-ಡಾ. ನಾರಾಯಣ್ ಕ್ಯಾಸಂಬಳ್ಳಿ
ಕೋಶಿಸ್ ಕೆಫೆ
ಊರ ಕೇರಿಯ ಅಂಚಲಿ ವಾಸಿಸುವ ನನಗೆ,
ಬೊಗಸೆ ನೀರಿಗೂ ಜಾತಿಯ ಬೇಲಿ ಇದೆ.
ಊರ ಗುಡಿಯ ಕಲ್ಲು, ಅರಳಿ ಕಟ್ಟೆಯ ನೆರಳು ಕೂಡ
ನನ್ನ ತಾಗಲು ಹೆದರುತ್ತದೆ !
ಹೀಗಿರುವಾಗ…
ಈ ಸ್ವಚ್ಛಂದ ಸೇಂಟ್ ಮಾರ್ಕ್ಸ್ ರಸ್ತೆಯ
ಕೋಶಿಸ್ ಕೆಫೆ ಸ್ವಾಗತಿಸುವ ಪರಿ
ಸದಾ ನನ್ನಲ್ಲಿ ಅಚ್ಚರಿಯನು ಮೂಡಿಸುತ್ತದೆ.
ಇಲ್ಲಿಯ ಗೋಡೆಗಳಲಿ ನೇತುಹಾಕಿರುವ
ಬೆಂಗಳೂರಿನ ಬ್ರಿಟೀಷ್ ಕಂಟೋನ್ಮೆಂಟ್ ನ
ಹಳೆಯ ಕಪ್ಪು- ಬಿಳುಪಿನ ಚಿತ್ರಗಳಲಿ
ಚರಿತ್ರೆ ನೆನಪುಗಳು ಅಡಗಿವೆ.
ಹೆಸರು ಕೇಳಿ ದೂರ ನಿಲ್ಲಿಸುವ,
ಮುಟ್ಟಿದರೆ ಮೈಲಿಗೆ ಎನ್ನುವ ಜಗತ್ತಿನಲಿ,
ಕೋಶಿಸ್ ಎಂಬ ಹೂದೋಟ
ಯಾರನ್ನೂ ದೂರಸರಿಸುವುದಿಲ್ಲ!
ಇಲ್ಲಿ ನೆಹರೂ ಕುಳಿತು ಕಾಫಿ ಸವಿದಿದ್ದರಂತೆ,
ಅಷ್ಟೇ ಯಾಕೆ ಲಂಕೇಶರಿಗೂ ಈ ಜಾಗವೆಂದರೆ ಬಲು ಇಷ್ಟ.
ಕವಿ, ಕಲಾವಿದ,ಚಿಂತಕರು
ಕಲೆ ಸಾಹಿತ್ಯದ ಕುರಿತು ಮಾತನಾಡಲೆಂದೇ ಇಲ್ಲಿ ಸೇರುತ್ತಾರೆ
ಜಗತ್ತಿನ ಜನಕ್ರಾಂತಿಯ ಕುರಿತು
ನಡೆದು ಹೋದ ಚರ್ಚೆಗಳು ಅವೆಷ್ಟೋ!
ಕೋಶಿಶ್ ನ ಪ್ರತಿ ಮೇಜಿನಮೇಲು ಬಟರ್ ಕರಗುತ್ತದೆ
ನೊರೆ ಆವಿಯಾಗುತ್ತದೆ.
ಇಲ್ಲಿನ ಬ್ರೆಡ್ ಟೋಸ್ಟ್‌ಗಳಿಗೆ, ಬಿಯರ್ ಮಗ್ ಗಳಿಗೆ
ತಾರತಮ್ಯದ ಗೋಡೆಗಳನ್ನೇ ಕರಗಿಸುವ ಶಕ್ತಿಯಿದೆ
ಇಲ್ಲಿ ಅಸ್ಪೃಶ್ಯತೆಯ ಬೇಲಿಗಳಿಗೆ ಜಾಗವಿಲ್ಲ
ಕುಲ-ಗೋತ್ರಗಳೆಂಬ ತಾರತಮ್ಯದ ಹೊಗೆಯಿಲ್ಲ
ಹಳೆಯ ಮರದ ಕುರ್ಚಿಗಳು
ಬಂದವರನೆಲ್ಲಾ ಪ್ರೀತಿಯಿಂದ ಬರಮಾಡಿಕೊಳ್ಳುತ್ತವೆ.
ಒಂದೇ ತರಹದ ಕಪ್, ಒಂದೇ ತರಹದ ಗೌರವ!
ಹಬೆಯಾಡುವ ಕಾಫಿಯೊಳಗೂ ಬೆರೆತಿದೆ ಸಮತೆಯ ಘಮಲು.
ಎಲ್ಲೆಲ್ಲೂ ಅನ್ಯಾಯ, ಅಸಮಾನತೆಗಳೇ ತುಂಬಿರುವ
ಈ ನರಕದೊಳು, ಸ್ವಲ್ಪ ಹೊತ್ತಾದರೂ
ಸಮಾನತೆಯ ಉಸಿರಾಡಲು ಜಾಗ ನೀಡುವ ನಿನಗೆ
ನಾನು ಹೇಗೆ ತಾನೇ ಕೃತಜ್ಞತೆ ತಿಳಿಸಲಿ?
ಡಿಯರ್ ಕೋಶಿಸ್…
ನಿನಗೊಂದು ಪ್ರೀತಿಯ ಸಲಾಂ!






0 Comments