ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇಹಗಳ ಎಗ್ಗಿಲ್ಲದೆ ತಬ್ಬುತ್ತ, ತಾನೇ ಅವರಾಗುತ್ತ..

ಬೆಳಕುಗಳ ಮುನಿಸು..

ಸಂದೀಪ್ ಈಶಾನ್ಯ ಅವರ ಕವಿತೆಯಿಂದ ಹುಟ್ಟಿದ ಕಿಚ್ಚಲ್ಲಿ

s p vijaya lakshmiಎಸ್. ಪಿ. ವಿಜಯಲಕ್ಷ್ಮಿ

ಬೆಳಕುಗಳ ನಡುವೆ ಈಗ ತೀವ್ರ ಮುನಿಸು
ಒಬ್ಬರೊಬ್ಬರ ಮಿಡಿತಗಳಲಿ ಕಾಣದ ನುಣ್ಣನೆಯ ಪೈಪೋಟಿ
ಎಲ್ಲರೂ ಪರಾಧೀನ, ತತ್ವ, ಗುರಿ ಒಂದೇ ಆದರೂ…..!
ಆ ಇಬ್ಬರಿಗೋ ಹಗಲು-ಇರುಳು ಊಡಬೇಕು, ಇದಕ್ಕೋ, ತುದಿಬೆರಳ ಸ್ಪರ್ಶಚುಂಬನ ಬೇಕು….!
ಈ ಸಣ್ಣದೊಂದು, ನಿರ್ಲಕ್ಷಿಸಿಬಿಡುವ ಎಳೆಗೇ ಜೋತುಭೀಳುವ ಹಂಬಲ, ಕುತೂಹಲ
‘ಛೇ’, ಕೂಡದೆನ್ನುವ, ಒಮ್ಮೊಮ್ಮೆ ತಮ್ಮದೇಕೋ ಅತಿಯೆನ್ನಿಸಿಬಿಡುವ
ತಮ್ಮ ಜಿಡ್ಡುತನಕೆ ತಾವೇ ನಾಚುವ, ತಮ್ಮ ಮೇಲೇ ಮುನಿಸಾಗುವ ಸಂಧಿಗ್ಧತೆ……..!

tigress

ಕತ್ತಲಾಗುವುದನ್ನೇ ಬಿಡುಗಣ್ಣಲ್ಲಿ ಧ್ಯಾನಿಸುವ ಈ ದೀಪವೋ, ತನ್ನ ಮೂಲಕ್ಕೆ
ಕೈಯಿಕ್ಕುವ ಆ ನೀಳಬೆರಳುಗಳ ಸ್ಪರ್ಷಕ್ಕೆ ಸಂಭ್ರಮ ಸುರಿಯುತ್ತ, ಕಿಲಕಿಲನೆಂದು ನಕ್ಕು
ಬೆಳಕ ಹೂ ಅರಳಿಸಿಬಿಟ್ಟು, ಒಮ್ಮೆ ಅವಳ ತಬ್ಬಿಮುದ್ದಾಡಬೇಕೆಂದಾಗಲೇ, ಆ ಪುರುಷಾಕಾರದ ಬಲಿಷ್ಠತೋಳುಗಳ ಹಾರ
ಆ ಶಂಖಕೊರಳಿನ ಸುತ್ತ ಬಳಸಿ, ತನ್ನೆಡೆಗೆ ಗಲ್ಲ ಹಿಡಿದೆತ್ತ ಬಾಗಿಸಿ, ತುಟಿಗೆತುಟಿ ಸೇರಿಸುತ್ತ ಕೋಣೆ ಹೊಕ್ಕಿದ್ದ ಕಾಣುವಾಗ,
ನಾಚಿಕೆಗೋ, ಅಸೂಯೆಗೋ, ಬೆನ್ನಹಿಂದೇ ತನ್ನನ್ನು ಇಲ್ಲವಾಗಿಸಿಬಿಡುವ ಕುದಿಗೋ
ಚೂರು ಮಂಕಾಗಿ, ಥಟ್ಟನೆ, ಏನೋ ಕಳೆದುಹೋದೀತೆನ್ನುವ ಭ್ರಮೆಗೆ, ಮತ್ತೆ, ಇನ್ನಷ್ಟು ಕಾಂತಿ ಸುರಿಯಲು,

“ಅದೋ…ಆ ಕ್ರೂರಿಗಳು ತನಗೆ ಚರಮಗೀತೆ ಹಾಡಿಯೇಬಿಟ್ಟರು…!
ಅಹುದಹುದು, ಈಗ ಅವನ ಸರದಿ, ತನಗಿಲ್ಲದ ಭಾಗ್ಯ ಆ ಕಳ್ಳಕೊರಮನಿಗೆ…!
ತಾನಿದ್ದರೇ ಪ್ರೇಮಿಗಳಿಗೆ ಜೇನು, ಜೊನ್ನು, ಮಧುಮಂಚ, ಚಂದ್ರ-ಚಕೋರಿ…ಅಬ್ಬಾ,
ಏನೆಲ್ಲ ಹಾಡಿಹೊಗಳಿ ‘ಈ ಬೆಳಕ ‘ ಅಟ್ಟಕ್ಕೇರಿಸಿದ್ದೇ ಈ ಇವರು…!
ಅಗೋ, ಬಂದೇಬಿಟ್ಟ ಕಪ್ಪುಸೆರಗಲ್ಲಿ ಮಿರಿಮಿರಿ ಬೆಳಕ ಸುರಿಯುತ್ತ…ಸುರಸುಂದರ…! ನಾಚಿಕೆ ಚೂರಿದೆಯೇ…?
ಕಿಟಿಕಿಯ ಬಳಿಯೇ ಲಜ್ಜೆಗೆಟ್ಟು ನೋಡುತ್ತ…..’ಹ್ಞುಂ….!’ ಅವನೆಂಥ ಭಾಗ್ಯಶಾಲಿ,

ದೇಹದೇಹಗಳ ಮದೋನ್ಮತ್ತ ಸಮರ ಸವಿಯುತ್ತ, ಉನ್ಮಾದದ ಬೆತ್ತಲೆ ದೇಹಗಳ ಎಗ್ಗಿಲ್ಲದೆ ತಬ್ಬುತ್ತ, ತಾನೇ ಅವರಾಗುತ್ತ….
‘ಛೇ’, ನಾನೊಬ್ಬ ಕಾವಲುಗಾರ ಈ ಮನೆಗೆ, ರಸಗವಳ ಮಾತ್ರ ಅವನಿಗೇ….!”
“ಅಯ್ಯೋ, ತಡವಾಯಿತು….!’
ಗಡಬಡಿಸಿ, ತನ್ನ ಬೆಳಕ ಕೋಲ ಕೋಣೆಯೊಳಗೆ ತೂರಿಸಿದ ಈ ‘ಮಹಾಬೆಳಕಿಗೆ’ ಮತ್ತೆ ನಿರಾಶೆ,
“ಛೇ’, ಸಾಕಾಗಿದೆ ಈ-
‘ಸಮಯ ಪರಿಪಾಲಕ’ ಎಂಬ ಹೆಗ್ಗಳಿಕೆ. ಇಡೀ ದಿನ ಚಕ್ರಭ್ರಮಣ ಹಣೆಬರಹ.
ಜೀವಕೋಟಿಯ ಸಲಹುವ ದೇವನಂತೆ, ಒಮ್ಮೆ…ಒಮ್ಮೆಯಾದರೂ….
ಆ ಸೊಕ್ಕಿ ಉಕ್ಕುವ ಉನ್ಮತ್ತತೆ ಕಾಣುವ ಹಂಬಲ ನನ್ನಿಡೀ ದೇಹವ ಹೊತ್ತಿ,
ಉರಿಸುವವನನ್ನೇ ನಿಗಿನಿಗಿ ಸುಡುತಿರಲು,

ಆ ಯಃಕಶ್ಚಿತ್ ‘ದೀಪ’ಕ್ಕೆ, ನನ್ನಿಂದಲೆ ಸಾಲದ ಬೆಳಕಲಿ ಮೆರೆವ ‘ಗೋಲ’ಕ್ಕೆ, ದಕ್ಕಿದ್ದು,
ನನಗೆಲ್ಲಿ…?

tigress

ನಾನು ಕಣ್ತೆರೆದರೆ ಸಾಕು, ಅಲ್ಲಿ, ಆ ಎದೆಗಳಲಿ ಮಾತುಗಳ ಕಿಡಿಹೊತ್ತಿ , ಕಣ್ಣ ಕೆರಳಿಕೆಯಲಿ
ಅವಳು ಅವಳ ದಾರಿಯಲಿ…. ಅವನು ಅವನ ದಾರಿಯಲಿ….!
ಇರುಳೂ ಹೀಗೇನಾ….ಅಥವಾ ಬೇರೇನಾ….?
ನಾ ಕಂಡದ್ದು ಸತ್ಯವಾ, ನಾ ಕಾಣದ್ದು ಸತ್ಯವಾ…?.
ಹಿರಿಯನಾದದ್ದೇ ತಪ್ಪು,
ಸುಖವೆಲ್ಲ ಇರುಳಿಗೆ, ಆ ಗರ್ವ ಚಂದ್ರಮಗೆ, ಆ ಕನಿಷ್ಠಬೆಳಕಿನ ದೀಪಕ್ಕೆ…..’ಹ್ಞುಂ…’!”

“ಅವರವರು ಪಡೆದಿದ್ದು ಅವರವರಿಗೆ
ನನ್ನ ಮೇಲೆ ಮೆಣಸು ಅರೆಯುವ ಹೊಟ್ಟೆಯುರಿ ಇವರಿಗೇಕೋ,
ಬೆಳಕಗೋಲದ ನನಗೂ ಕಲೆಯಂಟಿಸುವುದು ತಿಳಿದವರ ಥರವೇ….. ?
ಅಹಹಾ, ಒಬ್ಬ ಕೂಪಮಂಡೂಕ, ಇನ್ನೊಬ್ಬ ತಿಳಿದ ಪರಿವ್ರಾಜಕ,
ನಾ ಕಂಡಿದ್ದು ಇವರಿಗೂ ಅರುಹಲಿಲ್ಲವೆಂಬ ಕುದಿ….!
ನನಗೇ ಸ್ಪಷ್ಟವಿಲ್ಲ, ಉಕ್ಕುಕ್ಕಿಸೊಕ್ಕಿ, ಭರತವಿಳಿಸಿದಾ ಹೆಣ್ಣು ಮಗ್ಗುಲಾಗಿ ಬಿಕ್ಕಿದ್ದೇಕೆ…?”

tigress

ಯಾರ ಮುನಿಸೂ ತುರಿಕೆ ಹುಟ್ಟಿಸದೆ, ಪ್ರತಿಇರುಳ ಹಾಸಿನಲೂ-
ಬೆಳಕ ಹಂಗಿಲ್ಲದೆಯೂ ನೂರೆಂಟುಬಣ್ಣದ, ಬಾನು-ಭುವಿ ಬೆಸೆವ ಕಾಮನಾಬಿಲ್ಲೊಂದು,
ನಗ್ನ ಸತ್ಯದ ಹುಡುಕಾಟದ ಹೊರಳಾಟಕ್ಕೆ
‘ನುಣ್ಣನೆಯ- ಒರಟಾದ’ ಹೊಲದಲ್ಲಿ ಮೂಡುತ್ತಿತ್ತು,
ರಭಸದಲಿ ಏರಿ ಜಾರುತ್ತಿತ್ತು……
ಇಹಪರಗಳು ಮಾಯವಾಗಿತ್ತು,
ಹಗಲಸತ್ಯ- ಇರುಳ ವೇಷ, ಮಿಡಿತ-ಪರಿಮಿಡಿತ,
ಎಲ್ಲವನು ಮೀರುತ್ತ,
ಹಿಂದಕ್ಕೆ ತುಳಿಯುತ್ತ,
ಕಾಮ ವಿಜೃಂಭಿಸುತಾ……

‍ಲೇಖಕರು Admin

14 June, 2016

2 Comments

  1. Sudha ChidanandGowd

    ಮಹಾಬೆಳಕಿನ ಮಹಾನಿರಾಶೆ..
    ದೇಹದಾಹಕ್ಕೆ ಮನಸೂಡುವ ಅಮೃತಬಿಂದುಗಳ ಕಾಣುವುದಿರಲಿ,
    ಸೊಕ್ಕಿದ ಕತ್ತಲಿನ ನಿಶೆಯಲ್ಲಿ ಇಣುಕುವ ಅವಕಾಶವೂ ಅಲಭ್ಯ…
    ಕೈಹಿಡಿದು ನಡೆಸಲು ಕತ್ತಲಿಗೂ ಗೊತ್ತು
    ಕತ್ತಲ ಸೆರಗಿನಲ್ಲೇ ಬೆಳಕ ಮೂಡಿಸಿಕೊಳ್ಳುವವರಿಗೆ
    ಎಣಿಸಲಾರದ ವಿನಿಮಯದಲಿ ಸೂರ್ಯಶಾಪದ ಹೊತ್ತು
    ಬೆಳಕಾದರೆ ಕತ್ತಲೆನಿಸುವ ಸೂಯಾಸ್ತವಾದರೇನೆ ಕೋರೈಸುವ
    ಗಳಿಗೆಗಳ ಕಾಣಬೇಕಾದ ಸೂರ್ಯನೆ…ಬೆಳಕಿನ ಗೋಲವೇ..
    ನಿನ್ನ ಒಡಲಿನಲೂ ಕತ್ತಲು ಮೂಡಲು….
    ಓರೆಕೋರೆಗಳು ಝಗಮಗಿಸಲು, ತಬ್ಬಿದ ಮಲೆಯ ಮಧ್ಯದೊಳಗೆ
    ಅರ್ಬುತನು ಜಗಿಜಗಿದು ನುಂಗಿನೊಣೆಯಲು
    ಅಮೃತತ್ವ ನಿರಂತರ…

  2. S.p.vijaya Lakshmi

    S.P.Vijaya lakshmi
    Thank you so much Avadhi…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading