಲೆ ಕಣ್ಣು! ದೊಡ್ಡಮ್ಮ ಉಸ್ಸೋ ಅನ್ನುತ್ತಾ ಆಸ್ಪತ್ರೆಗೆ ಕಾಲಿಟ್ಟ ಕೂಡಲೇ ನಾನು ಅಚ್ಚುಕಟ್ಟಾಗಿ ಹಣ್ಣುಗಳ ಪ್ಯಾಕೆಟ್ ಬಿಡಿಸಿ ಬಕಾಸುರನ ಹಾಗೆ ಎಲ್ಲ ಹಣ್ಣುಗಳನ್ನು ಕಬಳಿಸುತ್ತಿದ್ದೆ. ದೊಡ್ಡಮ್ಮ ಕಾಲೆಳೆದುಕೊಂಡು ಹೊರಡಲು ರೆಡಿಯಾಗುವವರೆಗೆ ನನ್ನ ಫಲಾಹಾರ ನಡೆದೇ ಇರುತ್ತಿತ್ತು. ಆ ನಂತರ ಅವರ ಜೊತೆ ವಾಪಸ್ಸಾಗಿ, ಅಷ್ಟರಲ್ಲಿ ಮನೆಗೆ ಬಂದಿರುತ್ತಿದ್ದ ಅಣ್ಣಂದಿರು, ಅಕ್ಕಂದಿರ ಜೊತೆ ಬೀದಿ ಬೀದಿ ಅಲೆಯುತ್ತಾ ಟೈಮ್ ಪಾಸ್ ಮಾಡುವುದು ಜೀವನದ ಘನೋದ್ದೇಶವಾಗಿತ್ತು. ಇದೆಲ್ಲ ಒಂದಲ್ಲ, ಎರಡಲ್ಲ …. ಹೆಚ್ಚು ಕಡಿಮೆ 40-50 ದಿನಗಳ ಕಾಲ ನಡೆಯಿತು. ದೊಡ್ಡಮ್ಮನೆಂದರೆ ನನ್ನ ಇನ್ನೊಂದು ಅಮ್ಮನೇ ಅನ್ನುವಷ್ಟು ಪ್ರೀತಿ ಬೆಳೆದ ದಿನಗಳವು. ಅಪ್ಪ ಪೂರ್ತಿ ಹುಷಾರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೆ ಇದೇ ದಿನಚರಿ. ಮುಂದೆ ನಾವು ಬೆಂಗಳೂರಿಗೆ ಬಂದು ನೆಲೆಸಿ, ಕಾಲೇಜು ಓದು ಮುಗಿಸಿ, ಮದುವೆ-ಮಕ್ಕಳು ಅಂತೆಲ್ಲ ಆದರೂ ನನ್ನ ದೊಡ್ಡಮ್ಮನ ಬಗೆಗಿನ ಪ್ರೀತಿ ಮಾತ್ರ ಒಂದಿಷ್ಟೂ ಕಡಿಮೆಯಾಗಲಿಲ್ಲ. ಯಾವಾಗಲೇ ಆದರೂ ಮೈಸೂರಿಗೆ ಹೋದರೆ ಅವರನ್ನು ಕಾಣದೇ ಬರುತ್ತಲೇ ಇರಲಿಲ್ಲ.
ಯಾವುದೋ ಕೆಲಸಕ್ಕೆ ಒಮ್ಮೆ ಮೈಸೂರಿಗೆ ಹೊರಟೆ. ಹಾಕಿಕೊಂಡಿದ್ದ ಕೆಲಸಗಳೆಲ್ಲದರ ನಡುವೆಯೂ ದೊಡ್ಡಮ್ಮನನ್ನು ಸ್ವಲ್ಪ ಹೊತ್ತಾದರೂ ಕಂಡು ಬರುವುದು mandatory ಆಗಿತ್ತು. ಸಣ್ಣ ವಯಸ್ಸಿನಲ್ಲಿ ಎಷ್ಟೆಲ್ಲ ಉಣಿಸಿದ್ದ ದೊಡ್ಡಮ್ಮ ಈಗ ತುಂಬ ಸೋತು ಹೋಗಿದ್ದರು. ತಮ್ಮನ್ನು ತಾವು ನೋಡಿಕೊಳ್ಳುವುದೂ ಒಂದು ಪ್ರಯಾಸದ ಕೆಲಸವಾಗಿ ಹೋಗಿತ್ತು. ಸೊಸೆ ಕೂಡಾ ಕೆಲಸದಲ್ಲಿದ್ದರು. ಹಾಗಾಗಿ ಅಡುಗೆ ಮಾಡಿಟ್ಟು ಮಗ-ಸೊಸೆ ಕೆಲಸಕ್ಕೆ ಹೊರಟುಹೋದ ಮೇಲೆ ದೊಡ್ಡಮ್ಮ ಮನೆಯಲ್ಲಿ ಸಂಜೆಯತನಕ ಒಬ್ಬರೇ. ಅಂತಹ ಸ್ಥಿತಿಯಲ್ಲಿ ನಾನು ಅವರ ಮನೆಗೆ ಊಟಕ್ಕೆಂದು ಹೋಗಿ ಮತ್ತಿಷ್ಟು ತೊಂದರೆ ಕೊಡಲಿಚ್ಛಿಸದೇ, ಹೋಟೆಲ್ಲಿನಲ್ಲಿ ಊಟ ಮುಗಿಸಿ ಮಧ್ಯಾಹ್ನ ಎರಡೂವರೆಗೆ ಅವರ ಮನೆಯಲ್ಲಿ ಕಾಲಿಟ್ಟೆ. ವಯಸ್ಸಾಗಿದ್ದ ದೊಡ್ಡಮ್ಮನಿಗೆ ಮನೆಗೆ ಯಾರಾದರೂ ಬಂದಾಗ ಎದ್ದು ಬಂದು ಬಾಗಿಲು ತೆಗೆಯುವುದೂ ಒಂದು ಪ್ರಯಾಸದ ಕೆಲಸವೇ ಆಗಿತ್ತು. ಬೇರೆ ಯಾರಾದರೂ ಅಂಥ ಸ್ಥಿತಿಯಲ್ಲಿದ್ದರೆ ತಮ್ಮ ಸೇಫ್ಟಿಯನ್ನು ಗಮನದಲ್ಲಿಟ್ಟುಕೊಂಡು, ಮುಂಬಾಗಿಲಿಗೆ ಬೀಗ ಜಡಿದು, ಯಾರಾದರೂ ಬರಲಿ … ಹೋಗಲಿ ಅಂತ ಸುಮ್ಮನಿರುತ್ತಿದ್ದರೇನೋ. ಆದರೆ ನನ್ನ ದೊಡ್ಡಮ್ಮ ಹಾಗಲ್ಲ. ಬರುವವರಿಗೆ ಪಾಪ ತೊಂದರೆಯಾಗಬಾರದು ಅಂತ ಮುಂಬಾಗಿಲನ್ನು ತೆರೆದೇ ಇಟ್ಟಿರುತ್ತಿದ್ದರು! ‘ಕಳ್ಳ ಬಂದು ನಿನ್ನ ಕೊಲೆ ಮಾಡಿ ಮನೆ ದೋಚಿಯಾನು’ ಅಂತ ನನ್ನ ಅಮ್ಮ ಸಾವಿರ ಸಲ ಎಚ್ಚರಿಸಿದರೂ ನನ್ನ ದೊಡ್ಡಮ್ಮ ಕಿವಿಯ ಮೇಲೇ ಹಾಕಿಕೊಳ್ಳದೇ ಮುಂಬಾಗಿಲನ್ನು ಹಾರು ಹೊಡೆದಂತೆ ಇಡುತ್ತಿದ್ದರು.
ಇದೆಲ್ಲ ನನಗೆ ವರ್ಷಗಳಿಂದ ಅಭ್ಯಾಸವಾಗಿದ್ದರಿಂದ ಎಂದಿನಂತೆ ಸೀದಾ ಮನೆಯೊಳಕ್ಕೆ ನುಗ್ಗಿದೆ. ಹೊರಗಿನ ಪಡಸಾಲೆಯಲ್ಲಿ ಚಪ್ಪಲಿ ಕಳಚಿ, ಖುಷಿಯಲ್ಲಿ ‘ದೊಡ್ಡಮ್ಮಾ….’ ಅಂತ ಕೂಗು ಹಾಕಿದೆ. ಪ್ರತಿ ಸಲ ಹೋದಾಗಲೂ ನಾನು ಆ ರೀತಿ ಕೂಗಿದರೆ ದೊಡ್ಡಮ್ಮನ ಮೃದು ದನಿ ‘ಭಾರತಿಯಾ? ಬಾ .. ಬಾ …’ ಅನ್ನುತ್ತಿತ್ತು. ಅಷ್ಟು ಮೃದುವಾಗಿ ಪಾರಿಜಾತದಂತೆ ನನ್ನ ಹೆಸರನ್ನು ಕರೆದಿದ್ದನ್ನು ನಾನು ಕೇಳಿದ್ದು ಇಬ್ಬರಿಂದ ಮಾತ್ರ – ಒಬ್ಬರು ದೊಡ್ಡಮ್ಮ, ಮತ್ತೊಬ್ಬರು ಯು.ಆರ್. ಅನಂತಮೂರ್ತಿ ಸರ್. ಇಬ್ಬರ ದನಿಯಲ್ಲಿ ನನ್ನ ಹೆಸರು ಕೇಳಿದರೆ ನಾನೊಂದು ಪುಟ್ಟ ಮಗುವಾದೆ ಅನ್ನಿಸಿಬಿಡುತ್ತಿತ್ತು. ಈಗ ನಾನು ಕೂಗಿದ ಸದ್ದಾದರೂ ಎಂದಿನ ಆ ಪಾರಿಜಾತದ ಮೃದು ದನಿ ‘ಭಾರತಿಯಾ … ಬಾ … ಬಾ …’ ಅನ್ನಲೇ ಇಲ್ಲ! ಅಲ್ಲಿಂದ ದಾಟಿ ವರಾಂಡಾಗೆ ಕಾಲಿಟ್ಟವಳೇ ಮತ್ತೊಮ್ಮೆ ಕೂಗಿದೆ. ಆಗಲೂ ಯಾವ ದನಿಯೂ ಉತ್ತರಿಸಲಿಲ್ಲ. ಸ್ವಲ್ಪ ಗಾಭರಿಯಾಗಿ, ಹಾಲ್‌ನೊಳಗೆ ಕಾಲಿಟ್ಟು ಮತ್ತೆ ಕೂಗುವಷ್ಟರಲ್ಲಿ ಕಂಡರು ಈಸಿ ಛೇರಿನ ಮೇಲೆ ಗುಬ್ಬಿಯಂತೆ ಕೂತು, ಟಿ ವಿ ಪರದೆಯ ಮೇಲೆ ಕಣ್ಣು ನೆಟ್ಟ ದೊಡ್ಡಮ್ಮ! ‘ಓ ಇಲ್ಲಿದ್ದೀರಾ? ನನಗೆ ಗಾಭರಿಯಾಗಿತ್ತು ನಿಮ್ಮ ಧ್ವನಿ ಕೇಳದೇ. ಚೆನ್ನಾಗಿದ್ದೀರಾ?’ ಅಂದೆ. ಅದಕ್ಕೂ ಯಾವ ಉತ್ತರವೂ ಇಲ್ಲ! ನಾನು ಒಂಥರಾ ಗಲಿಬಿಲಿಯಲ್ಲೇ ದೊಡ್ಡಮ್ಮನ ಎದುರು ಹೋಗಿ ನಿಂತೆ. ದೊಡ್ಡಮ್ಮ ಆಗ ಎಚ್ಚೆತ್ತವರಂತೆ ‘ಓಹ್! ಭಾರತಿಯಾ? ಬಾ … ಬಾ …’ ಎಂದರು. ಆ ಧ್ವನಿ ಕೇಳಿದ್ದೇ ಖುಷಿಯಾಗಿ ಹೋಯಿತು. ಅವರೆದುರು ಒಂದು ಕುರ್ಚಿ ಎಳೆದು ಕೂತೆ.
ಒಂದೈದು ನಿಮಿಷ ಯೋಗಕ್ಷೇಮ, ಅದೂ, ಇದೂ ಎಲ್ಲ ಮಾತಾಡಿದ್ದಾಯ್ತು. ಊಟ ಮುಗಿಸಿಯೇ ಬಂದಿದ್ದೀನಿ ಅಂತ ದೊಡ್ಡಮ್ಮ ದುಃಖ ಪಟ್ಟಿದ್ದೂ ಆಯ್ತು. ‘ಎಷ್ಟು ಜನಕ್ಕೆ ಲೀಲಾಜಾಲವಾಗಿ ಅಡುಗೆ ಮಾಡ್ತಿದ್ದೆ. ಈಗ ನೋಡು ಹೇಗಾಗೋಗಿದೀನಿ’ ಅಂತ ನೊಂದುಕೊಂಡಿದ್ದಾಯ್ತು. ‘ನೀವು ಹಾಕಿರೋ ಊಟ ಇನ್ನೂ ಮೂರು ಜನ್ಮಕ್ಕೆ ಸಾಲತ್ತೆ ಸುಮ್ನಿರಿ ಅಂತ ನಾನು ಗದರಿಸಿದ್ದೂ ಆಯ್ತು. ಅವರ ಖಾಯಿಲೆ ಬಗ್ಗೆ ವಿಚಾರಿಸಿದ್ದಾಯ್ತು. ಅಷ್ಟರಲ್ಲಿ ಎದುರಿಗಿದ್ದ ಟಿ ವಿ ಯಲ್ಲಿ ಯಾವುದೋ ಸೀರಿಯಲ್‌ನ ಟೈಟಲ್ ಸಾಂಗ್ ಶುರುವಾಯಿತು. ಮಾತಾಡುತ್ತಿದ್ದ ದೊಡ್ಡಮ್ಮ ಇದ್ದಕ್ಕಿದ್ದ ಹಾಗೆ ಮಾತು ನಿಲ್ಲಿಸಿದರು. ವಶೀಕರಣಕ್ಕೊಳಗಾದವರಂತೆ ಟಿವಿಯಲ್ಲಿ ಕಣ್ಣು ನೆಟ್ಟರು! ಟಿವಿ ನೋಡುವುದನ್ನು ನಿಲ್ಲಿಸಿ ತುಂಬ ಕಾಲವಾಗಿದ್ದ ನಾನು, ದೊಡ್ಡಮ್ಮ ಟಿವಿಯಲ್ಲಿ ಕಣ್ಣು ನೆಟ್ಟರೆ ಏನು ಮಾಡಬೇಕು ಹೇಳಿ! ವಿಧಿಯಿಲ್ಲದೇ ನಾನೂ ಅದರ ಕಡೆ ಕಣ್ಣು ಹಾಯಿಸಲೇಬೇಕಾಯ್ತು.
ಟೈಟಲ್ ಸಾಂಗ್ ಮುಗಿಯಿತು. ಮೊದಲ ಸೀನ್ ಶುರುವಾಯಿತು. ಅದ್ಯಾವುದೋ ಹೆಣ್ಣುಮಗಳು ಪಾಪ ಭೋರಿಟ್ಟು ಅಳಲು ಶುರುವಿಟ್ಟಿತು. ಹೃದಯವೇ ಕರಗುವಂಥ ಅಳು. ಅದನ್ನು ನೋಡುತ್ತಿದ್ದ ದೊಡ್ಡಮ್ಮನ ಮುಖದಲ್ಲೂ ನೋವು.  ಆ ಅಳುವಿನ ಸೀನೇ ಮುಗಿಯದೇ ಹೋದಾಗ ಸುಮ್ಮನೇ ಕೂತು ಕೂತು ಸಾಕಾದ ನಾನು – ದೊಡ್ಡಮ್ಮ ಯಾಕೆ ಆ ಹುಡುಗಿ ಪಾಪ ಹಾಗೆ ಅಳ್ತಿದಾಳೆ? ಎಂದುಬಿಟ್ಟೆ. ಯಂಡಮೂರಿಯವರ ಸ್ಟೈಲಿನಲ್ಲಿ ಹೇಳುವುದಾದರೆ ‘ಆ ಪ್ರಶ್ನೆ ಕೇಳಿ ನಾನು ಎಂಥ ದೊಡ್ಡ ತಪ್ಪು ಮಾಡಿದೆ ಅನ್ನುವುದು ಅಲ್ಲಿಂದ ಮುಂದಿನ ನಾಲ್ಕು ಘಂಟೆ, ಇಪ್ಪತ್ತಾರು ನಿಮಿಷ, ಹತ್ತೊಂಭತ್ತು ಸೆಕೆಂಡುಗಳ ನಂತರ ನನಗೆ ತಿಳಿಯಿತು ….!
ದೊಡ್ಡಮ್ಮ ನನ್ನ ಮಾತು ಕಿವಿಯ ಮೇಲೆ ಬಿದ್ದೇ ಇಲ್ಲವೇನೋ ಅನ್ನುವಂತೆ ಟಿವಿಯಲ್ಲೇ ಮನಸ್ಸು ನೆಟ್ಟಿದ್ದರು. ನಾನೂ ಆ ಪ್ರಶ್ನೆಗೆ ಉತ್ತರ ನಿರೀಕ್ಷಿಸಿಯೇನೂ ಪ್ರಶ್ನೆ ಹಾಕಿರಲಿಲ್ಲವಾದ್ದರಿಂದ ಸುಮ್ಮನಾದೆ. ಆರೇಳು ನಿಮಿಷದ ನಂತರ ಜಾಹಿರಾತಿನ ಬ್ರೇಕ್ ಬಂದಾಗ ದೊಡ್ಡಮ್ಮ – ಪಾಪ ಅವಳದ್ದೊಂದು ದೊಡ್ಡ ಕಥೆ … ಎನ್ನುತ್ತಾ ಮಾತಿಗೆ ಮೊದಲಿಟ್ಟರು ……. ಕೇಳಿಸಿಯೇ ಇಲ್ಲವೇನೋ ಅನ್ನುವಂತೆ ಕೂತಿದ್ದ ದೊಡ್ಡಮ್ಮ ಇದ್ದಕ್ಕಿದ್ದ ಹಾಗೆ ಈ ಮಾತು ಶುರು ಮಾಡಿದಾಗ ಪ್ರಶ್ನೆ ಹಾಕಿದ್ದೇ ಮರೆತುಹೋಗಿದ್ದ ನಾನು ಪಿಳಿ ಪಿಳಿ ಕಣ್ಣು ಬಿಡುತ್ತಾ ಅವರತ್ತ ನೋಡಿದೆ.
ಮೊದಲಿನಿಂದ ಸಿನೆಮಾ ಕಥೆ ಅಥವಾ ಸೀರಿಯಲ್ ಕಥೆ ಕೇಳುವುದನ್ನು ಉಗ್ರವಾಗಿ ದ್ವೇಷಿಸುತ್ತೇನೆ ನಾನು. ಇದಕ್ಕೆ ಪೂರ್ತಿ ಕಾರಣಳು ಪೂರ್ಣಿಮಾ ಅನ್ನುವ ನನ್ನ ಗೆಳತಿ. ಸರಗೂರೆಂಬ ಹಳ್ಳಿಯಲ್ಲಿ ನಾನಿದ್ದಾಗ ನನಗೆ ನಾಲ್ಕು ಗೆಳತಿಯರಿದ್ದರು. ಅದರಲ್ಲಿ ಪೂರ್ಣಿಮಾ ಅನ್ನುವವಳು ವಾರ ವಾರ ಮೈಸೂರಿಗೆ ಹೋಗಿ ಸಿನೆಮಾ ನೋಡಿ ಬರುತ್ತಿದ್ದಳು. ಬಂದವಳು ಮಾರನೆಯ ದಿನ ಅದರ ಕಥೆ ಶುರು ಮಾಡಿದರೆ, ಎರಡೂವರೆ ಘಂಟೆಗಳ ಸಿನೆಮಾ ಕಥೆಯನ್ನು ಐದಾರು ಘಂಟೆಗಳ ಕಾಲ ಕೊರೆಯುತ್ತಿದ್ದಳು. ನನಗೋ ಕೂತ ಕಡೆಯೇ ಕೂತು ಘಂಟೆಗಟ್ಟಳೆ ಕಥೆ ಕೇಳುವುದೆಂದರೆ ಶುದ್ಧ ಬೋರು. ಆದರೆ ಉಳಿದ ಗೆಳತಿಯರು ಅವಳ ಸುತ್ತ ಬಾಯಿ ಬಿಟ್ಟುಕೊಂಡು ಕಥೆ ಕೇಳುವುದರಲ್ಲಿ ಮುಳುಗಿದರೆ ನನಗೆ ಬೇರೇನು ದಾರಿಯಿತ್ತು, ನಾನೂ ಬಾಯಿ ಮುಚ್ಚಿ ಕೇಳುವುದು ಬಿಟ್ಟು? ಒಂದು ಸಲವಂತೂ ಅಣ್ಣಾವ್ರ ‘ಒಲವು ಗೆಲುವು’ ನೋಡಿ ಬಂದ ಪೂರ್ಣಿ ಟೈಟಲ್ ಕಾರ್ಡಿನಿಂದ ಶುರು ಮಾಡಿ ಒಂದೊಂದೂ ಡೈಲಾಗನ್ನು ಹೇಳಿ ಮುಗಿಸಲು ಮೂರು ದಿನ ತೆಗೆದುಕೊಂಡಿದ್ದಳು!! ಅಬ್ಬಾ, ಆ ಮೂರು ದಿನಗಳು ನನಗೆ ನರಕದಲ್ಲಿ ಬೇಯುತ್ತಿದ್ದೀನೇನೋ ಅನ್ನಿಸಿಬಿಟ್ಟಿತ್ತು. ಹೀಗೆ ಏಳನೆಯ ಕ್ಲಾಸ್ ಮುಗಿಯುವವರೆಗೆ ಈ ಸಿನೆಮಾ ಕಥೆಗಳನ್ನು ಕೇಳುವ ಪ್ರಾರಬ್ಧ ಕರ್ಮ ನನ್ನದಾಗಿ ಹೋಗಿತ್ತು.
ಆ ನಂತರ ನಾನು ಸಿಕ್ಕಾಪಟ್ಟೆ ಬುದ್ಧಿವಂತಳಾಗಿಹೋಗಿದ್ದೆ. ಯಾರಾದರೂ ಸಿನೆಮಾ ಕತೆ ಶುರುವಿಟ್ಟರೆ ಸಂಬಂಧವೇ ಹರಿದುಹೋದರೂ ಅಡ್ಡಿಯಿಲ್ಲ ಅಂತ ತೀರ್ಮಾನಿಸಿ – ಕಥೆ ಮಾತ್ರ ಹೇಳಬೇಡಿ, ನನಗೆ ಕೇಳಕ್ಕೆ ಬೋರು ಅಂತ ಒರಟಾಗಿ ಹೇಳಿಬಿಡುತ್ತಿದ್ದೆ. ಮೊದಲಲ್ಲಿ ಸ್ವಲ್ಪ ಬೇಸರಗೊಂಡರೂ ನಂತರ ಅದಕ್ಕೆ ಅಡ್ಜಸ್ಟ್ ಆಗುತ್ತಿದ್ದರು! ನನ್ನ ಮನೆಯವರಂತೂ ಯಾರೂ ಕಥೆ ಹೇಳುವ ತಾಳ್ಮೆಯ ವ್ಯಕ್ತಿಗಳೇ ಇರಲಿಲ್ಲ. ಅಕ್ಕನಂತೂ ಜಗತ್ತಿನ ಯಾವುದೇ ಕಥೆಯಾದರೂ ಮ್ಯಾಕ್ಸಿಮಮ್ ಮೂರು ವಾಕ್ಯಗಳಲ್ಲಿ ಹೇಳಿ ಮುಗಿಸುತ್ತಿದ್ದಳು!! ಒಂದೆರಡು ಉದಾಹರಣೆ ಕೊಡುತ್ತೇನೆ ನೋಡಿ:
ಎರಡು ಕನಸು: ಮೊದ್ಲಿಗೆ ರಾಜ್‌ಕುಮಾರ್-ಮಂಜುಳಾ ಮದುವೆ ಆಗ್ಬೇಕು ಅಂತಿರ್ತಾರೆ. ಆಮೇಲೆ ಬೇರೆ ಬೇರೆಯೋರ ಜೊತೆ ಮದುವೆ ಆಗಿ ದುಃಖ ಪಡ್ತಾರೆ. ಆಮೇಲೆ ರಾಜ್‌ಕುಮಾರ್ ತನ್ನ ಹೆಂಡತಿ ಕಲ್ಪನಾ ಜೊತೆ ಸುಖವಾಗಿ ಬದುಕ್ತಾರೆ!
ಪ್ರೇಮದ ಕಾಣಿಕೆ: ರಾಜ್‌ಕುಮಾರ್-ಜಯಮಾಲಾ ಗಂಡ ಹೆಂಡತಿ. ವಿಲನ್ ಒಬ್ಬ ಬಂದು ಜಯಮಾಲಾನ ರೇಪ್ ಮಾಡಿ ಸಾಯಿಸಿಬಿಡ್ತಾನೆ. ಆಮೇಲೆ ಇನ್ನೊಂದು ಹೀರೋಯಿನ್ ಆರತಿ ಜೊತೆ ರಾಜ್‌ಕುಮಾರ್ ಸುಖವಾಗಿರ್ತಾರೆ!
ನಾಗರಹಾವು: ವಿಷ್ಣುವರ್ಧನ್ ಆರತೀನ ಪ್ರೀತಿಸಿ ಮದ್ವೆ ಮಾಡ್ಕೊಳಕ್ಕಾಗಲ್ಲ. ಆಮೇಲೆ ಶುಭಾನ ಪ್ರೀತಿಸಿ ಮದ್ವೆ ಮಾಡ್ಕೋಬೇಕು ಅಂದ್ಕೊಳ್ತಾರೆ. ಕೊನೆಗೆ ಆಗದೇ ಇಬ್ರೂ ಸತ್ತೋಗ್ತಾರೆ …!
ಹೀಗೇ …………….

ಇಂತಿಪ್ಪ ಮನೆಯಲ್ಲಿ ಬೆಳೆದ ನನಗೆ ಈಗ ದೊಡ್ಡಮ್ಮ ದೊಡ್ಡ ಕಥೆ ಅನ್ನುವ ಪೀಠಿಕೆ ಹಾಕಿದ ಕೂಡಲೇ ಕೂತಲ್ಲೇ ಬೆವರಿದೆ. ಅಲ್ಲಾ, ಇರಲಿ ಬಿಡಿ ಸುಮ್ನೆ ಕೇಳ್ದೆ ಅಷ್ಟೇ – ಅಂತ ಕೂಡಲೇ anticipatory ಬೇಲ್‌ಗೆ ಅರ್ಜಿ ಸಲ್ಲಿಸಿದೆ. ನಾನೊಂದು ಮೊದ್ದು ಹೆಣ್ಣು … ನನಗೆ ಅರ್ಥವಾಗದ ಸೂಕ್ಷ್ಮವೊಂದಿತ್ತು ಇಲ್ಲಿ! ಈ ಕೇಸು ಯಾವ ಹಂತ ಮುಟ್ಟಿತ್ತೆಂದರೆ, ನಾನು ಬೇಲ್‌ಗೆ ಅಪ್ಪ್ಲೈ ಮಾಡುವ ಸ್ಥಿತಿ ದಾಟಿಹೋಗಿ, ಕೊನೆಯ ಹಂತವಾದ ಪ್ರೆಸಿಡೆಂಟ್ mercy petition ಕೂಡಾ ನಿರಾಕರಿಸಲ್ಪಟ್ಟು, ಶಿಕ್ಷೆಯೂ ಖಾಯಂ ಆಗಿಹೋಗಿದೆ ಅನ್ನುವುದು ನನಗೆ ತಿಳಿದಿರಲೇ ಇಲ್ಲ! ದೊಡ್ಡಮ್ಮ ನನ್ನ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ನೀನು ಕೇಳಿದ ಮೇಲೆ ಮುಗಿಯಿತು, ಇನ್ನು ನಾನು ಮುಗಿಸುವವರೆಗೆ ನಿನಗೆ ಬಿಡುಗಡೆಯಿಲ್ಲ ಅನ್ನುವ ರಣೋತ್ಸಾಹದ ದನಿಯಲ್ಲಿ ಕಥೆ ಶುರು ಮಾಡಿಯೇಬಿಟ್ಟರು. ಸ್ವಲ್ಪ ಹೊತ್ತಿನ ಮುಂಚೆ ದನಿಯಲ್ಲಿ ಖಾಯಿಲೆಯ ನೋವು, ದುಃಖ ಎಲ್ಲ ಮಾಯವಾಗಿ ಹೋಯ್ತು!
‘ಆ ಹುಡುಗಿಗೆ ಅಪ್ಪ-ಅಮ್ಮ ಇಬ್ರೂ ಇರಲ್ಲ. ಸತ್ತೋಗಿರ್ತಾರೆ. ತುಂಬ ಕಷ್ಟ ಪಟ್ಟಿರ್ತಾಳೆ. ಆಮೇಲೆ ಒಬ್ಬನ್ನ ಪ್ರೀತಿಸಿ ಮದುವೆ ಆಗ್ತಾಳೆ. ಗಂಡನ ಅಮ್ಮ ಇರ್ತಾರಲ್ಲ, ಅವ್ರಿಗೆ ಸೊಸೇನ ಕಂಡ್ರೆ ತುಂಬ ಪ್ರೀತಿ (ವಾಹ್! ಎಂಥ ಸುಂದರ ಬದಲಾವಣೆ!!) … ಆ ಗಂಡನಿಗೆ ಒಬ್ಬಳು ಸೋದರತ್ತೆ ಇರ್ತಾಳೆ. ಅವಳಿಗೆ ಈ ಸೊಸೇನ ಕಂಡ್ರೆ ಆಗ್ತಿರಲ್ಲ (ಥೊ! ಅದೇ ರಾಗ, ಅದೇ ಹಾಡು!! ಅಳಿಯ ಅಲ್ಲ .. ಮಗಳ ಗಂಡ ಅಷ್ಟೇ)… ಅವರಿಗೊಬ್ಬಳು ಮಗಳು. ಅವಳನ್ನ ಇವನಿಗೆ ಮದುವೆ ಮಾಡ್ಬೇಕು ಅಂತ ಪ್ಲ್ಯಾನ್ ಮಾಡಿರ್ತಾಳೆ. ಆದರೆ ಅವನು ಇವಳನ್ನ ಪ್ರೀತಿಸಿ ಬಿಡ್ತಾನಲ್ಲ ಅಂತ ಸಿಟ್ಟು. ಅದಕ್ಕೇ ಅವಳಿಗೆ ಹೇಗಾದ್ರೂ ಮಾಡಿ ಇವಳನ್ನ ಮನೆ ಬಿಟ್ಟು ಓಡಿಸಬೇಕು ಅಂತ ಹಠ ….’ ಅಷ್ಟು ಹೇಳುವಷ್ಟರಲ್ಲಿ ಜಾಹಿರಾತು ಮುಗಿದು ಮತ್ತೆ ಸೀರಿಯಲ್ ಶುರುವಾಯಿತು … ದೊಡ್ಡಮ್ಮ ಕೂಡ ಗಪ್ ಚುಪ್! ನಾನು ನೆಮ್ಮದಿಯ ನಿಟ್ಟುಸಿರೆಳೆದೆ. ಅಬ್ಬಬ್ಬಾ! ಸಧ್ಯ ಇಲ್ಲಿಗೇ ನಿಲ್ಲಿಸಿದರಲ್ಲ, ನನ್ನ ಪುಣ್ಯ ಅಂತ ಹೃದಯ ತುಂಬಿ ಬಂತು. ಮನಸ್ಸಿನಲ್ಲೇ ಶಪಥ ಮಾಡಿದೆ – ಇನ್ನು ಮುಂದೆ ಯಾರದೇ ಮನೆಗೆ ಹೋದಾಗ ಟಿವಿಯಲ್ಲಿ ಯಾವುದೇ ಹೆಣ್ಣು ಅಳ್ತಿರಲಿ, ಬಾಯಿ ಬಡಿದುಕೊಳ್ತಿರಲಿ … ಯಾಕೆ ಅಂತ ಮಾತ್ರ ಅಪ್ಪಿ ತಪ್ಪಿಯೂ ಕೇಳಬಾರದು ಎಂದು. ಬಿಡುಗಡೆಯ ಭಾವದಲ್ಲಿ ದೊಡ್ಡಮ್ಮನ ಹಳೆಯದಾದ ಮನೆಯ ಮಧ್ಯೆ ಪಿಂಗಾಣಿ ಚೂರುಗಳಿಂದ ದೊಡ್ಡಪ್ಪನ ತಂಗಿಯರೆಲ್ಲ ಸೇರಿ ಮಾಡಿದ್ದ ಡಿಸೈನ್ ನೋಡುತ್ತಾ ಕೂತೆ … ಹತ್ತಿರ ಹತ್ತಿರ ಒಂದು ಸೆಂಚುರಿಯಷ್ಟು ಹಳೆಯದ್ದಾದರೂ ತುಂಬ ಮುದ್ದು ಅನ್ನಿಸುವಂಥ ಆ ಡಿಸೈನ್ ನನಗೆ ಯಾವಾಗಲೂ ಪ್ರಿಯವೇ … ಎಷ್ಟು ಒಳ್ಳೆಯ ಟೇಸ್ಟ್ ಇದ್ದಿರಬೇಕು ಆ ಹೆಣ್ಣುಮಕ್ಕಳಿಗೆ … ಅಂತ ಮೆಚ್ಚುಗೆ ಸೂಸುತ್ತಾ ಇರುವಷ್ಟರಲ್ಲೇ ಮತ್ತೆ ಜಾಹಿರಾತು ಶುರುವಾಯಿತು.
ದೊಡ್ಡಮ್ಮ ಮತ್ತೆ ನನ್ನ ಕಡೆ ತಿರುಗಿದರು. ನಾನು ಇವತ್ತೇನು ತಿಂದ್ರಿ ಊಟಕ್ಕೆ ಅಂತ ಕೇಳಿದರೆ ದೊಡ್ಡಮ್ಮ ಟ್ರಾನ್ಸ್‌ನಲ್ಲಿರುವವರಂತೆ ಆ ಪ್ರಶ್ನೆಯನ್ನು ಅಲಕ್ಷಿಸಿ – ಎಲ್ಲಿಯವರೆಗೆ ಹೇಳಿದ್ದೆ? ಹೂಂ, ಆ ಅತ್ತೆ ಅದಕ್ಕೋಸ್ಕರ ಹೇಗಾದ್ರೂ ಮಾಡಿ ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡಬೇಕೂಂತ ಟ್ರೈ ಮಾಡ್ತಾನೇ ಇರ್ತಾಳೆ …’ ಸರಿಯಾಗಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಕಥೆಯನ್ನು ಕೈಗೆತ್ತಿಕೊಂಡರು! ಮುಗಿಯಿತಪ್ಪ ಸಧ್ಯ ಅಂತ ಸುಖವಾಗಿ ಕೂತಿದ್ದ ನನಗೆ ಈಗ ನಿಜಕ್ಕೂ ಎದೆ ಬಡಿದುಕೊಳ್ಳಲು ಶುರುವಾಯ್ತು. ದೊಡ್ಡಮ್ಮ ನನ್ನ ಸ್ಥಿತಿಯನ್ನು ಪೂರ್ತಿಯಾಗಿ ನಿರ್ಲಕ್ಷಿಸಿ, ಸೀರಿಯಲ್ ಕಿಲ್ಲರ್ ಥರ ನನ್ನೆಡೆಗೆ ಮತ್ತೆ ಗುರಿಯಿಟ್ಟರು! ‘ಬಸುರಿ ಆಗ್ತಾಳೆ. ಅಷ್ಟರಲ್ಲಿ ಅವಳ ಗಂಡ ಇವಳಿಗೆ ಮೋಸ ಮಾಡಿಬಿಡ್ತಾನೆ. ಈ ಅತ್ತೆ ಮಗಳನ್ನೂ ಬಿಟ್ಟು, ಕಟ್ಟಿಕೊಂಡ ಹೆಂಡತೀನೂ ಬಿಟ್ಟು ಮತ್ತೊಬ್ಬಳನ್ನ ಪ್ರೀತಿಸೋದಿಕ್ಕೆ ಶುರು ಮಾಡಿಬಿಡ್ತಾನೆ. ‘ಸರಿ ಬಿಡಿ ದೊಡ್ಡಮ್ಮ … ಆ ಹೆಣ್ಣು ತುಂಬ ಕೆಟ್ಟೋಳಿರ್ತಾಳೆ. ಈ ಮೊದಲನೇ ಹೆಂಡತಿಯನ್ನ ಗೋಳಾಡಿಸಕ್ಕೆ ಶುರು ಮಾಡ್ತಾಳೆ …’ ಅಂತ ನಾನು ನಗುತ್ತಾ ಕಥೆ ಮುಂದುವರೆಸಿದೆ, ಹೇಗೋ ಮಾಡಿ ಈ ಕಥೆಗೊಂದು ಅಂತ್ಯ ಹಾಡಿಬಿಟ್ಟರೆ ನಾನು ಬಚಾವಾಗಬಹುದು ಅನ್ನುವ ದೂರದೃಷ್ಟಿಯಿಂದ. ಆದರೆ ವಿಧಿಗೆ ನನ್ನ ಮೇಲೆ ಕರುಣೆಯೇ ಇರಲಿಲ್ಲ!! ದೊಡ್ಡಮ್ಮ ನನ್ನ ಮಾತನ್ನು ತುಂಡರಿಸುತ್ತಾ – ಉಹೂಂ, ಇಲ್ಲ ಕಣೇ. ಆ ಹೊಸ ಹುಡುಗಿ ಪಾಪ ತುಂಬ ಒಳ್ಳೆಯವಳು. ಅವಳಿಗೆ ಇವನು ಮೊದಲು ಮದುವೆ ಆಗಿದಾನೆ ಗೊತ್ತಿರಲ್ಲ. ಹಾಗಾಗಿ ಪಾಪ ಪ್ರೀತಿಸಕ್ಕೆ ಶುರು ಮಾಡಿರ್ತಾಳೆ. ಅವಳಿಗೆ …. ಅನ್ನುವಷ್ಟರಲ್ಲಿ ಮತ್ತೆ ಸೀರಿಯಲ್ …
ಚಡಪಡಿಸುತ್ತಾ ಕೂತಿದ್ದ ನಾನು ಬಿಡುಗಡೆಯ ನಿರಾಳದಲ್ಲಿ ಕೂತಲ್ಲಿಂದ ಎದ್ದೆ. ಇನ್ನು ಇಲ್ಲೇ ಕೂತಿದ್ದರೆ ದೊಡ್ಡಮ್ಮ ಮತ್ತೆ ಕಥೆ ಶುರು ಮಾಡುತ್ತಾರೆ ಅಂತ ಬೆವೆತುಬಿಟ್ಟೆ. ಮಧ್ಯದ ಬ್ರೇಕ್‌ನಲ್ಲೇ ಇಷ್ಟು ಕಥೆ ಹೇಳುತ್ತಿದ್ದ ದೊಡ್ಡಮ್ಮ, ಇನ್ನು ಸೀರಿಯಲ್ ಮುಗಿದ ನಂತರ ಬ್ರೇಕೇ ಇಲ್ಲದೆ ಕಥೆ ಮುಂದುವರಿಸುತ್ತಾರೆ ಅನ್ನುವುದು ಹೊಳೆದ ಕೂಡಲೇ ಸುಸ್ತಾಗಲು ಶುರುವಾಯಿತು. ಅಲ್ಲಿ ಕೂತಿದ್ದರೆ ತಾನೇ ಕಥೆ ಮುಂದುವರೆಸೋದು ಅಂತ ಲೆಕ್ಕ ಹಾಕಿ ಜಾಗ ಖಾಲಿ ಮಾಡಿ ಹಿತ್ತಲಿಗೆ ಹೋದೆ. ನಾನು ಚಿಕ್ಕವಳಿರುವಾಗ ದೊಡ್ಡಪ್ಪ ಮನೆಯ ಹಿಂದಿದ್ದ ಹಲಸಿನ ಮರದಿಂದ ಫ಼್ರೆಷ್ ಆಗಿ ಹಣ್ಣು ಕಿತ್ತು ಬಿಡಿಸುತ್ತಿದ್ದುದು ನೆನಪಾಯ್ತು. ನಾವೆಲ್ಲ ಅವರ ಸುತ್ತ ಕೂರುತ್ತಿದ್ದೆವು. ದೊಡ್ಡಪ್ಪ ಒಂದೇ ಒಂದು ತೊಳೆಯೂ ಮುಕ್ಕಾಗದ ಹಾಗೆ ತೊಳೆ ಬಿಡಿಸುತ್ತಿದ್ದುದು ನಮಗೆ ವಿಸ್ಮಯದ ವಿಷಯವಾಗಿತ್ತು. ಅವರು ಬಿಡಿಸಿ ಹಾಕುತ್ತಿದ್ದ ಹಾಗೆಯೇ ಖಾಲಿಯಾಗುತ್ತಿತ್ತು ಹಣ್ಣಿಟ್ಟಿರುತ್ತಿದ್ದ ಬುಟ್ಟಿ. ಒಬ್ಬೊಬ್ಬರೂ ಅದೆಷ್ಟೊಂದು ತೊಳೆ ತಿಂದರೂ ಎಂದೂ ನಮಗೆ ಸಾಕಪ್ಪಾ, ಇನ್ನು ತೃಪ್ತಿಯಾಯಿತು ಅನ್ನಿಸುತ್ತಲೇ ಇರಲಿಲ್ಲ. 20-25 ತೊಳೆ ನುಂಗಿ ಮಟಾಷ್ ಮಾಡಿದ ನಂತರವೂ ಏನೂ ತಿಂದೇ ಇಲ್ಲ ಅನ್ನುವ ಹಪಹಪಿ. ಮನೆ ಪಾಲಾದಾಗ ದೊಡ್ಡಪ್ಪನ ತಮ್ಮನ ಭಾಗಕ್ಕೆ ಆ ಹಲಸಿನ ಮರವಿದ್ದ ಜಾಗವೂ ಸೇರಿಹೋಗಿ, ಅವರು ಅದನ್ನು ಕಡಿದು ಹಾಕಿ, ಕಟ್ಟಿಕೊಂಡಿದ್ದ ಮನೆಯನ್ನೇ ದೃಷ್ಟಿಸಿದೆ. ಮನೆಯ ಹಿಂದೆ ಅಮಟೆಕಾಯಿ ಮರವಿತ್ತಲ್ಲ, ಅದೇನಾಯಿತು ಅಂತ ಆ ಕಡೆ ಹೆಜ್ಜೆ ಹಾಕಿದೆ. ಆ ಮರದ ಅಮಟೆಕಾಯಿಯಲ್ಲಿ ದೊಡ್ಡಮ್ಮ ಎಂಥ ಘಮ್ಮೆನ್ನುವ ಉಪ್ಪಿನಕಾಯಿ ಮಾಡುತ್ತಿದ್ದರು. ಜಾಡಿಯ ತುಂಬ ಇರುತ್ತಿದ್ದ ಉಪ್ಪಿನಕಾಯನ್ನು ಅವರೆಕಾಳು ಉಪ್ಪಿಟ್ಟಿನ ಜೊತೆ ಸೇರಿಸಿ ತಿಂದರೆ ಸ್ವರ್ಗ! ಮನೆಯ ಹಿಂದೆ ಬಗ್ಗಿ ನೋಡಿದರೆ ಆ ಮರವೂ ಇರಲಿಲ್ಲ. ನೆನಪುಗಳ ಕೊಂಡಿ ಎಲ್ಲೂ ಕೂಡಿಕೊಳ್ಳದೇ ಅಲ್ಲಲ್ಲೇ ಕಳಚುತ್ತಿತ್ತು. ನಿರಾಸೆಯಿಂದ ಮನೆಯ ಮುಂದೆ ಹೆಜ್ಜೆ ಹಾಕುವಷ್ಟರಲ್ಲಿ ದೊಡ್ಡಮ್ಮ ಕೂಗಿದ ಸದ್ದು ಕೇಳಿತು. ಓ! ಸೀರಿಯಲ್ ಮುಗಿದಿದೆ. ಇನ್ನಾದರೂ ದೊಡ್ಡಮ್ಮನ ಜೊತೆ ಒಂದಿಷ್ಟು ಮಾತಾಡಬೇಕು … ಅಂದುಕೊಳ್ಳುತ್ತಾ ಮನೆಯೊಳಕ್ಕೆ ಹೆಜ್ಜೆ ಹಾಕಿದೆ.
ಟಿವಿ ಆಫ್ ಆಗಿತ್ತು. ನಾನು ಸಣ್ಣ ನಿಟ್ಟುಸಿರು ಬಿಟ್ಟು – ದೊಡ್ಡಮ್ಮ ಒಂದೇ ಒಂದು ಮರಾನೂ ಇಲ್ಲ ಅಲ್ವಾ? ಅದೆಲ್ಲ ನೋಡಣ ಅಂತ ಹೋದರೆ ಎಲ್ಲ ಖಾಲಿ ಖಾಲಿ ಎಂದೆ. ದೊಡ್ಡಮ್ಮ – ಹೌದು ಅವೆಲ್ಲ ಹೋಗಿ ತುಂಬ ವರ್ಷ ಆಗೋಯ್ತು ಅಂದವರೇ ‘ಕಥೆ ಅರ್ಧ ಹೇಳಿದ್ದೆ ಅಷ್ಟೇ ಅಲ್ವಾ? ಅಂತ ಮಾತಿಗೆಳೆದರು. ನನ್ನ ಎದೆ ಧಸಕ್ ಅಂದಿತು. ಮತ್ತೆ ಸೀರಿಯಲ್ ಕಥೆ! ನನಗೆ ಆಸಕ್ತಿಯಿಲ್ಲ ಅಂದುಬಿಡಲೇ ಅಂದುಕೊಳ್ಳುವಷ್ಟರಲ್ಲಿ ದೊಡ್ಡಮ್ಮ ಶುರು ಮಾಡಿಯೇ ಬಿಟ್ಟರು!! ‘ಆ ಹೆಣ್ಣಿಗೆ ಗೊತ್ತಿರಲ್ಲ ಅಂತ ಹೇಳಿದೆ ಅಲ್ವಾ? ಇವನು ಒಂದಿನ ಅವಳನ್ನ ಮನೆಗೆ ಕರ್ಕೊಂಡು ಬರ್ತಾನೆ. ಹೆಂಡತಿ ಎದುರಿಗೆ ಸಿಕ್ಕರೆ ಅವಳನ್ನ ನಮ್ಮನೇ ಅಡಿಗೆಯವಳು ಅಂತ ಪರಿಚಯ ಮಾಡಿಸಿಬಿಡ್ತಾನೆ. ಆ ಹೊಸ ಹೆಣ್ಣು ಇವಳು ಅಡಿಗೆಯಾಕೆ ಅಂದ್ಕೊಂಡು ಕೂತಕಡೆಯೇ ಒಂದಿಷ್ಟು ನೀರು ಬೇಕು … ಕಾಫಿ … ಊಟ ಅಂತ ಆರ್ಡರ್ ಮಾಡಕ್ಕೆ ಶುರು ಮಾಡಿಬಿಡ್ತಾಳೆ. ಆ ಬಸುರಿ ಹೆಣ್ಣು ಪಾಪ ಅಳ್ತಾ ಅಳ್ತಾ ಎಲ್ಲ ಕೆಲಸ ಮಾಡ್ತಾಳೆ. ಗಂಡನಾದವನಿಗೆ ಒಂಚೂರಾದ್ರೂ ಕರುಣೆ ಬೇಡ್ವಾ … ಸುಮ್ನೇನೇ ಇರ್ತಾನೆ ….’.
ನನ್ನ ತಲೆ ಸಿಡಿಯಲು ಶುರುವಾಯ್ತು. ಜಗತ್ತಿನ ಎಲ್ಲ ಕಷ್ಟಗಳನ್ನೂ ಈ ಹೆಣ್ಣಿಗೇನೇ ಕೊಟ್ಟುಬುಟ್ಯಲ್ಲಾ ಶಂಕ್ರಾ ಅಂತ ಮಮ್ಮಲ ಮರುಗಿದೆ. ನೋಡಿ, ಆ ಹೆಣ್ಣಿಗೆ ಇಷ್ಟು ಕಷ್ಟ ಬಂದಿದ್ದಕ್ಕೆ ತಾನೇ ನನಗೆ ಅದನ್ನು ಕೇಳುವ ಕಷ್ಟ ಎದುರಾಗಿದ್ದು! ದೇವರೇ, ಇದೇನಪ್ಪಾ ಈ ಸ್ಥಿತಿ ತರಿಸಿಬಿಟ್ಟೆ ನನಗೆ ಅಂತ ಮನಸ್ಸಿನೊಳಗೇ ವಿಲವಿಲ ಒದ್ದಾಡಿಕೊಂಡೆ. ಈ ಶೋಕಸಾಗರವನ್ನು ಈಜಿ ಪಾರಾಗುವ ಬಗೆ ಹೇಗೆ ಅಂದುಕೊಳ್ಳುವಷ್ಟರಲ್ಲಿ ಎದುರಿಗೆ ಟಾಯ್ಲೆಟ್ ಕಂಡಿತು. ಹುರ್ರೇಏಏಏಏಏ ಅನ್ನುತ್ತಾ – ದೊಡ್ಡಮ್ಮ, ಈಗ ಬಂದೆ ಅಂದವಳೇ ಟಾಯ್ಲೆಟ್ ಸೇರಿದೆ. ಅಬ್ಬ! ಅಲ್ಲಿ ಕೂತ ಕೂಡಲೇ ಒಂದಿಷ್ಟು ನಿರಾಳವೆನ್ನಿಸಿತು. ಆ ಏಕಾಂತ ನೆಮ್ಮದಿ ಅನ್ನಿಸಿತು. ಆ ಹುಡುಗಿ, ಎರಡನೆಯ ಹೆಂಡತಿ, ಅತ್ತೆ, ಸೋದರತ್ತೆ, ಅತ್ತೆಯ ಮಗಳು …. ಅಬ್ಬಬ್ಬಾ ಇದೇನು ಕರ್ಮಕಾಂಡ! ಇಂಥ ಕಥೆ ಕೇಳುತ್ತಾ ಕೂತುಕೊಳ್ಳುವುದು ನನ್ನ ಹಣೆಯಲ್ಲಿ ಯಾಕೆ ಬರೆದಿತ್ತು ಅಂತ ಶಪಿಸುತ್ತಾ ಕೂತೆ. ಅಗತ್ಯಕ್ಕಿಂತ ಒಂದಿಷ್ಟು ಜಾಸ್ತಿ ಹೊತ್ತೇ ಕೂತು, ಕೊನೆಗೆ ವಿಧಿಯಿಲ್ಲದೇ ಹೊರಗೆ ಬರಲೇಬೇಕಾದಾಗ ಕಾಲೆಳೆದುಕೊಂಡು ಬಂದೆ. ಈ ಸಲ ದೊಡ್ಡಮ್ಮ ಆ ಕಥೆ ಮರೆತುಬಿಟ್ಟು, ನನ್ನೊಡನೆ ಮತ್ತೇನಾದರೂ ಮಾತಾಡಬಹುದು ಅನ್ನುವ ಹೋಪ್ ಖಂಡಿತಾ ಇರಲಿಲ್ಲ … ಮತ್ತು ದೊಡ್ಡಮ್ಮ ನನ್ನ ಅನಿಸಿಕೆಯನ್ನು ಸುಳ್ಳು ಮಾಡಲೂ ಇಲ್ಲ!! ನಾನು ಕಂಡ ಕೂಡಲೇ ಮತ್ತೆ ಆ ಬಸುರಿ ಹೆಂಗಸು ಪಟ್ಟ ಪಾಡಿನಿಂದ ಶುರು ಮಾಡಿ, ಗಂಡ ಅವಳನ್ನು ಮನೆಯಿಂದ ಹೊರಹಾಕುತ್ತಾನೆ, ಆ ಬಸುರಿ ಹೆಂಗಸು ಕಣ್ಣು ಕತ್ತಲಿಟ್ಟು ನದಿಯ ಹತ್ತಿರ ಬಂದು ಬಿದ್ದು ಹೋಗುತ್ತಾಳೆ. ಆಗ ಅಲ್ಲಿಗೆ ಬಂದ ಯಾರೋ ಒಬ್ಬರು ತಾತ ಅವಳನ್ನು ಮನೆಗೆ ಕರೆದುಕೊಂಡು ಹೋಗ್ತಾರೆ. ಅವರು ಒಂಟಿ ಜೀವ. ಇವಳು ಅವರ ಮಗಳ ಹಾಗೆ ಅವರ ಜೊತೆ ಇರ್ತಾಳೆ. ಅವರ ಮನೆಗೊಬ್ಬ ಹುಡುಗ ಬರ್ತಿರ್ತಾನೆ. ಅವನಿಗೆ ಇವಳ ಮೇಲೆ ಮನಸ್ಸಾಗತ್ತೆ …..
ಈ ಕಥೆ ಎಂದಾದರೂ ಮುಗಿಯುತ್ತದಾ ಅನ್ನಿಸಲು ಶುರುವಾಯ್ತು ನನಗೆ. ದೊಡ್ಡಮ್ಮ – ಎಷ್ಟು ತಿಂಗಳಿಂದ ಬರ್ತಿದೆ ಇದು ಅಂದೆ. ಇದು ಶುರುವಾಗಿ ಎರಡು ವರ್ಷದ ಮೇಲಾಯ್ತು ಕಣೇ ಅಂದರು ದೊಡ್ಡಮ್ಮ … ಎರಡು ವರ್ಷ! ನಾನು ಹೌಹಾರಿದೆ. ಈಗ ನೀವು ಹೇಳ್ತಿರೋದೆಲ್ಲ ಕೇಳಿದ್ರೆ ಕೊನೆ ಬಂದಿರ್ಬೇಕು ಅನ್ನಿಸ್ತಿದೆ .. ಹೌದಾ? ಅಂದೆ ಆಶಾವಾದದಲ್ಲಿ. ಅಯ್ಯೋ ಎಲ್ಲಿಂದ ಬರ್ಬೇಕು ಕೊನೆ? ಇದು ಸುಮಾರು ಹೋದ ವರ್ಷದ ಕಥೆ. ಅದಾದ ಮೇಲೆ ಇನ್ನೂ ತುಂಬ ಇದೆ ಅಂದರು ….
ಇಲ್ಲಿಂದ ಮುಂದೆ ಹೆಚ್ಚು ಹೇಳಲೇನಿದೆ ಅಪ್ಪಗಳಿರಾ, ಅಮ್ಮಗಳಿರಾ …
ಕಾಫಿ ಬಿಸಿ ಮಾಡಿ ತಂದೆ … ಕಥೆ ಮುಂದುವರೆಯಿತು ….
ನೀರು ಕುಡಿದು ಬಂದೆ … ಕಥೆ ಮುಂದುವರೆಯಿತು ….
ಒಣ ಹಾಕಿದ್ದ ಬಟ್ಟೆ ಎಳೆದು ತಂದೆ … ಕಥೆ ಮುಂದುವರೆಯಿತು ….
ಸಣ್ಣ ಪುಟ್ಟ ಕ್ಲೀನಿಂಗ್ ಮಾಡಿದೆ … ಕಥೆ ಮುಂದುವರೆಯಿತು …. ಮುಂದುವರೆಯಿತು …. ಮುಂದುವರೆಯುತ್ತಲೇ ಇತ್ತು ……
ರಾತ್ರಿ ಏಳರ ಹೊತ್ತಿಗೆ – ಹೊತ್ತಾಯಿತು ದೊಡ್ಡಮ್ಮ, ನಾನಿನ್ನು ಹೊರಡುತ್ತೇನೆ ಅಂದೆ … ಆಗ ಆ ಸೀರಿಯಲ್ಲಿನ 473ನೇ ಎಪಿಸೋಡಿನ ಕಥೆ ನಡೆಯುತ್ತಿತ್ತು ಮತ್ತು ಅವಳು ಇವತ್ತಿನ ಎಪಿಸೋಡಿನಲ್ಲಿ ಯಾಕೆ ಅಷ್ಟು ಅತ್ತಳು ಅಂತ ಅರ್ಥವಾಗಲು ಇನ್ನೂ 226 ಎಪಿಸೋಡುಗಳ ಕಥೆ ಬಾಕಿ ಉಳಿದಿತ್ತು …!
ಉಪಸಂಹಾರ: ನೂರಾರು ರೌಡಿಗಳಿಂದ ಹಿಗ್ಗಾಮುಗ್ಗಾ ಹೊಡೆಸಿಕೊಂಡ ಥರ ನಾನು ನಜ್ಜುಗುಜ್ಜಾಗಿ ಹೋಗಿದ್ದೆ ಮುಂದಿನ ಎರಡೂವರೆ ಘಂಟೆಗಳಲ್ಲಿ. ಆ ಸೀರಿಯಲ್ ನಾಯಕಿಯೇ ಎದುರಾದರೂ ಕಣ್ಣುಗುಡ್ಡೆ ಆಚೆ ಬರುವಂತಾಗಿದ್ದ ನನ್ನನ್ನು ಕಂಡು ಕನಿಕರ ತೋರಿರುತ್ತಿದ್ದಳೇನೋ! ಬಂದಾಗಿನಿಂದ ಹೋಗುವವರೆಗೆ ನಮ್ಮ ವಿಷಯಗಳನ್ನು ಒಂದಿಷ್ಟೂ ಮಾತಾಡಲಿಲ್ಲವಲ್ಲ ಈ ದೊಡ್ಡಮ್ಮ! ಅಷ್ಟೆಲ್ಲಾ ಪ್ರೀತಿಯಿಟ್ಟು ಅವರಲ್ಲಿಗೆ ಬಂದ ನನ್ನನ್ನು ಬಿಟ್ಟು, ಬರೀ ಆ ಕಥೆಯಲ್ಲಿಯೇ ಮುಳುಗುವಂಥ ತನ್ಮಯತೆ ಅದೆಲ್ಲಿಂದ ಬರುತ್ತದೆ ಅಂತ ಅಸಹನೆಯಲ್ಲಿ ಪ್ರಶ್ನಿಸಿಕೊಂಡೆ. ಮನಸ್ಸು ಉತ್ತರಿಸಿತು – ನೋಡು ಭಾರತಿ, ನೀನು ಅಷ್ಟೆಲ್ಲಾ ಪ್ರೀತಿಪಾತ್ರರಾದ ದೊಡ್ಡಮ್ಮನ್ನ ಇಲ್ಲಿಗೆ ಬೇರೆ ಯಾವುದೋ ಕಾರಣಕ್ಕೆ ಬಂದಾಗ ಭೇಟಿ ಆಗಕ್ಕೆ ಬರುತ್ತೀ. ನೀನು ಯಾವತ್ತು ಬರುತ್ತೀಯ ಅಂತ ಅವರಿಗೆ ಗೊತ್ತಿರುತ್ತಾ? ಇಲ್ಲ! ಅಪ್ಪಿ ತಪ್ಪಿ ಇವತ್ತು ನೀನು ಬಂದ ಕೆಲಸ ಬೇಗ ಮುಗಿಯದೇ ಹೋಗಿದ್ದಲ್ಲಿ ದೊಡ್ಡಮ್ಮನ ಮನೆಯ ಕಡೆ ಬರುತ್ತಿದ್ದೆಯಾ? ಇಲ್ಲ! ಅಂದರೆ ಅಷ್ಟೆಲ್ಲ ಪ್ರೀತಿಯಿದೆ ಅಂತ ನೀನು ಹೇಳಿದರೂ, ನಿನಗೆ ಅವರನ್ನು ಭೇಟಿಯಾಗುವುದು ಒಂದು option ಅಷ್ಟೇ. ಅದೇ ನೋಡು ಆ ಸೀರಿಯಲ್ಲಿನ ನಾಯಕಿ ದಿನವೂ ಅದೇ ಸಮಯಕ್ಕೆ ಬರ್ತಾಳೆ, ತನ್ನ ಕಥೆ ಹೇಳಿಕೊಳ್ತಾಳೆ, ನಗ್ತಾಳೆ, ಅಳ್ತಾಳೆ. ಅವಳ ಮದುವೆಗೆ ಕರೀತಾಳೆ, ಸೀಮಂತಕ್ಕೆ ಕರೀತಾಳೆ, ಮಗುವನ್ನು ಅವರ ಕಣ್ಣೆದುರಿಗೇ ಬೆಳೆಸ್ತಾಳೆ, ಲವ್ ಮಾಡ್ತಾಳೆ, ಸಂಸಾರದ ಗುಟ್ಟೆಲ್ಲ ಹೇಳಿಕೊಳ್ತಾಳೆ … ಯಾವತ್ತೋ ಬರುವ ನಿನಗಿಂತ ದಿನವೂ ಬರುವ ಅವಳು, ಅವರ ಬದುಕಿನ ಭಾಗವಾಗಿ ಹೋಗಿದ್ದರಲ್ಲಿ ಆಶ್ಚರ್ಯ ಏನಿದೆ? ….
ಈ ಜ್ಞಾನೋದಯವಾದೊಡನೆ ಆ ಸೀರಿಯಲ್ಲು ಇನ್ನೂ ತುಂಬ ಕಾಲ ಚೆನ್ನಾದ TRPಯೊಡನೆ ಓಡಲಿ ಅಂತ ಹಾರೈಸಿದೆ …
 

‍ಲೇಖಕರು G

February 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. Jayashree Ingale

    Bharati mam..olle TRPyinda odisikollutte Doddammana serial sante kathe…ha ha ha ..yeshtu chandaagi niroopisiddeeriyappa…like it..

    ಪ್ರತಿಕ್ರಿಯೆ
  2. saoja udupa

    bharathiyavere thumba nagu bantu. nammamma nimma doddamma tharane. chennagide.

    ಪ್ರತಿಕ್ರಿಯೆ
  3. Radhika

    ashTondu daakshinya yaake! sumne doDDamma namm-nimma kashTa sukha maataaDONa biDi serial bEDa andre aagtittappa 🙂

    ಪ್ರತಿಕ್ರಿಯೆ
  4. kusumabaale

    ಸೀರಿಯಲ್ ಬರ್ದು ಏನುದ್ದಾರ ಮಾಡ್ತೀಯ? ಅಂತ ಅನಿಸಿಕೊಂಡು ಸಾಕಾಗಿಹೋಗಿತ್ತು.ಇನ್ನು ಒಂದು ಕಾರಣವೂ,ಅದನ್ನು ಪುಷ್ಠೀಕರಿಸೋ ಲೇಖನವೂ ಸಿಕ್ಕಂತಾಯ್ತು.:-)

    ಪ್ರತಿಕ್ರಿಯೆ
  5. ಅಮರದೀಪ್.ಪಿ.ಎಸ್.

    ಅಜ್ಜಿಗೆ ಚಿಕ್ಕ ಪರದೆಯ ಪಾತ್ರಗಳೇ ಸಂಗಾತಿಗಳಾಗಿರುವಾಗ ಅಪರೂಪಕ್ಕೆ ಸಿಕ್ಕ ನಿಮಗೆ ಚೊಕ್ಕವಾಗಿ ಅವರನ್ನು ಪರಿಚಯಿಸದಿದ್ದರೆ ಹೇಗೆ?

    ಪ್ರತಿಕ್ರಿಯೆ
  6. Gopaala Wajapeyi

    ನಮ್ಮಮ್ಮನ ಸೀರಿಯಲ್ ಪ್ರೀತಿಯೂ, ನನ್ನ ಸೀರಿಯಸ್ ಪರಿಸ್ಥಿತಿಯೂ ಇದೇ… 🙁

    ಪ್ರತಿಕ್ರಿಯೆ
  7. Anonymous

    ಅಯ್ಯೋ ನಗ್ತಾನೆ ಇದ್ದೀನಲ್ಲೆ ಅಕ್ಕಾ ….ಏನ್ ಚೆನಾಗಿ ಬರೀತೀ !!!!
    ಪಿಚ್ಚರ್ ಕಥೆ ಹೇಳೋದು ಕೇಳೋದು ಎಷ್ಟು ಬೋರ್ ನಂಗೂ ಸಹ 🙂 ನಾ ಏನಾದರೂ ಹೇಳೋಕೆ ಹೊರಟರೆ ಅದೂ ಶಾರ್ಟ್ ಸ್ಟೋರಿ ಅಷ್ಟೇ.

    ಪ್ರತಿಕ್ರಿಯೆ
  8. Anil Talikoti

    ವಾಹ, ಲೈಕಿಗೆ ಏನೇನು ಸಮಾನಾರ್ಥಕ ಪದಗಳಿವೆಯೊ ಅವನ್ನೆಲ್ಲ ಬಳಸಿದಮೇಲೂ ಇನ್ನೂ ಲೈಕಾಗುವದು ಕಮ್ಮಿಯಾಗಿಲ್ಲ. ಸುಂದರ, ಅತೀ ಸುಂದರ -ಸುಂದರಾತಿ ಸುಂದರ!
    ~ಅನಿಲ

    ಪ್ರತಿಕ್ರಿಯೆ
  9. armanikanth

    ಉದಯ ಟಿ ವಿ ಯಲ್ಲಿ ಮಾಂಗಲ್ಯ ಅಂತ ಒಂದು ಸೀರಿಯಲ್ ಬರ್ತಾ ಇತ್ತು ನೆನಪಿದೆಯಾ?
    ಅದು ೭-೮ ವರ್ಷ ಬಂತು!!!! ಆ ಸೀರಿಯಲ್ ನ ನಮ್ಮ ಮನೆಯಲ್ಲಿ ಅಮ್ಮ, ಸುತ್ತ ಮುತ್ತಲ ೭-೮ ಮನೆಯಲ್ಲಿದ್ದ ಬಂಧುಗಳು ನೋಡಲಿಕ್ಕೆ ಕೂತಿರ್ತಾ ಇದ್ರು. ನಾನು ಏನಾದರೂ ಹೇಳೋಕೆ ಹೋದರೆ – ನಾಳೆ ಬೆಳಗ್ಗೆ ಮಾತಾಡುವಾ ಬಿಡು ಮಗಾ ಅಂತ ಕೂಡ ಹೇಳ್ತಿದ್ರು!!!

    ಪ್ರತಿಕ್ರಿಯೆ
  10. umavallish

    HI BHARATHI TUMBA CHENNAGIDE KANNADADA SUNDARAPADAGALANNELLA CHENNAGI BALASIDDIYA OLLEYA SHYLI nenapu madico nanu yaru antha ninna nirupane ge nanna namasthe

    ಪ್ರತಿಕ್ರಿಯೆ
  11. bharathi b v

    ಮಣಿಕಾಂತ್ ಸರ್ .. ಹ ಹ ಹ
    ಎಲ್ಲರ್ಗೂ ಥ್ಯಾಂಕ್ಸ್

    ಪ್ರತಿಕ್ರಿಯೆ
  12. Vaanee Suresh.

    ಭಾರತೀ ತುಂಬಾ ತುಂಬಾ ಚೆನ್ನಾಗಿ ಬರ್ದಿದ್ದೀರಿ! ಅಲ್ಲಿ ಮಧ್ಯದಲ್ಲಿದ್ದ ದುಂಡನೆಯ ಬಣ್ಣ ಬಣ್ಣದ ಪಿಂಗಾಣಿ ಚೂರುಗಳ ಚಿತ್ತಾರಕ್ಕೆ ಅದೇ ಥರದ ಚೂರುಗಳಿಂದಲೇ ಮುದ್ದಾಗಿ ಅಂಚು ಕಟ್ಟಿದ್ದ “ಹಾಲಿ”ನ ಆ ಆ ಕೆಂಪು ನೆಲದಿಂದ ಹಿಡಿದು – ಹಲಸಿನ ಹಣ್ಣಿನ ಆ ಮತ್ತು ಹಿಡಿಸ್ತಿದ್ದಿದ್ದ ರುಚಿ, ತಿಂದಷ್ಟೂ ಸಾಕಾಗ್ತಿರಲಿಲ್ಲದ ಆ ಅಮಟೆಕಾಯಿ ಉಪ್ಪಿನಕಾಯಿಯ ಗೀಳಿನವರೆಗೂ, ಎಲ್ಲಾವುದಕ್ಕಿಂತಾ ಹೆಚ್ಚಾಗಿ ಎಂದಿಗೂ ಧ್ವನಿಯೇರಿಸಿಯೇ ಗೊತ್ತಿಲ್ಲದಿದ್ದ ಆ ತಾಳ್ಮೆಯ ಪ್ರತಿರೂಪದ ವಾತ್ಸಲ್ಯಮಯಿ ಜೀವದ ಬಗ್ಗೆ ನಿಮ್ಮ ವಿವರ – ಎಲ್ಲಾ ಅದ್ಭುತ!!… ಅಬಬ್ಬಾ ಎಲ್ಲಾ ಕಣ್ಣಿಗೆ ಕಟ್ಟಿದ ಹಾಗಾಯ್ತು, ದಶಕಗಳ ದಶಕಗಳ ಹಿಂದೆ ಮನಸ್ಸು ಧಾವಿಸಿದೆ! Hats off to you dear! ನನ್ನ ಬಾಲ್ಯದ ಅತಿ ಹಿತವಾದ ನೆನಪುಗಳನ್ನು ಮತ್ತೆ ಎತ್ತಿ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್!

    ಪ್ರತಿಕ್ರಿಯೆ
  13. Ahalya Ballal

    ಕಣ್ಮುಂದೆ ನಡೆದಂತಿದೆ! ೩೬೫ನೆಯ ಸಲ ಹೇಳ್ತಾ ಇದ್ದೀನಿ, ಈ ತರಹ visual sense ಮತ್ತು whacky sense of humour ಇರೋ ಬರಹಗಾರರು ಟಿವಿ ಲೋಕದಲ್ಲಿ ತೊಡಗಿಕೊಂಡ್ರೆ ನನ್ನಂತಹ ಜನರೂ ನಿಮ್ಮ್ ದೊಡ್ದಮ್ಮನ ಸಾಲಿಗೇ ಸೇರೋದು ಗ್ಯಾರಂಟಿ ಅನ್ಸುತ್ತೆ!

    ಪ್ರತಿಕ್ರಿಯೆ
  14. n.viswanatha

    Gathakaalada nenapugalu endendigoo chenna.Narration sooper.Doddammana photo ondu labhyaviddiddare!
    N.Viswanatha

    ಪ್ರತಿಕ್ರಿಯೆ
  15. S. Manjunath

    I enjoyed reading the whole story. The ending is superb Bharathi. ” ಅದೇ ನೋಡು ಆ ಸೀರಿಯಲ್ಲಿನ ನಾಯಕಿ ದಿನವೂ ಅದೇ ಸಮಯಕ್ಕೆ ಬರ್ತಾಳೆ, ತನ್ನ ಕಥೆ ಹೇಳಿಕೊಳ್ತಾಳೆ, ನಗ್ತಾಳೆ, ಅಳ್ತಾಳೆ. ಅವಳ ಮದುವೆಗೆ ಕರೀತಾಳೆ, ಸೀಮಂತಕ್ಕೆ ಕರೀತಾಳೆ, ಮಗುವನ್ನು ಅವರ ಕಣ್ಣೆದುರಿಗೇ ಬೆಳೆಸ್ತಾಳೆ, ಲವ್ ಮಾಡ್ತಾಳೆ, ಸಂಸಾರದ ಗುಟ್ಟೆಲ್ಲ ಹೇಳಿಕೊಳ್ತಾಳೆ … ಯಾವತ್ತೋ ಬರುವ ನಿನಗಿಂತ ದಿನವೂ ಬರುವ ಅವಳು, ಅವರ ಬದುಕಿನ ಭಾಗವಾಗಿ ಹೋಗಿದ್ದರಲ್ಲಿ ಆಶ್ಚರ್ಯ ಏನಿದೆ? ” ವೃದ್ಧಾಪ್ಯದಲ್ಲಿನ ಏಕಾಂತ ಬದುಕಿನ ತಲ್ಲಣಗಳು ಬಹಳ ಪ್ರಭಾವಯುತವಾಗಿದೆ.
    “ಜನರೇಶನ್ ಗ್ಯಾಪ್” ಎರಡೂ ಪಕ್ಷದವರನ್ನು ತನ್ನದೇ ಚೌಕಟ್ಟಿನಲ್ಲಿಟ್ಟು ಕಾಡುವುದನ್ನು ಬಹಳ ಅದ್ಭುತವಾಗಿ ಬರೆದಿದ್ದೀರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: