ದೇವನೂರು ಹೇಳಿದ್ದು: ಆಪರೇಷನ್ ಮಾಡಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ

 

devanooru basheer

ಭಗವದ್ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆಗಳನ್ನು ಆಪರೇಷನ್ ಮಾಡಿ ಬಿಸಾಕಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕುವೆಂಪು ದರ್ಶನದ ಪ್ರತಿಮಾ ದೖಷ್ಠಿ ಪಡೆದರೆ ಇದು ನಮಗೆ ಸಾಧ್ಯವಾಗುತ್ತದೆ. ಆದರೆ ನಾವು ಪ್ರತಿಕೖತಿ ದೖಷ್ಟಿಗೆ ಕಟ್ಟುಬಿದ್ದು ಒದ್ದಾಡುತ್ತಿದ್ದೇವೆ ಎಂದು ಸಾಹಿತಿ ದೇವನೂರು ಮಹದೇವ ಹೇಳಿದರು.

ನಾನು ಭಗವದ್ಗೀತೆಯ ಮೇಲೆ ಕಣ್ಣಾಡಿಸಿದೆ. ಆದರೊಳಗೆ ಬುದ್ದಿಸಂನ ಅಂಶಗಳು ಬಹಳಷ್ಟಿವೆಯಲ್ಲಾ ಅಂತ ಅನ್ನಿಸಿತು. ಆಳಕ್ಕೆ ಹೋಗುವ ಪಾಂಡಿತ್ಯ ನನಗೆ ಇರಲಿಲ್ಲ. ಆದರೆ ಇಲ್ಲಿ ಏನೋ ಒಂದು ವಂಚನೆ ನಡೆದಿದೆ ಅನ್ನಿಸತೊಡಗಿತು ಎಂದರು.

ಭಾರತಕ್ಕೆ ದೇವರು ಮುಖ್ಯವಲ್ಲ. ಚಾತುರ್ವರ್ಣ ಮುಖ್ಯ. ಹುಟ್ಟಿನಿಂದ ನಿರ್ಧರಿತವಾಗುವ ಚಾತುವರ್ಣವೇ ಧರ್ಮ ಅನ್ನುವುದು ತಿಳಿಯಿತು. ಇದನ್ನು ಒಪ್ಪದ ಬುದ್ದಿಸಂ ಪರದೇಶಿಯಾಗಬೇಕಾಯಿತು. ಜೈನ, ಲಿಂಗಾಯಿತಗಳು ಜಾತಿಯಾಗಿ ಹಿಡ ಮಾಡಿಸಿಕೊಂಡು ಇಲ್ಲಿ ಉಳಿದವು. ಹೀಗಾಗಿ ಗೀತೆಯೊಳಗೆ ಜರುಗಿರಬಹುದಾದ ವಂಚನೆ ಏನಿರಬಹುದು ಎಂಬ ಪ್ರಶ್ನೆ ನನ್ನಲ್ಲಿ ಉದ್ಭವವಾಯಿತು ಎಂದರು.

ಬುದ್ದಿಸಂನಲ್ಲಿ ಆಗ ಪ್ರಚಲಿತವಿದ್ದ ಉನ್ನತ ಮೌಲ್ಯಗಳನ್ನು ಹುಟ್ಟಿನಿಂದ ನಿರ್ಧರಿತವಾಗುವ ಜಾತಿವರ್ಣ ರೋಗಕ್ಕೆ ಗೀತೆಯಲ್ಲಿ ಬಲಿ ಕೊಟ್ಟಿರಬಹುದಾ? ಈಗ ನಾವೇನು ಮಾಡಬೇಕು ಎಂದು ಪ್ರಶ್ನಿಸಿಕೊಂಡ ಅವರು, ಗೀತೆಯಲ್ಲಿರುವ ತಾರತಮ್ಯದ ರೋಗದ ಗೆಡ್ಡೆಗಳಿಗೆ ಆಪರೇಷನ್ ಮಾಡಿ ಬಿಸಾಕಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಕುವೆಂಪು ಅವರು ಗೀತೆಯನ್ನು ಒಪ್ಪಿಕೊಳ್ಳುತ್ತಾರೆ. ಮನಃಶಾಸ್ತ್ರ ಪ್ರಾಕೖತಿಕ ಎಂಬಂತೆ ಇಡೀ ಜಗತ್ತಿಗೆ ಅನ್ವಯಿಸುತ್ತಾರೆ. ಹಿಂದೂಗಳ ವರ್ಣ ಜಾತಿಗಳಿಗೆ ಹುಟ್ಟನ್ನು ಅನ್ವಯಿಸಿ ಗೀತೆ ಹಾಡುವವರಿಗೆ ಕುವೆಂಪು ಹೀಗೆ ಕರೆ ಕೊಡುತ್ತಾರೆ ಎಂದು ದೇವನೂರು ಮಹದೇವ ಅವರು ಕುವೆಂಪು ಅವರ ಲೇಖನದ ಸಾಲುಗಳನ್ನು ಉಲ್ಲೇಖಿಸುತ್ತಾ, ಹಾಗಾದರೆ ನಿಮ್ಮ ಶ್ರೀಕೖಷ್ಣ ಭಗವಂತನಲ್ಲ. ಆವನೂ ಒಬ್ಬ ಬ್ರಾಹ್ಮಣಪರ ಆಚಾರ್ಯನಾಗುತ್ತಾನೆ. ಒಂದು ವೇಳೆ ನೀವು ಹೇಳಿದಂತೆ ವರ್ಣ, ಜಾತಿ, ವರ್ಗಗಳನ್ನು ನಿಮ್ಮ ಆ ದೇವರೇ ಸೖಷ್ಟಿ ಮಾಡಿದ್ದರೂ ಅವನ್ನೆಲ್ಲಾ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೖಷ್ಟಿ ಮಾಡಿದ್ದು ಅಂತ ಹೇಳಿ ಸುಮ್ಮನಿರುವುದಕ್ಕೆ ಆದೀತೆ (ಕುವೆಂಪು ಸಾಲುಗಳು) ಎಂದರು.

ಎರಡು ಚರ್ಚೆಗಳಿವೆ-

ಇತ್ತೀಚೆಗೆ ಸಾಂಸ್ಕೖತಿಕ ವಲಯದಲ್ಲಿ ಎರಡು ಸಂಗತಿಗಳು ಹೆಚ್ಚು ಚರ್ಚಿತವಾಗುತ್ತಿವೆ. ಒಂದು ರಾಮಾಯಣದ ಶಂಭೂಕ, ಇನ್ನೊಂದು ಭಗವದ್ಗೀತೆ. ನಾವ್ಯಾರೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳಲಿಲ್ಲ. ವಾಲ್ಮೀಕಿ ಶೂದ್ರ. ತಾನೇ ಬರೆದ ಕಾವ್ಯದಲ್ಲಿ ತಾನೇ ತಪಸ್ಸು ಮಾಡಬಾರದು ಎಂದು ಬರೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳಲಿಲ್ಲ ಎಂದು ದೇವನೂರು ಮಹದೇವ ಹೇಳಿದರು.

ಇಂಥವನ್ನು ಹೇಗೆ ಸ್ವೀಕರಿಸಬಹುದೆನ್ನುವುದಕ್ಕೆ -ಸಂಸ್ಕೖತಿ ಕ್ರಾಂತಿಗೆ ಕಹಳೆ ನಾಂದಿ ಎಂಬ ಲೇಖನದಲ್ಲಿ ಕುವೆಂಪು ಹೇಳಿದ್ದನ್ನು ಪ್ರಸ್ತಾಪಿಸಿದ ಅವರು, ನಮ್ಮ ಮನೆಯಲ್ಲಿರುವ ಹಳೆಯ ಆಭರಣಗಳನ್ನು ಹಳೆತಾಯಿತೆಂದು ಬಿಸಾಕದೆ ನಮ್ಮ ಇಷ್ಟಕ್ಕೆ ಅನುಸಾರವಾಗಿ ನಾವು ಬೇರೆ ರೀತಿಯಲ್ಲಿ ಆಭರಣ ಮಾಡಿಸಿಕೊಂಡು ಉಪಯೋಗಿಸುತ್ತಿದ್ದೇವೆ. ಅದೇ ರೀತಿ ರಾಮಾಯಣ, ಮಹಾಭಾರತ ಇತರೆ ಯಾವುದೇ ಕಥೆಗಳಾಗಿರಲಿ ಅವನ್ನು ಬಿಸಾಡುವುದಲ್ಲ. ಅವನ್ನು ಕರಗಿಸಿ, ನಮ್ಮ ಹೊಸ ಧ್ಯೇಯ, ಹೊಸ ಇಷ್ಟಗಳಿಗೆ ಅನುಸಾರವಾಗಿ ನೀವು ನಿಮ್ಮ ಸಾಹಿತ್ಯದಲ್ಲಿ ಎರಕ ಹೊಯ್ಯಬೇಕು. ಏಕೆಂದರೆ ಆ ಎರಕಗಳ ಮೂಲಕ ಆ ಕಥಾವ್ಯಕ್ತಿಗಳ ಮೂಲಕ ನೀವು ನಿಮ್ಮ ಧ್ಯೇಯಗಳನ್ನು ಪ್ರಸಾರ ಮಾಡಲು ತುಂಬಾ ಸುಲಭವಾಗುತ್ತದೆ ಎಂದರು.

ಪುರಾಣ, ಕಾವ್ಯ ಹಿಡಿದುಕೊಂಡು ಗಾಂಧೀಜಿ ಬಳಿ ಹೋದರೆ ಪ್ರಾರ್ಥನೆ, ಭಜನೆ ಮಾಡುತ್ತಾರೆ. ಅಂಬೇಡ್ಕರ್ ವಾಸ್ತವ ಎಂಬಂತೆ ಮುರಿದು ವಿಶ್ಲೇಷಿಸುತ್ತಾರೆ. ಪೆರಿಯಾರ್ ಮುರಿದು ಎಸೆಯುತ್ತಾರೆ. ಕಾರ್ಲ್ ಮಾರ್ಕ್ಸ್ ಧರ್ಮದ ಜತೆ ಬೆರೆತ ಕಾವ್ಯ ಅಫೀಮು ಎಂದು ಕಡೆಗಣಿಸುತ್ತಾರೆ.  ಈ ಗುಂಪಲ್ಲಿ ಲೋಹಿಯಾರಿಗೆ ಮಾತ್ರ ಪುರಾಣ ಕಾವ್ಯ ಕಾಣುವ ಕಣ್ಣಿದೆ. ಕುವೆಂಪು ಅವರಂತೂ ನಮ್ಮ ಸಾಂಸ್ಕೖತಿಕ ವಿವೇಕ ಅನ್ನಿಸಿಬಿಡುತ್ತಾರೆ ಎಂದರು.

ಜನನುಡಿ 2015 ಉದ್ಘಾಟನಾ ಗೋಷ್ಠಿಯ ವರದಿ

ಮಂಗಳೂರು

‍ಲೇಖಕರು admin

December 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಶ್ರೀಧರ

    ಸಮತೂಕದ ವಿಚಾರಧಾರೆ.ಆದರೆ ಆಪರೇಷನ್ ಮಾಡುವವರು ಯಾರು?

    ಪ್ರತಿಕ್ರಿಯೆ
    • Natarajappa

      ಕನ್ನಡ ನಾಡಿನ ಯುವಕ-ಯುವತಿಯರು, ತೇಜಸ್ವಿ, ಲಂಕೇಶ್, ರಾಮದಾಸ್, ಎಂ.ಡಿ.ಎನ್. ನೆನಪಿನಲ್ಲಿ.

      ಪ್ರತಿಕ್ರಿಯೆ
  2. Natarajappa

    ದೇವನೂರರನ್ನು ” ಕನ್ನಡದ ಬೆಳಕು” ಎಂದು ನಾನು ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಪೇಜ್ ನಲ್ಲಿ ಬರೆದಿದ್ದೆ. ಇವತ್ತು ಜನನುಡಿ ಸಮಾವೇಶದಲ್ಲಿ ದೇವನೂರರು ನಮ್ಮ ಸುತ್ತಲಿನ ಕತ್ತಲನ್ನು ಕಳೆಯಲು ಇನ್ನಷ್ಟು ಸ್ಪಷ್ಟವಾಗಿ ನುಡಿದಿದ್ದಾರೆ. ಈ ಬೆಳಕು ವಿಸ್ತರಿಸುತ್ತದೆ ಎಂಬ ಆಶಯದೊಂದಿಗೆ, . . . . ಶುಭರಾತ್ರಿ.

    ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ಗೀತೆಯನ್ನು ಆಪರೇಷನ್ ಮಾಡಬೇಕೆಂದಿರುವುದೇನೋ ಸತ್ಯವಾದ ಮಾತೆ. ಗೀತೆಯೊಂದೇ ಅಲ್ಲ, ಪ್ರಪಂಚದ ಎಲ್ಲಾ ಧರ್ಮ ಗ್ರಂಥಗಳ ಮೇಲೂ ಕೈಯಾಡಿಸಿದರೆ ಮಾತ್ರ ಏನಾದರೂ ಮನುಷ್ಯ ಒಂದಿಷ್ಟು ಮಾನವೀಯತೆ ಬೆಳೆಸಿಕೊಳ್ಳಲು ಸಾದ್ಯವಾಗಬಹುದೇನೋ ! ಆದರೆ ಮೂಲಭೂತವಾದಿಗಳು ಅವುಗಳನ್ನೇ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಈ ಕಾಲದಲ್ಲಿ, ಚಕಾರವೆತ್ತಿದರೆ ನಾಲಿಗೆಗೆ ಚೂರಿಹಾಕದೆ ಇರುತ್ತಾರೆಯೇ ?

    ಪ್ರತಿಕ್ರಿಯೆ
  4. ನಾಗೇಶ್ ಕ್ಯಾತನಹಳ್ಳಿ

    ಬದಲಾವಣೆ ಜಗದ ನಿಯಮ. ಅದರಂತೆ ಕೃತಿಗಳಾಗಲೀ, ಮಹಾನ್ ಗ್ರಂಥಗಳಾಗಲೀ ಕಾಲಕ್ಕೆ ತಕ್ಕಂತೆ ಬದಲಾವಣೆಗ ಒಗ್ಗಬೇಕು. ಇಲ್ಲವಾದಲ್ಲಿ ಜನರಿಂದ ದೂರವಾಗುತ್ತವೆ. ಇದಕ್ಕೆ ತಕ್ಕ ಉದಾಹರಣೆ ಸಂಸ್ಕತ ಭಾಷೆ ಜನರಿಂದ ದೂರವಾಗಿರುವುದು. ಅದರಂತ ಕಾಲಕ್ಕೆ ತಕ್ಕಂತೆ ವಿಮರ್ಶೆಗೊಳಪಟ್ಟು ಬದಲಾವಣೆಯಾಗಿ ಆಸೆ ಕಂಗಳಿಂದ ನೋಡುತ್ತಿರುವ ಲಕ್ಷಾಂತರ ಜನರಿಗೆ ಹಿಂದೂ ಧರ್ಮ ವಿಶ್ವ ಮಾನವ ಧರ್ಮದ ತಳಹದಿಯ ಮೇಲೆ ನಿಂತಿದ್ದು, ದಯೆಯೇ ಧರ್ಮ ಎಂಬುದನ್ನು ಆಗಾಗ್ಗೆ ಸಾಬೀತು ಪಡಿಸುವಂತಾಗಲಿ…

    ಪ್ರತಿಕ್ರಿಯೆ
  5. kvtirumalesh

    ದೇವನೂರ ಮಹಾದೇವರ ಮಾತುಗಳನ್ನು ತತ್ವಶಃ ಒಪ್ಪಬೇಕು ಎನ್ನುವವರಲ್ಲಿ ನಾನೂ ಒಬ್ಬ, ಆದರೆ ಅಕ್ಷರಶಃ ಅಲ್ಲ. ಎಂದರೆ ಭಗವದ್ಗೀತೆಯಲ್ಲಿ ನಾವು ಸಮ್ಮತಿಸದ ಅಂಶಗಳನ್ನು ಕತ್ತರಿಸಿ ಎಡಿಟ್ ಮಾಡಬೇಕು ಎನ್ನುವ ಅರ್ಥವಲ್ಲ. ಗ್ರಂಥಗಳು ಹಳತಾಗುತ್ತ ಹೋದಂತೆ ಹೊಸ ಜನಾಂಗ ಅವುಗಳಲ್ಲಿರುವ ಎಲ್ಲಾ ವಿಷಯಗಳನ್ನೂ ಒಪ್ಪುವುದು ಸಾಧ್ಯವಿಲ್ಲ. ಸಮಸ್ಯೆ ಏನೆಂದರೆ, ಕೆಲವು ಗ್ರಂಥಗಳು ಧರ್ಮಗ್ರಂಥಗಳು, ಆದ್ದರಿಂದ ಅವು ಪೂಜನೀಯ, ಅವುಗಳಲ್ಲಿ ಹೇಳಿದ್ದೆಲ್ಲವನ್ನೂ ಜನರು ಸರ್ವದಾ ನಂಬಬೇಕು, ಅವುಗಳನ್ನು ಪ್ರಶ್ನಿಸಬಾರದು, ಅವು ರಾಷ್ಟ್ರೀಯ ಗ್ರಂಥಗಳಾಗಬೇಕು ಎಂಬಿತ್ಯಾದಿ ಹಟಗಳು. ಇದು ಅವಿಮರ್ಶಾತ್ಮಕವಾದ ನಿಲುವು. ಯಾವುದೇ ಗ್ರಂಥವನ್ನು—ಭಗವದ್ಗೀತೆ, ಬೈಬಲ್, ಕುರ್ರಾನ್, ಗ್ರಂಥ್ ಸಾಹೇಬ್, ತ್ರಿಪಿಟಕಗಳು, ರಾಮಾಯಣ, ಮಹಾಭಾರತ, ವೇದಗಳು, ಧರ್ಮಶಾಸ್ತ್ರಗಳು ಮುಂತಾದವನ್ನು–ನಾವು ವಿಮರ್ಶಾತ್ಮಕವಾಗಿಯೇ ಓದಬೇಕಾಗಿದೆ. ಅವುಗಳ ರಚನಾಕಾಲ ಪ್ರಾಕೃತವಾದ ಕಾರಣ, ಻ಅಂದಿನ ಮನೋಧರ್ಮವನ್ನು ಅವು ಪ್ರತಿಬಿಂಬಿಸುವುದು ಸಹಜವೇ ಆಗಿದೆ. ಒಮ್ಮೆ ಬರೆದ ಗ್ರಂಥ ತಿದ್ದುವಿಕೆಗೆ ಒಳಗಾಗದೆ ಹಾಗೆಯೇ ಇರುತ್ತದೆ. ಆದರೆ ನ್ಯಾಯ, ನೀತಿ, ದಂಡನೆ, ಅತಿಭೌತಿಕ ಕಲ್ಪನೆ ಮುಂತಾದವು ಸಮಾಜದ ಜತೆಗೆ ಬದಲಾಗುತ್ತ ಇರುತ್ತವೆ. ನಮ್ಮ ಮನಸ್ಸು ಆಧುನಿಕವಾಗಿದ್ದರೆ ಸಾಕು, ನಾವು ಓದುವ ಈ ಹಳೆಯ ಗ್ರಂಥಗಳಲ್ಲಿ ನಮಗೆ ಬೇಕಾದ್ದನ್ನು ಸ್ವೀಕರಿಸಿ ಬೇಡದ್ದನ್ನು ಬಿಡಬಹುದು—ಈ ಬೇಡದ ವಿಷಯಗಳು ಯಾಕೆ ಈಗ ಬೇಡವಾಗಿವೆ, ಆದರೆ ಒಂದು ಕಾಲದಲ್ಲಿ ಕೆಲವರಿಗೆ ಬೇಕಾದವು ಎನ್ನುವುದು ಗೊತ್ತಾಗುತ್ತದೆ.
    ಕುಮಾರವ್ಯಾಸ ಭಾರತದಲ್ಲಿ ವಿದುರನೀತಿಯ ಅಧ್ಯಾಯದಲ್ಲಿ ಅವೆಷ್ಟೋ ಒಳ್ಳೆಯ ಸಂಗತಿಗಳು ಬರುತ್ತವೆ; ಆದರೆ ಜತೆ ಜತೆಗೇ ವಿಧವೆಯರನ್ನು, ರೋಗಿಗಳನ್ನು ದೂರೀಕರಿಸುವ ಮಾತೂ ಬರುತ್ತದೆ! ಬುದ್ಧನ ಕಾಲದಲ್ಲಿ ರೋಗಿಗಳನ್ನು ಬೌದ್ಧಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಕೇಳಿದ್ದೇನೆ. ಗಣರಾಜ್ಯಕ್ಕೆ ಮಾದರಿಯಾಗಿದ್ದ ಗ್ರೀಸ್ ಮತ್ತು ನಂತರದ ರೋಮಿನಲ್ಲಿ ಪ್ರಜೆಗಳಿಗೆ ಮತದ ಹಕ್ಕು ಇತ್ತು, ಆದರೆ ಗುಲಾಮರಿಗೆ ಆ ಹಕ್ಕು ಇರಲಿಲ್ಲ. ಅಷ್ಟೇ ಅಲ್ಲ, ಗುಲಾಮರ ಮಾರಾಟವೂ ಅಲ್ಲಿ ಸ್ವೀಕೃತವಾಗಿತ್ತು. ಶೇಕ್ಸ್ ಪಿಯರನ `ಮರ್ಚೆಂಟ್ ಆಫ್ ವೆನಿಸ್’ನಲ್ಲಿ ಶೈಲಾಕನನ್ನು ಒಂದು ರೀತಿಯ ಒತ್ತಾಯದಿಂದಲೇ ಮತಾಂತರಗೊಳಿಸಲಾಗುತ್ತದೆ. ಸೋಮೇಶ್ವರ ಶತಕದಲ್ಲಿ ಜಾತಿನಿಂದನೆಯ ಮಾತುಗಳು ಬರುತ್ತವೆ. `ಹರಿಶ್ಚಂದ್ರ ಕಾವ್ಯ’ದಲ್ಲಿ `ಹೊಲತಿ’ಯರನ್ನು ಅವರ ಬಣ್ಣ ಮತ್ತು ಜಾತಿಯ ಹೆಸರಿನಲ್ಲಿ ನಿಂದಿಸುವ ಮಾತುಗಳಿವೆ. (ಈ ಕುರಿತು ಕೀರ್ತಿನಾಥ ಕುರ್ತಕೋಟಿಯವರ ಸೊಗಸಾದ ವಿಶ್ಲೇಷಣೆಯೊಂದಿದೆ.) `ಹದಿಬದೆಯ ಧರ್ಮ’ದಲ್ಲಿ ಚಿತ್ರಿಸಿದ ಸ್ತ್ರೀ ಆ ಕಾಲದ ಆದರ್ಶವಲ್ಲದೆ ನಮ್ಮ ಕಾಲದಲ್ಲಿ ಸ್ವೀಕರಿಸಬಹುದಾದ್ದಲ್ಲ. ನಮ್ಮ ಜನಪದ ಕತೆ ಮತ್ತು ಹಾಡುಗಳಲ್ಲಂತೂ ನಾವಿಂದು ಒಪ್ಪಲಾಗದ ಅನೇಕ ಆಚಾರ ವಿಚಾರಗಳಿವೆ. ಇವೆಲ್ಲ ನಮ್ಮ ಪೂರ್ವಜರು ಸ್ವೀಕರಿಸಿದ ಸಂಗತಿಗಳು, ಜೀವವಿರೋಧಿ ಸಂಗತಿಗಳನ್ನು ನಾವು ಆಚರಿಸಕೂಡದು. ಆಧುನಿಕತೆ ಇಂದು ಮಹತ್ವದ ವೈಚಾರಿಕ ಬದಲಾವಣೆಯನ್ನು ತಂದಿದೆ. ನಮ್ಮ ಪೂರ್ವಜರು ಆಧುನಿಕರಾಗಿ ಇರಿಲಿಲ್ಲ ಎಂದು ನಾವು ದೂರಿ ಪ್ರಯೋಜನವಿಲ್ಲ. ನಾವು ಅವರಂತೆ ಇರದಿದ್ದರೆ ಸಾಕು. ಪೂರ್ವಜನ್ಮ, ಮರುಜನ್ಮ, ಆತ್ಮ, ಪರಮಾತ್ಮ, ಕರ್ಮ, ವಿಧಿ, ವರ, ಶಾಪ, ನಾಕ, ನರಕ ಮುಂತಾದವುಗಳನ್ನು ಅವರು ನಂಬಿದ್ದರು. ಮನುಷ್ಯಸಮಾಜ ಮನುಷ್ಯ ನಿರ್ಮಿತವೇ ಎಂದು ನಾವಿಂದು ತಿಳಿದುಕೊಂಡಿದ್ದೇವೆ—ಎಂದರೆ ದೇವರ ಹೆಗಲಿನಿಂದ ಭಾರ ನಮ್ಮ ಹೆಗಲಿಗೆ ಬಂದಿದೆ. ಆದ್ದರಿಂದ ನಮ್ಮ ಹೊಣೆಗಾರಿಕೆ ಹೆಚ್ಚಿದೆ. ಫೂಕೋನ `ದಿ ಆರ್ಡರ್ ಆಫ್ ಥಿಂಗ್ಸ್’ನ ಕೊನೆ ಭಾಗ ಇದನ್ನು ಚೆನ್ನಾಗಿ ಚಿತ್ರಿಸುತ್ತದೆ: ದೇವರನ್ನು ಕೊಂದ ಮನುಷ್ಯ ರಕ್ತಸಿಕ್ತನಾಗಿ ಇದ್ದಾನೆ—ಇನ್ನೇನು ಮಾಡುವುದೆಂದು ತಿಳಿಯದೆ!
    ನಮಗೆ ವಿಶನ್ ಎಂಬುದು ಇದೆಯೇ? ಯಾವ ರೀತಿಯ ಮನುಷ್ಯಸಮಾಜವನ್ನು ನಾವು ಬಯಸುತ್ತೇವೆ? ಯಾರಲ್ಲಾದರೂ ಒಂದು ನೀಲಿನಕ್ಷೆ ಇದೆಯೇ? ಅದನ್ನು ಸಾಧಿಸುವುದಕ್ಕೆ ನಾವೇನು ಮಾಡಬೇಕು? ಯೋಚಿಸಿದ್ದೇವೆಯೇ?

    ಮೊತ್ತದಲ್ಲಿ, ಮಾನವನ ಇತಿಹಾಸದ ದಾಖಲೆಗಳನ್ನು ನಾವು ತೊಡೆದುಹಾಕುವ ಬದಲು ವೈಚಾರಿಕವಾಗಿ ಓದುವುದೇ ನಮಗಿಂದು ಇರುವ ಮಾರ್ಗ. ತೊಡೆದುಹಾಕಿದರೆ ಮತ್ತೆ ನಮಗೆ ಹಿಂದಿನ ಸಮಾಜಗಳ ನೆನಪಿರುವುದಿಲ್ಲ; ಅಂಥ ಬಲೆಗೆ ನಾವು ಬೀಳಬಾರದು ಎನ್ನುವುದಕ್ಕೆ ಆ ಗ್ರಂಥಗಳನ್ನು ಹಾಗೇ ಇರಿಸೋಣ. ಪೂಜಿಸುವುದು ಬೇಡ, ಕಣ್ಣುಬಿಟ್ಟು ಓದೋಣ, ಬೇಕಾದ್ದನ್ನು ಸ್ವೀಕರಿಸಿ ಬೇಡದ್ದನ್ನು ತಿಳಿದುಕೊಳ್ಳೋಣ.

    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  6. ಸುಧಾ ಚಿದಾನಂದಗೌಡ

    ದೇವನೂರು ಮಹಾದೇವರನ್ನು ಒಂದು ನಿರೀಕ್ಷೆ ಇಟ್ಟುಕೊಂಡೇ ಕೇಳಲಾಗುತ್ತದೆ, ನೋಡಲಾಗುತ್ತದೆ ಮತ್ತು ಚಿಂತಿಸಲಾಗುತ್ತದೆ. ಅವರ ಪ್ರಗತಿಪರರೆಲ್ಲರ ಪ್ರತಿಮಾರೂಪವಾಗಿಯೇ ಎದ್ದುಕಾಣುತ್ತಾರೆ. ಪುರಾಣ, ಪುಣ್ಯ ಕಥೆಗಳನ್ನು ಮುರಿದು ಕಟ್ಟಿ ಬರೆಯುವ, ಓದುವ ಮತ್ತು ಅಭ್ಯಸಿಸುವ ಒಂದು ಪದ್ಧತಿ ಬಂಡಾಯದ ಒಂದು ಭಾಗವಾಗಿಯೇ ಬೆಳೆದುಕೊಂಡು ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನನ್ನಂಥ ಕಿರಿಯರನೇಕರು ಇಂಥ ಪ್ರಯತ್ನಗಳನ್ನು ಮಾಡುತ್ತ ಬಂದೆವಾದರೂ ಇತ್ತೀಚೆಗೆ ಎಪಿಕ್ ಗಳನ್ನು ಸಾರಾಸಗಟಾಗಿ ತಿರಸ್ಕರಿಸಿಬಿಡುವ ಅವಸರದ ಮನೋಭಾವವೇ ಹೆಚ್ಚಾಗುತ್ತಿರುವುದೂ ಕಂಡು ಬರುತ್ತದೆ. ಇಂಥ ಸಂದರ್ಭದಲ್ಲಿ ದೇವನೂರು ಮಹಾದೇವ ಮಂಗಳೂರಿನಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪಿಸಿದ್ದು. ಮತ್ತೆ ಅದನ್ನು ವಿವರಿಸಿದ್ದು ಇಷ್ಟವಾಯಿತು ಹಾಗೂ ಇದು ಸಮಂಜಸವಾದ ಒಂದು ಮಾರ್ಗ ಎಂತಲೂ ಅನಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: