‘ಕವಿತೆ ಬಂಚ್’ನಲ್ಲಿ ಅಕ್ಷಯ ಆರ್ ಶೆಟ್ಟಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಅಕ್ಷಯ ಆರ್ ಶೆಟ್ಟಿ
ಪ್ರಸ್ತುತ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು.  ಎಂ.ಎ.  ಮತ್ತು ಎಂ.ಬಿ.ಎ.  ಪದವೀಧರರು. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಅಕ್ಷಯ ಅವರಿಗೆ ‘ಸುಶೀಲಮ್ಮದತ್ತಿನಿಧಿಪ್ರಶಸ್ತಿ’ ‘ತ್ರಿವೇಣಿಧತ್ತಿನಿಧಿಪ್ರಶಸ್ತಿ’ ಮತ್ತು ‘ಬಾಂಧವ್ಯಪ್ರಶಸ್ತಿ’  ಲಭಿಸಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರಕ್ಕಾಗಿ ‘ಕನಕ  ಚಿಂತನ’ ಕೃತಿಯನ್ನು ಸಂಪಾದಿಸಿದ್ದಾರೆ. 

‘Gender Equity ‘ ಕುರಿತಂತೆ  ನಾರ್ವೇಯನ್ ವಿದ್ಯಾರ್ಥಿ ನಡೆಸಿದ ಸಂದರ್ಶನ ನಾರ್ವೇಯನ್ ಜರ್ನಲ್ ನಲ್ಲಿ ಪ್ರಕಟಗೊಂಡಿದೆ. ಜಾನಪದ ಸಂಶೋಧನೆ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಜಪಾನಿನ ಕ್ಯೂಟೋ ಯೂನಿವರ್ಸಿಟಿಯ ಪ್ರೊಫೆಸರ್ ಮಿಹೋ ಇಶಿ ಅವರ ಜೊತೆ ಜಾನಪದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  1. ಅಪ್ಪಬುದ್ದನಾಗಲಿಲ್ಲ!

ಬುದ್ಧ ಬುದ್ಧ ಎಂದು ಕಿವಿಗಪ್ಪಳಿಸುವಾಗೆಲ್ಲ
ರೋಗವನೇ ಹಾಸಿ ಹೊದೆದು
ಹೆಣವಾಗಿ ಮಲಗಿದ ಅಮ್ಮನ ಮುಂದೆ
ನಾಲ್ಕು ತಿಂಗಳ ಹಸುಗೂಸ ಎದೆಗವಚಿದ ಅಪ್ಪ
ಸದಾ ನೆನಪಾಗುತ್ತಾನೆ.

ಲೋಕವನೇ ಬೆಳಗಿದ ಬುದ್ದನೆಲ್ಲಿ!
ಸಂಸಾರಕಷ್ಟೆ ಬೇಲಿಯಾದ ಅಪ್ಪನೆಲ್ಲಿ!
ಸಮೀಕರಿಸುವಲ್ಲಿ ಒಂದು ಸಮಾಂತರ ರೇಖೆ ಬೇಕಿತ್ತು,
ರಾಗ ಎಳೆದ ಅನೇಕರಿಗೆ ಸಡ್ಡು ಹೊಡೆವಂತೆ ಬೆಳೆಸಿದ್ದ
ಮೂರು ಮಕ್ಕಳ ನೊಗ ಹೊತ್ತು
ಒಳಗೂ ಹೊರಗೂ ಬೆಂದ ಅಪ್ಪ
ನಮ್ಮ ಆಟ ಪಾಠಗಳ ಲಕ್ಷ್ಯದಾಚೆ,
ಬದುಕಿನ ಚೀಲ ತುಂಬುವ ಗುರಿ ಹೊತ್ತ!

ಬುದ್ದ ಒಮ್ಮೆ ಕಂಡ ಹೆಣವನ್ನು ಅಪ್ಪ ನಿತ್ಯ ಕಂಡ
ಶವಾಗಾರದಲಿ ಹೆಣಕೆ ಹೆಗಲು ಕೊಡುತ
ಕಣ್ಣೀರಲಿ ಮುಳುಗಿದ ಮಂದಿಯೊಡನೆ ಕಣ್ಣೀರಾದ
ಅವರ ನೋವಿನೊಡನೆ ತನ್ನ ನೋವನೂ ಉಣುತ
ಬದುಕಿನ ನಶ್ವರತೆಯಲೇ ಬಾಳು ಕಟ್ಟಿಕೊಂಡ
ಅಪ್ಪ, ಸದಾ ನೆನಪಾಗುತ್ತಾನೆ
ಲೋಕ ಬುದ್ದನೆಂದು ಜಪಿಸುವಾಗ!

ನಿಗಿನಿಗಿ ಕೆಂಡ ಕೆಂಬೂದಿಯುಗುಳುತ್ತ
ದೇಹ ಭಸ್ಮವಾಗುವ ಪ್ರಕ್ರಿಯೆಗೆ ಕಾಯುವ ಹೊತ್ತು
ಎತ್ತರೆತ್ತೆರಕೆ ಬೆಳೆದ ಆಲವೋ ಸಾಗುವಾಣಿಯೋ ಇನ್ನೊಂದೋ ಮತ್ತೊಂದೋ
ಸಿಗುವ ನೆರಳಿನಲೇ ಕುಳಿತು, ತುಟಿಗೊಂದು ಬೀಡಿ ಹಚ್ಚಿ
ತನ್ನೊಳಗೆ ಹುದುಗುವ ಅಪ್ಪ
ನನ್ನ ಕಣ್ಣಿಗೆ ಧ್ಯಾನಸ್ಥ ಬುದ್ದ!

ತಾಸಿನೊಳಗೆ ಭಸ್ಮವಾಗುವ ದೇಹ
ಮತ್ತು
ವಾರಸುತನಕೆ ಉಳಿವ ಎಲುಬು
ಎರಡಕೂ ಸಾಕ್ಷಿಯಾಗುವ ಅಪ್ಪ
ಜತನದಿಂದ ಗೋಕರ್ಣಕೆ ತಲುಪಿಸುವ ದಾರಿಹೋಕ
ಮುಕ್ತಿಮಾರ್ಗಕ್ಕೆ ನಿಲುಕದ ಮುಕ್ತಿದಾತ.
ಕಾಯಕದಲೇ ಕೈಲಾಸವ ಕಂಡ ಅಪ್ಪ
ಬದುಕಿನ ಪುಂಜಕೆ ಕಡ್ಡಿ ಗೀರಿ ಬೆಳಕು ಹಚ್ಚುವುದ ತಿಳಿಸಿಕೊಟ್ಟವ
ಅವ ಬುದ್ದನಲ್ಲ,
ಬುದ್ದ ಎನುವಾಗಲೆಲ್ಲ ಸದಾ ನೆನಪಾಗುವ ಅಪ್ಪ ಬುದ್ದನಾಗಲೇ ಇಲ್ಲ!

02. ಮುಖಾಮುಖಿ

ಘಟ್ಟ – 1

ಎಲ್ಲರೂ ಇದ್ದು
ಒಬ್ಬಂಟಿ ಅನಿಸಿದಾಗ,
ಶಬ್ದದ ನಡುವೆಯೂ
ನಿಶ್ಶಬ್ದ ಕಾಡಿದಾಗ,
ಮಾತಿನ ಖಜಾನೆಯಲೇ
ಮೌನ ಎದುರಾದಾಗ
ಅಕ್ಷರಗಳು ಕೈ ಹಿಡಿದುವು
ನನ್ನೊಳಗ ತೆರೆಯಲು;

ಘಟ್ಟ – 2

ಕಳೆದಿರುವ, ಚದುರಿರುವ
ನೆಂದಿರುವ, ಹರಿದಿರುವ
ಪುಟಗಳಲಿ
ತುಂಬಿರುವ ಅಕ್ಷರಗಳು
ಕಾಡುತಿವೆ,
ಮರಳಿ ತೆರೆಯಲು;

ಘಟ್ಟ -3

ಬದುಕಿನದೇ ಪ್ರತಿಬಿಂಬ
ಅಕ್ಷರಗಳ ಒಳಗೆ
ಕವಿ ಕರ್ತೃ ಕವಿತೆ ಕಥೆ
ನೆಪಮಾತ್ರದ ಸರಕುಗಳು
ಬದುಕಿನ ಹಸ್ತಾಕ್ಷರದ ಒಳಗೆ!

03. ಮತ್ತದೇ ಉಪಮೆ

ಮಡಿಯುಟ್ಟು ಮುಡಿಯುಟ್ಟು ನೆರಿಗೆಯನೆ ಬಿಗಿದುಟ್ಟು
ಸೊಂಟದ ಅವಕಾಶದಿ ಕೊಡವನಿಟ್ಟು
ಒಲೆಯೆದುರು ಬೇರು ಬಿಟ್ಟು
ಹೊಗೆಯೊಡನೆಯೆ ಕನಸು ಹರಿಯಬಿಟ್ಟ
ಈಕೆ, ಬದುಕಿಗೊಂದು ದೃಷ್ಟಿಬೊಟ್ಟು…

…ಹೊರಬಿದ್ದು, ಹೊಲವನುತ್ತು ಕಳೆ ಕಿತ್ತು
ಹಸುಗಳನೂ ಹೈಕಳನೂ
ಬದುಕ ಸೆರಗಿನಲೇ ಕಟ್ಟಿಕೊಂಡ
ಈಕೆಯದು, ಬರಿಯ ಕಾಯ, ಅಲ್ಲ… ಕಾಯಕ!
ಮತ್ತೊಂದು ಮುಂಜಾವು
ಗ್ಯಾಸ್ ಕುಕ್ಕರುಗಳ ಜೊತೆ
ಆಫೀಸು ಬಸ್ಸು ಫೈಲುಗಳ ನೆಂಟಸ್ತಿಕೆ
ಓಡಿಯಾಡಿಯೇ ಸವೆಸಿದ್ದು ಚಪ್ಪಲಿ

ಅಸ್ತವ್ಯಸ್ತ ಬದುಕ ತುಣುಕುಗಳ ಓರಣದೊಳಗೇ ಉಳಿದ
ಈಕೆಯದು, ಅಕ್ಕಿ ತೊಳೆದ ನೀರಲ್ಲೇ ಹರಿದು ಹೋದ ಚರಿತ್ರೆ!
ಹಾಗಾಗಿ, ಉಳಿಯಲೇ ಇಲ್ಲ
ಆಳಕೆ ಬಿಟ್ಟಿರುವ ಬೇರು ಕಾಣಲೇ ಇಲ್ಲ…
ಪಾತರಗಿತ್ತಿಯ ಆಚೆ ಈಕೆಯನು ಗುಣುಗುಣಿಸಲೇ ಇಲ್ಲ…

04. ಸತ್ತು ಬಿದ್ದಿರುವ ಹೊಸದಾರಿಯ ಪಲಕು!

ಮತ್ತೆ ಸಹಜತೆಗೆ ವಾಲುತ್ತಾ ನಡೆದ ಬದುಕಿನ ಕಿಂಡಿ
ಹೊಸ ಬೆಳಕಿನ ಛಾಯೆಯಲೇ ನಡೆದ ಹೆಜ್ಜೆ
ಮುಸುಕಿನ ಮಸುಕಿನಲಿ ದ್ವಂದ್ವ ಬೇನೆ, ಉಸಿರ ಕಟ್ಟುವಿಕೆಗೆ
ಎದುರಾಗಿಯೂ ಛಲ ಬಿಡದ ಮಲ್ಲನಂತೆ
ಹೊರ ನಡೆದದ್ದು ಸಾಧನೆಯೇ? ಅಥವಾ
ಹೊಟ್ಟೆಯೆಂಬ ಬಾಕನಿಗೆ ಶರಣೆಂದದ್ದೆ?

ಮತ್ತೆ ತೆರೆದ ಕಿಂಡಿ ಮಹಾ-ದ್ವಾರ
ನಂಬಿಕೆಯ ಬುನಾದಿಯ ಚದುರಿ ಕಟ್ಟುವ ತುರ್ತು
ಒಳಗೇ ಕಾಡಿದ ಸಾವಿನ ಜಿಜ್ಞಾಸೆಯ ತಕ್ಕಡಿ ತೂಗಿಯೂ,
ಒಡೆದ ಮಡಕೆಯ ಒಳ ನುಸುಳಿ ಬೇಡಿದ್ದು,
ನಶ್ವರದ ಪುಂಜಕೆ ಶಾಶ್ವತದ ಲೇಪವೆ?
ಆತ್ಮತೃಪ್ತಿಯ ಸಖ್ಯಕೆ ಅಮೂರ್ತದ ಸಿಂಚನವೇ?

