ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.
ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.
ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – 19
ಕೃತಿ – ಚಂದ್ರ ಶಿಕಾರಿ
ಲೇಖಕರು – ಮಹಿಪಾಲರೆಡ್ಡಿ ಮುನ್ನೂರ್
ಶ್ರೀ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರ ಜೀವನಗಾಥೆಯು ಕುತೂಹಲಕರ ಮತ್ತು ರೋಚಕವಾಗಿದೆ.ಇದು ಕೇವಲ ಒಬ್ಬ ಜಮೀನ್ದಾರನ ಬದುಕಿನ ಘಟನಾವಳಿಗಳು ಮಾತ್ರವಲ್ಲ. ನಿಜಾಮರ ಕಾಲದ ರೀತಿ ರಿವಾಜು,ದತ್ತು ಪ್ರಕ್ರಿಯೆ, ಶಿಕ್ಷಣ ಪದ್ದತಿ,ಸಾರಿಗೆ ಸಂಪರ್ಕ ಜೊತೆಗೆ ಮದನಾ ಅವರ ಬೇಟೆ ಆಡುವ ಖಯಾಲಿ,ರಾಜಕೀಯ ಮೇಲಾಟ ಎಲ್ಲವನ್ನೂ ಹೇಳುತ್ತ ಓದುಗನನ್ನು ಒಂದು ಶತಮಾನದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ ಈ ಕೃತಿ.
ಮದನಾ ದೊರೆ ಎಂದೆ ಖ್ಯಾತಿಯನ್ನು ಪಡೆದ ಚಂದ್ರಶೇಖರರೆಡ್ಡಿ ದೇಶಮುಖ ಅವರ ಬಾಲ್ಯ ಇಂತಿದೆ.ತೆಲ್ಕೂರ ದಿಂದ ಮದನಾಗೆ ದತ್ತು ಪುತ್ರನಾಗಿ ಬಂದದ್ದು, ೪೭೦೦ ಎಕರೆ ಜಮೀನಿಗೆ ವಾರಸುದಾರ ಆಗಿದ್ದು,ಶಿಕ್ಷಣ ಪಡೆಯಲು ಹೈದರಾಬಾದ್ ಗೆ ಹೋಗಿ ,ಅರ್ಧಕ್ಕೆ ಓದು ಮೊಟಕುಗೊಳಿಸಿ ಬಂದದ್ದು, ಶಿಕಾರಿಯ ಹುಚ್ಚು ಹಚ್ಚಿಸಿಕೊಂಡದ್ದು ಹೀಗೆ ಎಳೆ ಎಳೆಯಾಗಿ ಅವರ ಕತೆ ಬಿಡಿಸಿಡುತ್ತಾರೆ ಲೇಖಕರು.ಅದರಲ್ಲೂ ಮೊದಲ ಬಾರಿಗೆ ಬಂದೂಕು ಹಿಡಿದದ್ದು,ಶಿಕಾರಿಗೆ ಗುರಿ ಇಟ್ಟಿದ್ದು ,ಹುಲಿಬೇಟೆಯ ಸಂಧರ್ಬವನ್ನು ಉಸಿರು ಬಿಗಿಹಿಡಿದುಕೊಂಡೆ ಓದಿಸಿಕೊಂಡು ಹೋಗುತ್ತದೆ. ಪರಶುರಾಮ ರೆಡ್ಡಿ ಮದನಾ ಅವರ ಬೇಟೆಯ ಗುರು. ಅವರೊಂದಿಗೆ ೩೦ ಹುಲಿ ಬೇಟೆಯಾಡಿದ್ದಾಗಿ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಕಾಡು ಹಂದಿ ಹೊಡೆದದ್ದು ಅವರಿಗೆ ಲೆಕ್ಕವಿಲ್ಲ.ರೈತರಿಗೆ ಉಪಟಳ ಕೊಡುವ ಪ್ರಾಣಿಗಳನ್ನು ಬೇಟೆಯಾಡಿ ರೈತ ಸ್ನೇಹಿಯಾಗಿದ್ದರು.
ಮುದ್ಗಲ್ ನಲ್ಲಿ ನರಭಕ್ಷಕ ಪ್ರಾಣಿ ಉಪಟಳಕೊಡುವುದನ್ನು ವಿಧಾನಸಭೆಯಲ್ಲಿ ಚರ್ಚೆ ಯಾದಾಗ ಮದನಾ ಅವರೆ ಅಖಾಡಕ್ಕೆ ಇಳಿದು ಬೇಟೆ ಆಡಿದ್ದು ರೋಚಕ ಸಂಗತಿ.
ಸಂಸ್ಥಾನದ ಒಡೆಯರಾದ ಮದನಾ ಅವರ ವೈಯಕ್ತಿಕ ಜೀವನ ನೋವಿನದು.ಒಬ್ಬಳೆ ಮಗಳನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡದ್ದು ಖೇದಕರ.೧೭ ಹಳ್ಳಿಗೆ ಒಡೆಯರಾದ ಇವರು ಏನೆಲ್ಲಾ ಏರಿಳಿತಗಳು ಜೀವನದಲ್ಲಿ ಕಂಡಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಎರಡು ಬಾರಿ ಶಾಸಕರಾಗಿ, ವಿಧಾನಸಭೆಯ ಸಭಾಪತಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ ಕಲ್ಯಾಣ ಕರ್ನಾಟಕದ ನೇತಾರ ಎನ್ನಿಸಿಕೊಂಡವರು.
ಏನೆಲ್ಲಾ ರಾಜಕೀಯ ಬದಲಾವಣೆ ಉಂಟಾದರು ಮದನಾ ಅವರು ಮಾತ್ರ ತತ್ವಬದ್ದ ರಾಜಕೀಯ ಮುತ್ಸದ್ದಿ.ಅಜಾತ ಶತ್ರುವಿನಂತೆ ಬಾಳಿದ್ದಾರೆ.ನಿಜಾಮರ ಜೊತೆಯಿಂದ ಜನಸಾಮಾನ್ಯರ ವರೆಗೆ ಒಂದೇ ಸ್ನೇಹ ವಿಶ್ವಾಸ.ಬಡವರಿಗೆ ಮಿಡಿಯುವ ಜೀವ ಹಾಗಾಗಿ ಸಾವಿರಾರು ಎಕರೆ ಜಮೀನನ್ನು ದಾನವಾಗಿ ನೀಡಿದ್ದಲ್ಲದೆ.ಶಾಲೆ,ಆಸ್ಪತ್ರೆ ಕಟ್ಟಡಕ್ಕಾಗಿ ಕೂಡ ಕೊಟ್ಟಿದ್ದಾರೆ.
ಅವರಿಗೆ ೪೭೦೦ ಎಕರೆಯಷ್ಟು ಜಮೀನು ಸಿಕ್ಕಿದ್ದು, ೧೭ ಊರಿನ ಒಡೆಯರಾಗಿದ್ದು ಎಲ್ಲವು ಸೋಜಿಗ ಸಂಗತಿ.ಅವರೆ ಹೇಳುವಂತೆ ಮೂರು ತಲೆಮಾರು ಹಿಂದೆ ನಿಜಾಮ ಅರಸು ಲೋಕ ಸಂಚಾರಕ್ಕೆ ಹೊರಟಾಗ ,ದಾರಿತಪ್ಪಿಸಿಕೊಂಡು ಅತಿಯಾದ ದಾಹವಾದಾಗ ಎಲ್ಲೂ ನೀರು ಸಿಕ್ಕದೆ ಒದ್ದಾಡುತ್ತಿದ್ದಾಗ, ಸಾಮಾನ್ಯ ಇಬ್ಬರು ಮಹಿಳೆಯರು ಅಂಬಲಿ ನೀಡಿದರಂತೆ ಅದಕ್ಕಾಗಿ ನಿಜಾಮ ದೊರೆ ಕೊಟ್ಟ ಇನಾಮು ೨೩ ಹಳ್ಳಿಯನ್ನು. ಅದರಲ್ಲಿ ಮದನಾ ಗ್ರಾಮದವರಿಗೆ ೧೭ ಹಳ್ಳಿ ಎಂದರೆ ೪೭೦೦ ಎಕರೆ ಜಮೀನು ಇನಾಮಾಗಿ ಸಿಕ್ಕಿದ್ದು ಎನ್ನುವರು. ಏನೆಲ್ಲಾ ಅರಸೊತ್ತಿಗೆ ಇದ್ದರು ಕೂಡ ಬಡವರ ಸಂಕಷ್ಟಕ್ಕೆ ಮರಗುವ ಅವರು ಅನೇಕರ ಸಾಲ ಮನ್ನಾ ಮಾಡಿ ಹೃದಯ ವೈಶಾಲ್ಯ ತೋರಿದವರು.ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಭಾವ ಅವರದ್ದು. ರಾಜಕೀಯ ಕ್ಷೇತ್ರದಲ್ಲಿ ಕೂಡ ಪಕ್ಷಾತೀತವಾಗಿ ಸ್ನೇಹ ಸಂಪಾದಿಸಿದವರು. ಚಂದ್ರಶೇಖರ ರೆಡ್ಡಿ ಅವರ ಬದುಕು ಒಂದು ರೀತಿಯಲ್ಲಿ ಥ್ರಿಲ್ಲಿಂಗ್ ಎನ್ನಬಹುದು. ದೊಡ್ಡ ಸಂಸ್ಥಾನಕ್ಕೆ ದೊರೆಯಾಗಿ ಬಂದದ್ದು,ಜಿಮ್ ಕಾರ್ಬೆಟ್ ತರಹ ಚತುರ ಶಿಕಾರಿಯಾದದ್ದು, ರಾಜಕೀಯ ಮುತ್ಸದ್ದಿಯಾಗಿ ,ಬಡವರ ಬಂಧುವಾಗಿ ಜೊತೆಗೆ ಕ್ಲಾಸಿಕ್ ಹವ್ಯಾಸ ಹೊಂದಿರುವ ಮಲ್ಟಿಟ್ಯಾಲೆಂಟಡ್, ಮಲ್ಟಿಡೈಮನಷನ್ ಹೊಂದಿರುವ ೯೪ ರ ಹರೆಯದ ಅಪರೂಪದ ವ್ಯಕ್ತಿ ಒಟ್ಟು ಅವರ ಬದುಕಿನ ಪ್ರಮುಖ ಘಟನಾವಳಿಗಳನ್ನು ಮಹಿಪಾಲರೆಡ್ಡಿ ಅವರು ತಮ್ಮದೇ ಧಾಟಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಲೇಖಕರು ಉತ್ತಮ ವಾಗ್ಮಿಗಳು, ಅವರ ಮಾತಿನಲ್ಲಿ ಗತ್ತು,ಗೈರತ್ತು ಇದ್ದಹಾಗೆ ಬರವಣಿಗೆಯಲ್ಲಿ ಕೂಡ ಗಟ್ಟಿತನವಿದೆ. ಭಾಷೆಯನ್ನು ಹದವಾಗಿ ಬಳಸಿ,ಅದನ್ನು ಸರಿಯಾಗಿ ದುಡಿಸಿಕೊಂಡು,ಆಕರ್ಷಕ ಶೀರ್ಷಿಕೆ ಕೊಟ್ಟು ಓದುಗರನ್ನು ಸೆಳೆಯುತ್ತಾರೆ. ಚಿಕ್ಕದಾದ ಈ ಹೊತ್ತಿಗೆ ಹಲವು ಅಪರೂಪದ ಪೋಟೋ ದಿಂದ ಗಮನಸೆಳೆಯುತ್ತದೆ. ಆದರೆ ಕೆಲವು ಪೋಟೋಗಳ ಅಡಿಯಲ್ಲಿ ಹೆಸರು ನಮೂದಿಸಿಲ್ಲ,ನೀಡಿದರೆ ಇನ್ನಷ್ಟು ಮಾಹಿತಿ ತಿಳಿಯುತ್ತಿತ್ತು. ಅಲ್ಲಲ್ಲಿ ವಾಕ್ಯಗಳ ಪುನರಾವರ್ತನೆ ಆಗಿದೆ.ಜೊತೆಗೆ ಇಂದಿನ ರಾಜಕೀಯ, ಶಿಕ್ಷಣ,ಸಮಕಾಲೀನ ಸಾಮಾಜಿಕ ಸ್ಥಿತಿಗಳ ಕುರಿತು ಮದನಾ ಅವರ ಅಭಿಪ್ರಾಯ ಸಂಗ್ರಹಿಸಿದ್ದರೆ ಸಮಂಜಸ ವಾಗುತ್ತಿತ್ತು. ಶತಮಾನ ಕಂಡ ವ್ಯಕ್ತಿಯ ದೃಷ್ಟಿಯಲ್ಲಿ ಅಂದು ಇಂದಿನ ಸ್ಥಿತ್ಯಂತರ ಅನಾವರಣಗೊಳ್ಳುತ್ತಿತ್ತು. ಒಟ್ಟಾರೆ ಚಂದ್ರಶಿಕಾರಿ ಸಂಗ್ರಹ ಯೋಗ್ಯ ಕೃತಿ ಆಗಿದ್ದು,ನಮ್ಮ ನೆಲದ ಧಿಮಂತ ವ್ಯಕ್ತಿಯಾದ ಶ್ರೀ ಚಂದ್ರಶೇಖರ ರೆಡ್ಡಿ ದೇಶಮುಖ ಮದನಾ ಅವರ ಶತಮಾನದ ಜೀವನ ಗಾಥೆ ಇದಾಗಿದೆ. ನಿಜಾಮನ ಕಾಲದ ಸಾಂಸ್ಕೃತಿಕ ಚಿತ್ರಣವನ್ನು ನೀಡುವ ಈ ಕೃತಿ ಅಪರೂಪದ್ದು. ಮುಖಪುಟ ವಿನ್ಯಾಸ, ಆಕರ್ಷಕ ಶೀರ್ಷಿಕೆ, ಕಪ್ಪು ಬಿಳುಪಿನ ಚಿತ್ರಪಟಗಳು ಎಲ್ಲವೂ ನಮ್ಮ ಮನಸೂರೆಗೊಳ್ಳುತ್ತವೆ. ಹಾಗಾಗಿ ಈ ಕೃತಿಗೆ ಬಸವ ಪುರಸ್ಕಾರ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ.






0 Comments