ದೇರಾಜೆ ಸೀತಾರಾಮಯ್ಯನವರ ‘ಕುರುಕ್ಷೇತ್ರಕ್ಕೊಂದು ಆಯೋಗ’

ಲಕ್ಷ್ಮಿನಾರಾಯಣ ಭಟ್ಟ. ಪಿ

‘ಕುರುಕ್ಷೇತ್ರಕ್ಕೊಂದು ಆಯೋಗ’ ಪುಸ್ತಕದ ಮೊದಲ ಮುದ್ರಣ ದೇರಾಜೆಯವರು (1914 -84) ಕಾಲವಾಗುವ ಮೂರು ವರ್ಷ ಮೊದಲೇ ಅಂದರೆ 1981ರಲ್ಲಿ ಪ್ರಕಟವಾಯಿತು. ಮೊದಲ ಮುದ್ರಣವಾಗಿ ನಾಲ್ಕು ದಶಕಗಳೇ ಕಳೆದಿವೆ. ಇದನ್ನು ಈಗ ಓದಿದ ಮೇಲೆ ನನ್ನ ಅಭಿಪ್ರಾಯಗಳನ್ನು ದಾಖಲಿಸುವುದರ ಜೊತೆಗೆ ಈ ಪುಸ್ತಕದ ಕುರಿತು ಮಾಹಿತಿ ಈ ತಲೆಮಾರಿನ ಆಸಕ್ತರಿಗೂ ದೊರಕಬೇಕು ಎಂಬುದನ್ನು ಒಂದು ಕರ್ತವ್ಯವೆಂದೇ ತಿಳಿದು ಮೂರು ಭಾಗಗಳಲ್ಲಿ ಈ ಲೇಖನ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.

ಕೆಲವು ವರ್ಷಗಳ ಹಿಂದೆ ಇದನ್ನು ಯಕ್ಷಗಾನೀಯ ವೇಷ ಭೂಷಣ ಸಹಿತ ಮಂಗಳೂರಿನ ಪುರಭವನದಲ್ಲಿ ಪ್ರದರ್ಶಿಸಲಾಗಿತ್ತು ಮತ್ತು ಅದಕ್ಕೆ ನಾನೂ ಹೋಗಿದ್ದೆ. ಆಗಲೇ ಇದೊಂದು ವಿನೂತನ ಪರಿಕಲ್ಪನೆ ಎಂದು ನನಗೆ ಅನಿಸಿತ್ತು.

ರಾಜಕೀಯವಾಗಿಯೂ ಈ ಪುಸ್ತಕ ಪ್ರಕಟವಾಗುವ ಸಮಯದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಹಲವು ಆಯೋಗಗಳು ನೇಮಿಸಲ್ಪಟ್ಟಿದ್ದವು. ಹೆಚ್ಚಿನ ಆಯೋಗಗಳು ವಿರೋಧ ಪಕ್ಷದ ಬಾಯಿ ಮುಚ್ಚಿಸಲೆಂದೇ ನೇಮಿಸಲ್ಪಟ್ಟುದು ಒಂದು ಚತುರ ರಾಜಕೀಯ ನಡೆ ಎಂದು ಎಲ್ಲರಿಗೂ ಗೊತ್ತಿದ್ದ ಗುಟ್ಟು. ಆಮೇಲೆ ಈ ಆಯೋಗಗಳ ವರದಿ ಅನುಷ್ಠಾನಿಸಲ್ಪಟ್ಟಿತೆ ಎಂದು ತಲೆಕೆಡಿಸಿಕೊಂಡವರು ಬಹಳಿಲ್ಲ ಆ ಮಾತು ಬೇರೆ.

ಈ ಹಿನ್ನೆಲೆಯಲ್ಲಿ ಆಯೋಗದ ಪರಿಕಲ್ಪನೆಯನ್ನು ಇಡೀ ಮಹಾಭಾರತದ ಕೇಂದ್ರ ಬಿಂದು ‘ಕುರುಕ್ಷೇತ್ರ ಯುದ್ಧ’ಕ್ಕೆ ಅನ್ವಯಿಸಿ ಪ್ರಮುಖ ಪಾತ್ರಗಳ ಸ್ವ-ನಿವೇದನೆಯಿಂದ ಸಂಪನ್ನಗೊಳಿಸಿ ಅವುಗಳನ್ನು ‘ಹೇಳಿಕಾ ರೂಪ’ದಲ್ಲಿ ದಾಖಲಿಸಿ ಧರ್ಮ ಪುರುಷನೇ ನ್ಯಾಯಮೂರ್ತಿಯಾಗಿ ತೀರ್ಪು ಕೊಡುವಂತೆ ದೇರಾಜೆಯವರು ಸಂಯೋಜಿಸಿದ್ದು ಅವರ ‘ಧರ್ಮಾಧಾರಿತ ನ್ಯಾಯೈಕ ದೃಷ್ಟಿ’ಗೆ ಒಂದು ಉತ್ಕೃಷ್ಟ ಉದಾಹರಣೆಯಾಗಿ ನಮ್ಮ ಮುಂದಿದೆ, ಮತ್ತು ಇದು ಇಂದಿಗೂ ಪ್ರಸ್ತುವವೇ ಸರಿ ಎಂದು ನಾನು ಭಾವಿಸುತ್ತೇನೆ.

ಇದನ್ನು ಧರ್ಮಾಧಾರಿತ ಎಂದು ಹೇಳುವುದಕ್ಕೆ ಪ್ರಬಲ ಕಾರಣವಿದೆ. ದೇರಾಜೆಯವರು ಇಲ್ಲಿ ಶ್ರೀ ಕೃಷ್ಣನನ್ನು ಗೀತೆಯ ಮೂಲಕ ‘ಜೀವನ ಧರ್ಮವನ್ನು’ ಬೋಧಿಸಿದ ದೈವೀ ಅವತಾರ ಎಂದೇ ಪರಿಗಣಿಸಿದ್ದಾರೆ ಮತ್ತು ಮಹಾಭಾರತದ ಕಥಾ ಹಂದರದಲ್ಲಿ ಬರುವ ಅತಿಮಾನುಷ ಘಟನೆಗಳನ್ನು ಸಾಧಾರಣೀಕರಿಸುವ/ಮಾನುಷೀಕರಣಗೊಳಿಸುವ ಪ್ರಯತ್ನವನ್ನು ಮಾಡಿಯೇ ಇಲ್ಲದಿರುವುದರಿಂದ. ಉದಾಹರಣೆಗಾಗಿ, ಯಜ್ಞ ಕುಂಡದಿಂದ ದೃಷ್ಟದ್ಯುಮ್ನ ಮತ್ತು ದ್ರೌಪದಿ ಅಯೋನಿಜರಾಗಿ ಹುಟ್ಟಿದ್ದು; ಗಾಂಧಾರೀ ಗರ್ಭ ಘ್ರುತಭಾಂಡದಲ್ಲಿ ಬೆಳೆದು ನೂರು ಕೌರವರ ಜನನ ಇತ್ಯಾದಿ — ಅದು ಅವರಿಗೆ ಹಾಗೆಯೇ ಮಾನ್ಯ ಎಂದು ನಾವು ತಿಳಿಯಬೇಕಾಗುತ್ತದೆ.

ಈ ಪೌರಾಣಿಕ ಮನೋಧರ್ಮವನ್ನು ಹೊಂದಿಯೂ ದೇರಾಜೆ ಸೀತಾರಾಮಯ್ಯನವರು ಇವೆಲ್ಲವುಗಳನ್ನು ಲೋಕರೂಢಿಯಂತೆ ಎಲ್ಲರೂ ಒಪ್ಪಬಹುದಾದ ತಾರ್ಕಿಕ ನೆಲೆಗಟ್ಟಿನಲ್ಲಿ ವಿಮರ್ಶಾತ್ಮಕವಾಗಿ ಚಿಕಿತ್ಸಕ ಬುದ್ಧಿಯಿಂದ ನೋಡಿರುವುದು ಅವರ ಮಾನವೀಯತೆಗೆ, ಆಧುನಿಕ ಚಿಂತನೆಗೆ ಹಿಡಿದ ಕನ್ನಡಿ ಎಂದೇ ನನ್ನ ಭಾವನೆ ಹಾಗೂ ಇದುವೇ ಈ ಕೃತಿಯ ಜೀವಾಳ ಕೂಡಾ. ಆಯೋಗದ ಮುಂದೆ ಹಾಜರಾಗಿ ಹೇಳಿಕೆ ನೀಡುವ ಪಾತ್ರಗಳಲ್ಲಿ ಕೃಷ್ಣ ಬರುವುದಿಲ್ಲ.

ಇದಕ್ಕೆ ಕಾರಣ ಸುಸ್ಪಷ್ಟ. ಶ್ರೀ ಕೃಷ್ಣ ದೈವೀ ಅವತಾರ ಎಂದೇ ಪರಿಗಣಿಸಲ್ಪಟ್ಟದ್ದರಿಂದ ಆತ ಆಯೋಗದ ನಿಯಂತ್ರಕ-ಪ್ರೇರಕ ಶಕ್ತಿಯೇ ಹೊರತು ಅದರ ವ್ಯಾಪ್ತಿಯಲ್ಲಿ ಬರುವುದಿಲ್ಲ! ಆದರೆ ಅನುಷಂಗಿಕವಾಗಿ ಇತರ ಪಾತ್ರಗಳ ಮೂಲಕ ಶ್ರೀಕೃಷ್ಣನ ನಿಲುವು ಅನಾವರಣಗೊಂಡಿದೆ.

ಇಲ್ಲಿ ಹೇಳಿಕೆ ದಾಖಲಿಸುವ ಪಾತ್ರಗಳ ಆತ್ಮನಿವೇದನೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ. ಅವು ಸ್ವಯಂ-ಪ್ರೇರಿತ.

ಇಲ್ಲಿ ಓದುಗ ನಿಷ್ಪಕ್ಷಪಾತ ಧೋರಣೆಯ ನ್ಯಾಯಮೂರ್ತಿಯ ಪರೋಕ್ಷ ವಕ್ತಾರನೂ, ಸಾಕ್ಷೀ ಪ್ರಜ್ಞೆಯೂ ಆಗಿಬಿಡುತ್ತಾನೆ.

ಪೀಠಿಕಾರೂಪದಲ್ಲಿ ಇಷ್ಟು ಹೇಳಿದ ಮೇಲೆ ಪ್ರತಿಯೊಂದು ಪಾತ್ರದ ಅಂತರಂಗಕ್ಕೆ ಬೆಳಕು ಹಾಯಿಸುವ ದೇರಾಜೆಯವರ ಪ್ರತ್ಯುತ್ಪನ್ನಮತಿತ್ವದ ಒಳನೋಟಗಳನ್ನು ಅವರ ವಾಕ್ಯಗಳಲ್ಲೇ ಹೇಳಿದರೆ ಚೆಂದ. ಉದ್ಧರಣೆಗಳು ತುಸು ದೀರ್ಘ ಎಂದು ಅನಿಸಿದರೂ ಅದು ಪಾತ್ರಗಳ ಅಂತರಂಗವನ್ನು ಸಾಂದ್ರವಾಗಿ ಬಿಚ್ಚಿಡಲು ಸಹಕಾರಿ ಎಂದು ನನ್ನ ನಂಬಿಕೆ. ಸಹೃದಯೀ ಓದುಗರು ಇದನ್ನು ಒಂದು ದೋಷ ಎಂದು ಪರಿಗಣಿಸಲಾರರು ಎಂಬುದು ನನ್ನ ವಿಶ್ವಾಸ.

ಸಂಜಯ –

‘ಸಂಜಯ ಉವಾಚ’ ಎಂದು ಪ್ರಾರಂಭವಾಗುವ ಸಂಜಯನ ಸ್ವಗತ ಇಡೀ ಆಯೋಗಕ್ಕೆ ಹೆಬ್ಬಾಗಿಲು ಇದ್ದಂತೆ. ಆತ ಯುದ್ಧದಲ್ಲಿ ನೇರವಾಗಿ ಭಾಗಿ ಅಲ್ಲದಿದ್ದರೂ ಧೃತರಾಷ್ಟ್ರ – ಜೊತೆಗೆ ಓದುಗರೂ ಕೂಡಾ. ಯುದ್ಧದ ಹಿನ್ನೆಲೆ, ಮುನ್ನೆಲೆಯನ್ನು ಅವನ ಕಣ್ಣುಗಳಿಂದ ನೋಡಿ, ಆತನ ನಿರೂಪಣೆಗೆ ಕಿವಿಯಾನಿಸುವುದು ಹೀಗೆ:

“ಕುಟುಂಬ ಕಲಹದಿಂದಲೇ ಪ್ರೇರಿತವಾದ ಆ ಭಾರತ ಯುದ್ಧ… ಅದಕ್ಕಾಗಿಯೇ ನಿಯತಗೊಂಡ ಸ್ಥಳ ‘ಕುರುಕ್ಷೇತ್ರ’. ಆದರೆ ಅದು ‘ಧರ್ಮಕ್ಷೇತ್ರ’ ಹೇಗೆ?” ಎಂಬ ಜಿಜ್ಞಾಸೆಯಿಂದ ಸಂಜಯ ತೊಡಗುವುದು ಧೃತರಾಷ್ಟ್ರನ ಈ ಪ್ರಶ್ನೆಗೆ ಉತ್ತರವಾಗಿ:

‘ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವ: ಮಾಮಕಾ: ಪಾಂಡವಾಶ್ಚೈವ ಕಿಮಕುರ್ವತ ಸಂಜಯ’.

ಮುಂದುವರೆದು ಸಂಜಯ ಹೇಳುತ್ತಾನೆ:

“ಪ್ರತ್ಯಕ್ಷದರ್ಶಿಯಾದ ನನ್ನ ಅನುಭವದಂತೆ ಈ ಯುದ್ಧದಲ್ಲಿ ತಕ್ಕಷ್ಟು ಅಪರಾಧಗಳೇ ಆಗಿವೆಯೆಂದು ನನಗನಿಸುತ್ತದೆ… ಎರಡೂ ಕಡೆಯವರಲ್ಲಿ ಕೂಡ ತಕ್ಕಷ್ಟು ನ್ಯಾಯಸಮ್ಮತವಲ್ಲದ ವರ್ತನೆಗಳಿದ್ದಂತೆ ಕಂಡಿತ್ತು. (ಉದಾ: ಭೀಷ್ಮರು ತನ್ನನ್ನು ಶಿಖಂಡಿದ್ವಾರಾ ಸೋಲಿಸುವ ಹಂಚಿಕೆಯನ್ನು ಪಾಂಡವರಿಗೆ ಹೇಳಿದ್ದು ಯುದ್ಧಧರ್ಮಕ್ಕೆ ವಿರುದ್ಧವೇ! ಅಂತೆಯೇ ‘ಅಶ್ವತ್ಥಾಮಾ ಹತೋ ಕುಂಜರ:’ ಎನ್ನುವ ಧರ್ಮರಾಯನ ಪೂರ್ತಿ ಸತ್ಯವೂ, ಸುಳ್ಳೂ ಅಲ್ಲದ ಉಕ್ತಿ ದ್ರೋಣರ ಸಾವಿಗೆ ಕಾರಣವಾದದ್ದು ಇತ್ಯಾದಿ) ಧರ್ಮಕ್ಷೇತ್ರದಲ್ಲಿ ಹಾಗಾಗಬಾರದಿತ್ತು. ಸಂಭಾವಿತರು ಎನಿಸಿಕೊಂಡವರೇ ಹಾಗೆ ಮಾಡಿದ ಮೇಲೆ ‘ಧರ್ಮಕ್ಷೇತ್ರ’ವೇ ‘ಕುರುಕ್ಷೇತ್ರವಾಯಿತು ಎನ್ನಬಹುದೋ ಏನೋ..? ಕುರುಕ್ಷೇತ್ರದಲ್ಲಿ ನಡೆದ ಯುದ್ಧಾಪರಾಧಗಳನ್ನು ಜ್ಞಾಪಿಸಿಕೊಂಡರೆ ಸೋತವರೇ ಪೂರ್ಣಾಪರಾಧಿಗಳಲ್ಲ. ಗೆದ್ದವರೂ ನಿರ್ದೋಷಿಗಳಲ್ಲ ಎಂದು ನನಗನಿಸುತ್ತದೆ. (ಪು.೪-೫). ಪಾಂಡವರ ಗೆಲುವಿಗೆ ಕೇವಲ ಅವರ ಬಲಶೌರ್ಯಗಳೇ ಕಾರಣವಲ್ಲ, ಶತ್ರುಪಕ್ಷದವರ ಅನುಗ್ರಹದ ಕೊಡುಗೆಯೂ ತಕ್ಕಷ್ಟು ಕೂಡಿತ್ತು. ಕೌರವನ ಸೋಲಿಗೆ, ಅಲ್ಲ ಸಾವಿಗೆ ಕೇವಲ ಶತ್ರುಪಕ್ಷದವರ ಬಲಶೌರ್ಯಗಳೇ ಕಾರಣವಲ್ಲ, ಸ್ವಪಕ್ಷದವರ ದ್ರೋಹ ವಂಚನೆಗಳೂ ಸಾಕಷ್ಟು ಸೇರಿದ್ದವು ಎನ್ನಬಹುದು.” (ಪು.೧೦).

ಈ ಸಮಜಾಯಿಷಿಕೆ – ಇದನ್ನು ಅನುಮಾನ ಎಂದೂ ಕರೆಯಬಹುದು. ಇದು ದೇರಾಜೆಯವರ ಸಮನ್ವಯದ ಲೋಕದೃಷ್ಟಿ.

ದುರ್ಯೋಧನ –

ಮುಂದಿನ ಪಾತ್ರವೇ ದುರ್ಯೋಧನನದ್ದು. ಆತ ಎತ್ತುವ ಪ್ರಶ್ನೆ ತುಂಬಾ ಮಹತ್ವದ್ದು ಮತ್ತು ಮಾರ್ಮಿಕವಾದದ್ದು.

“ಶಂತನು ಚಕ್ರವರ್ತಿ ಬೆಸ್ತಕನ್ಯೆ ಸತ್ಯವತಿಯನ್ನು ಕಾಮಜನ್ಯ ಮೋಹದಿಂದ ಮದುವೆಯಾದ ಕಾರಣದಿಂದ

ಚಂದ್ರವಂಶಕ್ಕೆ ಕೀಳುರಕ್ತದ ಬೆರಕೆಯಾಯಿತು.” (ಪು.೧೧).

(ಇದರಿಂದ ಉಂಟಾದ ವರ್ಣ ಸಂಕರ, ಜಾತಿ ಇತ್ಯಾದಿಗಳ ಸ್ವಲ್ಪ ವಿಸ್ತೃತ ಚರ್ಚೆ ಮುಂದಕ್ಕೆ ವಿದುರನ ಪಾತ್ರ ನಿರ್ವಚನೆಯಲ್ಲಿ ಬರುತ್ತದೆ.). ಸತ್ಯವತಿಯಲ್ಲಿ ಸಮರ್ಥ ಸಂತಾನ ಪ್ರಾಪ್ತವಾಗದ್ದರಿಂದ ಆಕೆಯ ಸೊಸೆಯಂದಿರಾದ ಅಂಬಿಕೆ, ಅಂಬಾಲಿಕೆ, ಹಾಗೂ ದಾಸಿಯಲ್ಲಿ ವೇದವ್ಯಾಸರ ನಿಯೋಗದಿಂದ ಕ್ಷೇತ್ರಜ ಸಂತಾನ ಪಡೆದದ್ದು ರಾಜ ಪಟ್ಟಕ್ಕೆ ಉತ್ತರಾಧಿಕಾರಿ ಬೇಕು ಎಂದಲ್ಲವೇ? ಆದರೆ ಹುಟ್ಟಿದ ಮೂವರಲ್ಲಿ ಒಬ್ಬ ಕುರುಡ, ಇನ್ನೊಬ್ಬ ರೋಗಿ, ಕೊನೆಯವ ದಾಸೀಪುತ್ರ. ಹಾಗಾಗಿ ಇವರ್ಯಾರೂ ಪಟ್ಟಕ್ಕೆ ಅರ್ಹರಲ್ಲದಿದ್ದರೂ ಸಿಂಹಾಸನದ ರಕ್ಷಕರಾಗಿ ಉಳಿದ ಭೀಷ್ಮರ ‘ಮಧ್ಯಮಾರ್ಹತೆ’ ಎಂಬ ಸಮಜಾಯಿಷಿಕೆಯ ಮೂಲಕ ಪಾಂಡುವಿಗೆ ಪಟ್ಟ ಆಯಿತು. ಆತನ ದುರಾದೃಷ್ಟಕ್ಕೆ ಮಕ್ಕಳನ್ನು ಪಡೆಯುವ ಅರ್ಹತೆಯನ್ನು ಕಳಕೊಂಡು ಯತಿಯಂತೆ ಜೀವನ ನಡೆಸಿ ಕೊನೆಗೆ ಸದ್ಗತಿಗಾಗಿ ಪತ್ನಿಯರಾದ ಕುಂತಿ, ಮಾದ್ರಿಯರಲ್ಲಿ ಪಡೆದದ್ದೂ ಕ್ಷೇತ್ರಜ ಸಂತಾನವೇ! ಈ ಎಲ್ಲಾ ಗೊಂದಲಗಳ ಮೂಲ ಕೆದಕಿದರೆ ಸಂತಾನ ಪಡೆದದ್ದು ‘ರಾಜ್ಯಾಧಿಕಾರದ ಪ್ರಾಪ್ತಿ’ಗೆ ಎಂಬುದು ಸುಸ್ಪಷ್ಟ. ಆದುದರಿಂದಲೇ ಅಸಹಜವಾಗಿ ಗಾಂಧಾರಿಯ ಗರ್ಭಸ್ಥ ಪಿಂಡದಿಂದ ವ್ಯಾಸಾನುಗ್ರಹದ ಮೂಲಕ ಹುಟ್ಟಿದ ಆದರೆ ಹುಟ್ಟಿ ಸಾಯುವವರೆಗೆ ಚೆನ್ನಾಗಿ ಬಾಳಿ ಬದುಕಿದವನು ನಾನು.” (ಪು.೨೦-೨೧). ನೂರು ಮಂದಿಯಲ್ಲಿ ಹಿರಿಯ ಕೌರವ ದುರ್ಯೋಧನನಿಗೂ ರಾಜ್ಯಾಧಿಕಾರದ ಲಾಲಸೆ ಹುಟ್ಟಿದ್ದರಲ್ಲಿ ತಪ್ಪೇನಿದೆ? ಆದರೆ ಪರಿಣಾಮದಲ್ಲಿ ಅದು ವ್ಯತಿರಿಕ್ತವೇ ಆಗಿ ಹೋಯಿತಲ್ಲ:

“ರಾಜ್ಯಲೋಭದ ಮಹತ್ವಾಕಾಂಕ್ಷೆಯು ಬಹಳ ಹಿಂದಿನಿಂದಲೇ ಹರಿದು ಬಂದಿತ್ತು. ಅದರೊಂದಿಗೆ ನಮ್ಮ ನಮ್ಮ ದಾಯಾದ್ಯಮತ್ಸರವೂ ಕೂಡಿಕೊಂಡಿತು. ಅಂತೆಯೇ ಕೈಮೀರಿದ ಪರಿಸ್ಥಿತಿಯಿಂದ ಮನಸ್ಸು ರೋಸಿ ಹೋಯಿತು. ಏನಾದರೂ ಒಂದು ಆಗಿಯೇ ಹೋಗಲಿ ಎಂದು ನಾನು ಯುದ್ಧವನ್ನೇ ಹಿಡಿದದ್ದು. ನಾನು ಹಠ ಮಾಡಿ ಯುದ್ಧವನ್ನು ಆಹ್ವಾನಿಸಿದ್ದು ನಿಜ… ಸತ್ತವರ ಬಂಧುಗಳು ಅತ್ತಿರಬಹುದು. ಗೆದ್ದವರಿಗೆ ರಾಜಪಟ್ಟವು ಸಿಕ್ಕಿರಬಹುದು.“

ದುರ್ಯೋಧನ ಒಪ್ಪಿಕೊಳ್ಳುವ ಒಂದೇ ಅಪರಾಧ ಎಂದರೆ ಅದು ದ್ರೌಪದಿಯ ಸೆರಗಿಗೆ ಕೈ ಹಾಕಿದ ಪ್ರಕರಣ:

“ತಮ್ಮನಾದ ದುಶ್ಯಾಸನನು ಎದ್ದು ಅವಳ ಸೆರಗನ್ನು ಜಗ್ಗಿದ. ‘ದ್ರೌಪದಿಯ ವಸ್ತ್ರಾಪಹಾರ’ ಎಂದು ವರ್ಣಿಸಿ ಹೇಳುವಷ್ಟು ಏನೂ ನಡೆಯಲಿಲ್ಲ. ಆದರೂ ಅಷ್ಟೇ ಆದರೂ ನಮ್ಮದು ಅಪರಾಧವೆಂದೇ ಹೇಳಬಹುದು. ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಳ್ಳಲೇಬೇಕು.” (ಪು.೧೮). ಈ ಮಾತು ಮುಂದೆ ಆಯೋಗದ ತೀರ್ಪು ಪ್ರಕಟಣೆಯ ಸಂದರ್ಭದಲ್ಲಿ ಮಹತ್ವ ಪಡೆಯುತ್ತದೆ.

ಭೀಷ್ಮ –

ಉಭಯಕುಲಪಿತಾಮಹ ಭೀಷ್ಮರದ್ದು ಅವರಾಗಿಯೇ ಆಹ್ವಾನಿಸಿಕೊಂಡ ದುರಂತ ಎಂದರೆ ತಪ್ಪಾಗಲಾರದು. ಅತ್ಯಂತ ನಿರ್ಣಾಯಕ ಎನಿಸಬಹುದಾದ ಘಟನೆಗಳು ನಡೆದಾಗ ಭೀಷ್ಮರು ವಹಿಸಿದ ಮೌನ ಕುರುಕುಲಕ್ಕೆ ಕುಠಾರಪ್ರಾಯವಾಗಿ ಪರಿಣಮಿಸಿತು.

ದ್ರೌಪದಿಯ ವಸ್ತ್ರಾಪಹರಣ ಅಂತಹ ಒಂದು ಸಂದರ್ಭ.

“ಉಟ್ಟ ಸೀರೆಯ ಸೆರಗಿಗೆ ಕೈಹಚ್ಚುವುದಷ್ಟೇ ಆದರೂ ಅದು ಎಂತಹ ನೀಚ ಕೃತ್ಯ? ನಾನದನ್ನು ತಡೆಯಬೇಕಾಗಿತ್ತು, ಆಗಲಿಲ್ಲ.” (ಪು.೨೯).

ಅಂತೆಯೇ ಕೌರವ ಪಾಂಡವರಲ್ಲಿ ಬಾಲ್ಯದಿಂದಲೇ ಬೆಳೆದು ಬಂದ ದಾಯಾದ್ಯಮತ್ಸರವನ್ನು ಹತ್ತಿಕ್ಕುವ ಪ್ರಯತ್ನವನ್ನೂ ಭೀಷ್ಮರು ಮಾಡಲಿಲ್ಲ. ಅದನ್ನು ಬಾಲಿಶ ವರ್ತನೆಯೆಂದೆ ತಳ್ಳಿ ಹಾಕಿದರು. ಮನೆಗೂ, ಮನೆತನಕ್ಕೂ ಹಿರಿಯನಾಗಿ ಭೀಷ್ಮರು ತನ್ನ ಕರ್ತವ್ಯದಲ್ಲಿ ಎಡವಿದ್ದು ಮತ್ತು ಈ ಕರ್ತ್ಯವಲೋಪದಿಂದ ಇಡೀ ಕುರುವಂಶವೇ ನಾಶವಾಗುವ ದುಃಸ್ಥಿತಿ ಬಂದದ್ದು, ಅದಕ್ಕೆ ಭೀಷ್ಮರೆ ಸಾಕ್ಷಿಯಾದದ್ದು  ಒಂದು ಸಾರ್ವಕಾಲಿಕ ಪಾಠವಾಗಿ ನಮ್ಮೆಲ್ಲರನ್ನೂ ಕಾಡುತ್ತದೆ ಅಲ್ಲವೇ? ಭೀಷ್ಮರ ಈ ಮಾತು ಗಮನಾರ್ಹ:

“ಇತ್ತಂಡದವರೂ ನನಗೆ ಮೊಮ್ಮಕ್ಕಳು. ಆದರೂ ಕೌರವ ಪಕ್ಷದಲ್ಲಿದ್ದು ಪಾಂಡವರೊಂದಿಗೆ ಹೋರಾಡಿದೆ. ನನ್ನ ಪ್ರಾರಬ್ಧ ಹಾಗೆ ಮಾಡಿಸಿತು. ನಾನು ಬಹಳ ದೀರ್ಘಕಾಲ ಬದುಕಿದವನು. ಮೂರು ತಲೆಮಾರಿನವರೆಗೂ ಬದುಕಿ ಉಳಿದವನು… ಹೆಚ್ಚು ಬದುಕಿಯೇ ಬದುಕಿನ ಕಷ್ಟವನ್ನು ಹೆಚ್ಚಿಸಿಕೊಂಡೆನೆಂದು ಅನಿಸುತ್ತದೆ.” (ಪು.೨೨).

ದ್ರೋಣ –

ಮುಂದಿನ ಪಾತ್ರ ದ್ರೋಣರದ್ದು. ಇಲ್ಲಿ ಎತ್ತಿರುವ ಮುಖ್ಯ ಪ್ರಶ್ನೆ ವರ್ಣಾಶ್ರಮ ಧರ್ಮಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಬ್ರಾಹ್ಮಣನಾದ ದ್ರೋಣರು ಪ್ರವೃತ್ತಿಯಲ್ಲಿ ಕ್ಷಾತ್ರತೇಜಕ್ಕೆ ಮಹತ್ವಕೊಟ್ಟು ಅದನ್ನೇ ಆಶ್ರಯಿಸಿದರು. ಭೀಷ್ಮರ ಶರಶಯ್ಯೆ ಪ್ರಕರಣದ ಬಳಿಕ ದ್ರೋಣರು ಕೌರವ ಪಕ್ಷದ ಸೇನಾಧಿಪತಿಯಾಗಿ ತನ್ನ ಶಿಷ್ಯಂದಿರ ವಿರುದ್ಧವೇ ಹೋರಾಡಿದರು. ಈ ಬಗ್ಗೆ ದ್ರೋಣರಿಗೂ ಒಂದು ಸಂಶಯ ಕಾಡಿತ್ತು:

“ಬ್ರಾಹ್ಮಣನಾಗಿ ಹೀಗೆ ಯುದ್ಧ ಭಾಗಿಯಾದುದು ಸರಿಯಲ್ಲವೋ ಏನೋ..? ವರ್ಣಾಶ್ರಮ ಧರ್ಮದ ಕಟ್ಟುಪಾಡುಗಳು ಒಂದಿಷ್ಟು ಶಿಥಿಲಗೊಂಡಿತ್ತೋ ಏನೋ?” (ಪು.೩೩).

ತಂದೆ ಭಾರಧ್ವಾಜರ ರೇತಸ್ಸು ಅವರ ತಪಃಶಕ್ತಿಯಿಂದ ದೊನ್ನೆಯೊಂದರಲ್ಲಿ ಶೇಖರಿಸಲ್ಪಟ್ಟು ಹುಟ್ಟಿದ್ದರಿಂದಲೇ ‘ದ್ರೋಣ’ ಎಂದು ಕರೆಯಲ್ಪಟ್ಟವರು. ಹುಟ್ಟಿಗೂ ಬೆಳವಣಿಗೆಗೂ ಸಂಬಂಧ ಕಲ್ಪಿಸುವ ಮನಃಶಾಸ್ತ್ರದ ವಿಚಾರಧಾರೆಯ ಎಳೆಯನ್ನು ದ್ರೋಣರ ಪಾತ್ರಕ್ಕೆ ಅನ್ವಯಿಸುವ ದೇರಾಜೆಯವರು ದ್ರೋಣರ ಬಾಯಿಯಿಂದ ಹೀಗೆ ಹೇಳಿಸುತ್ತಾರೆ:

“ನಮ್ಮ ತೀರ್ಥರೂಪರಿಗೆ ಬಯಸಿದ ಹೆಣ್ಣು (ದೇವಲೋಕದವಳು) ಸಿಗಲಿಲ್ಲ. ಬಯಸದೇ ಇದ್ದ ಮಗನೊಬ್ಬನ ಪಾಲನೆಯು ಮಾತ್ರ ಪ್ರಾಪ್ತಿಸಿತು. ತೃಪ್ತಿಯಾಗದ ಕಾಮವೇ ಕಾರಣವಾಗಿ, ನಷ್ಟಚೇತನದಿಂದ ಹುಟ್ಟಿದ ನನಗೆ ಜೀವನದಲ್ಲಿ ತೃಪ್ತಿ ಹೇಗೆ ಹುಟ್ಟೀತು?” (ಪು.೩೩).

ಈ ಅತೃಪ್ತಿ ದ್ರೋಣರನ್ನು ಜೀವನ ಪರ್ಯಂತ ಕಾಡಿ ಅವರ ಪತನಕ್ಕೂ ಅವರನ್ನು ನಂಬಿದ ಕೌರವನ ಪತನಕ್ಕೂ ಹೇತುವಾಯಿತು. ಇದು ಮೊದಲಿಗೆ ಪ್ರಕಟವಾಗುವುದು ಚಿಕ್ಕಪ್ಪನಾದ ಅಗ್ನಿವೇಶ್ಯರ ಗುರುಕುಲದಲ್ಲಿ ಶಾಸ್ತ್ರಾಧ್ಯಯನ ಮಾಡುವ ಸಂದರ್ಭದಲ್ಲಿ. ಶಾಸ್ತ್ರಕ್ಕಿಂತ ಮಿಗಿಲಾಗಿ ಶಸ್ತ್ರಗಳ ಕಡೆಗೆ ಅವರ ಧ್ಯಾನ ಹೋಯಿತು. ಸಹಪಾಠಿ ಪಾಂಚಾಲ ರಾಜಕುವರ ದ್ರುಪದನ ರಾಜಭೋಗವು ದ್ರೋಣರಿಗೆ ದುಃಖಕ್ಕೆ ಕಾರಣವಾಗುತ್ತದೆ:

“ಅವನಿಗಿರುವ (ದ್ರುಪದನಿಗೆ) ಅನುಕೂಲತೆಗಳು ನನಗಿಲ್ಲವಲ್ಲ ಎಂದು ನನಗೆ ದು:ಖವಾಗುತ್ತಿತ್ತು. ನನ್ನ ಬ್ರಾಹ್ಮಣ್ಯವು ದಾರಿದ್ರ್ಯವನ್ನು ಅನುಭವಿಸುವುದಕ್ಕೆ ಮಾತ್ರ ಎಂದು ಅನಿಸುತ್ತಿತ್ತು.” (ಪು.೩೩).

ಇದನ್ನು ದ್ರುಪದನಲ್ಲಿ ತೋಡಿಕೊಂಡಾಗ ಆತ ವಯೋಸಹಜ ಹೆಗ್ಗಳಿಕೆಯಿಂದಲೋ, ಸ್ನೇಹಿತನ ಮೇಲಿನ ಕರುಣೆಯಿಂದಲೋ

“ತಾನು ಪಾಂಚಾಲ ದೇಶದ ಪಟ್ಟವನ್ನೇರಿದ ಮೇಲೆ ಅರ್ಧ ರಾಜ್ಯವನ್ನೇ ನನಗಿತ್ತು ಮನ್ನಿಸುತ್ತೇನೆ” (ಪು.೩೩).

ಎಂದು ನುಡಿದದ್ದನ್ನೇ ಗಂಭೀರವಾಗಿ ಪರಿಗಣಿಸಿ ದ್ರೋಣರು ಆ ಕುರಿತು ಬ್ರಾಹ್ಮಣ್ಯಕ್ಕೆ ವಿರುದ್ಧವಾಗಿ ಲಾಲಸೆಯನ್ನು ಬೆಳೆಸಿಕೊಂಡು ಅದನ್ನು ನಿಜವಾಗಿಸಲು ಪ್ರಯತ್ನಿಸಿದ್ದು ಅವರ ಮೊದಲ ಸೋಲು ಎಂದು ನನ್ನ ಭಾವನೆ. ಸಹಜವಾಗಿ ಗುರುಕುಲದ ವಿದ್ಯಾಭ್ಯಾಸ ಮುಗಿಸಿ ತಮ್ಮ ತಮ್ಮ ಊರುಗಳಿಗೆ ಸಾಗಿದ ಶಿಷ್ಯಂದಿರೆಲ್ಲರೂ ಅವರವರ ಜೀವನವನ್ನು ರೂಪಿಸುವುದರಲ್ಲಿ ವ್ಯಸ್ತರಾಗಿ ಬಿಡುವುದು ಲೋಕರೂಢಿಯಲ್ಲವೇ? ದ್ರೋಣರು ಮಾತ್ರ ತಮ್ಮ ವಿದ್ಯಾಭ್ಯಾಸವನ್ನು ಪರಶುರಾಮರ ಗುರುಕುಲದಲ್ಲಿ ಮುಂದುವರಿಸಿ ಬಳಿಕ ತಾವೇ ಒಂದು ಗುರುಕುಲವನ್ನು ಸ್ಥಾಪಿಸುತ್ತಾರೆ. ಆದರೆ ಅಲ್ಲಿ ಶಿಷ್ಯರ ಕೊರತೆಯಿಂದ ಮತ್ತೆ ಬಡತನಕ್ಕೆ ಶರಣಾದ ದ್ರೋಣರಿಗೆ ಈಗಾಗಲೇ ಪಾಂಚಾಲ ದೇಶದ ರಾಜನಾಗಿ ಅಭಿಷಿಕ್ತನಾದ ಪೂರ್ವಾಶ್ರಮದ ಸಹಪಾಠಿ ದ್ರುಪದನ ನೆನಪಾಗಿ ಅವರ ಅಸಹಜ ಆಸೆ ದ್ರೋಣರನ್ನು ದ್ರುಪದನ ಬಾಗಿಲಿಗೆ ಒಯ್ಯುತ್ತದೆ. ಅಲ್ಲಿ ನಿರೀಕ್ಷೆಯಂತೆ ದ್ರುಪದ ಅವರನ್ನು ಕಡೆಗಣಿಸಿದಾಗ

“ನನ್ನ ಶಿಷ್ಯರಿಂದ ನಿನ್ನನ್ನು ಹಿಡಿದೆಳೆದು ತರಿಸಿ ಮಂಚದಕಾಲಿಗೆ ಬಿಗಿಸುತ್ತೇನೆ. ಆಗ ನನ್ನ ಪರಿಚಯ ನಿನಗಾದೀತು.”(ಪು.೩೪-೩೫).

ಎಂದು ಪ್ರತಿಜ್ಞೆ ಮಾಡಿ ಹಸ್ತಿನಾವತಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ನಡೆದದ್ದೂ ಒಂದು ಪ್ರಚಲಿತ ವಿದ್ಯಮಾನಕ್ಕೆ ವಿರುದ್ಧವಾದುದೇ. ಅದೇನೆಂದರೆ,

“ಅರಸುಮಕ್ಕಳು ಗುರುಕುಲವನ್ನು ಸೇರಿ ಅಲ್ಲಿನ ಆಶ್ರಮ ಜೀವನವನ್ನೇ ಒಗ್ಗಿಸಿಕೊಂಡು ವಿದ್ಯಾಭ್ಯಾಸವನ್ನು ಮಾಡಬೇಕಾದದ್ದು ಪದ್ಧತಿ. ಹಸ್ತಿನಾವತಿಯ ರಾಜಪುತ್ರರು ಹಾಗೆ ಮಾಡಲಿಲ್ಲ… ಶಿಷ್ಯರು ಗುರುವಿನ ಬಡತನದಲ್ಲಿ ಪಳಗಿಯೇ ಕಲಿಯಬೇಕಾಗಿತ್ತು. ಇಲ್ಲಿ ಗುರುವೇ ಶಿಷ್ಯರ ಶ್ರೀಮಂತಿಕೆಯ ಜೀವನದಲ್ಲಿ ಜೀವಿಸತೊಡಗಿದ. ಎಲ್ಲ ವಿಪರೀತವೇ.” (ಪು.೩೫).

ಇಂತಹ ಸಂದರ್ಭದಲ್ಲಿ ದ್ರೋಣರಿಗೆ ಈ ಅರಸು ಮಕ್ಕಳ ಮೇಲೆ ತನ್ನ ಗುರುತ್ವದ ಅಧಿಕಾರ ಚಲಾಯಿಸಲು ಒಂದು ರೀತಿಯ ದಾಕ್ಷಿಣ್ಯ ಅಡ್ಡಿ ಬಂದಿರಬೇಕು ಮತ್ತು ಮುಂದಕ್ಕೂ ಅದೇ ಅವರ ಬಾಯಿ ಕಟ್ಟಿರಬೇಕು ಎಂದು ಧಾರಾಳವಾಗಿ ಊಹಿಸಬಹುದು.

ಆ ಬಳಿಕದ ಪ್ರಸಂಗ ದ್ರುಪದನ ಕುರಿತಾದ ದ್ರೋಣರ ಪ್ರತಿಜ್ಞೆ. ಅದನ್ನು ಅರ್ಜುನನ ಮೂಲಕ ಸಾಧಿಸಿಯೂ ಬಿಟ್ಟರು. ಇದರಿಂದಾಗಿ ಆದ ಪ್ರಮಾದವೆಂದರೆ ಅಲ್ಲಿಯ ತನಕ ಸ್ನೇಹದಿಂದಿದ್ದ ಕುರು-ಪಾಂಚಾಲ ದೇಶಗಳ ನಡುವೆ ವಿನಾ ಕಾರಣ ದ್ವೇಷದ ಬೀಜ ಬಿತ್ತಿದಂತಾಯಿತು. ಮುಂದಕ್ಕೆ ದ್ರುಪದನೇ ಇದನ್ನು ಪ್ರಸ್ತಾಪಿಸುತ್ತಾನೆ. ದ್ರೋಣರ ವೈಯಕ್ತಿಕ ದ್ವೇಷ ಸಾಧನೆಗೆ ಬೆಲೆ ತೆರಬೇಕಾಗಿ ಬಂದದ್ದು ಈ ಎರಡು ರಾಜವಂಶಗಳಿಗೆ. ಆಗಲೇ ದ್ರುಪದ ದ್ರೋಣರನ್ನು ಕೊಲ್ಲುವ ಮಗ ಹುಟ್ಟಬೇಕೆಂದು ಯಾಜೋಪಯಾಜರೆಂಬ ಸೋದರರನನ್ನು ಕರೆತಂದು ಅವರ ಅಧ್ವರ್ಯದಲ್ಲಿ ಯಜ್ಞ ಮಾಡಿಸಿ ಯಜ್ನಕುಂಡದಿಂದಲೇ ದೃಷ್ಟದ್ಯುಮ್ನ ಹಾಗೂ ದ್ರೌಪದಿಯನ್ನು ಮಕ್ಕಳಾಗಿ ಪಡೆದ ಈ ಘಟನೆಗಳೆಲ್ಲಾ ಒಂದಕ್ಕೊಂದು ತಳುಕು ಹಾಕಿಕೊಂಡು ಕುರುಕ್ಷೇತ್ರದಲ್ಲಿ ಸಮಾಪನವಾದದ್ದು ವಿಧಿ ನಿರ್ದೆಶಿತವೋ, ಮನುಷ್ಯ ಸಹಜ ಅನುಲ್ಲಂಘ್ಯ ಯಾದೃಚ್ಚಿಕ ವರ್ತನಾ ವಿಕಾರವೋ ಎಂದು ನಾವು ಯೋಚಿಸಿದಾಗ ಇವೆರಡೂ ಪರಸ್ಪರ ಪ್ರಭಾವಿಸಿಕೊಂಡರೂ ಮನುಷ್ಯ ಸಹಜ ದೌರ್ಬಲ್ಯಗಳೇ ಮೇಲುಗೈ ಸಾಧಿಸಿದವೆಂದು ದೇರಾಜೆಯವರ ಅಂತರಂಗಕ್ಕೆ ಅರಿವಾಗಿದೆ.

ಇದನ್ನು ಓದುಗರಿಗೆ ದೇರಾಜೆಯವರು ಸಂವಹನಗೊಳಿಸುವ ರೀತಿ ಅನನ್ಯ. ಯಾವುದೇ ಭಾವೋದ್ರೇಕಕ್ಕೆ ಒಳಗಾಗದೆ ಪ್ರತಿಯೊಂದು ಪಾತ್ರದ ಒಳಹೊಕ್ಕು ಆ ಪಾತ್ರದ ಸ್ವಭಾವವನ್ನು ಕೆಲವೇ ವಾಕ್ಯಗಳಲ್ಲಿ ಸಂದಿಗ್ಧಕ್ಕೆಡೆಯಿಲ್ಲದಂತೆ ಅವರು ಪ್ರಸ್ತುತ ಪಡಿಸುತ್ತಾರೆ. ಓದುಗನಿಗೆ ಒಂದು ಹೊಸನೋಟ ದೊರಕುತ್ತದೆ.

ಇನ್ನು ನಾಳೆಗೆ

‍ಲೇಖಕರು nalike

July 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: