–ಕೆ.ಎನ್. ಲಾವಣ್ಯ ಪ್ರಭಾ
ಈ ಸಾರಿ ಮಳೆಗಾಲದಲ್ಲೂ
ಮಳೆಗೆ ಬರ ಎಂದು
ತೊಳಲಾಡುವವರ
ಆತಂಕ ಕೊಂಚ ತಣಿಸಿದಂತೆ
ಕಳೆದ ಸಂಜೆ
ಅದೆಂಥಾ ಮಳೆ!
ಭೂಮಿ ಆಕಾಶದ ಪ್ರೀತಿ
ಬತ್ತಿ ಹೋಯಿತೇನೋ
ಎನ್ನುವ ಅಳುಕು ತಾತ್ಕಾಲಿಕ
ಎನ್ನುವಂತೆ.
ಮನಸ್ಸುಗಳ ನಡುವೆ
ಎದ್ದ ಸೇತುವೆಯಡಿ ಹರಿವ
ನೀರಿನ ಹರಿವು ತಳ ಮುಟ್ಟಿ
ಮತ್ತೆ ಮತ್ತೆ ಕೆನೆಗಟ್ಟಿದ
ಕಾರ್ಮೋಡ ಗುಡುಗಿ
ತಣ್ಣಗಾಗುವಾಗೆಲ್ಲಾ
ಯಾವ ಬೆಳಕು ಮಿಂಚೀತು?…
ನಿರಾಸೆಯ ನೋಟ
ನೆಲ ಮುಟ್ಟಿ ಮೌನ.
ಎರಡೂ ತೀರದಲ್ಲಿ ಕೂತ
ಇಬ್ಬರ ಕಣ್ಣಂಚೂ ಹನಿಯಾಗಿ
ಆವಿಯಾದದ್ದು ಪರಸ್ಪರ
ಅರಿವಾಗದೇ ಹೋದ ಸುದ್ದಿ
ತಿಳಿದ ಬೀಸುಗಾಳಿ
ಕಂಗಾಲಾಗಿ ಓಡಿಬಂದ
ಸ್ನೇಹದ ಪರಿ
ಲೋಕದೊಳಗೆ ಅಪರೂಪವೇ
ಸರಿ
ಇರಬೇಕು ಹೀಗೊಬ್ಬ ಸ್ನೇಹಿತ
ನೋಡಿ….
ಒಡೆದ ಮನಸ್ಸುಗಳನ್ನು
ತೇಪೆ ಹಾಕಿ ಮತ್ತೆ ಮತ್ತೆ
ಒಂದಾಗಿಸುವವನೊಬ್ಬ.
ಅತ್ತಿತ್ತ
ಚದುರಿ ಚೂರುಪಾರಾಗಿದ್ದ
ಮೋಡಗಳನ್ನೆಲ್ಲಾ ಹೆಕ್ಕಿ ತಂದು
ಸೂರ್ಯ ಮುಳುಗುವಾಗ
ಕಳೆದುಕೊಂಡ ಬಣ್ಣವನ್ನೇ
ಮೋಡದ ಮುಖಗಳಿಗೆ ಹಚ್ಚಿ
ಗುದ್ದಿ ಗುಡುಗಿಸಿದ ಗಾಳಿ
ನಕ್ಕು ಮೆಲ್ಲಗೆ ನೇಪಥ್ಯಕ್ಕೆ
ಸರಿವಾಗ
ಕಪ್ಪು ಆಕಾಶದೊಳಗೊಂದು
ಬೆಳ್ಳಿ ಮಿಂಚು.
ಬರಡಾದ ಎದೆಯಲ್ಲಿ
ಹನಿಮಳೆಯ ತುಂತುರು…
ನೆಲದಾಳದ ವಿಷಾದ
ಆಕಾಶದನುಮಾನ ಆತಂಕ
ಉಜ್ಜಿ ಉಜ್ಜಿ ತೊಳೆವ
ಎಡಬಿಡದ ಯತ್ನ
ನೀರತಂಪಿಗೆ ಹಸನಾಗಿ ತೋಯ್ದ
ನೆಲದಲ್ಲಿ
ಹುಗಿದ ನೆನಪುಗಳ ಪೈರು
ಮತ್ತೆ ಚಿಗುರಲಿ ಎಂಬ
ಸದಾಶಯ ಸ್ವಪ್ನ
ನೆಲ ಬಾನಿನ ನಡುವೆ
ಮೊಗೆಮೊಗೆದು ತುಂಬಿ
ಸುರಿವ ಮಳೆಯ ಕಾರುಣ್ಯ
ಮತ್ತಷ್ಟು ಮಗದಷ್ಟು
ದೃಢವಾಗುವಷ್ಟೂ ಸಮಯ
ಹಿಡಿದೀತು ಪ್ರೀತಿ ದೃಢ ನಿಲ್ಲಲು
ಆಗಷ್ಟೇ ಜೀವಕೊಳಲಲ್ಲಿ
ಚಿಗುರು, ಗಿಡ, ಮರ, ಹೆಮ್ಮರದ
ಸಾಲು ಸಾಲು ದನಿಗೊರಳು
ಮರಸಾಲುಗಳಡಿ ಕೂತ
ನೆತ್ತಿಗೆ ತಂಪು ನೆರಳು
ಮರದ ತುರುಬಿನಲ್ಲಿ
ತೂಗಾಡುವ ಹಕ್ಕಿಗೂಡು
ಹೂಗೊಂಚಲು.
ಸುಳಿಸುಳಿವ ತಂಗಾಳಿಯ
ಸ್ನೇಹದೊಡಲೀಗ
ನೆಮ್ಮದಿಯ ಕಡಲು.






0 Comments