ಮೂಲ – ಬಶೀರ್ ಬದ್ರ್
ಕನ್ನಡಕ್ಕೆ – ಎಸ್. ಸಿರಾಜ್ ಅಹಮದ್
1
ಧುಮುಗುಡುತ್ತಿರುವ ನೀರಿನಲ್ಲಿ ಯಾರದೋ ಕೂಗು ಕೇಳುತ್ತಿದೆ
ಸಮುದ್ರದ ಆಳದಲ್ಲಿ ಯಾರೋ ಜೋರಾಗಿ ಅಳುತ್ತಿದ್ದಾರೆ
ನೂರಾರು ಸುಂದರ ಬೆಳಗುಗಳನ್ನು ನಾನು ನೋಡಿರುವೆ
ಆ ದೇವರ ಮುಖ ಎಲ್ಲ ಕಡೆ ಚೆಲ್ಲಿರುವುದು ಕಣ್ಣುಗಳಿಗೆ ಕಾಣಿಸಿದೆ
ಕತ್ತಲ ರಾತ್ರಿಯಲ್ಲಿನ ನಡೆದುಹೋದ ಒಬ್ಬಂಟಿ ದಾರಿಹೋಕ
ಈಗ ನನ್ನ ರೆಪ್ಪೆಗಳ ಮೇಲೆ ಭಯಗೊಂಡು ನಿಂತಿದ್ದಾನೆ
ಬಾಚಿಕೊಳ್ಳಿ ಇನ್ನಷ್ಟು ಎದೆಯಲ್ಲಿ ಬಚ್ಚಿಟ್ಟುಕೊಳ್ಳಿ
ಇಲ್ಲಿ ನಿಶ್ಶಬ್ದ ಬಹಳ ವಿಶಾಲವಾಗಿ ಹರಡಿಕೊಂಡಿದೆ
ತೇಲುತ್ತ ಮಿಂಚುವ ಕೆಂಪು ಮೀನಿಗೆ ಮಾತ್ರ ಹಕೀಕತ್ತು ತಿಳಿದಿದೆ
ಸಮುದ್ರ ಎಂಥಾ ಮುದಿ ದೇವರೆಂಬುದನ್ನು ಆಳದಲ್ಲಿ ನೋಡಿದೆ
ಬೆಳೆದಿರುವ ಗೋಧಿಯ ಹೊಲದಿಂದ ಬರುವ ಪರಿಮಳ ಕೂಗುತ್ತಿದೆ
ನೋಡಿ ನನ್ನ ಮೈಯೆಲ್ಲ ಹೇಗೆ ಬಂಗಾರವಾಗಿದೆ ಎಂದು ಹೇಳುತ್ತಿದೆ
ನಮ್ಮ ಹಿತ್ತಲ ಗಿಡದ ನಿನ್ನೆ ಮೊನ್ನೆಯ ಚಿಗುರು
ತಂಗಾಳಿಯ ತುಟಿಗಳನ್ನು ಮತ್ತೆ ಮತ್ತೆ ಚುಂಬಿಸುತ್ತಿದೆ
ನನಗೆ ಈ ನೀಲಿ ಕಣ್ಣುಗಳು ಹೇಳಿವೆ
ನಿನ್ನ ಹೆಸರು ನೀರಿನ ಪರದೆಯ ಮೇಲೆ ಬರೆದಿದೆ
2
ಹಾರಲು ಬಿಡಿ ಹಕ್ಕಿಗಳನ್ನು ಎಲ್ಲ ಎಲ್ಲೆಗಳ ಮೀರಿದ ಆಕಾಶದಲ್ಲಿ
ಹೇಗಿದ್ದರೂ ಮರಳಿಬರಲು ಬಾಲ್ಯದ ಗದ್ದೆ ಬಯಲುಗಳು ಇರುವುದಿಲ್ಲ
ನನ್ನನ್ನು ಇಷ್ಟಪಡುವವರು ನಾನೊಂದು ಕಲ್ಲು ಎನ್ನುತ್ತಾರಲ್ಲ
ನಾನೆಷ್ಟು ಮೆದು ಮಲ್ಲಿಗೆಯೆಂದರೆ ಅವರಾರೂ ನನ್ನ ಮುಟ್ಟಿ ನೋಡಿಯೇ ಇಲ್ಲ
ಇಲ್ಲಿ ಬಟ್ಟೆಗಳಿಗಿರುವ ಕಿಮ್ಮತ್ತು ಮನುಷ್ಯರಿಗಿಲ್ಲ
ನನಗೆ ಗ್ಲಾಸು ಮಾತ್ರ ದೊಡ್ಡದೇ ಇರಲಿ ಶರಾಬು ಕಡಿಮೆ ಇದ್ದರೂ ಪರವಾಗಿಲ್ಲ
ಇಬ್ಬನಿಯ ಮಾತುಗಳನ್ನು ಕವಿತೆಗಳಲ್ಲಿ ಕಾಣಬೇಕು
ಚಿಟ್ಟೆಗಳ ಕತೆಯನ್ನು ಹೂವುಗಳ ಬಾಯಲ್ಲಿ ಕೇಳಬೇಕು
ನನ್ನ ನೂರಾರು ಕವಿತೆಗಳು ಕಾಗದಗಳ ಸಮಾಧಿಯಲ್ಲಿ ಹೂತುಹೋಗಿವೆ
ಎಂಥ ತಾಯಿಯೋ ನಾನು? ಎಷ್ಟೊಂದು ಮಕ್ಕಳು ಹುಟ್ಟಿದರೂ ಬದುಕದೇ ಹೋಗಿವೆ.
ಹೃದಯ ಈಗ ಪಾಳುಮನೆಯಂತಾಗಿದೆ
ಇಲ್ಲಿಗೆ ರಾತ್ರಿ ಯಾರೂ ಕಳೆಯಲು ಬರುವುದೇ ಇಲ್ಲ
ದ್ವೇಷದ ದಾರಿ ನಾಲ್ಕು ಹೆಜ್ಜೆ ಮಾತ್ರ
ಅಷ್ಟು ನಡೆಯುವಷ್ಟರಲ್ಲಿ ನಾನೂ ಸುಸ್ತು ನೀನೂ ಸುಸ್ತು
ಶತ್ರುತ್ವದಿಂದ ನನ್ನ ವ್ಯಕ್ತಿತ್ವಕ್ಕೆ ಬಹಳ ಘನತೆ ಸಿಕ್ಕಿದೆ
ಶತ್ರುಗಳಿಗೆ ಎಷ್ಟು ಗೌರವಕೊಡುತ್ತೇನೆಂಬುದನ್ನು ನನ್ನಿಂದ ನೋಡಿ ಕಲಿಯಬೇಕಾಗಿದೆ
ನನ್ನ ಕೈಲಿರುವ ಹೂಗುಚ್ಛಗಳು ಯಾರದೋ ಬಳುವಳಿಯಿಂದ ಸಿಕ್ಕಿವೆ
ನೀವ್ಯಾರೂ ನಾನು ಮಲಗಿರುವ ಮುಳ್ಳಿನ ಹಾಸಿಗೆಯನ್ನು ನೋಡಿಯೇ ಇಲ್ಲ
ಯಾವತ್ತಿನಿಂದ ನನ್ನ ಗುರಿಯ ದಿಕ್ಕು ಹಿಡಿದುಹೊರಟೆನೋ
ಅವತ್ತಿನಿಂದ ನನಗೆ ಮೈಲಿಕಲ್ಲುಗಳು ಕಾಣಿಸುತ್ತಲೇ ಇಲ್ಲ
ಕಣ್ಣುಗಳಿಗೆ ಕವಿತೆಯ ನಯನಾಜೂಕು ಕಲಿಸೋಣ
ಜೋರಾಗಿ ಅತ್ತರೂ ಕಣ್ಣೀರು ಕಾಣಿಸದಂತೆ ನೋಡಿಕೊಳ್ಳೋಣ
ನಾನೊಬ್ಬ ದಾರಿಹೋಕ ನಿನ್ನಂತೆಯೇ
ಯಾವುದಾದರೂ ತಿರುವಿನಲ್ಲಿ ನೀನು ಸಿಕ್ಕೇ ಸಿಗುತ್ತೀಯಾ!
ಬದುಕೇ ನೀನು ನನಗೆ ಸಮಾಧಿಗಿಂತ ಇಕ್ಕಟ್ಟಾದ ತಾವು ಕೊಟ್ಟಿದ್ದೀಯಾ
ಕಾಲು ಚಾಚಿದೆ ನೋಡು, ಗೋಡೆ ತಲೆಗೆ ಬಡಿಯುತ್ತಿದೆ…!
ಪುಸ್ತಕದ ಪುಟಗಳಲ್ಲಿ ಸಿಕ್ಕಿ ಹುಳುಗಳು ಅಪ್ಪಚ್ಚಿಯಾಗಿವೆ
ಓದದೆ ಬರೆಯದೆ ಯಾರೋ ಮೂರ್ಖರು ಹುತಾತ್ಮರಾದ ಹಾಗಿದೆ
ಮಲ್ಲಿಗೆಯ ಬೆಳದಿಂಗಳು ಭೂಮಿಯ ಮೇಲೆಲ್ಲ ಹಬ್ಬಿದೆ
ದೇವರೂ ಸಹ ಯಾರದೋ ಪ್ರೇಮಕ್ಕೆ ಬಿದ್ದು ಮುಗುಳ್ನಗುತ್ತಿರುವಂತಿದೆ
ಏಳೇಳು ಪಾತಾಳಗಳಲ್ಲಿ ಜಗತ್ತಿನ ದ್ವೇಷವನ್ನೆಲ್ಲ ಹೂತು ಹಾಕಿಬಿಡೋಣ
ಇವತ್ತು ಬದುಕಲು ಮನುಷ್ಯನಿಗೆ ಪ್ರೀತಿ ಬಿಟ್ಟು ಬೇರೇನೂ ಬೇಕಿಲ್ಲ ಕಾರಣ
ಇದೇ ರಸ್ತೆಗಳಲ್ಲಿ ನಡೆದಿದ್ದೆ ಬಹಳ ಸಾರಿ ನಿನ್ನ ಜೊತೆಯಲ್ಲಿ
ಅವು ಈಗ ನನ್ನ ಮತ್ತೆ ಮತ್ತೆ ನಿಲ್ಲಿಸಿ ಕೇಳುತ್ತಿವೆ, ಎಲ್ಲಿ ನಿನ್ನ ಜೊತೆಗಾರ ಕಾಣುತ್ತಿಲ್ಲ?
ಒಂದು ಮನೆ ಕಟ್ಟುವಷ್ಟರಲ್ಲಿ ಜನ ಹೈರಾಣವಾಗಿ ಬಿಡುತ್ತಾರೆ
ಎಲ್ಲ ಸೇರಿ ಮನೆ ಮಠ ಹಳ್ಳಿಗಳನ್ನೇ ಸುಡುತ್ತೀರಲ್ಲ ನೀವು ಮನುಷ್ಯರಂತೂ ಅಲ್ಲ
ಮನೆಯ ಮುಂದೆ ಅವರ ಹೆಸರುಗಳನ್ನು ಅವರ ಹುದ್ದೆಗಳನ್ನು ಕೆತ್ತಿದ್ದರು
ನಾನು ಬಹಳ ಹುಡುಕಿನೋಡಿದೆ ಮನುಷ್ಯರ ಸುಳಿವೇ ಇರಲಿಲ್ಲ
ನಾನು ಎಲ್ಲಿ ಹೋದರೂ ಅಪರಿಚಿತನಾಗಿಯೇ ಇರುತ್ತೇನೆ
ಇಲ್ಲಿ ಎಲ್ಲರೂ ದೇವತೆಗಳೇ, ನಾನೊಬ್ಬ ಮನುಷ್ಯನಾಗಿದ್ದೇನೆ
ನಾನು ರಭಸದಿಂದ ಹರಿಯುವ ಸಮುದ್ರದಂತೆ, ಎಲ್ಲ ಉಪಾಯಗಳೂ ಗೊತ್ತಿವೆ
ಯಾವ ಕಡೆ ಹರಿಯುವೆನೋ ಅಲ್ಲೇ ದಾರಿಗಳು ಹುಟ್ಟಿಕೊಳ್ಳುತ್ತವೆ
ನಾನು ಮಾತು ನಿಲ್ಲಿಸಿದೆ ಚಲಿಸುವ ಗಾಳಿಯೂ ನಿಂತುಹೋಯಿತು
ಭಾವನೆಗಳ ಸಂಕಟದ ಭಾಷೆ ಎಲ್ಲರಿಗೂ ಗೊತ್ತಾಯಿತು
ನೆನಪುಗಳ ಬೆಳಕು ಎಂದಿಗೂ ನಮ್ಮ ಜೊತೆಯಲ್ಲಿಯೇ ಇರಲಿ
ಯಾರಿಗೆ ಗೊತ್ತು ಬದುಕಿನ ಯಾವ ತಿರುವಿನಲ್ಲಿ ಬರುವುದೋ ಕತ್ತಲು ಕವಿಯುವ ಹೊತ್ತು
ಎಷ್ಟೊಂದು ಸುಂದರವಾಗಿವೆ ಈ ದಾರಿಗಳು ಇಲ್ಲಿ ನಾನು ಕಳೆದೇಹೋಗುವೆ
ಎಲ್ಲಿ ಆಯಾಸವಾಗುವುದೋ ಅಲ್ಲಿ ನಿದ್ದೆ ಹೋಗುವೆ
ಎಷ್ಟು ಕಾಲದಿಂದ ಹಠ ಹಿಡಿದು ಕಾಯುತ್ತಿದ್ದೇನೆ
ಚಂದ್ರ ಬಂದು ಕರೆದುಕೊಂಡು ಹೋಗುವುದಾದರೆ ಮಾತ್ರ ಬರುತ್ತೇನೆಂದು ಯಾವತ್ತೋ ಹೇಳಿಬಿಟ್ಟಿದ್ದೇನೆ
ನನಗೆ ದೇವರು ಕವಿತೆಗಳ ಕಿರೀಟ ತೊಡಿಸಿದ್ದಾನೆ
ನಾನು ಪದಗಳ ಈ ಸಾಮ್ರಾಜ್ಯವನ್ನು ಪ್ರೇಮದ ಹೆಸರಿಗೆ ಅರ್ಪಿಸುತ್ತಿದ್ದೇನೆ






0 Comments