ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನ್ಕಕೊಂದು ಜಿಪಿ ಕವಿತೆ- ಕನ್ನಡಿಯು…

ಜಿ ಪಿ ಬಸವರಾಜು

ಹೊರೆಯಲ್ಲ ಕನ್ನಡಿಗೆ
ಕರಿಯು,
ವ್ಯಾಘ್ರನಬ್ಬರಕೆ ಕನ್ನಡಿಯು
ಒಡೆದು ಚೂರಾಗುವುದಿಲ್ಲ

ಕೋತಿ ಹಲ್ಕಿರಿದರೆ
ನಗುವುದು ಕನ್ನಡಿಯು

ಮರ ಗಿಡ ಕಾಡುಕಣಿವೆ ಕಂಡು
ಉಬ್ಬುವುದು ಕನ್ನಡಿಯು
ಮುಂಗಾರ ಮೋಡಗಳು
ಗುಡುಗುಡಿಸುವುವು ಕನ್ನಡಿಯೊಳಗೆ

ಮುಖ ಕೆಂಪೇರಿ ನಾಚಿದರೆ
ತರುಣಿ
ಕಂಪಿಸುವುದು ಕನ್ನಡಿಯು

ಮೀಸೆಯಾಕಾರಕ್ಕೆ ಮೊಡವೆಗಳಿಗೆ
ಚಿಂತೆಯಲಿ ಸೊರಗುವುದು

ಚಿಮ್ಮಿದ ಚಿಗುರೆಯ ಎಳಸುತನಕ್ಕೆ
ನಡುಗಿ ಒಡೆಯುವುದು ಕನ್ನಡಿಯು
ಹಡೆದ ಬಿಂಬಗಳಲ್ಲಿ ನೂರುಮುಖ
ಕಂಡು ಹೌಹಾರುವುದು ಕನ್ನಡಿಯು

ಒಳಗು ಕಂಡರೆ ತಳಮಳಿಸಿ
ಹೊರಗಿನ ದೊರಗು ನೋಟಕ್ಕೆ
ನೀರಿಳಿದು ಬಿಂಬ ನಡುಗುವುದು

ಕೊಳದ ಕನ್ನಡಿಯಲ್ಲಿ
ಆಗಸದ ಮುಖ ತೆರೆ-
ಯುವುದು ಅಳೆಯದ ಅಗಲಕ್ಕೆ

ಅವಳ ಕಣ್ಣ ಕನ್ನಡಿಯಲ್ಲಿ
ಅವನ ಬಿಂಬ ಕುಣಿಯುವುದು
ಅವನ ಕನ್ನಡಿಯಲ್ಲಿ ಅವಳ ಬಿಂಬ

ಗಾಜಲ್ಲ ಕನ್ನಡಿಯು
ಜೀವ ಜೀವದ
ಜೀವಂತ ನಾಡಿ ಬಡಿತ

ನಾನೆಂಬು ನಾನೂ ಅಲ್ಲ,
ನೀನು ನೀನೂ ಅಲ್ಲ, ಅವರು
ಇವರು ಅವರಿವರಲ್ಲ

ಕನ್ನಡಿಯ ಒಳ ಹೊರಗೆ
ನಿತ್ಯ ಸಾವಿರದ ಮೆರವಣಿಗೆ

‍ಲೇಖಕರು avadhi

12 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading