ಅಮೇರಿಕೆಯಲ್ಲಿ ನಮ್ಮೂರ ಯುಗಾದಿ ನೆನೆಯುತ್ತಾ..

ಬರಲಿ ಅಸಲೀ ಯುಗಾದಿ

ವೈಶಾಲಿ ಹೆಗಡೆ

ಈ ಬಾರಿ ಹಿಮರಾಯನಿಗೆ ಭೂರಮೆಯ ಮೇಲೆ ಅದೇನು ಮೋಹವೋ, ಇನ್ನೂ ಮುದ್ದಿಸಿಯೇ ಮುಗಿದಿಲ್ಲ. ವಸಂತ ಅದೋ ದೂರದಲ್ಲಿ ಅಲ್ಲಿ ಬಾಗಿಲ ಬಡಿಯಲೋ ಬೇಡವೋ, ಒಳಬರುವುದೋ ಹೇಗೆ ಎಂದೆಲ್ಲ ಯೋಚಿಸುತ್ತ ನಿಂತಿದ್ದಾನೆ.

ಉತ್ತರ ಅಮೆರಿಕೆಯಲ್ಲಿ ವಸಂತಾಗಮನಕ್ಕೊಂದು ಸ್ಪಷ್ಟ ಚಿತ್ರಣವೂ ನಕ್ಷೆಯೂ ಇದೆ. ದಕ್ಷಿಣದಿಂದ ಉತ್ತರಕ್ಕೆ ವಸಂತನ ಹೆಜ್ಜೆ ಗುರುತು ವಾರಕ್ಕೆ ನೂರು ಮೈಲಿಯಂತೆ ಸಾಗುತ್ತದೆ. ಮೂರು ತಿಂಗಳಲ್ಲಿ ದಕ್ಷಿಣ ತುದಿಯಲ್ಲಿ ಫ್ಲೋರಿಡಾದಿಂದ ಆರಂಭಿಸಿ ಟೆಕ್ಸಾಸ್, ಕ್ಯಲಿಫಾರ್ನಿಯಾಗಳ ಆವರಸಿಕೊಳ್ಳುತ್ತ ನಮ್ಮ ಬಾಸ್ಟನ್ ಪ್ರದೇಶ ದಾಟಿ ಪೂರ್ವತೀರದ ಉತ್ತರದಲ್ಲಿ ಮೇಯ್ನ್ ಮತ್ತು ಪಶ್ಚಿಮ ತೀರದಲ್ಲಿನ ವಾಶಿಂಗ್ಟಾನ್ ರಾಜ್ಯಗಳ ತುದಿಯವರೆಗೆ ಸಾಗುತ್ತದೆ.

couple plantsಇಲ್ಲಿನ ಅಪಲೆಶಿಯನ್ ಪರ್ವತ ಪ್ರದೇಶಗಳಲ್ಲಿ ವಸಂತ ಬಲು ಮೋಜಿನಿಂದ ಕಣಿವೆ ಕೊಳ್ಳಗಳಲ್ಲಿ ಬಣ್ಣ ಚೆಲ್ಲುತ್ತ  ದಿನದಿಂದ ದಿನಕ್ಕೆ ಭರ ಭರ ಸಾಗುತ್ತಾನೆ. ಆದರೆ ಈ ಸರ್ತಿ ಯುಗಾದಿ ಬಂದರೂ ಎಲ್ಲೂ ಏನೂ ಆದಿಯಾಗುವ ಸೂಚನೆಯೇ ಕಾಣುತ್ತಿಲ್ಲ.

ಶಾಸ್ತ್ರದ ಪ್ರಕಾರ ಬ್ರಹ್ಮ ಯುಗಾದಿಯ ದಿನ ಜಗತ್ತನ್ನು ಸೃಷ್ಟಿಸಲು ಆರಂಭಿಸಿದನಂತೆ. ಈಗ ಅವನೂ ಇಲ್ಲಿನ ಕಪ್ಪು ಕರಡಿಗಳಂತೆ ಯಾವುದೋ ಗುಹೆ ಹೊಕ್ಕು ಶಿಸ್ತಾಗಿ ನಿದ್ದೆ ಹೊಡಿಯುತ್ತಿದ್ದಾನೋ ಏನೋ, ಯಾರಾದರೂ ಬ್ರಹ್ಮನನ್ನು ಎಬ್ಬಿಸಬಾರದೆ ಪ್ಲೀಸ್??!! ಹುಲ್ಲುಹಾಸಲ್ಲಿ ಹೊಸ ಚಿಗುರು ಹುಟ್ಟಬೇಕಲ್ಲ, ಆಂಡ್ರೋಮೆಡಾದ ಮೈತುಂಬ ಪುಟ್ಟ ಹಳದಿ ಹೂವಲ್ಲಿ ಭೃಂಗದ ಸಂಗೀತಕೇಳಿ ಕೇಳಿಬರಬೇಕಲ್ಲ. ಪುಟಾಣಿ ಗೀಜಗದ ಮೊಟ್ಟೆಗಳು ಗೂಡಲ್ಲಿ ಬೆಚ್ಚಗೆ ಹುದುಗಬೇಕಲ್ಲ. ಹಿಂಡು ಹಿಂಡು ಬಾತುಕೋಳಿಗಳು ಗದ್ದಲ ಎಬ್ಬಿಸುತ್ತ ರಸ್ತೆತುಂಬಾ ನಡೆಯುತ್ತಾ ಕೆರೆ ಸೇರಬೇಕಲ್ಲ.

ಜಿಂಕೆ ಮರಿಯೊಂದು ಎದುರು ಬಂದು ನಾನು ಗಕ್ಕೆಂದು ಕಾರು ನಿಲ್ಲಿಸಬೇಕಲ್ಲ. ಸೂರ್ಯನ ಸುಳುಪುಳ್ಳು ಬಿಸಿಗೆ ಬಗ್ಗದೆ ತಂಟೆ ಮಾಡುವ ಇದ್ದಬದ್ದ ಹಿಮವನ್ನೂ ಕೊಚ್ಚಿಕೊಂಡು ಹೋಗುವಂತೆ ಧೋ ಎಂದು ಮಳೆ ಸುರಿಯಬೇಕಲ್ಲ. ಹಾಗೆ ಹರಿದ ಮಳೆನೀರು, ಕರಗಿದ ಹಿಮವೆಲ್ಲ ತುಂಬಿದ ತಗ್ಗು, ಗುಂಡಿಗಳಲ್ಲಿ, ಎಲ್ಲಿದ್ದವೋ ಇಷ್ಟು ದಿನ ಎನ್ನುವಂತೆ, ನೀರಿಗೆ ಬರಗೆಟ್ಟವರಂತೆ ಕಪ್ಪೆ ಕುಲವೆಲ್ಲ “ವಾಟರ್ ವಾಟರ್” ಎಂದು ಖುಷಿಯಿಂದ ಕೂಗುತ್ತ ನಿದ್ದೆಗೆಡಿಸಬೇಕಲ್ಲ. ಡಿಸೆಂಬರ್ ನಲ್ಲಿ ಬೈ ಬೈ ಹೇಳಿ ಹೋಗಿದ್ದ ಅಳಿಲ ಸಂಸಾರ ಹಿಂತಿರುಗಿ ಬಂದು ಹಲೋ ಎನ್ನಬೇಕಲ್ಲ.

ಮಿಸೆಸ್ ರೇಬಿಟ್ ಮರಿಗಳೆಲ್ಲ ಎಲ್ಲೆಲ್ಲಿಂದಲೋ ಪುತುಪುತು ಹೊರಬರಬೇಕಲ್ಲ. ಕಾಲುದಾರಿಯಲ್ಲಿ ನಡೆಯುತ್ತಾ, ಓಡುತ್ತಾ ಕೈಬೀಸಿ ಹಾಯ್ ಎನ್ನುವ ಅಕ್ಕಪಕ್ಕದವರು ಹಿಮಪಾತದಲ್ಲಿ ಸಿಲುಕಿಯೂ ಬದುಕಿದ್ದಾರೆ ಎಂದು ಖಾತ್ರಿಯಾಗಬೇಕಲ್ಲ. ಅದೋ ಆಚೆಮನೆಯ ನಾಯಿ ನಮ್ಮನೆ ಹಿತ್ತಲಲ್ಲಿ ಕಕ್ಕ ಮಾಡಿ ಹೋದದ್ದಕ್ಕೆ ನಾನು ಹೋಗಿ ಕ್ಯಾತೆ ತೆಗಿಯಬೇಕಲ್ಲ. ನನ್ನ ಜಿಂಕೆ ಮರಿಗಳು ಬೈಸಿಕಲ್ ಹತ್ತಿ, ಹೇಳದೆ ಕೇಳದೆ ಬಡಾವಣೆ ಸುತ್ತಿಬಂದುದಕ್ಕೆ ಬೈಸಿಕೊಳ್ಳಬೇಕಲ್ಲ!  ಎಷ್ಟೆಲ್ಲಾ ದಿನಚರಿಗಳ ಪುನರಾದಿಯಾಗಬೇಕಿದೆ!

ಹಗಲೂ ದೊಡ್ಡದಾಗುತ್ತ ಸಾಗುತ್ತಿದೆ. ಮನೆಗೆ ಹೊರಡುವ ಸೂರ್ಯನಿಗೆ  ಮೆಟ್ಟಿಲ ಮೇಲೆ ಕುಳಿತು ಕಣ್ಣುಮಿಟುಕಿಸಿ ನಾಳೆ ಸಿಗುವಾ ಎನ್ನಲು ಆಗುತ್ತಲೇ ಇಲ್ಲ. ಅದೇ ಮೆಟ್ಟಿಲ ಮೇಲೆ ಕುಳಿತು ರಾತ್ರಿ ಸಣ್ಣನೆಯ ಗಾಳಿಯಲ್ಲಿ, ಆಗಸದಲ್ಲಿ ತೋರುವ ತಾರೆಗಳ ಎಣಿಸಿ ಗುಣಿಸಿ ಮಣಿಯಬೇಕಲ್ಲ. ಮೆಟ್ಟಿಲು ಕರೆಯುತ್ತಿದ್ದರೂ ಚಳಿಯೇ ಮುಗಿದಿಲ್ಲ.

ಹಾಗೆ ನೋಡಿದರೆ ನೂರು ವರ್ಷಗಳ ಹಿಂದೆ ಎಪ್ರಿಲ್ ನಲ್ಲಿನ ತಾಪಮಾನ ೬.೫ ಡಿಗ್ರೀ ಸೆಲ್ಸಿಯಸ್ ಇದ್ದರೆ ಈಗ ಸುಮಾರು ೧೦ರಷ್ಟು ಇರುತ್ತದೆ. ಈ ವರ್ಷ ಬರೀ ೮ ರಲ್ಲಿರುವ ತಾಪಮಾನಕ್ಕೆ ಹಾಗಿದ್ದರೆ ಖುಷಿಪಡಬೇಕು ನಾನು. ನೂರಾ ಐವತ್ತು ವರ್ಷಗಳ ಹಿಂದೆ ಇಲ್ಲೇ ಪಕ್ಕದೂರಿನಲ್ಲಿ ಕೂತು ಬರೆದಿದ್ದ ಹೆನ್ರಿ ಡೇವಿಡ್ ತರೋ ಗಮನಿಸಿದ್ದ ಹುಲ್ಲು, ಹೂವು, ಪಕ್ಷಿಗಳಿಗೆ ಹೋಲಿಸಿದರೆ, ಈಗ ವಸಂತ ಬೇಗನೆ ಬರುತ್ತಿದ್ದಾನಂತೆ.

