ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿಕ್ಕೆಟ್ಟ ಇರುಳಗಳಲ್ಲಿ ಹೆಂಡದ ರುಚಿ ತುಸು ಜಾಸ್ತಿ..

ಯುಗಾದಿ ಮತ್ತು ನಮ್ಮಪ್ಪ

ಲಕ್ಷ್ಮಣ್

ಊರ ಹೊರಗಿನ ಹನುಪ್ಪನ ಗುಡಿಯಂತೆ
ನಮ್ಮಪ್ಪ. ಹಬ್ಬ ಹರಿದಿನಗಳಲ್ಲಿ ಹೊರಗೇ ಉಳಿದ.
ಯುಗಾದಿಗೊಂದೊಂದು ನಮಗೆ ಹೊಸ ಅರಿವೆ
ಕೊಡಿಸಿ ಅವನು ಮಾತ್ರ ಹರಿದ ಬಟ್ಟೆಗಳಿಗೆ
ತೇಪೆ ಹಾಕಿಸಿ ಜವಳಿ ಅಂಗಡಿಯ ಸಾಲ ತೀರಿಸಲು
ಹಬ್ಬದ ದಿನ ಕೂಲಿ ಅರಸಿ ಎಲ್ಲೆಲ್ಲೋ ಅಲೆದ

handsಕ,ಕಾ,ಕಿ,ಕೀ ಕಾಗುಣಿತದ ಬಳ್ಳಿಯಂತೆ
ಹಬ್ಬಿದ
ಕರುಳುಬಳ್ಳಿಗಳ ಹೊಟ್ಟೆಗೆ ರೊಟ್ಟಿ ಹೊಂದಿಸಲು
ಅದೆಷ್ಟು ಅವತಾರ ತಾಳಿದೆ ?
ಆಡು, ಕುರಿ, ದನಗಳೊಟ್ಟಿಗೆ ನನ್ನ ಶಾಲೆ ತನಕ ಬಿಟ್ಟು
ಬಯಲು ಆಲಯದೊಳಗೆ ಮರೆಯಾಗುತಿದ್ದ

ಒಂದಕ್ಷರ ಅರಿಯದ ಅವನು
ಬುಡ್ಡೀ ದೀಪದ ಮಿಣುಕು ಬೆಳಕಿನಲ್ಲಿ
ನಾನು ಅ,ಆ ,ಬರೆಯುವುದು ನೋಡಿ
ಅವನ ಕಣ್ಣು ತೇವಗೊಂಡಿದ್ದು ನಾನು
ಮರೆಯಬಲ್ಲೆನೆ?

ಮುರಿದ ಗಡಿಯಾರದ ಮುಳ್ಳು ಎದೆಯೊಳಗೆ
ಚಿಟಿಕೆಯಾಡಿಸುತಿದ್ದರೂ ಸರಿಯಾಗಿ
ಕೋಳಿ ಕೂಗುವ ಹೊತ್ತು ಹೊತ್ತಿಗೆ ಎಚ್ಚರಿಸಿ ಓದುವ
ಕಿಡಿ ಹೊತ್ತಿಸಿದ

ಒಡಲ ಕಿಚ್ಚನು ಬೆಳಕಾಗಿಸುವ ದಾರಿ ತೋರಿದ
ಅಪರೂಪಕ್ಕೊಮ್ಮೆ ಬಿದ್ದ ಮಳೆಗೆ
ಮಗುವಿನಂತೆ ಕುಣಿದಾಡಿ
ಜೋಳ ನವಣೆ ಸಜ್ಜೆಯ ಫಸಲುಗಳಿಗೆ
ನಿಶ್ಯಬ್ದ ಬೇರಾಗಿ ನೀರುಣಿಸಿದ

ನಿನಗೆ ಸುಖವಿಲ್ಲವೆಂದವರಾರು ?
ಹಗಲ ಹಳವಂಡಗಳ ಮರೆಯಲು
ಒಂಚೂರು ಹೆಂಡ, ಚಿಟಿಕೆ ಉಪ್ಪು ಸವರಿ
ನೊಗ ಹೊತ್ತ ಹೆಗಲುಗಳ ನೋವು ನೀಗಿಸಿಕೊಳ್ಳುವಾಗ ನಿನ್ನ.. ಮಾತಿನ ಧಾಟಿ
ನೋಡಬೇಕಿತ್ತು!!
ದಿಕ್ಕೆಟ್ಟ ಇರುಳಗಳಲ್ಲಿ ಹೆಂಡದ ರುಚಿ ತುಸು ಜಾಸ್ತಿ.

ಕೊನೆಯ ಸಾಲುಗಳಲ್ಲಿ ಸೋತ ಕವಿತೆಯಂತೆ
ನಿನ್ನ ಬದುಕು ಎದೆಯ ಭಾರ ಇಳಿಸಲು ಸದಾ
ನೆಲ ಹುಡುಕಿದೆ.

ಅದೇನು ಮಾಯೆಯೋ ಕಾಣೆ ನೀನು
ಹೋದ ಮೇಲೆ ಊರ ದಾರಿ ನಾನೂ ಮರೆತೆ
ಕಾಲು ದಾರಿಯ ಮೇಲಿನ ನಿನ್ನ
ಹೆಜ್ಜೆ ಗುರುತುಗಳನ್ನು ಟಾರು ರಸ್ತೆ ನುಂಗಿ ಹಾಕಿದೆ.
ಮತ್ತೆ ಯುಗಾದಿ ಬಂದಿದೆ
ಜವಳೀ ಅಂಗಡಿಯ ಮೂವತ್ತು ರೂಪಾಯಿ
ಸಾಲ ತೀರಿಸಿ
ಸಾಲದ ಹಾಳೆಯ ಮೇಲಿನ ಕಪ್ಪು
ಶಾಯಿಯ ಹೆಬ್ಬೆರಳ ಗುರುತ
ನನ್ನೆದೆಯ ಮೇಲೆ ಹಚ್ಚೆ ಹಾಕಿಸಬೇಕಿದೆ.

ಈ ಸಲದ ಯುಗಾದಿಗೆ ಊರ ಹೊರಗಿನ
ಹನಮಪ್ಪನ ಗುಡಿಗೆ ಸುಣ್ಣ ಬಣ್ಣ ಬಳಿದು
ಮನೆ ಸೇರಿಸಬೇಕಿದೆ.

‍ಲೇಖಕರು admin

8 April, 2016

1 Comment

  1. Shyamala Madhav

    ಯುಗಾದಿಯ ದಿನ ಅಪ್ಪನ ವಾತ್ಸಲ್ಯದ ನೆನಪು – ಮನ ಮಿಡಿಯಿತು !
    Shyamala Madhav

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading