- ದಾದಾಪೀರ್ ಜೈಮನ್
೧
ಸಂಭವಿಸು
*
ನೀ ಸುಳಿಯದೆ ಹೋಗಿದ್ದರೆ
ಮಾಯಾಜಿಂಕೆ ಮತ್ತು ಜಾನಕಿಯ ಹೊಳೆದ ಕಣ್ಣುಗಳ
ಅರ್ಥ ತಿಳಿಯದೆ ಹೋಗುತ್ತಿತ್ತು
ನೀ ಅಷ್ಟು ಹತ್ತಿರ ಬಾರದೆ ಹೋಗಿದ್ದರೆ
ಬಿಸಿಲು ನಾಡಿನ ಮಣ್ಣ ಹೂವಿನ ಎದೆ
ಢವ ಢವಗುಟ್ಟುತ್ತಿರಲಿಲ್ಲ
ಕನಸ ಕಟ್ಟುತ್ತಿರಲಿಲ್ಲ
ಮಳೆಯ ಘಮಲಿನ ಬಿಂದು
ಆತ್ಮದಂಗಳದಲ್ಲಿ ಗುರುತು ಬಿಡುತ್ತಿರಲಿಲ್ಲ
ಆ ಕತ್ತಲ ರಾತ್ರಿಯಲ್ಲಿ
ಒಂದು ಮುತ್ತಿಗೆ ನನ್ನ ತಡೆಯದೇ ಹೋಗಿದ್ದರೆ
ನನ್ನ ಪಾಲಿನ ದಿವ್ಯಕ್ಕೆ ಅಸ್ತಿತ್ವವೇ ಇರುತ್ತಿರಲಿಲ್ಲ
ಜಾಲ ರಚಿಸುತ್ತಿಲ್ಲ
ನಿನ್ನ ರಮಿಸುತ್ತಿಲ್ಲ
ನನ್ನ ನಂಬು
ನಿನಗಿರುವ ಭಯಗಳೆಲ್ಲಾ
ಈ ಕವಿತೆಯ
ಪದ ಪದಕ್ಕಿರುವ ಸಂಕೋಚದ ಹಾಗೆ
‘ಪ್ರೀತಿಸುವವರು ಒಂದು ಹೆಜ್ಜೆ ಮುಂದೆ ಇಟ್ಟರೆ
ಓಡಿ ಹೋಗುವ ಖಯಾಲಿಯಿದೆ ನನಗೆ
ಎಚ್ಚರ’
ನೀನಂದು ಮರೆಯಾದೆ
ನನಗೆ ಗೊತ್ತು
ನೀನೊಂದು ಅಲೆಮಾರಿ ಜಿಂಕೆ
ಸರಿ
ಪ್ರೀತಿಸುವುದಿಲ್ಲ
ನನ್ನಾಣೆ
ಈಗಲಾದರೂ ಬಾ
ಸುಳಿ
ಹತ್ತಿರ
ಸುಮ್ಮನೆ ಸಂಭವಿಸು
೨
ಮೋಹಿತನಿಗೆ
*
ನೋಡುತ್ತಲೇ ಉಳಿವಷ್ಟು
ಸಮುದ್ರದ ಸೆಳೆತ ನಿನ್ನ ಕಣ್ಣುಗಳಿಗೆ
ನಿನಗೆಲ್ಲಿ ನನ್ನೊಳಗು ಕಾಣಿಸುತ್ತದೋ
ಭಯ
ದೃಷ್ಟಿ ಬದಲಿಸುವ ನಾಟಕದ ಅನಿವಾರ್ಯ ಕೆಲಸ
ನನ್ನ ಮೇಲೆ
ಕೇಳುತ್ತಲೆ ಕಳೆದು ಹೋಗುವಷ್ಟು
ಮಾಧುರ್ಯವಿದೆ ನಿನ್ನ ದನಿಯಲ್ಲಿ
ಅರ್ಥದ ಆಸೆಯಿಲ್ಲದೆ ಜಗತ್ತಿನ ಏನನ್ನೋ
ಮಾತಿಗೆ ಹೆಕ್ಕಿ ಕೊಡುವ
ನನ್ನ ಖಯಾಲಿಯಲ್ಲಿ
ಈ ಹೊತ್ತು ಕಳೆದು ಹೋಗದಿರಲಿ
ತವಕ
ನನ್ನೊಳಗೆ
ನಿನ್ನ ಕೇಳದೆ ತಬ್ಬಿಯೇ ಬಿಡುವಷ್ಟು
ದುರುಳವಾಗುತ್ತದೆ ಮನಸ್ಸು
ನಿನ್ನ ಸಾಮೀಪ್ಯದ ಸಖ್ಯದಲ್ಲಿ
ಅಂತರ ಕಾಯ್ದುಕೊಳ್ಳುವ ಯುದ್ಧದಲ್ಲಿ
ಒಲ್ಲದ ಮನಸ್ಸಿನಿಂದಲೇ
ಗೆಲ್ಲುತ್ತೇನೆ
ನಿನಗೆ ಸೋತ ಮೇಲೆ
ಈ ಗೆಲುವುಗಳು ಅತೀವ ಭಾರ
ನೀ ಸುಳಿದು ಹೋದ
ಜಾಗಗಳು
ಅದರ ನೆನಪುಗಳು
ನಿನ್ನ ಘಮಲಿನಿಂದ ತುಂಬಿ ಹೋಗಿದೆ
ನೆನಪಿನ ಆಸರೆಗೆ ಭುಜ ಕೊಡುವುದು
ನನ್ನ ಹೊಸ ಹವ್ಯಾಸ
ಈ ಎಲ್ಲಾ ಹೊಸತುಗಳು
ನನ್ನ ಉರಿಸಿ ಈ ಪಾತ್ರೆಯಲ್ಲಿ
ಹೊಸತೆ ಅಡುಗೆಯ ರುಚಿ
ಅಡುಗೆ ಮುಗಿಯದಿರಲಿ
ಉರಿಯನ್ನು ಕೊಂಚ ಕಡಿಮೆ ಮಾಡುತ್ತೇನೆ
ಮತ್ತೆ ಮತ್ತೆ
ನಮ್ಮ ಪ್ರತಿ ಮಾತುಗಳು ಶುರುವಾಗುವುದೇ ಹೀಗೆ
‘ಮತ್ತೆ?’
ಈ ಮೋಹಕ್ಕೆ ಏನೇನ್ನುವುದು?
ನಮ್ಮದೇ ಕವಲುದಾರಿಗಳಲ್ಲಿ ನಿಂತ ನಾವು
ಪ್ರೀತಿ ಎನ್ನುವುದಕ್ಕೆ ಶಕ್ತರಿಲ್ಲ
ಮೋಹಕದ ವ್ಯೂಹ ತೊರೆಯುವ ಆಸೆ ನನಗೆ ಇಲ್ಲ
೩
ಜೀವವಿರುವುದು
*
ಪದಗಳು ಸೋಲುತ್ತವೆ
ಪ್ರತಿ ಸಲ
ಜೀವವಿರುವುದು
ಈ ಆಶ್ಚರ್ಯಸೂಚಕಳಿಗೆ
ಅಲ್ಲಲ್ಲಿ ಪದದ ಕೊನೆಗೆ
ಮುಂದುವರೆಯುವ ಮೂರು ಚುಕ್ಕೆಗಳಿಗೆ
ಸೆಮಿ ಕೋಲೋನುಗಳಿಗೆ
ಪದಗಳನ್ನೂ ಮೀರಿ ಉಳಿವ
ಖಾಲಿ ಜಾಗಗಳಿಗೆ
ನಿನಗೂ ಗೊತ್ತು
ಪದ ಶಬ್ದವಾದಾಗಲು
ಮಾತು ಗಾಳಿಯಲ್ಲಿ ತೇಲಿದಾಗಲೂ
ಆಡಿದರೆ ಮಾತು ಒಡೆದು ಹೋಗುತ್ತದೆ
ಹಾಗಾಗಿ
ಮುತ್ತುಗಳ ಪ್ರೀತಿ ನನಗೆ
ಇವು ಜೋಪಾನವಿಟ್ಟಷ್ಟು ಗಟ್ಟಿಯಾಗುವ
ವೈನಿನ ಹಾಗೆ
ಒಮ್ಮೆ ಸಿಗು
ಮುಗುಳುನಗು
ಜೀವವಿರುವುದು ಇಂತಹಾ ಮುಗುಳುನಗೆಗೆ
ದಾಟಿಸುವೆ
ಆ ಕತ್ತಲ ಕೋಣೆಯ ಘನಮೌನದಲ್ಲಿ
ಕಣ್ಣು ಮುಚ್ಚಿ
ಜೀವವಿರುವುದು
ನಮಗೇ ಸಿಗುವ ಆ ಮೌನದಲ್ಲಿ
೪
ಬೆರಳುಗಳು
*
ಐ ಮಿಸ್ ಯು
ಎಂದರೆ
ನೀ ನನ್ನ ನೆನಪಿಸಿಕೊಳ್ಳುತ್ತಿರುವೆ
ತಕ್ಷಣ
ನಾನು
ಐ ಮಿಸ್ ಯು ಟೂ
ಎಂದರೆ
ನಾ ಸುಳ್ಳೇ ಸಮಾಧಾನ ಮಾಡುತ್ತಿರುವೆ…
ಹೇಗೆ ನಂಬಿಸುವುದು?
ನಂಬಿಕೆ
ಒಳಗಡೆ ಹುಟ್ಟಿಕೊಳ್ಳುವುದು
ನೆನಪು
ಒಳಗಡೆ ಹೂತು ಹೋಗಿರುವುದು
ಬೆರಳುಗಳಿಂದ ತುಟಿ ಸವರಿಕೊಂಡಾಗ
ನಿನ್ನ ತುಟಿ
ಮೂಗಿಗೆ ಸ್ಪರ್ಶಸಿದಾಗ
ನಿನ್ನ ಬೆರಳುಗಳಿಗಂಟಿದ
ನಿನ್ನ ಘಮ
ಕಿವಿಯ ತಡವಿದಾಗ
ನಿನ್ನೆಲ್ಲಾ ಪಿಸುಗುಟ್ಟುವಿಕೆ
ನಾನಿಲ್ಲಿ
ನನ್ನ ಬೆರಳುಗಳ ಜೊತೆಗೆ
ಆಟವಾಡುವಾಗ
ನಿನ್ನ ಬೆರಳುಗಳು
ಕೇವಲ
ಬೆರಳುಗಳಲ್ಲ
ಏನೆಂದು
ಹೇಳಿದರೆ
ಇದು ಕವಿತೆಯಾಗುವುದಿಲ್ಲ
ಈ ಬೆರಳುಗಳಿಗೆ
ನಿನ್ನ ಬೆರಳುಗಳ
ಪರಿಚಯವಿದೆ…
ಆ ಶಹರದ
ಆ ಕತ್ತಲು
ರಾತ್ರಿಯಲ್ಲಿ
ಕೆಲವೇ ಕೆಲವು ಕ್ಷಣಗಳು
ಬೆಸೆದುಕೊಂಡ
ನಮ್ಮ ಬೆರಳುಗಳು
ಮತ್ತೆ ಮತ್ತೆ ಮರು ಭೇಟಿಗಳಿಗೆ
ಹಠ ಹಿಡಿಯುವುದಿಲ್ಲ
ಕೇವಲ
ನೆನಪು ಮಾಡಿಕೊಳ್ಳುತ್ತವೆ
ಐ ಮಿಸ್ ಯೂ
ಎಂದಾಗ
ಸಮಾಧಾನ ಮಾಡಿಕೊಳ್ಳುತ್ತವೆ
ನೆನಪು ಹಾರಿ ಹೋಗಿಲ್ಲವೆಂದು…!






0 Comments