ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜನರ ಪ್ರತಿಭೆ

ಮೂಲ : ಚಾರ್ಲ್ಸ್ ಬುಕೊವ್ಸ್ಕಿ
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಒಬ್ಬ ಸಾಧಾರಣ ಮನುಷ್ಯನಲ್ಲಿರುವ
ದ್ರೋಹ, ದ್ವೇಷ, ಹಿಂಸೆ, ತಿಕ್ಕಲುತನ
ಒಂದು ಸೈನ್ಯಕ್ಕೆ ಹಂಚಿ ಮಿಕ್ಕುವಷ್ಟಿರುತ್ತದೆ.

ಕೊಲೆಯ ವಿರುದ್ಧ ಉಪದೇಶಿಸುವವರೇ
ಕೊಲ್ಲುವಲ್ಲಿ ಅತ್ಯಂತ ಪರಿಣತರು
ಪ್ರೀತಿಯ ಬಗ್ಗೆ ಪಾಠಮಾಡುವವರೇ
ದ್ವೇಷಿಸುವುದರಲ್ಲಿ ಅತ್ಯಂತ ನಿಪುಣರು.
ಶಾಂತಿ ಮಂತ್ರ ಜಪಿಸುವವರೇ
ಅತಿ ಯುದ್ಧ ನಿಷ್ಣಾತರು.

ದೇವರ ಬಗ್ಗೆ ಬೋಧಿಸುವವರಿಗೇ ದೇವರ ಅಗತ್ಯವಿದೆ.
ಶಾಂತಿಯ ಬಗ್ಗೆ ಉಪದೇಶಿಸುವವರ ಬಳಿ ಶಾಂತಿಯೇ ಇರುವುದಿಲ್ಲ.
ಶಾಂತಿಯ ಪ್ರಚಾರಕರ ಬಳಿ ಪ್ರೀತಿಯೂ ಇರುವುದಿಲ್ಲ.

ಬೋಧಕರ ಬಗ್ಗೆ ಎಚ್ಚರವಿರಲಿ
ಜ್ಞಾನಿಗಳ ಬಗ್ಗೆ ಎಚ್ಚರವಿರಲಿ
ಸದಾ ಪುಸ್ತಕಗಳನ್ನು ಓದುತ್ತಿರುವವರ ಬಗ್ಗೆ ಎಚ್ಚರವಾಗಿರಿ.
ಬಡತನವನ್ನು ದ್ವೇಷಿಸುವವರ ಬಗ್ಗೆಯೂ ಅಥವಾ
ತಮ್ಮ ಬಡತನದ ಬಗ್ಗೆ ಹೆಮ್ಮೆಪಡುವವರ ಬಗ್ಗೆಯೂ.
ಬೇಗನೆ ಹೊಗಳಲು ಮುಂದಾಗುವವರ ಬಗ್ಗೆ ಎಚ್ಚರವಾಗಿರಿ,
ಏಕೆಂದರೆ ಪ್ರತಿಯಾಗಿ ಅವರಿಗೂ ಹೊಗಳಿಕೆಯ ಅಗತ್ಯವಿರುತ್ತದೆ.
ಬೇಗನೆ ಸೆನ್ಸಾರ್ ಮಾಡಲು ಮುಂದಾಗುವವರ ಬಗ್ಗೆ ಎಚ್ಚರವಾಗಿರಿ,
ಅವರಿಗೆ ತಾವು ತಿಳಿಯದಿರುವುದರ ಬಗ್ಗೆ ಭಯವಿರುತ್ತದೆ.
ಸದಾ ಜನರ ಗುಂಪಿನಲ್ಲಿರಲು ಬಯಸುವವರ ಬಗ್ಗೆ ಎಚ್ಚರವಾಗಿರಿ,
ಏಕೆಂದರೆ ಒಂಟಿಯಾಗಿದ್ದಾಗ ಅವರು ಏನೂ ಅಲ್ಲ.
ಸಾಧಾರಣ ಪುರುಷನ ಬಗ್ಗೆ, ಸಾಧಾರಣ ಮಹಿಳೆಯ ಬಗ್ಗೆ ಎಚ್ಚರವಾಗಿರಿ.
ಅವರ ಪ್ರೀತಿಯ ಬಗ್ಗೆ ಎಚ್ಚರವಾಗಿರಿ; ಅವರ ಪ್ರೀತಿಯೂ ಸಾಧಾರಣವೇ.
ಅದು ಸಾಧಾರಣವನ್ನೇ ಬಯಸುತ್ತದೆ.

ಆದರೆ ಅವರ ದ್ವೇಷದಲ್ಲಿ ಮಹಾನ್ ಪ್ರತಿಭೆಯಿದೆ.
ಅದು ನಿಮ್ಮನ್ನು ಕೊಲ್ಲಲು ಸಾಕು,
ಯಾರನ್ನಾದರೂ ಕೊಲ್ಲಲು ಸಾಕು.
ಏಕಾಂತವನ್ನು ಬಯಸದೆ,
ಒಂಟಿತನವನ್ನು ಅರ್ಥಮಾಡಿಕೊಳ್ಳದೆ,
ತಮಗಿಂತ ಭಿನ್ನವಾಗಿರುವ ಎಲ್ಲವನ್ನೂ
ನಾಶಮಾಡಲು ಅವರು ಪ್ರಯತ್ನಿಸುತ್ತಾರೆ.
ಕಲೆಯನ್ನು ಸೃಷ್ಟಿಸಲು ಅವರಿಗೆ ಸಾಧ್ಯವಿಲ್ಲ;
ಆದ್ದರಿಂದ ಕಲೆ ಅವರಿಗೆ ಅರ್ಥವಾಗುವುದಿಲ್ಲ.
ತಮ್ಮ ಸೃಜನಶೀಲತೆಯ ವಿಫಲತೆಯನ್ನು ಅವರು
ಜಗತ್ತಿನ ವೈಫಲ್ಯವೆಂದೇ ಭಾವಿಸುತ್ತಾರೆ.
ಪೂರ್ಣವಾಗಿ ಪ್ರೀತಿಸಲು ಅವರಿಗೆ ಸಾಧ್ಯವಾಗುವುದಿಲ್ಲ;
ಆದ್ದರಿಂದ ನಿಮ್ಮ ಪ್ರೀತಿ ಅಪೂರ್ಣವೆಂದು ನಂಬುತ್ತಾರೆ.
ಆಗವರು ನಿಮ್ಮನ್ನು ದ್ವೇಷಿಸುತ್ತಾರೆ.
ಅವರ ದ್ವೇಷ ಪರಿಪೂರ್ಣವಾಗಿರುತ್ತದೆ

ಹೊಳೆಯುವ ವಜ್ರದಂತೆ,
ಚೂರಿಯಂತೆ,
ಪರ್ವತದಂತೆ,
ಹುಲಿಯಂತೆ,
ಕಡುವಿಷದಂತೆ,

ಅದವರ ಅತ್ಯುತ್ತಮ ಕಲಾಪ್ರತಿಭೆ.

‍ಲೇಖಕರು Admin

7 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading