ದೊಡ್ಡನ ನಂದಗೋಕುಲ

ದನ ಬುಡೋ ಹೊತ್ತು

ಎಚ್ ಆರ್ ಸುಜಾತಾ 

ದನಕರುಗಳು  ರೈತಾಪಿ ಕುಟುಂಬದ ಪ್ರಾಣ ಪದಕಗಳು. ಅವುಗಳ ಹಾವಭಾವಗಳೇನು?  ಸಂಸಾರದ  ಬಂಡಿಯನ್ನೆ ಎಳೆಯುವ ಎತ್ತುಗಳ ಆರೈಕೆಯೇನು? ನಮ್ಮ ಹೊಟ್ಟೆ ತುಂಬಿಸಲು ನೆಲ ಉಳುಮೆ ಮಾಡುವ  ಎತ್ತುಗಳ ತರಬೇತಿ ಹೇಗೇ? ಹಸು ಮಕ್ಕಳಿಗೆ ತಾಯಂದಿರನ್ನು ಸರಿಗಟ್ಟಿಸಿ, ತಬ್ಬಲಿ ಬಾಲೆಗಳಿಗೆ ತಾವೇ ಹಾಲಾಗುವ ಹಸು ಎಮ್ಮೆಗಳ ನಾಡಿಮಿಡಿತದಿಂದ ಹಿಡಿದು, ಕರು, ಕುರಿಮರಿವರೆಗೂ ಅವುಗಳನ್ನು ಅಕ್ಕರೆಯಿಂದ ಸಲುಹುವ ಶ್ರಿ ಕ್ರಿಷ್ಣ ಪರಮಾತ್ಮ ನಮ್ಮ ದೊಡ್ಡ.

Nammuru-1ಅವನು ಇದ್ದದ್ದೆ ನಾಕೂವರೆ ಅಡಿ. ತೆಳು ಕಾಯದ ಹುಲ್ಲಾಳು. ಹೆಸರು ಮಾತ್ರ ದೊಡ್ಡ. ಅವನು ಇಕ್ಕುತ್ತಿದ್ದ ದೊಗಳೆ ಅಂಗಿ ಮಂಡಿವರೆಗೂ ಇಳಿಬೀಳುತಿತ್ತು. ಅದು ಈಗಲೂ ನನಗೆ ನೆನಪಿದೆ. ಅಂಚು ಹರಿದ ಚಡ್ಡಿ ಆಗಾಗ  ಅದರೊಳಗಿಂದ ಇಣುಕುತಿತ್ತು. ಅವನು, ದೊಡ್ಡದಾದ ಸ್ವರ ತೆಗೆದ ಅಂದ್ರೆ, ದನಕರುಗಳ ಚೆಲ್ಲಾಟ ಕಾದಾಟಗಳೆಲ್ಲ ನಿಂತು, ದನದ ಕೊಟ್ಟಿಗೆಯೆ ಒಂದು ಲಯಕ್ಕೆ ಬಂದುಹೋಗದು. ಅವನೊಂದು, ಪ್ರಕ್ರುತಿದತ್ತ ಶಿಸ್ತಿನ ತಿಳುವಳಿಕೆಯಿರುವಂಥಹ ಶಿಶುಮಗ. ದನಕರುಗಳ ನೆಂಟ. ನಿಘಂಟು ಅನ್ನದನ್ನೇ ಅರೆದು ಕುಡ್ದಿರೋ ಪಂಡಿತ. ಇಡೀ ದನದ ಕೊಟ್ಟಿಗೆ ಅವನ ಕಣ್ಣ ಅಳತೆಯೊಳಗೆ ಸೊಂಪಾಗಿ ನೆಮ್ಮದಿಯಾಗಿತ್ತು.

ಇಂಥ ದೊಡ್ಡನ ಹಿಂದೆ ಒಬ್ಬ ಚಿಕ್ಕ ಮಗ ಇರದು. ಅದರ ಹೆಸರು ದ್ಯಾವಣಿ. ಗಟ್ಟಿಮುಟ್ಟಾಗಿದ್ದ ಕಾಯ. ಯಾವಾಗಲೂ ಹಕ್ಕಿಮರಿಗೆ ತುತ್ತು ಕೊಡು ಹಂಗೆ ತುತ್ತು ಕೊಡತಾ ಕಂಕುಳ ಸಂದೀಲೆ ಅವನು ಮಗನ್ನ ಸಾಕತಿದ್ದ. ಮಗ ಹಠಮಾರಿಯಂಗಿದ್ದಂಗೆ ನೆನಪು. ತಾಯಿಲ್ಲದಿರ ಮಗ ಅಂತ ಅದನ್ನ ದೊಡ್ಡ ಇಪರೀತ ಮುದ್ದು ಮಾಡಿ ಕೆಡ್ಸಿ ಇಟ್ಟಿದ್ದ.

ಬಿರುಗಾಳಿನೋ, ಸುಂಟ್ರಗಾಳಿನೋ ಜೋರಾಗಿ ಬಂದ್ರೆ ತೂರಿ ಹೋಗ ಹಂಗಿದ್ದ ದೊಡ್ಡ, ತೆಳ್ಳಗೆ  ಗಾಳೀಲಿ ತೇಲಿಕೊಂಡೇ ನಡಿತಿದ್ದ ದೊಡ್ಡ, ದನಗಳ ಕಂಡೇಟಿಗೆತಗ ಅದರ ಪರಿಭಾಶೆಲ್ಲಿ ಮಾತಿಗೆ ಶುರು ಹಚ್ಚುಕಳನು. “ಅಗ್ಗ ಅಗ್ಗ.  ಎನ ಏನ,…. ಓಮ, ಹುಹು… ಇರು… ನಿತ್ಗ, ನಿನ್ನ ದಯ್ಯ ಹೊಡ್ಯಾ…,ಬಂದೆ ಬಂದೆ, ನಿನಮ್ಮನ್…….” ಹಿಂಗೆ, ಹಲ್ಲಿನ ಸಂದೀಲಿ ಹಲ್ಲಿಯಂಗೆ ಲೊಚುಗುರಿತಾ, ಅವುಗಳ ಬೆನ್ನ ಮೇಲೆ ಕೈಲಿ ಪಟ್ಟಪಟ್ಟನೆ ತಟ್ಟತ್ತಾ, ಅವಕ್ಕೆ ಏನ್ ಬೇಕು ಬೇಡ ಅನ್ನೋದನ್ನ ನೋಡ್ಕಳನು.

ಅವನು ಯಾರ ಜೊತೆ ಮಾತಾಡ್ತವನೆ ?ಅನ್ನೋದು, ಪ್ಯಾಟೆಲಿ ಬೆಳೆದ ನಮಗೆ ಕೊಟ್ಟಿಗೆಯ ಒಂದಪ ಇಣುಕು ಹಾಕೋವರ್ಗೂ ತಲೆಗೆ ಹೋಯ್ತಿರಲಿಲ್ಲ. ಸ್ವಚ್ಚ ಮಾತು, ಸ್ವಚ್ಚ ಭಾರತ್, ಇವೆಲ್ಲಾ ಪ್ರಧಾನ ಮಂತ್ರಿ ಮೋದಿಯವರ ನುಡಿಮುತ್ತುಗಳು. ಮೆಲುನುಡಿಗಳು ಅನ್ನವು ನಗರವಾಸಿಗಳ ಅಣಿಮುತ್ತುಗಳು. ಹಳ್ಳಿ ಮಾತುಗಳು ಹಂಗಲ್ಲ. ಗುಂಡು ಹೊಡೆದಂಗೆ. ಒಂದೇ ಏಟು, ಎರಡು ತುಂಡು. ಕೊಟ್ಟಿಗೆ ದನಗಳ  ಜತೆ ದೊಡ್ದನ ಮಾತೂ ಹಿಂಗೆ ಇತ್ತು. ಹಳ್ಳೀಲಿ ದನ ಜನರ ನಡುಮಧ್ಯ ಭೇಧ ಭಾವ ಹೆಚ್ಚಾಗೇನೂ ಇರಲಿಲ್ಲ.

ಅಂಗೇ, ದೊಡ್ಡನ ಒಂದು ದಿನದ ದಿನಚರಿ ಹೇಳ್ಕಂತಾ ಹೋದ್ರೆ, ದನಗಳ ನಿಘಂಟಿನ ಪುಟಗಳು ತಂತಾನೆ ತೆರೆಕಂತವೆ. ಅವನ ಮಾತಲ್ಲೇ ಹೇಳ್ಬೇಕಂದ್ರೆ, ಕೋಳಿ ತಿಕಕ್ಕೆ ಎದ್ದ ಬರೊ ದೊಡ್ಡ, ಕೊಟ್ಟಿಗೆ ಅಗಳಿ ತೆಗೆದು ಸೀದ ನೀರೊಲೆ ತಕೆ ಬಂದು, ಕರೆ ಕಂಬಳಿ ಕೊಪ್ಪೆನ ಮಗ ದ್ಯಾವಣಿಗೆ ಮೈತುಂಬ ಹೊಚ್ಚಿ ಒಲೆ ಮುಂದೆ ಕೂರ್ಸೋನು. ನೀರೊಲೆ ಒಳ್ಗಿನ ಕೊರಡನ್ನ ಮುಂದಕ್ ನೂಕಿ ಪುಳ್ಳೆ ಮುರದು ಹಾಕುದ್ರೆ, ಬೂದಿ ಹೊದ್ದು ಮಲಗಿದ್ದ ಬೆಂಕಿ ಚಟಚಟಾಂತ ದಿಗ್ಗನೆ ಅವನ ಮಗಿನ ಮುಖ ನೋಡಕಂಡು ಅದನ್ನ ನಗಾಡುಸ್ತಾ ಹತ್ಕಳದು.

ಆಗ ದೊಡ್ದ ಮೈಕೈಗೆ ಕಾವು ಕೊಟ್ಕೊಂದು,, ಕೊಟ್ಟಿಗೆ ಕಡೇಗೆ ಅಳ್ಳಾಡಕಂದು ಬರೋನು. ಇತ್ತಕಡೀಕೆ ಮಗ, ಬೆಂಕಿ ಕಾವಿಗೆ ಬೆಚ್ಚಗಾಗಿ ಕೋಲುಯ್ಯಕಂಡು ಕುಣಿಯೊ ಬೆಂಕಿ ನಾಲಿಗೇನ ನೋಡ್ತ, “ಅಪ್ಪಾ..,ಅಪ… ಅಪಲೋ” ಅಂತ ಎಳೆಯೋ ರಾಗವ ಆ ಗಳಿಗೇಲಿ ಮರ್ತುಬಿಡೋದು. ಅದನ್ನ ಹೊಟ್ಟೆ ವಳಗೆ ಇಳೆಬುಟ್ಟು ಇನ್ಯಾವಗಲಾದರೂ ರಾಗ ಆಚಿಗೆ ಹಾಕದರಾಯ್ತು ತಗ ಅಂತಂದು ಮೈಕೈ ಕಾಯುಸ್ತಾ ಕೂರದು.

ದೊಡ್ಡ, ಕೊಟ್ಟಿಗೆಗೆ ಬಂದೇಟ್ಗೆ, ದೊಡ್ಡೆತ್ತು, ಸಣ್ಣ್ಎತ್ತುಗಳ್ಗೆ ಅಲ್ಲೇ ಬಿದ್ದಿರೊ ಬಿಳುಲ್ಲ ಉಂಡೆ ಮಾಡ್ಕಂದು,.ಅವುಗಳ ರುಂಡಿಲಿ ಆಗಿರೊ, ಸಗಣಿ ಗಂಜಲದ ಕರೆ ಓಗೊವರ್ಗೂ, ಅವು ಮಾಡ್ಕಂದಿರೋ ರೋಸನ್ನ ಉಜ್ಜಿ ತೆಗೆಯೋನು.. ಕಣ್ಣಿಬಿಚ್ಚಿ ಬೆನ್ನ ಚಪ್ಪರ್ಸ್ತಾ ಹಿತ್ಲಲ್ಲಿ , ಚಪ್ಪರದ ಕೆಳಗಡೆ ಅಡ್ಡ ಹಾಕಿರೊ ದೊಡ್ಡ ಕೊರಡಿಗೆ ಸಾಲಾಗಿ ಅವನ್ನ ತಂದು ಕಟ್ಟಿ, ಹಸುರು ಹುಲ್ಲಿನ ಹೊರೆ ಬಿಚ್ಚತು ಅಂದ್ರೆ, ರಾಸುಗಳು ತಗಳಪ್ಪಾ ನಿಂತ ಕಡೇಲೆ ಅಂಗೇ… ಮಿಲಿಗುಟ್ಟು ಹೋಗವು. ಆಗ ತಾನೆ ಕುಯ್ದಿರೊ ಹಸ್ರುಲ್ಲಿನ ಗಂಧ ಅನ್ನದು ಗೊಂತಲ್ಲಿ ಚೆಲ್ಲಾಡಿ ಹೋಗೋದು. ಅದನ್ನ ನೋಡ್ತಿದ್ದಂಗೆ ಎತ್ತು ಸರ ಬರಾಂತ ಸದ್ದು ಮಾಡಕಂದು ಸರಸರ್ನೆ ಮೇಯ್ತಾ ಮೆಲಕು ಹಾಕ್ತಾ ಇರೋವಾಗ ಕೊರಳಿನ ಗಂಟೆ ಗಣ ಗಣಾಂತ ಗಣ ಪೂಜೇಲಿ ಒಲಿದಂಗೆ ಗಣಗುಡತಿರವು.

ಮೈ ಮೇಲೆ ಬರೊ ಹಸ್ರು ನೊಣಾನ ಬಾಲದ ಚಾಮರದಲ್ಲಿ ಓಡ್ಸೊ ಸದ್ದಿಗೂ,  ಎತ್ತು ಹಿಂಗೆ ಮುಸುಗುಟ್ಕಂಡು ಉಸ್ರುಬುಡತಾ ಮೆಲಕು ಹಾಕೋ ಕುಸುರಿಗೂ ಒಂದು ಎಳೆಬಿಸಿಲಿನ ಬೆರಗು ಬಂದುಬೀಳದು. ಗುಡಿಸಿರೊ ಹಸನಾಗಿರೋ ನೆಲದ ಮೇಲೆ, ಕೋಲು ಬಿಸಿಲಿನ ಕಿರಣ ಇಳೀತಾ ಇಳೀತಾ, ನೆರಳಿನ ಚಪ್ಪರದ ಮೈಯೊಳಗಿಂದ ಕೆಳಗಿಳಿವಾಗಲೆಯ, ಕೊಟ್ಟಿಗೆ ಹಟ್ಟಿಗೆ ಒಂದು ಚಲನೆ ಬಂದುಬಿಡೊದು. ಹಿಂದುಗಡೆ ಹಿತ್ಲು ಜೀವಕಳೆಲಿ ಅಂಗೆ ನುಲಿತಾ ನಲಿತಿರದು. ಬಿಸಲಲ್ಲಿ ತಣ್ಣನೆ ಕೆರೆನೀರು ಬೆಚ್ಚಗಾಗ್ತಾ ಆಗತಾ ಸಣ್ಣ ಅಲೇಲಿ ತೇಲೋ ಹಂಗೆ, ಅದರೊಳಗೆ ಸಕಲೆಂಟು ಜೀವಿಗಳು ಆ ಸಂಚಾರದಲ್ಲಿ ಮೈಕೊಡವಿ ಎದ್ದು ಕೂಡಕೊಂಡಂಗೆ ಈ ಲೋಕ ನಸುಬಿಸ್ಲಲ್ಲಿ ತೇಲತಿರದು.

cow-krishnaಅವ್ವ ಮನೆ ಒಳಗೆ ಕೆಲಸ ಮಾಡೋವಾಗ ಅದರ ಸದ್ದಿಗೆ ಮನೇನು ಜೊತೆಯಾಗಿ ಹೆಜ್ಜೆ ಇಟ್ಟು ನಡಿತಿರೊ ಹಂಗೆ…..ಅಕ್ಕನ ಎಳೆಮಗ ತೊಟ್ಲಲ್ಲಿ ಗಿಲಕಿ ಸದ್ದಿಗೆ ಜೊತೆಯಾಗಿ ಗೆಜ್ಜೆಕಾಲ ಕುಲುಕಾಡಿಸಿ ತೊಟ್ಲನ್ನೆ ಕುಣಿಸೊ ಹಂಗೆ…,ಎಳೆ ಮಕ್ಳು ತಂತಾವೆ ನಕ್ಕೋಂತಾ ಆಂ..ಊಂ.. ಅನ್ಕಂಡು ಗಾಳಿಲಿ ಹಕ್ಕಿನ ಕೈಬೀಸಿ ತಮ್ಮತಕೆ ಕರಿತಿರ ಹಂಗೆ…. ಬೀಸಿದ ದಿಕ್ಕಿನ ಆಸೇ ಸೂತ್ರವ, ತನ್ನ ರೆಕ್ಕೇಲಿ ಹಿಡದು ಹಿಡದು ವಾಲಾಡಕಂಡು ಗಾಳಿಲಿ ಹಕ್ಕಿ ತೇಲೋ ಹಂಗೆ, ಹಿತ್ತಲಲ್ಲಿ ಎಳೆಕರ ಒಂದಕ್ಕೋಂದು ಜತ್ಯಾಗಿ, ಠ೦………..ಣ್ಣ ಠಣ್ಣನೆ ಬಾಲ ಮೇಲೆತ್ತಿ ಹುಲ್ಲೆ ಕರಿನಂಗೆ ಚಿಮ್ಮಿ ಹಾರೊಹಂಗೆ, ಹಿತ್ತಲಿನ ಎಳೆಬಿಸಿಲಿನ ಆನಂದ ಅಲ್ಲಿ ಬುಗ್ಗೆಯಂಗೆ ಹಿಗ್ಗಾಡಕಂಡು ಉಗ್ಗತಿರೋದು.

ಆಮೇಕೆ, ದೊಡ್ದ ಅನ್ನೋ ಸಾರಥಿ ಆರು ಜೋಡಿ ಎತ್ತನ್ನೂ ಸಾಲಾಗಿ ನೀರು ಕ್ಕುಡ್ಯೋಕ್ಕೆಂತ ಕೆರೆ ಕಡಿಕೆ ಹೊಡ್ಕೊಂದೋಗೋನು. ಗಾಡಿ ಎತ್ತು, ಉಳೊ ಎತ್ತು, ಅದ್ರ ಹಿಂದೆ ಹೋರಿಕರುಗಳು, ಉಳೋ ಗಿಡ್ಡಗಳು ಘನಗಂಭೀರದಾಗೆ ಮೆರವಣಿಗೆ ಮಾಡಕಂತ ಮನೆ ಕಿಳ್ಳಾಸಿ, ಹಿತ್ಲಲ್ಲಾಸಿ ಹೊರಟ್ರೆ, ಹಿಂ….ದಿರೋಂತ ಸಣ್ಣ ಪಡ್ಡೆ ಕರುಗಳು ನೇಗ್ಲು ನೋಗಕ್ಕೆ ಆಗಿನ್ನು ಹೆಗಲು ಕೊಟ್ಟಿರೋಂಥವು, ಪಾಪ! ತುಂಟಾಟ ಮಾಡ್ಕಂತ ಸಾಗ್ತಾ ಇದ್ರೆ, ದೊಡ್ಡನ ಛಡಿಲಿ ಒದೆ ತಿಂದು ತಂಟೆ ಬುಟ್ಟು ಒಂದು ಹದಕ್ಕೆ ಬರೊವು. ಆಮೇಕೆ, ಕಾವ್ಲು ಹುಲ್ಲಿಗೊ, ಮಠದ ತೋಪಿಗೋ ಗೂಟ ಹೂಯ್ದು ದೊಡ್ಡ ಮನಿಗ್ ಬಂದ್ರೆ, ಉದ್ದನೆ ಹಗ್ಗದ ಸುತ್ತ ತಾವೆ ಸುತ್ತಕಂದು, ಎತ್ತು ಮೇಯ್ಸೊ ಹುಡ್ಗ ಬರೊ ತಂಕ ಬರಬರನೆ ನೆಲ ಕಾಣೋ ಹಂಗೆ ಹಸುರು ಕೆತ್ಕೊಂಡು, ಮೇಯ್ಕಂತಿರೊವು.

ಅಷ್ತೊತ್ತಿಗೆ,ಅವ್ವ ಗೊಲ್ಲತಿ ಹಂಗೆ ಕರ ಹಿಡ್ಕೊಡ ಹುಡ್ಲು ಜತೆನಲಿ, ಹಾಲು ಕರೆಯೊ ದನಗಳಿಗೆ ಕಲಗಚ್ಚು ಹಂಚಿಕ್ಕಿ, ಹಾಲು ಕರಕಂದು, ಕರಗಳನ್ನ ತಾಯಿ ಬಳಿ ಕುಡ್ಯೋಕೆ ಬಿಟ್ಟಬಿಟ್ಟು, ಕರೆದ ಹಾಲನ್ನ ಸೆರಗಿನ ಮರೇಲಿ ತಗೊಂಡೋಗಿ, ಅಡಿಗೆಮನೆ  ಸೌದೆವಲೇ ಮಸಿಗೆ  ಕರ್ರಗಾಗಿ ಕಣ್ಣಿಗೆ ಮಿಂಚು ಹೊಡ್ಯೋಂಗೆ ಕಾಣತಿರ ಕರಿಬೀರಿನ ವಳಗೆ ಇಟ್ಟಿರೋದು. ಆ ಕಪ್ಪು ಬೀರಿನ ವಳಗೆ ಮೂರು ಸೇರಿನ ದೊಡ್ಡ ಚೊಂಬು, ಸೇರಿನ ನಾಕೈದು ಚೊಂಬು ತುಂಬಿ, ಮಿಳ್ಳಿ, ಚಟ್ಟಿ ಎಲ್ಲಾ ನೊರೆ ಕಟ್ಟಕೊಂಡು ಹಸಿ ಹಾಲಿನ ನಸುಘಮಲು ಆ ಬೀರಿನಲ್ಲಿ ತುಂಬಕೊಂದು, ಸಾಲಾಗಿ ಇಟ್ಟ ಕಳಸದ ಮಟ್ಟಲ್ಲಿ ಅವು ಬಂದು ಚಂದಕ್ಕೆ ಕುಂತಿರೋವು.

ಒಲೆ ಮುಂದೆ ನೆಲಕ್ಕೆ ಬೆವರು ಕೊಡವ್ತಾ,  ರೊಟ್ಟಿನ ಎರಡು ಅಂಗೈಲಿ ತಾವರೆ ಎಲೆ ಹಂಗೆ ಅರಳಿಸ್ತಾ, ಬೆರಳಿನ ತುದಿಯ ಅದರಲ್ಲಿ ಅಚ್ಚು ಮೂಡಿಸ್ತಾ, ಹೆಂಚಿನ ಮೇಲಿನ ರೊಟ್ಟಿನ ಮಗಚ್ತಾ, ಕೆಳಗೆ ಇಳಿಸಿದ ರೊಟ್ಟಿಯ ಒಲೆ ವಕ್ಕಡೆಲೆ ಕೆಂಡ ಹಿರುದು ಅದರ ಮೇಲೆ ವಿಷ್ಣು ಚಕ್ರ ತಿರುಗ್ಸೋ ಹಂಗೆ ತಿರುಗುಸ್ತಾ, ಆ ಒಲೆ ಹದವಾಗಿರೋ ಕಾವಿಗೆ ಬುರ್ರನೆ ಊದಕೊಂಡ ರೊಟ್ಟಿಯ ಠಪ್ಪನೆ ನೆಲಕ್ಕೆ ಬಡಿದು ಅದಕ್ಕೆ ಹತ್ಕಂದಿದ್ದ ಬೂದಿ ಉದುರ್ಸಿ ಒಲೆ ತೋಡಿಗೆ ವರಗಿಸಿಟ್ಟು ಎಷ್ಟಾಗವೆ? ಅಂತ ಆದ ರೊಟ್ಟಿ ಎಣಿಸ್ತಾ, ಸಾಲದೆ ಹೋಯ್ತವೆ ಅಂತ ತಿರಗ ಹಿತ್ತಾಳೆ ತಂಬಾಳೆಲಿ  ಕಲ್ಲುಪ್ಪ ನುರಿಕೊಂಡು, ರೊಟ್ಟಿ ಅಸಿಟ್ಟನ್ನೂ ಅನ್ನನೂ ಮಿದಿತಾ, ಮಿದಿತಾ ಕುಂಬಾರತಿ ಕಾಯಕ ಮಾಡಕಂದು ಅಂಗೈ ಗುಂಡೀಲಿ ದುಂಡುರಕ್ಕೆ ಅದನ್ನ ವಿಷ್ಣು ಚಕ್ರದಂಗೆ ತಿರುಗುಸ್ತಾ ಅವ್ವ ಕುಂತಿರೋದು.

ಒಲೆ ತೋಡಿನ ತುಂಬಲೂ ನಾನಾ ಭಂಗಿಲಿ ರೊಟ್ಟಿ ತಪಸ್ಸು ಅನ್ನದು ನಡಿತಿರದು. ಅಂಗೇಯ ಓಗಾಲೆ ಮೇಲಿನ ಕಾಪಿ ನೀರಿಗೆ ತಂಬಾಲು ಹುಯ್ದು, ಕಾಪೀನ, ಒಂದು ಪಾವು ಹಿಡಿಯೋ ಕಪ್ಪಿಗೆ ಬಸಿತಿರೋದು. ಆಳು ಮಕ್ಳು ಒಬ್ಬೊಬ್ಬ್ರಿಗೆ ರೊಟ್ಟಿ ಮೇಲೆ ಖಾರ ಹಾಕಕೊಟ್ಟು, ಮ್ಯಾಲೀಟು ಗಟ್ಟಿಮೊಸ್ರು ಹೂದು ಕೊಟ್ಟೋರೆ ನಾವು ಕಾಫಿ ತಗೊಂಡೊಗಿ ಅವ್ರ ಕಪ್ಪಿಗೆ ಬಸ್ದು ಬರ್ತಿದ್ವಿ.

ದೊಡ್ಡನೂ ಹಿಂಗೆ, ರೊಟ್ಟಿ ತಿಂದು ,ಕಾಪಿ ಕುಡ್ದು , ದಿನದ ವರ್ತನೆಯ ಒಂದು ಬೀಡಿ ಕಟ್ಟು ಬೆಂಕಿಪಟ್ನ ಇಸ್ಕಂದು,”ವಸಿ ಬೆಂಚಿ ಕೊಡಿ” .ಅನ್ನೋನು. ಉರಿಯೊ ವಲೆ ಒಳಗಿಂದ ಹಿರ್ದು ಒಂದು ಸೌದೆ ಕಡ್ಡಿಯ ತರೊವಾಗ ಹಸಿಯಾಗಿದ್ರೆ ಅದು, ಅದರ ಅಂಡಿಂದ ಪುಸ್ಸ..ಪುಸ್ಸನೆ ಹೊಗೆಬಿಡೋದು. ಎಣ್ಣೆ ಮರದ ಸೌದೆ ಏನಾರ ಆಗಿದ್ರೆ, ಅದ್ರಿಂದ ಅದರ ಎಣ್ಣೆನೂ ಚುರಚುರನೆ ಆಚಿಗೆ ಬರೊದು. ಅದ್ನ ತಾಕಿಸಿಕೊಳ್ದಂಗೆ ನಾವು ಅವನಿಗೆ ತಂದು ಕೊಡ್ತಿದ್ವಿ.

ದಮ್ ಎಳೆದು ಉಸಿರು ಬಿಟ್ಟ ಕೂಡ್ಲೆ ಒಂದುಕ್ಕೊಂದು ಮುತ್ತು ಕೊಟ್ಟಂಗೆ, ಆ ಸೌದೆ ತುದಿನೂ ಬೀಡಿ ತುದಿನೂ ರಂಗೇರಿ ಹತ್ತಿಕೊಳ್ಳವು. ಅದನ್ನ ಬಾಯಲ್ಲಿ ಕಚ್ಕೊಂಡು, ಕಂಬಳಿ ಕೊಪ್ಪೆನ ತಲೆ ಮೇಲೆ ಹಾಕ್ಕೊಂಡು, ದನ ಬಿಡೋಕೆ ಹೊರಡೊನು. ಹಳ್ಳಿಲಿ ಆಗ, ವಾರಕ್ಕೊಂದು ದಿನ ಸಂತೇಲಿ ತಂದ ಪ್ರತಿ ಸಾಮಾನನ್ನ ಮುಂದಿನ ವಾರದವರೆಗೂ ಜೊಪಾನ ಮಾಡ್ತಿದ್ರು. ಹಂಗೆ ತರೋ ಬೀಡಿ ಬೆಂಕಿ ಪಟ್ಟ್ಣಕ್ಕೂ ಬೆಲೆ. ಬೆಂಕಿ ಕಡ್ಡಿನ ಗೀರಕ್ಕೆ ಸೈತ ಹಿಂದೆ ಮುಂದೆ ನೋಡೋರು. ಭಾರಿ ಹಿಡಕಟ್ಟು ಮಾಡರು.

ದನ ಬಿಡೋದು ಅಂದ್ರೆ ಅದೊಂದು ಮದ್ವೆ ದಿಬ್ಬಣದ ಕಳೆ. ದಿನಾಲೂ ಹಬ್ಬ. ದನ ಬಿಡೊ ಹೊತ್ತು ಅಂದ್ರೆ ಹಳ್ಳೀಲಿ ಅದೇನು ಜಾಗರೂಕತೆ, ಎಚ್ಚರಿಕೆ. ನಮ್ಮ ಮೂರು ಜನ ಅಣ್ಣ ತಮ್ಮಂದಿರ ಮನೆಗಳಿಂದ ಕೂಡು ಕುಟುಂಬದಲ್ಲಿರೊ ಜನರಂಗೆ, ಒಟ್ಟಿಗೆ ಇನ್ನೂರು ಮುನ್ನೂರು ರಾಸುಗಳು ಹೊರಡವು. ದಿನಾಲೂ ಆ, ಆ… ಮನೆಯ ಅವ್ವಂದಿರೆ…. ಅಲ್ಲಲ್ಲಿ ನಿಂತು ದನಗಳನ್ನ ಮೇಯೋಕೆ ಕಳ್ಸಿಕೊಡೋರು. ಕೈಮೆಲೆ ರೊಟ್ಟಿ ಹಿಡ್ಕೊಂಡು, ತಿಂತತಿಂತಾಲೇ ಮನೆ ಕಿಳ್ಳುಗೊಬ್ರು, ಹೊಲದ ಓಣಿಯ ಆಯಕಟ್ಟಿನ ಜಾಗದಲ್ಲೊಬ್ರು, ಹಿಂಗೆ ನಾಕೂ ಕಡೆ ಕಾವಲು ಕಾಯಕಂದು ನಿಲ್ಲೋರು. ಊರನ್ನೇ ಕಾಯೋ ತಾಯಂದ್ರಂಗೆ….. ಬೆಳೆದಿರೊ ಹೊಲಗದ್ದೆಯ ಹಸಿರಿಗೆ ದನ ಬೀಳದಂಗೆ ತಡೆದು, ಊರ ಓಣಿ ದಾರೀಲಿ ದನಗಳ ಬಿಡೋರು. ಒಂದೊಂದೆ ಕೊಟ್ಟಿಗೆ ಬಾಗ್ಲಿಂದ, ಇಸ್ಕೂಲಿನ ಮಕ್ಳು ಬಯಲಿಗೆ ಓಡ ಬರೊ ಹಂಗೆ, ಒಂದೆ ಉಸ್ರಿಗೆ ಕೊಟ್ಟಿಗೆ ಬಾಗ್ಲು ದಾಟಿದ ದನಗಳು, ಆಚೆ ಕಡೆಬಂದು, ಗಾಳಿಗೆ ಮೂಗ ಹೊಳ್ಳೆ  ಅರಳಿಸಿ,  ಒಂದುಸ್ರ ಎಳಕಂದು, ಲಗುಬಗೇಲಿ ಸರಸರನೆ ಒಂದೇ ದಪಕ್ಕೆ ಕೊಟ್ಟಿಗೆಯ ಮೂರು  ಮೆಟ್ಲು ಇಳಿದು ಅವು ಹೊರಡವು.

ಆಗ  ಅವುಗಳ ಕಾಲಿನ ಗೊರಸು ಆ ಕಲ್ಲಿಗೆ ತಾಗಿ ತಾಗಿ ಆ ಸದ್ದು, ಕಿವಿಗೆ “ಟುಕು ಟುಕು,ಕುಟು ಕುಟು” ಅಂತ ಬೀಳೋದು. ಹಿಂದಿಂದ ಚಂಗ್ಲ ಹಸ ಅನ್ನವು ದೂಡೋ ಪುಂಡಾಟಕ್ಕೆ ಕೆಲವು ಕಾಲು ಜಾರಿ ಹಸಾರೆ ಬಿದ್ದು ವದರ್ಕೊಂಡು ಎದ್ದು, ಜೋರಾಗಿ ಹೆಜ್ಜೆ ಹಾಕ್ಕಂತ ಗುಂಪಿಗೆ ಸೇರಕಳವು. ದೊಡ್ಡನ ಹಿಡೀಲಿ ತೆಳುವಾಗಿದ್ದರೂ ಗಟ್ಟಿಯಾಗಿರ ಕಾಡು ಗುಲಾಬಿ ಕಡ್ಡಿ ಒಂದು ಅವನಂಗೆ ಗಾಳೀಲೀ ತೇಲ್ತಿರದು. “ಇಂಥ ಒಂದು ಕೋಲು ಅನ್ನದು ಇಷ್ಟು ದನಾನ ಕಾದು ಅವು ಕಾಡು ಬೀಳದಂಗೆ ಹದ ಹಾಕುತ್ತಲ್ಲ! ಇನ್ನ ರಾಜನ ಕತ್ತಿಗೆ ಹೆದರದೇ ಇರ್ತಾರಾ? ನರಮನುಶ್ಯರು” ಅಂತ ನಮ್ಮ ದನಿನ ಮೇಷ್ಟ್ರು ಅದ ಗಾಳೀಲಿ ಸುಯ್ಯ, ಸುಯ್ಯ, ಅಂತ ತಿರುಗ್ಸಿ ಮಂತ್ರ ಹಾಕಂದು ತಂತ್ರ ಹೇಳಕಂದು ಹೋಗೋನು.

ಕರಿನ ಹಸುಗಳು ಮಾತ್ರ ನಿಧಾನ ಮಾಡಿ, ಕರಿನ್ ಕೊಟ್ಟಿಗೆಲಿ ಕೂಡಿ ಹಾಕಿದ ತನ್ನ ಕರು ನೋಡ್ಕಂಡು, ಅಂಬಾ… ಅಂತ ಕೂಗ್ತಾ ಕರು ಕೂಕಿಗೆ ಓಗೊಟ್ಟಾಗ, ದೊಡ್ಡ ಅನ್ನ ದನಿನ್ ಮೇಷ್ಟ್ರು, ಸಮಾಧಾನದಿಂದ “ಬಾರೆ,  ಬಾರೆ, ಮುರ್ಕೋಡಿ, ನಾವು ನಿನ್ನ ಕರ ತಿನ್ಕಳುಕುಲ್ಲ” ಅಂತ ಅಂದ್ರೆ, ಅದು ಅರ್ಥ ಆದಂಗೆ ಅವನ ಹಿಂದೆ ಹೋಗದು. ಅದರ ಕೋಡು ಎರಡು ಕಿವಿಯ ಪಕ್ಕಕ್ಕೆ ಮುರದು ಬಿದ್ದಂಗಿದ್ದವು. ಅದಕ್ಕೆ ಅದರ ಹೆಸರು ಮುರ್ಕೊಡಿ. ಹಂಗೇ ಬಿಳೆ ಹಸ, ಕೆಂದಸ. ಕರೆ ಹಸ, ಒಂಟಕೋಡಿ, ಬೋಳಿ, ದೊಡ್ಡಸ, ಕಡಸು, ಕೆಂದೆತ್ತು, ಕದಬಳ್ಳಿ ಎಮ್ಮೆ, ಕರಿ ಎಮ್ಮೆ, ಕೆಂಬ್ರೆಮ್ಮೆ, ಬಿಳೀ ಎಮ್ಮೆ, ಚುಂಚ ಪುಂಚ, ಬಳ್ಳೊಳ್ಳಿ, ಗೊಡ್ಡಸ, ಹಳಗಬಳಗ, ಲಗಾಡಿ, ಕಳ್ಳೆ, ಹಿಂಗೆ, ಅವುಗಳ ಅನ್ವರ್ಥನಾಮದಲ್ಲಿ ಅವನ್ನು ಗುರುತಿಸುತ್ತಾ, ಕೂಗಿ ಕರೆದ ಮನುಶ್ಯಂಗೆ ಅವು ಕಿವಿ ಅಗಲ ಮಾಡಿ ಓಗೊಡವು. ನಿಂತು ಅದರ ಹೆಸರನ್ನು ಆಲಸವು.cow1

” ಅಗಳೆ..,ಅಗ್ಗಳೆ…,ಹಯ್ಯ… ಹಯ್ಯ, ಆಂ….ಯ್, ಪ್ಚ್…..ಚ್…ಚ್” ವಿಶಿಷ್ಟವಾಗಿರ ಪಶುಗಳ, ಸಾಂಕೇತಿಕ ಭಾಷೆಯ ಜೊತೆಗೆ ಹದವಾಗ್ತಾ, ಹೆಜ್ಜೆ ಹಾಕ್ತಾ ಹೋಗವು. ಕಡೆ ಸಾಲಿನ, ನಿಧಾನಕ್ಕೆ ಹೆಜ್ಜೆ ಇಕ್ಕೊ ಮುದಿಹಸಿನ ತನಕ ಬಣ್ಣ ಬಣ್ಣದ ದಿಬ್ಬಣ ಅನ್ನದು ಮನೆಯಿಂದ ದಿಸಾಲೂ ಹೊರಡೋದು. ಮನೆ ಮೆಟ್ಲು ತಾವಳಿಂದ, ಮಾರಮ್ಮನ ಗುಡಿ ಮುಂದಾಸಿ, ಕೆರೆ ಏರಿವರ್ಗು ದನಗಳ ಕಾಲಿನ ಧೂಳಿನ ಮೆರವಣಿಗೆ ಹೊರಟ್ರೆ, ಕೆರೆ ತುಂಬಲು ತಾವರೆ ಹೂವು ಆಗ ದನಗಳ ಧೂಳಿನ ಪರಾಗಕ್ಕೆ ಮೈ ಬುಟ್ಟು ಕೆಂಪೇರವು. ದನಗಳ್ನ ಅಟ್ಟಿ, ಕೋಡುಗಲ್ಲ ದಾಟಿಸಿ, ತಾಯಂದಿರು ಅಂದಿನ ಕೆಲ್ಸಕ್ಕೆ ಅವರು ವಾಪಸ್ ಹೊರಟ್ರೆ, ಆಳುಗಳ ಜೊತೇಲಿ ಮಕ್ಕಳು ಇಸ್ಕೂಲಿಗೆ ಹೋಗೊ ಹಂಗೆ, ದನಗಳು ಏರಿ ಮೇಲೆ ಹೋಗ್ತಾ ಇರವು. ಆ ಗುಂಪಲ್ಲಿ ಆಡು, ಹೋತಗಳು ಮಸ್ತ್ತಾಗಿರೋವು. ಯಾವ ಜೀವನೂ ರೈತನಿಗೆ ಹೊರೆಯಲ್ಲ. ನಮ್ಮಹಿರಿಯರ ಜೀವಾಳ ಅನ್ನದೇ ಅವುಗಳ ವಳಗೆ ಇರದು…..

ಇನ್ನು ಹಿತ್ಲಕಡೆ, ಹಿತ್ತಿಲೊಳ್ಗೆ  ಹತ್ತಾರುಕರುಗಳು, ಆಡು ಮರಿಗಳು ಮಿರಮಿರನೆ ಬಿಸಿಲಿಗೆ ಮಿಂಚ್ತಾ, ನೆಗೆದಾಡದನ್ನ ನೋಡಕೆ ಒಂದ್ ಚಂದ. ಅವಕ್ಕೆ ಹನ್ನೆರಡು ಗಂಟೆಗೆ ಸರಿಯಾಗಿ, ಅವು ನಲುಗದೆ ಇರೊ ಹಂಗೆ, ಕರ ಮರಿ  ಹಿಡಿಯೊ ಹುಡುಗರು, ಬ್ರಾಂದಿ ಸೀಸದಲ್ಲೋ ಬಿದಿರು ಗೊಟ್ಟದಲ್ಲೋ ಮಜ್ಜಿಗೆ ತುಂಬಕಂದು ತಂದು ಕರಿನ ಕೊಳ್ಳ ತೊಡೆ ಮಧ್ಯಕ್ಕೆ ಸಿಗಸ್ಕಂದು, ತಲೆ ಮ್ಯಾಕೆ ಎತ್ತಿ ಹಿಡಕಂದು ಮಜ್ಜಗೆ ಹುಯ್ದು ಅವಕ್ಕೆ ಗುಟುಕ್ಸೋದ ಕಲಸ್ತಲೆ ನಿಧಾನಕ್ಕೆ ಕುಡ್ಸೋರು. ಅವು ಮಕ್ಕಳಂಗೆ ಒಲ್ಲೆ ಅಂತಾ, ಮೂತಿ ಅತ್ಲಾಗಿತ್ಲಾಗೆ ಒಗಿತಾ, ಮಜ್ಜಿಗೆಯ ಮೈ ಮೇಲೆಲ್ಲಾ ಚೆಲ್ಲಕಳವು. ಮೂಗೊಳಕ್ಕೆ ಹೋದರೆ ಜೋರಾಗಿ ಕತ್ತ ವದರಿ ಮೂಗು ಸಿಂಡರ್ಸಿ ಆಚಿಗೆ ತಿರುಗಿಸಿ ಸಿಡಿಸವು.

ಮಜ್ಜಿಗೆ ಬಾನಿಗೆ ಕಾಲು ಹಾಕಿ ಉಳ್ಳಸಬಿಡವು. ಅರ್ಧ ಮಜ್ಜಿಗೆ ಹೊಟ್ಟಿಗೋದ್ರೆ, ಅರ್ಧ ಮಜ್ಗೆ ನೆಲ್ಲಕ್ಕೆ ಚೆಲ್ಲಿ ಹೋಗದು. ಭೂಮಿ ತೇವಕ್ಕೆ ಬೇರು ಬಿಟ್ಕೋತಾ ಹಂಬಂಗೆ ಬೆಳೆಯೊ ಹಗುರಾದ ಅಕ್ಕಿ ಹುಲ್ಲ ಕಿತ್ಕಂದು ತಂದು ನಮ್ಮಜ್ಜಮ್ಮ ಕರುಗಳ ಬಾಯಿಗೆ ಅಂಗೆ ಸಂದೂ ಗಿಡಿಯದು. ಉಗಿತಾ ನುಂಗ್ತಾ, ಹಂಗೆ ಮೆಲುಕು ಹಾಕದನ್ನ ಅವು ಅಜ್ಜಮ್ಮನ್ನ ಅಕ್ಕರೇಲಿ ಕಲತ್ಬಿಡವು. ನಾಕಾರು ತಿಂಗಳ ಆದಮೇಲೆ ಹಿತ್ಲಲ್ಲಿದ್ದ ಹುಲ್ಲು ಕೊಣಬೆಗೆ ಬಂದು ಅವು ಬಾಯ್ ಹಾಕವು. ದಿನ ಕಳಿತಿರಂಗೆ ಕರಿನ ಲೂಟಿ ಹಿತ್ಲಲ್ಲಿ ಜಾಸ್ತಿ ಆತಿದ್ದಂಗೆಯ, ದೊಡ್ಡನ ಇಸ್ಕೂಲಿಗೆ ಅವುನ್ನು ಹಾಕೋರು.

ಅವೇನಾರ, ಬೇಲಿ ದಾಟುದ್ರೆ ದೊಡ್ಡನ ಸಣ್ ಆಳ್ತನದಿಂದ, ದೊಡ್ಡ ಗಂಟಲಿನ ಬಾಯರಿಕೆ ಬರೋದು. ಅವನ ಮಾತನ್ನಾಲಿಸಿಕಂಡ ಅವು, “ತಿರುವುಗಿವಿಯ ಮಾಡಿ ಅವು ನಿಂತಾವಕ್ಕ ನಿಂತಲ್ಲೆನ….” ಅನ್ನೋ ಶ್ರೀ ಕ್ರಿಶ್ನಪರಮಾತ್ಮನ ಹಾಡಿಗೆ ನಿಂತ ಗೋಗಳಂಗೆ ನಿಂತ ಕಡೆಲ್ಲೇ ನಿಂತುಬಿಡೋವು. ಅಂಗೂ, ಅವನು ಹಾಕಿದ ಗೆರೆ ದಾಟಿದ್ವು ಅಂದ್ರೆ ಆವತ್ತು ತಕ ಮುಗೀತು. ಮಾರನೆ ವತ್ತಾರಿಕೆ, ಅದರ ಕೊಳ್ಳಿಗೆ ಒಂದು ಕೊರಡು ನೇತುಬೀಳೊದು.

ಅಂಥ ಶಿಕ್ಷೆಲೂ ಬೋಳಿ ಹಸ ಅನ್ನದು ಕೊರಡನ್ನ ಹೊತ್ತಕಂದೇ ಬೇಲಿಯ ನೆಕ್ಕಬಂದು, ಕರುಗೆ ಹಾಲು ಕುಡಸಬಿಡೊದು ಅಂದ್ರೆ… ಅದರ ತಾಕತ್ತು ಎಷ್ಟಿತ್ತು ನೋಡಿ! ಅದನ್ನ ಕಂಡಾಗ ಅದೇ ಪಾಠ ಅಗೋಯ್ತದೆ ಅಂತವ ಬೋಳಿಯ ಹಿಡ್ದು ಹಿವಚೆ ಮಾಡಿ ಕಟ್ ಹಾಕುದ್ರುವೆ, ಸೊರ ಬಿಟ್ಟ ಕೆಚ್ಚಲಿಂದ ಹಾಲು ನೆಲಕ್ಕೆ ಸೋರ್ ಹೋಗ್ತಿರೋದು. ಕರು ಅಂಬಾ ಅಂಥ ಹಿತ್ತಲಿಂದ ಕರದೇ…ಕರೆಯಾದು. ಅವೆರಡರ ಹಂಬಲ ಕಂಡಾಗೆಲ್ಲ, ಏಸುಕ್ರಿಸ್ತ  ಶಿಲುಬೆ ಹೊತ್ತು ನಡಕಂದು ಹೋಗ್ವಾಗ ಮೊಳೆ ಹೊಡೆಸಿಕೊಂಡಿರ ಅವನ ಕೈಯಿಂದ ಹರಿಯೊ ರಕ್ತ  ನೆನಪಿಗೆ ಬಂದುಬಿಡದು.

ಯಾಕಂದ್ರೆ, ನಮ್ಮ ಶಿಕ್ಷಣ ಕೊಡೊ ಹಾಸನದ ಸೆಂಟ್ ಫಿಲೋಮಿನಾ ಸ್ಕೂಲಿನ ಸಿಸ್ಟರ್ಸ್ ಹೇಳೋ ಕಥೆ ಆಗ ಕಣ್ಣಿಗೆ ಬರೋದು. ಆದ್ರೆ, ನಮ್ಮ ದೊಡ್ಡನ ಶಿಕ್ಷೆ ಅನ್ನವು ಹಗುರಾದ ಶಿಕ್ಷೆ ಆಗಿದ್ವು. ಯಾಕಂದ್ರೆ ಅದರೊಳಗೆ ಅಕ್ಕರೆ ಅನ್ನೋದು ಸಕ್ಕರೆ ಅಚ್ಚಂಗೆ ವತ್ತೀಲೆ ಇರೋದು.ಇಂಥ ದನಕರುಗೆ ಬುದ್ಧಿ ಕಲ್ಸೋ ದೊಡ್ಡ, ದನ ಕಾಯೋ ಹುಡುಗ್ರಿಗು ಮೇಷ್ಟ್ರು.

ಮುಂದಿನ ವಾರ -ದನ ಬರೋ ಹೊತ್ತು

 

‍ಲೇಖಕರು Admin

December 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: