ಮನಸ್ಸಿನ ಮಾರ್ಕೆಟ್ ನೊಳಗೆ ಹೊಕ್ಕಾಗ..

-ದಾಕ್ಷಾಯಣಿ ಮಸೂತಿ
*
“ಮಂದಿರ,ಮಸೀದಿ, ಚರ್ಚ್ ,ಗುಡಿ-ಗುಂಡಾರ
ಹತ್ತಿ ಸುತ್ತಿ ದೇಹ ತೇದರೂ
ತುತ್ತಿನ ಚೀಲ ತುಂಬಲು
ಹರಿಯಬೇಕು ಬೆವರು”
ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿಗಳ ಆಮಲಿನಲ್ಲಿ ತಮ್ಮ ಬದುಕಿನ ಅಮೂಲ್ಯ ದಿನಗಳನ್ನು ಹಾಳು ಮಾಡಿಕೊಳ್ಳುತ್ತಿರುವ ಮಂದಿಗೆ ಈ ಸಾಲುಗಳು ಅರ್ಥವಾಗಿದ್ದರೆ ಎಷ್ಟು ಚೆನ್ನಿತ್ತು! ಅದೆಷ್ಟು ಅಮಾಯಕ ಜೀವಗಳು ಉಳಿಯುತ್ತಿದ್ದವೋ! ಎಷ್ಟೋ ಸಾಮಾಜಿಕ ಸಂಬಂಧಗಳು ಹಾಳಾಗದೇ ಉಳಿಯುತ್ತಿದ್ದವೋ!
ಮರ್ಯಾದೆ ಹತ್ಯೆಗಳು ಆಗುತ್ತಿರಲಿಲ್ಲವೇನೊ! ಈ ಎಲ್ಲಾ ಯೋಚನೆಗಳು ಹಾದು ಹೋದವು ಮೇಲಿನ ಸಾಲುಗಳನ್ನು ಓದಿದಾಗ.
“ಜಾತಿ ಮತದ ಗಲಾಟೆ
ಕೊನೆಗೆ ಎಲ್ಲಾ ಜಾತಿಗೂ
ಒಂದೇ ತಮಟೆ”.
ಇಂಥ ಹಲವು ಬದುಕಿನ ವಾಸ್ತವಿಕ ಅಂಶಗಳನ್ನು ತನುಶ್ರೀ ಪ್ರಕಾಶನದ, ಗವಿಸಿದ್ದಪ್ಪ ಅಲ್ಲಾನಗರರವರು ಬರೆದ “ಮನಸ್ಸಿನ ಮಾರ್ಕೆಟ್- ಮನುಷ್ಯರು ಬೇಕಾಗಿದ್ದಾರೆ” ಕವನ ಸಂಕಲನದಲ್ಲಿ ಕಾಣಬಹುದು.
ಒಟ್ಟು 48 ಕವಿತೆಗಳಲ್ಲಿ ಹಲವು ವಿಷಯಗಳನ್ನು ತಮ್ಮದೇ ಧಾಟಿಯಲ್ಲಿ ಕಟ್ಟಿದ್ದಾರೆ. ಇಲ್ಲಿ ದುಡಿಮೆ, ಸಂಬಂಧಗಳ ತೊಳಲಾಟ, ಮನಸ್ಸಿನ ಹಪಾಹಪಿ, ಬದುಕು ಮತ್ತು ವಾಸ್ತವಗಳ ಜಗ್ಗಾಟ , ಗಾಂಧೀ, ಬಸವ, ಬುದ್ಧ ಹೀಗೆ ನಾನಾ ವಿಷಯಗಳು ಹಲವು ಪ್ರತಿಮೆಗಳ ಮೂಲಕ ವ್ಯಕ್ತವಾಗಿವೆ.
“ಗಾಂಧಿ ಉದಯಿಸಿದ ನಾಡಿನಲಿ
ಬುದ್ಧ ಚೆಲ್ಲಿದ ಬೆಳಕಿನಲಿ
ಬಸವ ಸಾರಿದ ತತ್ವದಲಿ
ಭೀಮನ ಆಲದ ನೆರಳಿನಲಿ
ಕಟ್ಟೋಣ ಹೊಸ ನಾಡನು
ಸಮರಸದ ಬೀಡನು”
ಕವಿ ತಮ್ಮ ಪ್ರಥಮ ಕೃತಿಯಲ್ಲಿ ನವ ನಾಡನ್ನು ಕಟ್ಟುವ ಆಶಯ ವ್ಯಕ್ತಪಡಿಸಿದ ರೀತಿ ಚೆಂದವಿದೆ. ಸಮಕಾಲೀನ ದಿನಗಳಲ್ಲಿ ಅತಿ ಜರೂರತ್ತು ಕೂಡ ಇದು. ಅಲ್ಲಲ್ಲಿ ಕೆಲವು ವಾಚ್ಯಗಳು ನುಸುಳಿದರೂ ಮತ್ತು ಪ್ರಾಸ ಪದಗಳಿಗೆ ತ್ರಾಸಾಗಿ ಜೋತುಬಿದ್ದಿದ್ದಾರೆ ಅಂತ ಅನ್ನಿಸಿದರೂ ಕವಿತೆಗಳು ಮೌಲ್ಯಯುತವಾಗಿವೆ. ಅವರ ಬರಹಗಳು ಮತ್ತಷ್ಟು ಸಮಾಜಮುಖಿಯಾಗಲಿ
ಪುಸ್ತಕಕ್ಕಾಗಿ ಸಂಪರ್ಕ
ಗವಿಸಿದ್ದಪ್ಪ ಅಲ್ಲಾನಗರ
9743006149






0 Comments