she in the natureಜಾಗತಿಕ ತಾಪಮಾನ ಬಿಸಿಯಾಗುತಿರುವ ಗೋಜಲಿನಲ್ಲಿ ಭೂಮಿಯ ಬಿಸಿಗೆ ಹದ ಚಳಿಯ ಬೆಳಕಲ್ಲಿ ಹುಟ್ಟುವ ಹಲವು ಹೂಗಳ ಜಾತಿ ಸತ್ತೇ ಹೋಗಿದೆಯಂತೆ. ಇದನ್ನೆಲ್ಲಾ ಈಗಿನ ವಿಜ್ಞಾನಿಗಳು ಕಂಡುಕೊಂಡಿದ್ದು ಹೆನ್ರಿಯ ಬರಹ, ಕವಿತೆಗಳಲ್ಲಂತೆ. ಮತ್ತೆ ಸುಮ್ಮನೆ ಹೇಳಲಿಲ್ಲ ಅಲ್ಲವೇ ರವಿ ಕಾಣದ್ದನ್ನು ಕವಿ ಕಂಡ ಎಂದು.  ನಾನಿರುವ ಮೆಸಾಚುಸೆಟ್ಸ್ ರಾಜ್ಯದ ಸಮುದ್ರದಲ್ಲಿನ ಕೋಡುಭೂಮಿ, “ಕೇಪ್-ಕಾಡ್” ಎನ್ನುವ ಹೆಸರು ಪಡೆದುಕೊಂಡಿದ್ದೇ ಇಲ್ಲಿನ ಸಮೃದ್ಧ “ಕಾಡ್” ಮೀನಿನ ಜಾತಿಯಿಂದಾಗಿ. ಅಟ್ಲಾಂಟಿಕ್ ಸಾಗರದ ನೀರಿನ ಬಿಸಿಯೇರುವಿಕೆಯಿಂದಾಗಿ ಕಾಡ್ ಮೀನುಗಳ ಸಂತಾನೋತ್ಪತ್ತಿ ಸಮಯದಲ್ಲಿ ನಿಧಾನಕ್ಕೆ ಏರುಪೇರಾಗಿ ಅವುಗಳ ಸಂತತಿ ಗಣನೀಯವಾಗಿ ಇಳಿಯುತ್ತಿದೆಯಂತೆ.

ಚಳಿ ಇದ್ದಷ್ಟೂ ಸೊಂಪಾಗಿ ಬದುಕುವ, ಉತ್ತರ ಅಪಲೆಶಿಯನ್ ಕಾಡುಗಳ ಸಂಕೇತವೇ ಎಂಬಂತಿದ್ದ  “ಮೂಸ್” (ಕಡವೆಯಂತೆ ಕಾಣುವ ಪ್ರಾಣಿ) ಸಂತತಿ ಶೇಕಡಾ ಅರವತ್ತರಷ್ಟು ಇಳಿದಿದೆಯಂತೆ. ಇವನ್ನೆಲ್ಲ ಓದಿದಾಗ, ಈ ಬಾರಿ ಬಿದ್ದ ಅವಿರತ ಹಿಮ, ಚಳಿ ಎಲ್ಲ ನನ್ನ ಉಷ್ಣವಲಯ ಜನ್ಯ ಚರ್ಮಕ್ಕೆ ಅಸಾಧ್ಯ ಎನಿಸಿದರೂ, ಒಂದು ಚೂರಾದಾರೂ ಈ ಜೀವ ಸಂಕುಲದ ಸಮತೋಲನ ನಿರ್ಮಿಸಲು ಸಹಕರಿಸಿದವೇನೋ ಎಂದು ನೆಮ್ಮದಿ ತರುತ್ತಿದೆ.

ಏನೋ ಗೊತ್ತಿಲ್ಲ ಯುಗಾದಿ ನನಗೆ ಅತ್ಯಂತ ಪ್ರೀತಿಯ ಹಬ್ಬ. ಯಾವ ಧಾರ್ಮಿಕ ಹೇರಿಕೆಯಿಲ್ಲದ ಮೈಮನಗಳಲ್ಲಿ ಹೊಸತನ ತುಂಬುವ ಒಂದು ನ್ಯಾಚುರಲ್ ಶಕ್ತಿಯಿದೆ ಈ ಹಬ್ಬಕ್ಕೆ. ಅದು ಉದ್ದಗೊಂಡ ಹಗಲಿನಿಂದ ಬಲಗೊಳ್ಳುತ್ತಿರುವ ಸೂರ್ಯಕಿರಣಗಳಿಂದ ನಮಗೆ ದೊರೆಯುತ್ತಿರುವ ಹೆಚ್ಚಿನ ವಿಟಮಿನ್ ಡಿ, ನಮ್ಮಲ್ಲಿ ಹೊಸ ಚೈತನ್ಯ ತುಂಬುವುದಕ್ಕೊ ಏನೋ. ಚಳಿಗಾಲದಲ್ಲಿ ಕೂಡಿಟ್ಟುಕೊಂಡ ಕೊಳಕನ್ನೆಲ್ಲ ಎಸೆದು, ತೊಳೆದು ಮನೆಯೆಲ್ಲ ಸ್ವಚ್ಚಗೊಳಿಸಬೇಕೆಂದು ಅನಿಸುತ್ತೆ. ಈ ಸ್ಪ್ರಿಂಗ್ ಕ್ಲೀನಿಂಗ್ ಅನ್ನುವ ಪರಿಕಲ್ಪನೆ ಅದು ಯಾರೋ ಹುಟ್ಟುಹಾಕಿದ್ದಲ್ಲ, ಅದು ನಮ್ಮಲ್ಲಿ ತಾನಾಗೆ ಆಗುವ ಪ್ರಕ್ರಿಯೆ.

ಸುತ್ತಲಿನ ಹೊಸತನಕ್ಕೆ ನಮ್ಮ ಪ್ರತಿಕ್ರಿಯೆ. ಈ ಬೇವು-ಬೆಲ್ಲವೂ ಅದೇ ಅಲ್ಲವೇ, ದೇಹಕ್ಕೆ ನಾವು ಕೊಡುವ ಸ್ಪ್ರಿಂಗ್ ಕ್ಲೀನಿಂಗ್?! ಎಲ್ಲ ಹೊಸತರ ಆರಂಭವೂ ಬಹುಷಃ ಸ್ವಚ್ಛತಾ ಕಾರ್ಯದಿಂದಲೇ ಆಗುತ್ತದೆ. ಮಾನವ ಸುತ್ತಲಿನ ಪ್ರಕೃತಿಗೆ ಸ್ಪಂದಿಸಿದಾಗ ಮಾತ್ರ ಜೀವನವೂ ಆರೋಗ್ಯವೂ ಸುಂದರ ಆಗಿರಲು ಸಾಧ್ಯ. ಹಾಗಾಗಿಯೇ ನಮ್ಮ ಹಿರಿಯರು ಈ ಬದಲಾವಣೆಗಳನ್ನು ಗುರುತಿಸಿ ಸಂಭ್ರಮಿಸಲು ಅದಕ್ಕೊಂದು ನಿರ್ದಿಷ್ಟ ಹಬ್ಬ ಅಂತ ಮಾಡಿದರು ಎಂದು ಈಗ ಅನಿಸುವುದು.

ಭಾರತದಲ್ಲಿ ಯುಗಾದಿ ಹೊತ್ತಿನಲ್ಲಿ ಇತರ ಎಲ್ಲ ಮಾವಿನ ಮರಗಳಲ್ಲೂ ಕಾಯಿ ಕಟ್ಟಿದ್ದರೆ, ನಮ್ಮನೆ ಹಿಂದಿನ ಒಂದು ಮಾವಿನ ಮರದಲ್ಲಿ ಯಾವಾಗಲೂ ಸ್ವಲ್ಪ ತಡವಾಗಿ ಹೂ ಬಿಟ್ಟು ಕಾಯಗೋದು. ಆದರೆ ಯಾವಾಗಲೂ ಯುಗಾದಿ ದಿನ ಒಂದು ಮಿಡಿಯಾದರೂ ಇರುತ್ತಿತ್ತು. ಇಲ್ಲಿ ನನ್ನ ಮೆಚ್ಚಿನ ಕೆಲಸ ಎಂದರೆ ಯುಗಾದಿ ದಿನ ಮನೆ ಹಿಂದೆ ಡ್ಯಾಫಾಡಿಲ್ ಗಡ್ಡೆ ಮೊಳಕೆ ಒಡೆದು ಪುಟ್ಟ ಗಿಡ ಮೇಲೆ ಬಂದಿದೆಯಾ ಅಂತ ನೋಡೋದು. ಪ್ರತೀ ಯುಗಾದಿಗೂ ಹಿಮದಿಂದ ಗಟ್ಟಿಯಾದ ನೆಲದ ಒಡಲೊದೆದುಕೊಳ್ಳುತ್ತ ಅಷ್ಟಷ್ಟೇ ಮಿದುಗೊಳಿಸಿಕೊಳ್ಳುತ್ತ, ಹಸಿರೆಲೆಯ ಪುಟ್ಟಗಿಡ ಸೂರ್ಯಕಿರಣಗಳತ್ತ ಮುಖ ಮಾಡುತ್ತಾ ಹೊರಬರುತ್ತೆ. ಅದೊಂದು ಬಗೆಯಲ್ಲಿ ದಿವ್ಯ ತತ್ವಜ್ಞಾನ ಸಾರುವ ಸಂಗತಿ ನನಗೆ. ಎಂತೆಂತ ಚಳಿಗೂ ಹೆದರದೆ, ಒಳಗೆಲ್ಲೋ ಸುಪ್ತವಾಗಿ ಶಕ್ತಿ ಕೂಡಿಸಿಕೊಳ್ಳುತ್ತ, ಚೈತ್ರಮಾಸದಲ್ಲಿ ಛಲಬಿಡದೆ ತಲೆಯೆತ್ತುತ್ತಲ್ಲ ಅಷ್ಟು ಪುಟ್ಟ ಗಿಡ ಡ್ಯಾಫಾಡಿಲ್!

ಚೂರು ಗಾಳಿ, ಬೆಳಕು ಸಿಕ್ಕಿದ್ದೇ ತಡ, ಸರಸರ  ಬೆಳೆದು ಬಣ್ಣ ಬಣ್ಣದ ಹೂಕೊಡುತ್ತಲ್ಲ. ನಾವು ಮನುಷ್ಯರು, ಏನೆಲ್ಲಾ ಸಾಧಿಸಬಲ್ಲೆವು, ಅಂತದ್ದರಲ್ಲಿ ನಮ್ಮ ಎಷ್ಟೊಂದು ಕನಸುಗಳನ್ನು, ಛಲಗಳನ್ನು ಅಯ್ಯೋ ಆಗಲ್ಲ ಅಂತ ಬಿಟ್ಟು ಬಿಡುತ್ತೇವಲ್ಲ.  ಆದರೆ ಆ ಪುಟ್ಟ ಗಿಡಕ್ಕಿರುವಷ್ಟು ಛಲವೂ, ಬದುಕುವ ಉತ್ಸಾಹವೂ ನಮ್ಮಲ್ಲಿಲ್ಲದಿದ್ದರೆ ಹೇಗೆ!? ಒಂದು ಚಿಕ್ಕ ಗೆಡ್ಡೆ ಬಣ್ಣದ ಹೂ ಬಿಡುವ ಛಲ, ಸಾವಿರಾರು ಮೈಲಿ ವಲಸೆ ಹೋಗಿ ಹಿಂತಿರುಗಿ ಬಂದು ಮತ್ತೆ ಅದೇ ಮರದಲ್ಲಿ ಹೊಸತಾಗಿ ಗೂಡು ಕಟ್ಟುವ, ಮರಿಮಾಡಿ ಹಾರಿಬಿಡುವ ಹಕ್ಕಿಗಳ ಉತ್ಸಾಹ, ಹೊಸದಾಗಿ ಹೂ ಬಿಟ್ಟು ಕಾಯಿಹೊತ್ತು ಹಣ್ಣ ಹನಿಗೂಡಿಸಿ, ಅವನ್ನೆಲ್ಲ ಜಗತ್ತಿಗೆ ತಿನ್ನಿಸಿ ಬೋಳಾಗಿ ನಿಂತರೂ ಕಳಕೊಂಡಿದ್ದರ ಬಗ್ಗೆ ಒಂದಿನಿತೂ ಕೊಸರದೆ  ಮತ್ತೆ ಅದೇ ಕಾರ್ಯಕ್ಕೆ ಮೊದಲುಗೊಳ್ಳುವ ಮನೆಮುಂದಿನ ಕಾಡುಸೇಬು, ಚೆರ್ರಿ ಗಿಡಗಳು. ಎಂತ ಅದ್ಭುತ ಜೀವನಪಾಠವಿದೆ ನಮ್ಮ ಸುತ್ತಲೆಲ್ಲ!

ಯುಗಾದಿ ನಮ್ಮೊಳಗನ್ನೂ ಮೊಳಕೆಯೊಡೆಯಿಸಿ ಹೊಸತಾಗಿ ಹುಟ್ಟಿಸದ ಹೊರತು ಸುತ್ತೆಲ್ಲ ಬಂದರೂ ನಿಜದ ಯುಗಾದಿ ಮನದೊಳಗೆ ಬರದು. ನಮ್ಮೆಲ್ಲರ ಮನದಲ್ಲೊಂದು ಹೊಸ ಯುಗಾದಿ ಮೂಡಲಿ, ಹಳೆಯ ನೋವೊಂದು ಹೊಸ ಮಳೆಯಲ್ಲಿ ತೊಳೆದು ಹೋಗಲಿ. ಕೈಬಿಟ್ಟ ಕನಸೊಂದು ಮತ್ತೆ ಚಿಗುರಿಕೊಳ್ಳಲಿ.

೨೦೧೪ ರಲ್ಲಿ ಅವಧಿಯಲ್ಲಿ ಪ್ರಕಟವಾಗಿದ್ದ ಬರಹ 

‍ಲೇಖಕರು Admin

April 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Raghunandan K

    ಮನದೊಳಗೆ ವಸಂತ ಗಾನ, ಯುಗಾದಿಯ ಚಿಗುರು ಮೂಡಲಿ, ಯುಗಾದಿಯ ಶುಭಾಶಯಗಳು.

    ಬರಹ ಇಷ್ಟವಾಯಿತು.

    ಪ್ರತಿಕ್ರಿಯೆ
  2. Manjula gh

    ವರುಷದ ಹಬ್ಬ. ಉಗಾದಿ
    ಪ್ರಕೃತಿಯ ಹೆರಿಗೆಯ ನೋವು
    ಅಂಗುಲಂಗುಲಕ್ಕೂ ಹೆಚ್ಚಾಗಿ
    ಕೊನೆಗೂ
    ಹಸಿರು ಚಿಗುರಿನ ಮೂಲಕ
    ಬಾಣಂತನವಾಯ್ತು
    ನಗೆಮೊಗದ ಹೂವು ಕಣ್ ಬಿಟ್ಟಿತು

    ಅವಳ ಫಲ ತಂದಿತು
    ಮೊಡದ ದೊರೆಯ ನಂಟು
    ಮರಗಿಡದ ಬಳಗಕ್ಕೆ
    ತಂಗಿಯ ಕೊಟ್ಟ ಉಡುಗರೆಯ ಹಬ್ಬ
    ಹೂವಿಗೊಂದು ಬಣ್ಣ,
    ಚಿತ್ತಾರದ ಪಾತರಗಿತ್ತಿ

    ಪುಟ್ಟ ಹಕ್ಕಿಗೆ ಹಾಡುವ ದನಿ
    ಪರ್ವತ ಗುಡ್ಡಗಳಿಗೆ ಎದೆ ಎತ್ತಿ ನಿಲ್ಲುವ ಧೈರ್ಯ
    ಹೊಳೆಯ ನೀರಿಗೆ ತಾಯಿ ಸೇರುವ ತವಕ

    ತಂಪು ತಂಗಾಳಿಯ ತಂದ ಯುಗಾದಿ
    ತವಕ ತಲ್ಲಣದಿ ಅಂಜುವ
    ಬಾಳಿಗೇನ ತಂದೇ?
    ಬೆಲ್ಲ ಬೇವಿನ. ಪಾಠ
    ಸ್ವಂತಿಕೆಯದ್ದೋ ಸಾಲ ಮಾಡಿದ್ದೀರಿ
    ಹೋಳಿಗೆಯ ಊಟ
    ನಮ್ಮಂತವರ ಬದುಕಿನ ಲೆಕ್ಕ
    ಸೊನ್ನೆ ಎರಂಡಕಿಯಲಿ ಮಾತ್ರ

    ಮೊಗ್ಗಾದರೂ ಅರಳದ ಜೀವಗಳು
    ನಕ್ಷತ್ರವಾದರೂ ಹೊಳೆಯದ ಬಾಳುಗಳು
    ತಪ್ಪಿಲ್ಲದಿದ್ದರೂ
    ಎದೆ ಸಟೆದು ನಿಲ್ಲಲಾರದ ದೇಹಗಳಿಗೆ

    ಬಿಸಿಲು ಕಣ್ಣು ಕುಕ್ಕಿಸುವಾಗ ಪ್ರಶ್ನೆ ಮೂಡುತಿದೆ
    ಇದು ಯಾರ ಯುಗಾದಿ??

    ಚಿಂದಿ ಆಯುವ ಮಕ್ಕಳ ಚಿಂತೆ
    ಬೀದಿವಾಸಿಯ ನಮ್ಮ ಜೋಪಡಿಯಲ್ಲಿ
    ಯಾವಾಗಲೂ ಕತ್ತಲು

    ಯುಗ,ಯುಗಾದಿ ಕಳೆದರೂ
    ನಮ್ಮ ಬದುಕಿನ ದಿಕ್ಕು ಬದಲಾಗದೇನು??

    ಮಂಜುಳ ಗುಲ್ಬರ್ಗಾ

    ಪ್ರತಿಕ್ರಿಯೆ
  3. Shyamala Madhav

    ಚMದದ ಬರಹ. ಮನಮುಟ್ಟುವಂತಿದೆ; ಖುಶಿಯಾಯ್ತು. ಯುಗಾದಿ ಎಲ್ಲರಲ್ಲೂ ಹೊಸ ಹರುಷ ತರಲಿ.
    – ಶ್ಯಾಮಲಾ ಮಾಧವ

    ಪ್ರತಿಕ್ರಿಯೆ
  4. ಸುಬ್ರಾಯ ಮತ್ತೀಹಳ್ಳಿ.

    ಇಡೀ ಅಮೇರಿಕಾವನ್ನು ಯುಗಾದಿಯ ಬೆಲ್ಲದಲ್ಲಿ ಮುಳುಗಿಸುತ್ತಲೇ ಕಹಿ ಒಗರಿನ ರುಚಿಯನ್ನೂ ಆಸ್ವಾದಿಸುತ್ತ ಸೃಷ್ಟಿಸಿದ ಈ ನುಡಿಚಿತ್ರ
    ಮುದ ನೀಡಿತು. ಅಲ್ಲಿದ್ದೂ ಇಲ್ಲಿಯ ಧ್ಯಾನದಲ್ಲಿ ಇಲ್ಲಿಗೆ ಅಲ್ಲಿಯ ನಿಸರ್ಗಸೌಂದರ್ಯವನ್ನು ಉಣಿಸಿದ ಲೇಖನ ಮುದ ನೀಡಿದೆ. ನಿಮಗೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: