ಕಾವ್ಯ ಸಂಕ್ರಾಂತಿ
-ಅಶ್ವಿನಿ ಎಸ್.ಟಿ
ಎಳೆ ಬಿಸಿಲು,ಎಳೆಯದಾಗಿ
ಅರಳಿದ ಹೂ ಮನದ
ಹುಡುಗಿಯ ಮೊಗಕೆ ತಾಕಿದ
ಹೊತ್ತು
ಸರಸರನೆ ಹೆಜ್ಜೆ ಹಾಕುತ್ತಾ
ಹೂ ಪತ್ರೆಗಳ ಖರೀದಿಸಿ
ಆಗಷ್ಟೇ ಮಿಂದು ಬಂದಿದರಿಂದ
ಹನಿ ಹನಿ ತೊಟ್ಟಿಕ್ಕುತ್ತಿರುವ
ನೀಳ ಕೇಶರಾಶಿಯ ಹಿಂದಕ್ಕೊಮ್ಮೆ
ಸರಿಸಿ ಕಣ್ಣು ಹಾಯುವವರೆಗೂ
ನೋಡಿದರೂ ಇಲ್ಲವಲ್ಲಾ
ಮನಸಿಗೊಪ್ಪಿದ ಚೆಲುವ
ನಿಧಾನಿಸಿ ನಿಧಾನಿಸಿ ಹೋಗುವ
ಹಾಗಾದರೆ
ನಿನ್ನೆ ಕಣ್ಣಲ್ಲೇ ಹೇಳಿದ್ದನಲ್ಲ
ಬೆಳಿಗ್ಗೆಯೇ ಬರುವೆನೆಂದು
ಒಂದೆರಡು ಮಾರು ಮುಂದೋಗಿ
ಹಿಂದಿರುಗಿದಾಗ ಸೂರ್ಯ ಪಥ
ಬದಲಿಸಿದ್ದು ಕಾಣಿಸಿತು
ಸಂಕ್ರಾಂತಿ ಅಲ್ಲವೇ……….
ಹುಡುಗನದ್ದೂ ಸೂರ್ಯನದ್ದೂ ಒಂದೇ
ಆಗಿರಬಹುದಲ್ಲವೇ……….
ಢಣಢಣ ಗಂಟೆಯ ಸದ್ದು ಬಿಡದೇ
ಕೇಳಿಬಂತು ದೇವರ ಸನ್ನಿಧಿಯಿಂದ






0 Comments