ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಾದಾಪೀರ್ ಜೈಮನ್ ಹೊಸ ಕವಿತೆ- ಅವಕಾಶ

ದಾದಾಪೀರ್ ಜೈಮನ್ 

ಒಂದು ಹೆಬ್ಬಂಡೆ ಕೊರೆದು
ಬೇಡದ್ದು ಕಿತ್ತೊಗೆದು
ಉಳಿದದ್ದರಲ್ಲಿ
ಆಯಿತು ಅವಕಾಶ
ತಲೆಯ ಮೇಲೊಂದು ಸೂರು
ನಿಲ್ಲಲೊಂದಿಷ್ಟು ನೆಲ
ಒಂದಕ್ಕೆ ಆಕಾಶ
ಮತ್ತೊಂದಕ್ಕೆ ಭೂಮಿ
ಯಾವುದು ಆಕಾಶ? ಯಾವುದು ಭೂಮಿ?
ಯಾವುದು ಮೇಲೆ? ಯಾವುದು ಕೆಳಗೆ?

ನಡುವೆ ಘನ ದ್ರವ ಅನಿಲ ರೂಪಗಳಲ್ಲಿ
ಕಣ್ಣಾಮುಚ್ಚಾಲೆಯಾಡುವ ಪುಟ್ಟ ಕೂಸು
ಜೀವಜಲ
ಮುನಿಸಿಕೊಂಡು ಕೂತಾಗ
ಉಪ್ಪಡರಿದ ಸಮುದ್ರ
ಆಚೆಯಿಂದೀಚೆಗೆ ಜೋಕಾಲಿ ತೂಗುವ
ಗಾಳಿ
ಯಾರೋ ನಕ್ಕಾಗ ಊರೆಲ್ಲ ಬೆಳಕು
ಹೊತ್ತು ಕಳೆದು ಮಾಯವಾಗಿ ಕತ್ತಲು
ಯಾವುದು ಬೆಳಕು? ಯಾವುದು ಕತ್ತಲು?

ಒಂದಷ್ಟು ಹಸಿರು ಒಂದಷ್ಟು ಕೆಂಪು
ಒಂದಷ್ಟು ನೀಲಿ ಒಂದಷ್ಟು ಬಿಳಿ
ಯಾವುದು ಯಾವ ಬಣ್ಣ?
ನಡುವೆ ಉಳಿದದ್ದು
ಕಲ್ಲು ಕಟೆದ ಉಳಿ
ಮರೆತು ಬಿಟ್ಟು ಹೋದದ್ದು
ಕಲ್ಲು ಕಟೆವ ಕವಿ
ಇಲ್ಲೀಗ ಮರಳಿ ಶಾಪದಿ
ಕಲ್ಲಾಗುವವರೆಗೂ
ನಿಶ್ಚಿಂತ ಆಶ್ರಯ!
ಅಂದಹಾಗೆ
ಇಲ್ಲಿ ಯಾರು ಉಳಿ? ಯಾರು ಕವಿ?
ಯಾವ ಶಾಪ? ಯಾರ ಶಾಪ?
ನಡುವೆ ಘಟಿಸುವುದಕ್ಕೇನು ಹೆಸರು?

‍ಲೇಖಕರು Avadhi

6 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading