ದೇವರೇ ! ದೇವರೇ! ಯಾಕೆನ್ನ ಕೈಬಿಟ್ಟೆ ?

ಗಿರಿಜಾ ಶಾಸ್ತ್ರಿ  

ಗೋವಿಂದ್ ಪೈ ಅವರ “ಗೊಲ್ಗೊಥಾ” ಕಾವ್ಯವನ್ನು ಓದಿ ಮುಗಿಸಿ ಪುಸ್ತಕವನ್ನು ಮುಚ್ಚಿದಾಕ್ಷಣ ತೆರೆದುಕೊಂಡದ್ದು ಮಗ್ದಲದ ಮೇರಿಯ ಅಸಹಾಯ ಮುಖ. ಹೆಲೆನಾ, ಕ್ಲಿಯೋಪಾತ್ರರನ್ನು ಮೀರಿಸುವಂತಹ, ಯಾವ ಚಕ್ರವರ್ತಿಯಾದರೂ ತನ್ನ ಪಟ್ಟದರಸಿಯನ್ನಾಗಿ ಮಾಡಿಕೊಳ್ಳಲು ಬಯಸುವಂತಹ ಸುಂದರಿ ಆಕೆ. ಅಂತಹವಳು ತನ್ನದೆಲ್ಲವ ಬಿಟ್ಟು ಯೇಸುವಿಗೆ ಮನಸೋತು ಅವನ ಹಿಂದೆ ಅನುಯಾಯಿಯಾಗಿ ಬಂದು ಬಡತನವನ್ನು ಅಪ್ಪಿಕೊಂಡಿದ್ದಳು. ಅವಳ ಮುಖ ಕೂತಲ್ಲಿ ನಿಂತಲ್ಲಿ ಹಟತೊಟ್ಟು ಎಡಬಿಡದೆ ನನ್ನನ್ನು ಹಿಂಬಾಲಿಸುತ್ತಿತ್ತು.

ಬಡಿದ ಬಾಸುಂಡೆಗಳಿಂದ ಮುಳ್ಳಿನ ಕಿರೀಟದಿಂದ ಸೋರುತ್ತಿರುವ ರಕ್ತ! ನಜರೇತಿನ ರಾಜ “ಎಲೀ! ಎಲೀ! ಲಮ್ಮಾ ಸಬಖ್ಥಾನೀ?” (ದೇವರೇ ! ದೇವರೇ ! ಯಾಕೆನ್ನ ಕೈಬಿಟ್ಟೆ?) ಎಂದು ಆರ್ತನಾ ಗೈಯುತ್ತಲೇ, ಹಸಿವು, ನೀರಡಿಕೆ ನೋವುಗಳಿಂದ ಬಳಲಿದ ತೇಜಸ್ವಿ ಯುವಕ ಯೇಸು “ತಂದೆಯೇ ಮಮಾತ್ಮವಂ ನಿನ್ನ ಕೈಗೊಪ್ಪಿಸುವೆ” ಎಂಬಂತೆ ಅನಂತದಲ್ಲಿ ಲೀನವಾಗಿದ್ದಾನೆ. “ಧರ್ಮಪತಾಕೆಯಂತೆ ನಡುಸಿಲುಬೆಯಲಿ ಚಾಚಿದ” ಮತ್ತೊಬ್ಬ ಸೂರ್ಯನನ್ನು ಕಂಡು ಸೂರ್ಯದೇವನು ಅಸ್ತಮಿಸಿದ್ದಾನೆ. ಮೇಲೆ ಬಂದ ಚಂದ್ರ ಸತ್ಯಲೋಕದ ದೊರೆಗೆ ‘ಬೆಳ್ಗೊಡೆಯನ್ನು’ ಹಿಡಿದಿದ್ದಾನೆ.

ನೆರೆದವರೆಲ್ಲಾ ಕೊಕ್ಕರೆಗಳಂತೆ ಹಿಂಡು ಹಿಂಡಾಗಿ ಮನೆಗಳಿಗೆ ತೆರಳಿದ್ದಾರೆ. ಕಪಾಲಸ್ಥಾನದಲ್ಲಿ (ಗೊಲ್ಗೊಥಾ) ಕತ್ತಲು ನಿಧಾನ ಆವರಿಸುತ್ತಿದೆ. ಯಾವುದೇ ಸದ್ದಿಲ್ಲ. ಸುಳಿವಿಲ್ಲ. ಕೇವಲ ಅಸಹ್ಯ ಮೌನ ! ಗಾಢ ನೀರವತೆ ! ಆ ನೀರವತೆಯೇ ಮೂರ್ತಿವೆತ್ತಂತೆ ಮೇರಿ ಮ್ಯಾಗ್ಡಲೀನ ಕಲ್ಲುಗೊಂಬೆಯಂತೆ ಅನತಿ ದೂರದಲ್ಲಿ ಔದಂಬರ ವೃಕ್ಷದ ಕೆಳಗೆ ಒಬ್ಬಳೇ ಮೈಮರೆತು ಕುಳಿತಿದ್ದಾಳೆ.

ಅವಳ ಕಣ್ಣುಗಳಲ್ಲಿ ಈವರೆಗೆ ಇದ್ದ ಕಾಯುವಿಕೆ ಇಂಗಿಹೋಗಿದೆ. ಈಗ ಕೇವಲ ಬರೀ ನೆಟ್ಟ ನೋಟ ಶಿಲುಬೆಯ ಕಡೆಗೆ.- “ಮುಗಿಲಿಗಾಗಿ ಕಾತರಿಸುವ ಶರತ್ಕಾಲದ ನವಿಲಂತೆ.” ಯಾಕೆಂದರೆ ಈಗ ಬೇಕಾಗಿರುವುದು ಮಳೆ ! ಆ ಪ್ರೇಮಿಯೊಳಗೆ ಒಬ್ಬ ತಾಯಿ ಕೂಡ ಇದ್ದಾಳೆ, ಆ ತಾಯಿಯ ಸಂಕಟ ಹಿಂಗಬೇಕಾಗಿದೆ. ಅವಳು ಕೊನೆಯ ತೀರ್ಪಿನ ದಿನದಿಂದಲೂ ಹೀಗೆಯೇ ನಿಶ್ಚಲವಾಗಿ ಕುಳಿತಿದ್ದಿರಬಹದು.

ಯಹೂದಿಗಳಲ್ಲಿ ಮರಣದಂಡನೆ ಇಲ್ಲವಾದುದರಿಂದ ಯೇಸುವನ್ನು ರೋಮನ್ನರ ಪ್ರತಿನಿಧಿ ಪಿಲಾತನಿಗೆ ಒಪ್ಪಿಸಲಾಗುತ್ತದೆ. ಪಿಲಾತನಿಗೆ ಗೊತ್ತಿದೆ ಏಸು ಹೇಳುತ್ತಿರುವ ರಾಜ್ಯ ಯಹೂದಿಗಳದ್ದಲ್ಲ. ಅವನು ಹೇಳುವ ಲೋಕ ಬೇರೆಯೇ ಆದದ್ದು ,ಅದು ಸತ್ಯ ಲೋಕ. ಆ ಲೋಕದ ರಾಜ ಅವನು. ಆದುದರಿಂದ ಅವನು ನಿರಪರಾಧಿ, ಅವನನ್ನು ಬಿಟ್ಟುಬಿಡಬಹದು ಎಂದು ತೀರ್ಮಾನಿಸುತ್ತಾನೆ. ಆದರೆ ಅವನ ಬದಲಾಗಿ ಒಬ್ಬ ಕೊಲೆಗಾರನನ್ನು ಬಿಡಬೇಕೆಂದು ಜನ ಒತ್ತಾಯಿಸುತ್ತಾರೆ. ಕ್ರಿಸ್ತನಿಗೆ ಮರಣದಂಡನೆ ಆಗಲೇಬೇಕೆಂದು ಹಟ ಹಿಡಿಯುತ್ತಾರೆ.

ಸಮೂಹಸನ್ನಿಗೆ ಹೆದರಿ ಏಸುವಿಗೆ ಶಿಲುಬೆಯೇರಿಸುವ ತೀರ್ಪು ನೀಡಿ, ಒಬ್ಬ ನಿರಪರಾಧಿಯನ್ನು ಗಲ್ಲಿಗೇರಿಸುವ ಪಾಪಕ್ಕೆ ಹೆದರಿ ತನ್ನ ರಕ್ತ ಸಿಕ್ತ ಕೈಗಳನ್ನು ತೊಳೆದುಕೊಂಡು ಅವನನ್ನು ಸೈನಿಕರ ಸುಪರ್ದಿಗೆ ಒಪ್ಪಿಸಿ ಮಧ್ಯಾಹ್ನದ ಊಟದ ನೆಪಮಾಡಿಕೊಂಡು ಪಿಲಾತ ಅವಸರವಾಗಿ ಮನೆಗೆ ತೆರಳುತ್ತಾನೆ. ಯಾಕೆಂದರೆ ಅವನಿಗೆ ಕೂಡ ಮುಂದೆ ಜರಗುಲಿರುವ ಅಮಾನುಷ ಕೃತ್ಯವನ್ನು ನೋಡಲಾಗುವುದಿಲ್ಲ.

ಪಿಲಾತನಂತಹ ನಿಷ್ಠುರ ನ್ಯಾಯವಾದಿಗೆ ಕೂಡ ನೋಡಲು ಸಾಧ್ಯವಾಗದಂತಹ ಬರ್ಬರ ಕೃತ್ಯವನ್ನು ನೋಡಲು ಒಬ್ಬ ಹೆಣ್ಣಿಗೆ ಸಾಧ್ಯವಾಗಿದೆ.

ಅದನ್ನು ಈಕ್ಷಿಸುವ ತಾಕತ್ತನ್ನು ಅದಾವ ದೈತ್ಯ ಶಕ್ತಿ ಮಗ್ದಲದ ಮೇರಿಗೆ ಕೊಟ್ಟಿರಬಹದು? “ಹದ್ದು ಬಿಗಿಹಿಡಿದ ಹಕ್ಕಿಯಂತೆ, ಪಡುವಣದಿ ಬಿಳಿಯ ಬಿದಿಗೆ ಚಂದ್ರನಂತೆ ಬಿಲ್ಲಿಗೆ ತೊಟ್ಟ ಸರಳಂತೆ, ಮರಣ ವೃಕ್ಷದೊಳ ಮೃತಫಲದಂತೆ” ಏಸು ಶಿಲುಬೆಯ ಮೇಲೆ ತೂಗುತ್ತಿದ್ದ್ದನಂತೆ. ಆ ತಲೆಬುರುಡೆಗಳ ನಡುವೆ (ಕಪಾಲಸ್ಥಾನ) ಮೇರಿ ಶಿಲುಬೆಯನ್ನೇ ನೋಡುತ್ತಾ ಒಬ್ಬಳೇ ಇಡೀ ರಾತ್ರಿಯನ್ನು ಔದಂಬರ ವೃಕ್ಷದ ಕೆಳಗೆ ನೂಕಿದ್ದಾಳೆ. ಅಷ್ಟರಲಿ “ಆದಿತ್ಯನ ನವಪ್ರಭೋದನದ ಮುಂಗೋಳಿ ಕೂಗುತ್ತದೆ”. ನೋವನ್ನು ಅನುಭವಿಸುವುದು ಒಂದು ಕಷ್ಟವಾದರೆ ಅದನ್ನು ದೂರ ನಿಂತು ನೋಡುವುದು ಇನ್ನೊಂದು ಕಷ್ಟ. ಒಂದು ನಮ್ಮನ್ನು ಬಲಿಪಶುವನ್ನಾಗಿ ಮಾಡಿದರೆ ಇನ್ನೊಂದು ಅಸಹಾಯಕತೆಗೆ ತಳ್ಳಿಬಿಡುತ್ತದೆ.

ನಮ್ಮ ಇಂದ್ರಿಯಗಳಿಂದ ನಮ್ಮನ್ನು disconnect ಮಾಡಿಕೊಂಡು ಬಿಡುವ ಪರಿಕಲ್ಪನೆಯೊಂದು ನೋವಿನ ಇಂತಹ ಸಂದರ್ಭದಲ್ಲಿ ಎಂತಹ ಅದ್ಭುತವಾದ ಸುಖವನ್ನು ಕೊಡಬಲ್ಲುದು. ನಿಜವಾಗಿ ಸುಖವೆಂದರೆ ಇದೇ ಏನೋ. ನೋವಿನಿಂದ ಮುಕ್ತವಾಗಿ ಬದುಕುವುದು, ಮತ್ತು ಹಾಗೆ ಬದುಕುತ್ತಲೇ ಕೂತು ಕೂತೇ ಕಂತೆ ಒಗೆದುಬಿಡುವುದು.

ಶಿಲುಬೆಯ ಮೇಲೆ ತೂಗಾಡುವ ಯೇಸುವಿಗೆ ‘ಸಾವಿರ ಚೇಳುಗಳು ಒಮ್ಮೆಲೆ ಕುಟುಕಿದ ಯಾತನೆ. ನರನರಂಗಳಲಿ ಕುದಿವ ವೇದನೆ’ ಇಂತಹ ಯಾತನೆಯಿಂದ ತನ್ನನ್ನು ತಾನು disconnect ಮಾಡಿಕೊಂಡು ತನ್ನ ನೋವಿಗೆ ತಾನೇ ಸಾಕ್ಷಿಯಾಗಿ ನಿಂತು ಬಿಟ್ಟ ! ಸತ್ಯದ ನಿಷ್ಠುರತೆಯೆಂದರೆ ಇದುವೇ ಏನೋ? ಅವನು “ಎಲೀ! ಎಲೀ ! ಲಮ್ಮಾ ಸಬಖ್ತಾನೀ? (ದೇವರೇ ದೇವರೇ ಯಾಕೆನ್ನ ಕೈಬಿಟ್ಟೆ?) ಎಂದು ಆರ್ತನಾದಗೈದದ್ದು ತನ್ನ ನೋವಿಗಾಗಿ ಅಲ್ಲವೇ ಅಲ್ಲ. ‘ಕ್ಷಮಿಸಿವರನೆಲೆ ತಂದೆ’ ಎಂದು ಹೆರವರ ಅಜ್ಞಾನಕ್ಕಾಗಿ ನೋವಿಗಾಗಿ ದುಃಖಿಸಿದ. ಸುತ್ತ ಮುತ್ತ ಗೋಳಾಡುವ ಮಹಿಳೆಯರ ಕುರಿತು ‘ಯರೂಸಲೇಮ ದುಹಿತೆಯರಿರಾ ! ನನಗೆ ಗೋಳಾಡದಿರಿ, ನಿಮಗಾಗಿ ನಿಮ್ಮ ಮಕ್ಕಳಿಗಾಗಿ ಗೋಳಾಡಿರಿ’ ಎನ್ನುತ್ತಾನೆ.

ಕ್ಷಮಿಸು ಅವರನು ತಂದೆ ಎಂದು ನೀನು ಹೇಳಿದೆ. ಇವರನ್ನೆಲ್ಲಾ ಕ್ಷಮಿಸಬೇಕೆ? ಇಂತಹ ಪಾತಕಿಗಳನ್ನು ಪ್ರೀತಿಸ ಬೇಕೇ, ಹೇಳು? ಎಂದು ಟಾಗೋರರು ಯೇಸುವನ್ನು ಕೇಳುತ್ತಾರೆ. ಯಾವಾಗಲೂ ಹೀಗೆ ಪ್ರೇಮ, ಕರುಣೆ, ಕ್ಷಮೆ, ಅಹಿಂಸೆಯಂತಹ ಮೌಲ್ಯಗಳನ್ನು ಆತುಕೊಳ್ಳುವುದೆಂದರೆ, ಅವುಗಳನ್ನು ಸಾಬೀತು ಪಡಿಸುವುದೆಂದರೆ ದ್ವೇಶ, ಕ್ರೌರ್ಯ, ಅಕ್ಷಮ್ಯತೆ, ಅಹಿಂಸೆಯ ಅಗ್ನಿ ದಿವ್ಯಗಳಿಗೆ ಒಡ್ಡಿಕೊಳ್ಳುವುದು.

ಸತ್ಯವನ್ನು ಅಸತ್ಯದೊಂದಿಗೆ ಒರೆಹಚ್ಚುವುದು. ಪ್ರೇಮಕ್ಕೆ ಪ್ರಮಾಣ ಪತ್ರ ಒದಿಗಿಸುವುದು ದ್ವೇಶವೇ. ದೇವರು ಕೈಬಿಟ್ಟದ್ದು ಯೇಸುವನ್ನಲ್ಲ. ಸತ್ಯವನ್ನು ಕೈಬಿಟ್ಟಿರುವ ನಮ್ಮನ್ನು. ಸಾವಿರ ಸಾವಿರ ವರುಷಗಳಿಂದಲೂ ನಾವು ಕೇಳಿಕೊಳ್ಳುತ್ತಾ ಬಂದ ಪ್ರಶ್ನೆಯಿದು. ಉತ್ತರ ಹುಡುಕುವುದರಲ್ಲಿಯೇ ಶತಮಾನಗಳು ಕಳೆದು ಹೋಗಿವೆ. ನಾವು ಮಾತ್ರ ನಿಂತಲ್ಲಿಯೇ ನಿಂತಿದ್ದೇವೆ-ಸತ್ಯ ಶಿಲುಬೆಯ ಮೇಲೆ ನೇತಾಡುತ್ತಿದೆ.
ಎಲೀ! ಎಲೀ! ಲಮಾ ! ಸಬಖ್ಥಾನಿ ?

‍ಲೇಖಕರು avadhi

December 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr. Chandra Aithal

    ಕ್ರಿಸ್ಮಸ್, ಯೇಸು, ಗೊಲ್ಗೊಥಾ, ಗೋವಿಂದ ಪೈ ಚಿಂತನೆ – ಇವೆಲ್ಲವನ್ನೂ ಒಮ್ಮೆಲೇ ಕಣ್ಣಿಗೆ ಕಟ್ಟುವಂತಿದೆ ಲೇಖನ. ಗಿರಿಜಾ ಶಾಸ್ತ್ರಿಯವರ ಬರವಣಿಗೆ ಗದ್ಯವನ್ನು ಕಾವ್ಯಮಯವಗಿಸುವ ಪ್ರಯತ್ನ ಯಶಸ್ವಿಯಾಗಿ ಮೂಡಿಬಂದಿದೆ.
    ಚಂದ್ರ ಐತಾಳ
    ಲಾಸ್ ಎಂಜಲ್ಸ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: