ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇಶವೆಂದರೆ ಸುಮ್ಮನೇ ಅಲ್ಲ

-ಜಿ.ಪಿ.ಬಸವರಾಜು

ಉರಿಯುತ್ತಲೇ ಇದೆ ಜ್ವಾಲೆ ಹಳದಿಯಾಗಿ
ಹರಿಯುತ್ತಲೇ ಇದೆ ನೀರು ಕೆಂಪೊ ಕೆಂಪಾಗಿ
ಉಸಿರು ಕಟ್ಟಿ ತತ್ತರಿಸುತ್ತಿದೆ ಅಳಿದುಳಿದ ಹಸಿರು
ಸೂರ್ಯನಿನ್ನೂ ಹೊರಬಂದಿಲ್ಲ ಮೂಡಲಲ್ಲಿ
ಝಂಡಾ ಹಾರಿಸಿದವರು ಹಾಡುತ್ತಿದ್ದಾರೆ ದನಿಯ
ಎತ್ತರಿಸಿ ಮುಗಿಲಿಗೆ ಎಂದಿನಂತೆ ಸಲ್ಲಿಸಿ ವಂದನೆಯ

ವಿಷ ತುಂಬಿದೆ ಎದೆಯಲ್ಲಿ, ತುಟಿಗೆ ಸಿಹಿ ಮುಲಾಮು
ಬ್ಯಾಂಡು ಬಾರಿಸಿದರೆ ಮಾತು ಕೇಳುವುದಿಲ್ಲ ದೇಶ-
ಪ್ರೇಮದ ಗೀತೆ ಅನುರಣಿಸಬೇಕು ಬೀದಿ ಬೀದಿಯಲ್ಲಿ
ʼದೊಣ್ಣೆಬೇಕೆ ಕವಾಯಿತಿಗೆ?ʼ ತಲೆಹರಟೆ ಬೇಡ ಸುಮ್ಮನೆ
ಹೆಜ್ಜೆ ಹಾಕು ದೇಶದ್ರೋಹಕೆ ಎಂಥ ಶಿಕ್ಷೆ ಗೊತ್ತಿರಬೇಕು

ಎಲ್ಲೊ ಹೊಗೆ ಮತ್ತೆಲ್ಲೊ ಬೆಂಕಿ, ಬೇಯುತ್ತಿವೆ
ಅನಾಥ ಹೆಣ, ಗಲ್ಲಿ ಗಲ್ಲಿಗಳಲ್ಲಿ ಗುಲ್ಲು, ನೋವಿಗೆ
ಬಾಯಿಲ್ಲ, ಅಳುವುದಕೂ ಬೇಕು ಪರವಾನಗಿ ಬೀದಿ-
ಯಲ್ಲಿ; ನಿಮ್ಮ ಊರು ನಿಮ್ಮ ಬೀದಿ ನಿಮ್ಮ ನೆಲ
ಎಂಬ ಭ್ರಾಂತಿಯ ಬಿಡಿ, ಬಿಕ್ಕಟ್ಟಿನಲ್ಲಿದೆ ದೇಶ

ಕೋಶ ಓದಲು ಅಕ್ಷರ ಯಾಕೆ ? ಅಕ್ಷರ ಕಳೆದು
ಕಾಲವಾಗಿದೆ, ಹೇಳಿಕೊಡುತ್ತಾರೆ ಎಲ್ಲವನು
ಅವರು, ಹಾಡಿದ್ದನ್ನು ಹಾಡಬೇಕು ಕಿಸಬಾಯಿ

ದೇಶವೆಂದರೆ ಸುಮ್ಮನೇ ಅಲ್ಲ
ಅಲ್ಲ ನೀನೊಬ್ಬನೇ, ಒಂದಾಗು
ನಾವೆಲ್ಲ ಒಂದು- ಹಿಂದೂ, ಮುಂದೂ

‍ಲೇಖಕರು Admin

17 August, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading