ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’

ದೀಕ್ಷಿತ್ ನಾಯರ್

ವಿಕ್ರಮ ಬಿ.ಕೆ ಅವರು ಅಸಂಖ್ಯಾತ ಕವಿಗಳ ಕವಿತೆಗಳಿಗೆ ದನಿ ನೀಡಿ ಕಾವ್ಯ ರಸಿಕರ ಹೃದಯವನ್ನು ಅರಳಿಸಿದವರು. ಕವಿತೆಗಳಿಗೆ ದನಿಯಾಗುತ್ತಲೇ ಅವರು ಎಲ್ಲರಿಗೂ ಹತ್ತಿರವಾದವರು. ಕವಿತೆಯ ಓದಿನಿಂದಲೇ ವಿಕ್ರಮ ಬಿ ಕೆ ಅವರು ನಿರಭ್ರವಾದ ಪ್ರೀತಿಯನ್ನು ಸಂಪಾದಿಸಿದ್ದಾರೆ.

ವಿಕ್ರಮ ಬಿ.ಕೆ ಎಂಬ ಹೆಸರು ಕೇಳಿದೊಡನೆ ನನಗೆ ದಿಗ್ಗನೆ ನೆನಪಾಗುವುದು “ಬುದ್ಧ-ಬುದ್ಧ ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ” ಎಂಬ ಬೇಂದ್ರೆ ಅವರ ಕವಿತೆ. ಹೌದು ವಿಕ್ರಮ ಬಿ ಕೆ ಅವರ ದನಿಯಲ್ಲಿ ಕೇಳಿದ ನಂತರ ಆ ಕವಿತೆ ನನಗೆ ತೀರಾ ಹಿಡಿಸಿತು ಮತ್ತು ಕಾಡಿತು.
ಅಂದಿನಿಂದ ಇಲ್ಲಿಯವರೆಗೂ ವಿಕ್ರಂ ಬಿ.ಕೆ ಅವರ ದನಿಯಲ್ಲಿನ ಎಲ್ಲಾ ಕವಿತೆಗಳಿಗೂ ನಾನು ಖಾಯಂ ಕೇಳುಗ. ಅವರ ದನಿಯಲ್ಲಿ ಕವಿತೆ ಕಳೆಕಟ್ಟುತ್ತದೆ ಮತ್ತು ಕೇಳುಗರ ಎದೆ ಮುಟ್ಟುತ್ತದೆ.

ಕವಿತೆಗಳನ್ನು ಹಿಡಿ ಹಿಡಿಯಾಗಿ ಪ್ರೀತಿಸಿ ಮತ್ತು ಆರಾಧಿಸಿದ ಕಾರಣದಿಂದಲೇ ಏನೋ ಕವಿತೆಗಳನ್ನು ಬರೆಯುವ ಕಲೆಯೂ ವಿಕ್ರಮ ಬಿ ಕೆ ಅವರಿಗೆ ಸಿದ್ಧಿಸಿದೆ. ಇತರರ ಕವಿತೆಗಳಿಗೆ ದನಿಯಾಗುವಂತೆಯೇ ಸಮರ್ಥವಾಗಿ ಕವಿತೆಗಳನ್ನು ಅವರು ಬರೆಯಬಲ್ಲವರಾಗಿದ್ದಾರೆ. ಹಾಗಾಗಿ ಈಗ ವಿಕ್ರಮ ಬಿ.ಕೆ ಅವರ ದನಿ ಅಷ್ಟೇ ಅಲ್ಲ ಅವರ ಕವಿತೆಗಳು ಕೂಡ ಕನ್ನಡ ಕಾವ್ಯ ಲೋಕದೊಳಗೆ ಚಿರಪರಿಚಿತವಾಗಿವೆ.

ಇದೀಗ ವಿಕ್ರಮ ಬಿ.ಕೆ ಅವರು ಓದುಗರ ಒತ್ತಾಸೆಯ ಮೇರೆಗೆ ‘ನಾವಿಬ್ಬರೇ ಗುಬ್ಬಿ’ ಎಂಬ ವಿಭಿನ್ನ ಮತ್ತು ವಿಶಿಷ್ಟವಾದ ಕವಿತಾ ಸಂಕಲನವನ್ನು ಅವರದ್ದೇ ತ್ರಿಲೋಕ ಬರಹ ಪ್ರಕಾಶನದಿಂದ ಪ್ರಕಟಿಸಿದ್ದಾರೆ.

35 ಬಿಡಿ ಕವಿತೆಗಳಿರುವ ‘ನಾವಿಬ್ಬರೇ ಗುಬ್ಬಿ’ ಕೃತಿಯಲ್ಲಿ ಹೆಚ್ಚಾಗಿ ವಾಸ್ತವತೆಯೇ ಕಾಣಿಸಿಕೊಂಡಿದೆ. ಕವಿತೆಗಳು ತೀರಾ ಸರಳ ಎನಿಸಿದರೂ ಅಲ್ಲಿ ಗಟ್ಟಿತನವಿದೆ. ಕವಿ ವಿಕ್ರಮ ಬಿ ಕೆ ಅವರು ಹೇಳಬೇಕೆನಿಸಿದ್ದನ್ನು ಮುಲಾಜಿಲ್ಲದೆ ಕವಿತೆಯ ಮೂಲಕ ಹೇಳಿದ್ದಾರೆ. ಕವಿತೆಯ ವಸ್ತು ವಿಷಯಗಳಲ್ಲೂ ಯಾವುದೇ ವಿನಾಯಿತಿ ತೆಗೆದುಕೊಂಡಿಲ್ಲ. ತಾವು ಕಂಡದ್ದು ಮತ್ತು ಕಾಣ ಬಯಸುವುದೆಲ್ಲವನ್ನೂ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ. ಕವಿ ವಿಕ್ರಮ ಬಿ.ಕೆ ಕವಿತೆಗಳಲ್ಲಿಯೂ ದನಿ ಬಿಚ್ಚಿ ಮಾತನಾಡಿದ್ದಾರೆ. ಸಮಾಜದಲ್ಲಿನ ಒಂದಿಷ್ಟು ಅವ್ಯವಸ್ಥೆಯ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲಲ್ಲಿ ಮರುಗಿ ಮೌನವಾಗಿದ್ದಾರೆ. ಮತ್ತೆ ಮೈ ಕೊಡವಿ ಅಸಹಾಯಕರಿಗೆ ಸಾಂತ್ವನ ಹೇಳಿದ್ದಾರೆ. ಒಟ್ಟಾರೆ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಕವಿಯಾಗಿ ತಮ್ಮ ಪಾತ್ರವನ್ನು ವಿಕ್ರಮ ಬಿ.ಕೆ ಶಕ್ತವಾಗಿ ನಿಭಾಯಿಸಿದ್ದಾರೆ.

ಕವಿಯ ಒಂದಿಷ್ಟು ಕವಿತೆಯ ಸಾಲುಗಳು ನಿಮ್ಮ ಓದಿಗಾಗಿ;

(‘ನಾನು’ ಎಂಬ ಕವಿತೆಯಿಂದ ಆಯ್ದದ್ದು)

“ಗಾಢ ಪ್ರೀತಿಗೆ
ಸಿಗದ ಒಪ್ಪಿಗೆ
ಹೇಳಲಾಗದ ಮಾತಿಗೆ-
ಮೌನ ಸಮರ್ಪಣೆ
ಕುತೂಹಲ ಕೆಲವರಿಗೆ
ನಿಗೂಢ ಹಲವರಿಗೆ
ನಾನು!”

ಕವಿ ವಿಕ್ರಮ ಬಿ.ಕೆ ತಮ್ಮ ಮೇಲಿನ ಕವಿತೆಯ ಸಾಲುಗಳ ಮೂಲಕ ‘ನಾನು’ ಎಂಬ ತಮ್ಮೊಳಗಿನ ಪಾತ್ರವನ್ನು ಹೊರಗೆಳೆದಿದ್ದಾರೆ. ಅವರನ್ನು ಬಗೆ ಬಗೆಯಾಗಿ ಕಾಣುವ ಜನರ ಬಗ್ಗೆ ತಿಳಿಸಿದ್ದಾರೆ. ಕೊನೆಗೆ ಅವರು ಅವರಾಗಿಯೇ ಉಳಿಯಲು ಪ್ರಯತ್ನಿಸಿದ್ದಾರೆ.
ಪ್ರಾರಂಭದಲ್ಲಿ ಇದೊಂದು ಗೊಂದಲಮಯ ಕವಿತೆ ಎನಿಸಿದರೂ ಓದುತ್ತಾ ಹೋದಂತೆ ನಮ್ಮೊಳಗಿನ ನಮ್ಮನ್ನು ಕೂಡ ನಾವು ಅರ್ಥೈಸಿಕೊಳ್ಳುತ್ತೇವೆ. ಕವಿಯ ಮಾಗಿದ ಅನುಭವ ನಮಗೂ ತಟ್ಟಿದಂತಾಗುತ್ತದೆ.

ಇನ್ನು ಕವಿಯ “ಮಂಜಮ್ಮ ಜೋಗತಿ” ಕವಿತೆಯಲ್ಲಿನ ಕೆಲವು ಸಾಲುಗಳನ್ನು ನೀವು ಗಮನಿಸಿ;

“ಅವರು ಹೇಳಿದರಂತೆ
ಎಡಬೇಡ-ಎಡವಟ್ಟು
ಬಲ ಬೇಡ- ಬಲು ಮೊದ್ದು
ಮಧ್ಯೆ ಮಧುರ;
ಎಡವಟ್ಟುಗಳ ಬಿಟ್ಟು
ಹೃದಯವಂತರಾಗುವ
ಅದುವೇ ಜನರ ಉದ್ಧಾರ”

ಮಂಜಮ್ಮ ಜೋಗತಿ ಅವರ ಪಾಲಿಗೆ ದೇವರು ಕೊಟ್ಟ ಮಗನಾಗಿರುವ ವಿಕ್ರಂ ಅವರನ್ನೇ (ಮಂಜಮ್ಮ) ಕವಿತೆಯ ವಸ್ತುವಾಗಿಸಿಕೊಂಡು ಸಮಾಜದ ಕಣ್ಣು ತೆರೆಸುವ ಕೆಲಸವನ್ನು ಮಾಡಿದ್ದಾರೆ. ಹಾಗೂ ಮಾನವೀಯತೆ ಒಂದೇ ಸಫಲ ಸಂವಿಧಾನ ಎಂಬ ಸಂದೇಶವನ್ನು ಸಾರಿದ್ದಾರೆ.

ಹೀಗೆ ವಿಕ್ರಮ ಬಿ.ಕೆ ಅವರ ಪ್ರತಿಯೊಂದು ಕವಿತೆಗಳು ಕೂಡ ಮಾನವೀಯ ಸ್ಪಂದನದ ಕವಿತೆಗಳಾಗಿ ಹುಟ್ಟು ಪಡೆದಿವೆ.
ಅವರೊಳಗಿನ ಕವಿಗೆ ನಮಸ್ಕಾರ!
‘ನಾವಿಬ್ಬರೇ ಗುಬ್ಬಿ’ ಹೆಚ್ಚು ಓದುಗರನ್ನು ತಲುಪಬೇಕು.

ವಿಕ್ರಮ ಬಿ.ಕೆ ಅವರ ಕವಿತೆಗಳು ಮತ್ತಷ್ಟು ಬಿಗಿಯಾಗಲಿ. ಕವಿತೆಗಳು ಅವರಿಗೆ ಎಲ್ಲವನ್ನೂ ಕೊಡಲಿ..

‍ಲೇಖಕರು avadhi

March 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: