-ಪ್ರಕಾಶ್ ಕೊಡಗನೂರ್
೧ ಮೇನಕೆಯ ಪ್ರತಿಷ್ಠಾಪನೆ
ನನ್ನ ಮೇನಕೆಯು
ಮಹಾಘಟಬಂಧನದ
ಸುರಕ್ಷಿತ ಕವಚದಲಿ
ಸುಖದ ಸುಪ್ಪತ್ತಿಗೆಯಲ್ಲಿದ್ದಾಳೆ
ನಾನು ವಿರಹದುರಿಯ
ಮಹಾಜ್ವಾಲೆಗೆ ಸಿಲುಕಿ
ಒಂದೇ ಸಮನೆ
ಪಟಪಟನೆ ಸಿಡಿಯುತ್ತಿದ್ದೇನೆ
ದಶಕವೊಂದು ಉರುಳಿತು
ಅವಳು ದೂರ ಸರಿದು
ಅವಳನ್ನು ಮತ್ತೆ ಸೇರಿಕೊಳ್ಳಬೇಕೆಂದು
ನಡೆಸಿದ ಪ್ರಯತ್ನಗಳೆಲ್ಲ ವಿಫಲ
ಇರಲಿ ಅವಳು ದುಷ್ಟಳೇನಲ್ಲ
ಅವಕಾಶವಾದಿಯಂತೂ
ಅಲ್ಲವೇ ಅಲ್ಲ
ಅವಳ ಕೋಟೆಯಲ್ಲಿ
ಅವಳು ವಿರಾಜಮಾನಳಾಗಿದ್ದಾಳೆ
ಪ್ರೀತಿ ಇದೆಯಾದರೂ
ಇಲ್ಲದ ಉಸಾಬರಿಗೆ ಕೈಹಾಕಿ
ಅಪಾಯಕ್ಕೆ ಆಹ್ವಾನವೇಕೆಂಬುದು
ಅವಳ ನಿಲುವಾಗಿರಬೇಕು
ದಶಕಗಳ ಕಾಲ
ಅವಳೊಂದಿಗೆ ಹಕ್ಕಿಯಂತೆ
ನಲಿದಾಡಿದ ನನಗೆ
ಇಷ್ಟು ಅರ್ಥವಾಗದಿದ್ದರೆ ಹೇಗೆ?
ನಾನಿನ್ನು ಸುಮ್ಮನಿದ್ದುಬಿಡುತ್ತೇನೆ
ಮೌನ ಧ್ಯಾನದ ಮೊರೆಹೋಗುತ್ತೇನೆ
ಕಾವ್ಯೋಪಾಸಕನಾಗುತ್ತೇನೆ
ನನ್ನ ಮೇನಕೆಯನ್ನ
ಇಲ್ಲೇ ಪ್ರತಿಷ್ಠಾಪಿಸಿಕೊಳ್ಳುತ್ತೇನೆ
ಅವಳು ದೂರವಾಗುವ
ಮಾತೇ ಇಲ್ಲ
ನಾನು ಸದಾ ಹಲುಬುವ
ಪ್ರಮೇಯವೇ ಬರುವುದಿಲ್ಲ
೨ ಒಂದಲ್ಲ ಒಂದು ದಿನ
ಭವಬಂಧನದ ನಡುವೆ
ದುರಂತಗಳ ಸರಮಾಲೆ
ಬದುಕು ಮುಗಿಲೆತ್ತರದ ಜ್ವಾಲೆ
ಆಘಾತಗಳ ಲಕ್ವ
ಬಡಿದ ಮೆದುಳು
ನೋವುಗಳ ಪ್ರವಾಹ
ಹೊತ್ತ ಹೃದಯ
ಅಂಗಾತ ಬಿದ್ದ
ಜಿರಲೆಯಂತೆ ಒದ್ದಾಡಲು
ನಾನೆಂಬ ನಾನು
ಖಾಲಿ ಒಳಗೆ
ಬಾಹುಬಲಿ ಹೊರಗೆ
ಸಾಲದೆಂಬಂತೆ ಎದುರಾಗಿರುವ
ಕಠೋರ ಸಂದರ್ಭಗಳು
ಕಠಿಣಾತಿಕಠಿಣ ಸತ್ಯಗಳು
ಅನಿರೀಕ್ಷಿತ ಹೊಡೆತ
ಒಳಹೊಡೆತಗಳು
ನನ್ನ ಅಂತಿಮಯಾತ್ರೆಯ
ಮುನ್ಸೂಚನೆಯಂತೆ ಭಾಸವಾಗುತ್ತಿದೆ
ಸಾವಿಗೆ ಹೆದರೆನು
ಸೆಣಸಲೂ ಅಳುಕೆನು
ಯಾವುದೂ ಸಾಧ್ಯವಾಗುತ್ತಿಲ್ಲವಲ್ಲ
ಎನ್ನುವ ಕೊರಗಿನ ನಡುವೆಯೇ
ಜೀವ ಉಳಿದಿರುವ ಸಂಗತಿ
ನೆನಪಾಗಿ ತುಸು ಸಮಾಧಾನವಾಯ್ತು
ಹಾಗೆಂದು ಕಾಲ ಕೂಡಿಬರಲಿ
ಎಂದು ಕಾಯುತ್ತ ಕೂರುವ
ಜಾಯಮಾನ ನನ್ನದಲ್ಲ
ಅಂಗಾತ ಬಿದ್ದುಕೊಂಡೇ
ಉಸಿರೆಳೆದುಕೊಳ್ಳುತ್ತೇನೆ
ಮತ್ತೆ ಉಸಿರು ಬಿಡುತ್ತೇನೆ
ಮತ್ತೆ ರಭಸವಾಗಿ
ಗಿರಗಟ್ಟೆಯಂತೆ ತಿರುಗುತ್ತೇನೆ
ಒಂದಲ್ಲ ಒಂದು ದಿನ
ʻತಿರುಗಿ ಬೀಳುತ್ತೇನೆ
ಮೇಲೆದ್ದು ಬಿಡುತ್ತೇನೆʼ
ಎನ್ನುವ ಆಚಲ ವಿಶ್ವಾಸದೊಂದಿಗೆ
೩ ಕೋಡಂಗಿಗಳಿಗೊಂದು ಕಿವಿಮಾತು!!
ಧರ್ಮ
ಅಹಂಕಾರಿ
ಧರ್ಮ
ಕ್ರೂರಿ
ಧರ್ಮ
ವೈರಿ
ಧರ್ಮ
ಕುರುಡು
ಧರ್ಮ
ಬರಡು
ಧರ್ಮ
ದುರ್ಬಲ
ಧರ್ಮ
ವಿಧ್ವಂಸಕ
ಧರ್ಮ
ವ್ಯಸನ
ಮತ್ತೇಕೆ
ಧರ್ಮ
ಧರ್ಮವೆಂದು
ಬಡಿದಾಡುವಿರಿ
ಕೋಡಂಗಿಗಳಾ!
ಮಾನವಧರ್ಮ
ಪಾಲಿಸಿರಿ
ಇದುವೇ ಸಹಜ
ಇದುವೇ ಶ್ರೇಷ್ಠ
ಇದುವೇ ಶಾಶ್ವತ
ಇದುವೇ ಸಮಾಜದ ಮುಕುಟ!!
೪ ಭಾವ ಅತೀತದ ಪ್ರತೀಕ!!
ಭಾವ
ಪ್ರೀತಿಯ ಪ್ರತೀಕ
ಭಾವ
ಭಕ್ತಿಯ ಪ್ರತೀಕ
ಭಾವ
ಕನಸಿನ ಪ್ರತೀಕ
ಭಾವ
ಮನಸಿನ ಪ್ರತೀಕ
ಭಾವ
ಆದರ್ಶದ ಪ್ರತೀಕ
ಭಾವ
ಬಯಕೆಯ ಪ್ರತೀಕ
ಭಾವ
ಜೀವದ ಪ್ರತೀಕ
ಭಾವ
ಕಲೆಯ ಪ್ರತೀಕ
ಭಾವ
ಸಂಗೀತದ ಪ್ರತೀಕ
ಭಾವ
ಮಾತೆಯ ಪ್ರತೀಕ
ಒಟ್ಟಿಗೆ
ಎಲ್ಲವೂ ಬೆರೆತರೆ?
ಭಾವ
ಅತೀತದ ಪ್ರತೀಕ!!
ಅತೀತಕ್ಕೆ
ಪ್ರಶ್ನಿಸಿದವರುಂಟೆ?
ಪ್ರಶ್ನಿಸಿದವರಿಗೆ
ಗೆಲುವುಂಟೆ ಉಳಿವುಂಟೆ?
ಸೂಕ್ಷ್ಮ ಸಂಗತಿಯಿದು
ಇರಬೇಕು ಎಚ್ಚರ
ತಪ್ಪಿದರೆ ಕೋಲಾಹಲ
ಮತ್ತೆ ಹಾಲಾಹಲ!!






0 Comments