ಮುಚ್ಚಿದ ಬಾಗಿಲಿಗೆ ಜಡಿದ ಬೀಗಕೆ ಹಿಡಿದ ತುಕ್ಕು
ಸವರಿದ ಎಣ್ಣೆಯ ಸವರಿ ಬೆಳೆದಿದೆ, ಕಿಲುಬು ಗಟ್ಟಿದ ಮನಸು
ನೆಲ ಮುಗಿಲ ತೇರಿಗೆ ಜೋಕಾಲಿಯಾಗುವ ಹೊತ್ತು,
ಕೂಡಿಡುವ ಕಳೆಯು, ಮೇಲುಪ್ಪರಿಗೆಯ ಸಿರಿಯು
ನೆಲದ ಕಂಪ ಮೂಸಿಯೂ ಕೂಪ ಮಂಡೂಕವಾದದ್ದು
ಜ್ಞಾನದ ಪುಂಜಕೆ ತುಕ್ಕು ಹಿಡಿದ ವೈಖರಿವೇ?
ಸ್ವಾರ್ಥವೇ ಬಿಡದ ಲಾಲಸೆಯೇ?

ರಭಸದ ನಡಿಗೆಯ ಹಟತ್ತನೆ ತಡೆದ ಸೂಕ್ಷ್ಮ
ಒಳಗೇ ಉಳಿಸಿದ ಆತ್ಮ ಬಂಧನವೂ ಕಾಣಿಸದ ಒಳ ಕಿಂಡಿ;
ಹೊರ ನಡೆದು ಒಡೆದ ಮಡಕೆಯಲಿ ಇಣುಕುವ ಶರಣು ಭಾವವೂ
ತೋರದ, ಸರಳ ಸಹಜ ಬೆಳಕು, ಬದುಕು
ನವ ಉದಯದಿ ಸತ್ತು ಬಿದ್ದಿದೆ,
ಹೊಸ ದಾರಿಯ ಪಲಕು!

05. ಯುಗಾದಿ ಮತ್ತು ನಾನು-

ಯುಗಾದಿ ಮತ್ತು ನಾನು,
ಹೀಗೆ ಭೇಟಿಯಾಗುತ್ತೇವೆ, ಒಮ್ಮೊಮ್ಮೆ!
ನಮ್ಮದು ಅಪರೂಪದ ಮಿಲನ
ವರುಷವೆಂಬ ಚಲನ

ಇಲ್ಲಿ ಚಲನೆಯಲ್ಲುಳಿಯುವುದು ಯುಗಾದಿಯೋ? ನಾನೋ?
ಸಾಮ್ಯತೆಯೇ ಇಲ್ಲದ ನಾನು ಮತ್ತು ಯುಗಾದಿ
ಜೊತೆಗೆ, ಸಲ್ಲದ ಪ್ರಶ್ನೆ!

ಅಲ್ಲ, ಒಮ್ಮೆ ತರ್ಕಿಸಿಕೊಳ್ಳಿ –
ಯುಗದ ಆದಿ ಯುಗಾದಿ
ಮತ್ತು ‘ನಿಚ್ಚಂ ಪೊಸತೆನ್ನುವ’ ನಾನು
ಚಲನಶೀಲರಾರು?
ತರ್ಕ ನಿರಂತರ – ಅಲ್ಲೂ ಇದೆ ಜಿಜ್ಞಾಸೆ;
ಹಾಗಾದರೆ, ಚಲನೆಯೆಂದರೇನು?
ನಿಚ್ಚಂ ಪೊಸತೆನ್ನುವ, ಯಶದ ಹಪಹಪಿಕೆಯಲೇ ನಡೆವ
ಬೇವು ಸಿಕ್ಕಾಗ ಉಗುಳಲೆತ್ನಿಸುವ
ಬೆಲ್ಲವನೇ ಜಗಿದು ತಿನುವ… ಜಾಣ, ನಾನು.
ಮಾಮರದ ಚಿಗುರಿಂದ ತೊಡಗಿ
ಹಣ್ಣು ಎಲೆ ಬೀಜ ಮತ್ತೆ
ಹೊಸ ಚಿಗುರಿಗೆ ಭಾಷ್ಯ ನುಡಿವ
ಪ್ರಕೃತಿಯ ಯುಗಳ ಗೀತೆ
ನಡುವೆ, ಬೀಜ ಚಿಗುರೊಡೆಯಲು ನೀರಾಗುವ ಇಳೆ
ಬೆಳೆವ ದಾರಿಯಲಿ ಜೊತೆಯಾಗುವ ಭಾನು
ಹೀಗೆ ಇರುಳು ಹಗಲಾಗಿ, ಹಗಲು ಇರುಳಾಗಿ
ಮತ್ತೆ, ಆದಿಯಿಂದ ಯುಗಾದಿ!

ಸವಾಲು ಮುಂದಿದೆ, ತರ್ಕವೂ ಕೂಡಾ-
ಚಲನೆ ನನ್ನದೋ…? ಯುಗಾದಿಯನೊಳಗೊಂಡ ಪ್ರಕೃತಿಯದೋ…?
ಹೊಸತೆನ್ನುವ ಭಾವ ‘ವ್ಯಕ್ತಿ’ಯದೋ? ‘ಸಂಸ್ಕೃತಿ’ಯದೋ?

06. ಒಂದು ಹಿಡಿ ಅಕ್ಕಿ

ಒಳಗೊಂದು ಉಸಿರು ಝೇಂಕರಿಸಿದೆ
ಹೊರಗಿನ ವಿಪ್ಲವಗಳ ಗೊಡವೆಯಾಚೆ

ಒಪ್ಪಿದೆ, ಅಪ್ಪಿದೆ, ಬೆಸುಗೆಯೊಂದು ಹೆಣೆದಿದೆ
ನವಮಾಸದ ಕೊನೆಗೆ ಕಡಿದರೂ ಉಳಿವ ಹಾಗೆ…

ಎಲ್ಲಿಯ ಅಂಡವೋ ಯಾರ ಬೀಜವೋ
ಸಮಾಗಮಕ್ಕೆ, ಸಖ್ಯಕೆ, ಸಂಗಮಕೆ
ಆಸರೆಯಾದ ನೆಪ ಮಾತ್ರ… ನನ್ನ ಹಮ್ಮು!

ಉರುಳುತುರುಳುತ ದಿನಚಕ್ರ, ಗಟ್ಟಿಯಾಗುತ್ತಿದೆಯೇ ಬಂಧ?
ದೂರವಾಗುತ್ತಿದೆಯೇ ಸಂ-ಬಂಧ…
ನನ್ನೊಡಲನೇ ಬಸಿದ ನನ್ನದಲ್ಲದ ಸೇತುಬಂಧ…!

ಒಂದು ಹುಣ್ಣಿಮೆಯ ಮುಂಜಾವು, ಅಮವಾಸ್ಯೆಯ ಕರಿನೆರಳು
…ಚಂದಿರನೇ ಕಾಣೆ!
ಸಾಕ್ಷಿಗೆ…

… ಒಸರುತಲೇ ಚುಚ್ಚುತ್ತಿರುವ ಮೊಲೆತೊಟ್ಟು ಮಾತ್ರ!
ನನ್ನೊಳಗಿನ ಜೀವದ ನೆನಪಿನಾ ಹೆಣಿಗೆ ಚದುರಿದೆ,
ಅಪ್ಪಯ್ಯನ ಅನವರತ ಕೆಮ್ಮಿನಾ ಗಾನಕೆ!
ಚದುರಿರುವುದರ ಚದುರಲು ಬಿಟ್ಟು,
ನೆಟ್ಟಿರುವೆ ಚಿತ್ತ, ಹೊಸದರತ್ತ; ನೆನಪುಗಳ ಹೊಸಕುವತ್ತ!

ಹಾಸಲ್ಲೇ ಉಸುರಿ, ಕಣ್ಣಲ್ಲೇ ಜೀವ ಹಿಡಿದಿರುವ
ಅಮ್ಮನ ಸುಕ್ಕುಗಳಾಳದಲಿ ಹುಡುಕುತಿರುವೆ
‘ತೃಪ್ತ ಭಾವ’
ಒಂದು ಹಿಡಿ ಅಕ್ಕಿಯಾಸರೆಯಲೆ, ಉಳಿದಿರುವ ಜೀವ!

ಒಂದು ಚಿಗುರನು ಚಿಗುರಿ, ಕಸಿಮಾಡಿ, ಜೀವ ಕೊಟ್ಟು
ಮತ್ತೆ ನೇಪಥ್ಯಕೆ ಕಳಿಸಿ
ನನಗೆ ಜೀವ ಕೊಟ್ಟ ಎರಡು ಜೀವಗಳ ಉಳಿಸಿ,
ಸಾಧಿಸಿದ್ದು, ದಿನಕ್ಕೆ ಒಂದು ಹಿಡಿ ಅಕ್ಕಿ!
ಕನಸು ಮನಸುಗಳ ಹೊಸಕಿ!

‍ಲೇಖಕರು Avadhi

June 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: