ದಸ್ತಗೀರಸಾಬ್ ದಿನ್ನಿ ಕಂಡಂತೆ ‘ಮೌನ ಮಾತಾಗಿ’

ದಸ್ತಗೀರಸಾಬ್ ದಿನ್ನಿ

26.8.2022 ರಂದು ಬಿಡುಗಡೆ ಆಗಲಿರುವ ಈ ಪುಸ್ತಕಕ್ಕೆ ನಾನು ಬರೆದ ಬೆನ್ನುಡಿ…

ಇಂದಿನ ಆಧುನಿಕ ಮಹಿಳೆ ಗೃಹಿಣಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ, ಚಿಂತಕಿಯಾಗಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತ, ನಿಭಾಯಿಸುತ್ತ, ಬರವಣಿಗೆಗೂ ತನ್ನನ್ನು ಒಡ್ಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಸೃಜನಶೀಲ ಮನಸ್ಸು, ಕನಸುಗಾರಿಕೆ, ಅಂತರಾಳದ ತುಮುಲ, ಆತ್ಮವಿಶ್ವಾಸ, ಹೊಸದರೆಡೆಗಿನ ತುಡಿತಗಳು ಇದ್ದರೆ ಇದು ಕಷ್ಟ ಸಾಧ್ಯವೇನಲ್ಲ.

ಬದುಕಿನಲ್ಲಿ ಪಟ್ಟ ಪಾಡನ್ನೇ ಹಾಡಾಗಿಸಿ ಗೆಲುವಿನ ನಗೆ ಚೆಲ್ಲಿದವರು ನಮ್ಮ ನಡುವೆ ಅನೇಕರಿದ್ದಾರೆ. ಅಂತಹ ಅಸಾಧಾರಣ ಸಾಧಕರಿಂದ ಪ್ರೇರಣೆ ಪಡೆದುಕೊಂಡು ಬರೆವಣಿಗೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತ ‘ಮೌನ ಮಾತಾಗಿ’ ಕವನ ಸಂಕಲನದ ಮೂಲಕ ಕಾಲದ ತಲ್ಲಣ ಮತ್ತು ಒಡಲ ಸಂತಸವನ್ನು ಒಟ್ಟಗೆ ಕಟ್ಟಿ ಕೊಟ್ಟವರು ಸಹೋದರಿ, ಕವಿ ಕೆ.ಗಿರಿಜಾ ರಾಜಶೇಖರ. ಅವರು ಅತ್ಯಂತ ಮುಜುಗರ ಮತ್ತು ಹಿಂಜರಿಕೆಯಿಂದಲೇ ಈ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ.

ಕವಿತೆಯನ್ನು ಆತ್ಮಸಖಿಯಾಗಿಸಿಕೊಂಡು ಅಕ್ಷರ ಯಾನಕ್ಕೆ ಅಧಿಕೃತವಾಗಿ ಪ್ರವೇಶಿಸುತ್ತಿರುವ ಅವರ ಚೊಚ್ಚಿಲ ಸಂಕಲನವಿದು. ಈ ಸಂಕಲನದಲ್ಲಿ ಇಪ್ಪತ್ತೆರಡು ಕವಿತೆಗಳಿವೆ. ಇಲ್ಲಿ ನೆನಪು, ನೋವು, ಹತಾಶೆ, ತೊಳಲಾಟ, ಸಂಕಟ, ನಿರಾಸೆ, ವಿಷಾದ, ಆಕ್ಷೇಪ, ಪ್ರತಿರೋಧ, ಪರಿಸರ ಪ್ರಜ್ಞೆಯ ಜೊತೆಗೆ ತಾಯಿ ಪ್ರಜ್ಞೆಗಳು ತೆರೆದುಕೊಂಡಿವೆ. ತಾವು ಕಂಡ ಸಮಾಜವನ್ನು ಅದರ ಚೆಲುವು ಮತ್ತು ಸತ್ಯವನ್ನು ಸ್ತ್ರೀತ್ವದ ನೆಲೆಯಿಂದ ನೋಡಿದ್ದಾರೆ.

ನಮ್ಮ ದೈನಿಕ ಬದುಕು ಎಲ್ಲವೂ ವ್ಯವಹಾರಿಕವಾಗಿ ಮಾರ್ಪಟ್ಟು ಮಾನವೀಯ ಸಂಬಂಧಗಳು ಪಲ್ಲಟಗೊಂಡಿವೆ. ಹಿಂಸೆ, ಅಸಹಿಷ್ಣುತೆಯ ದುರಿತ ಕಾಲ ಇನ್ನಿಲ್ಲದಂತೆ ಕನಲಿಸುತ್ತಿದೆ. ಕಂಡುಂಡ ಸಂವೇದನೆಗಳನ್ನು ಲೋಕದೊಂದಿಗೆ ಹಂಚಿಕೊಂಡ ಇಲ್ಲಿನ ಕಾವ್ಯದ ವಿನ್ಯಾಸದಲ್ಲಿ ಒಡಲ ಹಾಡಿನ ಅಂತಃಕರಣ, ಬೆಚ್ಚನೆಯ ಕನಸು ,ಜೀವಪರ ಚಿಂತನೆ, ಬಹುತ್ವದ ಆಶಯಗಳನ್ನು ವಿಸ್ತರಿಸುವ ಹೂ ಮನಸ್ಸಿನ ಭಾವಗಳಿವೆ.

ಈ ಸಂಕಲನದಲ್ಲಿ ಪ್ರಾಮಾಣಿಕವಾದ ಅಭಿವ್ಯಕ್ತಿ, ಲವಲವಿಕೆಯ ಭಾಷೆಯ ಬಳಕೆಯಾಗಿದೆ. ಇದರ ಜೊತೆಗೆ ಶಕ್ತಿಯುತ ರೂಪಕಗಳು ಒಳಗೊಳ್ಳಬೇಕಾಗಿದೆ. ಅವರ ಬರಹದ ಚಹರೆ ಮಹಿಳಾ ಲೋಕ ಇಂದು ಎದುರಿಸುತ್ತಿರುವ ಆತಂಕ, ನಿಟ್ಟುಸಿರು, ಬಿಕ್ಕಟ್ಟು, ಅತ್ಯಾಚಾರ, ಶೋಷಣೆ, ಕೆಂಡದ ಹಾದಿಯನ್ನೂ ತೀವ್ರವಾಗಿ ದಕ್ಕಿಸಿಕೊಳ್ಳಬೇಕಾಗಿದೆ. ಆ ಮೂಲಕ ಸ್ತ್ರೀ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕಾಗಿದೆ. ಅವರಿಗೆ ಸೃಜನಶೀಲವಾದ ಆ ಶಕ್ತಿ ಇದೆ ಎನ್ನುವ ಕಾರಣಕ್ಕೆ ಈ ಮಾತುಗಳನ್ನು ಬರೆದಿರುವೆ.ನಿರಂತರ ಹುಡುಕಾಟ , ಇಂಗದ ಕುತೂಹಲದಿಂದ ಗಿರಿಜಾ ರಾಜಶೇಖರ್ ಅವರು ನಾಳಿನ ದಿನಗಳಲ್ಲಿ ಜಗದ ಗಾಯಗಳನ್ನು ಕವಿತೆಯ ಮುಲಾಮಿನಿಂದ ಗುಣಪಡಿಸಲಿ, ಇನ್ನಷ್ಟು ಕಾಡುವ ಕವಿತೆಗಳನ್ನು ಕೊಡಲಿ ಎಂದು ಆಶಿಸುವೆ.

‍ಲೇಖಕರು Admin

August 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: