ದುಡಿಮೆಗೆ ಹೊಸ ಆಯಾಮ- ಕಡಲು ಕಾಯಕ

ಪಾರ್ವತಿ ಜಿ ಐತಾಳ್

‘ಕಡಲು ಕಾಯಕ’ ಖ್ಯಾತ ಚಿಂತಕಿ ಮತ್ತು ಲೇಖಕಿ  ಡಾ.ರೇಖಾ ವಿ ಬನ್ನಾಡಿಯವರು ಇತ್ತೀಚೆಗೆ ಪ್ರಕಟಿಸಿರುವ ಅವರ ಪಿ.ಹೆಚ್.ಡಿ ಸಂಶೋಧನಾ ಮಹಾಪ್ರಬಂಧದ ಪುಸ್ತಕ ರೂಪ. ಇಲ್ಲಿ ಅವರು ಶಿವರಾಮ ಕಾರಂತರ ಆಯ್ದ 23 ಕಾದಂಬರಿಗಳಲ್ಲಿ ದುಡಿಮೆಯ ಪರಿಕಲ್ಪನೆಯ ಕುರಿತು ವಿಸ್ತಾರವಾಗಿ ಚರ್ಚಿಸಿದ್ದಾರೆ. 302 ಪುಟಗಳ ಈ ಗ್ರಂಥದಲ್ಲಿ ಹಿರಿಯ ಲೇಖಕಿ ಡಾ.ಶಾಂತಾ ಇಮ್ರಾಪೂರ ಅವರ ವಿದ್ವತ್ಪೂರ್ಣ ಮುನ್ನುಡಿ, ಮತ್ತು ವಿಷಯಕ್ಕೆ ಸಂಬಂಧಿಸಿದ ಎಂಟು ಅಧ್ಯಾಯಗಳಿವೆ. 

ದುಡಿಮೆಯ ಕುರಿತಾದ ಅಧ್ಯಯನದ ಉದ್ದೇಶ, ವ್ಯಾಪ್ತಿ ಮತ್ತು ಮಹತ್ವಗಳ ಸ್ಥೂಲ ವಿವರಣೆಗಳಿಂದ ಆರಂಭವಾಗುವ ಈ ಕೃತಿ ಮಾನವನ ದುಡಿಮೆಯ ಚರಿತ್ರೆ, ದುಡಿಮೆಯ ವರ್ಗೀಕರಣ, ಹಾಗೂ ದುಡಿಮೆಯ ಆಧುನಿಕ ಸಂದರ್ಭಗಳ ಕುರಿತು ಸುದೀರ್ಘವಾಗಿ ಚರ್ಚಿಸುತ್ತದೆ. ಸ್ತ್ರೀವಾದವು ಮಹಿಳೆಯ ಮನೆಯೊಳಗಿನ ದುಡಿಮೆಯನ್ನು ಆರ್ಥಿಕತೆಯ ದೃಷ್ಟಿಯಿಂದ ಪರಿಗಣನೆಗೆ ತೆಗೆದುಕೊಳ್ಳದಿರುವ ಯಜಮಾನ ಸಂಸ್ಕೃತಿಯ ನಿರ್ಲಕ್ಷ್ಯವನ್ನು ಮತ್ತು ಸದಾ ಶೋಷಿತ ವರ್ಗದ ಬಗ್ಗೆ ಮೃದು ಧೋರಣೆ ತೋರಿಸುವ ಮಾರ್ಕ್ಸ್ ಕೂಡಾ ಮಹಿಳೆಯರು ಇಡೀ ಕುಟುಂಬದ ಹಿತಕ್ಕೋಸ್ಕರ ಹಗಲಿರುಳೆನ್ನದೆ ದುಡಿಯುವುದನ್ನು ‘ಸಹಜ ದುಡಿಮೆ’ ಎಂದು ಹಗುರವಾಗಿ ತೆಗೆದುಕೊಳ್ಳುವುದನ್ನು ಅವರು ಇಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸುತ್ತಾರೆ.   

ದುಡಿಮೆಯ ಕುರಿತು ಕಾರಂತರ ಬದುಕು-ಬರಹಗಳಲ್ಲಿ ವ್ಯಕ್ತವಾದ ಚಿಂತನೆಗಳನ್ನು ಅವರು ಬದುಕಿದ ಪರಿಸರದ ಪೂರಕ ಅಧ್ಯಯನದೊಂದಿಗೆ ಚಿತ್ರಿಸುತ್ತ ಕಾರಂತರು ತಮ್ಮ ಕಾದಂಬರಿಗಳಲ್ಲಿ  ಕೌಟುಂಬಿಕ ಹಿತದೃಷ್ಟಿಯಿಂದ ನಿಸ್ವಾರ್ಥವಾಗಿ ದುಡಿಯುವ ಸ್ತ್ರೀಯರ ಅನವರತ ಪರಿಶ್ರಮ ಮತ್ತು ನಿರಂತರ ದುಡಿಮೆಯ ಬಗ್ಗೆ ಪುರುಷ ಪ್ರಧಾನ ಸಮಾಜವು ತೋರಿಸಿದ  ತಾತ್ಸಾರದ ಬಗ್ಗೆ  ಸೂಚ್ಯವಾಗಿ ಹೇಳುವ ಬಗೆಯನ್ನು ವಿಶ್ಲೇಷಿಸುತ್ತಾರೆ. ನಗರದ ವಿದ್ಯಾವಂತ ಮಹಿಳೆಯರಿರಲಿ, ಉದ್ಯೋಗಸ್ಥ ಮಹಿಳೆಯರಿರಲಿ, ಗ್ರಾಮೀಣ ಪ್ರದೇಶದ ಅಶಿಕ್ಷಿತ ಅಥವಾ ಅವಿದ್ಯಾವಂತ ಮಹಿಳೆಯರಿರಲಿ ಎಲ್ಲರೂ ಮನೆಯೊಳಗೆ ಮಾಡುವ ದುಡಿಮೆಗೆ ಸಮಾಜದ ದೃಷ್ಟಿಯಲ್ಲಿ ಏನೂ ಬೆಲೆಯಿಲ್ಲದ ಸ್ಥಿತಿಯನ್ನು ವಿರೋಧಿಸುವ ಧ್ವನಿ ಸೂಚ್ಯವಾಗಿ ಕಾರಂತರ ಕಾದಂಬರಿಗಳಲ್ಲಿರುವುದನ್ನು ಲೇಖಕಿ ಗುರುತಿಸುತ್ತಾರೆ.

ಪುರುಷರ ದುಡಿಮೆಯ ಲೋಕದ ಪರಿಕಲ್ಪನೆ ಮತ್ತು ವಿನ್ಯಾಸಗಳನ್ನು ಚಿತ್ರಿಸುವಾಗಲೂ ಕಾರಂತರು ಮೇಲುವರ್ಗದ ಯಾಜಮಾನ್ಯ ಧೋರಣೆಯ ಪುರುಷರ ದುಡಿಮೆ ಮತ್ತು ಕೆಳವರ್ಗದ ಬಡವರನ್ನು ಪ್ರತ್ಯೇಕವಾಗಿ ನಿಲ್ಲಿಸುತ್ತಾರೆ. ಭೂಮಿ ಮತ್ತು ಅಧಿಕಾರಗಳನ್ನು ಹೊಂದಿರುವ ಮೇಲುವರ್ಗದವರು ಸ್ವಾರ್ಥಿಗಳಾಗಿ ಬಡವರನ್ನು ಕಡಿಮೆ ಕೂಲಿಗೆ ಹೆಚ್ಚು ದುಡಿಸಿ ವಂಚಿಸುವ ರೀತಿಯನ್ನು ಅನೇಕ ಕಾದಂಬರಿಗಳಲ್ಲಿ ವರ್ಣಿಸಿದ್ದಾರೆ. ಅಲ್ಲದೆ ಮಹಿಳೆ ಮತ್ತು ಪುರುಷರ ದುಡಿಮೆಯ ಲೋಕಗಳ ಸಾದೃಶ್ಯ ಮತ್ತು ವೈದೃಶ್ಯಗಳ ಬಗೆಗೆ ವಿವಿಧ ಕಾದಂಬರಿಗಳಲ್ಲಿ ಕಾಣುವ ವಿವಿಧ ಸಂದರ್ಭಗಳನ್ನೂ ಪಾತ್ರಗಳನ್ನೂ ಉಲ್ಲೇಖಿಸುತ್ತ ಅಧ್ಯಾಯಗಳು ಮುಂದುವರಿಯುತ್ತವೆ.  

ಕಾರಂತರ  ಮರಳಿ ಮಣ್ಣಿಗೆ, ಚೋಮನ ದುಡಿ, ನಂಬಿದವರ ನಾಕ ನರಕ, ಸಮೀಕ್ಷೆ, ಸಂನ್ಯಾಸಿಯ ಬದುಕು, ಮುಗಿದ ಯುದ್ಧ, ಬೆಟ್ಟದ ಜೀವ, ಕುಡಿಯರ ಕೂಸು, ಕರುಳಿನ ಕರೆ, ಕನ್ನಡಿಯಲ್ಲಿ ಕಂಡಾತ, ಇಳೆಯೆಂಬ…,ಇದ್ದರೂ ಚಿಂತೆ- ಮೊದಲಾದ ಕಾದಂಬರಿಗಳು ಮಾತ್ರವಲ್ಲದೆ ಅವರ ಸಮಕಾಲೀನರಾದ ಕುವೆಂಪು, ಹೆಚ್.ಎಲ್.ನಾಗೇಗೌಡ ಮತ್ತು ರಾವ್ ಬಹದ್ದೂರರ ಕಾದಂಬರಿಗಳನ್ನು ತೌಲನಿಕ ನೆಲೆಯಲ್ಲಿ ಚರ್ಚಿಸಿದ್ದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಯಾಕೆಂದರೆ ಸಂಶೋಧನೆಯಲ್ಲಿ ತೌಲನಿಕ ಅಧ್ಯಯನವು ಆಯ್ದುಕೊಂಡ ವಸ್ತು-ವಿಷಯಗಳ ಅಧ್ಯಯನದ ಆಳ-ವಿಸ್ತಾರಗಳನ್ನು ಹೆಚ್ಚಿಸಿ ಕೃತಿಯ ಯಶಸ್ಸಿಗೆ ದಾರಿ ಮಾಡಿ ಕೊಡುತ್ತದೆ. ಈ ಕೆಲಸವನ್ನು ಇಲ್ಲಿ ಕೃತಿಕಾರರು ಮಾಡಿರುವುದು ಅಭಿನಂದನೀಯ.   

ಈ ಕೃತಿಗೆ ‘ಕಡಲು ಕಾಯಕ’ ಎನ್ನುವ ಒಂದು ಆಕರ್ಷಕ ಮತ್ತು ಅರ್ಥಪೂರ್ಣ ಶೀರ್ಷಿಕೆಯನ್ನು ಲೇಖಕಿ ಕೊಟ್ಟಿದ್ದಾರೆ. ಕಾಯಕ ಅಂದರೆ ಬರೇ ದೈಹಿಕ ಪರಿಶ್ರಮ ಅಲ್ಲ. ಅಲ್ಲಿ ಫಲ ಬಯಸದ ನಿಷ್ಕಾಮ ಭಾವವಿದೆ.ಅದಕ್ಕೊಂದು ಆಧ್ಯಾತ್ಮಿಕ ನೆಲೆಯೂ ಇದೆ. ಕಾರಂತರ ಕಾದಂಬರಿಗಳಲ್ಲಿ ಮಹಿಳೆಯರು ಮತ್ತು ಕೆಳವರ್ಗದವರ ದುಡಿಮೆಗೆ ಸೂಕ್ಷ್ಮನೆಲೆಯಲ್ಲಿ ಈ ಅರ್ಥವಿರುವುದನ್ನು ಲೇಖಕಿ ಗುರುತಿಸಿದ್ದೇ ಅವರ ಈ ಶೀರ್ಷಿಕೆಗೆ ಕಾರಣವಾಗಿದೆ.

ಭಾಷಾ ಪ್ರೌಢಿಮೆಯ ದೃಷ್ಟಿಯಿಂದ ಇಡೀ ಕೃತಿ ತೂಕ ಮತ್ತು ಗಾಂಭೀರ್ಯಗಳನ್ನು ಹೊಂದಿದೆ. ಸಂಶೋಧನಾ ಮಹಾಪ್ರಬಂಧವಾದ್ದರಿಂದ ಕೃತಿಯುದ್ದಕ್ಕೂ ವಸ್ತುನಿಷ್ಠ ಧ್ವನಿಯನ್ನು ಕಾಯ್ದುಕೊಳ್ಳಲಾಗಿದೆ. ನೂರಕ್ಕೂ ಹೆಚ್ಚು ಅಧ್ಯಯನ ಗ್ರಂಥಗಳನ್ನು ಪರಾಮರ್ಶಿಸಿ ಅವುಗಳಿಂದ ಸಂದರ್ಭೋಚಿತ ಉದ್ಧರಣೆಗಳನ್ನು ಉಲ್ಲೇಖಿಸಿ, ತಮ್ಮದೇ ಆದ ಚಿಂತನೆಯ ಮೂಸೆಯಲ್ಲಿ ಕರಗಿಸಿ ಪ್ರಸ್ತುತ ಪಡಿಸಿದ ಈ ಕೃತಿ ಅಧ್ಯಯನ ಯೋಗ್ಯವಾಗಿದ್ದು ಮುಂದೆ ಸಂಶೋಧನಾ ಕಾರ್ಯ ಕೈಗೊಳ್ಳುವವರಿಗೆ ಪರಾಮರ್ಶನ ಗ್ರಂಥವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ.

‍ಲೇಖಕರು Avadhi

March 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: