-ಸಂಕೇತ್ ಗುರುದತ್
ಸೃಜನಶೀಲ ಮೂವರು ಕಲಾವಿದೆಯರಾದ ಅಂಜಲಿ ಹರ್ಲಾಲ್ಕಾ, ಭಾರತಿ ದರ್ಶನ್ ಮತ್ತು ಫರ್ಹಾನಾ ಖಾನ್ ಅವರ ಕಲಾಕೃತಿಗಳು “ಕಹಾನಿ-ಸ್ಟೋರೀಸ್ ಇನ್ ಕಲರ್ಸ್” ಎಂಬ ಶೀರ್ಷಿಕೆಯಲ್ಲಿ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದಾರೆ.
ಇದೇ ಅಕ್ಟೋಬರ್ 3 ರಂದು ನಾಡಿನ ಹಿರಿಯ ಕಲಾವಿದರಾದ ಬಾಬು ಜತ್ತಕರ್ ಅವರು ಈ ಅಪರೂಪದ ವರ್ಣಮಯ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. ತಂತ್ರದೊಂದಿಗೆ ಏಕಾಗ್ರತೆಗೆ ಸಂಬಂಧಿಸಿದ ಕೃತಿಗಳಿಂದ ಹಿಡಿದು ಹಲವು ಆಕಾರಗಳ, ಹಲವು ಶೈಲಿಯ, ಪ್ರೌಢ ಕುಸುರಿಕಲೆಯ, ಯಥಾವತ್ತಾದ ನಿಸರ್ಗಚಿತ್ರಗಳ, ಕಾಲ್ಪನಿಕ ಲೋಕದೊಳಗೆ ಒಯ್ಯುವ ಕಲಾಕೃತಿಗಳನ್ನು ಮೆಚ್ಚಿದ್ದೇ ಅಲ್ಲದೇ ವಿಮರ್ಶಿಸಿ ಸಲಹೆ-ಸೂಚನೆಗಳನ್ನೂ ಕೊಟ್ಟಿದ್ದಾರೆ. ಅಲ್ಲದೇ ಕೆಲವು ಶೈಲಿಯ ಚಿತ್ರಗಳನ್ನು ಸರಣಿಯಲ್ಲಿ ಮಾಡಬಹುದೆಂಬ ಮಾರ್ಗದರ್ಶನಗಳನ್ನು ಕೇಳುವ ಹಾಗೂ ಅನುಸರಿಸುವ ಮನಸ್ಥಿತಿ ಈ ಮೂವರೂ ಕಲಾವಿದೆಯರಲ್ಲೂ ನೆಲೆಗೊಂಡಿದೆ. ಕಳೆದ ಒಂದು ದಶಕದಲ್ಲಿ ಕಲೆಯ ಮೂಲಕ ಬೆಳೆದ ಸ್ನೇಹವು ಈ ಪ್ರದರ್ಶನದ ಮೂಲಕ ಮತ್ತಷ್ಟು ಗಟ್ಟಿಯಾಗಿದೆ.
ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ರಿಜ್ವಾನ್ ಅರ್ಷದ್ ಅವರು ಈ ಕಲಾಪ್ರದರ್ಶನಕ್ಜೆ ಭೇಟಿ ಕೊಟ್ಟು ಕಲಾಕೃತಿಗಳನ್ನು ವೀಕ್ಷಿಸಿದರು. ನಂತರ ಅಂಜಲಿ ಅವರ ಕಲಾಕೃತಿಯನ್ನು ಕೊಂಡು ಪ್ರೋತ್ಸಾಹಿಸಿದರು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಟೆಕ್ಸಟೈಲ್ ವಿನ್ಯಾಸದಲ್ಲಿ ಪದವೀಧರೆಯಾಗಿರುವ ಅಂಜಲಿ ಹರ್ಲಾಲ್ಕಾ ಬೆಂಗಳೂರಲ್ಲೇ ನೆಲೆಸಿದ್ದಾರೆ. ಪ್ರಕೃತಿ ಮತ್ತು ವನ್ಯಜೀವಿಗಳಿಂದ ಪ್ರೇರಿತರಾಗಿ ಅಕ್ರಿಲಿಕ್ ಮತ್ತು ತೈಲವರ್ಣದಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ವಾಸ್ತವಿಕತೆಯನ್ನು ಅಭಿವ್ಯಕ್ತಿಶೀಲ ವಿನ್ಯಾಸಗಳೊಂದಿಗೆ ಸಂಯೋಜಿಸುತ್ತಾರೆ. ನಿರಂತರವಾಗಿ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸುವುದಲ್ಲದೇ ಹಲವೆಡೆ ಕಲಾ ಪ್ರದರ್ಶನಗಳಲ್ಲಿ ತೊಡಗಿರುತ್ತಾರೆ. ಅಷ್ಟಲ್ಲದೇ ಕಲೆಯನ್ನು ಕಲಿಸುವ ಮತ್ತು ಕಾರ್ಯಾಗಾರಗಳನ್ನು ನಡೆಸುವ ಉತ್ಸಾಹವೂ ಇವರಲ್ಲಿದೆ.
ಶಿರಸಿ ಮೂಲದ ಭಾರತಿ ದರ್ಶನ್ ಅವರು ಬೆಂಗಳೂರಿನಲ್ಲೇ ಇದ್ದು ಹಲವಾರು ಕಲಾ ಪ್ರದರ್ಶನಗಳಲ್ಲೂ, ಶಿಬಿರಗಳಲ್ಲೂ ಭಾಗವಹಿಸುತ್ತಾ ಕಲಾಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರ ವರ್ಣಚಿತ್ರಗಳಲ್ಲಿ ಪ್ರಕೃತಿಯ ಸೌಂದರ್ಯವು ಕಳೆಗೊಂಡಿವೆ. ಅಲ್ಲದೇ ದೈವಿಕ ಸಾರವೂ ಸಕಾರಗೊಳಿಸುತ್ತವೆ. ಕರ್ನಾಟಕದ ರಾಜಭವನದಲ್ಲಿ ಭಾರತೀಯ ಸೇನೆಯ ವಿಷಯದ ಆಧಾರಿತ ಕಲಾಕೃತಿಗಳನ್ನು ರಚಿಸಿ ಹಾಗೂ ಪ್ರದರ್ಶಿಸಿದ್ದಾರೆನ್ನುವುದು ಇವರ ಕಲಾ ಪಯಣದ ಮೈಲಿಗಲ್ಲಾಗಿದೆ.

ವಾಣಿಜ್ಯ ಪದವೀಧರೆಯಾದ ಫರ್ಹಾನಾ ಖಾನ್ ಅವರು ಕಲೆಯನ್ನು ರೂಢಿಸಿಕೊಂಡು ನಿರಂತರ ಅಭ್ಯಾಸ, ಪರಿಶೋಧನೆ ಮತ್ತು ಸಮರ್ಪಣೆಯ ಮೂಲಕ ತಮ್ಮ ಕಲಾತ್ಮಕ ಪ್ರಯಾಣದ ಸಕ್ರಿಯರಾಗಿದ್ದಾರೆ. ಇವರ ಕಲಾಕೃತಿಗಳಲ್ಲಿ ಅಂತಃಪ್ರಜ್ಞೆ ಮತ್ತು ವೈಯಕ್ತಿಕ ಅನುಭವಗಳ ಅಭಿವ್ಯಕ್ತವಾಗಿವೆ. ಅಕ್ರಿಲಿಕ್, ತೈಲ ಮತ್ತು ಜಲವರ್ಣಗಳಲ್ಲಿ ಹಲವಾರು ಪ್ರಯೋಗ ಮಾಡಿದ್ದಾರೆ. ಸೃಜನಶೀಲ ಕಲಿಕೆಯ ಮೂಲಕ ವಿಕಸನಗೊಳ್ಳುತ್ತಲೇ ಪ್ರಶಾಂತತೆ, ಸಕಾರಾತ್ಮಕತೆ ಮತ್ತು ಭಾವನಾತ್ಮಕ ಸಂಪರ್ಕವನ್ನು ಅನ್ವೇಷಿಸುವ ಕೃತಿಗಳನ್ನು ರಚಿಸಿದ್ದಾರೆ.
ಈ ಮೂವರು ಕಲಾವಿದೆಯರು ತಮ್ಮ ವಿಭಿನ್ನ ದೃಷ್ಟಿಕೋನಗಳ, ಅನುಭವ, ಅನುಭಾವಗಳ ಕಲಾತ್ಮಕತೆಯನ್ನು ತಮ್ಮ ತಮ್ಮ ಶೈಲಿಯಲ್ಲೇ ಅಭಿವ್ಯಕ್ತಿಸಿದ್ದಾರೆ. ಇದು ಪ್ರದರ್ಶನಕ್ಕಿಂತ ಹೆಚ್ಚಾಗಿ ಸ್ನೇಹ ಹಾಗೂ ಸೃಜನಶೀಲತೆಯ ಆಚರಣೆಯಾಗಿದೆ.
ಈ “ಕಹಾನಿ” ಕಲಾ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗಾಗಿ ಅಕ್ಟೋಬರ್ 7 ರವರೆಗೂ ತೆರೆದಿರುತ್ತದೆ.






0 Comments