ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವು ಮಾಕೊಂಡ ಕವಿತೆ- ಆಫ್ರಿಕಾದ ಚಿರತೆ..

ದೇವು ಮಾಕೊಂಡ

ಕಾಡಿನಲ್ಲಿ ರಾಜನೊಬ್ಬ
ಶೋಕಿಗಾಗಿ ಅಲೆದಾಡಿ ಹಿಡಿದ
ಚಿರತೆಯೊಂದು ಮರ, ಕಾಡು ತಿರುಗಿ ಮಲಗಿತ್ತು
ಮೂರೇ ಮೂರು ಮರಿಗಳ ಜನ್ಮವಿತ್ತು

ಆಹಾ
ಮೈತುಂಬಾ ಹೊಳಪುಳ್ಳ ಕಣ್ಣುಗಳು
ದೇವಲೋಕದ ದಯಾ ನಿಧಿ ಬಣ್ಣಗಳು
ಕಾಡಿಗೆ ಕಾಡೇ ಬೆರಗಾಗಿತ್ತು
ಚೆಲುವಿಗೆ ಅದರ ನಿಲುವಿಗೆ

ಎತ್ತರದ ನಿಲುವು
ಜಗದಾಳುವ ಕಣ್ಣು
ಯಾರಿಗೆ ಕಾಯುತ್ತಿತ್ತು ಒಲವಿನ ಕಾಡು ಮರೆತು?

ವಕ್ರಗಾಳಿ ನೂಕುತಿತ್ತು ಅದರ ಎದೆಯ ಒಳಸುಳಿಗೆ
ಬೇಟೆ ದಾಟಿ ಬಂದವನ ಕೈಗಳಿಗೂ
ನಡುಕ ಸುರವಿಟ್ಟುಕೊಂಡಾಗ
ಹೋಮದ ಹೊಗೆಯಾದರೂ ಏನು ಮಾಡಿತು?
ಎಷ್ಟೊಂದು ಆಳಿದ ಚೆಲುವ,
ಉರ್ಧ್ವಮುಖ ಬೀಸಿದ ಚಂಚಲ ಗಾಳಿ
ಆತ್ಮ ನಲುಗಿತು ಮೇಲೆ
ಕೆಳಗೆ

ಆಫ್ರಿಕಾದ ಕಾಡು,
ಇಂಡಿಯಾದ ಗಾಳಿ
ಬೇಟೆಯಾಗಿ ನಿಂತ ಬೇಟೆಗಾರ
ಸಹರಾ ಕಾಡು, ಥಾರ್ ಮರಭೂಮಿ,
ಬಿಸಿಲ ಲೆಕ್ಕಿಸದೆ ಹಲ್ಲುಗೀರಿ ನಿಂತ
ಎರಡು ಬದಿಯ ವಿರಳಾತಿವಿರಳ
ಪೋಷಕ ಮರ ಗಿಡ, ವ್ಯಘ್ರ ನಗು

ಆಡಳಿತ ಪ್ರಜಾಸೇವೆ ನರ್ತಿಸುತ್ತಿದ್ದವು
ಸೆರೆ ಹಿಡಿದ ಕ್ಯಾಮೆರಾದಲ್ಲಿ
ಚಿರತೆಯ ಪಾತ್ರವೇನಿಗ ಎಂದವನಿಗೊಂದು
ಚುಟುಕು ಉತ್ತರ
ವಿಚ್ಛೇದಿತಗೊಂಡವರ ಪರಸ್ಪರ ಭ್ರೂಣ ವರ್ಗಾವಣೆ,
ಅಂತಃರ ತಳಿಗಳ ಬಾಣಂತಿಯ ಪ್ರಸವ ಪ್ರಯೋಗ

ಕಾಡಿನಲ್ಲಿ ರಾಜನೊಬ್ಬ
ಶೋಕಿಗಾಗಿ ಅಲೆದಾಡಿ ಹಿಡಿದ
ಚಿರತೆಯೊಂದು ಮರ, ಕಾಡು ತಿರುಗಿ ಮಲಗಿತ್ತು
ಮೂರೇ ಮೂರು ಮರಿಗಳ ಜನ್ಮವಿತ್ತು

‍ಲೇಖಕರು avadhi

22 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading