ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’-ಇವತ್ತೇನಯ್ಯ ಆಟ ಕಟ್ತೀ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.

ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ

ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.

2

ಅಂಕ – ೨
ದೃಶ್ಯ – ೧

(ಸಂಜೆ ಏಳರ ಸಮಯ. ಆಭಿನವ ಕುಮಾರನ ಮನೆ. ದೊಡ್ಡ ಹಜಾರ. ಹಜಾರದ ಮಧ್ಯೆ ಹುಟ್ಟುಹಬ್ಬದ ಶುಭಾಶಯದ ಬೋರ್ಡ್ ಇದೆ. ಬೋರ್ಡ್ ಮುಂದೆ ಒಂದು ಬಿಳಿ ಬಟ್ಟೆ ಹೊದಿಸಿದ ಟೇಬಲ್ ಇದೆ. ಅದರ ಮೇಲೆ ದೊಡ್ಡದೊಂದು ಕೇಕು ಇಡಲಾಗಿದೆ. ಕೇಕ್ ಸುತ್ತ ೨೫ ಮೋಂಬತ್ತಿಗಳಿವೆ.. ಕತ್ತರಿಸಲು ಚಾಕು ಮತ್ತು ತಿನ್ನಲು ಫೋರ್ಕುಗಳು. ಪಕ್ಕದಲ್ಲಿ ಇನ್ನೊಂದು ಟೇಬಲ್ ಮೇಲೆ ಬಿಯರ್ ಮತ್ತು ವಿದೇಶಿ ಮದ್ಯದ ಶೀಸೆಗಳು ಮತ್ತು ಗ್ಲಾಸುಗಳಿವೆ. ಪಕ್ಕದಲ್ಲೇ ಸರ್ವ್ ಮಾಡಲು ಸಿದ್ಧನಾಗಿ ಪರಿಚಾರಕ ಕೃಷ್ಣ ನಿಂತಿದ್ದಾನೆ. ಬ೦ಧು ಮಿತ್ರರು ಸಡಗರದಿಂದ ಓಡಾಡುತ್ತಿದ್ದಾರೆ.)

ಮೇಳ: ಹಬ್ಬ ಹಬ್ಬ ಹುಟ್ಟಿದ ಹಬ್ಬ
ವರುಷ ತುಂಬಿ ಬರುವ ಹಬ್ಬ
ಉಲ್ಲಾಸ ಉತ್ಸಾಹ ರೆಕ್ಕೆ ಬಿಚ್ಚಿ
ಹಾಡಿ ಕುಣಿದು ನಲಿಯೋ ಹಬ್ಬ

(ಮೇಳ ಹಾಡುತ್ತಿದ್ದಂತೆ ಯುವಕ, ಯುವತಿಯರನ್ನೊಳಗೊಂಡ ತಂಡ ಇಬ್ಬಿಬ್ಬಿರಾಗಿ ಲಾಸ್ಯದ ಹೆಜ್ಜೆ ಹಾಕುತ್ತ ರಂಗದ ಎರಡೂ ಬದಿಯಿಂದ ಪ್ರವೇಶಿಸುವರು)
ಯುವಕ-ಯುವತಿ ಜೋಡಿ -೧: ಏನೋ ಸಮೀರ, ಸಂತೀಗೆ ಮುಂಚೆ ಗಂಟುಕಳ್ಳೆರು ಸೇರಿದರು ಅನ್ನೋಹಂಗ ಪಾರ್ಟಿ ಇನ್ನೂ
ಶುರೂನೆ ಇಲ್ಲ ಆಗಲೆ ಬಂದು ಕೂತಿದಿ….ಇವತ್ತೇನಯ್ಯ ಆಟ ಕಟ್ತೀ…..
ಯುವಕ-ಯವತಿ ಜೋಡಿ-೨: ಹಾಂಗೇನಿಲ್ಲಪ್ಪ, ಬರ್ತಡೇ ಪಾರ್ಟಿ ಅಂದರ ಏನಾರೂ ಸ್ವಲ್ಪ ಮೋಜು-ಮಾಯಾ
ಇರಬೇಕಲ್ಲ.. ಅದೂ ನಮ್ಮ ಜಾಲಿಫೆಲೋ ಅಭಿನವಕುಮಾರಂದೂ ಅಂದ ಮೇಲೆ ಯುವಕ-ಯುವತಿ ಜೋಡಿ -೧” ಖಾಲಿ ಅಭಿನವಕುಮಾರ ಅಲ್ಲಪ, ಅಭಿನವ ಕೃಷ್ಣ ಕುಮಾರ….ಹ್ಹ..ಹ್ಹ..ಹ್ಹ..
ಯುವಕ-ಯುವತಿ- ಜೋಡಿ-೨: ಒಂದು ಸಣ್ಣಾಟ ಆಡೋಣು….ಮೋಜಿನ ಆಟ, ಮೇಳದ ಆಟ….ಮೇಳದಾಗ ನಾಲ್ಕೈದು
ಅಂಗಡಿ ಮುಂಗಟ್ಟುಗಳು…..
ಎಲ್ಲರೂ: ಅಂಗಡಿ ಮುಂಗಟ್ಟುಗಳು (ಎಂದು ಉದ್ಗಾರವೆತ್ತುವರು)
ಯುವಕ-ಯುವತಿ ಜೋಡಿ-೨: ಉದ್ಯೋಗದ ಅಂಗಡಿ. ಕುಶಲ ಕಲಾ ಅಂಗಡಿ, ರಮ್ಯ ಕಲಾ ಅಂಗಡಿ… ಹೀಂಗ. ಕಲಿಸೋರು
ಇರ್ತ್ತಾರ, ಗಿರಾಕಿಗಳು ಇರ್ತಾರ/ಲೇ ಯಶವಂತ ನೀ ಉದ್ಯೋಗದ ಅಂಗಡಿ ಮಾಲೀಕ….ಯವ್ವಾ
ಉಜ್ವಲಾ ನೀನು ಕುಶಲ ಕಲಾ ಅಂಗಡಿ ಇನ್ ಚಾರ್ಜ್…
ಉಜ್ವಲಾ: ಏನ್ ಕುಶಲ ಕಲಾ….

ಯುವಕ-ಯವತಿ ಜೋಡಿ-೨: ಛಪ್ಪನ್ನಾರು ಕಲೆಗಳಲ್ಲಿ ಯಾವುದಾದರೂ ನಡಿಯುತ್ತೆ… ಸದ್ಯಕ್ಕೆ ಹನಿಟ್ರಾಪ್ ಕುಶಲ ಕಲ
ಇಟ್ಕೊಳ್ಳೋಣ…ಅಂದ್ರ ಕಾಮಣ್ಣಗಳನ್ನ ಹಳ್ಳಕ್ಕೆ ಹಚ್ಚೋ ಕಲೆ…ಉಜ್ವಲಾ ನೀ ಅದನ್ನ ಕಲಿಸೋ ಆಕಿ.
(ಉಜ್ವಲಾಳ ಮುಖದಲ್ಲಿ ಕೆಂಪೇರುವುದು)
ಏಯ್ ವಕೀಲ ಬಾಬು ನಿಂದು ರಮ್ಯ ಹಗರಣಗಳಲ್ಲಿ ರೇಪುಕೊಲೆಗಳಲ್ಲಿ ಜಾಮೀನು ಕೊಡಿಸೋ ಅಂಗಡಿ….ಹ್ಞು೦.. ನಿಮ್ಮ ನಿಮ್ಮ ಅಂಗಡೀನ ಸೆಟ್ ಮಾಡ್ಕಳ್ಳಿ ಮತ್ತ ಲಗೂನ ಲಗೂನ…
ಸಾವಕಾಶ ಮಾಡಬೇಡಿ ಅಭಿನವ ಬರೋದ್ರಾಗ ಆಗಬೇಕು…
(ರಂಗದ ಒಂದು ಪಾರ್ಶ್ವದಲ್ಲಿ ಮೂರು ಕ್ಯಾಬಿನ್ನುಗಳು ಸಿದ್ಧವಾಗುವವು. ಒಂದರ ಮುಂದೆ ಉದ್ಯೋಗದ ಅಂಗೆಡಿ…ಉದ್ಯೋಗಗಗಳು ಬಿಕರಿಗಿವೆ ಎನ್ನುವ ಬ್ಯಾನರ್ ಇದೆ. ಉಳಿದ ಅಂಗಡಿಗಳ ಮುಂದೆಯೂ ಅಯಾ ಕಸುಬುಗಳ
ಬ್ಯಾನರುಗಳನ್ನು ಕಟ್ಟಿ ಅಲಂಕರಿಸಲಾಗಿದೆ)
ಯುವಜೋಡಿ-೨: ಅಪ್ಪಾ ಸೂತ್ರಧಾರ ಸಾಕ್ಷಿಪ್ರಜ್ಞೆ …ಎಲ್ಲಿ ಹೋದ್ಯೋ…
ಸೂತ್ರಧಾಋ: ಬಂದೇನ್ರೀ…ಇಲ್ಲೇ ಅದೀನ್ರೀ..ಸ್ವಲೂಪ ಕಚ್ಚಿ ಸರಿಮಾಡ್ಳ್ಳಾಕ ಹೋಗಿದ್ದೆ
ಯುಕ ಜೋಡಿ-೨: ಎಲ್ಲಿ ನಿನ್ನ ಮೇಳದವರು…
ಸೂತ್ರಧಾರ: ಇಲ್ಲೇ ಅದಾರ…
ಯುವ ಜೋಡಿ-೨: ಕರೀ ಅವರನ್ನ ಇತ್ತ
(ಮೇಳದವರು ಮಧ್ಯ ರಂಗಕ್ಕೆ ತಮ್ಮ ಪರಿಕರಗಳ ಸಮೇತ ಬರುವರು)
ಯುವ ಜೋಡಿ-೨: ಮೇಳದವರ ಕೇಳುವಂಥವರಾಗಿ… ನಾವು ಈ ಸಂದರ್ಭಕ್ಕ೦ತ್ಲಾ ಒಂದು ವಿಶೇಷ ಕವಿತ್ವಾ ಮಾಡೀವಿ.. ನೀವು
ಅದನ್ನ ಹಾಡಬೇಕು… (ಎಂದು ಒಂದು ಹಾಳೆಯನ್ನು ಮೇಳದ ಮುಖ್ಯ ಗಾಯಕನಿಗೆ ಕೊಡುವನು… ಮೇಳವೂ ಎರಡು ಗುಂಪಾಗಿ ‘ಸವಾಲು ಜವಾಬಿ’ನಂತೆ ಗಾಯನ ಶುರುಮಾಡುವುದು… ಗೆಳೆಯರ ಗುಂಪು ಅದಕ್ಕೆ ದನಿಗೂಡಿಸಿ ನೃತ್ಯ ಮಾಡುವುದು)

ಮೇಳದವರು ನೀವು ಹಾಡ ಬೇಕಾ
ನಾವು ಗೆಜ್ಜಕಟ್ಟಿ ಕುಣೀಬೆಕಾ
ಅಭಿನವನ ಹುಟ್ಟಿದ ಹಬ್ಬದ ಕುಣಿತಾ
ಇದು ಮೋಜಿನಾಟ
ಇದು ಪರ್ಸೆಂಟಿನ ಆಟ ಕಣಣ್ಣ

ಬಾರೋ ಬಾರೋ ಸಣತಮ್ಮಣ್ಣ
ಉದ್ಯೋಗ ಬೇಕೇನಣ್ಣ
ತೆಗತೆಗಿ ನಲವತ್ತು ಪರ್ಸೆಂಟ್
ಹಿಡಿಹಿಡಿ ಉದ್ಯೋಗ

ಕಮಲೀಕಾಮಾಕ್ಷಿ ವಿಮಲೀ ವಿಶಾಲೀ
ಬನ್ರೇ ಬನ್ರೇ ಬನ್ರೇ
ಕಲೀರಿ ಹನಿಟ್ರಾಪ್ ಕಲಾ
ಅನಂಗ ಕಲಾ ಬಲೆಬೀಸುವ ಕಲಾ

ರಮ್ಯಳ ರೇಪು ರಜನಿಯ ಕೊಲೆ
ಬಿಡಿಸ್ತೀವಣ್ಣ ನಾವು
ಕೊಡಿಸ್ತೀವಿ ಜಾಮೀನೂ
ಮಡಗಿರಿ ಪರ್ಸಂಟೇಜು

ಕೊಸರು ಮಾಡಬೇಡಿ ಇದು ಮೋಜಿನ ಆಟ
ಮೇಳ ಹಾಡಬೇಕು ನಾವು ಕುಣೀಬೇಕು
ಇದು ಮೋಜಿನಾಟ ಅಭಿನವ ಕುಮಾರರರ
ಅಮೋಘ ದೇಖೆ ರೇಖೆ

(ಮೇಳ ಹಾಡು ನಿಲ್ಲಿಸದಂತೆ)

ಯಶವ೦ತ: ಏಯ್ ಡರ್ಟಿ ಬಾಯ್ಸ್ ಹಾಡ್ರಪಾ ‘ಹ್ಯಾಪಿ ಬರ್ತಡೇ.’

ಅಭಿನವ: ಯಶವಂತ ಸ್ವಲ್ಪ ತಡಿ ಇದೇ ಮುಹೂರ್ತದಲ್ಲಿ ನಾನು ನಿನಗ ಮತ್ತೊಮ್ಮ ಹೇಳ್ತೀನಿ ತಿಳ್ಕೊ… ಸರ್ಕಾರಿ ನೌಕರಿ ಅಂತ ಹಟಕ್ಕಬೀಳಬೇಡ. ಡ್ಯಾಡಿ ಆಫೀಸಿನಾಗ ಒಂದು ಮೇಜು ಹಾಕಿಸಿಕೊಡ್ತೀನಿ ಕೂತ್ಕೋ… ಮಂದಿ ಅದೂಇದೂ ಕೆಲಸ ಆಂತ ಬರ್ತಾರ… ಫಾರ್ಟಿ ಪರ್ಸೆಂಟ್ ಇಸ್ಕೋ ಡ್ಯಾಡೀಗ ಹೇಳಿ ಕೆಲಸ ಮಾಡಿಸ್ಕೊಡು… ಏನಂತೀಯ ನಾನೂ ಡ್ಯಾಡೀಗೆ ಹೇಳ್ತೀನಿ.. ಬೇಸರ ಮಾಡ್ಕೊ ಬೆಡ… ಅದೂ ಒಂದು ನಮೂನಿ ಲಿವಿನ್ ರಿಲೇಶನಶಿಪ್ಪೇ ಸಮಾಜದ ಕೂಡ, ಸಮುದಾಯದ ಕೂಡ. ಯಶವಂತ ನೀನು ಸ್ವಲ್ಪ ರಾಜಕೀಯದಾಗ ಬೀಳಬೇಕು…ಮುಂದಿನ ಚುನಾವಣೇಲಿ ಮಹಮಡನ್ ಕಾಲನಿ ಇಂದ ನಂಗೆ ಟಿಕೆಟ್ ಗ್ಯಾರಂಟಿ. ನಾನು ಎಂಎಲ್‌ಏ/ಸಚಿವ ಆದರ ನೀನಾ ನನ್ನ ಪಿ.ಎ. ಏನಂತೀ…..

ಯಶವ೦ತ: ಆಯ್ತಪ್ಪ ಗೆಳೆಯ ನೀ ಹೇಳಿದ ಮೇಲೆ ಮುಗೀತು… ಈಗ ಕೇಕು ಕಟ್ ಮಾಡ್ತೀಯ ಇಲ್ಲ ಡ್ಯಾಡೀಗೆ ಕಾಯ್ತೀಯ….
ಅಭಿನವ: ವೈಟ್ ಮಾಡೋದೇನ್ ಬ್ಯಾಡ… ಅವರು ರೆಸಾರ್ಟಿಗ ಹೋಗಿದಾರೆ ಯಶವಂತ: ಅದೇನಪ್ಪ ಈಗ ರೆಸಾರ್ಟಿಗೆ
ಅಭಿನವ: ಅವರೀಗ ರೆಸಾರ್ಟ್ ಮಂತ್ರಿಗಳು…ಟಿಕೆಟ್ ಸಲುವಾಗಿ, ಮುಂದೆ ಮಂತ್ರಿ ಪದವಿ ಸಲುವಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವಯ್ಯ’ಗಳಿರ್ತಾರಲ್ಲ ಅವರನ್ನ ಹಿಡಿದಿಟ್ಟುಕೊಳ್ಳಲಿಕ್ಕೆ, ಟಿಕೆಟ್ ವಶೀಲೀಬಾಜೀಗೆ…ಟಿಕೆಟ್ ಪಡೆಯೋ ಮಂದಿ ಕಡೀಂದನಾ ಹಾರುವಯ್ಯ’ ಅಲ್ಲ ಅಂತ ಮುಚ್ಚಳಿಕೆ ಬರೆಸಿಕೊಳ್ಳಲಿಕ್ಕೆ…..

ಯಶವಂತ: ಸರಿಯಾಯ್ತು ನಾವೂ ಒಂದೆರಡು ದಿನ ರೆಸಾರ್ಟಿಗೆ ಹೋಗಿ ಮೋಜು ಮಾಡಿಬರಬಹುದು…

ಅಭಿನವ: ಹೋಗೋಣೂ…ವರ್ಷಾನೂ ಜೊತೀಗೆ ಇರ್ತಾಳ ರಂಗ್ ಏರಸಲಿಕ್ಕೆ

ಯಶವಂತ: ಸರಿ ಮತ್ತ…ಈಗ ಶುರು ಹಚ್ಚಕೋಳೋಣ.. ಬಾಯ್ಸ್ ಎಲ್ಲ ಬನ್ನಿ….. (ಎಲ್ಲರೂ ಕೇಕ್ ಇರುವ ಮೇಜಿನತ್ತ ಧಾವಿಸುವರು ಇಬ್ಬರು ಯುವಕರು ಅಭಿನವನನ್ನು ಎತ್ತಿಕೊಂಡು ‘ಹ್ಯಾಪಿ ಬರ್ತಡೆ’ ಎಂದು ಕುಣಿಯವರು. ಹ್ಯಾಪಿ ಬರ್ತಡೇ ಕೋರಸ್‌ನಲ್ಲಿ ವರ್ಷಾ ಮತ್ತು ಸೌದಾಮಿನಿಯೂ ದನಿಗೂಡಿಸುವರು. ಒಂದೆರಡು ಸುತ್ತು ಕುಣಿತದ ನಂತರ ಅಭಿನವನನ್ನು ಕೆಳಗಿಳಿಸುವರು)

ಯಶವಂತ: ವರ್ಷಾ ಮೇಡಂ ನೀವು ಮೋಂಬತ್ತಿ ಬೆಳಗಿಸಿರಿ..
ವರ್ಷಾ: ಅಭಿನವ ಇದು ಸರಿ ಇದ್ಯಲ್ಲ?ಅಥವಾ ಇದರಲ್ಲೂ ಏನಾದರೂ ಸುಳ್ಳುಪಳ್ಳು ಭಾನಗಡಿ ಮಾಡಿದಿಯೋ…
ಅಭಿನವ: ಎಲ್ಲ ಸರಿ ಇದೆ ನೀ ಹಚ್ಚು ಮಾರಾಯ್ತಿ…ನಿನ್ನ ಕೂಡ ಭಾನಗಡಿ ಮಾಡಾದ….
(ವರ್ಷಾ ಮೋಂಬತ್ತಿ ಹಚ್ಚುವಳು. ಅಭಿನವ ಕೇಕ್ ಕಟ್ ಮಾಡುವನು. ಒಂದು ಚೂರನ್ನು ಯಶವಂತನ ಬಾಯಿಗಿಡಲು
ಮುಂದಾಗುವನು. ಯಶವ೦ತ ಅವನನ್ನ ತಡೆದು..)
ಯಶವಂತ: ತಡಿ ತಡಿ ಮೊದಲು ವೈನೀಗೆ ತಿನ್ಸು…
ವರ್ಷಾ: ವೈನಿ ಚೈನಿ ಏನಿಲ್ರೀ…ವರ್ಷಾ ಅಂದರ ಸಾಕು..
ಯಶವಂತ: ಹಾಂಗ ಆಯ್ತು,. ಮೊದಲು ವೈನೀಗ ತಿನ್ಸಪ್ಪ
(ಅಭಿನವ ಒಂದು ಚೂರು ಕೇಕನ್ನು ವರ್ಷಾಳ ಬಾಯಲ್ಲಿಡುವನು
ಸೌದಾಮಿನಿ: ವರ್ಷಾ ಬಾಯಾರ ನೀವು ಇಗ ಅವರಿಗ ಕೇಕ್ ತಿನ್ಸರಿ…
ಎಲ್ಲರೂ: ಹೌದು..ಹೌದು..
(ವರ್ಷಾ ಅಭಿನವನಿಗೆ ಕೇಕ್ ತಿನ್ನಿಸುವಳು)
ಯಶವಂತ: ಇನ್ನು ಪಾನಗೋಷ್ಠಿ ಶುರುಮಾಡೋಣೇನು…?
(ಅಭಿನವ ಪರಿಚಾರಕ ಕೃಷ್ಣನನ್ನುದ್ದೇಶಿಸಿ) ‘ಏಯ್ ಕೃಷ್ಣ ಎಲ್ಲ ತಯಾರಿದೇನು? ಕಡ್ಲೀ ಗುಗ್ಗರಿ, ದಾಳಿಂಬಿ ಹಚ್ಚಿದ
ಹೆಸರಕಾಳು ಕೋಸಂಬರಿ ಅಂದರ ವರ್ಷಾಗೆ ಬಲು ಇಷ್ಟ…
ಪರಿಚಾರಕ: ಜತೆಗೆ ಹಪ್ಪಳ ಸಂಡಗೀನೂ ಕರಿದೀನ್ರಿ…
ಅಭಿನವ: ಛಲೋ ಆತು ಈಗ ಒಂದೊ೦ದು ಕಡೀ ನಾಲ್ಕುನಾಲ್ಕು ಖುರ್ಚಿ ಮಧ್ಯದಾಗ ಟೀಪಾಯಿ… ಮೂರು ಸೆಟ್ ಹಾಕು…..
(ಪರಿಚಾರಕ ಬಿಯರ್ ತುಂಬಿದ ಗ್ಲಾಸುಗಳು ಇರುವ ದೊಡ್ಡತಟ್ಟಯನ್ನು ಹಿಡಿದು ಎಲ್ಲರ ಮುಂದೂ ಹೋಗಿ ನಿಲ್ಲುವನು. ಒಬ್ಬೊಬ್ಬರಾಗಿ ಗ್ಲಾಸುಗಳನ್ನು ಕೈಗೆತ್ತಿಕೊಳ್ಳುವರು ಎಲ್ಲ ಗುಂಪಾಗಿ ನಿಂತಿರುವರು….
ಯಶವ೦ತ: ಕೋರಸ್ನಲ್ಲಿ ಇನ್ನೊಮ್ಮೆ ಹ್ಯಾಪಿ ಬರ್ತಡೇ ಅನ್ನರಿ…
(ಎಲ್ಲ ಹ್ಯಾಪಿ ಬರ್ತಡೇ ಹೇಳುವರು. ಹಿನ್ನೆಲೆಯಲ್ಲಿ ಮೆಲುದನಿಯಲ್ಲಿ ಬಿಸ್ಮಲ್ಲಾಖಾನರ ಶಹನಾಯ್ ಕೇಳಿಬರುವುದು)
ಯಶವಂತ: ಈಗ ಚಿಯರ್ಸ್
ಬಾಯ್ಸ್ ನಲ್ಲೊಬ್ಬ: ನಾನೊಬ್ಬ ಕನ್ನಡ ಪ್ರೇಮಿ, ತಡೀ ಯಶವಂತ ಮೊದಲು ಕನ್ನಡದಾಗ ಚಿಯರ್ಸ್ ಹೇಳೋಣು
ವರ್ಷಾ: ಚಿಯರ್ಸ್ ಗೆ ಕನ್ನಡದಲ್ಲಿ ಏನಂತಾರೆ?
ಕನ್ನಡ ಪ್ರೇಮಿ: ಸ್ವಸ್ತಿ ಸ್ವಸ್ತಿ ಸ್ವಸ್ತಿ

। ಉಳಿದದ್ದು ನಾಳೆಗೆ ।

‍ಲೇಖಕರು avadhi

April 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: